ಯಾರ ಸಾವಿಗೆ ಯಾರು ಹೊಣೆ?

– ರತೀಶ ರತ್ನಾಕರ.

cylinder-burst
ಅದೊಂದು ಸಂಜೆ. ಹಗಲೆಲ್ಲಾ ಸುರಿದ ಮಳೆ ಆಗಶ್ಟೇ ಬಿಡುವು ಪಡೆದಿತ್ತು. ಮುದ್ದಳ್ಳಿಯ ನಿಲ್ದಾಣದಲ್ಲಿ ಪ್ರಯಾಣಿಕರಾಗಲಿ, ನಿಲ್ದಾಣದ ಎದುರುಗಿದ್ದ ಅಂಗಡಿಯಲ್ಲಿ ಗಿರಾಕಿಗಳಾಗಲಿ ಯಾರೂ ಇರಲಿಲ್ಲ. ಅಂಗಡಿಯ ಪಕ್ಕದಲ್ಲೇ ಕಾಲಿ ಆಟೋವೊಂದು ನಿಂತಿತ್ತು. ದಾರಿಯಲ್ಲಿಯೂ ಯಾವ ಕಾರು ಬಸ್ಸಿನ ಓಡಾಟವಿಲ್ಲದೆ, ಸಂಜೆಯ ಮೌನವೊಂದು ತನ್ನ ತಿರುಗಾಟವನ್ನು ನಡೆಸಿತ್ತು. ಆ ಹೊತ್ತಿಗೆ, ಮೋಟಾರು ಬೈಕೊಂದು ಬುರ‍್ರೆಂದು ಮೌನವನ್ನು ಸೀಳಿಕೊಂಡು ಅಂಗಡಿಯ ಮುಂದೆ ಬಂದು ನಿಂತಿತು. ಮೋಟಾರು ಬೈಕಿನಿಂದ ಇಳಿದವನು ಅಂಗಡಿಯ ಕಡೆ ನಡೆದು, “ಒಂದು ಪ್ಯಾಕ್ ಸಿಗೆರೇಟ್ ಕೊಡಿ” ಎಂದು ಕೇಳಿದ.

ಲೆಕ್ಕದ ಹೊತ್ತಿಗೆಯಲ್ಲಿ ಮುಳುಗಿದ್ದ ನಂಜುಂಡಣ್ಣ, ಗಿರಾಕಿ ಯಾರೆಂದು ಕಣ್ಣೆತ್ತಿ ನೋಡಿ, “ಓಹ್, ಮುಗಿಲ್, ಯಾವಾಗ ಬಂದಿದ್ದು? ಮತ್ತೆ ಏನಪ್ಪ ಸಮಾಚಾರ? ಬೆಂಗಳೂರೆಲ್ಲಾ ಚೆನ್ನಾಗಿದ್ಯಾ? ಆ ಕಡೆ ಮಳೆ ಏನಾದ್ರು ಇತ್ತ?” – ಸಿಗರೇಟು ಪ್ಯಾಕನ್ನು ಕೊಡುತ್ತ ಪರಿಚಯದ ಮಾತನ್ನಾಡಿದರು.

“ನಿನ್ನೆ ರಾತ್ರಿ ಬಸ್ಸಿಗೆ ಬಂದೆ ನಂಜುಂಡಣ್ಣ, ಸದ್ಯಕ್ಕೇನು ಅಲ್ಲಿ ಮಳೆ ಇರಲಿಲ್ಲ” – ಜೇಬಿನಿಂದ ತೆಗೆದ ನೋಟುಗಳನ್ನು ನಂಜುಂಡಣ್ಣನಿಗೆ ಕೊಡುತ್ತ, “ಈ ಪೇಪರ್ ಇವತ್ತಿಂದಾ?” ಎಂದು ತಿಂಡಿ ಡಬ್ಬಿಗಳ ಮೇಲಿಟ್ಟಿದ್ದ ಪೇಪರನ್ನು ಕೈಗೆತ್ತಿಕೊಂಡ.

ಪೇಪರನ್ನು ಬಿಡಿಸಿ ಸುದ್ದಿಗಳ ಮೇಲೆ ಕಣ್ಣಾಡಿಸುತ್ತ “ನಗರದಲ್ಲಿ ಗ್ಯಾಸ್ ಸಿಲಿಂಡರ್ ಸಿಡಿದು ಮೂರು ಸಾವು” ಎಂದು ಜೋರಾಗಿಯೇ ಓದಿಕೊಂಡ.

“ಇತ್ತೀಚೆಗೆ ಇಂತಹ ಸಾವುಗಳು ಜಾಸ್ತಿ ಆಗ್ತಾ ಇದ್ದಾವಪ್ಪ. ಸಿಲಿಂಡರ್ ವಿಶಯದಲ್ಲಿ ಜೋಪಾನವಾಗಿರಬೇಕು ಅಂತ ನಮ್ಮ ಮಂದಿಗೆ ಯಾವಾಗ ತಿಳಿಯುತ್ತೋ ಏನೋ?”

ನಂಜುಂಡಣ್ನ ಅವನ ಮಾತಿಗೆ ಉತ್ತರಿಸಲು ಹೋಗಲಿಲ್ಲ. ಅದೇ ಹೊತ್ತಿಗೆ, ಸುಮಾರು ಆರು ವರುಶ ವಯಸ್ಸಿನ ಸ್ಕೂಲಿನ ಹುಡುಗನೊಬ್ಬ ಬಂದು, ಅಂಗಡಿಯಲ್ಲಿ ಎರಡು ಕಡ್ಲೆ ಮಿಟಾಯಿಗಳನ್ನು ಕೊಂಡು ಹೊರನಡೆದ. ಆತ ನೇರವಾಗಿ ಎದುರಿನ ಬಸ್ ನಿಲ್ದಾಣಕ್ಕೆ ಹೋದ. ತನ್ನ ಸಣ್ಣ ಕೊರಳನ್ನು ನೆಟ್ಟಗೆ ಮಾಡಿ, ಯಾರದ್ದೋ ಬರುವಿಕೆಯನ್ನು ಎದುರು ನೋಡುತ್ತಾ ದಾರಿಯ ಕಡೆ ಮುಕಮಾಡಿ ಕುಳಿತ. ಇತ್ತ ಮುಗಿಲ್ ತಾನು ಪೇಪರ್ ಓದುವುದನ್ನು ನಿಲ್ಲಿಸಿ ಆ ಹುಡಗನ ಕಡೆ ನೋಡಿ, ಆತ ತನಗೆ ಗೊತ್ತಿರುವ ಹುಡಗರಲ್ಲೊಬ್ಬನೋ? ಅಲ್ಲವೋ? ಎಂದು ಯೋಚಿಸುತ್ತಿದ್ದ.

“ಏನೂಂದ್ರೆ, ಕಾಪಿ ತಗೋಳಿ” – ಮಡದಿ ಮಂಜಮ್ಮ ಒಳಕೋಣೆಯಿಂದ ಒಂದು ಲೋಟ ಕಾಪಿಯನ್ನು ತಂದರು. ಅಂಗಡಿಯ ಹೊರಗೆ ಮುಗಿಲ್ ನಿಂತಿರುವುದನ್ನು ನೋಡಿ, ನಗುತ್ತಾ – “ಓಹ್ ಮುಗಿಲ್, ಹೆಂಗಿದ್ಯಪ್ಪ? ಯಾವಾಗ ಬಂದೆ?”

ಹುಡುಗನನ್ನೇ ನೋಡುತ್ತ ಸಿಗರೇಟು ಎಳೆಯುತ್ತಿದ್ದ ಮುಗಿಲ್ ತಿರುಗಿ, “ನಿನ್ನೆ ರಾತ್ರಿ ಬಸ್ಸಿಗೆ ಬಂದೆ. ಚೆನ್ನಾಗಿದ್ದೀರಾ?” ಎಂದು ಕೇಳಿ, ಮಂಜಮ್ಮನ ಮರುಮಾತಿಗೆ ಕಾಯದೆ ಮತ್ತೆ ಹುಡುಗನ ಕಡೆಗೆ ನೋಡಿ – “ಅವ್ನು ಆಟೋ ಮಂಜಣ್ಣನ ಮಗ ಅಲ್ವಾ?”

“ಹೌದಪ್ಪ. ಪಾಪದ್ದು, ತಬ್ಬಲಿ ಹುಡುಗ” – ಸಣ್ಣ ನೋವಿನಿಂದ ಮಂಜಮ್ಮ ನುಡಿದರು.

“ಚೇ, ಪಾಪ. ಗ್ಯಾಸ್ ಸಿಲಿಂಡರ್ ಸಿಡಿದು ಮನೆ-ಮಟ ಎಲ್ಲಾ ಸುಟ್ಟು ಹೋಗಿದ್ಯಂತಲ್ವ?”

“ಅದನ್ನ ಯಾವ ಬಾಯಲ್ಲಿ ಹೇಳೋದು ನೋಡಪ್ಪ. ಆ ಹುಡುಗನ ಅಮ್ಮ ಸತ್ತೇ ಹೋಗಿ ಬಿಟ್ಳು. ಜೊತೆಗೆ ಆ ಹುಡುಗನ ಅಕ್ಕನೂ ಸುಟ್ಟು ಹೋಗಿದ್ದಾಳೆ. ಅಯ್ಯೋ… ಆ ರಂಪ-ರಾಮಾಯಣ ಈ ಕಣ್ಣಲ್ಲಿ ನೋಡೋಕೆ ಆಗ್ತಾ ಇರ‍್ಲಿಲ್ಲ ಬಿಡು. ಅವರಕ್ಕ ಈಗ ಚಿಕ್ಕಮಗಳೂರು ದೊಡ್ಡಾಸ್ಪತ್ರೆಯಲ್ಲಿ ಇದ್ದಾಳೆ. ಆ ಹುಡುಗಿ ಬದುಕಿ ಉಳಿದಿದ್ದೇ ಹೆಚ್ಚು”

“ಪೇಪರ‍್ನಲ್ಲೂ ಅವೇ ಸುದ್ದಿ, ಊರಲ್ಲೂ ಅವೇ ಸುದ್ದಿ. ಬೇಜಾರಾಗುತ್ತಪ್ಪ. ಹೆಂಗೆ ಸಿಡಿತು? ಏನಾಗಿತ್ತು ಅಂತ ಗೊತ್ತಾಯ್ತಾ? ” – ಮುಗಿಲ್ ಕೇಳಿದ.

ಲೆಕ್ಕದ ಹೊತ್ತಗೆಯಲ್ಲಿ ಮುಳುಗಿದ್ದ ನಂಜುಂಡಣ್ಣ, ತಲೆಯೆತ್ತಿ ಮಡದಿಯ ಮಾತುಗಳನ್ನು ಆಲೈಸುತ್ತ, ಕುಳಿತರು. ಮಡದಿಯು ಮುಂದುವರಿದು. “ಅವತ್ತು, ಈ ಹುಡುಗನ ಅಕ್ಕನಿಗೆ ಜ್ವರ ಬಂದು, ಸ್ಕೂಲಿಗೆ ರಜ ಹಾಕಿ ಮನೆಯಲ್ಲೇ ಮಲಗಿದ್ಲು. ಅವತ್ತೇ ಗ್ಯಾಸಿನವರು ಬಂದು, ಗ್ಯಾಸ್ ಹಂಡೆಯನ್ನ ಇಳಿಸಿ ಹೋಗಿದ್ದಾರೆ. ಇವರಮ್ಮ ಹಂಡೆಯನ್ನ ಅಡುಗೆಮನೆಗೆ ತಂದಿಟ್ಟಿದ್ದಾಳೆ, ಹಂಡೆಯನ್ನ ಇನ್ನೂ ಒಲೆಗೆ ಕೂರಿಸಿರಿಲಿಲ್ಲಂತೆ. ಜ್ವರದಲ್ಲಿ ಮಲಗಿದ್ದ ಹುಡುಗಿಗೆ ರವೆ ಗಂಜಿ ಕುಡಿಸಿ ಆಮೇಲೆ ಒಲೆಗೆ ಕೂರ‍್ಸಿದ್ರೆ ಆಯ್ತು ಅನ್ಕೊಂಡು ಇದ್ಲಂತೆ. ಆ ಹಂಡೆ, ತಂದು ಕೊಡೋ ಮುಂಚೇನೆ ಸೋರ‍್ತಾ ಇತ್ತೋ ಏನೋ. ಸ್ವಲ್ಪ ಹೊತ್ತಿಗೆ ಗ್ಯಾಸ್ ವಾಸನೆ ಬಂದಿದೆ. ಏನಾಗಿದೆ ಅಂತ ನೋಡೋಕೆ ಇವರಮ್ಮ ಅಡುಗೆ ಮನೆಗೆ ಹೋಗಿದ್ದಾಳೆ. ‘ಹಂಡೆಯಲ್ಲಿ ಗ್ಯಾಸ್ ಸೋರ‍್ತಾ ಇದೆ ಏನ್ ಮಾಡೋದು ಮಗಳೇ?’ ಅಂದಿದ್ದಾಳೆ ಅಶ್ಟೇ… ಕೂಡಲೆ ‘ಬಡಾರ‍್’ ಅಂತ ಹಂಡೆ ಸಿಡಿದು ಅಲ್ಲೇ ಸುಟ್ಟು ಕರಕಲಾಗಿ ಬಿಟ್ಲು. ನಡುಮನೆಯಲ್ಲಿ ಮಲಗಿದ್ದ ಈ ಹುಡುಗಿ ಎದ್ದು ‘ಅಮ್ಮಾ..’ ಅಂತಾ ಬೆಂಕಿ ಬಂದ ಕಡೆಗೇ ಓಡಿಹೋಗಿ, ಮೈಯೆಲ್ಲಾ ಸುಟ್ಟುಕೊಂಡು ಬಿಟ್ಟಿದ್ದಾಳೆ”

“ಹೀಗಾಗ ಬಾರದಿತ್ತು. ಅಲ್ಲಾ, ಅವರ ಅಡುಗೆ ಮನೆಯಲ್ಲಿ ಸೌದೆಒಲೆ ಬೆಂಕಿ ಏನಾದ್ರು ಇತ್ತ? ನನಗೆ ಗೊತ್ತಿರೋ ಹಂಗೆ ಸುಮ್ ಸುಮ್ನೆ ಹಂಡೆ ಸಿಡಿಯೋದಿಲ್ಲ”

“ಸೌದೆಒಲೆ ಇವರ ಮನೆಹೊರಗೆ ಕೊಟ್ಟಿಗೆಯಲ್ಲಿದೆ. ಆ ಹುಡುಗಿಗೆ ಜ್ವರ ಬಂದಿತ್ತಲ್ಲ, ಅದಕ್ಕೆ ಜಕಣಿ ತೊಂದ್ರೆ ಇರಬೇಕು ಅಂತ ಹಿಂದಿನ ದಿವಸ ರಾತ್ರಿ ಹಿತಾರು ಕೂರಿಸಿ ಎಡೆ ಇಟ್ಟಿದ್ರಂತೆ. ಅಡುಗೆ ಮನೆ ಬಾಗ್ಲು ಹತ್ರನೆ ಇವರು ಎಡೆ ಇಡೋದು. ಇವರಮ್ಮ ಬೆಳಗ್ಗೆ ಎದ್ದು ಹಿತಾರಿಗೆ ದೀಪ ಇಟ್ಟು, ಊದುಬತ್ತಿ ಹಚ್ಚಿದ್ಲಂತೆ. ಅದೇ ದೀಪಕ್ಕೆ ಹತ್ಕಂಡು ಹಂಡೆ ಸಿಡಿತೋ ಏನೋ ಅಂತಾರೆ. ಮನೆದೇವ್ರೇ ಮನೆ ಮುರಿಯೋದು ಅಂದ್ರೆ ಇದೇ ನೋಡು. ಈ ಹುಡುಗ ಸ್ಕೂಲಿಗೆ ಹೋಗದೆ ಇರದಿದ್ರೆ ಮಂಜಣ್ಣನಿಗೆ ಮಗಾನೂ ಕೈ ತಪ್ಪಿ ಹೋಗ್ತಿದ್ದ. ದೇವ್ರ ದಯೆ ಉಳ್ಕೊಂಡ”

ಮಾತನ್ನು ಮುಂದುವರಿಸಿದ ಮಂಜಮ್ಮ, “ಈಗ, ಈ ಹುಡುಗ ಬಂದು ಕಾಯೋದು ನೋಡುದ್ರೆ ಹೊಟ್ಟೆಗೆ ಕೊಳ್ಳಿ ಇಟ್ಟಂಗೆ ಆಗುತ್ತೆ. ಇನ್ನೂ ಚಿಕ್ಕ ಹುಡುಗ, ಏನೇನಾಗಿದೆ ಅಂತ ಸರಿಯಾಗಿ ಗೊತ್ತಿಲ್ಲ ಇವನಿಗೆ. ಯಾವುದೋ ಎಕ್ಸಾಮ್ ಬರೆಯೋಕೆ ಅಕ್ಕ ಚಿಕ್ಕಮಗಳೂರಿಗೆ ಹೋಗಿದ್ದಾಳೆ ಅಂತ ಸುಳ್ಳು ಹೇಳಿ, ಇವರಪ್ಪ ದಿನ ದೂಡ್ತಾ ಇದ್ದಾನೆ. ಅಕ್ಕ-ತಮ್ಮ ಯಾವಗ್ಲೂ ಒಟ್ಟಿಗೆ ಸ್ಕೂಲಿಗೆ ಹೋಗಿ ಬರ‍್ತಾ ಇದ್ವು. ಇಬ್ರೂ ಒಂದೊಂದು ಕಡ್ಲೆ ಮಿಟಾಯಿಯನ್ನ ತಗೊಂಡು ಒಟ್ಟಿಗೆ ತಿನ್ಕೊಂಡು ಹೋಗ್ತಾ ಇದ್ವು. ಈಗ, ಈ ಹುಡುಗ ದಿನಾ ಬರ‍್ತಾನೆ, ಮಿಟಾಯಿ ತಗೊಂಡು ಅವರಕ್ಕ ಬರೋದನ್ನೇ ಕಾಯ್ತಾನೆ. ಅವರಪ್ಪ ಬಂದು ಕರಕೊಂಡು ಹೋಗೋವರೆಗು ಇಲ್ಲೇ ಕೂತಿರ‍್ತಾನೆ. ಆ ತಿಂಡಿಯನ್ನ ಕೈಯಲ್ಲೇ ಇಟ್ಕೊಂಡಿರ‍್ತಾನೆ. ಮನೆಗೆ ಹೋದ ಮೇಲಾದ್ರು ತಿನ್ನುತ್ತೋ ಇಲ್ವೋ”

ಆ ಹೊತ್ತಿಗೆ ಬಸ್ಸೊಂದು ಬಂದು ಅಂಗಡಿಯ ಮುಂದೆ ನಿಂತಿತು. ಬಸ್ಸಿನಿಂದ ಇಳಿದ ಕೆಲವು ಮಂದಿಯಲ್ಲಿ ಆಟೋ ಮಂಜಣ್ಣನೂ ಇದ್ದರು. ಅಪ್ಪನನ್ನು ನೋಡಿದ ಕೂಡಲೇ ಈ ಹುಡುಗ ಓಡಿಹೋಗಿ ಅಪ್ಪನನ್ನು ಹಿಡಿದುಕೊಂಡ. ಮಗನನ್ನು ಎತ್ತಿಕೊಂಡ ಮಂಜಣ್ಣ ಅಂಗಡಿಯ ಕಡೆಗೆ ನಡೆದ.

“ಅಪ್ಪಯ್ಯ, ಅಕ್ಕ ಇವತ್ತೂ ಬರ‍್ಲಿಲ್ವ?”

“ಇಲ್ಲ ಮಗ, ಎಕ್ಸಾಮು ಮುಗಿಯಕ್ಕೆ ಇನ್ನು ಸ್ವಲ್ಪ ದಿನ ಆಗುತ್ತಂತೆ. ಆಮೇಲೆ ಬರ‍್ತಾಳೆ ಆಯ್ತಾ”

ಅಂಗಡಿ ಎದುರು ನಿಂತಿದ್ದ ಮುಗಿಲ್ ಕಡೆಗೆ ಪರಿಚಯದ ನಗೆ ಬೀರಿದ ಮಂಜಣ್ಣ, “ಮಂಜಮ್ಮ, ಸೀಮೆಎಣ್ಣೆ ಇದ್ರೆ ಸ್ವಲ್ಪ ಕೊಡಿ. ಮನೆಯಲ್ಲಿ ತೀರಿ ಹೋಗಿಬಿಟ್ಟಿದೆ. ಸುಟ್ಟುಹೋಗಿರೋ ತಂತಿಯನ್ನ ಸರಿಮಾಡ್ತೀವಿ ಅಂದ ಕೆಇಬಿಯವರು ಇನ್ನು ಬಂದಿಲ್ಲ ನೋಡಿ”

“ಸೀಮೆಎಣ್ಣೆಯದೇ ತೊಂದ್ರೆ ಮಂಜಣ್ಣ. ಸೊಸೈಟಿಯಲ್ಲಿ ಈಗ ಸಿಗೋದೇ ಕಶ್ಟ ಆಗಿದೆ. ಮನೆಗೆ ಅಂತ ಒಂದು ಸ್ವಲ್ಪ ಇಟ್ಕೊಂದಿನಿ ಅದನ್ನೇ ಕೊಡ್ತಿನಿ ಇರು” ಎಂದು ಎಣ್ಣೆಯನ್ನು ತರಲು ಒಡತಿ ಒಳನಡೆದಳು. ಇತ್ತ ನಂಜುಂಡಣ್ಣ ಸಣ್ಣ ದನಿಯಲ್ಲಿ, ಮಂಜಣ್ಣನ ಮಗನಿಗೆ ತಿಳಿಯದಂತೆ ಮಾತನಾಡಲು ಯತ್ನಿಸುತ್ತ “ಹೆಂಗಿದ್ದಾಳೆ? ಏನಂದ್ರು?” ಎಂದು ಕೇಳಿದರು.

“ಪುಟ್ಟ, ಹೋಗು ಆಟೋದಲ್ಲಿ ಕೂತ್ಕೊಂಡಿರು. ಈಗ ಬರ‍್ತಿನಿ.” ಎಂದು ಮಗನನ್ನು ಅಲ್ಲಿಂದ ಕಳಿಸಿದ ಮಂಜಣ್ಣ, ನಂಜುಂಡಣ್ಣನ ಕಡೆ ತಿರುಗಿ –
“ಇವತ್ತು ಪರವಾಗಿಲ್ಲ, ಸ್ವಲ್ಪ ಗಂಜಿ ಕುಡಿದ್ಳು, ಮಾತಾಡಿದ್ಳು. ಅಮ್ಮ ಎಲ್ಲಿ? ತಮ್ಮ ಎಲ್ಲಿ? ಅಂತ ಒಂದು ನೂರು ಸಲ ಕೇಳಿದ್ಲು. ನನ್ನ ಮುಕ ನೋಡ್ಕೊಬೇಕು ಕನ್ನಡಿ ಕೊಡಿ, ಅಂತ ಕೇಳ್ತಾನೆ ಇರ‍್ತಾಳೆ. ಇವತ್ತು ರಾತ್ರಿ ನಿದ್ದೆ ಮಾಡ್ತಾಳೋ? ಇಲ್ವೋ?” ಎಂದು ತೇವವಾದ ಕಣ್ಣುಗಳನ್ನು ಉಜ್ಜಿಕೊಂಡ.

“ಮಂಜಣ್ಣ, ಸುದ್ದಿ ಕೇಳಿ ತುಂಬಾ ಬೇಜಾರಾಯ್ತು. ಸಮಾದಾನ ಮಾಡ್ಕೊಳ್ಳಿ” ಪಕ್ಕದಲ್ಲಿದ್ದ ಮುಗಿಲ್ ಸಾಂತ್ವಾನದ ಮಾತನ್ನು ಹೇಳುತ್ತಾ, “ನೀವು ಆ ಗ್ಯಾಸ್ ಹಂಡೆ ತಂದಿಟ್ಟವನ ಮೇಲೆ ಕೇಸ್ ಹಾಕಬೇಕಿತ್ತು. ಸೋರ‍್ತಾ ಇರೋ ಹಂಡೆಯನ್ನ ತಂದು ಇಟ್ಟು ಮನೆಯನ್ನೆ ಸುಟ್ಟು ಹಾಕಿ ಬಿಟ್ಟಿದ್ದಾನಲ್ವ? ಬಡ್ಡಿಮಗ”

“ಅಯ್ಯೋ, ಪೋಲಿಸಿನವರು ಬಂದು ಅವರನ್ನೆಲ್ಲಾ ವಿಚಾರಿಸಿದರು. ಆ ಹುಡುಗ ‘ನಾನು ಹಂಡೆ ತಂದು ಕೊಡಬೇಕಾದ್ರೆ ಚೆನ್ನಾಗೇ ಇತ್ತು. ಆಮೇಲೆ ಇವರು ಒಲೆಗೆ ಕೂರಿಸ್ ಬೇಕಾದ್ರೆ, ಸರಿಯಾಗಿ ಕೂರಿಸದೆ ಸಿಡಿದಿರಬೇಕು’ ಅಂತ ಹೇಳ್ತಾನೆ, ಕಳ್ಳಬಡ್ಡಿಮಗ” – ಮಂಜಣ್ಣ ಕೊಂಚ ಸಿಟ್ಟನ್ನು ತೋರಿದ.

ನಂಜುಂಡಣ್ಣ ಮಾತು ಶುರುಮಾಡಿದರು. “ಚಿಕ್ಕಮಗಳೂರಲ್ಲಿ, ನಮ್ಮ ನೆಂಟರಲ್ಲೊಬ್ರು ಲಾಯರು ಇದ್ದಾರೆ. ಅವರನ್ನೂ ಒಂದು ಮಾತು ಕೇಳಿದೆ. ಗ್ಯಾಸ್ ಹಂಡೆಯನ್ನು ಮನೆಗೆ ಇಳಿಸಿಕೊಳ್ಳಬೇಕಾದ್ರೆ, ಹಂಡೆಯ ಮುಚ್ಚಿಗೆ ಸರಿಯಾಗಿದೆಯೇ? ಇಲ್ವೇ? ಎಂದು ನೋಡಿ ಇಳಿಸಿಕೊಳ್ಳಬೇಕು, ಹಂಗಂತ ಹಂಡೆ ಮೇಲೆ ಬರೆದಿರ‍್ತಾರೆ. ಒಂದು ವೇಳೆ ಕಂಪನಿಯವರ ಮೇಲೆ ಕೇಸ್ ಹಾಕಿದ್ರೂ, ಹಂಡೆ ಮೇಲೆ ಮೊದಲೇ ಬರೆದು ತಿಳಿಸಿದ್ದೀವಿ ಅಂತ ಹೇಳಿ ಜಾರಿಕೊಳ್ತಾರಂತೆ. ಹಂಗಂತ ನಮ್ಮ ಲಾಯರು ಹೇಳಿದ್ರು”

ಒಳಗಿನಿಂದ ಸೀಮಎಣ್ಣೆಯನ್ನು ಬಾಟಲಿಗೆ ತುಂಬಿ ತಂದ ಮಂಜಮ್ಮ -“ಹಂಡೆ ಮೇಲೆ ಎಲ್ಲಿ ಬರೆದಿರ‍್ತಾರೆ? ನಾನಂತು ಕಂಡೇ ಇಲ್ಲಪ್ಪ”

“ಬರ‍್ದಿದಾರೆ, ನಿನಗೆ ಗೊತ್ತಾಗಿಲ್ಲ ಅನ್ನು. ಇಂಗ್ಲಿಶಲ್ಲೋ ಮತ್ತೊಂದ್ರಲ್ಲೋ ಬರೆದಿದ್ದಾರೆ” ನಂಜುಂಡಣ್ಣ ಮರುನುಡಿದ.

“ಅಯ್ಯೋ, ಇಂಗ್ಲಿಶು ಪಂಗ್ಲಿಶು ಅಂತ ಬರೆದಿದ್ರೆ ನಮಗೆ ಹೆಂಗೆ ಗೊತ್ತಾಗುತ್ತೆ. ನಮಗೆ ಗೊತ್ತಾಗೋ ಹಂಗೆ ಬರೆಯೋಕೆ ಏನ್ ರೋಗ ಇವಕ್ಕೆ? ನಮಗೆ ತಿಳಿಯೋ ಬಾಸೇಲಿ ಇರ‍್ಲಿಲ್ಲ, ಅದಕ್ಕೆ ನಮಗೆ ಗೊತ್ತಾಗಿಲ್ಲ ಅಂತ ನಾವೀಗ ಗ್ಯಾಸಿನವರ ಮೇಲೆ ಕೇಸ್ ಹಾಕಬಹುದಲ್ವ?” – ಮಂಜಮ್ಮ ತನ್ನ ಸಿಟ್ಟನ್ನು ತೋರಿ, ಹೊಸದೊಂದು ದಾರಿಯನ್ನು ತಿಳಿಸಿದರು.

“ಅದನ್ನೂ ಕೇಳಿದೆ ಕಣೆ, ಈ ಗ್ಯಾಸಿಂದೆಲ್ಲಾ ಸೆಂಟ್ರಲ್ ಗೌರ‍್ಮೆಂಟಿಗೆ ಸೇರುತ್ತಂತೆ. ಕನ್ನಡದಲ್ಲಿ ಹಾಕಲೇ ಬೇಕು ಅಂತ ಏನೂ ಕಟ್ಲೆ ಇಲ್ವಂತೆ. ಸೆಂಟ್ರಲ್ಲಿಂದು ಹಿಂದಿ-ಇಂಗ್ಲಿಶು ಹಾಕಿ ಕೈ ತೊಳೆದುಕೊಂಡು ಬಿಡ್ತಾರಂತೆ”

“ಇದಕ್ಕಿಂತ ಅನ್ಯಾಯ ಇನ್ನೊಂದಿಲ್ಲ. ಗ್ಯಾಸ್ ಕಂಪನಿಯವರಿಂದ ಮಂಜಣ್ಣಂಗೆ ಸ್ವಲ್ಪನಾದ್ರು ಪರಿಹಾರ ಬರಬೇಕು. ತಬ್ಬಲಿ ಮಗ, ಮುಕ ಸುಟ್ಟುಕೊಂಡಿರುವ ಮಗಳಿಗೆ ಏನಾದ್ರು ಒಂದು ದಾರಿ ಆಗೋದು ಬೇಡ್ವ. ಈಗಿನ ಕಾಲದಲ್ಲಿ ಎಲ್ಲಾ ಚೆನ್ನಾಗಿರುವ ಹೆಣ್ಣು ಮಕ್ಕಳಿಗೇ ಮದುವೆ ಮಾಡೋದು ಕಶ್ಟ. ಇನ್ನು ಗಾಯ-ಪಾಯ ಆಗಿರುವ ಮಕ್ಕಳಿಗೆ ಮುಂದೆ ಮದುವೆ ಹೇಗೆ ಮಾಡೋದು? ಬದುಕು ಹೆಂಗೆ ನಡೆಸೋದು? ದುಡ್ದು-ಕಾಸು ತುಂಬಾ ಇರೋರಾದ್ರೆ ಏನಾದ್ರು ಮಾಡ್ತಾರೆ. ಬಡವರು ಎಲ್ಲಿಗೆ ಹೋಗಬೇಕು? ಬಡವರ ಬದುಕಿಗೆ ಬೆಲೆನೇ ಇಲ್ವ?” – ಮಂಜಮ್ಮ ಒಂದು ನಿಟ್ಟುಸಿರು ಬಿಟ್ಟಳು.

“ನಾವು ಕಳಕೊಂಡದ್ದು ಕಳಕೊಂಡಾಯ್ತು. ಅದೇನು ತಿರುಗಿ ಬರುತ್ತಾ? ಎಲ್ಲಾ ನಾನು ಪಡೆದುಕೊಂಡು ಬಂದಿದ್ದು” – ಮಂಜಣ್ಣನಿಗೆ ಮತ್ತಶ್ಟು ನೋವು ಹೆಚ್ಚಾದಂತೆ ಕಂಡಿತು. ಸೀಮೆಎಣ್ಣೆಯ ಬಾಟಲಿ ಹಿಡಿದು ಆಟೋ ಕಡೆ ನಡೆದ.

ಆಟೋ ಕಡೆ ಮುಗಿಲ್ ಒಮ್ಮೆ ಕಣ್ಣು ಹಾಯಿಸಿದ. ಹುಡಗನ ಕೈಯಲ್ಲಿ ಕಡ್ಲೆ ಮಿಟಾಯಿ ಇನ್ನೂ ಹಾಗೆಯೇ ಇತ್ತು. ಆತನ ಕೈಬಿಸಿಗೆ ಮಿಟಾಯಿ ಮೆಲ್ಲನೆ ಕರಗುತ್ತಿತ್ತು. ತಾಯಿಯನ್ನು ಕಳೆದುಕೊಂಡ, ಅಕ್ಕನಿಂದ ದೂರವಾದ ಹುಡುಗನ ಕಣ್ಣುಗಳು ನೂರು ನೋವುಗಳನ್ನು ಹೇಳುತ್ತಿತ್ತು.

ಇತ್ತ ಅಂಗಡಿಯ ಒಳಗಿಂದ ನಂಜುಂಡಣ್ಣ – “ಹಿಂಗೆ ನೂರಾರು ಸಾವುಗಳಾಗಿ, ಏನೂ ಅರಿಯದ ಕಂದಮ್ಮಗಳು ತಬ್ಬಲಿಗಳಾಗುವುದಕ್ಕೆ, ಸಂಸಾರಗಳೇ ಸುಟ್ಟುಹೋಗುವುದಕ್ಕೆ, ನೆಟ್ಟಗಿಲ್ಲದೇ ಇರೋ ನಮ್ಮ ವ್ಯವಸ್ತೆಯೇ ಕಾರಣ ಆಗುತ್ತಲ್ವ! ಕುಕ್ಕರ‍್ರು, ಸಿಲಿಂಡರ‍್ರು, ಬೆಂಕಿ ವಿಶಯದಲ್ಲಿ ಮಂದಿ ಎಚ್ಚರಿಕೆಯಿಂದಲೇ ಇರ‍್ತಾರೆ. ಆದ್ರೆ ಯಾವ ಯಾವ ಬಗೆಯಲ್ಲಿ ಎಚ್ಚರಿಕೆ ವಹಿಸಬೇಕು ಅಂತ ಅವರಿಗೆ ತಿಳಿಯೋ ಹಾಗೆ ಹೇಳದಿದ್ರೆ ಗೊತ್ತಾಗುವುದಾದ್ರು ಹೇಗೆ? ಈ ವ್ಯವಸ್ತೆಯಲ್ಲಾ ಎಂದಿಗೆ ಸರಿಹೋಗುತ್ತೋ ಕಾಣೆ? ಅದು ಸರಿಹೋಗೋವರೆಗು ಇಂತಹ ಕೇಡುಗಳಿಗೆ ವ್ಯವಸ್ತೆಯನ್ನೇ ಹೊಣೆ ಮಾಡಬೇಕು” ಎಂದು ತನ್ನ ಲೆಕ್ಕದ ಹೊತ್ತಗೆಯನ್ನು ಮುಚ್ಚಿದ.

ಮತ್ತೊಂದು ಸಿಗರೇಟ್ ಹಚ್ಚಿಕೊಳ್ಳಲು ಮುಗಿಲ್ ಪ್ಯಾಕಿನತ್ತ ನೋಡಿದ. “ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ” ಎಂದು ಪ್ಯಾಕಿನ ಮೇಲೆ ಬರೆದಿತ್ತು. ‘ಯಾರ ಸಾವಿಗೆ ಯಾರು ಹೊಣೆ?’ ಎಂದು ಅವನ ಮನಸ್ಸುಕೇಳುತ್ತಿತ್ತು, ನಂಜುಂಡಣ್ಣನ ಕಡೆಯ ಮಾತುಗಳನ್ನು ಅವನ ತಲೆಯು ಮೆಲುಕು ಹಾಕುತ್ತಿತ್ತು.

(ಚಿತ್ರ ಸೆಲೆ: naidunia.jagran.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *