ತೊಗಲೇರ‍್ಪಾಟು ಬಾಗ-2

ಯಶವನ್ತ ಬಾಣಸವಾಡಿ.

ತೊಗಲೇರ‍್ಪಾಟಿನ ಹಿಂದಿನ ಕಂತಿನಲ್ಲಿ, ತೊಗಲಿನ ಒಡಲರಿಮೆಯ ಬಗ್ಗೆ ತಿಳಿಸಿಕೊಟ್ಟಿದ್ದೆ. ಈ ಕಂತಿನಲ್ಲಿ ತೊಗಲಿಗೆ ಹೊಂದಿಕೊಂಡಿರುವ ನೆರವಿನ (accessory) ಬಾಗಗಳ ಒಡಲರಿಮೆಯನ್ನು ಅರಿಯೋಣ.

ತೊಗಲಿನ ನೆರವಿನ ಬಾಗಗಳು:

titta 11) ಕೂದಲುಗಳು

2) ಉಗುರುಗಳು

3) ಬೆವರು ಸುರಿಕಗಳು (sweat glands)

4) ಮಯ್-ಜಿಡ್ಡಿನ ಸುರಿಕಗಳು (sebaceous glands)

5) ಗುಗ್ಗೆ ಸುರಿಕಗಳು (ceruminous glands)

ಕೂದಲು : (ತಿಟ್ಟ 1, 2, & 3)

titta 2

ತೊಗಲಿನ ನೆರವಿನ ಬಾಗಗಳಲ್ಲಿ ಒಂದಾದ ಕೂದಲು ಸತ್ತ ಕೊಂಪರೆಗೂಡುಗಳಿಂದ (keratinocytes) ಮಾಡಲ್ಪಟ್ಟ ಕಂಬಗಳಾಗಿವೆ. ಅಂಗಯ್, ಅಂಗಾಲು, ತುಟಿಗಳು, ಒರತೆರದ ಒಳ ತೆರಪುಗಳು (labia minora = inner vaginal lips) ಹಾಗು ತುಣ್ಣೆಯ ತುದಿಗಳನ್ನು (glans penis)  ಹೊರತುಪಡಿಸಿ,  ಕೂದಲು ಹೊರ ಮಯ್ ತುಂಬೆಲ್ಲಾ ಹರಡಿಕೊಂಡಿರುತ್ತವೆ. ಕಡುನೇರಳೆಯ ಕದಿರುಗಳು (UV rays) ತೊಗಲಿಗೆ ನೇರವಾಗಿ ತಾಗುವುದನ್ನು ತಡೆಯುವುದರ ಜೊತೆಗೆ, ತೊಗಲಿನ ಸುತ್ತಲು ಬೆಚ್ಚನೆಯ ಗಾಳಿಯನ್ನು ಹಿಡಿದಿಡುವ ಮೂಲಕ ಮಯ್ಯನ್ನು ಬೆಚ್ಚಗಿಡಲು ನೆರವಾಗುತ್ತದೆ.

ಕೂದಲಿನ ಇಟ್ಟಳದಲ್ಲಿ ಮೂರು ಬಾಗಗಳಿವೆ, (ತಿಟ್ಟ 2)

i) ಕೂದಲಿನ ಚೀಲ (hair follicle)

ii) ಕೂದಲಿನ ಬೇರು (hair root)

iii) ಕೂದಲಿನ ತಾಳು (hair shaft)

ಮೇಲ್ತೊಗಲ್ಪರೆಯ (epidermis) ಗೂಡುಗಳ ಸಾಲುಗಳು ನಡುತೊಗಲ್ಪರೆಗೆ ತಳ್ಳಲ್ಪಡುವುದರಿಂದ ಉಂಟಾಗುವ ಗುಳಿಯನ್ನು ಕೂದಲಿನ ಚೀಲ (hair follicle) ಎಂದು ಹೇಳಬಹುದು. ಈ ಚೀಲದಲ್ಲಿ ಇರುವ ಬುಡಗೂಡುಗಳು (stem cells) ಕೂದಲನ್ನು ಮಾಡಲು ಬೇಕಾದ ಕೊಂಪರೆಗಳನ್ನು (keratin) ಹುಟ್ಟಿಸುತ್ತವೆ. ಕರ‍್ವಣ್ಣಗೂಡುಗಳಿಂದ (melanocytes) ಮಾಡಲ್ಪಡುವ ಕರ‍್ವಣ್ಣ ಹೊಗರು (melanin pigment), ಕೂದಲಿಗೆ ಕಪ್ಪು ಬಣ್ಣವನ್ನು ಕೊಡುತ್ತದೆ.

ಕೂದಲಿನ ಚೀಲದೊಳಗೆ ಕೂದಲಿನ ಬೇರು ಇರುತ್ತದೆ. ಕೊದಲಿನ ಚೀಲ ಹಾಗು ಅದರೊಳಗಿನ ಕೂದಲಿನ ಬೇರುಗಳು (hair root) ತೊಗಲಿನ ಹೂತುಕೊಂಡಂತೆ ಇರುತ್ತದೆ. ಕೂದಲಿನ ಚೀಲವು ಹೊಸ ಗೂಡುಗಳನ್ನು ಮಾಡಿದಂತೆಲ್ಲಾ, ಕೂದಲಿನ ಬೇರುಗಳಲ್ಲಿರುವ ಗೂಡುಗಳು ತೊಗಿನ ಹೊರ ಮಯ್ ಮೇಲ್ಬಾಗದಲ್ಲಿರುವ ಕೂದಲನ್ನು ತಲುಪುವವರೆಗೆ ನೂಕಲ್ಪಡುತ್ತದೆ. ತೊಗಲಿನ ಹೊರ ಬಾಗದಲ್ಲಿ ಕಾಣಿಸುವ ಕೂದಲಿನ ಬಾಗವೇ ಕೂದಲಿನ ತಾಳು.

ಕೂದಲಿನ ಬೇರು ಹಾಗು ತಾಳು ಮೂರು ಪದರಗಳನ್ನು ಹೊಂದಿರುತ್ತವೆ,

titta 3

i) ಪಿಸಿಮೊಗಲು (cuticle)

ii) ತೊಗಟೆ (cortex)

iii) ತಿರುಳು (medulla)

ಕೂದಲಿನ ಹೊರ ಪದರವಾದ ಪಿಸಿಮೊಗಲು ಕೊಂಪರೆಗೂಡುಗಳಿಂದ ಮಾಡಲ್ಪಟ್ಟಿದೆ.  ಪಿಸಿಮೊಗಲಿನ ಕೊಂಪರೆಗೂಡುಗಳು ಮೀನಿನ ಹುರುಪೆಗಳಂತೆ (scales) ಜೋಡಿಸಲ್ಪಟ್ಟಿರುರುತ್ತವೆ. ಕೂದಲಿನ ಅಡ್ಡಗಲದ (width) ಹೀಚಿನ ಬಾಗವು ಪಿಸಿಮೊಗಲಿನ ಕೆಳಗಿರುವ ತೊಗಟೆಯನ್ನು ಹೊಂದಿರುತ್ತದೆ. ಕಡುಬಿನ (spindle) ಆಕಾರವನ್ನು ಹೊಂದಿರುವ ತೊಗಟೆಯು ಕೂದಲಿಗೆ ಬಣ್ಣವನ್ನು ಕೊಡುವ ಹೊಗರನ್ನು ಹೊಂದಿರುತ್ತದೆ.

ಕೊದಲಿನ ಒಳಗಿನ ಪದರವಾದ ತಿರುಳು ಎಲ್ಲಾ ಕೂದಲುಗಳಲ್ಲಿ ಇರುವುದಿಲ್ಲ. ಇವು ಕೂದಲುಗಳಲ್ಲಿ ಇದ್ದರೆ, ಹೆಚ್ಚಿನ ಮಟ್ಟದ ಹೊಗರು ಹಾಗು ಕೊಂಪರೆಯಿಂದ (keratin) ತುಂಬಿಕೊಂಡಿರುವ ಗೂಡುಗಳಿಂದ ಮಾಡಲ್ಪಟ್ಟಿರುತ್ತದೆ. ತಿರುಳನ್ನು ಹೊಂದಿರದ ಕೂದಲಿನ ಒಳಬಾಗವು ತೊಗಟೆಯಿಂದ ತುಂಬಿಕೊಂಡಿರುತ್ತದೆ

ಉಗುರುಗಳು:

titta 4

ಕಯ್ ಹಾಗು ಕಾಲ್ ಬೆರಳುಗಳ ತುದಿಯಲ್ಲಿ ಇರುವ ಉಗುರುಗಳು ಗಟ್ಟಿಯಾದ ಕೊಂಪರೆಗೂಡುಗಳ ಹಾಳೆಗಳಿಂದ ಮಾಡಲ್ಪಟ್ಟಿರುತ್ತವೆ. ಉಗುರುಗಳು ಬೆರಳುಗಳ ತುದಿಯನ್ನು ಕಾಯುತ್ತವೆ; ಕೆರೆಯಲು ಕೊಡ ಬಳಕೆಯಾಗುತ್ತವೆ.

ಉಗುರುಗಳಲ್ಲಿ 3 ಬಾಗಗಳಿರುತ್ತವೆ:

i) ಉಗುರಿನ ಬುಡ / ಬುಡ  (root of the nail)

ii) ಉಗುರಿನ ಒಡಲು / ಒಡಲು (body of the nail)

iii) ಉಗುರಿನ ತುದಿ / ತುದಿ (free edge of the nail)

ತೊಗಲಿನಿಂದ ಮುಚ್ಚಿಕೊಂಡಿರುವ ಉಗುರಿನ ಬಾಗವನ್ನು ‘ಉಗುರಿನ ಬುಡ’” ಎಂದು ಹೇಳಬಹುದು. ತೊಗಲಿನ ಹೊರಕ್ಕೆ ಚಾಚಿಕೊಂಡಿರುವ ಉಗುರುನ ಬಾಗವು “‘ಉಗುರಿನ ಒಡಲು”’ ಎನಿಸಿಕೊಳ್ಳುತ್ತದೆ. ಬೆರಳುಗಳನ್ನು ದಾಟಿ  ಮುಂದೆ ಬೆಳೆಯುವ ಉಗುರಿನ ತುತ್ತತುದಿಯನ್ನು “‘ಉಗುರಿನ ತುದಿ’” ಎಂದು ಹೆಸರಿಸಬಹುದು.

ಮೇಲ್ತೊಗಲ್ಪರೆಯ ಒಳ ಪದರವನ್ನು ಉಗುರಚ್ಚು (nail matrix) ಎಂದು ಕರೆಯಬಹುದು. ಉಗುರುಗಳು ಉಗುರಚ್ಚುಗಳಿಂದ ಬೆಳೆಯುತ್ತವೆ. ಈ ಉಗುರಚ್ಚು ಉಗುರಿನ ಬುಡವನ್ನು ಸುತ್ತುವರೆದಿರುತ್ತವೆ. ಉಗುರಚ್ಚಿನ ಬುಡಗೂಡುಗಳು ಕೊಂಪರೆಗೂಡುಗಳನ್ನು ಹುಟ್ಟು ಹಾಕುತ್ತವೆ. ಈ ಕೊಂಪರೆಗೂಡುಗಳು, ಗೂಡಿಗೆ ಗಟ್ಟಿತನವನ್ನು ಕೊಡುವ ಕೊಂಪರೆ ಮುನ್ನನು (kertain protein) ಮಾಡುತ್ತವೆ. ಹೀಗೆ ಕೊಂಪರೆ ಮುನ್ನುಗಳನ್ನು ತುಂಬಿಕೊಂಡ ಕೊಂಪರೆಗೂಡುಗಳು ಗಟ್ಟಿಯಾದ ಗೂಡುಗಳ ಹಾಳೆಗಳಾಗಿ ಮಾರ‍್ಪಡುತ್ತವೆ. ಉಗುರಿನ ಬುಡವನ್ನು ಮಾಡುವ ಕೊಂಪರೆಗೂಡುಗಳ ಹಾಳೆಗಳು ತೊಗಲಿನಿಂದ ಹೊರಕ್ಕೆ ಬೆಳೆದಾಗ  ‘ಉಗುರಿನ ಒಡಲು’ ಎನಿಸಿಕೊಳ್ಳುತ್ತವೆ.

ಉಗುರಚ್ಚೆಯಿಂದ ಹೊಸ ಗೂಡುಗಳು ಹುಟ್ಟಿದಂತೆಲ್ಲಾ, ಉಗುರಿನ ಬುಡ ಹಾಗು ಒಡಲುಗಳ ಗೂಡುಗಳು, ಉಗುರಿನ ತುದಿಯ ಕಡೆಗೆ ತಳ್ಳಲ್ಪಡುತ್ತವೆ. ಉಗುರೊಡಲಿನ ತಳ ಬಾಗದಲ್ಲಿ ಇರುವ ಮೇಲ್ತೊಗಲ್ಪರೆ (epidermis) ಹಾಗು ನಡುತೊಗಲ್ಪರೆಗಳು (dermis) ಒಟ್ಟಾಗಿ ಉಗುರಿನ ಹಾಸಿಗೆಯನ್ನು (nail bed) ಮಾಡುತ್ತವೆ. ಉಗುರೊಡಲಿಗೆ ಆರಯ್ವಗಳನ್ನು (nutrients) ಉಣಿಸುವ ನವಿರುನೆತ್ತರುಗೊಳವೆಗಳು, ಉಗುರು ಹಾಸಿಗೆಗೆ ನಸುಗೆಂಪು (pink) ಬಣ್ಣವನ್ನು ಕೊಡುತ್ತವೆ.

ತೊಗಲಿನ ಹೊರಗೆ ಕಾಣಿಸಿಕೊಳ್ಳುವ ಉಗುರಿನ ಬಾಗದಲ್ಲಿ ಉಗುರೊಡಲಿನ ಕೆಳಗಿರುವ ಉಗುರಚ್ಚೆ ಸ್ವಲ್ಪ ಮಟ್ಟಿಗೆ ಕಾಣಿಸಿಕೊಳ್ಳುತ್ತದೆ. ಬೆಳ್ಳನೆಯ ಕಮಾನಿನಂತೆ ಇರುವ ಈ ಇಟ್ಟಳವನ್ನು ‘ಉಗುರಿನ ಕಮಾನು’ (lunule) ಎಂದು  ಹೇಳಬಹುದು.

ತೊಗಲಿನ ಹೊರಗೆ ಕಾಣಿಸುವ ಉಗುರು, ಬೆರಳಿಗೆ ಹೊಂದಿಕೊಳ್ಳುವ ಬದಿಗಳು (lateral) ಹಾಗು ಕೆಳ ಅಂಚುಗಳು  ಒಂದು ಪದರದ ಮೇಲ್ಪರೆಯನ್ನು (epithelium) ಹೊಂದಿರುತ್ತವೆ. ಈ ಪದರವನ್ನು ಮೊಳೆಯುಗುರು (eponychium) ಎಂದು ಹೇಳಬಹುದಾಗಿದೆ. ಮೊಳೆಯುಗುರು ಉಗುರಿನ  ಅಂಚು ಹಾಗು ಬೆರಳುಗಳ ನಡುವೆ ಇರುವ ಕಿಂಡಿಯನ್ನು  ಮುಚ್ಚಿಡುವುದರಿಂದ, ಕೆಡುಕುಕಣಗಳು ಮಯ್ಯೊಳಕ್ಕೆ ನುಸುಳುವುದನ್ನು ತಡೆಯುತ್ತದೆ.

ಬೆವರು ಸುರಿಕಗಳು (sudoriferous glands/ sweat glands): (ತಿಟ್ಟ 1, 5, & 6)

titta 5

ಹೊರ ಸುರಿಕಗಳ (exocrine glands) ಗುಂಪಿನ ಅಡಿಯಲ್ಲಿ ಬರುವ ಬೆವರು ಸುರಿಕಗಳು ನಡುತೊಗಲ್ಪರೆಯಲ್ಲಿ (dermis) ಇರುತ್ತವೆ. ಬೆವರು

ಸುರಿಕಗಳಲ್ಲಿ ಎರಡು ಬಗೆ:

i) ಗುಳ್ಳೆ ಸುರಿಕ (eccrine gland):  ಈ ಬಗೆಯ ಸುರಿಕಗಳು ತಮ್ಮ ಸುರಿಕದ ಗೂಡುಗಳಲ್ಲಿ ಮಾಡಲ್ಪಡುವ ಒಸರುಗಳನ್ನು (secretion),  ಗುಳ್ಳೆಯೊಸರಿಕೆಯ (exocytosis) ಹಮ್ಮುಗೆಯಲ್ಲಿ ಒಸರುತ್ತವೆ.

[ಗುಳ್ಳೆಯೋಸರಿಕೆ (exocytosis) (ತಿಟ್ಟ 6) : ಸುರಿಕದ  ಗೂಡುಗಳಲ್ಲಿ ಮಾಡಲ್ಪಡುವ ಒಸರನ್ನು (secretion), ಗೂಡುಗಳು ಗುಳ್ಳೆಗಳಲ್ಲಿ ಕೂಡಿಡುತ್ತವೆ. ಒಸರನ್ನು ಹೊಂದಿರುವ ಗುಳ್ಳೆಗಳನ್ನು ‘ಗೂಡ್ಗುಳ್ಳೆಗಳು’ (vesicles) ಎಂದು ಹೇಳಬಹುದು.  ಈ ಗೂಡ್ಗುಳ್ಳೆಗಳನ್ನು ಸುರಿಕದ ಗೂಡುಗಳು, ಗೂಡಿನಿಂದ ಹೊರದೂಡುತ್ತವೆ.  ಈ ಹಮ್ಮುಗೆಯನ್ನು ಗುಳ್ಳೆಯೊಸರಿಕೆ (exocytosis) ಎಂದು ಹೇಳಬಹುದು.]

ಗುಳ್ಳೆ ಸುರಿಕಗಳು, ಮಯ್ ಮೇಲಿನ ಎಲ್ಲಾ ಬಾಗಗಳಲ್ಲಿ ಇರುತ್ತವೆ. ಇವುಗಳಿಂದ ಮಾಡಲ್ಪಡುವ ಬೆವರಿನ ಹೆಚ್ಚಿನ ಬಾಗವು  ಉಪ್ಪು ಹಾಗು ನೀರನ್ನು ಹೊಂದಿರುತ್ತದೆ. ಗುಳ್ಳೆ ಸುರಿಕಗಳು ಮಾಡುವ ಬೆವರು, ಕೊಳವೆಯ ನೆರವಿನಿಂದ ತೊಗಲಿನ ಹೊರ ಮಯ್ ತಲುಪುತ್ತದೆ. ಈ ಬಗೆಯಲ್ಲಿ ಹರಿಯುವ ಬೆವರು ಮಯ್ ಬಿಸುಪನ್ನು ಆವಿ-ತಂಪುಗೆಯ (evaporative cooling) ಹಮ್ಮುಗೆಯಲ್ಲಿ ತಗ್ಗಿಸುತ್ತದೆ.

ii) ಚಿವುಟು ಸುರಿಕ  (apocrine gland):  ಈ ಬಗೆಯ ಸುರಿಕಗಳಲ್ಲಿ, ಸುರಿಕದ ಗೂಡುಗಳು, ತಾವು ಮಾಡಿದ ಒಸರುಗಳನ್ನು, ಕುಡಿಸೀಳಿಕೆಯ (budding) ಹಮ್ಮುಗೆಯಲ್ಲಿ ಒಸರುತ್ತವೆ. ಚಿವುಟು ಸುರಿಕಗಳು, ಹೆಚ್ಚಾಗಿ ಕಂಕುಳು (arm pit) ಹಾಗು ತೊಡೆ ಸಂದಿಗಳಲ್ಲಿ (pubic region) ಇರುತ್ತವೆ. ಈ ಸುರಿಕಗಳ ಕೊಳವೆಗಳು, ಕೂದಲು ಚೀಲದ ಒಳಕ್ಕೆ ಚಾಚಿಕೊಂದಿರುತ್ತವೆ. ಇದರಿಂದಾಗಿ, ಚಿವುಟು ಸುರಿಕಗಳಲ್ಲಿ ಉಂಟಾಗುವ ಬೆವರು, ಕೂದಲಿನ ತಾಳುಗಳ ಮೂಲಕ ತೊಗಲಿನ ಹೊರ ಮಯ್ ತಲುಪುತ್ತದೆ.

titta 6

ಮನುಶ್ಯರ ಎಳವೆಯಲ್ಲಿ ಚಿವುಟು ಸುರಿಕಗಳು ಬೆವರನ್ನು ಉಂಟುಮಾಡುವ ಹಾಗು ಹರಿಸುವ  ಕೆಲಸವನ್ನು ಮಾಡುವುದಿಲ್ಲ. ಮಯ್ನೆರೆದ (puberty) ಕೂಡಲೇ ಈ ಸುರಿಕಗಳು ಮಂದವಾದ ಎಣ್ಣೆಯಂತ ಹರಿಕವನ್ನು (liquid) ಮಾಡಲು ಆರಬಿಸುತ್ತವೆ. ಈ ಹರಿಕವನ್ನು ಮಯ್ ಮೇಲಿನ ದಂಡಾಣುಗಳು (bacteria) ಉಣ್ಣುತ್ತವೆ. ಚಿವುಟು ಸುರಿಕದ ಬೆವರನ್ನು ದಂಡಾಣುಗಳು ಅರಗಿಸಿಕೊಂಡಾಗ, ಮಯ್-ವಾಸನೆ (body odor) ಉಂಟಾಗುತ್ತದೆ.

ಮಯ್-ಜಿಡ್ಡಿನ ಸುರಿಕಗಳು (Sebaceous glands):

titta 7

ನಡುತೊಗಲ್ಪರೆಯಲ್ಲಿ  ಇರುವ  ಹೊರ ಸುರಿಕದ (exocrine gland) ಬಗೆಯ ಮಯ್-ಜಿಡ್ಡಿನ ಸುರಿಕಗಳು, ಮಯ್-ಜಿಡ್ಡನ್ನು (sebum) ಮಾಡುತ್ತವೆ. ಅಂಗಯ್ ಹಾಗು ಅಂಗಾಲುಗಳನ್ನು ಹೊರತುಪಡಿಸಿ, ಮಿಕ್ಕೆಲ್ಲಾ ಮಯ್ ಬಾಗಗಳಲ್ಲಿ ಇರುವ ತೊಗಲಿನಲ್ಲಿ ಜಿಡ್ಡಿನ ಸುರಿಕಗಳನ್ನು ಕಾಣಬಹುದು. ಈ ಸುರಿಕಗಳಲ್ಲಿ ಮಾಡಲ್ಪಟ್ಟ ಮಯ್-ಜಿಡ್ಡು, ಕೊಳವೆಗಳ ನೆರವಿನಿಂದ ತೊಗಲಿನ ಹೊರಮಯ್ ಹಾಗು ಕೂದಲಿನ ಚೀಲಗಳನ್ನು ತಲುಪುತ್ತದೆ.

ಮಯ್-ಜಿಡ್ಡು, ತೊಗಲಿಗೆ ನೀರಿಳಿಯದಿರುವಿಕೆ (water proof)  ಹಾಗು ಹಿನ್ನೆಳೆಕೆಗಳನ್ನು (elasticity) ಕೊಡುತ್ತದೆ. ಕೂದಲಿನ ಚೀಲಗಳ ಮೂಲಕ ಹೊರಮಯ್ಗೆ ಹಾದುಹೋಗುವಾಗ, ಮಯ್-ಜಿಡ್ಡು, ಕೂದಲಿನ ಪಿಸಿಮೊಗಲುಗಳನ್ನು (cuticle) ಹೆರೆಯುತ್ತವೆ (lubricate). ಈ ಬಗೆಯ ಜಿಡ್ಡಿನ ಹೆರೆಯುವಿಕೆ, ಪಿಸಿಮೊಗಲಿಗೆ ಕಾಪನ್ನು ಒದಗಿಸುತ್ತದೆ.

ಗುಗ್ಗೆ ಸುರಿಕ (ceruminous gland):

titta 8

ಗುಗ್ಗೆ ಸುರಿಕಗಳು, ಕಿವಿಗೊಳವೆಗಳ (ear canal) ನಡುತೊಗಲ್ಪರೆಯಲ್ಲಿ ಇರುತ್ತವೆ. ಗುಗ್ಗೆ ಸುರಿಕಗಳು ಮೇಣದಂತಿರುವ ಗುಗ್ಗೆಯನ್ನು (cerumen) ಮಾಡುತ್ತವೆ ಹಾಗು ಒಸರುತ್ತವೆ. ಗುಗ್ಗೆಯು ಕಿವಿಗೊಳವೆಯನ್ನು ಕಾಯುವುದರ ಜೊತೆಗೆ ಕಿವಿದಮಟೆಯನ್ನು (ear drum) ಹೆರೆಯುತ್ತದೆ (lubricate). ಅಂಟಿಸಿಕೊಳ್ಳುವ ಹಮ್ಮುಗೆ ನೆರವಿನಿಂದ, ದೂಳು ಹಾಗು ಗಾಳಿಯ ಮೂಲಕ ಕಿವಿಗೊಳವೆಯನ್ನು ನುಸುಳುವ ಕೆಡುಕುಕಣಗಳನ್ನು ಹಿಡಿದಿರುವ ಮೂಲಕ ಗುಗ್ಗೆಯು ಕಿವಿಯ ಕಾಪೇರ‍್ಪಾಟಿನಲ್ಲಿ ನೆರವಾಗುತ್ತದೆ.

ಗುಗ್ಗೆ ಸುರಿಕವು, ಎಡೆಬಿಡದೆ ಮೆಲ್ಲಗೆ ಗುಗ್ಗೆಯನ್ನು ಮಾಡುತ್ತಿರುತ್ತದೆ. ಹೊಸದಾಗಿ ಮಾಡಲ್ಪಟ್ಟ ಗುಗ್ಗೆಯು, ಹಳೆಯ ಗುಗ್ಗೆಯನ್ನು ಕಿವಿಗೊಳವೆಯ ಹೊರ ತೂತಿನೆಡೆಗೆ ತಳ್ಳುತ್ತಿರುತ್ತದೆ. ಹೀಗೆ ತಳ್ಳಲ್ಪಟ್ಟ ಗುಗ್ಗೆಯನ್ನು ಗುಗ್ಗೆ-ತೆಗೆಯುಕದ (ear wax remover) ನೆರವಿನಿಂದ ಹೊರ ತೆಗೆಯಬಹುದಾಗಿದೆ. ಹಳೆಯ ಗುಗ್ಗಿಯನ್ನು ತೆಗೆಯದ್ದಿದರೆ, ಅದು ತಂತಾನೇ ಕಿವಿಯಿಂದ ಹೊರಕ್ಕೆ ಬೀಳುತ್ತದೆ.

ಇಲ್ಲಿಗೆ ತೊಗಲೇರ‍್ಪಾಟಿನ ಒಡಲರಿಮೆಯನ್ನು ತಿಳಿದುಕೊಂಡಂತಾಯಿತು. ಮುಂದಿನ ಕಂತಿನಲ್ಲಿ ತೊಗಲೇರ‍್ಪಾಟಿನ ಉಸಿರಿಯರಿಮೆಯ ಬಗ್ಗೆ ಅರಿಯೋಣ.

(ತಿಳಿವು ಮತ್ತು ತಿಟ್ಟಗಳ ಸೆಲೆ: 1. imgkid.com, 2. ivyroses.com, 3. alwaystestclean.com, 4. studyblue.com, 5. mayoclinic.org 6. rci.rutgers.edu 7. wiki/Sebaceous_gland, 8. anatomyatlases.org, 9. webmd.com, 10. innerbody.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *