ಅಮೇರಿಕಾದಲ್ಲಿ ಜರ‍್ಮನ್ನರೇ ಹೆಚ್ಚು
– ರತೀಶ ರತ್ನಾಕರ.
ಹೊಟ್ಟೆಪಾಡಿಗಾಗಿ ಇಲ್ಲವೇ ಅವಕಾಶಗಳನ್ನು ಅರಸಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಲಸೆ ಎಂಬುದು ಅಲ್ಲಲ್ಲಿ ಆಗುತ್ತಲೇ ಇದೆ. ಇದು ಇಂದು-ನಿನ್ನೆ ನಡೆಯುತ್ತಿರುವುದಲ್ಲ, ವಲಸೆಯ ಹಳಮೆ ಕಲ್ಲುಯುಗಕ್ಕೂ ಕೊಂಡೊಯ್ಯುವುದು. ಮಾನವನ ಅಲೆಮಾರಿ ಬದುಕಿನ ಕಾಲವು ಮುಗಿದು ನಾಡುಗಳ ಹುಟ್ಟಾದ ಮೇಲು, ಒಂದು ನಾಡಿನಿಂದ ಮತ್ತೊಂದು ನಾಡಿಗೆ ಕೆಲ ಮಂದಿಯ ವಲಸೆಗಳು ಆಗುತ್ತಿವೆ. ವಲಸಿಗರಿಲ್ಲದ ನಾಡನ್ನು ಹೆಕ್ಕಿ ತೆಗೆಯುವುದು ಅಸಾದ್ಯವೆನಿಸುತ್ತದೆ. ಇದಕ್ಕೆ ಜಗತ್ತಿನ ಸಿರಿವಂತ ನಾಡುಗಳ ಗುಂಪಿನಲ್ಲಿರುವ ಅಮೇರಿಕಾವು ಹೊರತಾಗಿಲ್ಲ. ಹೌದು, ಅಮೇರಿಕಾವು ಹೆಚ್ಚು ವಲಸಿಗರನ್ನು ಹೊಂದಿರುವ ನಾಡು ಎಂಬುದು ನಮ್ಮಲ್ಲಿ ಹಲವರಿಗೆ ತಿಳಿದಿರಬಹುದು. ಆದರೆ, ಅಮೇರಿಕಾದಲ್ಲಿರುವ ಹೆಚ್ಚಿನವರು ಜರ‍್ಮನ್ನರು ಎಂದರೆ ಅಚ್ಚರಿಯಾಗಬಹುದಲ್ಲವೇ!?
ಹೌದು, 2013 ರ ಅಮೇರಿಕಾದ ಮಂದಿಯೆಣಿಕೆಯ ಅಂಶಗಳ ಪ್ರಕಾರ ಸುಮಾರು 5 ಕೋಟಿ ಜರ‍್ಮನ್ ವಲಸಿಗರು ಅಮೇರಿಕಾದಲ್ಲಿದ್ದಾರೆ! ಇಲ್ಲಿನ ಮಂದಿಯೆಣಿಕೆಯ ಸುಮಾರು 17% ನಶ್ಟು ಜರ‍್ಮನ್ ಮೂಲದವರಿದ್ದಾರೆ, ಆ ಮೂಲಕ ಅಮೇರಿಕಾದಲ್ಲಿ ಒಂದು ಜನಾಂಗಕ್ಕೆ ಸೇರಿದ ಮೊದಲನೇ ದೊಡ್ಡ ಗುಂಪು ಇದಾಗಿದೆ. ಐರಿಶ್ ಅಮೇರಿಕನ್, ಆಪ್ರಿಕನ್ ಅಮೇರಿಕನ್ ಮತ್ತು ಇಂಗ್ಲಿಶ್ ಅಮೇರಿಕನ್ ಗಿಂತಲೂ ಇವರ ಎಣಿಕೆ ಅಮೇರಿಕಾದಲ್ಲಿ ಹೆಚ್ಚಿದ್ದು, ಜಗತ್ತಿನಲ್ಲಿರುವ ಒಟ್ಟು ಜರ‍್ಮನ್ನರಲ್ಲಿ 1/3ರಶ್ಟು ಜರ‍್ಮನ್ನರು ಅಮೇರಿಕಾದಲ್ಲಿದ್ದಾರೆ! ಹೀಗೆ ಅಮೇರಿಕಾದಲ್ಲಿ ನೆಲೆಸಿರುವ ಜರ‍್ಮನ್ ಮೂಲದವರಿಗೆ ‘ಜರ‍್ಮನ್-ಅಮೇರಿಕನ್‘ ಎಂದು ಕರೆಯುತ್ತಾರೆ.
ಜರ‍್ಮನ್ನರ ವಲಸೆ:
ಜರ‍್ಮನ್ನರು ಅಮೇರಿಕಾಕ್ಕೆ ವಲಸೆ ಬರಲು ಆರಂಬಿಸಿದ್ದು ಸುಮಾರು 1607ರಲ್ಲಿ. ಆ ಕಾಲದಲ್ಲಿ ಅಮೇರಿಕಾವು ಬ್ರಿಟಿಶರ ಅಡಿನಾಡಾಗಿತ್ತು. ಆಗ ಬ್ರಿಟಿಶ್ ಅದಿಕಾರಿಗಳ ಜೊತೆಗೆ ಮೊದಲ ಬಾರಿಗೆ ಕೆಲವು ಜರ‍್ಮನ್ನರು ಬಂದಿಳಿದರು. ಬಳಿಕ ಹೆಚ್ಚೆಣಿಕೆಯಲ್ಲಿ ವಲಸೆ ನಡೆದದ್ದು ಎಂದರೆ 1680 ರಿಂದ 1760 ರ ತನಕ. ಆ ಹೊತ್ತಿನಲ್ಲಿ, ಜರ‍್ಮನಿಯಲ್ಲಿ ವ್ಯವಸಾಯಕ್ಕಾಗಿ ನೆಲವನ್ನು ದಕ್ಕಿಸಿಕೊಳ್ಳುವುದು ಕಶ್ಟವಾಗುತ್ತಿತ್ತು. ನೆಲದೊಡೆಯರಾಗುವ ಬಯಕೆಯನ್ನು ಹೊತ್ತ ಹಲವು ಜರ‍್ಮನ್ನರು ಆಗ ಅಮೇರಿಕಾದತ್ತ ಮುಕ ಮಾಡಿದರು. ಅಮೇರಿಕಾದಲ್ಲಿ ವ್ಯವಸಾಯ ಮಾಡಲು ಸಿಗುತ್ತಿದ್ದ ನೆಲ ಮತ್ತು ಅಲ್ಲಿದ್ದ ದರ‍್ಮದ ಸ್ವಾತಂತ್ರ್ಯಕ್ಕೆ ಸೆಳೆತಗೊಂಡು ಹಲವು ಜರ‍್ಮನ್ನರು ವಲಸೆ ಬಂದರು. ಇಂದಿನ ಪೆನ್ಸಿಲ್ವೇನಿಯಾ ಹಾಗು ನ್ಯೂಯಾರ‍್ಕ್ ನ ಬಡಗಣ ಬಾಗದಲ್ಲಿ ಆ ಕಾಲದಿಂದಲೂ ನೆಲಸಿರುವ ಜರ‍್ಮನ್ ಮೂಲದವರನ್ನು ಕಾಣಬಹುದು.
ಮತ್ತೊಂದು ದೊಡ್ಡ ಮಟ್ಟದ ವಲಸೆ ನಡೆದದ್ದು 1820 ರಿಂದ 1917 ರ ಮೊದಲ ಮಹಾಯುದ್ದದವರೆಗೆ. 1848 ರಲ್ಲಿ ಜರ‍್ಮನ್ ನಾಡಿನಲ್ಲಿ ಹಲವಾರು ರಾಜಕೀಯ ಹೋರಾಟಗಳು ನಡೆದವು. ಪ್ರಗತಿಪರರು ಮತ್ತು ಆಳ್ವಿಕೆಯ ನಡುವೆ ಕೆಲವು ತಿಕ್ಕಾಟಗಳು ನಡೆಯುತ್ತಿದ್ದವು, ಈ ರಾಜಕೀಯ ಗಲಾಟೆಯಿಂದ ಕೆಲವು ದುಡಿಮೆಗಾರ ವರ‍್ಗ ಮತ್ತು ನಡುವರ‍್ಗದ ಮಂದಿ ಜರ‍್ಮನ್ ತೊರೆದು ಅಮೇರಿಕಾದತ್ತ ವಲಸೆ ಮಾಡಿದರು. ಜರ‍್ಮನ್ನಿನ ರಾಜಕೀಯ ಹೋರಾಟಗಳು ಹಲವು ಪತ್ರಕರ‍್ತರು, ನಲ್ಬರಹಗಾರರು, ಅರಿಗರು ಮತ್ತು ರಾಜಕಾರಣಿಗಳನ್ನು ಅಮೇರಿಕಾದತ್ತ ವಲಸೆ ಬರುವಂತೆ ಮಾಡಿತ್ತು. ಆಗ ವಲಸೆ ಬಂದ ಹೆಚ್ಚಿನವರು ಈಗಿನ ಟೆಕ್ಸಾಸ್ ಬಾಗದಲ್ಲಿ ನೆಲೆಸಿದ್ದರು.
ಹೀಗೆ ಕಾಲದಿಂದ ಕಾಲಕ್ಕೆ ಅಮೇರಿಕಾದ ಕಡೆ ವಲಸೆ ಬಂದ ಜರ‍್ಮನ್ನರು, ಅಮೇರಿಕಾದಲ್ಲಿ ತಮ್ಮ ನೆಲೆಯನ್ನು ಗಟ್ಟಿಗೊಳಿಸುತ್ತಾ ಬಂದರು. ಜರ‍್ಮನ್ ಕಾಲೋನಿಗಳನ್ನು ಮಾಡಿಕೊಂಡು ಒಟ್ಟಾಗಿ ವಾಸಿಸತೊಡಗಿದರು. ಮೊದಲೇ ತಿಳಿಸಿದಂತೆ ವ್ಯವಸಾಯದತ್ತ ಹೆಚ್ಚು ಒಲವಿದ್ದ ಇವರು ಸಾಕಶ್ಟು ನೆಲವನ್ನು ಗಳಿಸಿ ನೆಲದೊಡೆಯರಾದರು. ಹಲವು ತಲೆಮಾರುಗಳವರೆಗೂ ನೆಲವು ತಮ್ಮ ಕೈಯಲ್ಲೆ ಉಳಿದಿರಬೇಕು ಮತ್ತು ವ್ಯವಸಾಯವು ಲಾಬವನ್ನು ತಂದುಕೊಡಬೇಕು ಎಂದು ಲೆಕ್ಕಹಾಕಿ, ಕುಟುಂಬದಲ್ಲಿರುವ ಎಲ್ಲರನ್ನೂ ವ್ಯವಸಾಯದಲ್ಲಿ ತೊಡಗಿಸಿಕೊಂಡರು. ತಮ್ಮ ಒಡೆತನದ ನೆಲವು ಅವರ ಕುಟುಂಬವನ್ನು ಬಿಟ್ಟುಹೋಗದಂತೆ ಕೆಲವು ಕಟ್ಟಲೆಗಳನ್ನು ರೂಪಿಸಿಕೊಂಡರು. ವ್ಯವಸಾಯದ ದುಡಿಮೆಯನ್ನು ಚೆನ್ನಾಗಿ ಮಾಡಿಕೊಂಡುಬಂದ ಇವರು ಹಣಕಾಸು ಗಳಿಕೆಯಲ್ಲೂ ಏರಿಕೆ ಕಂಡು, ಬದುಕಿನ ಮಟ್ಟ ಹೆಚ್ಚಿಸಿಕೊಂಡರು.
ಬಳಿಕ, ಹಲವು ಜರ‍್ಮನ್ನರು ಅರಿಮೆ, ಉದ್ಯಮ ಮತ್ತು ರಾಜಕೀಯದಲ್ಲೂ ಒಂದೊಂದು ಕೈ ನೋಡಿದರು. ಉದ್ಯಮ ಕಟ್ಟುವ ಕೆಲಸಕ್ಕೆ ಕೈ ಹಾಕಿ ಅದರಲ್ಲೂ ಗೆಲುವನ್ನು ಕಾಣುತ್ತಾ ಬಂದರು. ಅಮೇರಿಕಾದ ಕಾರ‍್ಮಿಕರ ಚಳುವಳಿ ಮತ್ತು ನಾಗರೀಕ ಹೋರಾಟದಂತಹ ದೊಡ್ಡ ಹೋರಾಟಗಳಲ್ಲಿಯೂ ಕೂಡ ಇವರು ಮುಕ್ಯ ಪಾತ್ರ ವಹಿಸಿದರು. ಅಮೇರಿಕಾದ ಹಲವಾರು ದೊಡ್ಡ ರಾಜಕೀಯ ತೀರ‍್ಮಾನಗಳಲ್ಲಿ ಇವರ ಪಾಲ್ಗೊಳ್ಳುವಿಕೆ ಇತ್ತು.
ತಮ್ಮ ಏಳಿಗೆಯ ಹಾದಿಯನ್ನು ಹಿಡಿಯುತ್ತ ಅಮೇರಿಕಾದಲ್ಲಿ ಗಟ್ಟಿಯಾದ ನೆಲೆಯನ್ನು ಕಂಡುಕೊಂಡಿದ್ದ ಜರ‍್ಮನ್-ಅಮೇರಿಕನ್ನರಿಗೆ ಮೊದಲ ಮಹಾಯುದ್ದದ ಹೊತ್ತಿನಲ್ಲಿ ಹಲವಾರು ತೊಂದರೆಗಳಾದವು. ಕಾಳಗದಲ್ಲಿ ಅಮೇರಿಕಾದ ಎದುರಾಳಿ ಜರ‍್ಮನ್ ಆಗಿದ್ದರಿಂದ ಅಮೇರಿಕಾದಲ್ಲಿರುವ ಜರ‍್ಮನ್ನಿರಿಗೆ ಇತರೆ ಅಮೇರಿಕನ್ನರಿಂದ ತೊಂದರೆಗಳು ಎದುರಾಗತೊಡಗಿದವು. ಹಲವು ಕಡೆ ಜರ‍್ಮನ್ ಹೊತ್ತಗೆಗಳಿಗೆ ಬೆಂಕಿಯನ್ನು ಹಚ್ಚಲಾಯಿತು. ಜರ‍್ಮನ್ನರಿಗೆ ಕಾಳಗದ ಬಾಂಡ್ ಗಳನ್ನು ಕೊಂಡು ನಾಡಬಕ್ತಿಯನ್ನು ತೋರಿಸುವಂತೆ ಒತ್ತಾಯಿಸಲಾಯಿತು. ಅಲ್ಲಲ್ಲಿ, ದೊಂಬಿ-ಗಲಾಟೆಗಳಾಗಿ ಒಂದು ಸಾವು ಕೂಡ ಆಯಿತು. ಜರ‍್ಮನ್ ಹೆಸರಿನಲ್ಲಿರುವ ಊರು ಮತ್ತು ಬೀದಿಗಳನ್ನು ಇಂಗ್ಲಿಶ್ ಹೆಸರಿಗೆ ಮರುಹೆಸರಸಿಲಾಯಿತು. ಅಮೇರಿಕಾದ ಐಯೊವ ನಾಡಿನ ಸ್ಕೂಲಿನಲ್ಲಿ ಮತ್ತು ಊರೊಟ್ಟಿನ ಜಾಗದಲ್ಲಿ ಇಂಗ್ಲಿಶನ್ನು ಹೊರತುಪಡಿಸಿ ಬೇರಾವುದೇ ನುಡಿಯ ಬಳಕೆಯನ್ನು ತಡೆಹಿಡಿಯಲಾಯಿತು. ನೆಬರಾಸ್ಕ ನಾಡಿನಲ್ಲಂತೂ ಇಂಗ್ಲಿಶನ್ನು ಬಿಟ್ಟು ಇನ್ನಾವುದೇ ನುಡಿಯಲ್ಲಿ ಯಾವ ಮಾಹಿತಿಯನ್ನೂ ನೀಡದಂತೆ ಕಟ್ಟಲೆಯನ್ನು ತಂದಿತು (1923 ರಲ್ಲಿ ಈ ಕಟ್ಟಳೆಯನ್ನು ಸುಪ್ರೀಂ ಕೋರ‍್ಟ್ ಹಿಂಪಡೆಯಿತು).
ಇಶ್ಟೆಲ್ಲಾ ತಿಕ್ಕಾಟಗಳು ನಡೆಯುವಾಗ ಜರ‍್ಮನ್-ಅಮೇರಿಕನ್ನರು ತಮ್ಮ ವಲಸಿಗ ದರ‍್ಮವನ್ನು ಪಾಲಿಸಲು ಆರಂಬಿಸಿದರು. ತಮ್ಮ ಜರ‍್ಮನ್ ಹೆಸರುಗಳನ್ನು ಬದಲಿಸಿ ಇಂಗ್ಲಿಶ್ ಹೆಸರುಗಳಾಗಿಸಿ ಮಾರ‍್ಪಡಿಸಿಕೊಂಡರು. ಊರೊಟ್ಟಿನ ಜಾಗಗಗಳಲ್ಲಿ ಜರ‍್ಮನ್ ನುಡಿಯನ್ನು ಬಿಟ್ಟು ಇಂಗ್ಲಿಶಿನಲ್ಲಿ ಮಾತನಾಡಲಾರಂಬಿಸಿದರು. ತಮ್ಮ ಮಕ್ಕಳಿಗೆ ಇಂಗ್ಲಿಶನ್ನು ಕಲಿಸಲು ಮುಂದಾದರು. ಇಂತಹ ಕೆಲಸಗಳ ಮೂಲಕ ನೆಲಸಿಗರ ನಂಬುಗೆಯನ್ನು ಗಳಿಸುವ ಪ್ರಯತ್ನ ಮಾಡಿದರು.
ಎರಡನೇ ಮಹಾಯುದ್ದದ ಹೊತ್ತಿನಲ್ಲಿ ಮೊದಲ ಕಾಳಗದಲ್ಲಿ ಆದಶ್ಟು ತಿಕ್ಕಾಟಗಳು ನಡೆಯಲಿಲ್ಲ. ಆಗ ಜರ‍್ಮನಿಯಿಂದ ಸಾಕಶ್ಟು ಮಂದಿ ಅಮೇರಿಕಾಕ್ಕೆ ವಲಸೆ ಬಂದರು ಅದರಲ್ಲಿ ಮುಕ್ಯವಾಗಿ ಅರಿಗರಾದ ಅಲ್ಬರ‍್ಟ್ ಐನ್‍ಸ್ಟೀನ್ ಕೂಡ ಒಬ್ಬರು. 1931 ರಿಂದ 1940 ರ ಹೊತ್ತಿನಲ್ಲಿ ಸುಮಾರು 1,14,000 ಮಂದಿ ವಲಸೆ ಬಂದರು. ಆದರೆ ಅಮೇರಿಕಾದಲ್ಲಿ ನೆಲೆಸಿದ್ದ ಜರ‍್ಮನ್ನರ, ತಿರುಗಾಟ ಮತ್ತು ಆಸ್ತಿಯ ಮಾರಾಟದ ಹಕ್ಕನ್ನು ಆಗ ಮೊಟಕುಗೊಳಿಸಲಾಯಿತು. ಹಲವು ಜರ‍್ಮನ್ನರನ್ನು ಅನುಮಾನದಿಂದ ಕಾಣಲಾಯಿತು. ಆದರೂ ಜರ‍್ಮನ್ ಅಮೇರಿಕನ್ನರೇ ಕಾಳಗದಲ್ಲಿ ನುಡಿಮಾರುಗರಾಗಿ, ಬೇಹುಗಾರರಾಗಿ ಕೆಲಸ ಮಾಡಿದರು. ಈ ಮೂಲಕ ಅಮೇರಿಕಾ ನಾಡಪರ ಕಾಳಜಿಯನ್ನು ತೋರಿದರು.
ಹೀಗೆ ಹಲವು ಒಳ್ಳೆಯ ಹಾಗು ಕೆಟ್ಟ ಕಾಲಗಳನ್ನು ಕಂಡ ಜರ‍್ಮನ್-ಅಮೇರಿಕನ್ನರು ಈಗ ಅಮೇರಿಕಾದ ಮುಕ್ಯ ಜನಾಂಗಗಳಲ್ಲಿ ಮೊದಲನೆಯದು. ಅಮೇರಿಕಾದಲ್ಲಿರುವ ಹೆಚ್ಚಿನ ಗೆಲುವಿಗರಲ್ಲಿ ಇವರಿದ್ದಾರೆ. ಇವರ ಸಾಮಾನ್ಯ ಆದಾಯ ವರುಶಕ್ಕೆ 61,500 ಡಾಲರ್ ಗಳಶ್ಟಿದೆ. ಇದು ಅಮೇರಿಕ ನಾಡಿನ ಸಾಮಾನ್ಯ ಆದಾಯ ಮಟ್ಟಕ್ಕಿಂತ 18% ಹೆಚ್ಚು. ಅಮೇರಿಕಾದ ಇತರ ಮಂದಿಗಿಂತ ಹೆಚ್ಚು ಕಲಿಕೆಯನ್ನು ನಡೆಸುವವರು ಇವರೇ. ಹಾಗೆಯೇ ಇವರಲ್ಲಿ ಕೆಲಸವಿಲ್ಲದವರ ಎಣಿಕೆಯೂ ತುಂಬಾ ಕಡಿಮೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಈ ಜನಾಂಗದ 97% ನಶ್ಟು ಮಂದಿ ಕೇವಲ ಇಂಗ್ಲಿಶನ್ನು ಮಾತನಾಡುತ್ತರೆ.
ಜರ‍್ಮನ್ನರು ಕಾಲ ಮತ್ತು ನಾಡುಗಳನ್ನು ಮೀರಿ ಏಳಿಗೆಯನ್ನು ಬಯಸುವವರು. ಅಮೇರಿಕಾದಲ್ಲಿ ಉಳುಮೆಯನ್ನು ಮಾಡಲು ಬಂದವರು ಇಂದು ತಮ್ಮ ಹರವನ್ನು ಹೆಚ್ಚಿಸಿಕೊಂಡು, ಈ ನಾಡಿನ ಮುಕ್ಯ ಹಾಗು ಬೆಲೆಬಾಳುವ ಆಸ್ತಿಯಾಗಿದ್ದಾರೆ. ಮೊತ್ತಮೊದಲ ಹೆಣ್ಣು-ಗಾಳಿತೇರಾಳು(lady-pilot) ಆದ ಅಮೆಲಿಯ, ಲೆಹಮನ್ ಬ್ರದರ‍್ಸ್ ಹಣಮನೆ, ಲಿವೈಸ್ ಜೀನ್ಸ್, ಬಡ್‍ವೈಸರ್ ಬಿಯರ್, ಮೈಕ್ರೋಸಾಪ್ಟ್ ಬಿಲ್‍ಗೇಟ್ಸ್, ಪೆಪ್ಸಿ ಕಂಪನಿ, ಗುಡ್‍ಇಯರ್ ಟಯರ್ ಕಂಪನಿ, ಯುನೈಟೆಡ್ ಏರ್‍ಲೈನ್ಸ್, ಬೋಯಿಂಗ್ ಕಂಪನಿ, ಟೆಸ್ಲಾ ಮೊಟಾರ‍್ಸ್, ಹಿಲ್ಟನ್ ಹೊಟೇಲ್ಸ್, ಯುನಿವರ‍್ಸಲ್ ಸ್ಟುಡಿಯೋ, ಕೊಲಂಬಿಯ ಪಿಕ್ಚರ‍್ಸ್, ಕೊಲೇರ್ ಕಂಪನಿ, ಐಬಿಎಮ್, ಡೆಲ್, ಗೂಗಲ್, ಪೇಪಾಲ್, ನ್ಯೂಯಾರ‍್ಕ್ ಟೈಮ್ಸ್, ವಾಶಿಂಗ್ಟನ್ ಪೋಸ್ಟ್ ಮತ್ತು ಐ ಪೋನ್ ಕ್ಯಾತಿಯ ಸ್ಟೀವ್ ಜಾಬ್ಸ್ ಇಂತಹ ಹಲವಾರು ದೊಡ್ಡ ಉದ್ದಿಮೆಗಳು/ಹೆಸರುಗಳು ಜರ‍್ಮನ್-ಅಮೇರಿಕನ್ನರದ್ದು. ಇದಲ್ಲದೇ ಜರ‍್ಮನಿಯ ಮೂಲದ ಕಂಪನಿಗಳಿಗೆ ಇಲ್ಲಿ ಎಲ್ಲಿಲ್ಲದ ಬೇಡಿಕೆಯಿದ್ದು, ಇದು ಅಮೇರಿಕಾದಲ್ಲಿ ತಮ್ಮ ಉದ್ದಿಮೆಯನ್ನು ಬೆಳೆಸಲು ಜರ‍್ಮನ್ ನಾಡಿನವರಿಗೆ ನೆರವಾಗಿದೆ.
ರಾಜಕೀಯದಲ್ಲಿಯೂ ಕೂಡ ಇವರು ತಮ್ಮ ಇರುವಿಕೆಯನ್ನು ತೋರಿಸಿದ್ದಾರೆ, ಜಾರ‍್ಜ್ ವಾಶಿಂಗ್ಟನ್ ಹಾಗು ಬರಾಕ್ ಒಬಾಮರವರ ತಾಯಂದಿರು ಜರ‍್ಮನ್ ಮೂಲದವರು ಎಂಬುದನ್ನು ನಾವು ಮರೆಯುವ ಹಾಗಿಲ್ಲ. 61 ನೇ ಸ್ಪೀಕರ್ ಆದ ಮತ್ತು ಮುಂದಿನ ಅಮೇರಿಕಾ ಅದ್ಯಕ್ಶ ಕುರ‍್ಚಿಗೆ ಹುರಿಯಾಳುಗಳಲ್ಲಿ ಒಬ್ಬರಾಗಿರುವ ಜಾನ್ ಬೊಯ್ನರ್ ಕೂಡ ಜರ‍್ಮನ್-ಅಮೇರಿಕನ್ನರು. ಅಮೇರಿಕಾದ ನಡೆ-ನುಡಿಗೂ ಇವರ ಕೊಡುಗೆ ಹೆಚ್ಚಿದೆ. ಅಮೇರಿಕಾದಲ್ಲಿ ಮೊತ್ತ ಮೊದಲ ಮಕ್ಕಳಸಾಲೆ(kindergarten)ಯನ್ನು ಇವರು ತೆರೆದರು, ಕ್ರಿಸ್ಮಸ್ ಮರದ ಪರಿಚಯವನ್ನು ಇವರೇ ಮಾಡಿದ್ದು, ಹಾಟ್ ಡಾಗ್ ಮತ್ತು ಹ್ಯಾಮ್ ಬರ‍್ಗರ್ ತಿನಿಸುಗಳನ್ನು ಕೂಡ ಪರಿಚಯಿಸಿದರು. ಅಕ್ಟೋಬರ್ ಹಬ್ಬ ಮತ್ತು ಜರ‍್ಮನ್ ಅಮೇರಿಕನ್ ಡೇ ಎಂಬುದು ಇಂದಿಗೂ ಇವರ ದೊಡ್ಡ ಹಬ್ಬಗಳಲ್ಲಿ ಕೆಲವು. ತಮ್ಮ ಮೂಲ ಉಡುಪು, ತಿನಿಸು, ಕಲೆ, ಸಂಗೀತ ಮತ್ತು ಇತರ ನಡೆ-ನುಡಿಯ ಪರಿಚಯವನ್ನು ಇಂದಿನ ತಲೆಮಾರಿಗೆ ಮಾಡಿಕೊಡಲು ಹಲವು ಮೆರವಣಿಗೆಗಳನ್ನು ಈ ಹಬ್ಬಗಳಲ್ಲಿ ನಡೆಸುತ್ತಾರೆ. ಅಮೇರಿಕಾದ ಅಲ್ಲಲ್ಲಿ ಜರ‍್ಮನ್-ಅಮೇರಿಕನ್ ಮ್ಯೂಸಿಯಂ ಗಳು ಕಾಣಸಿಗುತ್ತವೆ.
ಜರ‍್ಮನ್ನರು ತಮ್ಮ ದುಡಿಮೆಗೆ ಹೆಸರುವಾಸಿ, ಯಾವುದೇ ಕೆಲಸವನ್ನು ಎಲ್ಲಿಯೇ ಮಾಡಿದರು ಅದರಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಅವರ ಮೊದಲ ಗುರಿ. ತಮ್ಮ ಮಣ್ಣಿನ ಗುಣವಾಗಿ ದುಡಿಮೆಯನ್ನು ಮೈಗೂಡಿಸಿಕೊಂಡಿರುವುದರಿಂದ, ಅವರು ತಮ್ಮ ನಾಡಿನಿಂದ ಬೇರೆಡೆಗೆ ಹೋದರು ಹೆಸರು ಮಾಡಬಲ್ಲವರಾಗಿದ್ದಾರೆ. ಅದಕ್ಕೆ ಜರ‍್ಮನ್-ಅಮೇರಿಕನ್ನರೇ ಸಾಕ್ಶಿ.
(ಮಾಹಿತಿ ಮೂಲ: economist.com, wikipedia)
(ಚಿತ್ರ ಸೆಲೆ: economist.com, wikipedia)
ಬೇಸರದ ಸಂಗತಿಯೆಂದರೆ ಅವರಲ್ಲಿ ಬಹಳಷ್ಟು ಜನ ತಮ್ಮ ತಾಯ್ನುಡಿಯನ್ನು ಇಂಗ್ಲಿಷಿಗೆ ಬದಲಾಯಿಸಿಕೊಂಡಿದ್ದಾರೆ