ಹಲಗೂರ್ ಎಕ್ಸ್‍ಪ್ರೆಸ್

– ಸಿ.ಪಿ.ನಾಗರಾಜ.

Village bus

ಮಳವಳ್ಳಿ ತಾಲ್ಲೂಕಿನ ಹಲಗೂರಿನಿಂದ ಮಂಡ್ಯ ನಗರಕ್ಕೆ ಇರುವ ಅಂತರ ಸುಮಾರು ನಲವತ್ತು ಕಿಲೊ ಮೀಟರ್. ಇಶ್ಟು ದೂರವನ್ನು ತಲುಪಲು, ಹಲಗೂರ್ ಎಕ್ಸ್‍ಪ್ರೆಸ್ ಎಂಬ ಹೆಸರುಳ್ಳ ಬಸ್ಸು ತೆಗೆದುಕೊಳ್ಳುವ ಸಮಯ ಎರಡರಿಂದ ಎರಡೂವರೆ ಗಂಟೆ. ದಾರಿಯ ಉದ್ದಕ್ಕೂ ನೂರಾರು ಪಯಣಿಗರನ್ನು ಹತ್ತಿಸಿಕೊಳ್ಳುತ್ತಾ, ಇಳಿಸುತ್ತಾ, ಸುಮಾರು ಅರವತ್ತಕ್ಕಿಂತ ಹೆಚ್ಚಿನ ತಾಣಗಳಲ್ಲಿ ನಿಂತು…ಹೊರಟು…ನಿಂತು…ಹೊರಟು…ಮುಂದೆ ಮುಂದೆ ಸಾಗುವ ಈ ಬಸ್ಸಿಗೆ ‘ಎಕ್ಸ್‍ಪ್ರೆಸ್’ ಅಂತ ಹೆಸರಿಟ್ಟಿರುವ ಹಲಗೂರಿನ ಬಸ್ ಮಾಲೀಕರು ನಿಜಕ್ಕೂ ಬಹು ದೊಡ್ಡ ಆಶಾವಾದಿಯೇ ಆಗಿರಬೇಕು.

ಹಲಗೂರು ಮತ್ತು ಕಾಳಮುದ್ದನದೊಡ್ಡಿಯ ನಡುವಣ ರಸ್ತೆಯನ್ನು, ಈಗಲೂ ‘ಕತ್ತೆಮಾರ‍್ಗ’ ಎಂದೇ ಇಲ್ಲಿಯ ಜನರು ಕರೆಯುತ್ತಾರೆ. ಸರಿಸುಮಾರು ಎಪ್ಪತ್ತು-ಎಂಬತ್ತು ವರುಶಗಳ ಹಿಂದೆ ಈ ಮಾರ‍್ಗದಲ್ಲಿ ಕತ್ತೆಗಳ ಬೆನ್ನಿನ ಮೇಲೆ ಸಾಮಾನು ಸರಂಜಾಮುಗಳನ್ನು ಹೇರಿಕೊಂಡು ಹೋಗುತ್ತಿದ್ದುದರಿಂದ ಈ ಹೆಸರು ಬಂದಿದೆ. ಈ ಮಾರ‍್ಗದಿಂದ ಕಾಳಮುದ್ದನದೊಡ್ಡಿಗೆ ಬಂದು ಹೋಗುವ ಬೇಸಾಯಗಾರರ ಮತ್ತು ವಿದ್ಯಾರ‍್ತಿಗಳ ಪಾಲಿಗೆ ಹಲಗೂರ್ ಎಕ್ಸ್‍ಪ್ರೆಸ್ ಮರಳುಗಾಡಿನಲ್ಲಿ ಒಂಟೆಯಿದ್ದಂತೆ! ಕತ್ತೆಮಾರ‍್ಗದಿಂದ ಪಯಣಿಗರನ್ನು ತುಂಬಿಕೊಂಡು ದೊಡ್ಡಿಯೊಳಕ್ಕೆ ಬರುತ್ತಿರುವ ಇಲ್ಲವೇ ದೊಡ್ಡಿಯಿಂದ ಹಲಗೂರಿನ ಕಡೆಗೆ ಹೋಗುತ್ತಿರುವ ಈ ಬಸ್ಸನ್ನು ಒಮ್ಮೆ ನೋಡಿದರೆ ಸಾಕು, ದಿನೇ ದಿನೇ ಇಮ್ಮಡಿ-ಮುಮ್ಮಡಿಗೊಳ್ಳುತ್ತಿರುವ ಜನಸಂಕ್ಯೆಯ ಹೆಚ್ಚಳ ಕಣ್ಣಿಗೆ ಕಟ್ಟಿದಂತಾಗುತ್ತದೆ.

ಬೆಳಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಈ ಬಸ್ಸು ಎಶ್ಟೊಂದು ತುಂಬಿರುತ್ತದೆ ಎಂದರೆ ಬಸ್ಸು ಮುಂದಕ್ಕೆ ಸಾಗಲು ಅಗತ್ಯವಾದ ಆರು ಚಕ್ರಗಳನ್ನು ಬಿಟ್ಟು, ಉಳಿದೆಲ್ಲಾ ಕಡೆ ಅಂದರೆ ಬಸ್ಸಿನ ಒಳಗೆ-ಮೇಲೆ, ಅಕ್ಕ-ಪಕ್ಕ, ಹಿಂದೆ-ಮುಂದೆ ಜನ ಮುಗಿಬೀಳುತ್ತಾರೆ. ನನ್ನ ಗೆಳೆಯರು ಈ ಬಸ್ಸಿನ ಬಗ್ಗೆ ಕಟ್ಟಿರುವ ಜೋಕುಗಳು ತುಂಬಾ ಚೆನ್ನಾಗಿವೆ.

“ಹಲಗೂರ್ ಎಕ್ಸ್‍ಪ್ರೆಸ್‍ನಲ್ಲಿ ಯಾರು ಸೀಟನ್ನು ಹಿಡಿಯುತ್ತಾರೆಯೋ…ಅವರು ಒಲಂಪಿಕ್ ಚಾಂಪಿಯನ್ನರಿಗೆ ಸಮ.”

“ಹಲಗೂರ್ ಎಕ್ಸ್‍ಪ್ರೆಸ್ ಒಳಗೆ ಸೀಟಿನಲ್ಲಿ ಕುಳಿತಿರುವ ಪಯಣಿಗರು ಒಂದು ಗಳಿಗೆ ಮಯ್‍ಮರೆತು ಕಿಟಕಿಯಿಂದ ಹೊರಕ್ಕೆ ತಮ್ಮ ಕಯ್ಯನ್ನು ಚಾಚಿದರೆ, ಅದಕ್ಕೂ ನಾಲ್ಕಾರು ಮಂದಿ ನೇತು ಹಾಕಿಕೊಳ್ಳುತ್ತಾರೆ”

“ಒಳಗಡೆ ಎಶ್ಟು ರಶ್ ಆಗಿರುತ್ತದೆ ಎಂದರೆ, ಎಶ್ಟೋ ಸಮಯ ನಮ್ಮ ಕಯ್-ಕಾಲುಗಳು ಎಲ್ಲಿವೆ ಎಂಬುದು ನಮಗೇ ತಿಳಿದಿರುವುದಿಲ್ಲ. ಕಂಡಕ್ಟರ್ ದುಡ್ಡು ಕೇಳಿದಾಗ, ಹಣವನ್ನು ತೆಗೆದುಕೊಡಲೆಂದು ನಮ್ಮ ಜೇಬಿಗೆ ಕಯ್ ಹಾಕಿದರೆ, ಅದು ಯಾರದೋ ಜೇಬಿಗೆ ಹೋಗಬಹುದು”

ಇಂತಹ ಹಲಗೂರ್ ಎಕ್ಸ್‍ಪ್ರೆಸ್ ಬಸ್ಸಿನಲ್ಲಿ ಒಮ್ಮೆ ದೊಡ್ಡಿಯಿಂದ ಮಂಡ್ಯಕ್ಕೆ ಬರುತ್ತಿದ್ದೆ. ಜನಗಳಿಂದ ಕಿಕ್ಕಿರಿದು ತುಂಬಿದ್ದ ಬಸ್ಸಿನ ಒಳಗೆ ಅತ್ತಿತ್ತ ಮಿಸುಕಾಡಲೂ ಆಗದೆ ನಿಂತಿದ್ದ ನನ್ನ ಕಣ್ಣಿಗೆ ಚಾಲಕನ ಹಿಂದುಗಡೆಯ ಜಾಗವೊಂದರಲ್ಲಿ ನೇತುಹಾಕಿದ್ದ ಒಂದು ಪೋಟೊ ಕಂಡಿತು. ಬೆಳ್ಳಿಯ ಲೇಪನದಿಂದ ಮಾಡಿದ ಲಕುಮಿ, ಯೇಸುಕ್ರಿಸ್ತ ಮತ್ತು ಮಸೀದಿಯ ಚಿತ್ರಗಳನ್ನು ಒಳಗೊಂಡ ಪೋಟೊ ಅದಾಗಿತ್ತು. ಅದನ್ನು ನೋಡನೋಡುತ್ತಿದ್ದಂತೆಯೇ ನನ್ನ ಮಯ್‍ ನವಿರೇಳಿತು.

“ಒಂದೇ ಪೋಟೊ ಪ್ರೇಮಿನೊಳಗೆ ಮೂರು ಮತಗಳ ಸಂಕೇತಗಳು;ಮೂರು ಮತಗಳ ಪೂಜೆಗೆ ಒಂದೇ ಹೂವಿನ ಹಾರ!”

ಕೂಡಲೇ ನನ್ನ ಹಿಂದೆ ನಿಂತಿದ್ದ ಗೆಳೆಯರೊಬ್ಬರಿಗೆ ಅದನ್ನು ತೋರಿಸುತ್ತಾ –

“ಅಲ್ಲಿ ನೋಡಿ…ಎಂತಹ ಒಳ್ಳೆಯ ಪೋಟೊ ಹಾಕಿದ್ದಾರೆ” ಎಂದೆ. ಅವರು ಅದನ್ನು ಒಂದು ಗಳಿಗೆ ನೋಡಿದ ನಂತರ,ಮುಗುಳ್ನಗೆಯನ್ನು ಬೀರುತ್ತಾ –

“ನಾಗರಾಜ್, ಈ ಬಸ್ಸಿನ ಒಡೆಯರು ಹಲಗೂರಿನ ಮುಸಲ್ಮಾನರು. ಆದ್ದರಿಂದ ಹೀಗೆ ಮೂರು ಮತಗಳ ದೇವರುಗಳನ್ನು ಹಾಕಿದ್ದಾರೆ. ಯಾಕಂದ್ರೆ, ಯಾವತ್ತಾದ್ರೂ ಹಿಂದೂ-ಮುಸಲ್ಮಾನ್ ಗಲಾಟೆ ಆದ್ರೆ, ತಮ್ಮ ಬಸ್ಸಿಗೆ ಹಿಂದೂಗಳಿಂದ ಯಾವ ಹಾನಿಯು ಆಗದೇ ಇರ‍್ಲಿ ಅಂತ” ಎಂದರು .

“ಅದರಲ್ಲೇನ್ ತಪ್ಪು? ನಾನು ನೀವೆಲ್ಲಾ ನಂನಮ್ಮ ಜಾತಿಮತದ ದೇವರನ್ನು ಪೂಜಿಸೋದು ನಮ್ಮಗಳ ಒಳಿತಿಗಾಗಿಯೇ ಅಲ್ವೇ? ಅಂತಾದ್ದರಲ್ಲಿ ಈ ಬಸ್ಸಿನ ಒಡೆಯರು ಮೂರು ಮತಗಳ ದೇವರ ಚಿತ್ರಗಳನ್ನು ಒಂದೆಡೆ ಸೇರಿಸಿ, ಒಂದೇ ಹಾರ ಹಾಕಿರೋದು ಮೆಚ್ಚುವಂತಹ ಕೆಲಸವಲ್ಲವೇ?”

“ಅಹುದು” ಎನ್ನುತ್ತಾ ತಲೆಯಾಡಿಸಿದರು. ಮತ್ತೆ ಚಿತ್ರಪಟದತ್ತ ನೋಡತೊಡಗಿದೆ.

“ಒಂದೇ ಮತದ ದೇವರನ್ನು ಪೂಜಿಸುತ್ತಾ, ಅನ್ಯಮತದವರೊಡನೆ ಬಡಿದಾಡಿ ನರಳಿ ಸಾಯುವುದಕ್ಕಿಂತ, ಎಲ್ಲಾ ಮತಗಳ ದೇವರುಗಳ ಇರುವಿಕೆಯನ್ನು ಒಪ್ಪಿಕೊಂಡು, ಎಲ್ಲಾ ಮತದವರೊಡನೆ ಜತೆಗೂಡಿ ನೆಮ್ಮದಿಯಿಂದ ಬಾಳುವುದು ಲೇಸಲ್ಲವೇ?” ಎಂಬ ಒಳಮಿಡಿತವು ನನ್ನ ಮನದಲ್ಲಿ ಮೂಡಿತು.

(ಚಿತ್ರ ಸೆಲೆ: thegoanguide.blogspot.in )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.