ಬರೀ ಬಿಸಿಲಿನಿಂದ ಹಾರಲಿರುವ ಬಾನೋಡ

ಜಯತೀರ‍್ತ ನಾಡಗವ್ಡ.

solar_impulse

ಇಂದಿನ ದಿನಗಳಲ್ಲಿ ನೇಸರ ಕಸುವಿನ (Solar power) ಹಲವಾರು ವಸ್ತುಗಳನ್ನು ನಾವು ಬಳಸುತ್ತಿದ್ದೇವೆ. ಅಳಿದು ಹೋಗದ ನೇಸರನ ಕಸುವು ನಮಗೆ ಸಾಕಶ್ಟು ನೆರವಿಗೆ ಬರುತ್ತಿದೆ. ಇದೀಗ ನೇಸರ ಕಸುವಿನ ಬಾನೋಡವೂ ಕೂಡ ಬರಲಿದೆ! ಆಗಸದಿ ಸಾಗುವ ಬಾನೋಡಗಳಿಗೂ ನೇಸರನ ಕಸುವು ನೆರವಿಗೆ ಬರಬಲ್ಲುದು ಎಂದರೆ ಬೆರಗುಗೊಳ್ಳುವ ವಿಶಯವೇ ಸರಿ.

ಸ್ವಿಜರ‍್ಲ್ಯಾಂಡ್ ನಾಡಿನ ಕೆಲವು ಅರಕೆಗಾರರು ಮತ್ತು ಬಿಣಿಗೆಯರಿಗರು ಸೇರಿ ಸೋಲಾರ್ ಇಂಪಲ್ಸ್ (Solar Impulse) ಹೆಸರಿನ ನೇಸರ ಕಸುವಿನ ಬಾನೋಡದ ಮಾದರಿವೊಂದನ್ನು ಈ ಹಿಂದೆ ಅಣಿಗೊಳಿಸಿದ್ದರು. ಇದೀಗ ಸೋಲಾರ್ ಇಂಪಲ್ಸ್-2 ಹೆಸರಿನ ಬಾನೋಡ ತಯಾರಿಸಿ ಇದನ್ನು ಜಗತ್ತಿನ ಸುತ್ತಾಟಕ್ಕೆ ಕಳಿಸಿಕೊಡುವ ತರಾತುರಿಯಲ್ಲಿದ್ದಾರೆ.

ಇದೇ ಜನವರಿ ಮೊದಲ ವಾರ ಸೋಲಾರ್ ಇಂಪಲ್ಸ್-2 (Solar Impulse-2) ಬಾನೋಡವನ್ನು ಅಬುದಾಬಿಯತ್ತ ಸಾಗಿಸಲಾಗಿದೆ. ಇದೇ ಮಾರ‍್ಚ್ ನಲ್ಲಿ ಅಬುದಾಬಿಯಿಂದ ತನ್ನ ಪಯಣ ಶುರು ಮಾಡಲಿರುವ ಈ ಬಾನೋಡ ಜುಲಾಯ್ ವರೆಗೆ 5 ತಿಂಗಳು ಜಗತ್ತನ್ನೆಲ್ಲ ಸುತ್ತಿ ಮತ್ತೆ ಅಬುದಾಬಿಯನ್ನು ತಲುಪಲಿದೆ. ಈ ಅಯ್ದು ತಿಂಗಳ ಹೊತ್ತು ಸೋಲಾರ ಇಂಪಲ್ಸ್ -2 ಹಗಲು, ರಾತ್ರಿ 24 ಗಂಟೆಗಳಲ್ಲೂ ಕೇವಲ ನೇಸರನ ಬಲದಿಂದ ಹಾರಾಡಲಿದೆ.ಬೆಳಿಗ್ಗೆ ನೇಸರನ ಕಸುವನ್ನು ಲಿತಿಯಂ ಅಯಾನ್ ಮಿಂಗೂಡಿನಲ್ಲಿ (Battery) ಕೂಡಿಟ್ಟು ರಾತ್ರಿ ಇದೇ ಕಸುವಿನ ಹೆಚ್ಚಿನ ಬಳಕೆ ಮಾಡಿಕೊಂಡು ಬಾನೋಡ ಹಾರಲು ನೆರವಾಗುವಂತೆ ಇದನ್ನು ಸಿದ್ದಗೊಳಿಸಲಾಗಿದೆ.

SI3

ಈ ಮೊದಲು ಇದೇ ಬಾನೋಡದ ಮಾದರಿಯೊಂದನ್ನು 2009 ರಲ್ಲಿ ಹಾರಾಟಗೊಳಿಸಲಾಗಿತ್ತು. ಇದು ಯುರೋಪ್ ಕಂಡದ ಹಲವೆಡೆ ಹಾರಾಡಿ,ಮೊರ‍್ಯಾಕ್ಕೊವರೆಗೂ ಸತತ 26 ಗಂಟೆ ಪಯಣ ಮಾಡುವಲ್ಲಿ ಸೋಲಾರ್ ಇಂಪಲ್ಸ್ ಗೆಲುವು ಕಂಡಿತ್ತು. ಇದರ ಗೆಲುವಿನ ಬೆನ್ನಲ್ಲೇ ಇದೀಗ ಸೋಲಾರ್ ಇಂಪಲ್ಸ್-2 ಹಾರಾಟ ಎಲ್ಲರ ಗಮನ ತನ್ನತ್ತ ಸೆಳೆದಿದೆ.

ಸೋಲಾರ್ ಇಂಪಲ್ಸ್ ಹಮ್ಮುಗೆ ಸ್ವಿಸ್ ನಾಡಿನ ಬೆರ‍್ಟ್ರಾಂಡ್ ಪಿಕಾರ‍್ಡ್ (Bertrand Piccard) ಮತ್ತು ಅಂಡ್ರೆ ಬಾರ‍್ಶ್ಬರ‍್ಗ್ (Andre Borschberg) ಇವರ ಕನಸಿನ ಕೂಸು. ಪಿಕಾರ‍್ಡ್ ಈ ಹಿಂದೆ 1999 ರಲ್ಲಿ ಪ್ಯಾರಶೂಟ್ ಬಲೂನ್ ಮೂಲಕ ಜಗತ್ತನ್ನೇ ಸುತ್ತಿ ದಾಕಲೆ ಮಾಡಿದ ಸಾಹಸಿ. ಇವರ ತಂದೆ,ಅಜ್ಜ ಕೂಡ ಇಂತ ಸಾಹಸ ಕೆಲಸದಲ್ಲಿ ತೊಡಗಿದ್ದರಂತೆ. ಅದಕ್ಕೆ ಇರಬಹುದು ಇಂತಹವೊಂದು ಬಾನೋಡದ ಕೆಲಸಕ್ಕೆ ಪಿಕಾರ‍್ಡ್ ಕಯ್ ಹಾಕಿದ್ದಾರೆ. ಇನ್ನೂ ಅಂಡ್ರೆ, ಸ್ವಿಸ್ ಎರ‍್ಪೋರ‍್ಸ್ ನಲ್ಲಿ ಬಾನಾಡಿಗರಾಗಿ ಕೆಲಸ ಮಾಡುತ್ತಿದ್ದರು, ಕಾದಾಟದ ಬಾನೋಡ, ಹೆಲಿಕಾಪ್ಟರ್ ಓಡಿಸಿದ ಸಾಕಶ್ಟು ಅನುಬವ ಅಂಡ್ರೆ ಅವರಿಗಿದೆ. 2009 ಕ್ಕಿಂತಲೂ ಮುಂಚಿನಿಂದಲೇ ಇವರಿಬ್ಬರು ಒಟ್ಟಾಗಿ ಈ ಹಮ್ಮುಗೆಗಾಗಿ ಕೆಲಸ ಕಯ್ಗೊಂಡಿದ್ದಾರೆ.

ಗಲ್ಪ್ ಕೊಲ್ಲಿ ನಾಡುಗಳಿಂದ ತನ್ನ ಪಯಣ ಆರಂಬಿಸುವ ನೇಸರನ ಬಾನೋಡ ಅರಬ್ಬೀ ಕಡಲದ ಮೂಲಕ ಬಾರತ, ಮಯನ್ಮಾರ್, ಚೀನಾ ದಾಟಿ ಪೆಸಿಪಿಕ್ ಸಾಗರ ಹಾದು ಅಮೇರಿಕಾದತ್ತ ಸಾಗಿ ಅಟ್ಲಾಂಟಿಕ್ ಕಡಲದಿಂದ ತೆಂಕಣ ಯುರೋಪ್, ಬಡಗಣ ಆಪ್ರಿಕಾ ಹಾದು ಮತ್ತೆ ಅಬುದಾಬಿಗೆ ಬಂದಿಳಿಯಲಿದೆ. ಕೊಲ್ಲಿ ನಾಡುಗಳಲ್ಲಿ ವಾತಾವರಣ ಹದವಾಗಿದ್ದು ಮಾರ‍್ಚ್ ನಲ್ಲಿ ಬಾನೋಡ ಹಾರಾಟಕ್ಕೆ ಅಬುದಾಬಿ ತಕ್ಕುದಾಗಿದೆಯೆಂದು ಈ ತಾಣವನ್ನು ಆಯ್ದುಕೊಳ್ಳಲಾಗಿದೆ.

SI1

ಬಾನೋಡದ ಮಾಡುಗೆ ಮತ್ತು ಅದರ ವಿಶೇಶತೆಗಳತ್ತ ಒಂದು ನೋಟ ಬೀರಿದಾಗ, ಇದನ್ನು ಪೂರ‍್ತಿ ಕಾರ‍್ಬನ್ ನೂಲಿನಿಂದ ಮಾಡಲಾಗಿದ್ದು. ಏರ‍್ಬಸ್ -380 (AirBus-380) ರಶ್ಟು ದೊಡ್ಡದಾದ ರೆಕ್ಕೆಗಳು ಈ ನೇಸರನ ಬಾನೋಡ ಹೊಂದಿರಲಿದೆ. ಸುಮಾರು 2.3 ಟನ್ ತೂಕದ ಬಾನೋಡಕ್ಕೆ , 17.5 ಕುದುರೆಬಲದ ಎರಡು ಮಿಂಚಿನ ಓಡುಗೆಗಳನ್ನು ಅಳವಡಿಸಲಾಗಿದೆ. ಒಟ್ಟು 17, 248 ನೇಸರನ ಗೂಡುಗಳನ್ನು ಹೊಂದಿರುವ ಈ ಬಾನಹಕ್ಕಿಗೆ 234 ಪೀಟ್ (ಸುಮಾರು 72 ಮೀಟರ‍್) ಉದ್ದದ ರೆಕ್ಕೆಗಳನ್ನು ಜೋಡಿಸಲಾಗಿದೆ.

SI2

ಬಾನೋಡದ ಪ್ರಮುಕ ವಿಶೇಶತೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

  • ತೂಕ : 2.3 ಟನ್
  • ಮಿಂಚಿನ ಓಡುಗೆ ಬಲ : 2 * 17.5 hp
  • ರೆಕ್ಕೆಯ ಉದ್ದ : 72 ಮೀಟರ್
  • ಒಟ್ಟು ನೇಸರನ ಗೂಡುಗಳ ಸಂಕ್ಯೆ : 17248 (ಲಿತಿಯಂ ಆಯಾನ್)
  • ನೇಸರನ ಗೂಡುಗಳ ದಪ್ಪ : 35 ಮಿಕ್ರಾನ್ಸ್
  • ಜಗತ್ತು ಸುತ್ತುವ ಹಾರಾಟ : ಮಾರ‍್ಚ್ 2015 ರಿಂದ ಜುಲಾಯ್ 2015, ಒಟ್ಟು 35000 ಕಿ.ಮೀಗಳು
  • ಕಾಕ್ಪಿಟ್ ನ ಗಾತ್ರ: 3.8 ಕ್ಯೂಬಿಕ್ ಮೀಟರ‍್ಗಳು , ಒಬ್ಬ ಬಾನಾಡಿಗ ಕೂರಲು ಏರ‍್ಪಾಟು

ಸೋಲಾರ್ ಇಂಪಲ್ಸ್-2 ನ ಹಾರಾಟ ಮುಂಬೊತ್ತಿನ ಬಾನೋಡಗಳ ಉದ್ಯಮದಲ್ಲಿ ಹೊಸ ಉರುವಲು ಬಳಸುವತ್ತ ಹೆಜ್ಜೆಯಾಗಲಿದೆಯೇ ಎಂಬುದನ್ನು ಜಗತ್ತು ಕಾತರದಿಂದ ನೋಡುತ್ತಲಿದೆ. ಈ ಹೊಸ ಅರಕೆಗೆ ನಮ್ಮ ಕಡೆಯಿಂದ ಒಳ್ಳೆಯದಾಗಲಿ ಎಂದು ಹರಸೋಣ.

(ಮಾಹಿತಿ ಮತ್ತು ತಿಟ್ಟ ಸೆಲೆ: solarimpulse.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: