‘ಹಂಸಲೇಕ’ – ಕನ್ನಡಿಗರ ಹೆಮ್ಮೆ

– ಅನ್ನದಾನೇಶ ಶಿ. ಸಂಕದಾಳ.

hams

‘ಜಿ. ಗಂಗರಾಜು’ – ಕನ್ನಡ ಸಿನೆಮಾಗಳನ್ನೇ ನೋಡಿಕೊಂಡು ಬಂದಿರುವ ಕಟ್ಟಾ ಸಿನೆಮಾ ಹಿಂಬಾಲಕರಲ್ಲಿ ಅತವಾ ನೋಡುಗರಲ್ಲಿ ಕೆಲವೇ ಕೆಲವರು, ಈ ಹೆಸರನ್ನು ಗುರುತು ಹಿಡಿಯುವರು. ಹೆಚ್ಚಿನವರು ಇವರ‍್ಯಾರೋ ಇರಬಹುದು ಅಂತ ಸುಮ್ಮನಾಗುತ್ತಾರೆ. ಆದರೆ ಗಂಗರಾಜು ಬದಲಿಗೆ ‘ಹಂಸಲೇಕ’ ಎಂದು ನೋಡಿ. ಇಡೀ ಕನ್ನಡ ಕಲಾಬಿಮಾನಿಗಳು ಮತ್ತು ಚಿತ್ರರಂಗದವರೆಲ್ಲರೂ ಇವರ ಬಗ್ಗೆ ಸಂತಸ ಪಡುವುದನ್ನು, ಮೆಚ್ಚುಗೆ ತೋರ‍್ಪಡಿಸುವುದನ್ನು ಮತ್ತು ಹೆಮ್ಮೆ ಪಡುವುದನ್ನು ಬಿಟ್ಟು ಬೇರೇನೂ ಮಾಡಲಾರರು. ಅದು ಹಂಸಲೇಕ ಎಂಬ ವ್ಯಕ್ತಿ ಕನ್ನಡ ಕಲಾಬಿಮಾನಿಗಳ ಮೇಲೆ ಮತ್ತು ಚಿತ್ರರಂಗದಲ್ಲಿ ಒತ್ತಿರುವ ಚಾಪು. ಹೊಸತನ ಮತ್ತು ತನ್ನತನದಿಂದ (originality) ಕನ್ನಡ ಸಿನೆಮಾ ಸಂಗೀತವನ್ನು ಬೇರೆ ಎತ್ತರಕ್ಕೆ ಏರಿಸಿದವರು ಹಂಸಲೇಕರವರು. ಇಂದು ಅವರ ಹುಟ್ಟು ಹಬ್ಬ. ಅವರಿಗೆ ಹುಟ್ಟು ಹಬ್ಬದ ಸವಿ ಹಾರೈಕೆಗಳು!

ಸಂಗೀತ ಸಾಮ್ರಾಟ್, ರಾಗಬ್ರಹ್ಮ, ನಾದಬ್ರಹ್ಮ, ಸಂಗೀತ ಲೋಕದ ಬತ್ತದ ಪಾತ್ರೆ … – ಅವರಿಗಿರುವ ಬಿರುದುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಂಸಲೇಕರ ಸಂಗೀತಕ್ಕೆ ಮತ್ತು ಹಾಡಿನ ಸಾಲುಗಳಿಗೆ ತಲೆದೂಗದವರಿಲ್ಲ. ಚಿಕ್ಕಂದಿನಿಂದಲೇ ಬರವಣಿಗೆಯಲ್ಲಿ ಹೆಚ್ಚಿನ ಒಲವು ಹೊಂದಿದ್ದ ಗಂಗರಾಜು ಅವರಿಗೆ ಅವರ ಗುರುಗಳಾದ ನೀಲಕಂಟಪ್ಪನವರು ಬರೆಯಲು ಸ್ವಾನ್ ಕಂಪನಿಯ ಲೇಕನಿಯನ್ನು (pen) ಕೊಟ್ಟಿದ್ದರು. ಆದರಿಂದ, ತಮ್ಮ ಬರಹಗಳ ಕೊನೆಗೆ ಕಾವ್ಯನಾಮ ಎಂಬಂತೆ ‘ಹಂಸಲೇಕನಿ’ (swan pen) ಎಂದು ಗಂಗರಾಜು ಅವರು ಬರೆಯುತ್ತಿದ್ದರು. ವಿದ್ಯಾರ‍್ತಿಯಾಗಿದ್ದಾಗ ‘ಬೆಳಕಿನ ಮನೆ’ ಎಂಬ ನಾಟಕವನ್ನು ಬರೆದು ಅದನ್ನು ಅವರ ಗುರುಗಳಿಗೆ ತೋರಿಸಿದಾಗ, ಅವರ ಗುರುಗಳು ಕಾವ್ಯನಾಮದಲ್ಲಿದ್ದ ‘ನಿ’ ತೆಗೆದು ‘ಹಂಸಲೇಕ’ ವನ್ನಾಗಿ ಮಾಡಿದರು. ಅಂದಿನಿಂದ ‘ಗಂಗರಾಜು’ ಹಂಸಲೇಕರಾದರು ಮತ್ತು ಮುಂದೆ ಇಡೀ ಕರ‍್ನಾಟಕದ ಮನೆ ಮಾತಾಗುವಂತೆ ಬೆಳೆದರು.

ಹಂಸಲೇಕರು ಕರ‍್ನಾಟಕ, ಹಿಂದೂಸ್ತಾನಿ ಮತ್ತು ಪಡುವಣ ಬಗೆಯ (western) ಸಂಗೀತವನ್ನು ಕಲೆತಿದ್ದರು ಮತ್ತು ಕಲೆಯ ಬಗ್ಗೆ ಹೆಚ್ಚಿನ ಒಲವನ್ನು ಬೆಳೆಸಿಕೊಂಡಿದ್ದರು. ಓದು ಮುಗಿದ ಮೇಲೆ  ‘ವಿವೇಕರಂಗ’ ಎಂಬ ನಾಟಕ ಕಂಪನಿಯ ಒಡನಾಟ ಇಟ್ಟುಕೊಳ್ಳುತ್ತಾರೆ. ಹಂಸಲೇಕರು ವಿವೇಕರಂಗದ ಮೂಲಕ ಹಲವಾರು ನಾಟಕಗಳನ್ನು ಆಡಿಸುತ್ತಿದ್ದರು ಮತ್ತು ನಾಟಕದಲ್ಲಿನ ಹಾಡುಗಳಿಗೆ ಸಂಗೀತ ನೀಡುತ್ತಿದ್ದರು. ಅವರ ಸಿನೆಮಾ ಸಂಗೀತದ ಬಗ್ಗೆ ತಿಳಿಯುವ ಮೊದಲೇ ಹಲವಾರು ಮಂದಿಗೆ ಅವರ ನಾಟಕದ ಸಂಗೀತದ ಬಗ್ಗೆ ಗೊತ್ತಾಗಿತ್ತು ಮತ್ತು ಆ ಸಂಗೀತವು ನೋಡುಗರೆಲ್ಲರ ಮೆಚ್ಚುಗೆ ಗಳಿಸಿತ್ತು. ಮುಂದೊಮ್ಮೆ ಈ ನಾಟಕ ಕಂಪನಿಗೆ ಬೆಂಕಿ ಬಿದ್ದು ಮುಂದೇನು ಎಂದು ತೋಚದೇ ಇದ್ದಾಗ, ಅವರ ಪ್ರತಿಬೆಯನ್ನರಿತಿದ್ದ ಮಂದಿ ಸಿನೆಮಾರಂಗ ಸೇರಲು ಹಂಸಲೇಕರಿಗೆ ಹೇಳಿದರು. ಅಲ್ಲಿಂದ ಸಿನೆಮಾ ರಂಗದ ದಿಕ್ಕಿನತ್ತ ಅವರ ಪಯಣ ಶುರುವಾಗುತ್ತದೆ.

ಹಂಸಲೇಕರು ಸಿನೆಮಾ ನಲ್ಬರಹಗಾರರಾಗಿ ಮೊದಲು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ. 1973 ರಲ್ಲಿ ಉಪೇಂದ್ರ ಕುಮಾರ್ ಅವರ ಸಂಗೀತ ನಿರ‍್ದೇಶನದಲ್ಲಿ ಹೊರಬಂದ ‘ತ್ರಿವೇಣಿ’ ಎಂಬ ಚಲನಚಿತ್ರಕ್ಕೆ ಬರೆದ ಹಾಡು, ಅವರ ಮೊದಲ ಸಿನೆಮಾ ಹಾಡು. ಬಡತನದಲ್ಲೇ ಬೆಳೆದ ಹಂಸಲೇಕರು, ಬೆಳೆಯುವಾಗ ಹಲವಾರು ಸವಾಲುಗಳನ್ನು ಎದುರಿಸಿದ್ದರು. ತಮ್ಮ ಮೊದಲ ಸಿನೆಮಾ ಹಾಡಿನಲ್ಲೇ

ನೀನಾ ಬಗವಂತ, ಜಗಕುಪಕರಿಸಿ ನನಗಪಕರಿಸಿದ ಜಗದೋದ್ದಾರಕ ನೀನೇನಾ

ಎಂದು ದೇವರ ಬಗ್ಗೆ ಇದ್ದ ತುಸು ಸಿಟ್ಟನ್ನು ಮೆಲ್ಲನೆ ಹೊರಹಾಕಿದ್ದರು. ಅವರ ಅಣ್ಣರಾದ ಬಾಲಕ್ರಿಶ್ಣರೇ ಈ ಹಾಡನ್ನು ಹಾಡಿದ್ದರು. 1970 ರ ದಶಕವು ಸಿನೆಮಾ ರಂಗದಲ್ಲಿ ಮಡಿವಂತಿಕೆ ಇದ್ದ ಕಾಲ. ದೇವರ ಬಗ್ಗೆ ಬಕ್ತಿಯ ಸಾಲುಗಳನ್ನಲ್ಲದೇ ಬೇರೆ ರೀತಿಯ ಸಾಲುಗಳನ್ನು ಬರೆಯದಿರುವ ಹಾಗಿದ್ದ ಕಾಲ. ಮಡಿವಂತಿಕೆಯನ್ನು ಮುರಿದ ಹಂಸಲೇಕರ ಸಾಲುಗಳು ಮಡಿವಂತರ ಕಣ್ಣುಗಳನ್ನು ಕೆಂಪಾಗಿಸಿತ್ತು. ಈ ಕಾರಣದಿಂದಾಗಿ ಹಂಸಲೇಕರಿಗೆ ಸಿನೆಮಾ ರಂಗದಲ್ಲಿ ಅವಕಾಶಗಳೂ ತಪ್ಪಿದವು.

ಮುಂದೆ ನಟ ಎನ್ ಎಸ್ ರಾವ್ ಅವರು ಹಂಸಲೇಕರನ್ನು ರವಿಚಂದ್ರನ್ ಅವರಿಗೆ ಪರಿಚಯಿಸುತ್ತಾರೆ. ಮೊದಲಿಗೆ ‘ನಾನು ನನ್ನ ಹೆಂಡ್ತಿ’ ಎಂಬ ಸಿನೆಮಾಗೆ ಹಾಡುಗಳನ್ನು ಬರೆದು ಕೊಡುವ ಹಂಸಲೇಕರವರು, ರವಿಚಂದ್ರನ್ ರ ಮುಂದಿನ ಚಿತ್ರವಾದ ‘ಪ್ರೇಮಲೋಕ’ ಕ್ಕೆ ಹಾಡುಗಳನ್ನೂ ಬರೆದು ಚಿತ್ರದ ಸಂಗೀತ ನಿರ‍್ದೇಶನವನ್ನೂ ಮಾಡುತ್ತಾರೆ. ‘ಪ್ರೇಮಲೋಕ’ ದ ಹಾಡು ಮತ್ತು ಸಂಗೀತ ಯಾವ ಮಟ್ಟಿಗೆ ಮಂದಿಯನ್ನು ಸೆಳೆಯಿತು ಅಂದರೆ 38 ಲಕ್ಶ ಕ್ಯಾಸೆಟ್ ಗಳು ಮಾರಾಟವಾಗುತ್ತವೆ. ತೆಂಕಣ ಬಾರತ ಚಿತ್ರ ಸಂಗೀತದಲ್ಲಿ ಇದುವರೆಗೂ ಮುರಿಯಲಾಗದಂತ ದಾಕಲೆ ಇದಾಗಿದೆ. ಚಿತ್ರರಂಗದ ದಿಕ್ಕು-ದೆಸೆ ಬದಲಾಯಿಸುವಂತ ಹಾಡುಗಳನ್ನು-ಸಂಗೀತವನ್ನು ಹಂಸಲೇಕರು ನೀಡಿದ್ದರು. ತಮ್ಮ ಮೊದಲ ಚಿತ್ರದಲ್ಲಿಯೇ ಈ ಮಟ್ಟಕ್ಕೆ ಮಂದಿ ಮೆಚ್ಚುಗೆ ಗಳಿಸಿದ ಮೇಲೆ, ಅವರ ಪೋಟೋ ಚಿಕ್ಕದಾಗಿ ಅವರು ಸಂಗೀತ ನೀಡುತ್ತಿದ್ದ ಸಿನೆಮಾ ಪೋಸ್ಟರ್ ಗಳಲ್ಲಿ ಕಾಣಿಸತೊಡಗುತ್ತದೆ. ಗೋಡೆಗಳ ಮೇಲೆ ಅಂಟಿಸುತ್ತಿದ್ದ ಪೋಸ್ಟರ್ ಗಳಲ್ಲಿ ನಾಯಕ ನಟ-ನಟಿಯರ ಚಿತ್ರ ಮಾತ್ರವಿರುತ್ತಿತ್ತು. ಆದರೆ ಸಂಗೀತ ನಿರ‍್ದೇಶಕರೊಬ್ಬರ ಪೋಟೋ ಕಾಣಿಸಿಕೊಳ್ಳುವ ಹಾಗೆ ಆಗಿದ್ದು ತೆಂಕಣ ಬಾರತದಲ್ಲಿ ಅದೇ ಮೊದಲು. ಅಲ್ಲಿಂದ ಹಂಸಲೇಕರು ಹಿಂದೆ ತಿರುಗಿ ನೋಡಿಯೇ ಇಲ್ಲ.

ಹಂಸಲೇಕರು ಪ್ರೇಮಲೋಕದ ಮೂಲಕ ಆಗ ಇಡೀ ಬಾರತದ ಗಮನ ಸೆಳೆದಿದ್ದರು. ಅದೇ ಕಾಲಕ್ಕೆ ತಮಿಳುನಾಡಿನಲ್ಲಿ ಇಳಯರಾಜ ಅವರ hams2ಹೆಸರೂ ಕೂಡ ಮನೆಮಾತಾಗಿರುತ್ತದೆ. ಅವರ ಬೆಳವಣಿಗೆಯನ್ನು ಸಹಿಸದ ಕೆಲವರು ಹಂಸಲೇಕರನ್ನು ಬಳಸಿಕೊಂಡು ಇಳಯರಾಜಾರ ಇದಿರಾಗಿ ತಮಿಳಿನಲ್ಲಿ ಹಂಸಲೇಕರನ್ನು ಬೆಳೆಸುವ ಹುನ್ನಾರ ಮಾಡಿದ್ದರು. ಅದಕ್ಕಾಗಿ ತಮಿಳು ಚಿತ್ರರಂಗದವರು ತಮಿಳು ಚಿತ್ರಗಳಿಗೆ ಸಂಗೀತ ನೀಡಲು ಹಂಸಲೇಕರಿಗೆ ಅವಕಾಶ ನೀಡುತ್ತಾರೆ ಮತ್ತು ಹಂಸಲೇಕ ಕೆಲವು ತಮಿಳು ಚಿತ್ರಗಳಿಗೆ ‘ಸೂಪರ್ ಹಿಟ್’ ಸಂಗೀತವನ್ನೂ ಕೊಡುತ್ತಾರೆ. ಆದರೆ ತಮಿಳು ಸಿನಿ ರಾಜಕೀಯದ ಒಳಸುಳಿಗಳು ತಿಳಿಯತೊಡಗುತ್ತಲೇ ಅವರು ಕನ್ನಡ ಚಿತ್ರರಂಗಕ್ಕೆ ಮರಳಿ ಇಲ್ಲಿಯೇ ನೆಲೆಯೂರುತ್ತಾರೆ. ಅಲ್ಲಿಂದ ಕನ್ನಡ-ತೆಲುಗು-ತಮಿಳು ನುಡಿಯ ಚಿತ್ರಗಳೂ ಸೇರಿದಂತೆ 300 ಕ್ಕೂ ಹೆಚ್ಚಿನ ಸಿನೆಮಾಗಳಿಗೆ ನಲ್ಬರಹಗಾರ + ಸಂಗೀತ ನಿರ‍್ದೇಶಕರಾಗಿ ಕಾಣಿಸಿಕೊಂಡಿರುವ ಒಬ್ಬರೇ ವ್ಯಕ್ತಿ ಹಂಸಲೇಕರವರು ಅನ್ನೋದು ಬಾರತ ಚಿತ್ರರಂಗದಲ್ಲಿ ದಾಕಲೆಯೇ! ನಾಡು-ನುಡಿ-ತುಂಟತನ-ಕನ್ನಡ ಮಣ್ಣಿನ ಸೊಗಡು-ಜನಪದ-ಪ್ರೀತಿ-ಪ್ರೇಮ-ವಾತ್ಸಲ್ಯ-ಗೆಳೆತನ-ಬದುಕಿನ ಬಗ್ಗೆ ಅರಿವು ಮೂಡಿಸುವ-ಸರಿತಪ್ಪರಿಮೆಯ ಸಾಲುಗಳು – ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಹಂಸಲೇಕರು ಬರೆಯದ ವಿಶಯಗಳೇ ಇಲ್ಲ ಎಂದೆನ್ನಬಹುದು. ಆಡುಮಾತನ್ನೇ ತಮ್ಮ ಹಾಡುಗಳಲ್ಲಿ ಬಳಸಿ ಎಲ್ಲವನ್ನೂ ಸುಳುವಾಗಿ ತಿಳಿಸಿದ ಹೆಗ್ಗಳಿಕೆ ಅವರದು. ಹಿಂದೊಮ್ಮೆ ದೇವರ ಬಗ್ಗೆ ಬರೆದು ಸಿಟ್ಟಿಗೆ ಗುರಿಯಾಗಿದ್ದ ಇದೇ ಹಂಸಲೇಕರು, ‘ಗಾನಯೋಗಿ ಪಂಚಾಕ್ಶರಿ ಗವಾಯಿ’ ಎಂಬ ಸಿನೆಮಾದಲ್ಲಿ

ನೀಡು ಶಿವ ನೀಡದಿರೂ ಶಿವ ಬಾಗುವುದು ನನ್ನ ಕಾಯ

ಎಂದು ಬರೆದಿದ್ದಾರೆ. ಈ ಹಾಡಿನ ರಾಗ, ಸಂಗೀತ ಮತ್ತು ಸಾಲುಗಳು ಕೇಳುಗರ ಕಣ್ಣಾಲಿಗಳನ್ನು ತುಂಬಿಸದೇ ಇರದು!

ಹಂಸಲೇಕರು ಬರೆದ ಸಾಲುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ರೀತಿಯಲ್ಲೇ ಅವರ ಸಂಗೀತವೂ ಕೂಡ ಸಂಗೀತ ಪ್ರೇಮಿಗಳನ್ನು ಸೆಳೆಯುತ್ತದೆ. ‘ಬೆಳ್ಳಿ ಕಾಲುಂಗುರ’ ಎಂಬ ಸಿನೆಮಾದ, ಹಂಪಿಯಲ್ಲೇ ತೆಗೆದ ‘ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ’ ಎಂಬ ಹಾಡಿಗೆ ಅವರು ನೀಡಿರುವ ಸಂಗೀತವು, ಹಂಪಿಯ ಕಂಬಗಳಿಂದ ಹೊರಬಂದ ಸಂಗೀತದಂತೆಯೇ ತೋರುತ್ತದೆ. ‘ಮುತ್ತಿನ ಹಾರ’ ಎಂಬ ಸಿನೆಮಾದ ‘ಕೊಡಗಿನವೀರ’ ಎಂಬ ಹಾಡಿಗೆ ಅವರು ನೀಡಿರುವ ಸಂಗೀತ ಕೊಡವ ಮಣ್ಣಿನ ಸಂಗೀತವೇ ಆಗಿದೆ. ಈ ಹಾಡುಗಳಿಗೆ ಸಂಗೀತ ನೀಡುವಲ್ಲಿ ತೋರಿದ ಅವರ ಜಾಣ್ಮೆಗೆ ಅಪಾರ ಮೆಚ್ಚುಗೆಯೂ ದೊರೆತಿದೆ. ನಾಯಕ ನಟರು ಸಿನೆಮಾದಲ್ಲಿ ಪರದೆ ಮೇಲೆ ಕಾಣಿಸಿಕೊಳ್ಳುವಾಗ ಹಿನ್ನೆಲೆಯಲ್ಲಿ ಅವರು ನೀಡಿರುವ ಸಂಗೀತ, ಇಂದು ತುಣುಕುಗಳಾಗಿ ಮೊಬೈಲ್ ರಿಂಗ್ ಟೋನ್ಗಳಾಗಿವೆ (ಎಸ್ ಪಿ ಸಾಂಗ್ಲಿಯಾನದ ಸಂಗೀತ ಒಂದು ಎತ್ತುಗೆಯಶ್ಟೇ!). ಸಂಗೀತದಲ್ಲಿ ಹಲವಾರು ಪ್ರಯೋಗಗಳನ್ನು ಕೂಡ ಅವರು ಮಾಡಿದ್ದಾರೆ. ‘ಕೋಣ ಈದೈತೆ’ ಎಂಬ ಚಿತ್ರದ ಒಂದು ಹಾಡಿಗೆ ಯಾವುದೇ ಸಂಗೀತ ಸಾದನಗಳನ್ನು ಬಳಸದೆ, ಬಾಯಿಯಿಂದಲೇ ಸಂಗೀತ ನೀಡಿಸಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ ‘ಶಾಂತಿ’ ಎಂಬ ಸಿನೆಮಾಕ್ಕೆ ಬರೀ ಕೊಳಲೊಂದನ್ನೇ ಬಳಸಿ ಇಡೀ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕೊಟ್ಟಿರುವ ಹೆಚ್ಚುಗಾರಿಕೆ ಅವರದ್ದು. ಹಂಸಲೇಕರ ಬಗ್ಗೆ, ಅವರ ಸಂಗೀತದ ಬಗ್ಗೆ ಎಶ್ಟೇ ಬರೆದರೂ ಅದು ಮುಗಿಯುವುದಿಲ್ಲ. ಅವರು ಬರೆದಿರುವ ಸಾಲುಗಳ ಬಗ್ಗೆ ಮತ್ತು ಅವುಗಳ ಹುರುಳುಗಳ ಬಗ್ಗೆ ಮಾತನಾಡಲು ಶುರು ಮಾಡಿದರೆ ಅದಕ್ಕೂ ಕೂಡ ಕೊನೆಯಿಲ್ಲ. ಹಲವರು ಬರೀ ಮಾತಾಡುತ್ತಾರೆ ಆದರೆ ಕೆಲವೇ ಕೆಲವರು ಮಾಡಿ ತೋರಿಸುತ್ತಾರೆ. ಹಂಸಲೇಕ ಎರಡನೇ ಗುಂಪಿಗೆ ಸೇರುವವರು. ‘ಹುಟ್ಟೋದ್ಯಾಕೆ ಸಾಯೋದ್ಯಾಕೆ’ ಎನ್ನುವ ತಲೆ ಕೊರೆಯುವ ಕೇಳ್ವಿಗೆ, ‘ಏನಾದರು ಸಾದಿಸಿ ಹೋಗೋಕೆ’ ಎಂದು ಹೇಳುವ ಹಂಸಲೇಕರು, ಹುಟ್ಟು-ಸಾವಿನ ನಡುವಿನ ಬದುಕನ್ನು ಹೇಗೆ ಬಾಳಬೇಕು ಎಂದು ಸುಳುವಾಗಿ ತಿಳಿಸುವ ಟೀಚರ್ ಆಗಿ ಮಾತ್ರವಲ್ಲದೇ ‘ಮಾದರಿ ವ್ಯಕ್ತಿ’ ಯಾಗಿಯೂ ಕೂಡ ಕಾಣುತ್ತಾರೆ.
hams1

ಕನ್ನಡದ ಬಗ್ಗೆ, ಕರುನಾಡಿನ ಬಗ್ಗೆ ಹಂಸಲೇಕರು ಬರೆದು ಸಂಗೀತ ನೀಡಿರುವ ಹಾಡುಗಳು ತುಂಬಾನೇ ಇವೆ. ಆದರೆ ಕನ್ನಡ ಚಿತ್ರರಂಗದಲ್ಲಿ ‘ಕನ್ನಡ’ ಎಂದರೆ ಕೇಳಿಬರುವ ಹೆಸರು ಒಂದೇ – ಅದು ಡಾ।। ರಾಜಕುಮಾರ್ ಅವರದ್ದು. ‘ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂಬ ಹಾಡು, ಕನ್ನಡ ಚಿತ್ರರಂಗದ ಎರಡು ಮೇರು ಪ್ರತಿಬೆಗಳು ( ಡಾ।। ರಾಜಕುಮಾರ್ + ಹಂಸಲೇಕ ) ಒಂದುಗೂಡಿ, ಕನ್ನಡ-ಕರ‍್ನಾಟಕದ ಹೆಚ್ಚುಗಾರಿಕೆ ಬಗ್ಗೆ ಸುಳುವಾಗಿ ತಿಳಿಸಿದ ಹಾಡು. ಕನ್ನಡಿಗರ ಮನಸಲ್ಲಿ ಎಂದಿಗೂ ಅಚ್ಚಳಿಯದೇ ನಿಲ್ಲುವಂತ ಈ ಹಾಡು ಮತ್ತೊಂದು ನಾಡಗೀತೆಯೇ ಆಗಿದೆ! ಹೇಗೆ ಡಾ।। ರಾಜಕುಮಾರ್ ಅವರು ಇಡೀ ಕರ‍್ನಾಟಕದ ಮೇಲೆ ಅತವಾ ಕನ್ನಡಿಗರ ಮೇಲೆ ಪ್ರಬಾವ ಬೀರಿದ್ದರೋ, ಹಾಗೇ ಬರಹಗಾರರಾಗಿ ಮತ್ತು ಸಂಗೀತ ನಿರ‍್ದೇಶಕರಾಗಿ ಹಂಸಲೇಕರೂ ಅಶ್ಟೇ ಪ್ರಬಾವ ಬೀರಿದ್ದಾರೆ ಅಂತಂದರೆ ತಪ್ಪಾಗಲಾರದು.

ಸಿನೆಮಾ ಜಗತ್ತಿನಲ್ಲಿ ಬಹಳ ಮೇಲಕ್ಕೇರಿರುವ ಹಂಸಲೇಕರು ಅಶ್ಟಕ್ಕೇ ಸುಮ್ಮನಾಗಬಹುದಿತ್ತು. ಆದರೆ ತಮ್ಮೊಂದಿಗೆ ಹಲವಾರು ಪ್ರತಿಬೆಗಳನ್ನು ಅವರು ಬೆಳೆಸಿ ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಇಂದು ಕನ್ನಡಿಗರಿಗೆಲ್ಲ ಗೊತ್ತಿರುವ ವಿ. ಹರಿಕ್ರಿಶ್ಣ, ವಿ. ಮನೋಹರ್, ಶ್ರೀದರ್ ಸಂಬ್ರಮ್, ಅನೂಪ್ ಸೀಳಿನ್ ಮುಂತಾದ ಹೆಸರಾಂತ ಸಂಗೀತ ನಿರ‍್ದೇಶಕರು, ಕೆ. ಕಲ್ಯಾಣ್, ವಿ ನಾಗೇಂದ್ರಪ್ರಸಾದ್ ಮುಂತಾದ ಸಿನಿಮಾ ನಲ್ಬರಹಗಾರರು ಮತ್ತು ರಾಜೇಶ್ ಕ್ರಿಶ್ಣನ್, ನಂದಿತಾ, ಎಲ್ ಎನ್ ಶಾಸ್ತ್ರಿ, ಚೇತನ್ ಸಾಸ್ಕ, ಹೇಮಂತ್ ಮುಂತಾದ ಹಾಡುಗಾರರೆಲ್ಲ ಹಂಸಲೇಕರ ಗರಡಿಯಿಂದಲೇ ಬಂದವರು.ಕನ್ನಡ ಸಿನೆಮಾ ವಲಯದಲ್ಲಿರುವ ಬಹಳಶ್ಟು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಹಂಸಲೇಕರ ಗರಡಿಯನ್ನು ಹೊಕ್ಕೇ ಬಂದಿರುತ್ತಾರೆ ಎಂಬ ಮಾತು ಚಿತ್ರರಂಗದಲ್ಲಿದೆ. ಯಾವಾಗಲೂ ನಗುತ್ತಲೇ ಇರುವ ಮತ್ತು ಹೊಸತನವನ್ನು ಪ್ರೀತಿಸುತ್ತಾ ಹೊಸಬರನ್ನು ಹುರಿದುಂಬಿಸುವ ಅವರ ಗುಣ ಎಲ್ಲರಿಗೂ ಮೆಚ್ಚು.

ಇವರ ಸಾದನೆಗೆ ಪಿಲಂ ಪೇರ್, ರಾಜ್ಯ ಸರಕಾರ ನೀಡುವ ಅತ್ಯುತ್ತಮ ಸಂಗೀತ ನಿರ‍್ದೇಶಕ ಪ್ರಶಸ್ತಿ, ಡಾ।। ರಾಜಕುಮಾರ್ ಪ್ರಶಸ್ತಿ – ಹೀಗೆ ಹಲವಾರು ಬಾರಿ ಹಲವಾರು ಪ್ರಶಸ್ತಿಗಳು ಬಂದಿವೆ. ‘ಗಾನಯೋಗಿ ಪಂಚಾಕ್ಶರಿ ಗವಾಯಿ’ ಚಿತ್ರಕ್ಕೆ ರಾಶ್ಟ್ರ ಪ್ರಶಸ್ತಿಯೂ ಬಂದಿದೆ. ಇತ್ತೀಚಿನ ದಿನಗಳಲ್ಲಿ ಸಿನೆಮಾ ಸಂಗೀತದಿಂದ ದೂರ ಉಳಿದಿರುವ ಅವರು, ಜಾನಪದ ಕಲೆಯನ್ನು ಉಳಿಸಲು, ಬೆಳೆಸಲು ಹೆಚ್ಚು ಗಮನ ವಹಿಸಿದ್ದಾರೆ. ಅದಕ್ಕಾಗಿ ಕಾಲೇಜನ್ನೂ ಕೂಡ ತೆರೆದಿರುವ ಅವರು ತಮ್ಮ ಹೆಚ್ಚಿನ ಸಮಯವನ್ನು ‘ನಮ್ಮತನ’ವನ್ನು ಬೆಳೆಸುವುದಕ್ಕೆ ನೀಡುತ್ತಿದ್ದಾರೆ. ಕನ್ನಡ ಸಂಗೀತ ಲೋಕದಲ್ಲಿ ಹೊಸತನ್ನೇ ಹುಟ್ಟು ಹಾಕುತ್ತಾ, ಕನ್ನಡ ಮತ್ತು ಕನ್ನಡಿಗರ ಸ್ವಂತಿಕೆಯನ್ನು ಎತ್ತಿ ಹಿಡಿದ ಇಂತ ಮೇರು ಸಾದಕನ ಹುಟ್ಟಿದ ಹಬ್ಬ ಇಂದು. ಅವರಿಗೆ, ಎಲ್ಲಾ ಅಬಿಮಾನಿಗಳ ಮತ್ತು ಇಡೀ ಕರ‍್ನಾಟಕದ ಪರವಾಗಿ ಮತ್ತೊಮ್ಮೆ ಹುಟ್ಟು ಹಬ್ಬದ ಸವಿ ಹಾರೈಕೆಗಳು!

( ಮಾಹಿತಿ ಸೆಲೆ : ಬಾನುಲಿ, ಟಿ ವಿ ಮತ್ತು ಸುದ್ದಿಹಾಳೆಗಳಲ್ಲಿ ಬಂದಿದ್ದ ಹಂಸಲೇಕರ ಸಂದರ‍್ಶನ,  
kannada.filmibeat.comprajavani.netwikipedia.org, bangaloremirror )

(ಚಿತ್ರ ಸೆಲೆ : supergoodmovies.comsarada.bhagavatula.comthehindu.com )

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. swan pen ಬಗ್ಗೆ ಗೊತ್ತಿರಲಿಲ್ಲ 🙂

  2. madhumysuru says:

    ಕನ್ನಡಿಗರ ಕಣ್ಮಣಿ ಹಂಸಲೇಕರ ಕುರಿತಾದ ಬರಹ ತುಂಬಾನೇ ವಿಶೇಶವಾಗಿತ್ತು.
    ಹಂಸಲೇಕರ ಬಗ್ಗೆ ಒಂದು ಹೊತ್ತಿಗೆಯೆ ಬಂದಿದ್ದರೆ ಎಸ್ಟು ಚಂದವಿತ್ತು ಎಂದೆನಿಸಿತು.

  3. ಎಂಬತ್ತರ ದಶಕದ ನಮ್ಮೆಲ್ಲಾ ಪೀಳಿಗೆಯನ್ನು ತಮ್ಮ ನವನವೀನ ಹಾಡುಗಳ ಮೂಲಕ, ಸಂಗೀತದ ಮೂಲಕ ಒಂದು ಹೊಸ ಕೇಳುಗ ವರ್ಗವನ್ನೇ ಸೃಷ್ಟಿ ಮಾಡಿ ಆ ಕಾಲದ ಯುವಕರ ನಿದ್ದೆಗೆಡಿಸಿ, ಯುವಕ ಯುವತಿಯರ ಬಾಯಲ್ಲಿ ಅರೆಬರೆಯಾಗಿ ನಲಿದು, ಹಿರಿಯರ ಮನದಲ್ಲಿ ಮುದಮೂಡಿಸಿ, ನಾಡಿನ ಎಲ್ಲಾ ಶೋತೃಗಳ ತಣಿಸಿ ಸಂಗೀತ ರಸಧಾರೆಯನ್ನೇ ಹರಿಸಿ ಇಡೀ ಒಂದು ಪೀಳಿಗೆಯನ್ನೇ ತನ್ನ ಸಂಗೀತ ಮಾಂತ್ರಿಕತೆಯಿಂದ ಬೆರಗು ಮೂಡಿಸಿದ ನಾದಬ್ರಹ್ಮ ಹಂಸಲೇಕರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಅನಿಸಿಕೆ ಬರೆಯಿರಿ:

%d bloggers like this: