ರವೀಂದ್ರನಾತ ಟ್ಯಾಗೋರರ ಕವನಗಳು ಓದು – 8 ನೆಯ ಕಂತು

– ಸಿ.ಪಿ.ನಾಗರಾಜ.

(ರವೀಂದ್ರನಾತ ಟ್ಯಾಗೋರ್ ಅವರು ಬಂಗಾಳಿ ಮತ್ತು ಇಂಗ್ಲಿಶ್ ನುಡಿಯಲ್ಲಿ ರಚಿಸಿರುವ 666 ಕಿರುಕವಿತೆಗಳನ್ನು ಜಿ.ರಾಮನಾತ ಬಟ್ ಅವರು ‘ಚದುರಿದ ಹಕ್ಕಿಗಳು’ ಎಂಬ ಹೆಸರಿನಲ್ಲಿ ಕನ್ನಡ ನುಡಿಗೆ ಅನುವಾದ ಮಾಡಿದ್ದಾರೆ. ಟ್ಯಾಗೋರ್ ಅವರು ತಮ್ಮ ಕಿರುಕವಿತೆಗಳಿಗೆ ತಲೆಬರೆಹವಾಗಿ ಹೆಸರುಗಳನ್ನು ನೀಡಿಲ್ಲ. ಈ ಕಿರುಕವಿತೆಗಳ ಮೊದಲ ಸಂಕಲನವನ್ನು ಕ್ರಿ.ಶ.1899 ರಲ್ಲಿ ‘ಕಣಿಕಾ’ಎಂಬ ಹೆಸರಿನಲ್ಲಿ ಟ್ಯಾಗೋರ್ ಅವರು ಪ್ರಕಟಿಸಿದ್ದರು. ‘ಕಣಿಕಾ’ ಎಂಬ ಬಂಗಾಳಿ ಪದಕ್ಕೆ ಕನ್ನಡದಲ್ಲಿ ‘ತುಣುಕುಗಳು’ ಎಂಬ ತಿರುಳಿದೆ.)

*** ಚದುರಿದ ಹಕ್ಕಿಗಳು ***

ಸಹಯೋಗಿಗಳಲಿ ಪ್ರೀತಿಯ ಬಯಸುವನು ದೇವ
ದೆವ್ವ ಬಯಸುತಲಿಹುದು ಬರಿ ದಾಸ್ಯ ಭಾವ
ಕ್ರೂರ ದೊರೆಗೂ ಇಹುದು ಸ್ವಾತಂತ್ರ್ಯದಾ ಬಯಕೆ
ಪ್ರಜೆಗಳಾ ಸ್ವಾತಂತ್ರ್ಯಹರಣ ಮಾಡಲಿಕೆ
ಯಾರು ಪ್ರಶ್ನಿಸದಂಥ ಪರಮ ಸ್ವಾತಂತ್ರ್ಯವನು
ತನಗಷ್ಟೆ ಬೇಕೆಂದು ಅವನು ಬಯಸುವನು.

ಕ್ರೂರವಾದ ನಡೆನುಡಿಯುಳ್ಳ ರಾಜನ ಇಲ್ಲವೇ ನಾಡಿನ ಉನ್ನತವಾದ ಆಡಳಿತದ ಗದ್ದುಗೆಯಲ್ಲಿರುವ ಕ್ರೂರಿಯಾದ ವ್ಯಕ್ತಿಯ ಮನದ ಬಯಕೆಗಳೇನು ಎಂಬುದನ್ನು ಈ ಕವನದಲ್ಲಿ ಹೇಳಲಾಗಿದೆ.

ಸಹಯೋಗಿ=ಸಂಗಡಿಗ/ಜತೆಗಾರ; ಪ್ರೀತಿ=ಅನುರಾಗ/ಒಲವು; ಬಯಸು=ಹಂಬಲಿಸು/ಕೋರು;

ದೇವ=ದೇವರು. ಈ ಪದ ಒಂದು ರೂಪಕವಾಗಿ ಬಳಕೆಗೊಂಡಿದೆ. ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿ;

ಸಹಯೋಗಿಗಳಲಿ ಪ್ರೀತಿಯ ಬಯಸುವನು ದೇವ=ತನ್ನ ಜತೆಗಾರರನ್ನು/ಪ್ರಜೆಗಳನ್ನು/ಸಹಮಾನವರನ್ನು ಪ್ರೀತಿ, ಕರುಣೆ, ಗೆಳೆತನ ಮತ್ತು ಸಮಾನತೆಯ ಮೂಲಕ ಕಾಣುತ್ತ, ಅವರಿಂದಲೂ ಅದೇ ಬಗೆಯ ವರ್‍ತನೆಯನ್ನು ಬಯಸುವವನು ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿಯಾಗಿರುತ್ತಾನೆ;

ದೆವ್ವ=ಪಿಶಾಚಿ. ಈ ಪದ ಒಂದು ರೂಪಕವಾಗಿ ಬಳಕೆಗೊಂಡಿದೆ. ಕೆಟ್ಟ ನಡೆನುಡಿಯುಳ್ಳ ವ್ಯಕ್ತಿ;

‘ದೇವರು ಮತ್ತು ದೆವ್ವ’ ಎಂಬುವು ಮಾನವನ ಮನದಲ್ಲಿ ಮೂಡಿರುವ ಎರಡು ಶಕ್ತಿಗಳೇ ಹೊರತು ವಾಸ್ತವ ಜಗತ್ತಿನಲ್ಲಿಲ್ಲ;

ಬಯಸುತಲ್+ಇಹುದು; ಇಹುದು=ಇರುವುದು; ಬರಿ=ಕೇವಲ; ದಾಸ್ಯ=ವ್ಯಕ್ತಿಯು ತನ್ನ ಇಚ್ಚೆಯಂತೆ ಬಾಳುವುದಕ್ಕಾಗದೆ, ಮತ್ತೊಬ್ಬರ ಹತೋಟಿಗೆ ಒಳಪಟ್ಟು ಬಾಳುವುದು; ಭಾವ=ಮನದ ಒಳಮಿಡಿತ;

ದೆವ್ವ ಬಯಸುತಲಿಹುದು ಬರಿ ದಾಸ್ಯ ಭಾವ= ಜತೆಗಾರರು/ಪ್ರಜೆಗಳು/ಸಹಮಾನವರು ತನಗೆ ಅಡಿಯಾಳುಗಳಾಗಿ ಬಾಳುತ್ತ, ತನ್ನ ಹತೋಟಿಯಲ್ಲಿಯೇ ಇರುವಂತಾಗಬೇಕು/ತಾನು ಹೇಳಿದಂತೆ ಕೇಳಿಕೊಂಡು ಇರಬೇಕು ಎಂದು ಹಂಬಲಿಸುವವನು ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಯಾಗಿರುತ್ತಾನೆ;

ಕ್ರೂರ=ಕರುಣೆಯಿಲ್ಲದ ವ್ಯಕ್ತಿ; ದೊರೆ=ರಾಜ; ಕ್ರೂರ ರಾಜ=ದುಡಿಯುವ ಶ್ರಮಜೀವಿಗಳ ಹಸಿವು, ಬಡತನ, ಅಪಮಾನ, ಸಾವು ನೋವಿನ ಬಗ್ಗೆ ತುಸುವಾದರೂ ಕಾಳಜಿಯಿಲ್ಲದೆ, ತನ್ನ ಆಡಳಿತದ ಗದ್ದುಗೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಯಾರನ್ನು ಬೇಕಾದರೂ ಬಲಿ ತೆಗೆದುಕೊಳ್ಳುವ ಇಲ್ಲವೇ ಎಂತಹ ಹೀನ ಕೆಲಸವನ್ನು ಬೇಕಾದರೂ ಮಾಡುವ ಕ್ರೂರಿಯಾದ ರಾಜ;

ಸ್ವಾತಂತ್ರ್ಯದ+ಆ; ಸ್ವಾತಂತ್ರ್ಯ=ವ್ಯಕ್ತಿಯು ಯಾವುದೇ ಕಟ್ಟುಪಾಡುಗಳಿಗೆ ಇಲ್ಲವೇ ಯಾವುದೇ ವ್ಯಕ್ತಿಯ ಅಂಕೆಗೆ ಒಳಪಡದೆ, ತನಗೆ ಸರಿತೋರಿದಂತಹ ರೀತಿಯಲ್ಲಿ ಬಾಳುವುದು; ಬಯಕೆ=ಹಂಬಲ/ಆಸೆ/ಇಚ್ಚೆ; ಪ್ರಜೆ=ಜನತೆ; ಹರಣ=ಕಿತ್ತುಕೊಳ್ಳುವುದು/ನಾಶಗೊಳಿಸುವುದು; ಮಾಡಲಿಕೆ=ಮಾಡುವುದಕ್ಕೆ;

ಕ್ರೂರ ದೊರೆಗೂ ಇಹುದು ಸ್ವಾತಂತ್ರ್ಯದಾ ಬಯಕೆ… ಪ್ರಜೆಗಳಾ ಸ್ವಾತಂತ್ರ್ಯಹರಣ ಮಾಡಲಿಕೆ=ಅತ್ಯಂತ ಕ್ರೂರಿಯಾದ ದೊರೆಯ ಮನದಲ್ಲಿಯೂ ಸ್ವಾತಂತ್ರ್ಯದ ಬಯಕೆಯಿದೆ. ಆದರೆ ಆ ಸ್ವಾತಂತ್ರ್ಯ ಅವನೊಬ್ಬನಿಗೆ ಮಾತ್ರ. ಅಂದರೆ “ತಾನೊಬ್ಬ ಮಾತ್ರ ಎಲ್ಲ ರೀತಿಯಿಂದಲೂ ಸ್ವತಂತ್ರನಾಗಿರಬೇಕು. ತನ್ನನ್ನು ಹೊರತುಪಡಿಸಿ ಇನ್ನುಳಿದವರೆಲ್ಲರೂ ತನಗೆ ಗುಲಾಮರಾಗಿರಬೇಕು” ಎಂಬ ಉದ್ದೇಶದಿಂದ ಪ್ರಜೆಗಳೆಲ್ಲರ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಅವರು ಸದಾಕಾಲ ಹೆದರಿಕೆ ಮತ್ತು ಆತಂಕದಿಂದ ನರಳುತ್ತಿರಲೆಂದು ತನ್ನ ಸೇನಾಬಲದಿಂದ ಪ್ರಜೆಗಳ ಮಾನ ಮತ್ತು ಪ್ರಾಣಕ್ಕೆ ಕೇಡನ್ನು ಬಗೆಯುತ್ತಿರುತ್ತಾನೆ. ‘ಸ್ವಾತಂತ್ರ್ಯ ಹರಣ’ ಎಂದರೆ ಜನರು ನೆಮ್ಮದಿಯಿಂದ ಬದುಕುವ ಹಕ್ಕನ್ನೇ ಕಸಿದುಕೊಳ್ಳುತ್ತಾನೆ;

ಪ್ರಶ್ನೆ=ಮತ್ತೊಬ್ಬರ ನಡೆನುಡಿಯಲ್ಲಿ ಕಂಡುಬರುವ ಸಂಗತಿಗಳಿಗೆ ಕಾರಣವನ್ನು ಕೇಳುವುದು; ಪರಮ=ಹೆಚ್ಚಾದ/ಅತಿಶಯವಾದ; ಪರಮ ಸ್ವಾತಂತ್ರ್ಯ=ವ್ಯಕ್ತಿಯ ನಡೆನುಡಿಗಳಿಗೆ ಯಾವುದೇ ಬಗೆಯ ನಿಯಂತ್ರಣವಿಲ್ಲದಿರುವುದು ಮತ್ತು ಯಾರಿಂದಲೂ ಅಡ್ಡಿ ಆತಂಕವಿಲ್ಲದಿರುವುದು;

ಯಾರು ಪ್ರಶ್ನಿಸದಂಥ ಪರಮ ಸ್ವಾತಂತ್ರ್ಯವನು… ತನಗಷ್ಟೆ ಬೇಕೆಂದು ಅವನು ಬಯಸುವನು=ತನ್ನ ನಡೆನುಡಿಯನ್ನು ಇಲ್ಲವೇ ತಾನು ಕೈಗೊಳ್ಳುವ ಯಾವುದೇ ಕೆಲಸವನ್ನು ಇಲ್ಲವೇ ತಾನು ಮಾಡುವ ಕಾನೂನು ಕಟ್ಟಲೆಗಳನ್ನು ಕುರಿತು ಪ್ರಜೆಗಳಲ್ಲಿ ಯಾರೊಬ್ಬರೂ ಎದುರಾಡಬಾರದು. ಪ್ರಜೆಗಳೆಲ್ಲರೂ ತನ್ನ ಆಣತಿಯಂತೆಯೇ ತಲೆಬಾಗಿ ನಡೆಯಬೇಕೆಂದು ಕ್ರೂರಿಯಾದ ರಾಜನು ಬಯಸುತ್ತಾನೆ;

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks