ಪತ್ತೇದಾರಿ ಕತೆ – ಕೊಲೆಗಾರ ಯಾರು?

– ಬಸವರಾಜ್ ಕಂಟಿ.

detective

 ಕಂತು-1

ಮನವರಿಮೆಯ (Psychology) ಹೊತ್ತಗೆಯೊಂದನ್ನು ಹಿಡಿದುಕೊಂಡು ತನ್ನ ಹೊತ್ತಗೆಯಂಗಡಿಯಲ್ಲಿ ಕುಳಿತಿದ್ದ ಪುಲಕೇಶಿ, ಗೀಳಿನ ಕಾಯಿಲೆಯ (Obsession Disorder) ಬಗ್ಗೆ ಓದುತ್ತಿದ್ದನು. ಈ ಕಾಯಿಲೆ ಇರುವವರು ಯಾವತ್ತೂ ಯಾವುದಾದರೊಂದು ಸಂಗತಿ ಬಗ್ಗೆಯೇ ಪದೇ ಪದೇ ಯೋಚಿಸುತ್ತಿರುತ್ತಾರೆ ಅತವಾ ಯಾವುದಾದರೊಂದು ಕೆಲಸವನ್ನು ಪದೇ ಪದೇ ಮಾಡುತ್ತಿರುತ್ತಾರೆ. ಅದರಿಂದ ಹೊರಬರಲು ಅವರಿಗೆ ಸಾದ್ಯವಾಗುವುದೇ ಇಲ್ಲ. ಪುಲಕೇಶಿಗೆ ಮನವರಿಮೆಯ ಬಗ್ಗೆ ತುಂಬಾ ಒಲವು. ಆಗಲೇ ಸಂಜೆಯಾಗುತ್ತಾ ಬಂದಿತ್ತು. ಯಾರೋ ಒಬ್ಬ ಲಗುಬಗೆಯಲ್ಲಿ ನಡೆಯುತ್ತ ಅವನ ಅಂಗಡಿಗೆ ಬಂದು, ನೇರ ಪುಲಕೇಶಿ ಕುಳಿತಿದ್ದ ಮೇಜಿನ ಹತ್ತಿರ ತನ್ನ ದಪ್ಪ ಮಯ್ಯನ್ನು ಹೊರಲಾರದೆ ಹೊತ್ತುಕೊಂಡಂತೆ ಹೋದನು. ಹೊತ್ತಗೆಯಲ್ಲಿ ನೆಟ್ಟಿದ್ದ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ಎದುರಿಗಿದ್ದ ಆಕಾರವನ್ನು ನೋಡಿದ ಪುಲಕೇಶಿ. ಇಪ್ಪತ್ತರ ವಯಸ್ಸು, ಮುಗ್ದ ಮುಕ. ಗಾಬರಿ ಮತ್ತು ಹೆದರಿಕೆ ಅವನ ಮುಕದಲ್ಲಿ ಎದ್ದು ಕಾಣುತ್ತಿತ್ತು. ಬೆವರು ಹಣೆಯಂಚಿನಿಂದ ಇಳಿದು, ಗಲ್ಲ ದಾಟಿ, ಗದ್ದದಿಂದ ತೊಟ್ಟಿಕ್ಕುತ್ತಿತ್ತು. ಪುಲಕೇಶಿಯವರ ಎದುರಿಗೆ ನಿಂತಿದ್ದರೂ ಒಂದೆರಡು ಸಾರಿ ಹಿಂದೆ ತಿರುಗಿ ತನ್ನನ್ನು ಯಾರೂ ನೋಡುತ್ತಿಲ್ಲವೆಂದು ಕಾತ್ರಿ ಮಾಡಿಕೊಂಡ. ಪುಲಕೇಶಿ ಅವನನ್ನೇ ದಿಟ್ಟಿಸಿದ.

“ಸಾರ್. ನಿಮ್ ಸಹಾಯ ಬೇಕಿತ್ತು. ನನ್ ಜೀವ ಅಪಾಯದಲ್ಲಿದೆ.” ಎಂದು ಹೇಳಿ ಮತ್ತೆ ಹಿಂದೆ ತಿರುಗಿ ನೋಡಿದ ಏದುಸಿರು ಬಿಡುತ್ತಾ.

ಪುಲಕೇಶಿ ಕುರ‍್ಚಿಯಿಂದ ಎದ್ದು, ಕಯ್ಯಲ್ಲಿದ್ದ ಹೊತ್ತಗೆ ಮೇಜಿನ ಮೇಲಿಟ್ಟು, ಅಂಗಡಿಯ ಹೊರಗೆ ಹೋಗಿ ಅತ್ತಿತ್ತ ನೋಡಿ ಮರಳಿ ಬಂದು,
“ಇಲ್ಲಿ ಮಾತಾಡುವುದು ಬೇಡ, ಮೇಲೆ ನನ್ ಮನೆಗೆ ಹೋಗೋಣ ಬನ್ನಿ” ಎಂದು ಕರೆದುಕೊಂಡು ಹೋದನು, ಅಂಗಡಿ ನೋಡಿಕೊಳ್ಳಲು ಅವನ ಬಂಟ ಹನುಮನನ್ನು ಬಿಟ್ಟು.

ಮನೆಯ ಒಳಗೆ ಬಂದು, ಬಾಗಿಲು ಹಾಕಿ ಮಾತಾಡಿದನು ಪುಲಕೇಶಿ, “ನಿಮ್ಮನ್ನ ಪಾಲೋ ಮಾಡ್ತಾಯಿರೋದು ಯಾರು ಅಂತ ನಿಮಗೆ ಗೊತ್ತಾ?”

“ಇಲ್ಲಾ ಸರ‍್”

“ಸರಿ. ಹೇಳಿ, ನನ್ನಿಂದ ಏನ್ ಸಹಾಯ ಆಗ್ಬೇಕು ಅಂತ”

“ಸರ್ ನನ್ ಹೆಸರು ಅನುಪಮ್ ಅಂತ. ನನ್ ತಂದೆ ಕೋಲಾರ ಮಹಾದೇವಯ್ಯನವರು. ನೀವು ಕೇಳಿರಬೇಕು ಅವ್ರ ಹೆಸರು”

“ಓ… ಕೇಳಿದೀನಿ. ತುಂಬಾ ಶ್ರೀಮಂತರು, ಒಳ್ಳೇ ಸಮಾಜ ಸೇವಕರು. ಎರಡು ವರ‍್ಶಗಳ ಕೆಳಗೆ ತೀರಿ ಹೋದ್ರು ಅಲ್ಲಾ?”

“ಹೌದು ಸರ್.” ಎಂದು ಮಂಕಾಗಿ ಸುಮ್ಮನಾದ.

“ಈಗ ನಿಮಗಾಗಿರೋ ತೊಂದ್ರೆ ಏನು ಹೇಳಿ” ಎಚ್ಚರಿಸುವ ರೀತಿಯಲ್ಲಿ ಕೇಳಿದ ಪುಲಕೇಶಿ.

“ಒಂದು ವಾರದಿಂದ ನನ್ನನ್ನಾ ಯಾರೋ ಯಾವಾಗಲೂ ಪಾಲೋ ಮಾಡ್ತಿದಾರೆ ಸರ್. ಮನೆ, ಕಾಲೇಜು, ಹೀಗೆ ನಾ ಎಲ್ಲೆಲ್ಲಿ ಹೋಗ್ತಿನೋ ಅಲ್ಲೆಲ್ಲಾ”

“ಬರೀ ಪಾಲೋ ಮಾಡ್ತಾರಾ ಅತವಾ ತೊಂದ್ರೆ ಏನಾದ್ರು?”

“ಇಲ್ಲಾ ಸರ್. ಇದುವರ‍್ಗು ತೊಂದರೆ ಮಾಡಿಲ್ಲಾ”

“ತೊಂದ್ರೆ ಮಾಡಬಹುದು ಅಂತ ನಿಮಗ್ಯಾಕೆ ಅನ್ಸುತ್ತೆ?”

“ಹೇಳ್ತೀನಿ ಸರ‍್” ಎನ್ನುತ್ತ ತನ್ನ ಕತೆ ಶುರುಮಾಡಿದನು, “ನನ್ ತಾಯಿ ತೀರಿ ಹೋದಮೇಲೆ ನನ್ ಅಪ್ಪ ಇನ್ನೊಂದು ಮದುವೆ ಆದ್ರು. ನನಗೆ ಆಗ ನಾಲ್ಕು ವರ‍್ಶ. ಆ ಹೆಂಗಸು ತುಂಬಾ ಸ್ಟ್ರಿಕ್ಟು ಸರ್, ಎಲ್ಲಾ ಅವಳು ಹೇಳ್ದಂಗೆ ಆಗ್ಬೇಕು. ಒಂದೊಂದ್ ಸಾರಿ ಅಪ್ಪಂಗೇ ಬಯ್ತಿದ್ಳು ಅಂತೀನಿ… ಅವ್ಳಗೆ ನನ್ ಕಂಡ್ರೆ ಅಶ್ಟಕ್ಕಶ್ಟೇ. ಆದ್ರೂ ಅಪ್ಪಾ ನಂಗೆ ತುಂಬಾ ಪ್ರೀತಿ ಮಾಡ್ತಿದ್ರು. ಎಲ್ಲಾ ಹೆಂಗೋ ನಡಕೊಂಡು ಬಂತು ಸರ್. ನಮ್ ಅಪ್ಪ ತೀರಿಹೋದ ಮೇಲೆ ಮನೆಯವರ ಮೇಲೆಲ್ಲಾ ನಿದಾನವಾಗಿ ಹಿಡಿತ ತೊಗೊಂಡ್ಳು. ಅದೂವರೆಗೂ ನಮ್ ಜೊತೇಲೆ ಇದ್ದ ನಮ್ ಚಿಕ್ಕಪ್ಪ, ನಮ್ ಮನೆ ಬಿಟ್ಟು ಹೊರಟೋದ್ರು ಸರ್. ಹೇಳ್ಕೊಳ್ಳೋಕೆ ಕೋಟ್ಯಾದಿಶ್ವರರ ಮಗ, ಆದ್ರೆ ಈಗ ಒಂದ್ ಜೊತೆ ಬಟ್ಟೆ ತೊಗೋಬೇಕಾದ್ರೂ ಅವಳ ಹತ್ರಾನೇ ದುಡ್ ಕೇಳ್ಬೇಕು”

“ಇರಲಿ, ಜೀವನದಲ್ಲಿ ನಾವು ಅಂದ್ಕೊಳ್ದೆ ಇದ್ರೂ ಬಿಡುಗಡೆ ಪಡೆಯೋ ಸಮಯ ಸಂದರ‍್ಬ ಬರುತ್ತೆ. ಮುಂದೇನಾಯ್ತು ಹೇಳಿ”

ಪುಲಕೇಶಿಯ ಮಾತು ಅವನಿಗೆ ಅರ‍್ತವಾಗಲಿಲ್ಲ. ಗಲಿಬಿಲಿಗೊಂಡರೂ ಮಾತು ಮುಂದುವರೆಸಿದ, “ಈಗ ಒಂದ್ ವಾರದ ಹಿಂದೆ ಅಪ್ಪನ ಗೆಳೆಯ ಕ್ರಿಶ್ಣಮೂರ‍್ತಿಯವ್ರು ನನ್ ಕಾಲೇಜ್ ಹತ್ರ ಬಂದು ನನ್ನನ್ನಾ ಅವ್ರ ಮನೆಗೆ ಕರಕೊಂಡೋದ್ರು. ಅಲ್ಲಿ ಅವರು ಹೇಳಿದ್ದ್ ಕೇಳಿನೇ ನಂಗೆ ಹೆದರಿಕೆ ಶುರು ಆಯ್ತು ಸರ್”

“ಏನದು?”

“ಯಾರಿಗೂ ಗೊತ್ತಾಗ್ದಿರೋ ಹಾಗೆ ಅಪ್ಪಾ ನನ್ ಹೆಸರಲ್ಲಿ ಆಸ್ತಿ ಬರೆದಿಟ್ಟಿದಾರಂತೆ. ನೂರ್ ಎಕರೆ ಕಾಪಿ ತೋಟ, ಇದೇ ಊರಲ್ಲಿ ಎರಡು ಬಂಗ್ಲೆ, ಮಯ್ಸೂರಲ್ಲಿ ಅದೆಶ್ಟೋ ಜಾಗ ಅಂತೆ, ಹೀಗೆ ಇನ್ನೂ ಏನೇನೋ ಹೇಳಿದ್ರು. ಅಪ್ಪಾ ಅದನ್ನೆಲ್ಲಾ ಯಾರಿಗೂ ಹೇಳಿಲ್ವಂತೆ”

“ಈ ಕ್ರಿಶ್ಣಮೂರ‍್ತಿಯವರು ನಿನ್ಗೆ ಈಗ ಯಾಕೆ ಇದನ್ನೆಲ್ಲ ಹೇಳ್ತಿದಾರೆ, ನಿಮ್ಮ ತಂದೆ ಸತ್ತು ಎರಡು ವರ‍್ಶ ಆದ್ಮೇಲೆ?”

“ಒಂದೆರಡು ವರ‍್ಶ ಬಿಟ್ಟು ನನಗೆ ಇದನ್ನೆಲ್ಲಾ ಹೇಳ್ಬೇಕು ಅಂತ ಅಪ್ಪಾನೇ ಸಾಯೋವಾಗ ಬೇಡಕೊಂಡಿದ್ರಂತೆ. ನೀನು ಆದಶ್ಟೂ ಬೇಗ ಓದು ಮುಗಿಸಿ ಅದರ ಉಸ್ತುವಾರಿ ಎಲ್ಲಾ ತೊಗೋಬೇಕು ಅಂತ ಹೇಳಿದ್ರು”

“ಮುಂದೆ?”

“ಅವರ ಮನೆಗೆ ಹೋಗಿ ಬಂದಾಗಿಂದ ನನ್ನನಾ ಯಾರೋ ಪಾಲೋ ಮಾಡ್ತಾ ಇದಾರೆ. ನನಗೇನಾದ್ರು ಅಪಾಯ ಮಾಡಿದ್ರೆ ಅಂತ ಬಯ ಸಾರ‍್”

“ನಿಮ್ ಪ್ರಕಾರ ಇದನ್ನೆಲ್ಲಾ ನಿಮ್ ಚಿಕ್ಕಮ್ಮ, ಅಂದ್ರೆ ನಿಮ್ ತಂದೆಯವರ ಎರಡನೇ ಹೆಂಡ್ತಿ ಮಾಡಸ್ತಿರೋದು ಅಂತಾ ನಾ?”

“ಗೊತ್ತಿಲ್ಲ ಸರ್. ಅವ್ಳೂ ಇರಬಹುದು, ಇಲ್ಲಾ ಅಪ್ಪಾ ಇಬ್ರನ್ನಾ ದತ್ತು ತೊಗೊಂಡಿದಾರಲ್ಲಾ ಅವ್ರು ಇದ್ರೂ ಇರಬಹುದು. ಅವರು ತುಂಬಾ ಕೆಟ್ಟವ್ರು ಸರ್”

“ನಿಮ್ ಅಪ್ಪಾ ಯಾವಾಗ ದತ್ತು ತೊಗೊಂಡಿದ್ದು? ಅವ್ರು ನಿಮ್ ಜೊತೆ ನಿಮ್ ಮನೇಲೇ ಇದಾರ?”

“ಅಮ್ಮಾ ಬದುಕಿದ್ದಾಗಲೇ ಅಂತೆ… ಅಂದ್ರೆ ನಾ ಇನ್ನೂ ಹುಟ್ಟಿರಲಿಲ್ಲ. ಅವಾಗ್ಲೇ ದತ್ತು ತೊಗೊಂಡಿದ್ದು. ಹೌದು ಅವರು ನಮ್ ಮನೇಲೇ ಇದಾರೆ”

“ನಿಮ್ ಚಿಕ್ಕಮ್ಮಂಗೆ ಮಕ್ಕಳಿಲ್ವಾ?”

“ಇಲ್ಲಾ ಸರ‍್”

“ನಿಮ್ ತಂದೆ ದತ್ತು ತೊಗೊಂಡಿರೋ ಹುಡುಗ್ರು ಕೆಟ್ಟವ್ರು ಅಂದ್ರಿ. ಯಾಕೆ?”

“ಬರೀ ಕುಡಿತಾರೆ ಸರ್”

“ಹಮ್… ಅವ್ರು ಕುಡಿಯೋದು ನಿಮ್ ಅಪ್ಪಾ ಸತ್ ಮೇಲೆ ಅನ್ಸುತ್ತೆ, ಅಲ್ವಾ?”

“ಹೌದು ಸರ್. ನಿಮಗ್ ಹೇಗ್ ಗೊತ್ತಾಯ್ತು?”

“ಇರಲಿ, ಈಗ ನಿಮ್ಮನ್ನಾ ಪಾಲೋ ಮಾಡ್ತಾಯಿರೋದು ಯಾರು ಅಂತ ಪತ್ತೆ ಹಚ್ಬೇಕಾ?”

“ಹೌದು ಸರ್. ನಿಮಗ್ ಕೊಡೋಕೆ ನನ್ ಹತ್ರ ಈಗ ದುಡ್ಡಿಲ್ಲ. ಈ ಉಂಗುರ ಇದೆ ಸಾರ್ ಅಪ್ಪಾ ಕೊಟ್ಟಿದ್ದು. ಇದನ್ನೇ ಇಟ್ಕೊಳ್ಳಿ. ಮುಂದೆ ದುಡ್ಡು ಕೊಟ್ಟು ಇದನ್ನಾ ವಾಪಸ್ ತೊಗೊಂಡ್ ಹೋಗ್ತೀನಿ”

“ಬೇಡಾ ಬೇಡಾ. ನಿಮ್ ತಂದೆ ಎಂತಾ ಸಮಾಜ ಸೇವೆ ಮಾಡಿದಾರೆ. ನಿಮ್ಮಿಂದ ಈ ಉಂಗುರ ತೊಗೊಳ್ಳೋದು ಸರಿ ಇರೊಲ್ಲ. ಆದ್ರೆ ಒಂದ್ ಮಾತು. ನಾನು ಇಂತಾ ಕೇಸೆಲ್ಲಾ ಹಿಡಿಯೋದಿಲ್ಲಾ. ಇದಕ್ಕೆ ಅಂತ ನನಗೆ ಗೊತ್ತಿರೋರು ಒಬ್ರು ಇದಾರೆ. ಪಾಲೋ ಮಾಡೋದು, ಮಾಡ್ತಿರೋರು ಯಾರು ಅಂತ ಪತ್ತೆ ಹಚ್ಚೋದು, ಇಂತದ್ದೆಲ್ಲಾ ನೀಟಾಗಿ ಮಾಡ್ತಾರೆ. ಅವರ ಅಡ್ರೆಸ್ ಕೊಡ್ತೀನಿ. ನೀವು ಅವರ ಜೊತೆ ಮಾತಾಡಿ. ನಾನೂ ಹೇಳಿರ‍್ತೀನಿ. ಉಂಗುರ ಕೊಡೋಕ್ ಹೋಗ್ಬೇಡಿ, ನಿದಾನವಾಗಿ ದುಡ್ ಕೊಟ್ರೆ ಆಯ್ತು”

ತುಂಬಾ ನಿರೀಕ್ಶೆ ಇಟ್ಟುಕೊಂಡು ಬಂದಿದ್ದ ಅವನಿಗೆ ನಿರಾಸೆಯಾಯಿತು. ಅವನ ಮಂಕಾದ ಮುಕ ನೋಡಿ ಪುಲಕೇಶಿ ಸಮಾದಾನ ಹೇಳಿದನು,
“ತುಂಬಾ ತಲೆ ಕೆಡಿಸಿಕೊಳ್ಳಬೇಡಿ. ನೀವ್ ಹೋಗಿ ಅವರನ್ನಾ ಮೀಟ್ ಮಾಡಿ, ಎಲ್ಲಾ ಸರಿ ಹೋಗುತ್ತೆ. ನನ್ ನಂಬರ್ ತೊಗೊಳ್ಳಿ, ಏನಾದ್ರು ತೊಂದ್ರೆ ಆದ್ರೆ ಕಾಲ್ ಮಾಡಿ” ಎಂದು ಅವನನ್ನು ಸಮಾದಾನ ಪಡಿಸಿ ಕಳಿಸಿದನು. ಹೊರಗಡೆ ಮೋಡಕವಿದು ಮಳೆಗರೆಯಲು ಅಣಿಯಾಗುತ್ತಿತ್ತು.

ಮಾರನೇಯ ದಿನ ಬೆಳಗ್ಗೆ ಟಿವಿ ನೋಡುವಾಗ ಬಂದ ಸುದ್ದಿ ಕೇಳಿ ಗಾಬರಿಯಾದನು ಪುಲಕೇಶಿ. ನಿನ್ನೆ ತನ್ನ ಮನೆಗೆ ಬಂದಿದ್ದ ಹುಡುಗ, ಅನುಪಮ್, ರಾತ್ರಿ ಕೊಲೆಯಾಗಿದ್ದನು.

( ಚಿತ್ರ ಸೆಲೆ: michaelwjgage.blogspot.in )

(ಮುಂದುವರೆಯುವುದು : ಎರಡನೆ  ಕಂತು ನಾಳೆ ಮೂಡಿ ಬರುತ್ತದೆ) Categories: ನಲ್ಬರಹ

ಟ್ಯಾಗ್ ಗಳು:, , , , , , , , , , , , , , ,

2 replies

Trackbacks

  1. ಪತ್ತೇದಾರಿ ಕತೆ – ಕೊಲೆಗಾರ ಯಾರು?.. | ಹೊನಲು
  2. ಪತ್ತೇದಾರಿ ಕತೆ – ಕೊಲೆಗಾರ ಯಾರು?….. | ಹೊನಲು

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s