ರಯ್ತನ ಪಾಡು
ನನ್ನ ಜೀವದ ಗೆಳೆಯ ನನ್ನ ಎತ್ತು,
ಅವನೊಂದಿಗೆ ದಿನವೆಲ್ಲ ನನ್ನ ಬೂಮಿಯಲ್ಲಿ ಹರಿಸುವೆ ಬೆವರು.
ದಣಿದು ಮನೆಗೆ ಹೋದರೆ ಮಕ್ಕಳ ಮುದ್ದು, ಮಡದಿಯ ಪ್ರೀತಿಯ ಕಯ್ ತುತ್ತು.
ನನಗಿನ್ನೇನು ಬೇಡ, ಇದೆ ನನ್ನ ನೆಮ್ಮದಿಯ ಜಗತ್ತು.
ಇದ್ದಕ್ಕಿದ್ದಂತೆ ಒಂದು ದಿನ ಬಂತು
ನ್ಯಾಯಾಲಯದ ನೋಟಿಸು
‘ಸರ್‍ಕಾರಕ್ಕೆ ಬೇಕಂತೆ ನನ್ನ ಹೊಲ,
ವಿದೇಶಿ ಕಂಪನಿಯೊಂದಿಗೆ ಸೇರಿ ಕಟ್ಟಿಸಲು ಕಾರ್‍ಕಾನೆ,
ಅದರಿಂದಾಗುವುದಂತೆ ನಮ್ಮೆಲ್ಲರ ಬಾಳು ಉಜ್ವಲ.
‘ಅಯ್ಯೋ !!! ಉಸಿರುಗಟ್ಟಿಸಿ ಬಿಡಿ, ಮಣ್ಣಾಗುವೆ ಒಂದೆ ಸಲ,
ಬೂಮಿಯಿಲ್ಲದೆ ನನ್ನ ನೆಲದಲ್ಲೇ ಪರಕೀಯನಾಗಿ ಮೆಟ್ಟಿ ನಿಲ್ಲಲಾರೆ ಈ ಜೀವನ ಜಾಲ.
ಹೊರಟೆ ಪಟ್ಟಣಕೆ ಹೊಲ ಉಳಿಸಿಕೊಳ್ಳಲು, ಉತ್ತರಿಸಲು…
ದಾರಿಯಲ್ಲಿ ಕಂಡಿತೊಂದು ನಾಮ ಪಲಕ “ಆದರ್‍ಶ ವಿಲೇಜ’
ಹಳ್ಳಿಯೆಂದು ಕಾಲಿಟ್ಟರೆ, ಅದೋ ಬಹುಮಹಡಿಗಳ ಕಟ್ಟಡ ಸಮುಚ್ಚಯ !!!
ಹುಡುಕಿದರೂ ಸಿಗಲಿಲ್ಲ ಅಲ್ಲಿ ಹಳ್ಳಿಯ ಸಲುಗೆ, ಪ್ರೀತಿ, ಆತಿತ್ಯ ಆದರ,
ಆ ಕಾಂಕ್ರಿಟನಲ್ಲಿ ಅಪರಿಚತರಂತೆ ಬದುಕುತ್ತಿದೆ ಜನಸಾಗರ.
ಹೊಟ್ಟೆ ಚುರ್ ಎನ್ನತೊಡಗಿತು,
ದೂರದಲ್ಲಿ ಕಂಡಿತೊಂದು ಬಣ್ಣ-ಬಣ್ಣದ ಕಟ್ಟಡ
ಅದರೆ ಹೆಸರೊ ‘ಪಿಜ್ಜಾ ಹಟ್’ !!!
ಗುಡಿಸಲೆಂದು ಹೊಳಹೊಕ್ಕರೆ,
ನನ್ನ ಇಡೀ ಸಂಸಾರ ಒಂದು ವಾರ ಊಟ ಮಾಡುವಸ್ಟು ದುಡ್ಡು
ಒಂದು ತುಂಡು ಬ್ರೆಡ್ಡಿಗೆ.
ಇದೇನಾ ಇವರುಗಳು ತೋರಿಸುತ್ತಿರುವ ಆದುನಿಕತೆ, ಅಬಿವ್ರದ್ದಿ..
ಇದಕ್ಕಾಗಿಯೆ ಅಲ್ಲವೆ ನಮ್ಮ ಬೂಮಿ ಕಿತ್ತುಕೊಂಡಿದ್ದು,
ಕಾಡನ್ನು ನೆಲ ಸಮ ಮಾಡಿದ್ದು,
ಗಾಳಿ-ನೀರನ್ನು ವಿಶ ಮಾಡಿದ್ದು.
ಅಯ್ಯೋ!!! ಹಳ್ಳಿ, ಗುಡಿಸಲುಗಳನ್ನಾದರು ಬಿಡಿ ಮಾರಾಯ್ರೆ..
ಅವು ಕೇವಲ ಬಾಶೆಯ ಅಬಿವ್ಯಕ್ತಿಯಲ್ಲ, ಬಾವನೆಗಳ ಪ್ರತೀಕ,
ಬರೀ ಶಬ್ದಗಳಲ್ಲ, ನಮ್ಮ ಪ್ರೀತಿ-ನೆಮ್ಮದಿಯ ರೂಪ
ಅವುಗಳಿಗಾದ್ರು ತಟ್ಟುವುದು ಬೇಡ ನಿಮ್ಮ ಪ್ರಗತಿಯ ಶಾಪ!!!
(ಚಿತ್ರ: kannada.yahoo.com)
ಇತ್ತೀಚಿನ ಅನಿಸಿಕೆಗಳು