ಪತ್ತೇದಾರಿ ಕತೆ – ಪವಾಡ!..
– ಬಸವರಾಜ್ ಕಂಟಿ.
ಕಂತು-1 ಕಂತು 2
ಅಂದುಕೊಂಡಂತೆ ಪುಲಕೇಶಿ ಮಾರನೇ ದಿನ ತಮ್ಮ ಕಾರಿನಲ್ಲಿ ಹುಲಿದುರ್ಗಕ್ಕೆ ಹೊರಟ. ಊರಿಗೆ ಹೋಗುವ ಹೊತ್ತಿಗೆ ಮದ್ಯಾನ ದಾಟಿತ್ತು. ತುಂಬಾ ಹಳೆಯದಾದ, ಪುಟ್ಟ ಹಳ್ಳಿ. ಅಲ್ಲಿನ ಮನೆಗಳಲ್ಲಿ ಅರ್ದಕ್ಕಿಂತ ಹೆಚ್ಚಿನವು ಹಳೆಯವೇ. ಅವುಗಳನ್ನೇ ಅಲ್ಲಲ್ಲಿ ರಿಪೇರಿ ಮಾಡಿಸಿಕೊಂಡಿದ್ದು ಎದ್ದು ಕಾಣುತ್ತಿತ್ತು. ಶಂಕರ್ ಅವರು ಪುಲಕೇಶಿಯನ್ನು ಬರಮಾಡಿಕೊಳ್ಳಲು ಅವನು ಕಾರು ನಿಲ್ಲಿಸಿಕೊಂಡಿದ್ದ ಜಾಗಕ್ಕೇ ಬಂದು, ತಮ್ಮ ಮನೆಗೆ ಕರೆದುಕೊಂಡು ಹೋದರು. ಅವರ ಮನೆ ಹೊಸದಾಗಿ ಕಟ್ಟಿಸಿದಂತಿತ್ತು. ತಿಂಡಿ, ಚಹಾ ಮುಗಿದಮೇಲೆ, ಗುಡಿಯ ಕಡೆಗೆ ಹೊರಟರು.
ಅವರಿಗೆ ಎದುರಾಗಿ ಹುಡಿಗಿಯರ ಗುಂಪೊಂದು ಬಂದಿತು. ಕಾಲೇಜು ಮುಗಿಸಿಕೊಂಡು ಬಂದಿರಬೇಕೆಂದುಕೊಂಡನು ಪುಲಕೇಶಿ. ಆ ಗುಂಪಲ್ಲಿ ಒಬ್ಬ ಹುಡುಗಿ ಎದ್ದು ಕಾಣುತ್ತಿದ್ದಳು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಾಣದ ಮೇಕಪ್ ಮತ್ತು ಅವಳು ಹಾಕಿದ್ದ ಸೆಂಟಿನ ವಾಸನೆ ಪುಲಕೇಶಿಯ ಗಮನ ಸೆಳೆಯಿತು. ಯಾರಿವಳು? ಎನ್ನುವಂತೆ ಅವಳನ್ನು ತಿರುಗಿ ನೋಡಿದ ಪುಲಕೇಶಿ. ಪಕ್ಕದಲ್ಲಿದ್ದ ಶಂಕರ್ ನೆರವಿಗೆ ಬಂದರು,
“ಸರ್. ಅವಳನ್ನಾ ಹಾಗ್ ನೋಡ್ಬೇಡಿ. ಬಜಾರಿ ಅವ್ಳು. ಜಗಳಕ್ಕೇ ಬರ್ತಾಳೆ, ಗಂಡಬೀರಿ” ಎಂದರು.
“ಯಾರ್ ಅವ್ಳು?”
“ಗುಡಿ ಅರ್ಚಕರು ಇದಾರಲ್ಲಾ ಸರ್, ವೆಂಕಣ್ಣನವರು… ಅವರ ಮಗಳು”. ಬೆರಗಿನಿಂದ ಪುಲಕೇಶಿಯ ಹುಬ್ಬು ಮೇಲೇರಿತು.
ಗುಡಿಯ ಆವರಣ ದೊಡ್ಡದಾಗಿತ್ತು. ಗುಡಿಯು ತೀರ ಚಿಕ್ಕದಲ್ಲದ, ತೀರ ದೊಡ್ಡದಲ್ಲದ ಅಳತೆಯಲ್ಲಿತ್ತು. ಇದ್ದದ್ದು ಗರ್ಬಗುಡಿಯೊಂದೇ. ಬಾಗಿಲಿಗೆ ಸುಮಾರು ಆರು ಅಡಿ ಒಳಗಡೆ ದೇವರ ಮೂರ್ತಿಗಳು ಇದ್ದದ್ದು. ಕತ್ತಲಲ್ಲಿ ಆ ಮೂರ್ತಿಗಳು ಕಾಣಿಸುವಂತಿರಲಿಲ್ಲ. ವೆಂಕಣ್ಣನವರ ಹತ್ತಿರ ಕೇಳಿ ಗುಡಿಯ ಬೀಗದ ಕಯ್ ತಂದಿದ್ದರು ಶಂಕರ್. ಗುಡಿಯ ಒಳಬಾಗ ತೋರಿಸುತ್ತಾ, ಅದರ ಹಿನ್ನಲೆ ಬಗ್ಗೆ ಪುಲಕೇಶಿಗೆ ತಿಳಿಸಿದರು,
“ಸುಮಾರು ನಾನ್ನೂರು ವರ್ಶ ಹಳೇದು ಸಾರ್. ಎಲ್ಲಾ ಕಲ್ಲಿಂದಲೇ ಕಟ್ಟಿದ್ದು. ಪೂಜೆ ಮಾಡೋಕೆ ಅಂತ ಮೂರು ಅರ್ಚಕರ ಮನೆ ಇದೆ ಸಾರ್. ಅದರಲ್ಲಿ ವೆಂಕಣ್ಣನವರದೂ ಒಂದು. ಇನ್ನಿಬ್ರು ನಾರಾಯಣ ಅರ್ಚಕರು, ಮತ್ತೆ ಶ್ರೀನಿವಾಸರಾಯರು ಅಂತ. ಮೂರು ಮನೆಯವ್ರು ವರ್ಶದಲ್ಲಿ ನಾಲ್ಕು ತಿಂಗಳಿಗೆ ಒಬ್ಬೊಬ್ಬರಂತೆ ಪೂಜೆ ಮಾಡ್ತಾರೆ”
ಗುಡಿಯ ಒಳಗೆ ರಾಮ, ಸೀತಾ, ಲಕ್ಶ್ಮಣನ ಮೂರ್ತಿಗಳಿದ್ದವು. ರಾಮನ ಕಾಲಿನ ಬಲಗಡೆ ಕಯ್ಮುಗಿದು ಕುಳಿತ ಪುಟ್ಟ ಹನುಮಂತನ ಮೂರ್ತಿ ಇತ್ತು. ಜೋಡಿಸಿದ್ದ ರಾಮನ ಕಾಲುಗಳ ಮುಂದೆಯೇ ಇತ್ತು ತಾಮ್ರದ ಪಣತೆ. ಅದರ ಎದುರಿಗೆ ಕುಳಿತು ದಿಟ್ಟಿಸಿದನು ಪುಲಕೇಶಿ. ದುಂಡಗೆ ಬಾರವಾಗಿತ್ತು. ಪಣತೆಯ ಕೆಳಗಡೆ ಸವೆದಿದ್ದ ಕಲ್ಲನ್ನು ನೋಡಿ ಅದನ್ನು ವರ್ಶಗಳಿಂದಲೂ ಅಲ್ಲಿಯೇ ಇಡುತ್ತಾರೆ ಎಂಬುದನ್ನು ಅರಿತ.
“ಇದೇ ಅಲ್ವಾ ಪಣತೆ?” ಎಂದು ಕೇಳಿದ.
“ಹೌದು ಸರ್”
ಮೇಲೆದ್ದು, ಮೂರ್ತಿಗಳ ಸುತ್ತು ಹಾಕುತ್ತ, ಗೋಡೆಯನ್ನು ತಟ್ಟಿ ತಟ್ಟಿ ನೋಡಿದ. ಗಟ್ಟಿಯಾಗಿತ್ತು. ಒಂದು ಕಿಟಕಿಯೂ ಇರಲಿಲ್ಲ. ಮಾಳಿಗೆ ನೋಡಿದ. ಎಲ್ಲೂ ನುಸುಳಿಕೊಂಡು ಬರಬಹುದಾದ ದಾರಿ ಕಾಣಲಿಲ್ಲ. ತುಸು ಹಿಂಜರಿಕೆಯಾದರೂ, ಮೂರ್ತಿಗಳನ್ನು ಅಲುಗಾಡಿಸಿ ನೋಡಿದ. ಅವೂ ಗಟ್ಟಿಯಾಗಿದ್ದವು. ರಾತ್ರಿ ಹೊತ್ತು ಬೆಳಗಲು ಗುಡಿಯ ಒಳಗಡೆ ಒಂದು ಲಾಂದ್ರವೂ ಇರಲಿಲ್ಲ. ಅವನಿಗೆ ಏನೂ ಹೊಳೆಯಲಿಲ್ಲ. ಮತ್ತೆ ಪಣತೆಯತ್ತ ನೋಡಿದ. ಅದು ಅವನನ್ನು ಅಣಕಿಸಿದಂತಾಯಿತು. ಯೋಚನೆಯಲ್ಲಿ ಮುಳುಗಿದ್ದ ಅವನನ್ನು ಶಂಕರ್ ಅವರೂ ಮಾತಾಡಿಸಲಿಲ್ಲ. ತುಸು ಹೊತ್ತಿನ ನಂತರ ಇಬ್ಬರೂ ಹೊರಗಡೆ ಬಂದರು. ಬೀಗ ಹಾಕಿ ಇನ್ನೇನು ಹೊರಡಬೇಕು ಎನ್ನುವ ಹೊತ್ತಿಗೆ ಸುಮಾರು ಇಪ್ಪತ್ತರ ಹುಡುಗನೊಬ್ಬ ಅಲ್ಲಿ ಬಂದ. ಶಂಕರ್ ಅವರನ್ನು ನೋಡಿ, “ನಮಸ್ಕಾರ ಸರ್” ಅಂದ.
“ನಮಸ್ಕಾರ ಗೋಪಿ. ಕಾಲೇಜಿಂದ ಬಂದ್ಯಾ?” ಎಂದರು ಶಂಕರ್.
“ಹೌದು ಸರ್. ಇವರ್ಯಾರು?” ಎಂದು ಕೇಳಿದ.
“ಇವರು ಪುಲಕೇಶಿ ಅಂತ. ನಮ್ ಊರಲ್ಲಿ ನಡೀತಾ ಇರೋ ಪವಾಡ ಬಯಲು ಮಾಡೋಕೆ ಬಂದಿದಾರೆ”
“ಓಹ್! ನಮಸ್ಕಾರ ಸರ್”
ಪುಲಕೇಶಿ, “ನಮಸ್ಕಾರ” ಎಂದು, ಯಾರು ಈ ಹುಡುಗ ಎನ್ನುವ ರೀತಿಯಲ್ಲಿ ಶಂಕರ್ ಕಡೆ ನೋಡಿದರು. ಆಗ ಶಂಕರ್,
“ಇವನು ಅರ್ಚಕರು ನಾರಾಯಣರವರ ಮಗ ಸರ್, ಗೋಪಿ ಅಂತ” ಎಂದರು.
“ಓಹ್! ಇವನೇ ಅಲ್ವಾ ಈ ಪವಾಡ ಮೊದ್ಲು ನೋಡಿದ್ದು?”
“ಹೌದು, ನಾನೇ ಸರ್.” ಮಾತು ಶುರುಮಾಡಿದ ಗೋಪಿ. “ದಿನಾ ಬೆಳಗ್ಗೆ ಎದ್ದು ಅದೇ ಗುಡಿ ಮುಂದೆ ವಾಕಿಂಗ್ ಹೋಗ್ತೀನಿ. ಮೊದಲನೇ ಸಾರಿ ನೋಡ್ದಾಗ ರಾತ್ರಿ ಹಚ್ಚಿದ್ದು ಇನ್ನೂ ಆರಿಲ್ವೆನೋ ಎಂದು ಸುಮ್ನಾಗಿದ್ದೆ. ಆದ್ರೆ, ನನ್ ಗೆಳೆಯ ಒಬ್ಬ, ರಾತ್ರಿ ದೀಪ ಆರಿತ್ತು ಅಂತ ನಿಕ್ಕಿಯಾಗ್ ಹೇಳ್ದ. ನನಗೂ ಅನುಮಾನ ಬಂತು. ಆದ್ರೆ ಮಾರನೇ ದಿನಾ ಅಂತಾದ್ದೇನೂ ಆಗ್ಲಿಲ್ಲ. ನಾವೆಲ್ಲಾ ಅದನ್ನ ಮರ್ತೇ ಬಿಟ್ಟಿದ್ವಿ. ಆದ್ರೆ ಮುಂದಿನ್ ಅಮವಾಸ್ಯೆಗೆ ಮತ್ತೆ ಹೀಗೇ ಆಯ್ತು. ಆಗ್ಲೂ ನಾನೇ ಮೊದ್ಲು ನೋಡಿದ್ದು. ಬಹುಶ ಇದು ಪ್ರತಿ ಅಮವಾಸ್ಯೆಗೆ ಆಗುತ್ತೇಂತ ನಾವು ಅನ್ಕೊಂಡ್ವಿ. ಅದೇ ಸರಿಯಾಯ್ತು”
“ಸರಿ” ಎಂದು ಗುಡಿಯಿಂದ ಹೊರಬಂದನು ಪುಲಕೇಶಿ. ಆ ಕ್ಶಣಕ್ಕೆ ಅವನಿಗೆ ಏನೂ ಹೊಳೆಯಲಿಲ್ಲ. ಒಂದೆರಡು ದಿನ ಸಮಯ ಬೇಕೆಂದು ಶಂಕರ್ ಅವರಿಗೆ ಹೇಳಿ ಕಾರು ಹತ್ತಿದನು.
ಪುಲಕೇಶಿಯ ಮುಂದಿದ್ದದ್ದು ಎರಡು ಕೇಳ್ವಿಗಳು. ಒಂದು – ಪವಾಡ ಹೇಗೆ ನಡೆಯಿತು?. ಎರಡು- ಇದರ ಹಿಂದೆ ಯಾರಿರಬಹುದು? ಕಿಟಕಿಯ ಬದಿ ನಿಂತು ಸಿಗರೇಟು ಹಚ್ಚಿದನು. ಗಾಳಿಗೆ ಹಾರಿ ಕಣ್ಣ ಮುಂದೆ ಬರುತ್ತಿದ ಕೂದಲನ್ನು ಮೇಲೆ ಸರಿಸಿದ. ತಾನು ನೋಡಿದ್ದೆಲ್ಲವನ್ನೂ ಮೆಲಕು ಹಾಕುತ್ತ, ಆ ಒಂದು ಸುಳಿವಿಗಾಗಿ ತಡಕಾಡುತ್ತಿದ್ದನು. ಏನಾದರೂ ಪತ್ತೆ ಮಾಡುವಾಗ, ಆಗುಹ ನಡೆದ ಜಾಗ ಅತವಾ ನಡೆದ ರೀತಿಯಲ್ಲಿ ಯಾವುದೋ ಒಂದು “ವಿಶಯ” ಎದ್ದು ಕಾಣುತ್ತದೆ. ಒಂದು – ಆ “ವಿಶಯ” ಇಲ್ಲದಿದ್ದರೆ ಆ ಆಗುಹವೇ ನಡೆಯುತ್ತಿರಲಿಲ್ಲ. ಎರಡು – ಆ “ವಿಶಯ” ಆ ಜಾಗಕ್ಕೆ ಇಲ್ಲವೇ ಆ ಸನ್ನಿವೇಶಕ್ಕೆ ಹೊಂದಿಕೊಳ್ಳುವದಿಲ್ಲ. ಆ ವಿಶಯ ತಿಳಿದರೆ, ಸುಳಿವು ದೊರೆತಂತೆಯೇ. ಆದರೆ ಇಲ್ಲಿ ಎಲ್ಲವೂ ಅಚ್ಚುಕಟ್ಟಾಗಿತ್ತು. ತಟ್ಟನೆ ಅವನಿಗೆ ಹುಲಿದುರ್ಗ ಎನ್ನುವ ಹೆಸರು ಎಲ್ಲೋ ಓದಿದ್ದ ನೆನಪಾಯಿತು. ಅದರ ಹಿಂದೆಯೇ ಆ ಗುಡಿಯನ್ನು ಬರಮಪ್ಪ ನಾಯಕರಿದ್ದಾಗ ಕಟ್ಟಿಸಿದ್ದು ಎಂದು ನೆನಪಾಗಿ, ಮನೆಯಿಂದ ಕೆಳಗಿಳಿದು ಹೊತ್ತಗೆ ಅಂಗಡಿಗೆ ಹೋದನು. ಅಲ್ಲಿ ದುರ್ಗದ ಹಿನ್ನೆಲೆ ಬಗ್ಗೆ ವಿವರವಾಗಿ ಬರೆಯಲಾಗಿದ್ದ ಹೊತ್ತಗೆಯೊಂದನ್ನು ತೆಗೆದು ಹುಲಿದುರ್ಗಕ್ಕಾಗಿ ತಡಕಾಡಿದ. ಸಿಕ್ಕಿತು. ಅಲ್ಲಿದ್ದುದನ್ನು ಓದಿ ಅವನಿಗೆ ನಗು ತಡೆಯಲಾಗಲಿಲ್ಲ. ಶತ್ರು ದಾಳಿಯಿಂದ ತಪ್ಪಿಸಿಕೊಳ್ಳಲು ಆ ಊರಿನ ತುಂಬಾ ಸುರಂಗ ದಾರಿಗಳನ್ನು ಮಾಡಿದ್ದರು. ಆ ಊರಿನಲ್ಲಿ ಕಾಲು ಬಾಗದಶ್ಟು ಮನೆಗಳಿಗೆ ಸುರಂಗ ದಾರಿಗಳಿದ್ದವು. ಕೆಲವೊಂದು ಮನೆಯಿಂದ ಮನೆಗೆ ಕೂಡಿದರೆ, ಇನ್ನು ಕೆಲವು ಊರ ಆಚೆ ಬಾಯಿ ತೆರೆಯುತ್ತಿದ್ದವು. ಆ ಊರಿನಲ್ಲಿದ್ದ ಒಂದು ಸುರಂಗ ದಾರಿ ನೇರ ದುರ್ಗಕ್ಕೆ ಹೋಗಿ ಕೂಡುತ್ತದೆ ಎಂದು ಬರೆಯಲಾಗಿತ್ತು. ಆದರೆ ಈಗ ಅವೆಲ್ಲ ಮುಚ್ಚಿಹೋಗಿದ್ದವು. ಪುಲಕೇಶಿಗೆ ಸುಳಿವೊಂದು ಸಿಕ್ಕಂತಾಗಿ ಅವನ ಮನಸ್ಸು ಗೆಲುವಾಯಿತು. ಪವಾಡ ಹೇಗೆ ನಡೆದಿರಬಹುದೆಂದು ಮುಕ್ಕಾಲು ಬಾಗ ಅವನಿಗೆ ಗೊತ್ತಾಗಿತ್ತು. ಈಗ ಇದ್ದದ್ದು ಅದನ್ನು ಯಾರು ಮಾಡಿರಬಹುದೆಂದು. ಇನ್ನೊಮ್ಮೆ ಹುಲಿದುರ್ಗಕ್ಕೆ ಹೋಗಲು ತೀರ್ಮಾನಿಸಿದ. ಆದರೆ ಆ “ವಿಶಯ” ಇನ್ನೂ ಅವನಿಗೆ ಹೊಳೆದಿರಲಿಲ್ಲ.
ಮರುದಿನ ಶಂಕರ್ ಮತ್ತು ಪುಲಕೇಶಿ ಎರಡನೇಯ ಬಾರಿಗೆ ಗುಡಿ ಹೊಕ್ಕರು. ಹುರುಪಿನಿಂದ ಪುಲಕೇಶಿ ಗುಡಿಯ ನೆಲವನ್ನು ಎಚ್ಚರಿಕೆಯಿಂದ ನೋಡತೊಡಗಿದ. ಒಂದು ಅಂಗುಲವೂ ಬಿಡದೆ ತಟ್ಟಿ ತಟ್ಟಿ ನೋಡಿದ. ಎಲ್ಲಿಯೂ ಕೆಳಗಿನಿಂದ ಗುಡಿಯ ಒಳಗಡೆ ಬರಬಹುದಾದ ದಾರಿ ಸಿಗಲಿಲ್ಲ. ಗುಡಿಯ ನೆಲದಲ್ಲಿ ಒಂದು ಬಿರುಕು ಕೂಡ ಕಾಣಿಸಲಿಲ್ಲ. ಬೇಸರವಾಗಿ ಮೇಲೆದ್ದ. ಶಂಕರ್ ಮೂಕರಾಗಿ ಪುಲಕೇಶಿಯನ್ನೇ ನೋಡುತ್ತಿದ್ದರು. ಮೂರ್ತಿಗಳನ್ನು ಸುತ್ತಿ, ರಾಮನ ಎದುರಿಗೆ ಪಣತೆ ಇದ್ದ ಜಾಗಕ್ಕೆ ಬಂದ. ಅದನ್ನು ಮತ್ತೆ ಮತ್ತೆ ದಿಟ್ಟಿಸಿನೋಡಿದ. ಪಣತೆಯ ಕೆಳಗೆ ಸವೆದಿದ್ದ ಕಲ್ಲಿನ ಕಡೆಗೆ ಅವನ ನೋಟ ಹರಿಯಿತು. ರಾಮನ ಕಾಲುಗಳ ಮುಂದೆಯೇ ಇತ್ತು ಆ ಪಣತೆ. ಎರಡೂ ಕಾಲುಗಳ ನಡುವೆ ಸಣ್ಣ ತೂತೊಂದು ಕಾಣಿಸಿತು. ದಿಟ್ಟಿಸಿ ನೋಡಿದರೆ ಮಾತ್ರ ಕಾಣುವಂತಿತ್ತು. ಎರಡು ಮಿಲಿ ಮೀಟರ್ ಅಗಲವಿರಬಹುದು, ಅಶ್ಟೇ. ಏನೋ ಹುಡುಕುವವರಂತೆ ಅತ್ತಿತ್ತ ನೋಡಿದನು, ಗುಡಿಯ ಹೊರಗೆ ಬಂದು ಮತ್ತೆ ಅತ್ತಿತ್ತ ನೋಡಿದ. ಕಸ ಗುಡಿಸುವ ತೆಂಗಿನ ಮರದ ಪೊರಕೆಯೊಂದೆ ಕಾಣಿಸಿತು. ಅದರಿಂದ ಒಂದೆರಡು ಕಡ್ಡಿ ಹೀರಿ, ಮತ್ತೆ ಒಳ ಬಂದು ಆ ತೂತಿನಲ್ಲಿ ಕಡ್ಡಿ ಇಳಿಸಿದ. ಸರಳವಾಗಿ ಇಳಿಯಿತು. ಮೇಲೆದ್ದು ಶಂಕರ್ ಕಡೆಗೆ ನೋಡಿ ಮುಗುಳ್ನಕ್ಕನು, ತಿಳಿಯಿತಾ? ಎನ್ನುವ ರೀತಿಯಲ್ಲಿ. ಅಲ್ಲಿ ತೂತೊಂದಿದೆ ಅನ್ನುವುದನ್ನು ಬಿಟ್ಟರೆ ಶಂಕರ್ ಅವರಿಗೆ ಏನೂ ಹೊಳೆಯಲಿಲ್ಲ. ಗೊಂದಲದಿಂದ ಕೂಡಿದ ಅವರ ಮುಕ ನೋಡಿ ಪುಲಕೇಶಿ ಅಂದ,
“ಶಂಕರ್ ಅವ್ರೇ… ಅರಿವು ಅನ್ನೋದು ತುಂಬಾ ಬಲವಾದದ್ದು ನೋಡಿ. ಈ ಊರಿನ ತುಂಬಾ ಸುರಂಗಗಳಿವೆ ಅನ್ನೋದು ನನಗೆ ಗೊತ್ತಾಯಿತು. ಅದರಿಂದಲೇ ಈಗ ಈ ಪವಾಡ ಹೇಗೆ ನಡೀತಾಯಿದೆ ಅನ್ನೋದು ತಿಳೀತು”
“ಅಂದ್ರೆ?”
“ಗುಡಿಯ ಕೆಳಗಿನ ಸುರಂಗದಿಂದ, ಸರಿಯಾಗಿ ಪಣತೆ ಪಕ್ಕ, ಅಂದರೆ ರಾಮನ ಕಾಲುಗಳ ಮುಂದೆ ಬರುವಂತೆ ತೂತು ಮಾಡಿದಾರೆ. ಪಣತೆ ಯಾವಾಗಲೂ ಅದೇ ಜಾಗದಲ್ಲಿ ಇರುತ್ತೆ ಅಂತ ಅವರಿಗೆ ಗೊತ್ತು. ಕೆಳಗಡೆಯಿಂದ ಸಣ್ಣ ಪೈಪ್ ಒಂದನ್ನು ಪಣತೆ ಎತ್ತರಕ್ಕೆ ಏರಿಸಿ, ಎಣ್ಣೆ ಪಂಪ್ ಮಾಡಿ ಹಾಕ್ತಿದಾರೆ. ಕಬ್ಬಿಣದ ಪೈಪ್ ಆಗಿರಬೇಕು, ಸುಮಾರು ಅಯ್ದರಿಂದ, ಏಳು ಅಡಿ, ಉದ್ದ”
“ಮತ್ತೆ ಬೆಂಕಿ?”
“ನಾವ್ ಮೊದಲೇ ಮಾತಾಡ್ದ ಹಾಗೆ ಗ್ಲಿಸರೀನ್ ಬಳಸಿರಬಹುದು”
“ಆದ್ರೆ ಈ ಸುರಂಗದ ವಿಶಯ ನನಗೆ ಗೊತ್ತೇ ಇರಲಿಲ್ಲ ಸರ್.”
“ನೀವು ಈ ಊರಿಗೆ ಬಂದು ಎಶ್ಟು ವರ್ಶ ಆಯ್ತು?”
“ನಮ್ಮಪ್ಪನ ಕಾಲದಿಂದ್ಲೂ, ಅಂದ್ರೆ ಸುಮಾರು ಅರವತ್ತು ವರ್ಶದಿಂದ ಸರ್”
“ಈ ಸುರಂಗಗಳೆಲ್ಲ ಮುಚ್ಚಿ ಹೋಗಿನೇ ಇನ್ನೂರು ವರ್ಶ ಆಗಿರಬಹುದು. ಯಾರಿಗೂ ಆ ಬಗ್ಗೆ ಗೊತ್ತಿರಲಿಕ್ಕಿಲ್ಲ”
ಇಬ್ಬರೂ ಗುಡಿಯಿಂದ ಹೊರ ಬಂದರು. ಇನ್ನು ಪುಲಕೇಶಿಯ ಮುಂದಿದ್ದದ್ದು ಇದನ್ನು ಯಾರು ಮಾಡುತ್ತಿದ್ದಾರೆ ಎಂದು ಕಂಡು ಹಿಡಿಯುವುದು. ಶಂಕರ ಅವರೂ ಅದನ್ನೇ ಕೇಳಿದರು. ಪುಲಕೇಶಿ ಅದಕ್ಕೆ ಅಣಿಯಾಗಿಯೇ ಬಂದಿದ್ದ.
“ಆ ತೂತಿನಿಂದ ಏನು ತಿಳಿದುಕೊಳ್ಳಬಹುದು ಅಂದ್ರೆ, ಗುಡಿಯ ಒಳಗೆ ಯಾವಾಗಲೂ ಹೋಗಿ ಬರುವ ಯಾರೋ ಒಬ್ಬರು ಮಾಡಿದ್ದಾರೆ ಅಂತ. ಅಂದರೆ ಆ ಅರ್ಚಕರಲ್ಲಿಯೇ ಯಾರೋ ಒಬ್ರು ಮಾಡಿದ್ದಾರೆ”
“ಹಾಂ!” ಎಂದು ಬೆರಗಾದನು ಶಂಕರ್.
“ಹೌದು. ಅದೇ ಸತ್ಯ. ನಾವು ಈಗ ಆ ಮೂರೂ ಅರ್ಚಕರ ಮನೆಗೆ ಹೋಗ್ಬೇಕಲ್ಲಾ?”
“ಅಂದ್ರೆ? ಅವರ ಮನೆಗೆ ಹೋಗಿ ಅವರ ಮನೇಲಿ ಸುರಂಗ ಏನಾದ್ರು ಇದೆ ಅಂತ ನೋಡ್ತೀರಾ?”
ತುಸು ಹೊತ್ತು ಯೋಚಿಸಿದ ಪುಲಕೇಶಿ, “ಹಾಗ್ ಮಾಡೋಕ್ ಆಗೊಲ್ಲ. ನೇರವಾಗಿ ಅವರಿಗ್ ಕೇಳಿದ್ರೆ ಹುಶಾರಾಗಿ ಬಿಡ್ತಾರೆ. ನಮ್ಮನ್ನ ಮನೆ ಒಳಗೇ ಬಿಟ್ಕೊಳೊಲ್ಲ. ಬೇರೆ ದಾರಿ ಹುಡುಕ್ ಬೇಕು. ಆ ಮೂವರ ಮನೆಗೆ ಒಂದ್ ಸಾರಿ ಹೋಗಿ ಬರಬಹುದಾ?”
“ಅದಕ್ಕೇನು. ಬನ್ನಿ ಹೋಗೋಣ”. ಗಂಟೆ ಎರಡಾಗಿತ್ತು.
(ಮುಂದುವರೆಯುವುದು : ಮೂರನೇ ಕಂತು ನಾಳೆಗೆ)
( ಚಿತ್ರ ಸೆಲೆ: well.com )
2 Responses
[…] ಕಂತು-1 ಕಂತು 2 ಕಂತು 3 […]
[…] ಕಂತು-1 ಕಂತು 2 ಕಂತು 3 ಕಂತು 4 […]