ಗಾದೆಗಳು

ಸಿ.ಪಿ.ನಾಗರಾಜ.
gaadegalu
“ಗಾದೆ ಎಂದರೇನು?” ಎಂಬ ಕೇಳ್ವಿಗೆ ಅನೇಕ ಬಗೆಯ ಬದಲುಗಳಿವೆ. ಅವುಗಳಲ್ಲಿ ಕೆಲವನ್ನು ನೋಡಬಹುದು.

ಅ) ಗಾದೆ ಎನ್ನುವುದು ಹೇಳಿಕೆಯ ರೂಪದಲ್ಲಿ ಬಳಕೆಯಾಗುವ ಮಾತು. ಈ ಮಾತಿನಲ್ಲಿ ತಿಳುವಳಿಕೆಯಿದೆ; ನೀತಿಯಿದೆ; ಕಟಕಿಯಿದೆ; ಅಣಕವಿದೆ; ನಗೆಚಾಟಿಕೆಯಿದೆ; ಮಾನವ ಬದುಕಿನ ಒಳಿತುಕೆಡುಕುಗಳನ್ನು ವಿಂಗಡಿಸಿ ತಿಳಿಸುವ ಜಾಣ್ಮೆಯಿದೆ; ವ್ಯಕ್ತಿಯ ಹಾಗೂ ಸಮಾಜದ ನಡವಳಿಕೆಯ ವಿಮರ‍್ಶೆಯಿದೆ; ನುಡಿ ಸಮುದಾಯದ ಸಾಮಾಜಿಕ ಮತ್ತು ಸಂಸ್ಕ್ರುತಿಯ ಆಚರಣೆಗಳ ನೆನಪುಗಳಿವೆ.

ಆ) ಒಂದು ನುಡಿ ಸಮುದಾಯದ ಜನಜೀವನದಲ್ಲಿ ಉಂಟಾಗುವ ನೋವು-ನಲಿವುಗಳಿಂದ, ಆಗುಹೋಗುಗಳಿಂದ ಮತ್ತು ಕಂಡುಂಡ ವಾಸ್ತವಗಳಿಂದ ಹಲವು ಮಂದಿ ಪಡೆದ ಅರಿವು, ಅದೇ ನುಡಿ ಸಮುದಾಯದ ಒಮ್ಮತದ ದನಿಯಾಗಿ ಹೊರಹೊಮ್ಮಿದ ಮಾತುಗಳೇ ಗಾದೆ.

ಇ) ಹಲವರ ಅನುಬವಗಳ ಮೊತ್ತವೇ ಒಬ್ಬನ ಜಾಣನುಡಿಯಾಗಿ ಗಾದೆಯು ರೂಪುಗೊಂಡಿದೆ. ಆ ಒಬ್ಬನು ಆಡಿದ ಜಾಣನುಡಿಯು ಸಮುದಾಯದ ಒಪ್ಪಿಗೆಯಿಂದಾಗಿ ಎಲ್ಲರ ನುಡಿಯೂ ಆಗಿ ಗಾದೆಯ ರೂಪದಲ್ಲಿ ಬಳಕೆಗೆ ಬಂದಿದೆ.

ಉದಾಹರಣೆ : ನಾಳೆ ಎಂದವನ ಮನೆ ಹಾಳು-ತಾಳಿದವನು ಬಾಳಿಯಾನು-ದುಡ್ಡಿದ್ದವನೇ ದೊಡ್ಡಪ್ಪ-ಅತಿಯಾಸೆ ಗತಿಕೇಡು-ಕುಂಬಾರನಿಗೆ ವರುಶ ದೊಣ್ಣೆಗೆ ನಿಮಿಶ-ತುಂಬಿದ ಕೊಡ ತುಳುಕುವುದಿಲ್ಲ-ದೂರದ ಬೆಟ್ಟ ನುಣ್ಣಗೆ-ಅಂಗಯ್ ಹುಣ್ಣಿಗೆ ಕನ್ನಡಿ ಬೇಕೆ-ಆಕಳು ಕಪ್ಪಾದರೆ ಹಾಲು ಕಪ್ಪೆ-ಕೂತು ಉಣ್ಣುವವನಿಗೆ ಕುಡ್ಕೆ ಹೊನ್ನು ಸಾಲದು-ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು-ಬೆಳ್ಳಗಿರುವುದೆಲ್ಲಾ ಹಾಲಲ್ಲ-ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು-ತೋಳ ಹಳ್ಳಕ್ಕೆ ಬಿದ್ರೆ ಆಳಿಗೊಂದೊಂದು ಕಲ್ಲು-ಗಾಳಿ ಬಂದಾಗ ತೂರಿಕೊ.

ಗಾದೆಗಳು ಮಾತಿನ ಪ್ರಸಂಗಗಳಲ್ಲಿ ಬಳಕೆಯಾಗುವಾಗ ಬಹುತೇಕ ಸನ್ನಿವೇಶಗಳಲ್ಲಿ ರೂಪಕದ ತಿರುಳನ್ನು ಪಡೆಯುತ್ತವೆ.
ಉದಾಹರಣೆ :

1) ಕಯ್ ಕೆಸರಾದರೆ ಬಾಯಿ ಮೊಸರು

“ದುಡಿಮೆಯಿಂದ ನೆಮ್ಮದಿಯ ಬದುಕನ್ನು ನಡೆಸಬಹುದು ಎಂಬ ಜೀವನ ಸಂದೇಶವನ್ನು ತಿಳಿಸುವ ಈ ಗಾದೆಯಲ್ಲಿ ‘ಕಯ್ ಕೆಸರಾಗುವ’ ಮತ್ತು ‘ಬಾಯಿ ಮೊಸರಾಗುವ’ ಕ್ರಿಯೆಗಳು ರೂಪಕವಾಗಿ “ದುಡಿಮೆಯ ಅಗತ್ಯ ಮತ್ತು ಒಳ್ಳೆಯ ಜೀವನವನ್ನು” ಸಂಕೇತಿಸುತ್ತವೆ.

2) ಹಾಸಿಗೆಯಿದ್ದಶ್ಟು ಕಾಲು ಚಾಚು

“ಆದಾಯದ ಮಿತಿಯೊಳಗೆ ವೆಚ್ಚ ಮಾಡುವುದನ್ನು ಕಲಿಯಬೇಕು” ಎಂಬ ತಿಳುವಳಿಕೆಯನ್ನು ಹೇಳುವ ಈ ಗಾದೆಯಲ್ಲಿ ‘ಹಾಸಿಗೆಯ ಉದ್ದ’ ಮತ್ತು ‘ಕಾಲು ಚಾಚುವಿಕೆಯು’ ರೂಪಕವಾಗಿ ಮೂಡಿಬಂದು “ದುಡಿದು ಗಳಿಸುವ ಹಣ ಹಾಗೂ ಇರುವ ಸಂಪತ್ತಿನ ಮಿತಿಯನ್ನು ಮೀರಿ ದುಂದುವೆಚ್ಚಮಾಡಿ ಸಾಲಸೋಲಗಳಿಗೆ ಗುರಿಯಾಗಿ ಹಾಳಾಗಬಾರದು” ಎಂಬ ಎಚ್ಚರಿಕೆಯ ದನಿಯನ್ನು ಒಳಗೊಂಡಿದೆ.

ಗಾದೆ ಮಾತುಗಳ ಕಟ್ಟುವಿಕೆಯಲ್ಲಿ ಸಮುದಾಯದ ಆಗುಹೋಗುಗಳಲ್ಲಿ ಉಂಟಾಗುವ ಯಾವುದಾದರೊಂದು ಪ್ರಸಂಗ ಇಲ್ಲವೇ ಜೀವನದ ಏರಿಳಿತಗಳ ಅವಲೋಕನ ಕಂಡುಬರುತ್ತದೆ .

ಉದಾಹರಣೆ :

1)  ನರೀಗೆ ಹೇಳುದ್ರೆ ನರಿ ತನ್ನ ಬಾಲಕ್ಕೆ ಹೇಳ್ತಂತೆ

ತನಗೆ ಹೇಳಿದ ಕೆಲಸವನ್ನು ತಾನು ಮಾಡದೆ, ಅದನ್ನು ಬೇರೆಯವರು ಮಾಡುವಂತೆ ಹೇಳಿ, ತನ್ನ ಹೊಣೆಗಾರಿಕೆಯಿಂದ ಕಳಚಿಕೊಳ್ಳುವ ವ್ಯಕ್ತಿಯನ್ನು ನಿಂದಿಸುವ/ಟೀಕಿಸುವ ರೂಪಕದ ತಿರುಳನ್ನು ಈ ಗಾದೆ ಹೊಂದಿದೆ. ಈ ಗಾದೆಯು ರೂಪುಗೊಳ್ಳಲು ಕಾರಣವಾದ ಪ್ರಸಂಗವೊಂದನ್ನು ಜನಪದರು ಈ ರೀತಿ ಹೇಳುತ್ತಾರೆ.

ಒಂದು ಊರಿನಲ್ಲಿ ಒಬ್ಬ ನರಿಯೊಂದನ್ನು ಸಾಕಿಕೊಂಡು, ಅದಕ್ಕೆ ಪ್ರಾಣಿಪಕ್ಶಿಗಳನ್ನು ಹಿಡಿಯುವ ತರಬೇತಿಯನ್ನು ನೀಡಿದ್ದ. ಒಮ್ಮೆ ಕಾಲುವೆಯ ಏರಿಯೊಂದರ ಮೇಲೆ ನರಿಯೊಡನೆ ಹೋಗುತ್ತಿದ್ದಾಗ, ಕಾಲುವೆಯ ಕಲ್ಲುಪೊಟರೆಯಲ್ಲಿ ನಳ್ಳಿಯೊಂದು ಆತನ ಕಣ್ಣಿಗೆ ಬಿತ್ತು. ಅದನ್ನು ಹಿಡಿದು ತರುವಂತೆ ನರಿಗೆ ಹೇಳಿದ. ಕೂಡಲೇ ನರಿಯು ನಳ್ಳಿಯಿದ್ದ ಪೊಟರೆಯ ಬಳಿ ಬಂದು, ಮೇಲಿನಿಂದ ತನ್ನ ಬಾಲವನ್ನು ಇಳಿಬಿಟ್ಟಿತು. ಬಾಲವನ್ನು ಕಂಡ ನಳ್ಳಿ ಅದನ್ನು ಕಚ್ಚಿ ಹಿಡಿಯುತ್ತಿದ್ದಂತೆಯೇ, ನರಿಯು ಬಾಲವನ್ನು ಮೇಲಕ್ಕೆ ಎತ್ತಿ ಒಗೆದಾಗ , ಕಾಲುವೆಯ ಏರಿಯ ಮೇಲಕ್ಕೆ ನಳ್ಳಿ ಬಂದು ಬಿದ್ದಿತು.

2)  ಅತ್ತೆಗೆ ಒಂದು ಕಾಲ; ಸೊಸೆಗೆ ಒಂದು ಕಾಲ

ಮತ್ತೊಬ್ಬರಿಂದ ಇಂದು ತುಳಿತಕ್ಕೆ, ಕಿರುಕುಳಕ್ಕೆ ಮತ್ತು ಸಂಕಟಕ್ಕೆ ಗುರಿಯಾಗಿ ನರಳುವ ವ್ಯಕ್ತಿಯು ಮುಂದೊಂದು ದಿನ ಒಳ್ಳೆಯ ಸ್ತಿತಿಗೆ ಬಂದು ಚೆನ್ನಾಗಿ ಮೆರೆಯುವ ಕಾಲ ಬರುತ್ತದೆ ಎಂಬ ರೂಪಕದ ತಿರುಳನ್ನು ಈ ಗಾದೆ ಹೊಂದಿದೆ.

ಕುಟುಂಬದ ನೆಲೆಯಲ್ಲಿ ನಡುವಯಸ್ಸಿನ ಹಂತದಲ್ಲಿರುವ ಅತ್ತೆಯು ತನ್ನ ಗಂಡ ಮಕ್ಕಳು ಆಸ್ತಿಪಾಸ್ತಿ ಹಣಕಾಸಿನ ಒಡೆತನದಲ್ಲಿ ಸೊಸೆಯ ಮೇಲೆ ದರ‍್ಬಾರನ್ನು ನಡೆಸುತ್ತಾ ಮೆರೆಯುತ್ತಿರುತ್ತಾಳೆ. ಆದರೆ ಕಾಲಕ್ರಮೇಣ ಮುಪ್ಪು ಕವಿದು, ಗಂಡನನ್ನು ಕಳೆದುಕೊಂಡು ಒಬ್ಬಂಟಿಯಾಗಿ, ಹೆಣ್ಣುಮಕ್ಕಳು ದೂರವಾಗಿ, ಗಂಡುಮಕ್ಕಳಿಂದ ಕಡೆಗಣಿತಳಾಗಿ ಕುಟುಂಬದಲ್ಲಿ ಎಲ್ಲಾ ಬಗೆಯ ಹಿಡಿತವನ್ನು ಕಳೆದುಕೊಂಡಾಗ, ಇವಳಿಗಿದ್ದ ಹತೋಟಿ ಅಂತಸ್ತುಗಳು ಸೊಸೆಗೆ ದೊರೆತು, ಆಕೆಯು ಈಗ ಅತ್ತೆಯಂತೆ ದರ‍್ಬಾರನ್ನು ನಡೆಸತೊಡಗುತ್ತಾಳೆ. ಸಾವಿರಾರು ಕುಟುಂಬಗಳಲ್ಲಿ ನಡೆಯುವ ಹೆಣ್ಣಿನ ಬದುಕಿನ ಏರಿಳಿತಗಳ ಅವಲೋಕನದ ಹಿನ್ನೆಲೆಯಲ್ಲಿ ಮೇಲ್ಕಂಡ ಗಾದೆಯು ರೂಪುಗೊಂಡಿದೆ.

ಸಾಮಾಜಿಕ ವ್ಯವಹಾರದ ನೂರೆಂಟು ಬಗೆಯ ಮಾತಿನ ಪ್ರಸಂಗಗಳಲ್ಲಿ ಬಳಕೆಗೊಳ್ಳುವ ಗಾದೆಗಳನ್ನು ಗಮನಿಸಿದಾಗ, ಅವುಗಳ ಬಳಕೆಯ ಉದ್ದೇಶ ಮತ್ತು ಅದರಿಂದ ಉಂಟಾಗುವ ಪರಿಣಾಮಗಳು ತಿಳಿದುಬರುತ್ತವೆ.

ಪ್ರಸಂಗ-1:

ಅಂಗಡಿಯೊಂದರಲ್ಲಿ ಅಕ್ಕಿಯನ್ನು ಕೊಂಡುಕೊಳ್ಳಲೆಂದು ಬಂದ ಸುಮಾರು ಅರವತ್ತು ವರುಶದ ಹೆಂಗಸೊಬ್ಬಳು ಅಂಗಡಿಯಲ್ಲಿದ್ದ ಎರಡು ತರದ ಅಕ್ಕಿಯನ್ನು ನೋಡಿ, ವರ‍್ತಕನಲ್ಲಿ ಅಕ್ಕಿಯ ಬೆಲೆಯನ್ನು ವಿಚಾರಿಸಿದಳು. ವರ‍್ತಕನು ಕಳಪೆದರ‍್ಜೆಯ ಅಕ್ಕಿಗೆ ಕಡಿಮೆ ದರವನ್ನು ಮತ್ತು ಉತ್ತಮದರ‍್ಜೆಯ ಅಕ್ಕಿಗೆ ಹೆಚ್ಚಿನ ದರವನ್ನು ಹೇಳಿದಾಗ, ಒಂದೆರಡು ಗಳಿಗೆ ಆ ಹೆಂಗಸು ಎರಡು ತರದ ಅಕ್ಕಿಯನ್ನು ತನ್ನ ಅಂಗಯ್‍ಗಳ ಮೇಲಿಟ್ಟುಕೊಂಡು, ಅಕ್ಕಿಯ ಗುಣಮಟ್ಟವನ್ನು ಕಣ್ಣುಮಟ್ಟ ಚೆನ್ನಾಗಿ ನೋಡುತ್ತಿದ್ದು, ಅನಂತರ ವರ‍್ತಕನನ್ನು ಕುರಿತು-

“ಮೂರ‍್ಕಾಸು ಕೊಟ್ಟು ಮುದುಕಿ ಕಟ್ಕೊಳ್ಳೋದಿಕ್ಕಿಂತ, ಆರ‍್ಕಾಸು ಕೊಟ್ಟು ಹರೇದೋಳ್ನ ಕಟ್ಕೊಳ್ಳೋದೆ ಮೇಲಲ್ವೆ” ಎಂದಳು. ವರ‍್ತಕನು ಉತ್ತಮದರ‍್ಜೆಯ ಅಕ್ಕಿಯನ್ನು ಆಕೆಗೆ ತೂಗಿ ಕೊಟ್ಟನು.

ಪ್ರಸಂಗ-2:

ಒಮ್ಮೆ ತಮ್ಮಯ್ಯನವರು ಒಂದು ಜತೆ ಎತ್ತುಗಳನ್ನು ಕೊಳ್ಳಲೆಂದು ಹೊರಡುವಾಗ , ತಮ್ಮೊಡನೆ ರಾಸುಗಳ ಸುಳಿಗಳನ್ನು ಗುರುತಿಸುವ ಹಾಗೂ ಬೇಸಾಯದಲ್ಲಿ ದುಡಿಯುವ ಎತ್ತುಗಳ ಮಯ್‍ಕಟ್ಟಿನ ಚಹರೆಗಳನ್ನು ಚೆನ್ನಾಗಿ ಅರಿತಿದ್ದ ದಳ್ಳಾಳಿ ರಾಮಣ್ಣನವರನ್ನು ಕರೆದುಕೊಂಡು, ಅನೇಕ ಹಳ್ಳಿಗಳಲ್ಲಿ ಒಂದು ಜತೆ ಎತ್ತಿಗಾಗಿ ಅರಸತೊಡಗಿದರು. ನಾಲ್ಕಾರು ಹಳ್ಳಿಗಳಲ್ಲಿ ಹತ್ತಾರು ಜೋಡಿಗಳನ್ನು ನೋಡಿದರೂ, ಒಂದಲ್ಲ ಒಂದು ಬಗೆಯ ಅಯ್ಬನ್ನು ರಾಸುಗಳಲ್ಲಿ ಎತ್ತಿ ತೋರಿಸುತ್ತಾ ರಾಮಣ್ಣನವರು “ಅವು ಬೇಡ…ಇವು ಬೇಡ ” ಎಂದು ತಲೆಯಾಡಿಸಿ, ಮುಂದೆ ಮುಂದೆ ಸಾಗುತ್ತಿದ್ದರು. ಅಲೆದಲೆದು ಬೇಸತ್ತ ತಮ್ಮಯ್ಯನವರು ರಾಮಣ್ಣನನ್ನು ಕುರಿತು “ರಾಮಣ್ಣ…ಯಾವೊಂದು ಅಯ್ಬು ಇರಬಾರದು ಅಂತ ಹುಡೀಕೊಂಡು ಹೊರಟ್ರೆ…ನಮಗೆ ಈ ಜನುಮದಲ್ಲಿ ಅಂತಾ ಎತ್ತುಗಳು ಸಿಗೋದಿಲ್ಲ. ಹೆಂಗೋ ಒಸಿ ಹೊಂದಾಣಿಕೆ ಮಾಡ್ಕೊಂಡು, ಉಳೂಕೆ…ಗೊಬ್ಬರಗೋಡು ಹೋಡಿಯೂಕೆ ಲಗತ್ತಾಗಿರೋ ದನ ನೋಡಪ್ಪ” ಎಂದರು. ಕೂಡಲೇ ರಾಮಣ್ಣನವರು ತಮ್ಮಣ್ಣನವರತ್ತ ತಿರುಗಿ-
“ನಿಮ್ಮ ಮಾತು ಕಟ್ಕೊಂಡ್ರೆ ಏನಿಲ್ಲ…ಅದೇನೋ ಗಾದೆ ಹೇಳ್ತರಲ್ಲ…ಆತುರಕ್ಕೆ ಹೋಗಿ ಅತ್ತೆ ಕೆಡೀಕೊಂಡ್ರು ಅಂತ…ಹಂಗಾಯ್ತದೆ” ಎಂದರು. ತಮ್ಮಣ್ಣನವರು ನಗುತ್ತಾ , ಮತ್ತೊಂದು ಮಾತನಾಡದೆ ರಾಮಣ್ಣನವರನ್ನು ಹಿಂಬಾಲಿಸಿದರು.

ಪ್ರಸಂಗ-3:

ಮನೆಯೊಂದರಲ್ಲಿ ಕಳ್ಳತನವಾಗಿತ್ತು. ಮನೆಯ ಒಡತಿಯು ಕಳುವಾಗಿದ್ದ ಸಾಮಗ್ರಿಗಳನ್ನು ನೆನೆ ನೆನೆದುಕೊಂಡು ಅಳುತ್ತಾ ಕರೆಯುತ್ತಾ ಕೊರಗುತ್ತಿದ್ದಾಗ, ಅಲ್ಲಿಗೆ ಬಂದ ಹಿರಿಯರೊಬ್ಬರು ಆಕೆಯನ್ನು ಕುರಿತು-
” ಅಯ್ಯೋ…ಏನು ಮಾಡೂಕಾದದು…ಕಳ್ಕೋದು ನಮ್ಮ ಹಣೇಲಿ ಬರೆದಿರುವಾಗ , ಹಿಂಗೆಲ್ಲಾ ಒಂದೊಂದು ದಪ ಆಯ್ತದೆ. ಮೊದಲೇ ಒಂದು ಗಾದೆ ಮಾತು ಇಲ್ವೆ …ಕಳ್ಳ ಹೊಕ್ಕಿದ ಮನೆಯಲ್ಲಿ ಏನಾದ್ರು ಇರ‍್ತದೆ; ಕೊಳ್ಳಿ ಹೊಕ್ಕಿದ ಮನೆಯಲ್ಲಿ ಏನೂ ಇರಲ್ತು ಅನ್ನುವಂಗೆ ಕಳ್ಳತನ ಆದ ಮೇಲೂ ಉಳ್ಕೊಂಡಿರೊ ವಸ್ತುಒಡವೆ ನೋಡ್ಕೊಂಡು ನೆಮ್ಮದಿಯಾಗಿರ‍್ಬೇಕು” ಎಂದರು.

ಮೇಲ್ಕಂಡ ಮೊದಲನೆಯ ಪ್ರಸಂಗದಲ್ಲಿ ಅಕ್ಕಿಯನ್ನು ಕೊಳ್ಳಲೆಂದು ಅಂಗಡಿಗೆ ಬಂದ ಹೆಂಗಸು ‘ತನ್ನ ಆಯ್ಕೆಯನ್ನು ‘ ಸೂಚಿಸಲು ಗಾದೆಯನ್ನು ಬಳಸಿದ್ದಾಳೆ. ಅವಳ ಇಂಗಿತವನ್ನು ಅರಿತುಕೊಂಡ ಅಂಗಡಿಯವನು ಉತ್ತಮದರ‍್ಜೆಯ ಅಕ್ಕಿಯನ್ನು ಆಕೆಗೆ ನೀಡಿದನು. ಎರಡನೆಯ ಪ್ರಸಂಗದಲ್ಲಿ ತಮ್ಮಣ್ಣನವರ ಸಲಹೆಯನ್ನು ನಿರಾಕರಿಸಲೆಂದು ರಾಮಣ್ಣನವರು ಗಾದೆಯನ್ನು ಬಳಸಿದ್ದಾರೆ. ಗಾದೆಯ ಒಳತಿರುಳನ್ನು ತಿಳಿದ ತಮ್ಮಣ್ಣನವರು ಮರುಮಾತನಾಡದೆ ರಾಮಣ್ಣನವರನ್ನು ಹಿಂಬಾಲಿಸಿದ್ದಾರೆ. ಮೂರನೆಯ ಪ್ರಸಂಗದಲ್ಲಿ ಸಂಕಟದಿಂದ ನರಳುತ್ತಿದ್ದ ಮನೆಯ ಒಡತಿಯ ಮನಸ್ಸಿನ ದುಗುಡವನ್ನು ಹೋಗಲಾಡಿಸುವ ಉದ್ದೇಶದಿಂದ ಗಾದೆ ಬಳಕೆಯಾಗಿದೆ. ಅದನ್ನು ಕೇಳಿದ ಒಡತಿಯ ಕಣ್ಣಮುಂದೆ ಕಳ್ಳತನದಿಂದ ಆದ ಹಾನಿಗಿಂತ ಬೆಂಕಿಯಿಂದಾಗುತ್ತಿದ್ದ ಹಾನಿಯ ಪ್ರಮಾಣವೇ ದೊಡ್ಡದಾಗಿ ಕಂಡುಬಂದು ಒಂದು ಬಗೆಯ ನೆಮ್ಮದಿ ಉಂಟಾಗುವ ಅವಕಾಶವಿದೆ.

ಈ ರೀತಿ ಗಾದೆಗಳು ಮಾತಿನ ಸನ್ನಿವೇಶದಲ್ಲಿ ನಡೆಯುತ್ತಿರುವ ಕೆಲಸವನ್ನು ಇಲ್ಲವೇ ಪ್ರಸ್ತಾಪಿಸುತ್ತಿರುವ ಸಂಗತಿಯನ್ನು ಒಪ್ಪಿಕೊಳ್ಳುವುದಕ್ಕಾಗಿ/ಅಲ್ಲಗಳೆಯುವುದಕ್ಕಾಗಿ/ಅಣಕಿಸುವುದಕ್ಕಾಗಿ/ತೆಗಳುವುದಕ್ಕಾಗಿ/ತಿದ್ದಿ ಸರಿಪಡಿಸುವುದಕ್ಕಾಗಿ/ಸಮಾಜದಲ್ಲಿನ ಸಂಪ್ರದಾಯ ಹಾಗೂ ಆಚರಣೆಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಬಳಕೆಗೊಳ್ಳುತ್ತವೆ.

ಅಕ್ಕರ ಕಲಿತು ನಗರಗಳಲ್ಲಿ ನೆಲೆಸಿರುವ ಜನಗಳಿಗಿಂತ ಓದುಬರಹ ಕಲಿಯದ ಹಳ್ಳಿಗರು ಮತ್ತು ವಯಸ್ಸಿನಲ್ಲಿ ಚಿಕ್ಕವರಿಗಿಂತ ದೊಡ್ಡವರು, ತಮ್ಮ ನಿತ್ಯ ಜೀವನದ ಮಾತುಕತೆಗಳಲ್ಲಿ ಗಾದೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಗಾದೆಗಳ ಬಳಕೆಯಲ್ಲಿ ಹೆಣ್ಣುಗಂಡಿನ ತಾರತಮ್ಯ ಮತ್ತು ಬಡವಬಲ್ಲಿದರೆಂಬ ಮೇಲುಕೀಳು ಎದ್ದು ಕಾಣುತ್ತದೆ. ಗಂಡಸಿಗೆ ಹೆಚ್ಚು ಮನ್ನಣೆಯಿರುವ ನುಡಿಸಮುದಾಯಗಳಲ್ಲಿ ಹೆಣ್ಣನ್ನು ಅಲ್ಲಗಳೆಯುವ/ಕಟುವಾಗಿ ವಿಡಂಬಿಸುವ ಗಾದೆಗಳನ್ನು ಚುಚ್ಚುಬಾಣಗಳಂತೆ ಗಂಡಸರು ಬಳಸುತ್ತಾರೆ. ಹಣಕಾಸು,ಆಸ್ತಿಪಾಸ್ತಿ ಮತ್ತು ಅದಿಕಾರದ ತಾರತಮ್ಯದಿಂದ ಕೂಡಿರುವ ನುಡಿಸಮುದಾಯದಲ್ಲಿ ಸಾಮಾಜಿಕವಾಗಿ ಮೇಲಿನ ಹಂತದಲ್ಲಿರುವವರು ಕೆಳಹಂತದಲ್ಲಿರುವವರೊಡನೆ ವ್ಯವಹರಿಸುವಾಗ, ಅವರನ್ನು ಹತೋಟಿಯಲ್ಲಿಡಲು ಇಲ್ಲವೇ ತಮ್ಮ ಇಚ್ಚೆಗೆ ತಕ್ಕಂತೆ ನಡೆದುಕೊಳ್ಳುವಂತೆ ಮಾಡಲು ಗಾದೆಗಳನ್ನು ಒಂದು ಹತಾರವಾಗಿಯೂ ಬಳಸುತ್ತಾರೆ. ಮಾತಿನ ಸನ್ನಿವೇಶದಲ್ಲಿ ತೊಡಗಿರುವ ವ್ಯಕ್ತಿಗಳ ನಡುವಣ ಸಾಮಾಜಿಕ ನಂಟು ಮತ್ತು ಒಬ್ಬರ ಮೇಲೆ ಮತ್ತೊಬ್ಬರಿಗೆ ಇರುವ ಹತೋಟಿಯ ಬಗೆಗೆ ತಕ್ಕಂತೆ ಗಾದೆಗಳು ಏಕಮುಕವಾಗಿ ಬಳಕೆಯಾಗುತ್ತವೆ. ಅಂದರೆ ಆ ಮಾತಿನ ಸನ್ನಿವೇಶದಲ್ಲಿ ಯಾರ ಸಾಮಾಜಿಕ ಅಂತಸ್ತು ಹೆಚ್ಚಾಗಿರುತ್ತದೆಯೋ ಅವರು ಮಾತ್ರ ಗಾದೆಗಳನ್ನು ಬಳಸುತ್ತಾರೆ. ಸಾಮಾಜಿಕ ಅಂತಸ್ತು ಎನ್ನುವುದು ವ್ಯಕ್ತಿಯ ಲಿಂಗ-ವಯಸ್ಸು-ಜಾತಿ-ಮತ-ವಿದ್ಯೆ-ಕಸುಬು-ಸಂಪತ್ತಿನ ಸಂಗತಿಗಳನ್ನು ಅವಲಂಬಿಸಿರುತ್ತದೆ.

ಅಕ್ಕರ ಕಲಿತಿರುವ ಜನರು ತಮ್ಮ ಮಾತುಕತೆಗಳಲ್ಲಿ ನಗರ ಪರಿಸರದ ನುಡಿಸಾಮಗ್ರಿಗಳನ್ನು ಅಂದರೆ ಶಿಕ್ಶಣದ ಮೂಲಕ ಕನ್ನಡಕ್ಕೆ ಎರವಲಾಗಿ ಬಂದಿರುವ ಸಂಸ್ಕ್ರುತ ಹಾಗೂ ಇಂಗ್ಲಿಶಿನ ಪದಗಳನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಗಾದೆಗಳ ಬಳಕೆಯು ಕಡಿಮೆಯಾಗಿದೆ. ನುಡಿಸಮುದಾಯಕ್ಕೆ ಸೇರಿದ ಪ್ರಾದೇಶಿಕ ಮತ್ತು ಸಾಮಾಜಿಕ ಒಳನುಡಿಗಳನ್ನಾಡುವ ಜನರಿಂದ ದೂರವಾಗಿ, ನುಡಿಸಮುದಾಯದ ಸಂಸ್ಕ್ರುತಿಯ ಆಚರಣೆಗಳನ್ನು ಕಯ್ ಬಿಟ್ಟು, ನಗರೀಕರಣದ ನಡೆನುಡಿಗಳನ್ನು ಅನುಸರಿಸುತ್ತಿರುವುದರಿಂದ ಗಾದೆಗಳ ಬಳಕೆಯ ಪ್ರಮಾಣ ನಗರ ಪ್ರದೇಶಗಳಲ್ಲಿ ತಗ್ಗಿದೆ.

(ಚಿತ್ರ ಸೆಲೆ: play.google.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ನನ್ನ ಅನುಬವದಿಂದ ನಾನೇ ಕಟ್ಟಿದ ಗಾದೆ – “ಸುತ್ತಿಕೊಂಡು ಹೋದರು ಸುಕವಾಗಿ ಹೋಗು”. shortcut ದಾರಿಯಲ್ಲಿ ಹೋಗಿ ಹದಗೆಟ್ಟ ರಸ್ತೆಯಲ್ಲಿ ಸಿಕ್ಕಿಕೊಂಡಾಗ ಹೊಳೆದದ್ದು.

ಅನಿಸಿಕೆ ಬರೆಯಿರಿ: