ರವೀಂದ್ರನಾತ ಟ್ಯಾಗೋರರ ಕವನಗಳು ಓದು – 15 ನೆಯ ಕಂತು

– ಸಿ.ಪಿ.ನಾಗರಾಜ.

*** ಮುಕ್ತ ನಾಕದೆಡೆಗೆ ***

ಎಲ್ಲಿ ಮನಕೆ ಭೀತಿ ಇಲ್ಲವೊ
ಎಲ್ಲಿ ಶಿರವೆತ್ತಿ ನಿಲಬಹುದೊ
ಎಲ್ಲಿ ತಿಳಿವಿಗಂಕುಶವಿಲ್ಲವೊ
ಎಲ್ಲಿ ಲೋಕವು ಚೂರಾಗಿ ಚದುರಿ
ಅನುದಾರದ ಸ್ವಪ್ರೀತಿಯ
ಅಡ್ಡಗೋಡೆಗಳಾಗಿ ಸಿಡಿದಿಲ್ಲವೊ
ಎಲ್ಲಿ ಮನದಾಳದ ಮಾತುಗಳು
ಸತ್ಯದಂತರಾಳದಿಂದೀಚೆ ಬರುವುವೊ
ಎಲ್ಲಿ ದಣಿವಿರದವಿರತ ದುಡಿಮೆ
ತನ್ನ ಬಾಹುಗಳನಖಂಡತೆಯೆಡೆಗೆ ಚಾಚಿದೆಯೊ
ಎಲ್ಲಿ ತರ್ಕದ ನಿರ್ಮಲ ತೊರೆಯು
ಸತ್ತ ಕಂದಾಚಾರಗಳ ಹಾಳು
ಮರಳುಗಾಡಿನುಸುಕಿನಲಿ
ತನ್ನ ದಾರಿ ತಪ್ಪಿಲ್ಲವೊ
ಎಲ್ಲಿ ಕರ್ಮವು ವಿಚಾರದೊಡಗೂಡಿ
ಪ್ರಜ್ಞೆಯನು ಸತತವೂ
ವಿಸ್ತರಿಸಲುಪಕ್ರಮಿಸುವಂತೆ
ನೀ ಮುನ್ನಡೆಸುತಿಹೆಯೊ
ನನ್ನ ತಂದೆ ಅಂಥ ಮುಕ್ತ
ನಾಕದೊಳಗೆನ್ನ ನಾಡೆಚ್ಚರಗೊಳ್ಳಲಿ.

ನನ್ನ ನಾಡಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಹೊಂದಿ, ಸಹಮಾನವರ ಜತೆಗೂಡಿ ಒಲವು ನಲಿವು ನೆಮ್ಮದಿಯಿಂದ ಬಾಳುವಂತಾಗಲಿ ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ಸಾಮಾಜಿಕ ಅರಿವು’ ಎಂದರೆ “ಲೋಕಜೀವನದಲ್ಲಿ ಯಾವುದು ಸರಿ/ಯಾವುದು ತಪ್ಪು; ಯಾವುದು ನೀತಿ/ಯಾವುದು ಅನೀತಿ; ಯಾವುದು ವಾಸ್ತವ/ಯಾವುದು ಕಲ್ಪಿತ” ಎಂಬುದನ್ನು ಒರೆಹಚ್ಚಿ ನೋಡಿ, ತನ್ನನ್ನು ಒಳಗೊಂಡಂತೆ ಜನಸಮುದಾಯಕ್ಕೆ ಒಳಿತನ್ನು ಮಾಡುವ ಮಾತು ಮತ್ತು ದುಡಿಮೆಯ ಸ್ವರೂಪವನ್ನು ತಿಳಿಯುವುದು:

ಸಾಮಾಜಿಕ ಎಚ್ಚರ’ ಎಂದರೆ ಜಾತಿ, ಮತ , ದೇವರ ಹೆಸರಿನಲ್ಲಿ ನಡೆಯುತ್ತಿರುವ ಆಚರಣೆಗಳಿಂದ ಮಾನವರ ಬದುಕಿನಲ್ಲಿ ಉಂಟಾಗುತ್ತಿರುವ ಪರಿಣಾಮಗಳನ್ನು ಸರಿಯಾಗಿ ಗಮನಿಸಿ , ಯಾವ ಬಗೆಯ ಆಚರಣೆಗಳು ಮಾನವ ಸಮುದಾಯದ ಸಂಕಟಗಳಿಗೆ ಕಾರಣವಾಗಿವೆ ಎಂಬುದನ್ನು ಅರಿತುಕೊಂಡು, ಅಂತಹ ಆಚರಣೆಗಳಿಂದ ದೂರವಿರುವುದು.

ಮುಕ್ತ=ಬಿಡುಗಡೆ ಹೊಂದಿದ/ತೆರೆದ;

ನಾಕದ+ಎಡೆಗೆ; ನಾಕ=ಸ್ವರ್‍ಗ/ ಒಲವು ನಲಿವು ನೆಮ್ಮದಿಯ ತಾಣ ಎಂಬ ರೂಪಕದ ತಿರುಳಿನಲ್ಲಿ ‘ನಾಕ’ ಎಂಬ ಪದ ಬಳಕೆಯಾಗಿದೆ / ಈ ಪ್ರಪಂಚದಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳಿದವರು ಸತ್ತ ನಂತರ ಹೋಗಿ ನೆಲೆಸುವ ಒಂದು ನೆಲೆ ಎಂಬ ನಂಬಿಕೆಯು ಜನಮನದಲ್ಲಿದೆ; ಎಡೆ=ಜಾಗ/ನೆಲೆ; ಎಡೆಗೆ=ನೆಲೆಯ ಕಡೆಗೆ/ನೆಲೆಯತ್ತ;

ಮುಕ್ತ ನಾಕದೆಡೆ=ಯಾವುದೇ ಬಗೆಯ ಅಡೆತಡೆಗಳಾಗಲಿ ಇಲ್ಲವೇ ಅಂಕೆಶಂಕೆಗಳಾಗಲಿ ಇಲ್ಲದೆ ಎಲ್ಲ ರೀತಿಯಿಂದಲೂ ವ್ಯಕ್ತಿಯು ಆನಂದಮಯವಾಗಿರುವ ನೆಲೆ;

ಎಲ್ಲಿ=ಯಾವ ಜಾಗದಲ್ಲಿ/ಯಾವ ನೆಲೆಯಲ್ಲಿ ; ಮನ=ಮನಸ್ಸು; ಭೀತಿ=ಹೆದರಿಕೆ/ಅಂಜಿಕೆ;

ಎಲ್ಲಿ ಮನಕೆ ಭೀತಿ ಇಲ್ಲವೊ=ಯಾವ ನೆಲೆಯಲ್ಲಿ ಮನಸ್ಸಿಗೆ ಹೆದರಿಕೆಯೆಂಬುದು ಇರುವುದಿಲ್ಲವೊ ;

ಶಿರ+ಎತ್ತಿ; ಶಿರ=ತಲೆ; ಶಿರವೆತ್ತಿ ನಿಲ್ಲುವುದು=ಇದೊಂದು ನುಡಿಗಟ್ಟು. ಯಾರಿಗೂ ಅಡಿಯಾಳಾಗದೆ ಸರ್‍ವಸ್ವತಂತ್ರನಾಗಿ ಬಾಳುವುದು;

ಎಲ್ಲಿ ಶಿರವೆತ್ತಿ ನಿಲಬಹುದೊ=ಯಾವ ನೆಲೆಯಲ್ಲಿ ಯಾರಿಗೂ ಇಲ್ಲವೇ ಯಾವ ಶಕ್ತಿಗೂ ಅಡಿಯಾಳಾಗದೆ ಸ್ವತಂತ್ರವಾಗಿ ಬಾಳಬಹುದೊ;

ತಿಳಿವಿಗೆ+ಅಂಕುಶ+ಇಲ್ಲವೊ; ತಿಳಿವು=ಅರಿವು/ತಿಳುವಳಿಕೆ ; ಅಂಕುಶ=ಲೋಹದಿಂದ ಮಾಡಿದ ಮೊನಚಾದ ಹತಾರ. ಆನೆಯನ್ನು ಪಳಗಿಸಲು ಮತ್ತು ಹತೋಟಿಯಲ್ಲಿಟ್ಟುಕೊಳ್ಳಲು ಈ ಹತಾರವನ್ನು ಬಳಸುತ್ತಾರೆ ;

ಎಲ್ಲಿ ತಿಳಿವಿಗಂಕುಶವಿಲ್ಲವೊ=ಯಾವ ನೆಲೆಯಲ್ಲಿ ತಿಳುವಳಿಕೆಯನ್ನು ಪಡೆಯುವುದಕ್ಕೆ ಮತ್ತು ಪಡೆದ ತಿಳುವಳಿಕೆಯನ್ನು ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬಾಳುವುದಕ್ಕೆ ಯಾವುದೇ ಬಗೆಯ ಅಡೆತಡೆಗಳು ಇರುವುದಿಲ್ಲವೋ;

ಲೋಕ=ಜಗತ್ತು/ಪ್ರಪಂಚ; ಚೂರು+ಆಗಿ; ಚೂರು=ಹೋಳು/ತುಂಡು; ಚದುರಿ=ಚೆಲ್ಲಾಪಿಲ್ಲಿಯಾಗಿ;

ಲೋಕವು ಚೂರಾಗಿ ಚದುರಿ=ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ. ಲೋಕವು ಒಡೆದು ಚೂರು ಚೂರಾಗಿ ಹರಡಿಕೊಂಡಿದೆ ಎಂದರೆ ಲೋಕದಲ್ಲಿರುವ ಮಾನವ ಸಮುದಾಯವು ಕಪ್ಪು/ಬಿಳುಪಿನ ಮಯ್ ಬಣ್ಣದಿಂದ ಕರಿಯರು/ಬಿಳಿಯರು ಎಂಬ ಎರಡು ಬೇರೆ ಬೇರೆ ಜನಾಂಗಗಳಾಗಿ; ಮಾನವರೇ ಕಟ್ಟಿಕೊಂಡಿರುವ ಮತಗಳಿಂದಾಗಿ ಹಿಂದೂ/ಮುಸ್ಲಿಮ್/ಕ್ರೈಸ್ತ/ಸಿಕ್/ಪಾರ್‍ಸಿ ಮತ್ತು ಇನ್ನಿತರ ಮತದವರಾಗಿ; ಈ ಮತಗಳ ಒಳಗೆ ಮತ್ತೆ ಹಲವಾರು ಬಗೆಯ ಜಾತಿ ಉಪಜಾತಿಯವರಾಗಿ; ಲಿಂಗದ ಕಾರಣದಿಂದ ಗಂಡಸರು/ಹೆಂಗಸರೆಂಬ ಪಂಗಡಗಳಾಗಿ; ಪ್ರಾಂತ್ಯಗಳ ಗಡಿಗಳಿಂದಾಗಿ ಬೇರೆ ಬೇರೆ ದೇಶದವರು/ರಾಜ್ಯದವರು ಎಂಬ ಹಲವು ಬಗೆಗಳಲ್ಲಿ ವಿಂಗಡಣೆಗೊಂಡಿದೆ;

ಉದಾರ=ತ್ಯಾಗಶೀಲತೆಯ/ಪ್ರಾಮಾಣಿಕತನ/ನ್ಯಾಯಸಮ್ಮತವಾದ ನಡೆನುಡಿ;

ಅನುದಾರ=ತ್ಯಾಗಶೀಲತೆಯಿಲ್ಲದ/ಪ್ರಾಮಾಣಿಕತನವಿಲ್ಲದ/ನ್ಯಾಯಸಮ್ಮತವಲ್ಲದ ನಡೆನುಡಿ; ಸ್ವಪ್ರೀತಿ=ತನ್ನನ್ನು ತಾನೇ ಮೋಹಿಸುವುದು/ತನ್ನ ಹಿತಕ್ಕಾಗಿಯೇ ಬಾಳುವುದು/ತಾನೊಬ್ಬನೇ ಉತ್ತಮನೆಂಬ ಅಹಂಕಾರ;

ಸಿಡಿದು+ಇಲ್ಲವೊ; ಸಿಡಿ=ಒಡೆ/ಸೀಳು/ದೂರವಾಗು;

ಅನುದಾರದ ಸ್ವಪ್ರೀತಿಯ ಅಡ್ಡಗೋಡೆಗಳು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ. ಜನಾಂಗ, ಜಾತಿ, ಮತ, ಲಿಂಗ ಮತ್ತು ಪ್ರಾಂತ್ಯಗಳ ವಿಂಗಡಣೆಯಿಂದಾಗಿ ಮಾನಸಿಕವಾಗಿ ಪರಸ್ಪರ ದೂರದೂರವಾಗಿರುವ ಜನರ ವರ್‍ತನೆಯಲ್ಲಿ “ನಾವು ಇತರರಿಗಿಂತ ದೊಡ್ಡವರು/ಉತ್ತಮರು” ಎಂಬ ಅಹಂಕಾರ, ನಾಡಿನ ಸಂಪತ್ತು ಮತ್ತು ಆಡಳಿತದ ಗದ್ದುಗೆಯು ನಮ್ಮ ಜನಾಂಗ/ ಜಾತಿ/ಮತದವರಿಗೆ ದೊರಕಬೇಕೆಂಬ ಕೆಟ್ಟ ಉದ್ದೇಶ ಹಾಗೂ ಇತರ ಪಂಗಡದವರನ್ನು ಅನುಮಾನ, ಅಸೂಯೆ ಮತ್ತು ಹಗೆತನದಿಂದ ಕಾಣುವ ಕೆಟ್ಟ ನಡೆನುಡಿಯು ನೆಲೆಗೊಂಡಿದೆ. ಇಂತಹ ಕಾರಣಗಳಿಂದಾಗಿ ಜಗತ್ತಿನಲ್ಲಿರುವ ಮಾನವರ ನಡುವೆ ಮಾನಸಿಕವಾಗಿ ಅಡ್ಡಗೋಡೆಗಳು ನಿರ್‍ಮಾಣಗೊಂಡು, ಮಾನವ ಸಮುದಾಯ ನೂರೆಂಟು ಬಗೆಯಲ್ಲಿ ವಿಂಗಡಣೆಗೊಂಡಿದೆ;

ಎಲ್ಲಿ ಲೋಕವು ಚೂರಾಗಿ ಚದುರಿ ಅನುದಾರದ ಸ್ವಪ್ರೀತಿಯ ಅಡ್ಡಗೋಡೆಗಳಾಗಿ ಸಿಡಿದಿಲ್ಲವೊ=ಯಾವ ನೆಲೆಯಲ್ಲಿ ಜನಾಂಗ/ಜಾತಿ/ಮತ/ಲಿಂಗ/ಪ್ರಾಂತ್ಯದ ಕಾರಣದಿಂದ ಜನಸಮುದಾಯದ ಮನಸ್ಸು ಒಡೆದು ಬೇರೆ ಬೇರೆಯಾಗಿಲ್ಲವೋ;

ಮನದ+ಆಳದ; ಮನದಾಳದ ಮಾತು=ಮನಸ್ಸಿನಲ್ಲಿ ತುಡಿಯುವ ನಾನಾ ಬಗೆಯ ಚಿಂತನೆಗಳು ; ಸತ್ಯದ+ಅಂತರಾಳ+ಇಂದ+ಈಚೆ; ಸತ್ಯ=ದಿಟ/ನಿಜ ; ಅಂತರಾಳ=ಒಳಗಡೆ ; ಸತ್ಯದ ಅಂತರಾಳ=ಈ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲ ಕ್ರಿಯೆಗಳಿಗೆ “ನಿಸರ್‍ಗ ಮತ್ತು ಮಾನವನ ನಡೆನುಡಿಯೇ ಕಾರಣ” ಎಂಬ ದಿಟವನ್ನು ಅರಿತುಕೊಂಡಿರುವುದು;

ಅಂತರಾಳದಿಂದ=ಒಳಗಿನಿಂದ; ಈಚೆ=ಹೊರಕ್ಕೆ;

ಎಲ್ಲಿ ಮನದಾಳದ ಮಾತುಗಳು ಸತ್ಯದಂತರಾಳದಿಂದೀಚೆ ಬರುವುವೊ=ಯಾವ ನೆಲೆಯಲ್ಲಿ ಪರಸ್ಪರ ಪ್ರೀತಿ, ಕರುಣೆ, ತಾಳ್ಮೆ, ಸಮಾನತೆ ಮತ್ತು ಗೆಳೆತನದ ಮಾತುಗಳು ಜಗತ್ತಿನ ವಾಸ್ತವವನ್ನು ಅರಿತುಕೊಂಡಿರುವ ಒಳ್ಳೆಯ ಮನಸ್ಸಿನಿಂದ ಹೊರಹೊಮ್ಮುತ್ತವೆಯೊ ;

ದಣಿವು+ಇರದ+ಅವಿರತ; ದಣಿವು=ಆಯಾಸ/ಬಳಲಿಕೆ; ಅವಿರತ=ಬಿಡುವಿಲ್ಲದ; ದುಡಿಮೆ=ಕೆಲಸ; ಬಾಹು+ಗಳ್+ಅನ್+ಅಖಂಡತೆ+ಎಡೆಗೆ; ಬಾಹು=ತೋಳು; ಅನ್=ಅನ್ನು; ಅಖಂಡತೆ=ಎಲ್ಲವನ್ನು ಒಳಗೊಂಡು/ಇಡಿಯಾಗಿ; ಚಾಚು=ವಿಸ್ತರಿಸು/ಮುಂದೆ ಒಡ್ಡು;

ಎಲ್ಲಿ ದಣಿವಿರದವಿರತ ದುಡಿಮೆ ತನ್ನ ಬಾಹುಗಳನಖಂಡತೆಯೆಡೆಗೆ ಚಾಚಿದೆಯೊ=ಬಳಲಿಕೆಯನ್ನೇ ಕಾಣದೆ ಅತ್ಯಂತ ಉತ್ಸಾಹ ಉಲ್ಲಾಸದಿಂದ ನಿರಂತರವಾಗಿ ಮಾಡುತ್ತಿರುವ ದುಡಿಮೆಯು ಇಡೀ ಜನಸಮುದಾಯದ ಒಳಿತಿಗಾಗಿ ಯಾವ ನೆಲೆಗಳಲ್ಲಿ ಹಬ್ಬಿದೆಯೊ ;

ತರ್ಕ=ವಿಚಾರ/ಚರ್‍ಚೆ/ವಾದ; ನಿರ್ಮಲ=ಶುಚಿಯಾದ; ತೊರೆ=ನದಿ/ಹೊಳೆ;

ತರ್ಕದ ನಿರ್ಮಲ ತೊರೆ=ಈ ನುಡಿಗಳು ರೂಪಕವಾಗಿ ಬಳಕೆಗೊಂಡಿವೆ. ಒಳ್ಳೆಯ ಚಿಂತನೆಯಿಂದ ಹೊರಹೊಮ್ಮಿದ ವಿಚಾರಗಳು;

ಸತ್ತ=ಸಾವನ್ನಪ್ಪಿದ; ಕಂದಾಚಾರ=ಸಂಪ್ರದಾಯ/ಹಿಂದಿನಿಂದ ನಡೆದು ಬಂದ ಆಚರಣೆ/ಕಟ್ಟುಪಾಡು;

ಸತ್ತ ಕಂದಾಚಾರ= ಜಾತಿ ಮತ ದೇವರ ಹೆಸರಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರಯೋಜನವಿಲ್ಲದ ಹಾಗೂ ತಿಳಿಗೇಡಿತನದ ಆಚರಣೆಗಳು;

ಮರಳುಗಾಡಿನ+ಉಸುಕಿನಲಿ; ಉಸುಕು=ಮರಳಿನ ಕಣಗಳು;

ಎಲ್ಲಿ ತರ್ಕದ ನಿರ್ಮಲ ತೊರೆಯು ಸತ್ತ ಕಂದಾಚಾರಗಳ ಹಾಳು ಮರಳುಗಾಡಿನುಸುಕಿನಲಿ ತನ್ನ ದಾರಿ ತಪ್ಪಿಲ್ಲವೊ=ಮರಳುಗಾಡಿನಲ್ಲಿ ಹರಿಯುತ್ತಿರುವ ತೊರೆಯು ಮರಳ ಕಣಗಳ ರಾಶಿಯಲ್ಲಿ ಸಿಲುಕಿ ಬತ್ತಿಹೋಗದೆ ಮುಂದೆ ಮುಂದೆ ಸಾಗುವಂತೆ ಮಾನವರ ಮನದಲ್ಲಿ ಮೂಡಿದ ಒಳ್ಳೆಯ ವಿಚಾರಗಳು ಸಂಪ್ರದಾಯದ ಆಚರಣೆಗಳ ನಡುವೆ ಸಿಲುಕಿ ನಾಶವಾಗದೆ ಉಳಿದು, ಯಾವ ನೆಲೆಯಲ್ಲಿ ಮುಂದುವರಿಯುತ್ತಿವೆಯೊ ;

ಕರ್ಮ=ಕೆಲಸ; ವಿಚಾರದ+ಒಡಗೂಡಿ; ವಿಚಾರ=ವಿವೇಕದ/ನ್ಯಾಯದ ಸಂಗತಿ; ಒಡಗೂಡಿ=ಜತೆಸೇರಿ;

ಕರ್ಮವು ವಿಚಾರದೊಡಗೂಡಿ=ವ್ಯಕ್ತಿಯು ಮಾಡುವ ಕೆಲಸವು ಒಳ್ಳೆಯ ಉದ್ದೇಶದಿಂದ ಕೂಡಿ;

ಪ್ರಜ್ಞೆ=ಅರಿವು/ತಿಳುವಳಿಕೆ; ಸತತ=ಯಾವಾಗಲೂ/ನಿರಂತರ; ವಿಸ್ತರಿಸಲು+ಉಪಕ್ರಮಿಸು+ಅಂತೆ; ವಿಸ್ತರಿಸು=ಹರಡು/ಹಬ್ಬು; ಉಪಕ್ರಮಿಸು=ತೊಡಗು/ಮೊದಲು ಮಾಡು; ಅಂತೆ=ಹಾಗೆ;

ಪ್ರಜ್ಞೆಯನು ಸತತವೂ ವಿಸ್ತರಿಸಲುಪಕ್ರಮಿಸುವಂತೆ=ನಿರಂತರವಾಗಿ ಅರಿವನ್ನು ಹೆಚ್ಚು ಹೆಚ್ಚು ಪಡೆಯುತ್ತಿರುವ ಹಾಗೆ;

ನೀ=ನೀನು/ದೇವರು/ಒಳ್ಳೆಯ ನಡೆನುಡಿಗಳಿಗೆ ಪ್ರೇರಕ ಶಕ್ತಿಯಾದ ನೀನು;

ಮುನ್ನಡೆಸುತ+ಇಹೆಯೊ; ಮುನ್ನಡೆಸು=ಮುಂದೆ ನಿಂತು ದಾರಿ ತೋರುವುದು; ಇಹೆಯೊ=ಇರುವೆಯೊ;

ನೀ ಮುನ್ನಡೆಸುತಿಹೆಯೊ=ಒಳ್ಳೆಯ ನಡೆನುಡಿಗಳಿಗೆ ಪ್ರೇರಣೆಯನ್ನು ನೀಡುವ ದೇವರಾದ ನೀನು ಎಲ್ಲರನ್ನೂ ಮುನ್ನಡೆಸುತ್ತಿರುವೆಯೊ;

ಎಲ್ಲಿ ಕರ್ಮವು ವಿಚಾರದೊಡಗೂಡಿ ಪ್ರಜ್ಞೆಯನು ಸತತವೂ ವಿಸ್ತರಿಸಲುಪಕ್ರಮಿಸುವಂತೆ ನೀ ಮುನ್ನಡೆಸುತಿಹೆಯೊ=ಯಾವ ನೆಲೆಯಲ್ಲಿ ವ್ಯಕ್ತಿಯು ಒಳ್ಳೆಯ ಉದ್ದೇಶದಿಂದ ಕೆಲಸವನ್ನು ಮಾಡುತ್ತ, ಜತೆಜತೆಗೆ ನಿರಂತರವಾಗಿ ತನ್ನ ಅರಿವನ್ನು ಹೆಚ್ಚು ಮಾಡಿಕೊಳ್ಳುತ್ತಿರುವ ಹಾಗೆ ನೀನು ಮುಂದೆ ನಿಂತು ಮುನ್ನಡೆಸುತ್ತಿರುವೆಯೊ;

ಎನ್ನ=ನನ್ನ; ತಂದೆ=ದೇವರನ್ನು ಈ ಬಗೆಯ ನುಡಿಯಿಂದ ಕರೆಯಲಾಗಿದೆ. ಕವಿಯು ಕಲ್ಲು/ಮಣ್ಣು/ಮರ/ಲೋಹದಿಂದ ಮಾಡಿರುವ ವಿಗ್ರಹರೂಪದಲ್ಲಿ ದೇವರನ್ನು ಕಾಣುತ್ತಿಲ್ಲ. ನಿತ್ಯ ಜೀವನದಲ್ಲಿ ಮಾನವನ ಮನಸ್ಸಿನಲ್ಲಿ ಒಳಿತಿನ ನಡೆನುಡಿಗಳನ್ನು ಪ್ರೇರೇಪಿಸುವ ವ್ಯಕ್ತಿಯನ್ನಾಗಿ ದೇವರನ್ನು ಕಲ್ಪಿಸಿಕೊಂಡಿದ್ದಾರೆ;

ಅಂಥ=ಅಂತಹ/ಆ ರೀತಿಯ; ನಾಡು+ಎಚ್ಚರಗೊಳ್ಳಲಿ; ನಾಡು=ದೇಶ; ಎಚ್ಚರ=ಜೋಪಾನವಾಗಿರುವಿಕೆ;

ನನ್ನ ತಂದೆ ಅಂಥ ಮುಕ್ತ ನಾಕದೊಳಗೆನ್ನ ನಾಡೆಚ್ಚರಗೊಳ್ಳಲಿ=ದೇವರಾದ ನನ್ನ ತಂದೆಯೇ, ಚೆಲುವು ಒಲವು ನೆಮ್ಮದಿಯಿಂದ ಕೂಡಿದ ಆನಂದಮಯವಾದ ನೆಲೆಯೊಳಗೆ ನನ್ನ ನಾಡಿನ ಜನರು ಅರಿವು ಮತ್ತು ಎಚ್ಚರದಿಂದ ಬಾಳುವಂತಾಗಲಿ;

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks