ಸಣ್ಣ ಕತೆ : “ನಿಶ್ಚಿತ ಪಲ”

–  .

ಬದುಕು, life

“ಅಲ್ಲಾರಿ…. ನೀವು ಎರೆಡೆರೆಡು ಡಿಗ್ರಿ ತಗೊಂಡು, ಸುಮ್ಮನೆ ಗಡ್ಡ ಬಿಟ್ಕೊಂಡು ಹೆಗಲಿಗೆ ಜೋಳಿಗೆ ಹಾಕ್ಕೊಂಡು ಜೇಬಲ್ಲಿ ಮಸಿ ಪೆನ್ನಿಟ್ಕೊಂಡು ತೋಚಿದಾಗೆಲ್ಲ ಅದೇನೆನೋ ಗೀಚಿ ಗೀಚಿ ಇಟ್ಕೊತೀರಿ. ಬರೆದದ್ದು ಊಟಕ್ಕೂ ಬರಲಿಲ್ಲ. ಉಪ್ಪಿನ ಕಾಯಿನೂ ಆಗ್ಲಿಲ್ಲ…!” ಎಂದು ಹೆಂಡತಿ ನಾನ್ ಸ್ಟಾಪ್ ಮಾತಾಡುತಿದ್ದರೆ ಗಂಡನಾದ ಕರುಣಾಕರ,

“ಲೇ ನೋಡೆ ನಾ ಬರೆದ ಬರಹಗಳೆಲ್ಲ ಒಂದಲ್ಲ ಒಂದು ದಿನ ಜನಪ್ರಿಯವಾಗಿ, ಪ್ರಕಾಶಕರು ಮುಗಿ ಬಿದ್ದು ನನ್ನ ಬರಹಗಳನ್ನ ಅಚ್ಚು ಹಾಕಿಸ್ತಾರೆ. ಬಿಸಿ ಬಿಸಿ ಮಸಾಲೆ ದೋಸೆಯಂತೆ ನನ್ನ ಪುಸ್ತಕಗಳು ಮಾರಾಟವಾಗುತ್ತವೆ! ನನ್ನ ಎಶ್ಟೋ ಕತೆಗಳು ಮುಂದೆ ಸಿನೆಮಾವಾಗಿ ಜನರ ಮನ ತಟ್ಟುತ್ತವೆ ನೋಡ್ತಾ ಇರು” ಅಂತ ಕರುಣಾಕರ ಕಾಲರ‍್ ಮೇಲೆ ಮಾಡಿದ್ರೆ, ಪತ್ನಿ ಪ್ರಮೀಳಾ,

“ಅಯ್ಯೋ ಸಾಕು ಸುಮ್ಮನಿರಪ್ಪ. ಮೂರು ಹೊತ್ತು ಊಟಕ್ಕೆ ತತ್ವಾರ! ನಾನು ಟೈಲರಿಂಗ್ ಮಾಡ್ದೆ ಇದ್ದಿದ್ರೆ, ನಿತ್ಯ ಅನ್ನ ಹೇಗೆ ಕಾಣ್ತಿದ್ರಿ?” ಎಂದು ವ್ಯಂಗ್ಯವಾಡಿದ್ರೆ, ಗಂಡ ಕರುಣಾಕರ,

“ಆಡ್ಕೊಳೆ… ಆಡ್ಕೊ….! ನನ್ನ ಇನ್ನೂ ಆಡ್ಕೊ…! ಒಂದಲ್ಲ ಒಂದಿನ ನಾನು ಬರೆದದ್ದೆಲ್ಲ ಪುಸ್ತಕವಾಗಿ ಮುದ್ರಣಗೊಂಡು, ಕೆಲವೊಂದು ಕತೆ ಸಿನೆಮಾ ಆಗಿ ಲಕ್ಶ ಲಕ್ಶ ಹಣ ಎಣಿಸ್ತೀನಿ ನೋಡ್ತಾ ಇರು!” ಎಂದು ಅಲ್ಲಿಂದ ಎದ್ದು ತನ್ನ ಆಪ್ತ ಸ್ನೇಹಿತರ ಬಳಗ ಸೇರಿದ.

“ಏಯ್ ನಮ್ಮ ಕವಿ ಕ…ರು… ಬರ‍್ತಾ ಇದೆ ಒಂದು ದಂ ಕೊಡ್ರೋ…” ಎಂದು ಗಾಂಜಾ ತುಂಬಿದ ಸಿಗರೇಟನ್ನು ಅವನ ಬಾಯಿಗಿಟ್ಟು ಎರಡು ದಂ ಎಳಿಸಿದರು ಅವನ ಗೆಳೆಯರು! ಅಲ್ಲಿಂದ ಕರುಣಾಕರ ಎದ್ದು ಗಾಂಜಾದ ಮತ್ತಿನಲ್ಲಿ ತೂರಾಡುತ್ತ ಮನೆಗೆ ಹೊರಟವನು ಸೇರಿದ್ದು ಸ್ಮಶಾನ. ಎದುರಿಗೆ ವೇಗವಾಗಿ ಬರುತಿದ್ದ ಬಿ ಎಂ ಡಬ್ಲೂ ಕಾರಿಗೆ ತೂರಾಡುತ್ತ ಅಡ್ಡ ಬಂದ ಕರುಣಾಕರ ಕಾರಿನ ಅಡಿಗೆ ಸಿಕ್ಕು ಹೆಣವಾಗಿದ್ದ.

ಗಂಡ ಸತ್ತು ಮೂರು ತಿಂಗಳು ಕಳೆದಿದೆ. ಪ್ರಮೀಳಾ ಗಂಡನ ಸಾವಿನ ದುಕ್ಕವನ್ನು ಮರೆಯಲು ಪ್ರಯತ್ನಿಸುತಿದ್ದಾಳೆ. ಮನೆಯ ಮುಂದುಗಡೆ ಕಟ್ಟೆಯ ಮೇಲೆ ಕುಳಿತಿರುವಾಗ ಅವಳ ಮನೆಯ ಮುಂದೆ ಕಾರಿನ ಹಾರನ್ ಸದ್ದಾಯ್ತು. “ಇಲ್ಲಿ ಸಾಹಿತಿ ಕರುಣಾಕರ ಅವರ ಮನೆ ಯಾವುದು?” ಎಂದು ವಿಚಾರಿಸುತ್ತಾ ಒಬ್ಬರು ಗೇಟಿನ ಒಳಗೆ ಬಂದರು.

“ನೋಡಿ ಅಮ್ಮ ನಿಮ್ಮ ಪತಿ ನಮ್ಮ ಕಾರಿನ ಅಡಿ ಸಿಕ್ಕು ಸತ್ತಿದ್ದಕ್ಕೆ ನಮಗೆ ವಿಶಾದವಿದೆ. ಅವರು ಸತ್ತಾಗ ಅವರ ಜೊತೆಯಲ್ಲಿದ್ದ ಬ್ಯಾಗಿನಲ್ಲಿ ಹಲವಾರು ಪುಸ್ತಕಗಳು ಸಿಕ್ಕವು. ಅದನ್ನು ನಾವು ನಮ್ಮ ಇತರೆ ಪರಿಣಿತರು ಓದಿ ನೋಡಿದಾಗ ಅವರ ಕತೆಗಳು ಬಹಳ ಉತ್ರುಶ್ಟವಾಗಿರುವುದು ಕಂಡು ಬಂತು. ಹಾಗಾಗಿ ಅವರ ಕತೆಗಳನ್ನು ಪುಸ್ತಕ ಮುದ್ರಣಕ್ಕೂ ಮತ್ತು ಒಂದೆರಡು ಕತೆ ಸಿನಿಮಾ ನಿರ‍್ಮಾಣಕ್ಕೂ ಆಯ್ಕೆ ಮಾಡಿಕೊಂಡೆವು. ಮೊದಲ ಕಂತಿನ ರಾಯಲ್ಟಿ ದುಡ್ಡಾಗಿ ಹತ್ತು ಲಕ್ಶ ಕೊಟ್ಟು ಇದರ ಹಕ್ಕನ್ನು ಪಡೆಯುತ್ತಿದ್ದೇವೆ” ಎಂದಾಗ ಪತ್ನಿ ಪ್ರಮೀಳಾಗೆ ಅಚ್ಚರಿ ಜೊತೆಗೆ ಸಂತೋಶವು ಆಗಿತ್ತು.

“ನನ್ನ ಪತಿಯ ಶ್ರಮಕ್ಕೆ ದೇವರು ಒಳ್ಳೆಯ ಪಲ ಕೊಟ್ಟ, ತಾವು ಹೋದರೂ ನನ್ನ ಬದುಕಿಗೆ ಆಶ್ರಯವಾದರು” ಎಂದು ಪತಿಯ ನೆನೆದು ಪ್ರಮೀಳಾ ಕಣ್ಣೀರು ಹಾಕಿದಳು.

( ಚಿತ್ರಸೆಲೆ : phys.org )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. K.V Shashidhara says:

    ಚೆಂದದ ನ್ಯಾನೋ ಕಥೆ

ಅನಿಸಿಕೆ ಬರೆಯಿರಿ:

%d bloggers like this: