ಏನ್ ಹೇಳನವ್ವ? – ಒಂದು ಸಣ್ಣ ಕತೆ

ಸಿ.ಪಿ.ನಾಗರಾಜ

ಅಲ್ಲೊಂದು  ಊರು. ಆ  ಊರಿನಲ್ಲಿ  ಒಂದು  ದೇಗುಲ. ದೇಗುಲದಲ್ಲಿ  ಒಬ್ಬ  ಪೂಜಾರಿ. ಸುಮಾರು  ನಲವತ್ತರ  ವಯಸ್ಸಿನ  ಆ  ಪೂಜಾರಿ  ಅಂತಿಂತ  ಪೂಜಾರಿಯಲ್ಲ!  ದೇವತೆಯ  ಹೆಸರಿನಲ್ಲಿ  ದೆವ್ವಗಳನ್ನು  ಬಿಡಿಸುವ  ಪೂಜಾರಿ. ವಾರದಲ್ಲಿ  ಎರಡು  ದಿನ  ಅಂದರೆ  ಪ್ರತಿ  ಮಂಗಳವಾರ – ಶುಕ್ರವಾರಗಳಂದು  ದೇವತೆಯು  ಆ  ಪೂಜಾರಿಯ  ಮಯ್ ಮೇಲೆ  ಬರುತ್ತಾಳಂತೆ. ಆಗ  ಅವನು  ನುಡಿದಿದ್ದೆಲ್ಲವೂ  ದೇವತೆಯ  ಮಾತು;  ಮಾಡಿದ್ದೆಲ್ಲವೂ  ದೇವತೆಯ  ಕೆಲಸ. ಆ  ಪೂಜಾರಿಯು  “ ಅದು  ಹೇಗೆ  ದೆವ್ವ  ಬಿಡಿಸುತ್ತಾನೆ ? “ ಎಂಬುದನ್ನು  ನೋಡಬೇಕೆಂಬ  ಕುತೂಹಲದಿಂದ ಒಂದು  ಶುಕ್ರವಾರದಂದು  ಗೆಳೆಯರೊಬ್ಬರ  ಜತೆಗೂಡಿ  ಅಲ್ಲಿಗೆ  ಹೋದಾಗ ದೇಗುಲದಲ್ಲಿ  ಕಂಡ  ನೋಟ  ಹಾಗೂ  ನಡೆಯುತ್ತಿದ್ದ  ಆಚರಣೆಗಳು ಈ ರೀತಿ ಇದ್ದವು.

ಕುಂಕುಮ, ಅರಿಸಿನ  ಮತ್ತು  ನಾನಾ  ತೆರನಾದ  ಹೂವುಗಳಿಂದ  ದೇವತೆಯನ್ನು  ಸಿಂಗರಿಸಲಾಗಿತ್ತು. ದೇವತೆಯ  ವಿಗ್ರಹದ  ಮುಂದೆ  ದೀಪ  ಬೆಳಗುತ್ತಿತ್ತು. ಸಾಂಬ್ರಾಣಿಯ  ದೂಪದ  ಹೊಗೆಯು  ಎಲ್ಲೆಡೆಯಲ್ಲಿಯೂ  ಹರಡಿತ್ತು . ದೇವತೆಯ  ವಿಗ್ರಹದ  ಮುಂದೆ  ಬಲಬದಿಯಲ್ಲಿ  ಪೂಜಾರಿ  ಕುಳಿತು ಬಾಯಲ್ಲಿ  ಏನೇನೋ  ಮಂತ್ರಗಳನ್ನು  ಉಚ್ಚರಿಸುತ್ತಿದ್ದ. ಕೆಂಪನೆಯ  ಕೆಂಡದ  ಮೇಲೆ  ಸಾಂಬ್ರಾಣಿ ಪುಡಿಯನ್ನು  ಮತ್ತೆ ಮತ್ತೆ  ಹಾಕುತ್ತಿದ್ದ. ಅವನ  ಮುಂದೆ  ಸುಮಾರು  ಮೂವತ್ತು ಮಂದಿ  ಹೆಂಗಸರು  ಕುಳಿತಿದ್ದರು. ಅವರಲ್ಲಿ  ಹತ್ತು-ಹನ್ನೆರಡು  ಮಂದಿ  ಸುಮಾರು  ಹದಿನಾರರಿಂದ  ಇಪ್ಪತ್ತಯ್ದರ  ವಯೋಮಾನದ  ತರುಣಿಯರು. ಉಳಿದವರೆಲ್ಲಾ  ಅಯ್ವತ್ತು-ಅಯ್ವತ್ತಯ್ದರ  ಅಂಚಿನವರು. ಅವರಲ್ಲಿ  ಹೆಚ್ಚಿನ  ಮಂದಿ  ಅಲ್ಲಿದ್ದ  ಹರೆಯದ  ಹೆಂಗಸರ  ತಾಯಂದಿರಾಗಿದ್ದರು. ತಮ್ಮ  ಹೆಣ್ಣು ಮಕ್ಕಳನ್ನು  ಮೆಟ್ಟಿಕೊಂಡು  ಕಾಡುತ್ತಿರುವ  ದೆವ್ವವನ್ನು  ಬಿಡಿಸಲೆಂದು  ಅವರೆಲ್ಲರೂ  ಪೂಜಾರಿಯ  ಬಳಿಗೆ  ತಮ್ಮ  ಮಕ್ಕಳನ್ನು  ಕರೆತಂದಿದ್ದರು.

ಇದುವರೆಗೆ  ಮಂತ್ರಗಳನ್ನು  ಹೇಳುತ್ತಾ, ದೇವತೆಯ  ಪೂಜೆಯಲ್ಲಿ  ಮಗ್ನನಾಗಿದ್ದ  ಪೂಜಾರಿಯು  ಈಗ  ಇದ್ದಕ್ಕಿದ್ದಂತೆಯೇ  ಆಕಳಿಸತೊಡಗಿದ. ತನ್ನ  ಎರಡು ತೋಳುಗಳನ್ನು  ಅತ್ತ-ಇತ್ತ  ಆಡಿಸುತ್ತಾ, ಮಯ್ ಮುರಿಯತೊಡಗಿದ. ಅಲ್ಲಿದ್ದವರೆಲ್ಲರೂ  ಅವನನ್ನೇ  ಅಂಜಿಕೆ  ಹಾಗೂ  ಆತಂಕದಿಂದ  ನೋಡತೊಡಗಿದರು. ಪೂಜಾರಿಯ  ಆಕಳಿಕೆ  ಇನ್ನೂ  ಹೆಚ್ಚಾಯಿತು. ಅವನ  ಮಯ್ ಕಯ್ಗಳ  ತೊನೆದಾಟ  ಹೆಚ್ಚಾಗುತ್ತಿದ್ದಂತೆಯೇ  ಒಮ್ಮೆ  ಜೋರಾಗಿ  ಗರ್‍ಜಿಸಿದ. ಈಗ  ತನ್ನ  ಮುಂದೆ  ಕುಳಿತಿದ್ದ  ತರುಣಿಯರಲ್ಲಿ  ಒಬ್ಬಳನ್ನು  ತನ್ನ   ಹತ್ತಿರಕ್ಕೆ   ಎಳೆದುಕೊಂಡು, ಒಂದು ಕಯ್ಯಲ್ಲಿ  ಅವಳ  ನೆತ್ತಿಯ  ತಲೆಗೂದಲನ್ನು ಮತ್ತೊಂದು  ಕಯ್ಯಲ್ಲಿ  ಅವಳ  ರೆಟ್ಟೆಯನ್ನು  ಅತಿ  ಬಿಗಿಯಾಗಿ  ಹಿಡಿದುಕೊಂಡು-

“ ಏ…. ನನ್ನ  ಯಾರು  ಅಂತ  ತಿಳ್ಕೊಂಡಿದ್ದೀಯೆ? …. ನಾನು  ಅಂತಿಂತ  ದೇವತೆಯಲ್ಲ! …. ನಿನ್ನಂತ  ನೂರಾರು  ದೆವ್ವಗಳನ್ನ  ಹೇಳ  ಹೆಸರಿಲ್ದಂಗೆ  ಮಾಡಿರೂ  ಮಹಾದೇವತೆ…. ನನ್  ಮುಂದೆ  ನಿನ್  ಆಟ  ಏನೇನೂ  ನಡೆಯೂದಿಲ್ಲ “ ಎಂದು  ಏರು ದನಿಯಲ್ಲಿ  ಹೇಳುತ್ತಾ, ಆ ತರುಣಿಯ ತಲೆಗೂದಲನ್ನು ಬಿಗಿಯಾಗಿ ನುಲಿದು, ಮತ್ತೆ ಮತ್ತೆ  ಹೂಂಕರಿಸುತ್ತಾ-

“ ಹೂ….ಹೇಳು  ನೀನ್ಯಾರು  “ ಎಂದು  ಪ್ರಶ್ನಿಸಿದ .

ಪೂಜಾರಿಯ  ಬಿಗಿಹಿಡಿತದಲ್ಲಿ  ಸಿಲುಕಿರುವ  ತರುಣಿಯು ಅಪಾರವಾದ  ನೋವು ಮತ್ತು ಹೆದರಿಕೆಯಿಂದ ತತ್ತರಿಸುತ್ತಾ, ಅವನನ್ನೇ ದೀನಳಾಗಿ ನೋಡತೊಡಗಿದಳು. ತರುಣಿಯ  ಹಿಂದೆಯೇ  ಕುಳಿತಿದ್ದ  ಅವಳ  ತಾಯಿಯು  ಮಗಳ  ಬೆನ್ನನ್ನು  ಕಯ್ಯಿಂದ  ತಿವಿದು-

“ ಯಾಕೆ  ಸುಮ್ಮನಿದ್ದೀಯೆ….ಮಾತಾಡೆ….ಅಟ್ಟೀಲಾದ್ರೆ  ಹೊತ್ತುಗೊತ್ತಿಲ್ದಂಗೆ  ಮಯ್ ಮೇಲೆ  ಬಂದು  ಬಾಯಿಗೆ  ಬಂದಂಗೆಲ್ಲ  ಬಡ್ಕೊತಿದ್ದೆ . ಇಲ್ಲೇನಾಗಿದ್ದದು  ನಿಂಗೆ? “ ಎಂದು  ಹಂಗಿಸಿದಳು . ತಾಯಿಯ  ಕಣ್ಣಿನಲ್ಲಿ ಈಗ ಆಕೆಯು ತನ್ನ ಮಗಳಾಗಿರಲಿಲ್ಲ; ದೆವ್ವವಾಗಿದ್ದಳು . ಆದುದರಿಂದಲೇ  ಮಗಳ  ನಡೆನುಡಿಗಳೆಲ್ಲವನ್ನೂ ಅವಳನ್ನು ಮೆಟ್ಟಿಕೊಂಡಿರುವ  ದೆವ್ವದ ವರ್‍ತನೆಗಳೆಂದೇ ನಂಬಿದ್ದಳು. ದೆವ್ವದ ಹಿಡಿತಕ್ಕೆ ಒಳಗಾಗಿ ಸಂಕಟಪಡುತ್ತಿರುವ ಮಗಳಿಗಾಗಿ ಕಣ್ಣೀರು ಕರೆಯುತ್ತಾ, ಪೂಜಾರಿಗೆ  ಕಯ್ ಮುಗಿದು, ಅವನ  ಮಯ್ ತುಂಬಿ  ಬಂದಿರುವ ದೇವತೆಯನ್ನು ಕುರಿತು-

“ಅವ್ವ  ಮಾತಾಯಿ , ಹೆಂಗಾರ  ಮಾಡಿ  ನನ್  ಮಗಳಿಗೆ  ಹಿಡಿದಿರುವ  ದೆವ್ವ  ಬುಡಸವ್ವ . ನೀ  ಏನ್  ಕೇಳ್ತೀಯೊ   ಅದನ್ನ  ಮಾಡಿಸಿಕೊಡ್ತೀನಿ  ಕಣವ್ವ . ನನ್  ಜೀವ  ಇರೋ  ತಂಕ  ನಿನ್  ಸೇವೆ  ಮಾಡ್ತೀನಿ“ ಎಂದು  ಹರಕೆಯನ್ನು ಕಟ್ಟಿಕೊಂಡಳು .

ಪೂಜಾರಿಯು  ಈಗ  ಇನ್ನೂ  ಜೋರಾಗಿ  ಗರ್‍ಜಿಸುತ್ತಾ, ಆ ತರುಣಿಯ  ಮುಡಿಯನ್ನು  ಜಗ್ಗತೊಡಗಿದ . ಅವಳು  ಅತಿಯಾದ  ನೋವಿನಿಂದ  ನರಳುತ್ತಿರುವಾಗಲೇ, ಅವಳ  ಮುಂದೆ  ಸಿಪ್ಪೆ ಸುಲಿದ  ಒಂದು  ತೆಂಗಿನಕಾಯನ್ನು ಇಟ್ಟು-

“ಏ….ಈಗ  ನೀನು  ಕಾಯಿನ  ಮೇಲೆ  ಕುಕ್ಕುರುಗಾಲಿನಲ್ಲಿ  ಕುಂತ್ಕೊ. ನೀನು  ಹೆಣ್  ಗಾಳಿಯಾಗಿದ್ದರೆ ಎಡಚರಿಯಿಂದ  ತಿರುಗು…. ಗಂಡ್  ಗಾಳಿಯಾಗಿದ್ದರೆ  ಬಲಚರಿಯಿಂದ  ತಿರುಗು“ ಎಂದು  ಅಪ್ಪಣೆ  ಹೊರಡಿಸಿ, ಅವಳನ್ನು  ತೆಂಗಿನಕಾಯಿಯ  ಮೇಲೆ  ಎರಡು  ಪಾದಗಳನ್ನಿಟ್ಟು ಕುಳಿತುಕೊಳ್ಳುವಂತೆ ಪೀಡಿಸತೊಡಗಿದ. ಚಿಕ್ಕ ಕಾಯಿಯ  ಮೇಲೆ  ಕುಳಿತುಕೊಳ್ಳಲಾಗದೆ, ಆಕೆಯು  ಜಾರಿ ಜಾರಿ  ಬೀಳುತ್ತಾ, ಒದ್ದಾಡುತ್ತಿರುವಾಗ ರೆಟ್ಟೆಯನ್ನು ಹಿಡಿದಿದ್ದ ಕಯ್ಯನ್ನು ಸಡಿಲಿಸಿ, ಈಗ  ಆಕೆಯನ್ನು ತನ್ನ ಎದೆಗಾನಿಸಿ ಬಿಗಿಯಾಗಿ  ತಬ್ಬಿಕೊಂಡು, ಅವಳನ್ನು ಕಾಯಿಯ ಮೇಲೆ ಕುಳ್ಳಿರಿಸಿದ. ಪೂಜಾರಿಯ  ಬಲವಾದ  ಅಪ್ಪುಗೆಯಲ್ಲಿ ಆಕೆಯು ನಲುಗಿ ಹೋಗುತ್ತಿದ್ದಳು. ಸುತ್ತಮುತ್ತಲಿದ್ದ  ಹೆಂಗಸರು ಬಹಳ ಆತಂಕ, ಕುತೂಹಲ  ಹಾಗೂ  ನಂಬಿಕೆಯಿಂದ  ದೇವತೆಯ  ಮಹಿಮೆಯನ್ನು  ನೋಡುತ್ತಿದ್ದರು. ಪೂಜಾರಿಯ ಹಿಡಿತ ಇನ್ನೂ ಹೆಚ್ಚಾಯಿತು. ಆಕೆಯನ್ನು  ಕುರಿತು-

“ಏ….ಹೇಳು….ನೀನ್ಯಾರು ?….ಯಾಕ್  ಬಂದೆ ?….ಎಲ್ಲಿಂದ  ಬಂದೆ ?….ಬಾಯ್ಬುಡು “ ಎಂದು  ಅಬ್ಬರಿಸತೊಡಗಿದ. ಪೂಜಾರಿಯ  ಪ್ರಶ್ನೆಗಳಿಂದ  ಕಂಗಾಲಾದ  ತರುಣಿಯು  ಏನೊಂದನ್ನು  ಮಾತನಾಡದೆ, ಹಿಂತಿರುಗಿ  ತನ್ನ  ತಾಯಿಯನ್ನು  ನೋಡುತ್ತಾ “ ಅವ್ವ….ಅವ್ವ….ಅವ್ವ “ ಎಂದು  ನೋವಿನ  ದನಿಯಿಂದ  ಮೊರೆಯಿಟ್ಟಳು. ಕೂಡಲೇ  ಅವಳ ಅವ್ವ  ಇನ್ನೂ  ಕೆರಳಿ ಕೆಂಡವಾಗಿ-

“ಚಿನಾಲ್ ಮುಂಡೆ….ಇತ್ತಗೇನ್  ನೋಡಿಯಮ್ಮಿ….ಅತ್ತಗೆ  ತಿರಿಕೊಂಡು  ಮಾತಾಡಮ್ಮಿ….ನನ್  ಮಗಳ  ಮ್ಯಾಲೆ  ಯಾಕೆ  ಬಂದಿದ್ದೀಯೆ  ಕಲಕೆತ್ತ ಮುಂಡೆ….ಅಟ್ಟೀಲಾದ್ರೆ  ದಿನಕ್ಕೆ  ನಾಕು  ದಪ  ಅಯ್ದು  ದಪ  ಬಂದು  ಬಂದು  ರಂಪ  ಮಾಡ್ತಿದ್ದೆ….ಇಲ್ಲಿ  ಯಾಕಮ್ಮಿ  ಬಾಯ್  ಬುಡಲ್ಲೆ….ಏನಾರ  ಉಣ್ಣು ತಿನ್ನು  ಆಸೆಯಿದ್ರೆ  ದೇವತೆ  ಮುಂದೆ  ಹೇಳು….ಅದನ್ನೆಲ್ಲ  ಅಟ್ಟು  ಉಣಿಸ್ತೀನಿ “ ಎಂದು  ಹೇಳುತ್ತಾ, ಪೂಜಾರಿಗೆ  ಮತ್ತೊಮ್ಮೆ  ಕಯ್ ಮುಗಿದು “ ಮಾತಾಯಿ , ನನ್ನವ್ವ….ಈ ದರಿದ್ರದ  ದೆವ್ವಕ್ಕೆ  ಏನ್  ದಂಡನೆ  ಕೊಡ್ಬೇಕೋ  ಅದನ್ನೆಲ್ಲಾ  ಕೊಟ್ಟು , ನನ್ನ  ಮಗಳ  ಉಳಿಸ್ಕೊಡವ್ವ“ ಎಂದು ಬೇಡಿಕೊಂಡಳು.

ಪೂಜಾರಿಯು  ಇನ್ನೂ  ಹೆಚ್ಚಿನ  ಹುರುಪಿನಿಂದ  ತನ್ನ  ಕಾರ್‍ಯವನ್ನು  ಮುಂದುವರಿಸಿದ . ತರುಣಿಯನ್ನು  ತೆಂಗಿನಕಾಯಿಯ  ಮೇಲೆ  ಕುಳಿತಿದ್ದಂತೆಯೇ  ನಾನಾ  ಬಗೆಗಳಲ್ಲಿ  ಪೀಡಿಸತೊಡಗಿದ .  ಆಕೆಯು  ಬಹಳ  ನೋವಿನಿಂದ  ನರಳುತ್ತಾ  ಒಂದು  ಸಾರಿ  ಎಡಮಗ್ಗುಲಾಗಿ  ತಿರುಗಿದಳು . ಮತ್ತೆ  ಅವಳನ್ನು  ಕುರಿತು-“ ಏ….ನಿನ್ನ  ಬಾಯ್  ಬುಡ್ಸೂದು  ಹೆಂಗೆ  ಅಂತ  ನಂಗೆ  ಗೊತ್ತು “ ಎಂದು  ಅಬ್ಬರಿಸಿ, ಮರುಗಳಿಗೆಯಲ್ಲೇ  ಅವಳ  ಮುಡಿಯನ್ನು  ಎಳೆದು,  ಮಕ್ಕಳಿಗೆ  ಹಾಲುಣಿಸುವ  ಎದೆಗಳ  ಮೇಲೆ  ಬಲವಾಗಿ  ಹೊಡೆದ. ಪೂಜಾರಿಯ  ಹೊಡತದಿಂದ  ಆಕೆ  ನಡುಗತೊಡಗಿದಳು. ಸುತ್ತಮುತ್ತಲಿದ್ದ  ಹೆಂಗಸರೆಲ್ಲರೂ  ದೇವತೆಯ  ಮುಂದೆ  ದೆವ್ವ  ಕಂಪಿಸುತ್ತಿರುವುದನ್ನು  ಕಂಡು, ಇನ್ನೂ  ಹೆಚ್ಚಿನ  ನಂಬಿಕೆಯ  ಮನದಿಂದ  ಕಯ್  ಜೋಡಿಸಿ  ನಮಿಸುತ್ತಿದ್ದರು. ಇವರ  ಪ್ರತಿಕ್ರಿಯೆಯಿಂದ  ಹುರುಪುಗೊಂಡ  ಪೂಜಾರಿಯು  ತರುಣಿಯ  ಎದೆಗಳ  ಮೇಲೆ  ಮತ್ತೆ  ಮತ್ತೆ  ಬಲವಾಗಿ  ಹೊಡೆಯುತ್ತಾ-

“ಏ….ನಾನ್  ನಿನ್ನ  ಬಿಡೋದಿಲ್ಲ….ನಿನ್  ಜೊತೇಲಿ  ಮಲಗ್ತೀನಿ….ಏನಂತೀಯಾ  ಇದಕ್ಕೆ ? “ ಎಂದಾಗ, ಪೂಜಾರಿಯ  ಮಾತುಗಳಿಗೆ  ಉತ್ತರಿಸದೆ, ಮೂಕಳಾದ  ತರುಣಿಯ  ಕಣ್ಣುಗಳಿಂದ  ಕಂಬನಿಗಳು  ಉದುರತೊಡಗಿದವು. ತರುಣಿಯ  ಪರವಾಗಿ  ಅವಳ  ಅವ್ವನೇ  ದೇವತೆಗೆ  ಉತ್ತರವನ್ನು  ಕೊಡುತ್ತಾ-

“ಮಾತಾಯಿ , ನಿಂಗೆ  ಹೆಂಗೆ  ಬೇಕೋ  ಹಂಗೆ  ಮಾಡವ್ವ….ಒಟ್ನಲ್ಲಿ  ನನ್  ಮಗೀನ  ಜೀವಂತವಾಗಿ  ಉಳಿಸ್ಕೊಡವ್ವ“ ಎಂದು ಮತ್ತೆ  ಮೊರೆಯಿಟ್ಟಳು . ಪೂಜಾರಿಯು  ತರುಣಿಯನ್ನು  ಇನ್ನೂ  ಹತ್ತಿರಕ್ಕೆ  ಬರಸೆಳೆದು  ತಬ್ಬಿಕೊಂಡು-

“ಏ…. ಬಾಯ್ಬುಡು….ನಾನ್  ನಿನ್  ತಕೆ  ಬಂದಾಗ  ಬಲಚರಿಯಿಂದ  ಸೆರಗು  ಹಾಸ್ತೀಯೋ….ಎಡಚರಿಯಿಂದ  ಹಾಸ್ತೀಯೋ….ಹೇಳು” ಎಂದು  ಆಕೆಯನ್ನು  ಒತ್ತಾಯಪಡಿಸುತ್ತಾ , ಆಕೆಯ  ಎದೆಗಳ  ಮೇಲೆ  ರಪರಪನೆ  ಬಡಿದು , ಕೆಲವು ಗಳಿಗೆ  ಕಯ್ಯನ್ನು  ಎದೆಗಳ  ಮೇಲಿಟ್ಟು  ಹಿಂಸಿಸತೊಡಗಿದ . ತೆಂಗಿನಕಾಯಿಯ  ಮೇಲೆ  ಕುಳಿತುಕೊಳ್ಳಲಾಗದೆ  ಒದ್ದಾಡುತ್ತಾ , ಜಾರಿ ಜಾರಿ ಬೀಳುತ್ತಾ  ಪಡುತ್ತಿರುವ  ಯಾತನೆಯ  ಜತೆಗೆ  ಪೂಜಾರಿಯು  ತನ್ನ  ಮೆತುವಾದ  ಎದೆಗಳ  ಮೇಲೆ  ಬಡಿದು  ನೀಡುತ್ತಿರುವ  ಹಿಂಸೆಯನ್ನು  ತಾಳಲಾರದೆ  ತರುಣಿಯು  ತನ್ನ  ಹೆತ್ತವ್ವನ  ಕಡೆ  ಮತ್ತೆ  ನೋಡತೊಡಗಿದಳು . ಪೂಜಾರಿಯು  ಹಿಡಿದ  ಪಟ್ಟನ್ನು  ಬಿಡದಂತೆ “ ಹೇಳು….ಯಾವ  ಕಡೆಯಿಂದ  ಸೆರಗು  ಹಾಕ್ತೀಯೆ….ಹೇಳು” ಎಂದು  ಪೀಡಿಸಿದಾಗ, ಆಕೆಯು  ಕಂಬನಿ ತುಂಬಿದ  ನೋಟದಿಂದ  ತಾಯಿಯತ್ತ  ತಿರುಗಿ  ದಿಕ್ಕು ತೋಚದಂತಾಗಿ-

“ಏನ್  ಹೇಳನವ್ವ“ ಎಂದು  ಕೇಳಿದಳು . ಮಗಳ  ಪ್ರಶ್ನೆಗೆ ಉತ್ತರ ಕೊಡಲಾಗದೆ  ತಾಯಿಯು ಅಳತೊಡಗಿದಳು. ಪೂಜಾರಿಯು ತರುಣಿಯ ಅವ್ವನನ್ನು ಕುರಿತು-

“ನೀನೇನು  ಅಳ್ಬೇಡ….ಹೆದರ್‍ಕೊಬ್ಯಾಡ….ನಂಬಿಕೆಯಿಂದಿರು . ನಂಗೆ  ಗೊತ್ತದೆ  ಹೆಂಗೆ  ಇದರ  ಬಾಯ್  ಬುಡ್ಸಬೇಕು  ಅಂತ . ಇನ್ನೂ  ಅಯ್ದು  ವಾರ  ಹಿಂಗೆ  ಕರ್‍ಕೊಂಡು  ಬತ್ತಿರು . ನನ್  ಕಣ್  ತಪ್ಪಿಸಿ  ಯಾವ  ಡಾಕ್ಟರು  ತಕೂ  ಕರ್‍ಕೊಂಡು  ಹೋಗಿ  ತೋರಿಸ್ಬೇಡ . ಆಸ್ಪತ್ರೆ  ಮೆಟ್ಲ  ಹತ್ತುದ್ರೆ  ನಿನ್  ಮಗಳೇ  ಕಯ್ಗೆ  ಸಿಗೂದಿಲ್ಲ“  ಎಂದು  ಎಚ್ಚರಿಸಿದ . ಆಗ  ಅವಳ  ಅವ್ವ   ದೇವತೆಗೆ  ಅಡ್ಡ ಬಿದ್ದು “ಇಲ್ಲ  ಕಣವ್ವ , ನನ್  ಕಣ್ಣಾಣೆಗೂ  ಎಲ್ಗೂ  ಕರ್‍ಕೊಂಡು  ಹೋಗೂದಿಲ್ಲ . ಮೆಟ್ಕೊಂಡು  ಇರೂ  ದೆವ್ವ  ಬುಟ್ಟೋಗು  ತಂಕ  ನಿನ್ನತಕೆ  ಕರ್‍ಕೊಂಡು  ಬತ್ತಿನಿ“ ಎಂದು  ಉತ್ತರಿಸಿದಳು . ಪೂಜಾರಿಯು  ತರುಣಿಯ  ಮುಡಿಯನ್ನು  ಮತ್ತೊಮ್ಮೆ  ನುಲಿದು, ಅವಳನ್ನು   ಪಕ್ಕದಲ್ಲಿದ್ದ   ಗೋಡೆಗೆ  ಒರಗಿಸಿ, ತಾನು  ಬಿಗಿಯಾಗಿ  ಒತ್ತರಿಸಿಕೊಂಡು  ಕುಳಿತುಕೊಂಡ. ಈಗ  ತನ್ನ ಮುಂದೆ  ಮತ್ತೊಬ್ಬ  ತರುಣಿಯನ್ನು  ಕರೆತರುವಂತೆ  ಇನ್ನೊಬ್ಬ  ತಾಯಿಗೆ  ಅಪ್ಪಣೆ  ಮಾಡಿದ .

ನಾನು  ಮತ್ತು  ನನ್ನ  ಗೆಳೆಯ  ದೇವತೆಯ  ಹೆಸರಿನಲ್ಲಿ  ಹರೆಯದ  ಹೆಣ್ಣು ಮಕ್ಕಳಿಗೆ  ಕೊಡುತ್ತಿದ್ದ  ಹಿಂಸೆಯ  ಆಚರಣೆಯನ್ನು  ನೋಡಲಾಗದೆ  ದೇಗುಲದಿಂದ  ಹೊರಬಂದು  ಕುಳಿತುಕೊಂಡೆವು.  ಕಾಮುಕ  ಹಾಗೂ  ವಂಚಕನಾಗಿರುವ  ಪೂಜಾರಿಯಿಂದ  ಹಳ್ಳಿಯ  ಹೆಣ್ಣು ಮಕ್ಕಳು  ಪಡುತ್ತಿರುವ  ಮಯ್ ಮನದ  ಯಾತನೆಯ  ಬಗ್ಗೆ  ಚಿಂತಿಸುತ್ತಾ, ಇದನ್ನು  ಹೇಗಾದರೂ  ಮಾಡಿ  ನಿಲ್ಲಿಸಬೇಕೆಂಬ  ದಿಕ್ಕಿನಲ್ಲಿ  ಯೋಚಿಸಿದೆವು. ನಮ್ಮ  ಉದ್ದೇಶ  ದೇವತೆಯ  ಪೂಜೆಯನ್ನು  ಸಂಪೂರ್‍ಣವಾಗಿ  ನಿಲ್ಲಿಸುವುದಾಗಿರಲಿಲ್ಲ. ಏಕೆಂದರೆ  ದೇವರ  ಎದುರಾಗಿ  ಆಡುವ  ಮಾತು  ಇಲ್ಲವೇ  ಮಾಡುವ  ಯಾವುದೇ  ಕಾರ್‍ಯಗಳಿಗೆ  ಜನಸಮುದಾಯದಿಂದ  ಹೆಚ್ಚಿನ  ಅಡೆತಡೆಗಳು  ಎದುರಾಗುತ್ತವೆ. ಆದುದರಿಂದ  ದೇವತೆಯನ್ನು  ಹೊರತು ಪಡಿಸಿ , ದೇವತೆಯ  ಹೆಸರಿನಲ್ಲಿ  ಪೂಜಾರಿಯು  ಮಾಡುತ್ತಿರುವ  ಕಾಮವಿಕಾರದ  ಆಚರಣೆಗಳನ್ನು  ತಡೆಗಟ್ಟಿ, ಹೆಣ್ಣು ಮಕ್ಕಳಿಗೆ  ಕೊಡುತ್ತಿರುವ  ಹಿಂಸೆ  ನಿಲ್ಲುವಂತೆ  ಮಾಡಬೇಕೆಂಬುದನ್ನು  ಮಾತ್ರ   ಗುರಿಯನ್ನಾಗಿ  ಇಟ್ಟುಕೊಂಡೆವು. ಇದಕ್ಕಾಗಿ  ಒಂದು  ಯೋಜನೆಯನ್ನು  ಹಾಕಿಕೊಂಡೆವು. ಅಂದಿನಿಂದಲೇ  ಆ  ದೇವತೆಯಲ್ಲಿ  ನಂಬಿಕೆಯುಳ್ಳವರಂತೆ  ನಟಿಸುತ್ತಾ, ಅಲ್ಲಿಗೆ  ಬರುತ್ತಿದ್ದ  ವ್ಯಕ್ತಿಗಳ  ಮಾಹಿತಿಯನ್ನು  ಸಂಗ್ರಹಿಸತೊಡಗಿದೆವು. ನಾಲ್ಕಾರು  ವಾರ  ದೇವತೆಯ  ಪೂಜೆಯನ್ನು  ಚಾಚೂ  ತಪ್ಪದೆ  ಗಮನಿಸಿದೆವು. ದೇಗುಲಕ್ಕೆ  ಬರುತ್ತಿದ್ದ  ಜನರಲ್ಲಿ  ಗಂಡಸರು  ಬೆರಳೆಣಿಕೆಯಲ್ಲಿದ್ದರೆ, ಹೆಂಗಸರೇ  ಹೆಚ್ಚಾಗಿದ್ದರು. ವಯಸ್ಸಾಗಿದ್ದ  ಹೆಂಗಸರನ್ನು  ಮತ್ತು  ದೆವ್ವ  ಮೆಟ್ಟಿತೆಂದು  ಕರೆತರುತ್ತಿದ್ದ  ತರುಣಿಯರನ್ನು  ಮಾತನಾಡಿಸುತ್ತಾ, ಅವರ  ನೋವು / ಸಂಕಟ / ವೇದನೆಯ  ಹಿನ್ನೆಲೆಯನ್ನು  ವಿಚಾರಿಸಿದಾಗ, ನಮಗೆ  ತಿಳಿದು  ಬಂದ  ಸಂಗತಿಗಳು ಈ ರೀತಿ  ಇದ್ದವು.

ಈ ದೇಗುಲಕ್ಕೆ ತಮ್ಮ ಹೆಣ್ಣು ಮಕ್ಕಳನ್ನು ಕರೆ ತರುತ್ತಿದ್ದ ತಾಯಂದಿರಲ್ಲಿ, ಹೆಚ್ಚಿನ  ಮಂದಿ  ಹಣಕಾಸಿನ  ಅನುಕೂಲವಿಲ್ಲದವರು, ಅವಿದ್ಯಾವಂತರು  ಮತ್ತು  ದೇವರು-ದಿಂಡರಲ್ಲಿ  ಅಪಾರವಾದ  ನಂಬಿಕೆಯುಳ್ಳವರು. ಇಂತಹ  ಸಾಮಾಜಿಕ ನೆಲೆಯಿಂದ  ಬಂದ  ತಾಯಂದಿರು  ಅಲ್ಲಿಗೆ  ಕರೆದುಕೊಂಡು  ಬರುತ್ತಿದ್ದ  ಹೆಣ್ಣು ಮಕ್ಕಳಲ್ಲಿ  ಹೆಚ್ಚಿನ  ಮಂದಿ  ಚೊಚ್ಚಲ  ಬಾಣಂತಿಯರು . ಹೆರಿಗೆಯಾದ  ನಂತರದ  ಒಂದೆರಡು  ತಿಂಗಳುಗಳಲ್ಲಿ   ತೀವ್ರವಾದ  ಅನಾರೋಗ್ಯದಿಂದ  ಬಳಲಿ  ಬೆಂಡಾಗಿದ್ದವರು. ಇವರ  ಹೆರಿಗೆಯು  ಡಾಕ್ಟರು / ನರ್‍ಸ್ ಗಳಿಂದ   ಕೂಡಿರುವ  ಆಸ್ಪತ್ರೆಗಳಲ್ಲಿ  ಆಗಿರಲಿಲ್ಲ. ಹಳ್ಳಿಗಾಡಿನಲ್ಲಿರುವ  ಹಿರಿಯ  ಹೆಂಗಸರೇ  ಹೆರಿಗೆಯಾಗುವಾಗ  ದಾದಿಯರಾಗಿ  ಉಪಚರಿಸಿದ್ದರು. ಆಗ  ಮಗುವಿನ  ಹೊಕ್ಕುಳ ಬಳ್ಳಿಯನ್ನು  ಕತ್ತರಿಸುವಾಗ  ಉಂಟಾದ  ನಂಜಿನಿಂದಲೋ  ಇಲ್ಲವೇ   ಒಳ್ಳೆಯ  ಆಹಾರದ  ಕೊರತೆಯಿಂದಲೋ   ಎಳೆಯ  ಕಂದಮ್ಮಗಳನ್ನು ಕೆಲವರು  ಕಳೆದುಕೊಂಡು  ಸಂಕಟಕ್ಕೊಳಗಾಗಿದ್ದರು. ಮತ್ತೆ  ಕೆಲವರು  ಹದಿನೆಂಟು  ವಯಸ್ಸು  ತುಂಬುವ  ಮೊದಲೇ  ಮದುವೆಯಾಗಿ, ಬಸಿರಾಗಿ, ಮಗುವನ್ನು  ಹಡೆದು  ನಿತ್ರಾಣಗೊಂಡಿದ್ದರು. ಇನ್ನೂ  ಕೆಲವರು ಕುಡುಕ  ಗಂಡನ  ಕಿರುಕುಳಕ್ಕೆ  ಬಲಿಯಾಗಿ, ಅಂತಹ  ಕೆಟ್ಟ ಚಟದ  ಗಂಡನ  ಜತೆ  ಸಂಸಾರ ಮಾಡಲು  ಹೇಸುತ್ತಿದ್ದರು. ಕೆಲವರು  ಮದುವೆಯ  ಸಮಯದಲ್ಲಿ  ನಡೆದಿದ್ದ  ಮಾತುಕತೆಯಂತೆ  ನಿಗದಿ ಪಡಿಸಿದ್ದ  ವರೋಪಚಾರದ  ಸಂಪತ್ತು  ಸಂಪೂರ್‍ಣವಾಗಿ ಇನ್ನೂ  ಸಂದಾಯವಾಗದೇ  ಇದ್ದುದರಿಂದ, ಅತ್ತೆಯ  ಮನೆಯಲ್ಲಿ ಪಟ್ಟಿದ್ದ  ಕಿರುಕುಳ  ಮತ್ತು  ಅಪಮಾನವನ್ನು  ನೆನಪಿಸಿಕೊಂಡಂತೆಲ್ಲಾ  ಬೆಚ್ಚಿಬೀಳುತ್ತಿದ್ದರು.  ಅಂತಹ  ನರಕಕ್ಕೆ  ಮತ್ತೆ  ಹೋಗಲು  ಹಿಂಜರಿಯುತ್ತಿದ್ದರು. ಈ  ರೀತಿ  ನಾನಾ  ಬಗೆಯ  ಕುಟುಂಬ / ಸಾಮಾಜಿಕ  ಕಾರಣಗಳಿಂದಾಗಿ  ಒಳಗೊಳಗೆ  ಬೇಯುತ್ತಿದ್ದ  ತರುಣಿಯರು  ಕೆಲವೊಮ್ಮೆ  ಬಾಯಿಗೆ  ಬಂದಂತೆ  ಬಡಬಡಿಸುತ್ತಿದ್ದರು. ತಮ್ಮಲ್ಲೇ  ಏನೇನೋ  ಮಾತನಾಡಿಕೊಳ್ಳುತ್ತಾ, ಮಾನಸಿಕವಾಗಿ  ಕುಗ್ಗಿಹೋಗಿದ್ದರು. ಜೀವನದಲ್ಲಿ  ಆಸಕ್ತಿಯನ್ನು  ಕಳೆದುಕೊಂಡು  ಮಂಕಾಗಿದ್ದರು.  ತಮ್ಮ  ಹೆಣ್ಣು  ಮಕ್ಕಳ  ನಡೆನುಡಿಗಳಲ್ಲಿ  ಉಂಟಾದ  ಬದಲಾವಣೆಗಳಿಗೆ  ಸರಿಯಾದ  ಕಾರಣಗಳನ್ನು  ಗುರುತಿಸಲಾರದ  ತಾಯಂದಿರು, ಇದನ್ನೇ  ‘ ದೆವ್ವದ  ಕಾಟ ‘ ವೆಂದು  ತಪ್ಪಾಗಿ  ತಿಳಿದು,  ಗಾಳಿ-ಗರ  ಬಿಡಿಸಲೆಂದು  ಈ  ದೇವತೆಯ  ಬಳಿಗೆ  ಕರೆತರುತ್ತಿದ್ದರು.  ತಮ್ಮ  ಮಕ್ಕಳನ್ನು  ಮೆಟ್ಟಿಕೊಂಡಿರುವ  ದೆವ್ವವು  ದೇವತೆಯ  ಶಕ್ತಿ  ಹಾಗೂ  ಮಹಿಮೆಯ  ಮುಂದೆ  ನಿಲ್ಲಲಾಗದೆ  ಓಡಿಹೋಗುವುದೆಂಬ  ನಂಬಿಕೆಯು  ಈ  ತಾಯಂದಿರಲ್ಲಿತ್ತು .

ತನ್ನ  ಬಳಿ  ಕರೆತರುವ  ಹೆಣ್ಣು ಮಕ್ಕಳನ್ನು  ಯಾವುದೇ  ಡಾಕ್ಟರ  ಬಳಿಗಾಗಲಿ  ಇಲ್ಲವೇ  ಆಸ್ಪತ್ರೆಗಾಗಲಿ  ಕರೆದುಕೊಂಡು  ಹೋಗಲೇಬಾರದು  ಎಂಬ  ಪೂಜಾರಿಯ  ಮಾತುಗಳನ್ನು  ತಾಯಂದಿರು  ದೇವತೆಯ  ಆದೇಶವೆಂದೇ  ನಂಬಿದ್ದರು. ಇಂತಹ  ತಪ್ಪು ತಿಳುವಳಿಕೆ  ಹಾಗೂ  ನಂಬಿಕೆಯಿಂದ ಈ ಹಿಂದೆ ಇಲ್ಲಿಗೆ ಬಂದಿದ್ದ ತರುಣಿಯರಲ್ಲಿ  ಒಂದಿಬ್ಬರ ರೋಗ ಹೆಚ್ಚಾಗಿ, ಸಾವನ್ನಪ್ಪಿದ  ಸುದ್ದಿಯು  ನಮಗೆ  ತಿಳಿದು ಬಂತು. ತಾಯಂದಿರು  ತಮ್ಮ  ಹೆಣ್ಣು ಮಕ್ಕಳನ್ನು  ಕಳೆದುಕೊಂಡಾಗ  ಗೋಳಾಡುತ್ತಾ –“ ಅವಳ  ಹಣೇಬರಹನೇ  ಹಂಗಿತ್ತು . ಅದಕ್ಕೆ  ದೆವ್ವ  ಮುರ್‍ಕೊತು“  ಎಂದು  ಅತ್ತು ಅತ್ತು  ಸುಮ್ಮನಾಗುತ್ತಿದ್ದರು. ಹಳ್ಳಿಯ  ಹೆಂಗಸರ ಈ ಬಗೆಯ  ನಂಬಿಕೆಯನ್ನು ಪೂಜಾರಿಯು ಚೆನ್ನಾಗಿ  ದುರುಪಯೋಗ ಮಾಡಿಕೊಳ್ಳುತ್ತಿದ್ದ .

ಹೀಗೆ  ಮಾಹಿತಿ  ಸಂಗ್ರಹ  ಮತ್ತು  ಅವನ್ನು  ಕುರಿತ  ಚಿಂತನೆಯ  ನಂತರ, ನಮ್ಮ  ಮುಂದೆ  ಎರಡು  ಪ್ರಶ್ನೆಗಳು  ಎದುರಾದವು. ಅಕ್ಕರದ  ಅರಿವಿಲ್ಲದೆ, ಪರಂಪರೆಯಿಂದ  ಬಂದಿರುವ  ನಂಬಿಕೆಯನ್ನು  ಬಲವಾಗಿ  ತಬ್ಬಿಕೊಂಡಿರುವ ಇಂತಹ ತಾಯಂದಿರಿಗೆ ಕೆಡುಕನಾಗಿರುವ  ಪೂಜಾರಿಯ ಬಳಿಗೆ ತಮ್ಮ ಹೆಣ್ಣು ಮಕ್ಕಳನ್ನು ಕರೆತರದಂತೆ  ತಿಳುವಳಿಕೆಯನ್ನು  ಹೇಳುವುದೋ?  ಇಲ್ಲವೇ  ಪೂಜಾರಿಯು  ಮಾಡುತ್ತಿರುವ  ಹಿಂಸೆಯಿಂದ  ಕೂಡಿರುವ  ಕಾಮದ  ಹಲ್ಲೆಯ  ಆಚರಣೆಯನ್ನು  ತಡೆಗಟ್ಟುವುದೋ?  ತಲತಲಾಂತರದಿಂದ  ಜನಸಮುದಾಯದ  ನಡೆನುಡಿಗಳಲ್ಲಿ  ಕಂಡುಬರುತ್ತಿರುವ   ನಂಬಿಕೆಗಳಲ್ಲಿನ  ಒಳಿತು-ಕೆಡುಕಿನ  ಸಂಗತಿಗಳನ್ನು  ತಿಳಿದುಕೊಂಡು, ಕೆಡುಕಿನ  ಆಚರಣೆಗಳನ್ನು  ಬಿಡುವುದಾಗಲಿ/ಬಿಡುವಂತೆ ಮಾಡುವುದಾಗಲಿ ಬಹಳ ತ್ರಾಸದಾಯಕವಾದ ಕೆಲಸ.

ಸುಮಾರು  ಆರು  ಸಾವಿರಕ್ಕಿಂತಲೂ  ಹೆಚ್ಚಿನ  ಜನರು  ವಾಸಿಸುತ್ತಿರುವ ಈ ಊರಿನಲ್ಲಿ  ಶಾಲಾಕಾಲೇಜುಗಳು, ಸರ್‍ಕಾರಿ  ಆಸ್ಪತ್ರೆ  ಹಾಗೂ  ಪೋಲಿಸ್ ಕಚೇರಿಗಳಿದ್ದವು. ಸಾಮಾಜಿಕ  ಒಳಿತಿಗಾಗಿ  ದುಡಿಯುವ  ಯುವಕಯುವತಿಯರಿಂದ  ಕೂಡಿದ  ಒಕ್ಕೂಟಗಳಿದ್ದವು. ಆದರೆ  ಯಾರೊಬ್ಬರಾಗಲಿ/ಯಾವುದೇ  ಒಕ್ಕೂಟವಾಗಲಿ  ಹಲವಾರು  ವರುಶಗಳಿಂದ ತಮ್ಮ ಊರಿನ  ದೇಗುಲದಲ್ಲಿ ನಡೆಯುತ್ತಿದ್ದ ಇಂತಹ ಕೆಟ್ಟ ಆಚರಣೆಯ ಎದುರಾಗಿ ಒಂದು ಸಣ್ಣ ದನಿಯನ್ನೂ ಎತ್ತಿರಲಿಲ್ಲ.

ಏಕೋ …. ಏನೋ … ಇಲ್ಲಿಯವರೆಗೂ  ಉತ್ಸಾಹದಿಂದ  ಹೆಜ್ಜೆಗಳನ್ನು  ಇಟ್ಟಿದ್ದ  ನನ್ನಲ್ಲಿ,  ಈಗ  ಒಂದು  ಬಗೆಯ  ಹಿಂಜರಿಕೆ  ಶುರುವಾಯಿತು. ಈ  ಊರಿನವರೇ  ಇಂತಹ  ಅನ್ಯಾಯವನ್ನು  ನೋಡಿಕೊಂಡು  ಸುಮ್ಮನಿರುವಾಗ, ಹೊರ  ಊರಿನಿಂದ  ಬಂದು  ಹೋಗುವ  ನಾವಿಬ್ಬರೇ  ಹೇಗೆ  ತಾನೆ  ಈ  ಕೆಡುಕಿನ  ಹಾಗೂ  ಹಿಂಸೆಯ  ಆಚರಣೆಯನ್ನು  ನಿಲ್ಲಿಸುವುದಕ್ಕೆ  ಆಗುತ್ತದೆ?  ನಿಲ್ಲಿಸಲು  ಪ್ರಯತ್ನಿಸಿದಾಗ  ನಮ್ಮ  ಮೇಲೆ  ಪೂಜಾರಿಯ  ಕಡೆಯವರಿಂದ  ಹಲ್ಲೆಯಾದರೆ  ಏನು  ಗತಿ?  ಇಂತಹ  ಅಂಜಿಕೆಗೆ  ಒಳಗಾದ  ನಾನು, ಈ  ಸಾಮಾಜಿಕ  ಕೇಡಿನ  ಎದುರಾಗಿ  ಸೆಣೆಸಲು  ಹಿಂಜರಿದು “ ಊರಿಗಿಲ್ಲದ  ಉಸಾಬರಿ  ನನಗ್ಯಾಕೆ “  ಎಂದು  ನನ್ನ  ದುಗುಡವನ್ನು  ಗೆಳೆಯನಿಗೆ  ತಿಳಿಸಿ, ಅತ್ತ  ಹೋಗುವುದನ್ನು  ನಿಲ್ಲಿಸಿದೆ .

ಆದರೆ  ನನ್ನ  ಗೆಳೆಯ  ಇನ್ನೂ  ಹರೆಯದವರು . ಅವರು  ಈ  ಕೆಡುಕಿನ  ಆಚರಣೆಯ  ಎದುರಾಗಿ  ಹೋರಾಡಿ, ಪೂಜಾರಿಯ  ವಂಚನೆ  ಹಾಗೂ  ಕಾಮವಿಕಾರತೆಯನ್ನು  ಬಯಲಿಗೆಳೆದು, ಹಳ್ಳಿಯ  ಹೆಣ್ಣು ಮಕ್ಕಳು  ಪಡುತ್ತಿದ್ದ  ನರಕ ಯಾತನೆಯನ್ನು  ನಿವಾರಿಸುವ  ಗಟ್ಟಿಯಾದ  ನಿಲುವನ್ನು  ಹೊಂದಿದ್ದರು. ಮುಂದಿನ  ವಾರಗಳಲ್ಲಿಯೂ  ತಪ್ಪದೇ  ದೇಗುಲಕ್ಕೆ  ಹೋಗಿಬರತೊಡಗಿದರು. ಪೂಜಾರಿಯ  ನಂಬಿಕೆಗೆ  ಪಾತ್ರವಾಗುವಂತೆ  ನಡೆದುಕೊಂಡರು. ಪೂಜಾರಿಗೆ  ಇವರ  ಬಗ್ಗೆ  ಸಂಪೂರ್‍ಣವಾಗಿ  ವಿಶ್ವಾಸ  ಮೂಡುತ್ತಿದ್ದಂತೆಯೇ , ಒಂದು  ದಿನ  ತಮ್ಮೊಡನೆ  ಪೋಟೊ  ತೆಗೆಯುವವರನ್ನು  ಕರೆದುಕೊಂಡು ಹೋದರು. ಪೂಜಾರಿಗೆ  ಇಬ್ಬರು  ದಿಂಡುರುಳಿದರು. ನಂತರ –

“ನೋಡಿ  ಸ್ವಾಮಿ , ನಿಮ್ಮ  ದೇವತೆಯ  ಮಹಿಮೆಯನ್ನು  ನನ್ನಿಂದ  ತಿಳಿದುಕೊಂಡು      ಇವರು  ಬಂದಿದ್ದಾರೆ . ಇವರು  ನಗರದಲ್ಲಿ  ಒಂದು  ದೊಡ್ಡ  ಪೋಟೊ  ಸ್ಟುಡಿಯೋ  ಇಟ್ಟಿದ್ದಾರೆ. ತಮ್ಮ  ಸ್ಟುಡಿಯೋನಲ್ಲಿ   ದೇವತೆಯ  ಹಾಗೂ  ನಿಮ್ಮ  ಚಿತ್ರವನ್ನು  ದೊಡ್ಡದಾಗಿ  ಇಟ್ಟು, ತಮ್ಮ  ಗಿರಾಕಿಗಳಿಗೆಲ್ಲಾ  ನಿಮ್ಮ  ಪೂಜೆಯ ಮಹಿಮೆಯನ್ನು  ತಿಳಿಸಿ, ಹೆಚ್ಚಿನ  ಪ್ರಚಾರ ಮಾಡಬೇಕೆಂದಿದ್ದಾರೆ. ಆದ್ದರಿಂದ  ಇಲ್ಲಿ  ಪೋಟೊ  ತೆಗೆಯಲು  ಅವಕಾಶವನ್ನು  ಕೊಡಿ “ ಎಂದು  ನನ್ನ  ಗೆಳೆಯ  ಕೇಳಿಕೊಂಡರು.  ಇದರಿಂದ  ಹಿಗ್ಗಿ ಹಿರೇಕಾಯಿಯಾದ  ಪೂಜಾರಿಯು  ಅಂದು  ಇನ್ನೂ  ಜೋರಾಗಿಯೇ  ತನ್ನೆಲ್ಲಾ  ಆಚರಣೆಗಳನ್ನು  ಮಾಡಿದ. ಅವೆಲ್ಲವನ್ನೂ  ಕ್ಯಾಮರದಲ್ಲಿ  ಸೆರೆಹಿಡಿಯಲಾಯಿತು.

ಪೋಟೊಗಳು  ಕಯ್ಗೆ  ಬಂದ  ಕೂಡಲೇ , ನನ್ನ  ಗೆಳೆಯರು  ದೇಗುಲದಲ್ಲಿ  ನಡೆಯುತ್ತಿದ್ದ  ಎಲ್ಲಾ  ಬಗೆಯ ಅನಾಚಾರಗಳನ್ನು  ಚಿತ್ರ ಸಹಿತ  ವಿವರಸಿ, ನಾಡಿನ  ಅನೇಕ  ಪತ್ರಿಕೆಗಳಲ್ಲಿ  ಬರಹಗಳನ್ನು  ಬರೆದು, ಸಾರ್‍ವಜನಿಕರ  ಗಮನಕ್ಕೆ  ತಂದರು. ಪತ್ರಿಕೆಗಳಲ್ಲಿ  ಬರಹಗಳು  ಪ್ರಕಟಗೊಳ್ಳುತ್ತಿದ್ದಂತೆಯೇ,  ಆ  ಊರಿನ  ಜನರಲ್ಲಿ  ಹಲವರು   ಎಚ್ಚರಗೊಂಡು, ತಮ್ಮ  ಊರಿನಲ್ಲಿ  ನಡೆಯುತ್ತಿದ್ದ  ಇಂತಹ  ಸಾಮಾಜಿಕ  ಕೆಡುಕಿನ  ಎದುರಾಗಿ  ಹೋರಾಡಿ , ಹಿಂಸೆಯ  ಆಚರಣೆಯನ್ನು  ನಿಲ್ಲಿಸುವುದು  ತಮ್ಮ  ಕರ್‍ತವ್ಯವೆಂಬುದನ್ನು  ಅರಿತುಕೊಂಡು, ದೇಗುಲದ  ಮುಂದೆ  ಪೂಜಾದಿನಗಳಂದು  ಹಿಂಸೆಯ  ಆಚರಣೆಯು  ಪೂಜಾರಿಯಿಂದ  ನಡೆಯದಂತೆ  ನೋಡಿಕೊಳ್ಳತೊಡಗಿದರು. ಪೋಲಿಸಿನವರು  ಇತ್ತ  ಗಮನ ಹರಿಸಿ, ಹೆಣ್ಣು ಮಕ್ಕಳನ್ನು  ಹಿಂಸಿಸುವ  ಆಚರಣೆಯ  ಬಗ್ಗೆ  ಕಾನೂನಿನ  ಕ್ರಮವನ್ನು  ತೆಗೆದುಕೊಂಡು , ಕೋರ್‍ಟಿನಲ್ಲಿ  ಮೊಕದ್ದಮೆಯನ್ನು  ಹೂಡುವುದಾಗಿ    ಪೂಜಾರಿಗೆ  ಎಚ್ಚರಿಕೆಯನ್ನು  ನೀಡಿದರು .  ಪ್ರತಿ  ಮಂಗಳವಾರ  ಮತ್ತು  ಶುಕ್ರವಾರಗಳಂದು  ಪೂಜಾ  ಸಮಯದಲ್ಲಿ  ಪೋಲಿಸ್  ಕಾವಲನ್ನು  ಹಾಕಿ , ಪೂಜಾರಿಯ  ಕ್ರಿಯೆಗಳನ್ನು  ಗಮನಿಸತೊಡಗಿದರು.

ಕಾನೂನಿನ  ಹೆದರಿಕೆ  ಮತ್ತು  ಊರಿನ  ಎಚ್ಚರಗೊಂಡ  ಜನರ   ಸಾಮಾಜಿಕ  ಹೊಣೆಗಾರಿಕೆಯ  ನಡೆನುಡಿಗಳಿಂದಾಗಿ ಪೂಜಾರಿಯು  ತನ್ನ ಕಾಮವಿಕಾರದ  ಮತ್ತು ಹಿಂಸೆಯಿಂದ  ಕೂಡಿದ್ದ ಆಚರಣೆಯನ್ನು  ಕೂಡಲೇ  ಕಯ್ ಬಿಟ್ಟ. ಊರಿನ  ಹಿರಿಯರು  ನ್ಯಾಯಪಂಚಾಯ್ತಿ  ಮಾಡಿ, ಇಂತಹ  ಕೊಳಕನನ್ನು  ದೇಗುಲದಿಂದ  ಹೊರದಬ್ಬಿ, ಮತ್ತೊಬ್ಬನನ್ನು  ನೇಮಿಸಿ, ಒಳ್ಳೆಯ  ರೀತಿಯಲ್ಲಿ  ಪೂಜಾಕಾರ್‍ಯಗಳು  ನಡೆದುಕೊಂಡು  ಹೋಗುವಂತೆ  ಮಾಡಿದರು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: