ಇದು ತಪ್ಪಾ ಸಾರ್?

– ಸಿ.ಪಿ.ನಾಗರಾಜ.

dilemma

ಇಂದಿಗೆ ಸರಿಯಾಗಿ ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು .

ಬೆಂಗಳೂರಿಗೆ ಹೋಗಲೆಂದು ಒಂದು ದಿನ ಬೆಳಗ್ಗೆ ಮದ್ದೂರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದೆನು . ಆಗ ಅಲ್ಲಿಗೆ ಬಂದ ನನ್ನ ವಿದ್ಯಾರ‍್ತಿಯೊಬ್ಬರು–

” ನಮಸ್ಕಾರ್ ಸಾರ್…ಚೆನ್ನಾಗಿದ್ದೀರಾ ಸಾರ್ ” ಎಂದು ವಿಚಾರಿಸಿಕೊಂಡರು.

” ನಮಸ್ಕಾರ ಬನ್ನಿ…ನೀವು ಚೆನ್ನಾಗಿದ್ದೀರಾ…ಈಗ ಎಲ್ಲಿದ್ದೀರಿ ? ” ಎಂದೆ.

ಕಳೆದ ಎಂಟು-ಹತ್ತು ವರುಶಗಳ ಹಿಂದೆ ನಮ್ಮ ಕಾಲೇಜಿನ ಅತ್ಯುತ್ತಮ ಚರ‍್ಚಾಪಟುಗಳಲ್ಲಿ ಒಬ್ಬರಾಗಿದ್ದ ಇವರು…ಕಾಲೇಜಿನ ಚರ‍್ಚಾಕೂಟಗಳಲ್ಲಿ ಮಾತನಾಡಿ ಪಡೆದಿದ್ದ ಮೊದಲ ಬಹುಮಾನ ಮತ್ತು ಪ್ರಶಸ್ತಿಗಳಿಗೆ ಲೆಕ್ಕವೇ ಇರಲಿಲ್ಲ . ಕಾಳಮುದ್ದನದೊಡ್ಡಿಯ ಬಾರತಿ ಕಾಲೇಜಿನಲ್ಲಿ ಪದವಿಯನ್ನು ಪಡೆದು , ಅನಂತರ ಮಯ್ಸೂರಿನ ಗಂಗೋತ್ರಿಯಲ್ಲಿ ಎಂ.ಎ.,ಪದವಿಯನ್ನು ಗಳಿಸಿ , ಈಗ ಸರ‍್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವುದು , ಈ ಮೊದಲೇ ನನಗೆ ತಿಳಿದಿತ್ತು.

” ಈಗ ನಾನು ಮಂಗಳೂರಿನಲ್ಲಿದ್ದೇನೆ ಸಾರ್. ಈ ರಜೆಯಲ್ಲಿ ಒಂದು ಸಾರಿ ನಿಮ್ಮನ್ನು ನೋಡ್ಬೇಕು ಅನ್ಕೊಂಡಿದ್ದೆ ಸಾರ್ ”

” ಯಾಕೆ…ಏನ್ ಸಮಾಚಾರ ? ”

” ನಿಮ್ ಜೊತೇಲಿ ಸ್ವಲ್ಪ ಮಾತಾಡ್ಬೇಕಿತ್ತು ಸಾರ್…ಈಗ ನೀವು ಬೆಂಗಳೂರಿಗೆ ಹೊರಟ್ಟಿದ್ದೀರ ಅಂತ ಕಾಣುತ್ತೆ ಸಾರ್ ”

” ಹೂ…ಬೆಂಗಳೂರಿಗೆ ಹೋಗ್ಬೇಕಾಗಿದೆ , ಆದರೆ ಅಂತಾ ಅರ‍್ಜೆಂಟ್ ಏನಿಲ್ಲ . ಒಂದು ಗಂಟೆ ತಡವಾಗಿ ಹೋದ್ರು ನಡೆಯುತ್ತೆ . ಬನ್ನಿ ಇಲ್ಲೇ ಅದೇನ್ ಮಾತಾಡೋಣ ” ಎಂದು ಹೇಳಿ , ರಸ್ತೆಯ ಮಗ್ಗುಲಿಂದ ತುಸು ದೂರ ಸರಿದು ನಿಂತು ಕೊಂಡೆನು . ಈಗ ಅವರು ಮಾತನಾಡತೊಡಗಿದರು-

” ನನ್ನ ಜೀವನದಲ್ಲಿ ನಡೆದ ಸಂಗತಿಯೊಂದನ್ನು ನಿಮ್ಮೊಡನೆ ಹೇಳಿಕೊಂಡು…ಅದರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಯಬೇಕಿತ್ತು ಸಾರ್ ”

” ಅದೇನ್ ಹೇಳಿ ”

” ಎಂ.ಎ., ಆದ ಮೇಲೆ ನಾನು ಮೊದಲು ಒಂದೆರಡು ವರುಶ ಪಾರ‍್ಟ್ ಟಯ್‍ಮ್ ಲೆಕ್ಚರರ್ ಆಗಿದ್ದೆ ಸಾರ್. ಆಮೇಲೆ ಪುಲ್ ಟಯ್‍ಮ್ ಲೆಕ್ಚರರ್ ಪೋಸ್ಟ್ ಸಿಕ್ತು . ನನ್ನ ಕೆಲಸ ಕಾಯಂ ಆಗೋದಕ್ಕೆ ಎಪ್ಪತ್ತು ಸಾವಿರ ಕರ‍್ಚಾಯ್ತು ಸಾರ್ . ಆ ಸಮಯದಲ್ಲಿ ದುಡ್ಡನ್ನ ವೆಚ್ಚ ಮಾಡ್ದೆ ಹೋಗಿದ್ರೆ…ಸರ‍್ಕಾರಿ ಕೆಲಸ ಸಿಕ್ತಿರಲಿಲ್ಲ ಸಾರ್. ಅದಕ್ಕೋಸ್ಕರ ಬೇರೆ ಮಾರ‍್ಗವೇ ಇಲ್ಲದೆ ಲಂಚ ಕೊಟ್ಟು ಕೆಲಸ ತಕೊಂಡೆ ಸಾರ್ ”

” ನೀವೆ ಲಕ್ಕಿ ಪೆಲೋ…ಆಗ ಕೆಲವರು ಎರಡರಿಂದ ಮೂರು ಲಕ್ಶದವರೆಗೂ ದುಡ್ಡನ್ನು ಮೊದಲೇ ಕೊಟ್ಟಿದ್ರು ಕೆಲಸ ಸಿಗಲಿಲ್ವಂತೆ…ನಿಜವೇನು ? ”

” ನಿಜ ಸಾರ್…ನನ್ನದು ಒಳ್ಳೆ ಮೆರಿಟ್ ಇದ್ದುದರಿಂದ ಕಡಿಮೆ ದುಡ್ಡಿನಲ್ಲೇ ಆಯ್ತು ಸಾರ್ . ಈಗ ನನ್ನನ್ನು ಒಂದು ಚಿಂತೆ ಕೊರೀತಾ ಇದೆ ಸಾರ್ ”

” ಏನು…ವರ‍್ಗಾವಣೆಗೆ ಸಂಬಂದಪಟ್ಟಿದ್ದೆ ? ”

” ಅದಲ್ಲ ಸಾರ್…ನಾನು ಕಳೆದ ವರುಶ ಮದುವೆ ಮಾಡ್ಕೊಂಡೆ…ಆಗ ಹೆಣ್ಣಿನ ಕಡೆಯವರಿಂದ ಎಪ್ಪತ್ತು ಸಾವಿರ ಈಸ್ಕೊಂಡು , ನಾನು ಕೆಲಸ ತಕೊಳೂಕೆ ಮಾಡಿದ್ದ ಸಾಲವನ್ನು ತೀರಿಸ್ಕೊಂಡೆ . ಈ ರೀತಿ ಮಾಡಿದ್ದು ತಪ್ಪಾ ಸಾರ್ ? ” ಎಂದು ಕೇಳಿ…ನನ್ನ ಪ್ರತಿಕ್ರಿಯೆಗಾಗಿ ಕಾತರಿಸಿದರು .

ಈ ಹಿಂದೆ ಇವರು ನಮ್ಮ ಕಾಲೇಜಿನ ಚರ‍್ಚಾಕೂಟಗಳಲ್ಲಿ ಸಮಾಜದಲ್ಲಿ ತಾಂಡವವಾಡುತ್ತಿರುವ ಎಲ್ಲಾ ಬಗೆಯ ಲಂಚಕೋರತನವನ್ನು ಕಟುವಾಗಿ ಟೀಕಿಸುತ್ತಾ…ವರದಕ್ಶಿಣೆಯ ಪಿಡುಗನ್ನು ಕೊನೆಗೊಳಿಸಬೇಕೆಂದು ಆಡುತ್ತಿದ್ದ ಕ್ರಾಂತಿಕಾರಕವಾದ ಮಾತುಗಳು ನೆನಪಿಗೆ ಬಂದವು . ಅಂದಿನ ಆ ಮಾತುಗಳ ಮತ್ತು ಇಂದಿನ ಈ ಕ್ರಿಯೆಗಳ ನಡುವಣ ಅಂತರವನ್ನು ಕುರಿತು ಚಿಂತಿಸುತ್ತ…ಕೆಲವು ಗಳಿಗೆ ಸುಮ್ಮನಿದ್ದೆ .

” ಇದ್ಯಾಕ್ ಸಾರ್…ಸುಮ್ಮನಾಗ್ಬುಟ್ರಿ…ನಿಮಗೆ ಈ ಬಗ್ಗೆ ಏನು ಅನ್ನಿಸುತ್ತೆ ಅನ್ನೋದನ್ನು ದಯವಿಟ್ಟು ಹೇಳಿ ಸಾರ್ ” ಎಂದು ಒತ್ತಾಯಿಸಿದರು .

” ನೋಡಿ… ಜನರ ವರ‍್ತನೆಗಳು ಮತ್ತು ಮಾಡುವ ಕೆಲಸಗಳು ಎರಡು ನೆಲೆಗಳಲ್ಲಿ ವಿಶ್ಲೇಶಣೆಗೆ ಒಳಗಾಗುತ್ತವೆ. ಒಂದು…ವ್ಯಕ್ತಿಯ ನೆಲೆಯಲ್ಲಿ ; ಮತ್ತೊಂದು ಸಾಮಾಜಿಕ ನೆಲೆಯಲ್ಲಿ . ಆಗ ನೀವು ಸಾಲ ಮಾಡಿ ಲಂಚ ಕೊಡದಿದ್ದರೆ ನಿಮಗೆ ಸರ‍್ಕಾರಿ ಕೆಲಸ ಸಿಕ್ತಿರಲಿಲ್ಲ ; ಮಾಡಿದ ಸಾಲ ತೀರಿಸದೆ ಇದ್ದಿದ್ದರೆ ಮುಂದಿನ ಅನೇಕ ವರುಶಗಳ ಕಾಲ ನೀವು ಹಣಕಾಸಿನ ತೊಂದರೆಗೆ ಗುರಿಯಾಗಿ ನರಳ್ತ ಇರಬೇಕಿತ್ತು . ಆದ್ದರಿಂದ ನಿಮ್ಮ ನೆಲೆಯಿಂದ ನೋಡಿದಾಗ…ನೀವು ಲಂಚ ಕೊಟ್ಟಿದ್ದಾಗಲಿ ಮತ್ತು ವರದಕ್ಶಿಣೆ ಪಡೆದಿದ್ದಾಗಲಿ ತಪ್ಪಲ್ಲ . ಆದರೆ ಸಮಾಜದ ನೆಲೆಯಿಂದ ನೋಡಿದಾಗ…ಇವೆರಡೂ ತಪ್ಪೆ…ಯಾಕಂದ್ರೆ ಇವು ಸಾಮಾಜಿಕ ಅನಿಶ್ಟಗಳಾಗಿದ್ದು ಜನಸಮುದಾಯಕ್ಕೆ ಕೇಡನ್ನು ಉಂಟುಮಾಡುತ್ತವೆ .

” ಹಣ ಕೊಟ್ಟು ಕೆಲಸ ಪಡೆಯುವಂತಹ ಲಂಚಗುಳಿತನ ನಮ್ಮ ಸಾಮಾಜಿಕ ವ್ಯವಸ್ತೆಯಲ್ಲಿ ಇರುವುದರಿಂದಲ್ಲವೇ ಸಾರ್…ನಾನು ಸಾಲ ಮಾಡಿ ಲಂಚ ಕೊಟ್ಟಿದ್ದು ”

” ನೀವು ಹಾಗೆನ್ನುವುದಾದರೆ…ಒಬ್ಬ ಕಳ್ಳ…ಇನ್ನೊಬ್ಬ ದರೋಡೆಕೋರ…ಮತ್ತೊಬ್ಬ ಲಂಚಕೋರ…ಹೀಗೆ ಜನರಿಗೆ ಮತ್ತು ಸಮಾಜಕ್ಕೆ ಕೆಡುಕನ್ನು ಮಾಡುವ ಪ್ರತಿಯೊಬ್ಬರೂ…ತಮ್ಮ ಕಾರ‍್ಯಗಳಿಗೆ ಸಮಾಜದಲ್ಲಿನ ಒಂದಲ್ಲ ಒಂದು ಬಗೆಯ ಲೋಪವನ್ನೇ ಎತ್ತಿ ಹಿಡಿಯುತ್ತಾರೆ . ಆಗ ಅವರನ್ನೂ ನಾವು ಒಪ್ಪಿಕೊಳ್ಳಬೇಕಲ್ಲವೇ ? ”

” ಇದೇನ್ ಸಾರ್…ಹೀಗೆ ಹೇಳ್ತೀರಿ ? ”

” ನೋಡಿ…ನನ್ನ ಮಾತುಗಳ ಸ್ಪಶ್ಟತೆಗಾಗಿ ನಿಮಗೆ ನನ್ನದೇ ಒಂದು ಉದಾಹರಣೆಯನ್ನು ಕೊಡ್ತೀನಿ . ಈಗ ನಾನು ಕೆಲಸ ಮಾಡುತ್ತಿರುವ ವಿದ್ಯಾಸಂಸ್ತೆಯಲ್ಲಿ ಒಬ್ಬ ಜಾಡಮಾಲಿ ಇದ್ದಾನೆ . ಅವನ ತಿಂಗಳ ಸಂಬಳ ಕೇವಲ ಆರು ನೂರು ರೂಪಾಯಿ . ಅವನಿಗಿಂತ ಇಪ್ಪತ್ತು-ಮೂವತ್ತು ಪಟ್ಟು ಹೆಚ್ಚಾಗಿ ವೇತನ ಪಡೆಯುತ್ತಿರುವ ಕಾಲೇಜಿನ ಉಪನ್ಯಾಸಕರಾದ ನಾವೆಲ್ಲಾ ಕಳೆದ ಹಲವು ತಿಂಗಳುಗಳ ಹಿಂದೆ ಕಾಲೇಜಿಗೆ ಹಾಜರಾದರೂ , ತರಗತಿಗಳನ್ನು ತೆಗೆದುಕೊಳ್ಳದೆ ನಮ್ಮ ಸಂಬಳದ ಹೆಚ್ಚಳಕ್ಕಾಗಿ ಮುಶ್ಕರ ಮಾಡಿದ್ದು…ನಿಮಗೂ ಗೊತ್ತಿದೆ . ಆಗ ನಮಗಿಂತ ಹೆಚ್ಚಾಗಿ ವೇತನ ಪಡೆಯುತ್ತಿರುವವರ ಕಡೆಗೆ ಬೆರಳು ತೋರಿಸುತ್ತಾ…ನಮ್ಮ ಬೇಡಿಕೆಗಳೆಲ್ಲವನ್ನೂ ಸಮರ‍್ತಿಸಿಕೊಂಡೆವು . ಆದರೆ ನಮಗಿಂತ ಕಡಿಮೆ ಆದಾಯವುಳ್ಳ ಆ ಜಾಡಮಾಲಿಯ ಬಗ್ಗೆಯಾಗಲೀ ಇಲ್ಲವೇ ಬಡತನದಲ್ಲಿ ಬೇಯುತ್ತಿರುವ ಕೋಟಿಗಟ್ಟಲೆ ಶ್ರಮಜೀವಿಗಳ ಬಗ್ಗೆ ನಾವು ಒಂದು ಗಳಿಗೆಯಾದರೂ ಆಲೋಚನೆ ಮಾಡಿದ್ದೀವಾ ?…ಸದಾ ಕಾಲ ದುಡಿಯುತ್ತಿದ್ದರೂ ಅವರ ಜೀವನಮಟ್ಟ ಯಾಕೆ ಉತ್ತಮವಾಗುತ್ತಿಲ್ಲ ಅಂತ ಕಳವಳಪಟ್ಟಿದ್ದೀವಾ ? ”

” ಅವರ ಬಗ್ಗೆ ಚಿಂತಿಸಬೇಕಾದವರು ನೀವು-ನಾವಲ್ಲ ಸಾರ್…ಅವರೇ ಜತೆಗೂಡಿ ತಮ್ಮ ಸವಲತ್ತುಗಳಿಗಾಗಿ ಹೋರಾಟ ಮಾಡ್ಬೇಕು ಸಾರ್ ”

” ಏನ್ರಿ ಹೋರಾಟ ಮಾಡ್ತರೆ ?…ದೇಶದ ಸಂಪತ್ತಿನಲ್ಲಿ ಬಹು ದೊಡ್ಡ ಪಾಲನ್ನು ಕಾನೂನು ಪ್ರಕಾರವಾಗಿಯೇ ಗೋರಿ ಗುಡ್ಡೆ ಹಾಕಿಕೊಳ್ಳುತ್ತಿರುವ ರಾಜಕಾರಣಿಗಳ , ಕಯ್ಗಾರಿಕೋದ್ಯಮಿಗಳ , ವ್ಯಾಪಾರಸ್ತರ ಮತ್ತು ಸರ‍್ಕಾರಿ ನವ್ಕರರ ರಕ್ಶಣೆಗೆ ನ್ಯಾಯಾಂಗ ಮತ್ತು ಪೋಲಿಸ್ ಬಲಗಳೆಲ್ಲವೂ ಇರುವಾಗ…ದುಡಿಯುವ ಶ್ರಮಜೀವಿಗಳ ಹೋರಾಟಕ್ಕೆ ಹೇಗೆ ತಾನೆ ಜಯ ಸಿಗುತ್ತೆ ? ”

” ಸಾರ್ , ಈಗ ನನ್ನನ್ನು ಕಾಡುತ್ತಿರುವ ಚಿಂತೆಗೂ…ನೀವು ಹೇಳುತ್ತಿರುವ ವಿಚಾರಗಳಿಗೂ…ಏನ್ ಸಾರ್ ಸಂಬಂದ ? ”

” ಸಂಬಂದ ಇರೋದು ಅಕ್ಶರವಂತರಾಗಿರುವ ನಮ್ಮ ಮನೋದರ‍್ಮ ಮತ್ತು ವಾದದ ಸರಣಿಯಲ್ಲಿ…ನಾನು ಹೇಗೆ ಇನ್ನೂ ಹೆಚ್ಚಿನ ಸಂಬಳವನ್ನು ಸಮರ‍್ತಿಸಿಕೊಳ್ಳುತ್ತೇನೆಯೋ ಹಾಗೆಯೇ ನೀವು ಕೂಡ ಲಂಚ ಕೊಟ್ಟಿದ್ದನ್ನು ಮತ್ತು ವರದಕ್ಶಿಣೆ ತಕೊಂಡಿದ್ದನ್ನು ಸಮರ‍್ತಿಸಿಕೊಳ್ತಿರಲ್ಲವೇ ? ”

” ಅಹುದು ಸಾರ್ ”

” ಅದನ್ನೇ ನಾನು ಹೇಳ್ತ ಇರೋದು . ನಾವು ತರ‍್ಕಬದ್ದವಾಗಿ ಆಡುವ ಮಾತುಗಳೆಲ್ಲವೂ ನಮ್ಮ ನಮ್ಮ ಕ್ರಿಯೆಗಳನ್ನು ಸಮರ‍್ತಿಸಿಕೊಳ್ಳುವ ಸಾದನಗಳಾಗಿವೆಯೇ ಹೊರತು ಸತ್ಯವನ್ನು ತಿಳಿಯುವ ಇಲ್ಲವೇ ತಿಳಿಸುವ ಸಾದನಗಳಾಗಿಲ್ಲ ” ಎಂದಾಗ…ಅವರು ಯಾವುದೇ ಮಾತನ್ನು ಆಡದೆ ಸುಮ್ಮನೆ ತಲೆಯಾಡಿಸಿದರು . ಅದು ನನ್ನ ಅನಿಸಿಕೆಗೆ ಸೂಚಿಸಿದ ಒಪ್ಪಿಗೆಯೋ ಇಲ್ಲವೇ ನಿರಾಕರಣೆಯೋ ಎಂಬುದು ನನಗೆ ತಿಳಿಯಲಿಲ್ಲ .

(ಚಿತ್ರ ಸೆಲೆ: theepochtimes.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sachin.H.J Jayanna says:

    ಸತ್ಯವಾದ ಮಾತು. ??. ಬಹಳ ಹಿಡಿಸಿತು

ಅನಿಸಿಕೆ ಬರೆಯಿರಿ:

Enable Notifications OK No thanks