ನುಡಿಯ ಬೇರ್‍ಮೆ ಒಡಕಲ್ಲ, ಅದೇ ನಮ್ಮ ಗುರುತು

– ವಲ್ಲೀಶ್ ಕುಮಾರ್.

narendra_modi

ಮುಂಬಯಿಯಲ್ಲಿ ನಡೆದ ಬಿಜೆಪಿ ಮೇಳದಲ್ಲಿ ನರೇಂದ್ರ ಮೋದಿಯವರು ತಮ್ಮ ಬಾಶಣದಲ್ಲಿ ಬಾರತವನ್ನು ನುಡಿವಾರು ನಾಡುಗಳನ್ನಾಗಿಸಿರುವ ಬಗ್ಗೆ ಈ ರೀತಿ ಹೇಳಿದ್ದಾರೆ ಎಂದು ವರದಿಯಾಗಿದೆ.

While Sardar Patel united India, Congress pitted brother against brother and created states on linguistic basis.

ಸರ್‍ದಾರ್ ಪಟೇಲ್ ಅವರು ಬಾರತೀಯರನ್ನು ಒಂದಾಗಿಸಿದರು, ಆದರೆ ಕಾಂಗ್ರೆಸ್ಸಿಗರು ಅಣ್ಣ-ತಮ್ಮಂದಿರಂತಿದ್ದ ಬಾರತೀಯರ ನಡುವೆ ಬಿರುಕು ತಂದು ನುಡಿವಾರು ರಾಜ್ಯಗಳನ್ನು ಕಟ್ಟಿದರು, ಎಂಬುದು ಇದರ ಹುರುಳು.

ಆದರೆ ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ ಪ್ರಪಂಚದ ಬಹುತೇಕ ನಾಡುಗಳು ನುಡಿಯಾದಾರದ ಮೇಲೆಯೇ ಕಟ್ಟಲಾಗಿವೆ ಅಲ್ಲದೆ ನುಡಿವಾರು ರಾಜ್ಯಗಳನ್ನು ಮಾಡಿರುವುದು ಆಳ್ವಿಕೆ, ಕಲಿಕೆ ಸೇರಿದಂತೆ ಹಲವಾರು ನೋಟಗಳಿಂದ ವಯ್‍ಗ್ನಾನಿಕವಾಗಿದೆ. ಎಲ್ಲಾ ನುಡಿಯಾಡುವ ಊರುಗಳನ್ನು ಒಂದೇ ಸೂರಿನಡಿ ತಂದಾಗ ಆಗುವ ಹಲವಾರು ತೊಡಕುಗಳಲ್ಲಿ ಕಲಿಕೆಗೆ ಬೀಳುವ ಪೆಟ್ಟು ಬಲು ದೊಡ್ಡದು. ಅದರಿಂದ ನಾಡಿನ ಏಳ್ಗೆಯೇ ಕುಂಟಿತವಾಗಬಹುದು. ಹೇಗೆಂದು ನೋಡೋಣ ಬನ್ನಿ.

ನಮ್ಮೆಲ್ಲರಿಗೂ ನಮ್ಮದೇ ಆದ ಬೇರ್‍ಮೆಗಳಿವೆ. ನಾವಾಡುವ ನುಡಿ, ನಮ್ಮ ನಂಬಿಕೆ-ಪದ್ದತಿಗಳು, ಹೀಗೆ ಹಲವಾರು ಬೇರ್‍ಮೆಗಳಿರುತ್ತವೆ. ಇವುಗಳಲ್ಲಿ ನಂಬಿಕೆ-ಪದ್ದತಿಗಳು ಮನುಶ್ಯರು ಕಟ್ಟಿದ ಕಟ್ಟಲೆಗಲಾದರೆ, ನುಡಿಯ ಬೇರ್‍ಮೆ ನಮಗೆ ಪರಿಸರವೇ ತಂದು ಕೊಟ್ಟಿರುವನ್ತದ್ದು. ನಮ್ಮ ನುಡಿ ನಮ್ಮ ಅಳು-ನಗು ಎಲ್ಲವನ್ನು ತಿಳಿಸುವ ಒಯ್ಯುಗಮಾತ್ರವಲ್ಲ, ನಮ್ಮ ತಿಳಿವು-ಅರಿವಿಗೂ ಅದೇ ದಾರಿ.

ನಮ್ಮ ಸುತ್ತಲಿನ ಪರಿಸರದ ತೊಡಕುಗಳನ್ನು ಬಗೆಹರಿಸುತ್ತ, ಬದುಕಿನ ಮಟ್ಟವನ್ನು ಎತ್ತರಿಸಿಕೊಳ್ಳುವುದು ನಾಗರೀಕತೆಯ ಗುರುತು. ಈ ನಿಟ್ಟಿನಲ್ಲಿ ಹೊಸ ಕಂಡು ಹಿಡಿಯುವಿಕೆ, ಚಳಕಗಳ ಹುಟ್ಟುವಿಕೆ, ಹೀಗೆ ಹತ್ತು ಹಲವು ಹೊಸತನಗಳಿಗೆ ತೆರೆದುಕೊಳ್ಳುತ್ತೇವೆ. ಅದರಿಂದ ಹಣಕಾಸಿನ ಮಟ್ಟದಲ್ಲೂ ಮುಂದುವರೆಯುತ್ತೇವೆ. ಒಂದು ಕೂಡಣದಲ್ಲಿ ಇರುವ ಬೇರೆ ಬೇರೆ ಅರಿಮೆಗಳು, ತಿಳುವಳಿಕೆಗಳನ್ನು ಹಂಚಿಕೊಂಡು ಒಂದು ಅರಿವಿನ ಮಂದಿಗುಂಪನ್ನು (knowledge society) ಕಟ್ಟುವುದೇ ನಾಗರೀಕತೆಯ ಬೆಳವಣಿಗೆಗೆ ದಾರಿ. ಈ ಬೆಳವಣಿಗೆಗೆ ಹೆಚ್ಚು ಹೆಚ್ಚು ಮಂದಿ ಅರಿವಿನ ಕೊಡು-ಕೊಳ್ಳುವಿಕೆಯಲ್ಲಿ ಪಾಲ್ಗೊಳ್ಳಬೇಕು. ಹಾಗೆ ಹೆಚ್ಚು ಮಂದಿಯನ್ನು ಕೊಡು-ಕೊಳ್ಳುವಿಕೆಯಲ್ಲಿ ಬರಮಾಡಿಕೊಳ್ಳಲು ಆ ಮಂದಿಯ ನುಡಿ ಅರಿದಾದುದು (important). ಒಂದೇ ನುಡಿಯಾಡುವ ಮಂದಿ ಒಂದಾಗುವುದು ಒಂದು ಸಹಜ ನಡವಳಿಕೆ. ಅಲ್ಲಿ ತಿಳಿವಿನ ಹಂಚುವಿಕೆಯೂ ಹೆಚ್ಚಾಗಬಹುದು.

ಇಲ್ಲೊಂದು ಎತ್ತುಗೆ ಕೊಡುತ್ತೇನೆ. ನೀವು ಬೇರೊಂದು ದೇಶದ ಒಂದು ಬೀದಿಯಲ್ಲಿ ಸಾಗುತ್ತಿದ್ದೀರಿ ಅಂದುಕೊಳ್ಳಿ. ಅಲ್ಲಿ ಒಂದು ಅಂದವಾದ ಅರಮನೆ ನೋಡಿ ಬೆರಗಾಗುತ್ತೀರಿ. ಅದರ ಬಳಿ ಹೋಗುತ್ತೀರಿ. ಒಳಗೆ ನೋಡಿ ಚೆನ್ನಾಗಿದೆ ಅಂದುಕೊಂಡು ಬರುತ್ತಿರುವಾಗ ಅಲ್ಲೊಬ್ಬ ಆಳು ಕನ್ನಡ ಮಾತಾಡುವುದನ್ನು ಕೇಳುತ್ತೀರಿ. ದೂರ ದೇಶದಲ್ಲಿ ನಮ್ಮ ನುಡಿಯಾಡುವುದನ್ನು ಕೇಳಿ ಸುಮ್ಮನೆ ಬರುವುದುಂಟೇ? ನೀವು ಯಾವೂರು? ಇಲ್ಲಿಗೆ ಹೇಗೆ ಬಂದ್ರಿ? ಈ ಅರಮನೆಯ ಸ್ಪೆಶಾಲಿಟಿ ಏನು? ಅಂತೆಲ್ಲ ಕೇಳುತ್ತ ನಿಲ್ಲುತ್ತೀರಿ ಅಲ್ಲವೇ? ಅದೇ ಆ ಆಳು ನಿಮಗೆ ತಿಳಿಯದ ನುಡಿಯವರಾಗಿದ್ದರೆ ನೀವು ಅಶ್ಟೆಲ್ಲ ಮಾತಿಗೆ ಹೋಗುತ್ತಿರಲಿಲ್ಲ, ಅಲ್ಲಿಯ ವಿಶಯಗಳೂ ನಿಮಗೆ ತಿಳಿಯುತ್ತಿರಲಿಲ್ಲ, ಅಲ್ಲವೆ? ಒಂದೇ ನುಡಿಯಾಡುವ ಮಂದಿ ಒಂದುಗೂಡುವುದು ಸಹಜ ನಡವಳಿಕೆ ಅನ್ನುವುದಕ್ಕೆ ಇದೊಂದು ಎತ್ತುಗೆ. ಇದು ದರ್‍ಮ-ಜಾತಿಗಳ ಮೀರಿದ್ದು. ಇದರಿಂದ ಅರಿವಿನ ಕೊಡು-ಕೊಳ್ಳುವಿಕೆ ಹೆಚ್ಚಿ ನಾಗರೀಕತೆಯ ಹೊಸ ಮಜಲುಗಳನ್ನು ಏರಬಹುದು. ಪ್ರಪಂಚದ ಬಹುತೇಕ ನಾಡುಗಳು ನುಡಿಯಾದಾರದ ಮೇಲೆಯೇ ಕಟ್ಟಲಾಗಿದೆ ಅನ್ನುವುದು ಈ ಮಾತಿಗೆ ಒತ್ತು ನೀಡುವಂತಿದೆ.

ಈಗ ಬಾರತದ ಸ್ತಿತಿ ನೋಡೋಣ. ಇಲ್ಲಿ ಸಾವಿರಾರು ವರ್‍ಶಗಳಿಂದ ನೂರಾರು ನುಡಿಗಳು ಬೇರೂರಿದ್ದು, ಅತಿಹೆಚ್ಚು ಆಡಲ್ಪಡುವ ಕೆಲವು ನುಡಿಗಳನ್ನು ಮಾತ್ರ ಗುರುತಿಸಲಾಗಿದೆ. ಬಹುತೇಕ ಅದರ ನೆಲೆಯಲ್ಲೇ ನುಡಿವಾರು ರಾಜ್ಯಗಳನ್ನು ಮಾಡಲಾಗಿದೆ. ಬಿಡುಗಡೆಯಾದ ಬಾರತ ತನ್ನೊಳಗಿನ ನುಡಿ ಸಮುದಾಯಗಳ ಬೇರ್‍ಮೆಯನ್ನು ಗುರುತಿಸಿ ಅವುಗಳ ಏಳ್ಗೆಗಾಗಿ ಇಟ್ಟ ಒಳ್ಳೆಯ ಹೆಜ್ಜೆ ಇದೆನ್ನಬಹುದು. ಬಾರತದ ಒಂದೊಂದು ನುಡಿಯಾಡುವ ನಾಡುಗಳೂ ತಮ್ಮ ತಮ್ಮಲ್ಲಿ ಗಟ್ಟಿಯಾದ ಅರಿವಿನ ಮಂದಿಗುಂಪನ್ನು ಕೊಟ್ಟಿಕೊಳ್ಳುವುದು ಈ ಮೂಲಕ ಮಾತ್ರ ಸಾದ್ಯವಾಗಿತ್ತು.

ಇಲ್ಲವಾದರೆ ಸಾವಿರಾರು ನುಡಿಗಳಾಡುವ ಮಂದಿಯನ್ನು ಅರಿವಿನ ಕೊಡು ಕೊಳ್ಳುವಿಕೆಯಲ್ಲಿ ಹೇಗೆ ತಾನೆ ಕರೆತರಲು ಆದೀತು? ಇಲ್ಲಿ ಹುಟ್ಟುವ ಮಕ್ಕಳಿಗೆ ಒಂದೇ ರೀತಿಯ ಕಲಿಕೆ ಕಟ್ಟಲು ಹೇಗೆ ತಾನೆ ಆದೀತು? ಒಂದು ನಾಡಿನ ಮಕ್ಕಳ ಕಲಿಕೆಯಲ್ಲಿ ಆ ಮಗುವಿನ ಪರಿಸರದ ನುಡಿಯ ಪಾತ್ರ ಬಹಳ ದೊಡ್ಡದಿಗಿರುತ್ತದೆ. ಇಶ್ಟು ದೊಡ್ಡ ದೇಶದಲ್ಲಿ ಸಾವಿರಾರು ಬೇರ್‍ಮೆಗಳಿರುವಾಗ ಎಲ್ಲರನ್ನೂ ಒಂದೇ ರೀತಿಯ ಕಲಿಕೆಯ ಸೂರಿನಡಿ ತರಲು ಆದೀತೇ? ಹಾಗಾಗಿ ನುಡಿವಾರು ನಾಡುಗಳನ್ನು ಮಾಡಿರುವುದು ಬಾರತದ ಏಳ್ಗೆಗೆ ಪೂರಕವಾಗಿದೆ. ಇದನ್ನು ಕೆಟ್ಟದು, ಒಡಕು ಎಂಬ ರೀತಿಯಲ್ಲಿ ಬಿಂಬಿಸುವುದು ಕೇವಲ ಕೆಲವರ ರಾಜಕೀಯ/ದಾರ್‍ಮಿಕ ಗಳಿಕೆಗಳಿಗೆ ಆಡುವ ಮಾತುಗಳಾಗಿವೆ.

ಕನ್ನಡಿಗರಿಗೆ ಕಿವಿ ಮಾತು

ನಾವು ಯಾವುದೇ ನಂಬಿಕೆ-ಪದ್ದತಿಗೆ ಸೇರಿದವರಾದರೂ ನಮ್ಮ ನುಡಿ ಕನ್ನಡ. ಅದೇ ನಮ್ಮ ಗುರುತು. ಹಾಗೆಂದ ಮಾತ್ರಕ್ಕೆ ನಾವು ನಮ್ಮ ದರ್‍ಮ-ಜಾತಿಗಳನ್ನು ಬಿಡಬೇಕಿಲ್ಲ. ನಮ್ಮ ಮನೆಯ ಆಚರಣೆ ಏನೇ ಇರಲಿ, ನಮ್ಮ ಕೂಡಣದಲ್ಲಿ ಒಂದು ಬಿರುಸಾದ ಅರಿವಿನ ಮಂದಿಗುಂಪನ್ನು ಕಟ್ಟಬೇಕಿದೆ. ಇದರ ಪಾಲ್ಗೊಳ್ಳುವಿಕೆ ಹೆಚ್ಚಬೇಕಿದೆ. ಅದಕ್ಕೆ ಎಲ್ಲಾ ಕನ್ನಡಿಗರೂ ಅರಿವಿನ ಕೊಡು-ಕೊಳ್ಳುವಿಕೆಗೆ ಮುಂದೆಬರಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ನಾಡನ್ನು ಒಂದಾಗಿರಿಸಿಕೊಳ್ಳುವುದು ಅರಿವು, ಆಳ್ವಿಕೆ ಮತ್ತು ಹಣಕಾಸಿನ (economic) ಕಣ್ಬಗೆಯಿಂದ ಕಡ್ಡಾಯವಾಗಬೇಕಿದೆ.

(ಚಿತ್ರ ಸೆಲೆ: businesstoday)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: