ಬುಡಕಟ್ಟು ನಡೆಯ ಕುರುಹು – ಮಾರ‍್ಲಮಿ ಹಬ್ಬ

 ಬರತ್ ಕುಮಾರ್.

deepa

ಹಿಂದಿನಿಂದಲೂ ಪ್ರಪಂಚದ ಹಲವು ಬುಡಕಟ್ಟುಗಳಲ್ಲಿ ಒಂದು ನಂಬಿಕೆ ಬೆಳೆದು ಬಂದಿದೆ. ಅದೇನಂದರೆ ಬುಡಕಟ್ಟಿನಲ್ಲಿದ್ದ ಹಿಂದಿನವರು ಬಾಳಿ ಬದುಕಿ ಸತ್ತ ಮೇಲೆಯೂ ಅವರ ಆತ್ಮಗಳು ಇಲ್ಲವೆ ಅವರು ಮಾಡಿದ ಒಳ್ಳೆಯ ಕೆಲಸಗಳು ಈಗಿನವರನ್ನು ಕಾಯುತ್ತಿರುತ್ತವೆ. ಆದ್ದರಿಂದ ಈಗಿನವರು, ಹಿಂದಿನವರನ್ನು ನೆನೆಯುವುದು ಮತ್ತು ಅವರನ್ನು ಪೂಜಿಸುವುದು ಒಂದು ವಾಡಿಕೆಯಾಗಿ ಬೆಳೆದು ಬಂದಿದೆ. ಇಂತಹ ಒಂದು ವಾಡಿಕೆಯ ಕುರುಹೇ ’ಮಾರ‍್ಲಮಿ’ ಹಬ್ಬ. ಈ ಹಬ್ಬದ ಆಚರಣೆಯು ಹೆಚ್ಚಾಗಿ ಮಯ್ಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಇದನ್ನು ’ಪಕ್ಶ’ ಎಂದೂ ಕರೆಯಲಾಗುತ್ತದೆ.

ಇದು ದಸರೆಯ ಈರೇಳ್ನಾಳಿನ ಮೊದಲ ದಿನವಾಗಿ ಬರುತ್ತದೆ. ಅಂದರೆ ವಿಜಯದಶಮಿಗೂ ಹತ್ತು ದಿನ ಮುಂಚೆ ಬರುವ ಅಮವಾಸೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ತೀರಿಹೋದ ತಮ್ಮ ತಮ್ಮ ಹಿರೀಕರ ತಿಟ್ಟಗಳನ್ನು(photo) ಇಟ್ಟು ಅದಕ್ಕೆ ಪಂಚೆ-ಟವಲ್ಲನ್ನು ಉಡಿಸಿ, ಪೂಜೆ ಮಾಡಿ ಆಮೇಲೆ ವಡೆ-ಪಾಯಸ, ಹಣ್ಣು-ಹಂಪಲುಗಳು ಸೇರಿದಂತೆ ಮಾಡಿದ ಅಡಿಗೆಯನ್ನೆಲ್ಲಾ ಬಾಳೆಯೆಲೆಯ ಮೇಲೆ ಬಡಿಸಿ ’ಎಡೆ’ ಇಕ್ಕುತ್ತಾರೆ. ’ಎಡೆ’ ತೋರಿಸಿದ ಮೇಲೆ ತಮ್ಮ ಹಿರೀಕರ ಸಮಾದಿಯಿದ್ದರೆ, ಅಲ್ಲಿ ಹೋಗಿ ಸೊಡರು ಹಚ್ಚಿ ಪೂಜೆ ಮಾಡಿ ಬರುತ್ತಾರೆ(ಇದಕ್ಕೆ ತಕ್ಕಂತೆ ಕಿಟ್ಟೆಲ್ ಪದನೆರಕೆಯಲ್ಲಿ ’ಎಡೆ’ ಎಂಬುದಕ್ಕೆ ’An offering’, ‘meal’, ‘food’ ಎಂಬ ಹುರುಳುಗಳನ್ನು ಕೊಡಲಾಗಿದೆ). ಕೆಲವರು, ಹಿರೀಕರಿಗೆ ಇಶ್ಟವಾಗಿದ್ದ ತಿಂಡಿಗಳನ್ನು ಮಾಡಿ ಇಲ್ಲವೆ ಅವರಿಗೆ ಇಶ್ಟವಾಗಿದ್ದ ವಸ್ತುಗಳನ್ನು ಎಡೆಯಲ್ಲಿ ತೋರಿ ಮೆಚ್ಚಿಸುವುದುಂಟು. ಮುಂಚೆಯೇ ಕರೆದಿದ್ದ ಹತ್ತಿರದ ನಂಟರ ಜೊತೆ ಹೊಟ್ಟೆಬಿರಿಯುವಶ್ಟು ಊಟ ಮಾಡುತ್ತಾರೆ. ಈ ಹಬ್ಬದೂಟದಲ್ಲಿ ಕಡ್ಡಾಯವಾಗಿ ವಡೆ-ಪಾಯಸ ಇದ್ದೇ ಇರುತ್ತದೆ. ಕೆಲವರು ನಡುಹೊತ್ತಿಗೆ ಹಬ್ಬವನ್ನು ಮಾಡಿ ಮುಗಿಸಿದರೆ ಇನ್ನು ಕೆಲವರಿಗೆ ಹಬ್ಬ ಇರುಳಿನಲ್ಲಿ ಶುರುವಾಗುತ್ತದೆ. ಬಾಡು ತಿನ್ನುವವರು ಕೊಬ್ಬಿದ ಕುರಿಯನ್ನು ಕಡಿದು ಅದನ್ನು ಎಡೆಯಾಗಿ ತೋರಿದ ಮೇಲೆ ಬರ‍್ಜರಿ ಬಾಡೂಟವನ್ನು ನಂಟರೊಂದಿಗೆ ಮಾಡುತ್ತಾರೆ.

ಮೇಲಿನ ಆಚರಣೆಯನ್ನು ಗಮನಿಸಿದಾಗ ಜೇಮ್ಸ್ ಕ್ಯಾಮರೂನ್ ಅವರ ’ಅವತಾರ‍್’ ಸಿನಿಮಾ ನೆನಪಿಗೆ ಬರುತ್ತದೆ. ಅದರಲ್ಲಿ ’ನಾವಿ’ ಜನಾಂಗದ ತಮ್ಮ ಹಿರಿಯರ ’ಸ್ಪಿರಿಟ್’ಗಳೇ ತಮ್ಮನ್ನು ಕಾಯುತ್ತವೆ ಮತ್ತು ದಾರಿತೋರುಗರಾಗಿ ಕೆಲಸ ಮಾಡುತ್ತಿರುತ್ತವೆ ಎಂಬ ನಂಬಿಕೆಯನ್ನು ಗಮನಿಸಬಹುದಾಗಿದೆ. ತಮ್ಮ ಬುಡಕಟ್ಟಿನ ಹುಟ್ಟಿಗೆ ಹಿಂದಿನವರೇ ಕಾರಣವಾದುದ್ದರಿಂದ ಬುಡಕಟ್ಟಿನಲ್ಲಿ ಅವರ ಬಗೆಗಿನ ಬಕ್ತಿಬಾವ ತಾನಾಗಿಯೇ ಬೆಳೆದು ಬಂದಿರುವುದರಲ್ಲಿ ಅಚ್ಚರಿಯೇನಿಲ್ಲ.

(ಚಿತ್ರ ಸೆಲೆ: flickr.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ:

Enable Notifications OK No thanks