ಹನಿಗತೆಗಳು

ಪ್ರಿಯದರ‍್ಶಿನಿ ಶೆಟ್ಟರ್.

small

1.  ನಿರ‍್ಲಕ್ಶ್ಯ

ನಾವು ಮೂವರು. ನಾನೊಬ್ಬಳು, ನನ್ನ ಅಕ್ಕ ಮತ್ತು ತಂಗಿ.
ಅವರಿಬ್ಬರೂ ನನ್ನ ಸಹಾಯದಿಂದ ಎಲ್ಲರ ಲಕ್ಶ ಸೆಳೆದಿದ್ದರು;
ಮದ್ಯದಲ್ಲಿದ್ದ ನಾನು ನಿರ‍್ಲಕ್ಶ್ಯಕ್ಕೊಳಗಾಗಿದ್ದೆ!!

2.  ದಿಟ

ಬಟ್ಟೆ ನೇಯುವಾತನ ಬಳಿ ಚಳಿಯಿದ್ದಾಗ ಒಂದು ವಸ್ರ್ತ ಬಿಟ್ಟು ಬೇರೇನೂ ಇರಲಿಲ್ಲ.!

3.  ಜಗಳ

ಅಕ್ಕ-ಪಕ್ಕದ ಮನೆಯ ಮಕ್ಕಳಿಬ್ಬರು ಜಗಳವಾಡುತ್ತಿದ್ದರು.
ಅವರ ಜಗಳ ಬಿಡಿಸಲು ಬಂದ ಅವರ ತಾಯಂದಿರು ಮಕ್ಕಳು
ಶುರುಮಾಡಿದ ಜಗಳವನ್ನು ಮುಂದುವರೆಸಿದರು.
‘ಆ’ ಮಗು ‘ಅದರ’ ತಾಯಿಯನ್ನು ಕರೆದುಕೊಂಡು ಹೋಯಿತು!!
‘ಈ’ ಮಗು ‘ಇದರ’ ತಾಯಿಯನ್ನು ಕರೆದುಕೊಂಡು ಹೋಯಿತು !!

4.  ವಾಸ್ತವ

ಅವನೊಬ್ಬ ಬಡ ಸಾಹಿತಿ. ತಾಯಿಯೊಡನೆ ವಾಸಿಸುತ್ತಿದ್ದ.
ಅವನ ಪುಸ್ತಕಗಳು ಅವನಿಗೆ ಬಹುಮಾನ, ಪುರಸ್ಕಾರಗಳನ್ನು
ತಂದುಕೊಟ್ಟವು.ಓದುಗರು ಮೆಚ್ಚಿಗೆ ಸೂಚಿಸಿ ಪತ್ರಗಳನ್ನೂ ಬರೆದರು.
ಆತ ತನ್ನ ತಾಯಿಗೆ ತಾನು ಬರೆದ ಲೇಕನಗಳನ್ನು ಓದಿ
ತೋರಿಸಿದ. ಪಾಪ….ಅನಕ್ಶರಸ್ತ ತಾಯಿಗೆ ಅರ‍್ತವಾಗಲೂ ಇಲ್ಲ..
ಆಕೆ ಮೆಚ್ಚಿಗೆ ಸೂಚಿಸಲೂ ಇಲ್ಲ….

5.  ಚಪ್ಪಲಿ

ಗಂಡ: “ನಿನಗೆ ನನ್ನ ಅಕ್ಕನ ಬಳಿಯಿರುವಂತಹ ಚಪ್ಪಲಿಗಳನ್ನು
ತಂದಿದ್ದೇನೆ, ಹಾಕಿಕೊ. ಅವಳ ಮನೆಗೆ ಹೋಗಿ ಬರೋಣ.”
ಹೆಂಡತಿ: “ನಾವು ವಾಪಸ್ಸಾಗುವಾಗ ಕುಂಕುಮ ಕೊಡುವ ನೆಪ ಹೇಳಿ
ನಿನ್ನಕ್ಕ ತನ್ನ ರ‍್ಯಾಕ್‍ನಲ್ಲಿದ್ದ ತನ್ನ ಚಪ್ಪಲಿ ನೋಡಿಕೊಂಡಳು…”

6. ಕತೆ

‘ಕಾಗಕ್ಕ-ಗುಬ್ಬಕ್ಕ’ನ ಕತೆ ಹೇಳುವಂತೆ ಮಗು ತಾಯಿಯನ್ನು ಪೀಡಿಸುತ್ತಿತ್ತು
ಕ್ಶಣಾರ‍್ದದಲ್ಲಿ ಗುಬ್ಬಚ್ಚಿಯೊಂದು ಹಾರಿ ಬಂದಾಗ ಮಗು ಹೆದರಿ ಅಳುತ್ತಿತ್ತು !!!

7.  ಚಿಹ್ನೆ

ಸಾಮಾನ್ಯ ಕತೆಗಳಲ್ಲಿ ‘….’ , “…….!” ಗಳಿಗೆ ಇರುವುದಕ್ಕಿಂತ ಹೆಚ್ಚು ಅರ‍್ತ ಹನಿಗತೆಗಳಲ್ಲಿದೆ !!

8.  ನಕಲು-1

ಅಂದು ಶಿಕ್ಶಕರು ತರಗತಿಯಲ್ಲಿ ಸ್ರುಜನಶೀಲತೆ’ಯ ಬಗ್ಗೆ ಪಾಟ ಮಾಡುತ್ತಿದ್ದರು.
‘ಸ್ರುಜನಾತ್ಮಕ’ ಚಿಂತನೆಯ ಬಗ್ಗೆ ತಿಳಿ ಹೇಳುವ ಶಿಕ್ಶಕರು ಅಂತರ‍್-ಜಾಲದಿಂದ ಮಾಹಿತಿ ಪಡೆದಿದ್ದರು!

9.  ಬಿಡುಗಡೆ

ದೊಡ್ಡ ಕಳ್ಳನೊಬ್ಬ ಬಿಡುಗಡೆಯಾಗಿದ್ದ .ಮೊದಲು ದೇವಸ್ತಾನಕ್ಕೆ
ಹೋದ. ಅಲ್ಲಿಯ ಕಾಣಿಕೆ-ಪೆಟ್ಟಿಗೆ ಕಳುವಾಗಿತ್ತು. ಈತ ಮತ್ತೆ ಜೈಲು ಸೇರಿದ್ದ!

10.  ತಯಾರಿ

‘ ಈ ಪ್ಯಾಂಟ್ಗೆ ಈ ಟಾಪ್ ಮ್ಯಾಚ್ ಆಗಬಹುದು…ಜೊತೆಗೆ
ಮೇಲೊಂದು ಜಾಕೆಟ್…. ಚಿಕ್ಕದೊಂದು ಚೈನ್… ಜೊತೆಗೊಂದು
ಪುಟ್ಟ ಉಂಗುರ… ಕಂಡರೂ ಕಾಣದಂತಹ ಬಿಂದಿ… ಈ ಕ್ರೀಮ್…
ಆ ಪೌಡರ್… ಯಾವ ಕ್ಲಿಪ್? ಇದೋ ಅದೋ?’
ನಾನು ತಯಾರಾಗುತ್ತಲೇ ಇದ್ದೆ… ಹಾರ‍್ನ್ ಕೇಳಿಸುವವರೆಗೂ!

11.  ನಕಲು-2

ಅದೊಂದು ಪ್ರಬಂದ ಸ್ಪರ‍್ದೆ.
ವಿಶಯ: ‘ಪರಿಸರ ಮಾಲಿನ್ಯ ತಡೆಯುವ ವಿದಾನಗಳು’
ಸ್ಪರ‍್ದೆಯಲ್ಲಿ ಸುಮಾರು 15 ವಿದ್ಯಾರ‍್ತಿಗಳು ಬಾಗವಹಿಸಿದ್ದರು.
ಎಲ್ಲರದೂ ಅಕ್ಶರಶಹ ಒಂದೇ ಶೈಲಿ; ಅವರೆಲ್ಲರೂ ಒಂದೇ ಪ್ರಬಂದವನ್ನು
‘ಗೂಗಲ್’ನಿಂದ ಡೌನ್‍ಲೋಡ್ ಮಾಡಿದ್ದರು!!

12.  ಚಿಂತೆ

ಮುದಿಸೊಳ್ಳೆ ಮೊಮ್ಮಕ್ಕಳಿಗೆ: ” ನಮ್ಮ ಕಾಲದಲ್ಲಿ ಹೆಂಗಸರ ರಕ್ತ
ಹೀರುವುದು ಬಹಳ ಕಶ್ಟವಾಗಿತ್ತು; ಕಾರಣ ಅವರು ಮೈತುಂಬ ಬಟ್ಟೆ
ದರಿಸುತ್ತಿದ್ದರು. ನಿಮಗೆ ಆ ಚಿಂತೆಯೇ ಇಲ್ಲ !!”

13. ತಂಗಳು

ಬಿಸಿ ಅನ್ನ ‘ಸ್ವಲ್ಪ ಜಾಸ್ತಿಯೇ ಇತ್ತು. ಹೊರಗೆ ಬಿಕ್ಶುಕನ ದನಿ ಕೇಳಿದಾಗ
ಹೆಚ್ಚಾದದ್ದನ್ನು ಕೊಡುವ ಮನಸ್ಸಾಗಲಿಲ್ಲ….
ಮರುದಿನ ಅದೇ ಅನ್ನ ತಂಗಳಾಯಿತು. ಮನೆಯ ಹೊರ ಹೋಗಿ
ನೋಡಿದರೆ, ಬಿಕ್ಶುಕನೂ ಇರಲಿಲ್ಲ….ನಾಯಿಗಳೂ ಇರಲಿಲ್ಲ…..

14.  ಕಾವ್ಯ

ಓದಿದ ತಕ್ಶಣ ಅರ‍್ತವಾದರೆ ಅದು: ಶಿಶುಗೀತೆ. ಸ್ವಲ್ಪ ಹೊತ್ತಿನ ನಂತರ
ಅರ‍್ತವಾದರೆ ಅದೊಂದು ಕವಿತೆ. ಓದಿ, ಕಶ್ಟಪಟ್ಟು ಅರ‍್ತೈಸಿಕೊಂಡರೆ
ಅದೇ ಮಹಾಕಾವ್ಯ. ಓದಿ ಮುಗಿದ ಮೇಲೆ ಅರ‍್ತಹೋಗಿ, ಅನರ‍್ತವಾಗುವುದು
‘ಆದುನಿಕ ಸಿನಿಮಾ ಸಾಹಿತ್ಯ’ !!!

15.  ಮೌನ

ರಾತ್ರಿ ವೇಳೆ ಮನೆಯನ್ನು ಮೌನ ಆವರಿಸಿತ್ತು. ಎಲ್ಲೆಡೆಯೂ ನಿಶ್ಯಬ್ದ.
ಆ ಮೌನವನ್ನು ಸೀಳಿದ ಗಡಿಯಾರದ ಮುಳ್ಳಿನ ಶಬ್ದ ಮತ್ತು ಮಗುವಿನ
ಕಾಲ್ಗೆಜ್ಜೆಯ ನಾದ ರಾತ್ರಿಯಿಡೀ ಸಂಬಾಶಣೆ ನಡಿಸಿದಂತಿತ್ತು…..

16.  ಸಬಾಕಂಪನ 

ಅದೊಂದು ಕಾರ‍್ಯಕ್ರಮ. ಕಾರ‍್ಯಕ್ರಮದ ವೇದಿಕೆ. ವೇದಿಕೆಯ
ಮೇಲೊಬ್ಬಳು ಗಾಯಕಿ, ಪ್ರಸಿದ್ದ ಗಾಯಕಿ. ಅವತ್ತೇಕೋ ಅವಳ ಗಾಯನ
ಅಪಶ್ರುತಿ, ಅಪಸ್ವರದಿಂದ ಕೂಡಿತ್ತು. ನೆರೆದ ಪ್ರೇಕ್ಶಕರ ಸಂಕ್ಯೆ ಆಕೆಯ
ಗಾಯನದ ಮೇಲೆ ಪ್ರಬಾವ ಬೀರಿತ್ತು !

17.  ಆಲಸ್ಯ

ಅಜ್ಜಿ: “ಊಟದ ಹೊತ್ತಾಯಿತು. ಬೇಗ ಚಟ್ನಿ ರುಬ್ಬಬೇಕು.”
ಮೊಮ್ಮಗಳು: “ಕರೆಂಟ್ ಇಲ್ಲ; ಬಂದ ಮೇಲೆ ಗ್ರೈಂಡ್ ಮಾಡುತ್ತೇನೆ.”
ಅಜ್ಜಿ ಅವಳ ಉತ್ತರವನ್ನು ಪೂರ‍್ತಿಯಾಗಿ ಕೇಳುವ ಮೊದಲೇ ರುಬ್ಬುಗುಂಡಿನಲ್ಲಿ ಚಟ್ನಿ ರುಬ್ಬುತ್ತಿದ್ದಳು…

18. ಅಬ್ಯಂಜನ

ಆಕೆ ತಲೆಸ್ನಾನ ಮುಗಿಸಿ ಬಿಸಿಲಲ್ಲಿ ಕೂದಲು ಒಣಗಿಸಿಕೊಳ್ಳಲು
ಕುಳಿತಳು. ಕುಳಿತಲ್ಲೇ ನಿದ್ದೆ ಹೋದಳು. ಎಳೆಬಿಸಿಲು ಬಿರುಬಿಸಿಲಾಗಿತ್ತು…
ಒಣಗಿದ್ದ ಕೂದಲು ಬೆವರಿನಿಂದ ಮತ್ತೆ ಹಸಿಯಾಗಿತ್ತು!

19.  ಕುತೂಹಲ

ಹಿತವಾದ ಗಾಳಿ ಬೀಸುತ್ತಿತ್ತು. ಮಹಡಿ ಮೇಲಿನ ಕೋಣೆ.
ಕೋಣೆಯಲ್ಲಿಯ ಜೋಕಾಲಿ. ಅದರಲ್ಲಿ ನಾನು ಕತೆ ಪುಸ್ತಕ ಹಿಡಿದು
ಕುಳಿತಿದ್ದೆ. ಅದು ಒಳ್ಳೆಯ ಕತೆಯೇ. ಪ್ರಾರಂಬದಿಂದಲೂ
ಕುತೂಹಲಕಾರಿಯಾಗಿಯೇ ಇತ್ತು. ಕತೆಯ ಅಂತ್ಯದ ಬಗ್ಗೆ ಮತ್ತಶ್ಟು
ಕುತೂಹಲ. ಓದು ಮುಂದುವರೆದಿತ್ತು. ತೂಕಡಿಕೆ ಶುರುವಾಗಿ ಕತೆ
ಮಕಾಡೆ ಮಲಗಿತ್ತು….

20.  ಬಡಗಿ

ಅವನೊಬ್ಬ ಬಡಗಿ. ಹಲವಾರು ರತಗಳನ್ನು, ಮನೆಯ ಕಿಟಕಿ-
ಬಾಗಿಲುಗಳನ್ನು ತಯಾರಿಸಿದ್ದಾನೆ. ಆತ ಕಳೆದ ನಾಲ್ಕು ವರ‍್ಶಗಳಿಂದ
ಬಾಗಿಲೇ ಇಲ್ಲದ ಮನೆಯಲ್ಲಿ ವಾಸವಾಗಿದ್ದಾನೆ….

21.  ಚಿತ್ರಕಲೆ

ಪ್ರಸಿದ್ದ ಚಿತ್ರಕಾರನೊಬ್ಬ ಮಾಡುತ್ತಿದ್ದುದು ಇಶ್ಟೇ: ಚಿಕ್ಕಂದಿನಲ್ಲಿ
ಆತ ಪೇಪರಿನ ಮೇಲೆ ಬಣ್ಣದ ಸೀಸಗಳಿಂದ ಗೀಚಾಡುತ್ತಿದ್ದುದ್ದನ್ನು ಈಗ
ಕ್ಯಾನ್‍ವಾಸಿನ ಮೇಲೆ ಆಯಿಲ್ ಪೇಂಟ್ ಬಳಸಿ ಅವೇ ಚಿತ್ರಗಳನ್ನು ಪುನಹ ರಚಿಸುತ್ತಿದ್ದಾನೆ!!

22.  ಬರ-ಪ್ರವಾಹ

ಸಮುದ್ರ ತೀರದ ಆ ಊರಿನಲ್ಲಿ ವಿಪರೀತ ಬರಗಾಲ. ಆ ಊರಿನ ಜನ
ಸಮುದ್ರದ ನೀರು ಆವಿಯಾಗಿ, ಮೋಡವಾಗಿ, ಹನಿಯಾಗಿ, ಮಳೆಯಾಗಿ,
ತಮ್ಮ ನೆಲ ಹಸಿಯಾಗಲೆಂದು ಕಾಯುತ್ತಿದ್ದರು. ಮರುದಿನವೇ ಆ ಪ್ರದೇಶದ
ಜನರ ಮನೆಯ ಒಳಬಾಗಗಳೂ ಹಸಿಯಾಗಿದ್ದವು, ಮಳೆಯಿಂದಲ್ಲ; ಬದಲಿಗೆ
ಪ್ರವಾಹದಿಂದಾಗಿ…..

23.  ಪ್ರಶ್ನೋತ್ತರ

ಪ್ರಶ್ನೆ: “ತಲೆ ಕೂದಲು ಆರಂಬದಿಂದ ಬೆಳೆಯುವುದೋ? ಅಂತ್ಯದಿಂದಲೋ?
ಉತ್ತರ: ‘ಆರಂಬದಿಂದ’ -ಆದರೆ ಅಂತ್ಯದಲ್ಲೇಕೆ ಕವಲೊಡೆಯುತ್ತದೆ?
‘ಇಲ್ಲ, ಅಂತ್ಯದಿಂದ’ -ಆದರೆ ಆರಂಬದಿಂದೇಕೆ ಬೆಳ್ಳಗಾಗುತ್ತದೆ?’
“ಇಲ್ಲ, ಅದೂ ಅಲ್ಲ” -ಪ್ರಶ್ನೆ ಹಾಗೆಯೇ ಉಳಿಯಿತು….

24.  ನೆರೆ-ಹೊರೆ

ಈತ: “ಕಳೆದ ರಾತ್ರಿ ನಮ್ಮ ಮನೆಯಲ್ಲಿ ಎರಡನೇ ಬಾರಿ ಕಳ್ಳತನವಾಯಿತು.”
ಆತ: ” ಹೌದೇ? ಹಾಗಾದರೆ ಮೊದಲನೇ ಬಾರಿ ಯಾವಾಗ ಕಳ್ಳತನವಾಗಿತ್ತು?!”

25.  ಜಾಹೀರಾತು

ಮಳೆನಾಡ ಸೆರಗಲ್ಲಿ, ಬೆಟ್ಟಕ್ಕೆ ಅಂಟಿಕೊಂಡು, ಒಂದರ ಪಕ್ಕಕ್ಕೆ ಇನ್ನೊಂದು
ಹೊಂದಿಕೊಂಡು ನಿಂತ ಮಣ್ಣಿನ ಗೋಡೆಗಳು ತಮ್ಮ ಮೇಲೆ ಕೆಂಪು, ನೀಲಿ
ಬಣ್ಣದಲ್ಲಿ ಬಿಳಿಯ ಅಕ್ಶರದಿಂದ ‘ಏರ್‍ಟೆಲ್’, ‘ವೊಡಾಪೋನ್’ ಎಂದು
ಬರೆಸಿಕೊಂಡು ಕಳೆಗುಂದಿವೆ….

26.  ನಾಯಿಮರಿ

ಸಂಜೆ ಕಾಲೇಜಿನಿಂದ ಮನೆಗೆ ನಡೆದು ಬರುವಾಗ ಪುಟ್ಟ ನಾಯಿಮರಿಯೊಂದು
ನನ್ನ ಕಾಲ ಬಳಿಯೇ ಬಂದಿತು. ಅದನ್ನು ತಪ್ಪಿಸಲೆಂದು ಸರಸರನೇ ಹೆಜ್ಜೆ ಹಾಕಿದೆ.
ಮನೆಗೆ ಬಂದು ಗೇಟು ಹಾಕಿ ಒಂದು ಕ್ಶಣ ಆ ನಾಯಿಮರಿ ಬರದೇ ಇರುವುದನ್ನು
ನೋಡಲು ಹಿಂತಿರುಗಿದೆ. ಗೇಟಿನ ಸಂದಿಯಲ್ಲಿ ಹಾದು ನಾಯಿಮರಿ ಒಳಬಂದು
ನನ್ನನ್ನು ನೋಡುತ್ತ ನಿಂತಿತು!!

27.  ಬೇಲಿ 

ಅದೊಂದು ಸುಂದರ ಹೂದೋಟ. ವಿದವಿದದ ಹೂಗಳು ಅಲ್ಲಿದ್ದವು. ಸುತ್ತಲೂ
ಮುಳ್ಳಿನ ಬೇಲಿಯ ಕಾವಲು. ಹೂವುಗಳಿಗೆ ಅಸಮಾದಾನ: “ಈ ಮುಳ್ಳಿನ ಬೇಲಿ
ಅಡ್ಡ ನಿಂತು, ದಾರಿಹೋಕರು ನಮ್ಮನ್ನು ನೋಡಿ ಹೊಗಳದಂತೆ ಮಾಡಿವೆ.” ಕೆಲವೇ
ದಿನಗಳಲ್ಲಿ ಆ ಬೇಲಿಯನ್ನು ಮಕ್ಕಳು ಮುರಿದು ಹಾಳು ಮಾಡಿದರು. ದಾರಿಹೋಕರು
ಬಂದು ಹೂಗಳನ್ನು ಎಳೆದು, ತುಳಿದು, ಕತ್ತರಿಸಿಕೊಂಡು ಹೋದರು. ಈಗ
ನರಳುತ್ತಿರುವ ಹೂಗಳಿಗೆ ಮುಳ್ಳಿನ ಬೆಲೆ ಅರ‍್ತವಾಗತೊಡಗಿದೆ….

28.  ಬಲೆ

ನಿನ್ನೆ ರಾತ್ರಿ ಮನೆ ಮುಂದಿನ ವಿದ್ಯುತ್ ಕಂಬದ ಬೆಳಕಿನ ಕೆಳಗೆ
ಜೇಡವೊಂದು ಬಲೆ ಹೆಣೆಯುತ್ತಿತ್ತು; ದೊಡ್ಡ ಬಲೆ. ಸುಮಾರು ಹೊತ್ತು ಅದನ್ನೇ
ದಿಟ್ಟಿಸಿ ನೋಡಿದೆ. ಅದರ ವೇಗ, ಅತಿಸೂಕ್ಶ್ಮ ಎಳೆಗಳೊಂದಿಗೆ ಪೂರ‍್ಣವಾಗುತ್ತಿರುವ
ಬಲೆ, ಆಗಾಗ ಬಲೆಯೊಳಗೆ ಬೀಳುತ್ತಿರುವ ಕೀಟಗಳು, ಕೀಟಗಳತ್ತ ಒಂದು
ಕಣ್ಣಿಟ್ಟಿರುವಂತೆ ಅವು ಬಲೆಗೆ ಬೀಳುವುದೇ ತಡ, ಅತ್ತ ಹೋಗಿ ಕಬಳಿಸುವ ಜೇಡದ
ಚುರುಕುತನ- ಹೀಗೆ ಎಲ್ಲವೂ ಸೋಜಿಗಗೊಳಿಸುವ ಸಂಗತಿಗಳೇ. ಈ
ಸನ್ನಿವೇಶಗಳನ್ನು ಕ್ಲಿಕ್ಕಿಸಿದ್ದೂ ಆಯಿತು.

ಇಂದು ಬೆಳಿಗ್ಗೆ ಗಿಡಗಳಿಗೆ ನೀರು ಹಾಕುವಾಗ ಅದೇ ಬಲೆ, ಸಾಮಾನ್ಯವಾಗಿ
ಮನೆಯ ಮೂಲೆಯಲ್ಲಿ ಬಲೆ ಹೆಣೆದು ಕೋಣೆಯ ಅಂದವನ್ನು ಹಾಳುಗೆಡಿಸುವ
ತರಹದ್ದೇ ಬಲೆ ಎಂದು ಅದನ್ನು ಕಟ್ಟಿಗೆಯಿಂದ ಹಾಳುಮಾಡುವಾಗ ಹಿಂದಿನ ರಾತ್ರಿ
ಆ ಸನ್ನಿವೇಶ ಕಂಡು ಸೋಜಿಗ ಹೊಂದಿದ್ದು, ಆ ಸಾಮಾನ್ಯ ದ್ರುಶ್ಯವನ್ನು ಸೆರೆ
ಹಿಡಿದಿದ್ದು ಅಲ್ಲವೂ ಮರೆತು ಹೋಗಿತ್ತು !!

 

( ಚಿತ್ರ ಸೆಲೆ: ecosalon.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: