“ರಶ್ಯಾ ಹಿನ್ನಡವಳಿಯನ್ನು ತಿರುಚುತ್ತಿದೆ” – ಪೋಲೆಂಡ್
ಜಗತ್ತಿನ ಎರಡನೇ ಮಹಾಕಾಳಗದಲ್ಲಿ (World War II) ಯುನೈಟೆಡ್ ಕಿಂಗ್ಡಮ್, ಪ್ರಾನ್ಸ್, ರಶ್ಯಾ ಮತ್ತು ಅಮೇರಿಕಾ ನಾಡುಗಳೆಲ್ಲ ಸೇರಿ ಜರ‍್ಮನಿ ಮತ್ತು ಅದರ ಗೆಳೆಯ ನಾಡುಗಳ ಕೂಟವನ್ನು ಸೋಲಿಸಿದ್ದವು. ಜರ‍್ಮನಿ ಸೋತು ಶರಣಾದದ್ದು 1945 ರ ಮೇ 8 ಎಂದು ಯುರೋಪ್ ನಾಡುಗಳು ಹೇಳಿದರೆ, ಮೇ 9 ಎಂದು ರಶ್ಯಾ ಮತ್ತು ಸೋವಿಯತ್ ಒಕ್ಕೂಟದ ಸದಸ್ಯರಾಗಿದ್ದ ಕೆಲವು ನಾಡುಗಳು ಹೇಳುತ್ತವೆ. ಇದರ ನೆನಪಿಗಾಗಿ ಪ್ರತೀ ವರುಶವು ಮೇ 9 ರಂದು ರಶ್ಯಾ ಮಿಲಿಟರಿ ಪರೇಡನ್ನು ನಡೆಸುತ್ತದೆ. ಈ ವರ‍್ಶದ ಕಾರ‍್ಯಕ್ರಮಕ್ಕೂ ಬೇರೆ ಬೇರೆ ನಾಡುಗಳ ಹಿರಿಯಾಳುಗಳಿಗೆ(dignitaries) ಕರೆಯೋಲೆಯನ್ನು ಕಳಿಸಿದ್ದರೂ ಆ ಬೇರೆ ನಾಡುಗಳ ಹಿರಿಯಾಳುಗಳು ರಶ್ಯಾಕ್ಕೆ ಬರುವುದಿಲ್ಲ ಎಂದು ಕರೆಯೋಲೆಯನ್ನು ಕಡೆಗಣಿಸಿದ ವರದಿಯಾಗಿದೆ. ಇದಕ್ಕೆ ಕಾರಣ, ರಶ್ಯಾವು ಇತ್ತೀಚಿನ ದಿನಗಳಲ್ಲಿ ಜಗಳಗಂಟ ನಾಡೆಂದು ಹೆಸರು ಪಡೆದಿರುವುದು. ಈ ಸಂದರ‍್ಬವನ್ನೇ ಬಳಸಿಕೊಂಡು ಪೋಲೆಂಡ್ ನಾಡಿನವರು ರಶ್ಯಾದವರಿಗೆ ಕಿರಿಕಿರಿ ಮಾಡುವಂತ ಹೇಳಿಕೆಗಳನ್ನು ನೀಡುತ್ತಾ ರಶ್ಯನ್ನರಿಗೆ ಹಿನ್ನಡವಳಿಯನ್ನು (history) ನೆನಪಿಸಲು ಮುಂದಾಗಿದೆ ಎಂದೂ ವರದಿಗಳಿಂದ ಗೊತ್ತಾಗಿದೆ.
ಪೋಲೆಂಡ್ ನಾಡಿನವರು ಹಾಗೆ ಮಾಡಲು ಕಾರಣಗಳೂ ಇವೆ ಎಂದು ಹೇಳಲಾಗುತ್ತದೆ. ಪೋಲೆಂಡ್ ಯುಕ್ರೇನಿನ ನೆರೆಯ ನಾಡುಗಳಲ್ಲಿ ಒಂದು. ಯುಕ್ರೇನಿನ ಆಳ್ವಿಕೆಯಲ್ಲಿದ ಕ್ರೈಮಿಯಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ರಶ್ಯಾದ ನಡೆ ಪೋಲೆಂಡ್ ನ ಕಣ್ಣು ಕೆಂಪಾಗಿಸಿತ್ತು. ಯುಕ್ರೇನಿಗೆ ಮಿಲಿಟರಿ ನೆರವನ್ನು ನೀಡಬೇಕು ಎಂದು ಯುರೋಪಿನ ಹಲವಾರು ನಾಡುಗಳಿಗೆ ಈ ಹಿಂದೆ ಪೋಲೆಂಡ್ ಮನವಿಯನ್ನೂ ಮಾಡಿತ್ತು. ರಶ್ಯಾದ ಕುತಂತ್ರಗಳನ್ನು ಮೊದಲಿಂದಲೂ ನೋಡುತ್ತಾ ಮತ್ತು ಒಂದು ಕಾಲದಲ್ಲಿ ತಾನೂ ಅದರ ಪರಿಣಾಮಗಳನ್ನು ಅನುಬವಿಸಿದ್ದ ಪೋಲೆಂಡ್, ರಶ್ಯಾದ ಅಹಂಗೆ ಪೆಟ್ಟು ಕೊಡಬೇಕೆಂದಿದೆ. ಅದಕ್ಕಾಗಿ ಹಿನ್ನಡವಳಿಯ ಆಗುಹಗಳನ್ನು ಬಳಸಿಕೊಂಡು, ರಶ್ಯಾ ಇದುವರೆಗೂ ಹೇಳಿಕೊಂಡು ಬಂದ ಸುಳ್ಳುಗಳನ್ನು ಬಯಲು ಮಾಡಲು ಮುಂದಾಗಿದೆ.
ಸೋವಿಯತ್ ಒಕ್ಕೂಟ ಹುಟ್ಟಲು ಕಾರಣವಾದವರಲ್ಲಿ ಮುಕ್ಯವಾದವರು – ರಶ್ಯಾದ ಬೊಲ್ಶೆವಿಕ್ಸ್ ಅತವಾ ಕೆಂಪುಪಡೆ (red army) ಎಂದು ಕರೆಸಿಕೊಳ್ಳುತ್ತಿದ್ದ ಗುಂಪು. ಜರ‍್ಮನಿನ ನಾಜಿಗಳು ಹೆಚ್ಚಿನ ಎಣಿಕೆಯಲ್ಲಿ ಇದ್ದ ಜಾಗ ಔಶ್ವಿಟ್ಸ್. ಅದು ಕಾಳಗದ ಸೆರೆಯಾಳುಗಳನ್ನು ಮತ್ತು ಆಳ್ವಿಕೆಗೆ ಇದಿರು ಮಾತಾಡುವ ಅತವಾ ದಂಗೆಯೇಳುತ್ತಿದ್ದ ಪೋಲೆಂಡ್ ನ ಮಂದಿಯನ್ನು ಸೆರೆ ಹಿಡಿದು ಕೂಡಿ ಹಾಕಲು ಅಂತ ಮಾಡಿಕೊಂಡಿದ್ದ ಜಾಗ. ಮುಂದೊಮ್ಮೆ ಯಹೂದಿಗಳನ್ನು ಹೆಚ್ಚೆಣಿಕೆಯಲ್ಲಿ ಕೂಡಿಟ್ಟು, ನಾಜಿಗಳು ಅವರನ್ನು ಕೊಂದಿದ್ದಕ್ಕೂ ಈ ಜಾಗ ಸಾಕ್ಶಿಯಾಯಿತು ಇದು ಹಿಟ್ಲರನ ಆಳ್ವಿಕೆಯಲ್ಲಿದ್ದ ಜಾಗ. ಎರಡನೇ ಮಹಾ ಕಾಳಗದ ಸಮಯದಲ್ಲಿ ಸೋವಿಯತ್ ಒಕ್ಕೂಟ ಮತ್ತು ಜರ‍್ಮನಿ ನಡುವೆ ತಿಕ್ಕಾಟ ಶುರುವಾದಾಗ ಔಶ್ವಿಟ್ಸ್ ನ ಕೋಟೆಗೆ ಮೊದಲು ಲಗ್ಗೆ ಇಟ್ಟದ್ದು ರಶ್ಯನ್ನರೇ ಎಂದು ರಶ್ಯಾ ಇದುವರೆಗೂ ಹೇಳುತಿತ್ತು. ಆದರೆ ಔಶ್ವಿಟ್ಸ್ ನ ಕೋಟೆಗೆ ಮಿಲಿಟರಿ ಟ್ಯಾಂಕನ್ನು ನುಗ್ಗಿಸ್ಸಿದ್ದು ಯುಕ್ರೇನಿನವರು ಎಂದು, ಹಿನ್ನಡವಳಿಗಾರರೂ (historian) ಆಗಿರುವ ಪೋಲೆಂಡ್ ನ ವಿದೇಶಾಂಗ ಮಂತ್ರಿಯಾದ ಗ್ರೆಗೊಜ್ ಸ್ಕೆತಿನಾ (Grzegorz Schetyna) ಹೇಳಿದ್ದಾರೆ. ಇದಶ್ಟೇ ಅಲ್ಲದೇ, ಎರಡನೇ ಮಹಾಕಾಳಗ ಮುಗಿದ ನಂತರ ಮೂಡಣ-ಜರ‍್ಮನಿಯ (east germany) ಹಿಡಿತ ಪಡೆದುಕೊಂಡ ರಶ್ಯಾದ ಕೆಂಪುಪಡೆಯವರು ಅಲ್ಲಿನ ಜರ‍್ಮನ್ನರ ಜೀವನ ಮಟ್ಟ ಮೇಲೇರಿಸಿದೇ, ದಬ್ಬಾಳಿಕೆಯಿಂದ ಜರ‍್ಮನ್ನರನ್ನು ತುಳಿದು ಅವರು ಹಿಂದುಳಿಯುವಂತೆ ಮಾಡಿದರು ಎಂದು ಪದೇ ಪದೇ ಹೇಳುತ್ತಾ ರಶ್ಯಾವನ್ನು ತಿವಿದಿದ್ದಾರೆ. “ಸೋವಿಯತ್ ಒಕ್ಕೂಟದ ಕಡೆಯಿಂದ ಈ ಹಿಂದೆ ಏನೆಲ್ಲಾ ಕೆಟ್ಟದ್ದು ನಡೆದಿದ್ದರೆ, ಅದಕ್ಕೆ ಸ್ಟಾಲಿನ್ (ಜಾರ‍್ಜಿಯಾ ನಾಡಿನವರು) ಮತ್ತು ಅವರ ಬೆಂಬಲಿಗರು ಕಾರಣ. ಆಗಿರುವ ಒಳ್ಳೆ ಕೆಲಸಗಳಿಗೆಲ್ಲಾ ರಶ್ಯಾ ಮತ್ತು ಅದರ ಪ್ರಬಾವ ಕಾರಣ” ಎಂಬ ನಿಲವು ರಶ್ಯಾದಾಗಿದ್ದು, ಸ್ಕೆತಿನಾ ಅವರ ಹೇಳಿಕೆಗಳು ರಶ್ಯಾಗೆ ಇರಿಸು-ಮುರುಸು ಉಂಟು ಮಾಡಿವೆ.
ಎರಡನೇ ಮಹಾ ಕಾಳಗ ಆಗುವುದಕ್ಕಿಂತ ಸ್ವಲ್ಪ ದಿನಗಳ ಮುಂಚೆ ಸೋವಿಯತ್ ಒಕ್ಕೂಟ ಮತ್ತು ನಾಜಿ ಜರ‍್ಮನಿಯವರು ರಶ್ಯಾದ ಮಾಸ್ಕೋದಲ್ಲಿ ಒಂದು ಗುಟ್ಟು ಒಪ್ಪಂದಕ್ಕೆ (ಮಾಲ್ಟಾವ್-ರಿಬ್ಬಂಟ್ರೋಪ್ ಒಪ್ಪಂದ)ಸಹಿ ಹಾಕಿರುತ್ತಾರೆ. ಆ ಒಪ್ಪಂದದ ಪ್ರಕಾರ ಜರ‍್ಮನಿ ಹಾಗೂ ರಶ್ಯ ನಡುವಿನ ತಿಕ್ಕಾಟವನ್ನು ಕೊನೆಗಾಣಿಸುವುದು ಮತ್ತು ರೊಮೇನಿಯ, ಪೋಲೆಂಡ್, ಲಿತುವೇನಿಯಾ, ಲೆಟಿವಿಯಾ, ಇಸ್ಟೊನಿಯಾ, ಪಿನ್ಲ್ಯಾಂಡ್ ನಾಡುಗಳನ್ನು ತಮ್ಮಿಬ್ಬರ ನಡುವೆ ಹಂಚಿಕೊಳ್ಳುವುದಾಗಿರುತ್ತದೆ. ತಮ್ಮ ಸಿದ್ದಾಂತಗಳನ್ನು ಈ ನಾಡುಗಳ ಮೇಲೆ ಹೇರುವುದು ಜರ‍್ಮನಿ ಮತ್ತು ರಶ್ಯಾದವರ ಇರಾದೆಯಾಗಿರುತ್ತದೆ. ಪೋಲೆಂಡಿನ ಮೇಲೆ ಮೊದಲು ಜರ‍್ಮನಿ ಆಕ್ರಮಣ ನಡೆಸುತ್ತದೆ. ಇದರಿಂದ ಪೋಲೆಂಡ್ ಕಂಗಾಲಾಗುತ್ತದೆ. ಸ್ವಲ್ಪ ಸಮಯದ ಬಳಿಕ ಸೋವಿಯತ್ ನ ಕೆಂಪುಪಡೆ ಕೂಡ ಪೋಲೆಂಡ್ ಗೆ ಲಗ್ಗೆ ಇಡುತ್ತದೆ. ಜರ‍್ಮನಿ-ರಶ್ಯಾ ನಡುವಿನ ಗುಟ್ಟು ಒಪ್ಪಂದದ ಬಗ್ಗೆ ಅರಿವಿರದ ಪೋಲೆಂಡ್, ಮೊದಲಿಗೆ ತನ್ನ ನೆರವಿಗೆ ಬಂದಿದ್ದಾರೆಂದು ತಿಳಿದು ಕೆಂಪುಪಡೆಗೆ ತಮ್ಮ ನಾಡಿನ ಆಯಕಟ್ಟಿನ ಜಾಗವನ್ನು ಬಿಟ್ಟು ಕೊಡುತ್ತದೆ. ಆದರೆ ಜರ‍್ಮನಿಯು ಒಂದುವರೆ ಲಕ್ಶಕ್ಕೂ ಮೇಲಿನ ಪೋಲೆಂಡ್ ಮಂದಿಯನ್ನು ಕೊಲ್ಲುವಾಗ ರಶ್ಯಾ ಏನೂ ಮಾಡದೇ ಸುಮ್ಮನಿರುತ್ತದೆ. ರಶ್ಯಾವು ಒಳಗೊಳಗೇ ಜರ‍್ಮನಿಗೆ ನೆರವು ನೀಡುತ್ತಾ 22,000 ಪೋಲೆಂಡ್ ನ ಅದಿಕಾರಿಗಳನ್ನು ಮತ್ತು ಗುಟ್ಟುಪಡೆಯ ಸದಸ್ಯರನ್ನು ಕೊಲ್ಲುತ್ತದೆ. ಮೂರು ಲಕ್ಶಕ್ಕೂ ಮೇಲಿನ ಪೋಲೆಂಡ್ ನಾಗರೀಕರನ್ನು (ಪೋಲಿಶ್) ಸೋವಿಯತ್ ಒಕ್ಕೂಟದ ಇತರ ನಾಡುಗಳಿಗೆ ಹೋಗುವಂತೆ ಒಕ್ಕಲೆಬ್ಬಿಸಲಾಗುತ್ತದೆ. ಸುಮಾರು ಒಂದೂವರೆ ಲಕ್ಶ ಪೋಲೆಂಡ್ ನಾಗರೀಕರು ಸೋವಿಯತ್ ಒಕ್ಕೂಟದ ಆಳ್ವಿಕೆಯಲ್ಲಿ ಇಲ್ಲವಾಗಿದ್ದಾರೆ ಎಂಬ ವರದಿಗಳಿವೆ. ಪೋಲೆಂಡ್ ನಲ್ಲಿನ ಚಿಂತಕರ ಕೂಟಗಳನ್ನು ಮತ್ತು ನಾಯಕರನ್ನು ಹತ್ತಿಕುತ್ತಾ ತನ್ನ ಕಮುನಿಸ್ಟ್ ಆಳ್ವಿಕೆಗೆ ವಿರೋದ ಬರದಂತೆ ನೋಡಿಕೊಳ್ಳುತ್ತದೆ. ಈ ಎಲ್ಲಾ ಬೆಳವಣಿಗೆಗಳು ರಶ್ಯಾದವರ ಸಂಚನ್ನು ಪೋಲೆಂಡ್ ನವರಿಗೆ ಮನವರಿಕೆ ಮಾಡಿಕೊಡುತ್ತದೆ. ಜರ‍್ಮನಿ ಜೊತೆ ಇಂತದೊಂದು ಒಪ್ಪಂದ ಮಾಡಿಕೊಂಡಿರುವುದರ ಬಗ್ಗೆ ರಶ್ಯಾವು, ತುಂಬಾ ದಿನ ತುಟಿ ಬಿಚ್ಚಿರಲಿಲ್ಲ.
ಪೋಲೆಂಡ್ ನಾಡಿನಲ್ಲೇ ಪೋಲಿಶ್ ಮಂದಿಯನ್ನು ಬರಿದು ಮಾಡಿ ಅವರ ಇರುವಿಗೇ ಸಂಚಕಾರ ತರುವಂತ ಕೆಲಸ ಮಾಡಿದ್ದರೂ, ತಮ್ಮ ಪಡೆಯು ಮಂದಿಗೆ ನಾಜಿಗಳಿಂದ ಬಿಡುಗಡೆ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಪ್ರತೀ ವರ‍್ಶ ಮಿಲಿಟರಿ ಪರೇಡುಗಳ ಮೂಲಕ ತಿಳಿಸುವ ರಶ್ಯಾದ ಪ್ರಯತ್ನ, ಹಿನ್ನಡವಳಿಯನ್ನು ತಿರುಚುವ ನಡೆಯಾಗಿದೆ ಎಂದು ಪೋಲೆಂಡ್ ನಾಡು ಗಟ್ಟಿದನಿಯಲ್ಲಿ ಹೇಳುತ್ತಿದೆ.
(ಚಿತ್ರ ಸೆಲೆ : danfordbooks.com, spk-wb.com )
(ಮಾಹಿತಿ ಸೆಲೆ : economist.com, wiki-PolandInvasion, wiki-Crimea, wiki-NaziGermany, wiki-MolotovRibbentropPact, wiki-Auschwitz, wiki-SovietinvasionofPoland )
ಇತ್ತೀಚಿನ ಅನಿಸಿಕೆಗಳು