ನಲುಗಿದೆ ಹುಮ್ಮಸ್ಸು

– ಡಾ|| ಅಶೋಕ ಪಾಟೀಲ.

Disappointed_Cupid____by_Artamir78

ಅಂಜದೇ ಅಳುಕದೇ ಮುಂದೆ ಸಾಗೋ ಹುಮ್ಮಸ್ಸೊಂದೇಕೋ ನಲುಗಿದೆ.
ಸಾಗಿದ ಹಾದಿಲಿರೋ ಹೆಪ್ಪಿಟ್ಟ ನೋವಿಂದೇಕೋ ಮತ್ತೆ ಮರುಕಳಿಸಿದೆ

ಹುಸಿ ಬಯಕೆಯ ಗೋಪುರವದು, ಕನಸ ಕಾಣುವುದನು ನೋಡಿ ನೋಡಿ ನಗುತಿದೆ.
ಅನವರತ ಸಾಗುತಿರುವ ಬಿಸಿಲುಗುದುರೆ ಮನಸಿದು, ಮತ್ತದೇಕೋ ಬೆದರಿದೆ

ಅಣಕಿಸಿದರು, ಕೆಣಕಿದರು, ಎಲ್ಲರಿಂದಲೂ ಆಯಿತೆನಗೆ ಅವಮಾನ,
ನಡತೆಯ ಲೆಕ್ಕಿಸದೇ ಕಡೆಗಣಿಸಿದರು, ’ದಡ್ಡತನ’ ಇಳೆಯ ಜಾಯಮಾನ

ಸಿಟ್ಟು ಮಾಡಿ ಸೆಡವ ತೋರಲು, ಹೋದರೆಲ್ಲರೂ ನೋಡಿಯೂ ನೋಡದೇ,
ನಕ್ಕು ನಟಿಸಬೇಕಿದೆ ನಾನು ಮುನಿಸಿಕೊಳ್ಳದೇ, ತನ್ನತನದ ಹಂಗಿಲ್ಲದೇ

ಬಾಚಿ ತಬ್ಬಿಕೊಂಡರು ಹಲವರು, ಅವರ ಮೇಲೂ ಸುಳ್ಳೇ ಗುಮಾನಿ,
ಹಿಂದೆ ಕುಹಕವಾಡಿದರೇನೋ ಎಂದೆನಿಸಿ, ಮನವಾಗಿದೆ ಬಲು ಅನುಮಾನಿ

ನೋಡಲು ಹೋಗಿ ಬದುಕು, ನನ್ನ ಬಲಿಯ ಮಾಡಿತೇ?
ಆಟವಿನ್ನು ಬಾಕಿಯಿದ್ದೂ, ಸೋತೆ ನೀನಾಗಲೇ ಎಂದಿತೋ?

ಎಶ್ಟು ಬಾರಿ ಸೋತೆನೇನೋ ಎಣಿಕೆ ಸಿಗದ ಹಾಗಿದೆ,
ಆಟ ಮುಗಿಯುವದರಳೊಮ್ಮೆ ಗೆಲುವು ನಗೆಯ ಬೀರದೇ?

(ಚಿತ್ರಸೆಲೆ:  artamir78.deviantart.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: