ಇದರ ಬಿರುಸಿನ ಓಟಕ್ಕೆ ಸಾಟಿಯಾರು!?

– ರತೀಶ ರತ್ನಾಕರ.
Chigate1

‘ಏನ್ ಓಡ್ತಾನ್ರಿ ಅವ್ನು… ಒಳ್ಳೆ ಚಿಗಟೆ ಓಡ್ದಂಗೆ ಓಡ್ತಾನೆ…’ ಉಸೇನ್ ಬೋಲ್ಟ್ ಅನ್ನೋ ಇನ್ಯಾರೋ ಬಿರುಸಿನ ಓಟಗಾರನ ಓಟವನ್ನೋ ನೋಡಿ, ಅವರ ಓಟವನ್ನು ಚಿಗಟೆ(Cheetah)ಯ ಓಟಕ್ಕೆ ಹೋಲಿಸುವುದುಂಟು. ಇಂತಹ ಚಿಗಟೆ ಚಿತ್ರವನ್ನು ನೋಡಿದ ಕೂಡಲೇ ‘ಅದು ಚಿರತೆ(leopard) ಅಲ್ಲವೇ?’ ಎಂದೆನಿಸುತ್ತದೆ. ಆದರೆ ಇವು ಬೇರೆ ಬೇರೆ. ಇವೆರಡೂ ದೊಡ್ಡಬೆಕ್ಕುಗಳ ಗುಂಪಿಗೆ (cat family) ಸೇರಿದ್ದರೂ, ಅವುಗಳ ನಡುವೆ ತುಂಬಾ ಬೇರ‍್ಮೇ ಇದೆ. ಚಿರತೆಯ ಬಿರುಸು ಚಿಗಟೆಯ ಬಿರುಸಿನ ಅರ‍್ದದಶ್ಟು ಇದೆ. ಹಾಗಾದರೆ ಈ ಚಿಗಟೆ ಎಶ್ಟು ಬಿರುಸಾಗಿ ಓಡುತ್ತೆ?

ಬಿರುಸಿನ ಓಟಗಾರನಾದ ಉಸೇನ್ ಬೋಲ್ಟ್ 100 ಮೀ ದೂರವನ್ನು ತಲುಪಲು 9.58 ಸೆಕೆಂಡುಗಳನ್ನು ತೆಗೆದುಕೊಂಡರೆ ಚಿಗಟೆ ತೆಗೆದುಕೊಳ್ಳುವುದು ಕೇವಲ 5.8 ಸೆಕೆಂಡುಗಳನ್ನು! ಬಿರುಸಿನ ಓಟಗಾರನ ಉರುಬು(speed) 37.6 ಕಿ.ಮೀ/ಗಂಟೆಗಾದರೆ ಚಿಗಟೆಯ ಉರುಬು ಸುಮಾರು 100-115 ಕಿ.ಮೀ/ಗಂಟೆಯಾಗಿದೆ! ಚಿಗಟೆ ಓಟದ ಬೆರಗಿನ ಸುದ್ದಿ ಎಂದರೆ ಅದರ ಉರುಬೇರಿಕೆ (acceleration), ಬರಿ 3 ಸೆಕೆಂಡುಗಳಲ್ಲಿ 0 ಯಿಂದ 100 ಕಿ.ಮೀ/ಗಂಟೆಯ ಉರುಬಿಗೆ ಅದು ತಲುಪುತ್ತದೆ. ದಾರಿಯಲ್ಲಿ ಓಡಾಡುವ ಯಾವ ಬಂಡಿಯು ಇಶ್ಟು ಕಡಿಮೆ ಹೊತ್ತಿನಲ್ಲಿ ಈ ಉರುಬನ್ನು ತಲುಪುವುದಿಲ್ಲ!

ಚಿಗಟೆ ಅಶ್ಟು ಬಿರುಸಾಗಿ ಹೇಗೆ ಓಡುತ್ತೆ?

ಚಿಗಟೆಯ ಮೈಕಟ್ಟು ಮತ್ತು ಇಟ್ಟಳ ಅದರ ಬಿರುಸಿಗೆ ಹೆಚ್ಚು ನೆರವಾಗಿದೆ. ಗಾಳಿಕದಲಿಕೆಗೆ ನೆರವಾಗುವ (aerodynamic) ಮೈಕಟ್ಟು ಓಟದ ಉರುಬನ್ನು ಹೆಚ್ಚಿಸುತ್ತದೆ. ಆ ಮೈಕಟ್ಟಿನ ಕೆಲವು ವಿವರ ಇಲ್ಲಿದೆ.

chigate2

ಮೋರೆ(face):
– ಚಿಗಟೆಯ ಮಯ್ಯಿಗೆ ಹೋಲಿಸಿದರೆ ಅದರ ಮೋರೆ ತುಂಬಾ ಚಿಕ್ಕದು. ಇದು ಓಡುವಾಗ ಗಾಳಿಯನ್ನು ಸೀಳಲು ನೆರವಾಗುತ್ತದೆ.
– ದೊಡ್ಡದಾದ ಕಣ್ಣುಗಳ ಜೊತೆಗೆ ಇಕ್ಕಣ್ಣಿನ (binocular) ನೋಟವನ್ನು ಹೊಂದಿರುವುದು ಬೇಟೆಯ ಮೇಲೆ ಕಣ್ಣಿಡಲು ನೆರವಾಗಿವೆ.
– ಚಿಗಟೆಯ ಕಣ್ಣುಗಳ ಬದಿಯಿಂದ ಕಪ್ಪುಗೆರೆಯೊಂದು ಅದರ ಮೂಗನ್ನು ಬಳಸಿಕೊಂಡು ಬಾಯಿಯ ಹತ್ತಿರದವರೆಗೂ ಬರುತ್ತದೆ. ಬಿರುಸಾಗಿ ಓಡುವಾಗ ನೇಸರ ಬೆಳಕು ಕಣ್ಣುಕುಕ್ಕದಿರುವಂತೆ ಈ ಕಪ್ಪುಗೆರೆಯು ನೋಡಿಕೊಳ್ಳುತ್ತದೆ.
– ದೊಡ್ಡದಾದ ಮೂಗಿನ ಹೊಳ್ಳೆಗಳನ್ನು ಹೊಂದಿದ್ದು, ಓಡುವಾಗ ಹೆಚ್ಚಿನ ಗಾಳಿ ತೆಗೆದುಕೊಳ್ಳಲು ನೆರವಾಗುತ್ತದೆ.
– ಓಟಕ್ಕೆ ಹೇಳಿಮಾಡಿಸಿದ ಮೋರೆ ಇರುವುದರಿಂದ ಇದರ ಹಲ್ಲುಗಳು ಅಶ್ಟು ಗಟ್ಟಿಯಾಗಿ ದೊಡ್ಡದಾಗಿ ಇಲ್ಲ.

ಬಳುಕುವ ಬೆನ್ನೆಲುಬು:
ಚಿಗಟೆಯ ಮೈಕಟ್ಟಿನಲ್ಲಿ ಅರಿದಾದದ್ದು ಎಂದರೆ ಅದರ ಬಳುಕುವ ಬೆನ್ನೆಲುಬು. ಓಡುವಾಗ ಅದರ ನಾಲ್ಕೂ ಕಾಲುಗಳು ಹೊಟ್ಟೆಯ ಕೆಳಗೆ ಬಂದಾಗ ಬೆನ್ನೆಲುಬು ಸಾಕಶ್ಟು ಬಾಗುತ್ತದೆ. ಇದರಿಂದ ಚಿಗಟೆಯ ಮುಂಗಾಲು ಮತ್ತು ಹಿಂಗಾಲುಗಳು ಒಂದರ ಮೇಲೊಂದಾಗುತ್ತವೆ. ಮುಂಗಾಲು ಮತ್ತು ಹಿಂಗಾಲುಗಳನ್ನು ದೂರಮಾಡಿ ನಿಮಿರಿದಾಗ ಅದೇ ಬೆನ್ನೆಲುಬು ನೆಟ್ಟಗಾಗಿ ಕಾಲುಗಳನ್ನು ಸಾಕಶ್ಟು ನಿಮಿರಿಸಲು ನೆರವಾಗುತ್ತವೆ. ಇದರಿಂದ ಓಟದ ದಾಪುಗಾಲು(stride) ತುಂಬಾ ದೊಡ್ಡದಾಗುತ್ತದೆ. ಚಿಗಟೆಯು ಸುಮಾರು 25 ಅಡಿಗಳಶ್ಟು ದೂರಕ್ಕೆ ಒಂದು ದಾಪುಗಾಲನ್ನು ಹಾಕುತ್ತದೆ.

chetahಹಿಗ್ಗುವ ಉಸಿರುಚೀಲ(lung), ಗುಂಡಿಗೆ, ದೊಡ್ಡದಾದ ನೆತ್ತರುಗೊಳವೆಗಳನ್ನು ಹೊಂದಿರುವುದರಿಂದ ಹೆಚ್ಚು ಉಸಿರ‍್ಗಾಳಿಯನ್ನು ಮತ್ತು ನೆತ್ತರನ್ನು ಮಯ್ಯೊಳಗೆಲ್ಲಾ ಹರಿಸಲು ನೆರವಾಗುತ್ತವೆ. ಇದು ಬಿರುಸಿನ ಓಟಕ್ಕೆ ಬೇಕೇ ಬೇಕು.
ಪಕ್ಕೆಲುಬು ಗೂಡುಗಳು ಚಿಕ್ಕದಾಗಿ ಮತ್ತು ಮಟ್ಟಸವಾಗಿರುವುದರಿಂದ ಕಾಲುಗಳಿಗೆ ಒಳ್ಳೆಯ ಕದಲಿಕೆಯನ್ನು ಕೊಡುತ್ತವೆ.

ಕಾಲುಗಳು:
ಉದ್ದನೆಯ ಮತ್ತು ತೆಳುವಾದ ಕಾಲುಗಳು ಓಟಕ್ಕೆ ಹೇಳಿಮಾಡಿಸಿದಂತಿವೆ. ಸಾಕಶ್ಟು ಉದ್ದದ ದಾಪುಗಾಲನ್ನು ಹಾಕಲು ಇಂತಹವೆ ಬೇಕು.
chigate3ಅರೆ-ಮುದುರಿಕೊಳ್ಳುವ (semi-retractable) ಕಾಲುಗುರುಗಳು ಓಡುವಾಗ ಕಾಲಿಗೆ ಒಳ್ಳೆಯ ಎಳೆತವನ್ನು ಕೊಡುತ್ತವೆ. ಬಿರುಸಿನ ಓಟಗಾರರು ಇಲ್ಲವೇ ಕಾಲ್ಚೆಂಡು ಆಟಗಾರರು ಹಾಕುವ ಶೂಗಳಲ್ಲಿ ಚಿಕ್ಕ ಚಿಕ್ಕ ಮೊಳೆಗಳಿರುವುದನ್ನು ಗಮನಿಸಿರಬಹುದು. ಓಡುವಾಗ ಆ ಮೊಳೆಗಳು ನೆಲಕ್ಕೆ ತಾಕಿಕೊಂಡು ಕಾಲನ್ನು ಜಗ್ಗಿ ಮತ್ತಶ್ಟು ಬಿರುಸಿನಿಂದ ಓಡಲು ನೆರವಾಗುತ್ತವೆ. ಅದೇ ಕೆಲಸವನ್ನು ಇಲ್ಲಿ ಕಾಲುಗುರುಗಳು ಮಾಡುತ್ತವೆ. ಇನ್ನು ಅರೆ-ಮುದುರಿಕೊಳ್ಳುವುದು ಎಂದರೆ, ಬೆಕ್ಕುಗಳು ಏನಾನ್ನಾದರು ಪರಚುವಾಗ ಕಾಲುಗುರುಗಳು ಹೊರಬಂದಿರುವುದನ್ನು ಕಾಣಬಹುದು. ಆದರೆ ಅವು ಸುಮ್ಮನೆ ನಡೆದಾಡುವಾಗ ಅವುಗಳ ಅಂಗಾಲನ್ನು ಗಮನಿಸಿದರೆ ನಮಗೆ ಯಾವುದೇ ಉಗುರುಗಳು ಕಾಣುವುದಿಲ್ಲ, ಆಗ ಅವು ಪೂರ‍್ತಿಯಾಗಿ ಮುದುರಿಕೊಂಡಿರುತ್ತವೆ. ಇವು ಪೂರ‍್ತಿಯಾಗಿ ಮುದುರಿಕೊಳ್ಳುವ ಉಗುರುಗಳು. ಚಿಗಟೆಯಲ್ಲಿ ಈ ಉಗುರುಗಳು ಪೂರ‍್ತಿಯಾಗಿ ಮುದುರಿಕೊಳ್ಳುವುದಿಲ್ಲ, ಅರೆ-ಮುದುರಿಕೊಂಡು ಓಟಕ್ಕೆ ನೆರವನ್ನು ನೀಡುತ್ತವೆ.

ಬಾಲ:

ಇದರ ಬಾಲ ಉದ್ದವಾಗಿ ಮತ್ತು ತೂಕವಾಗಿಯೂ ಇದೆ. ಚಿಗಟೆ ಮಯ್ಯ ಒಟ್ಟು ಒದ್ದ 3.5 ರಿಂದ 5 ಅಡಿಗಳಿದ್ದರೆ ಅದರ ಬಾಲದ ಉದ್ದ 2.5 – 3 ಅಡಿಗಳಿರುತ್ತದೆ. ಓಡುವಾಗ ಕೂಡಲೇ ದಿಕ್ಕನ್ನು ಬದಲಿಸಲು ಈ ಬಾಲದ ಪಾತ್ರ ತುಂಬಾ ದೊಡ್ಡದಿದೆ. ನದಿಯಲ್ಲಿ ದೋಣಿಗಳು ಸಾಗುವಾಗ ಬೇಕಾದ ಕಡೆಗೆ ತಿರುಗಲು ನೆರವಾಗುವುದು ಅವುಗಳ ಹೊರಳುಪಟ್ಟಿ(rudder)ಗಳು. ದೋಣಿಯಲ್ಲಿ ಹೊರಳುಪಟ್ಟಿ ಮಾಡುವ ಕೆಲಸವನ್ನೇ ಬಾಲವು ಚಿಗಟೆಯ ಓಟದಲ್ಲಿ ಮಾಡುತ್ತದೆ.

chigate4

ಚಿಗಟೆ ಪಂಗಡದ ಇತರೆ ಉಸಿರುಗಗಳಿಗೆ ಹೋಲಿಸಿದರೆ ಇದರ ಮಯ್ಯ ತೂಕ ತುಂಬಾ ಕಡಿಮೆ. ಇವು ಸುಮಾರು 35-65 ಕೆ.ಜಿ ಗಳವರೆಗೆ ತೂಗುತ್ತವೆ. ಅಲ್ಲದೇ ಓಡುವಾಗ ನಾಲ್ಕು ಕಾಲುಗಳು ಒಂದೆಡೆ ಬಂದು ಬೆನ್ನೆಲೆಬು ಮುದುಡಿದಾಗ ಉಸಿರನ್ನು ಹೊರಬಿಡುತ್ತವೆ. ಹಾಗೆಯೇ ಕಾಲುಗಳನ್ನು ನಿಮಿರಿಸಿದಾಗ ಉಸಿರನ್ನು ಎಳೆದುಕೊಳ್ಳುತ್ತವೆ. ಇದರಿಂದ ಹೆಚ್ಚಿನ ಉಸಿರ‍್ಗಾಳಿ ಮಯ್ಯ ಒಳಬಂದು ಓಟಕ್ಕೆ ನೆರವಾಗುತ್ತದೆ.

Inhale_Exhaleಚಿಗಟೆಯು ಓಡುವಾಗ ಅದರ ಒಂದು ಕಾಲು ಮಾತ್ರ ಒಂದು ಹೊತ್ತಿನಲ್ಲಿ ನೆಲಕ್ಕೆ ತಾಗುವುದು. ಓಟದ ಹೆಚ್ಚಿನ ಹೊತ್ತು ಅದರ ಮೈ ಗಾಳಿಯಲ್ಲಿ ಇರುತ್ತದೆ. 25 ಅಡಿಗಳ ಒಂದು ದಾಪುಗಾಲಿನ ಹಂತಗಳನ್ನು ಕೆಳಗಿನ ತಿಟ್ಟದಲ್ಲಿ ನೋಡಬಹುದು. ಇವೆಲ್ಲಾ ಒಟ್ಟು ಸೇರಿ ಚಿಗಟೆಯನ್ನು ಬಿರುಸಿನ ಓಟಗಾರನನ್ನಾಗಿ ಮಾಡಿದೆ.

Daapugalu

ಕೆಲವು ಸೋಜಿಗದ ಸಂಗತಿಗಳು:

1. ಚಿಗಟೆಗೆ 110 ಕಿ.ಮೀ/ಗಂಟೆಯ ಬಿರುಸಿನಲ್ಲಿ ಹೆಚ್ಚು ಹೊತ್ತು ಓಡಲಾಗುವುದಿಲ್ಲ. ಹೆಚ್ಚು ಎಂದರೆ 400 ಮೀಟರ್ ದೂರವನ್ನು ಮಾತ್ರ ಈ ಬಿರುಸಿನಲ್ಲಿ ಓಡಬಲ್ಲದು. ಇಲ್ಲವೇ ಕೇವಲ 17 ಸೆಕೆಂಡುಗಳ ಕಾಲ ಮಾತ್ರ ಈ ಉರುಬಿನಲ್ಲಿ ಓಡಬಲ್ಲವು. ಬಿರುಸಿನ ಓಟಕ್ಕೆ ಹೆಚ್ಚು ಉಸಿರ‍್ಗಾಳಿ ಬೇಕು. ಹಾಗಾಗಿ ಅವು ಓಡುವಾಗ ಸೆಕೆಂಡಿಗೆ ಸುಮಾರು 2.5 ಬಾರಿ ಉಸಿರಾಡುತ್ತವೆ. ಇದರಿಂದ ಮೆದುಳಿನ ಬಿಸುಪು 105 ಡಿಗ್ರಿ ಸೆಲ್ಶಿಯಸ್ ತಲುಪುತ್ತದೆ. ಆ ಬಿಸುಪನ್ನು ಮೀರಿದರೆ ಸಾವು ಕಟ್ಟಿಟ್ಟಬುತ್ತಿ. ಹಾಗಾಗಿ ಅದರ ಮಯ್ಯ ಕಾಪೇರ‍್ಪಾಟು (ಮಯ್ ಬಿಸುಪನ್ನು ಅಂಕೆಯಲ್ಲಿ ಇಡುವುದು ಬಿಸುಪಂಕೆ ಏರ‍್ಪಾಟು (thermoregulatory system)) ತನ್ನ ಓಟವನ್ನು ನಿಲ್ಲಿಸುವಂತೆ ಮಾಡುತ್ತದೆ.
2. ಬಿರುಸಿನ ಓಟವನ್ನು ಮುಗಿಸಿ ಸುಸ್ತಾರಿಸಿಕೊಳ್ಳಲು ಇದಕ್ಕೆ ಅರ‍್ದಗಂಟೆ ಹೊತ್ತಾದರು ಬೇಕು. ಅದಕ್ಕಾಗಿಯೇ ಚಿಗಟೆಗಳು ಆದಶ್ಟು ಹೊಂಚುಹಾಕಿ ಬೇಟೆಯಾಡುತ್ತವೆ. ಬೇಟೆಯು 10-30 ಮೀ ದೂರದಲ್ಲಿದ್ದಾಗ ಮಾತ್ರ ತನ್ನ ಓಟವನ್ನು ಆರಂಬಿಸಿ ಹಿಡಿಯುತ್ತವೆ. ಬೇಟೆಯೇನಾದರು ದೂರದಲ್ಲಿದ್ದು ಅದರ ಬಳಿಗೆ ಬಿರುಸಿನಿಂದ ಓಡಿಬಂದರೆ ಬೇಟೆಯ ಬಳಿ ಬರುವ ಹೊತ್ತಿಗೆ ಸುಸ್ತಾಗಿ, ಕಣ್ಣೆದುರು ಬೇಟೆಯಿದ್ದರೂ ಮುಟ್ಟಲಾಗದ ಸ್ತಿತಿಗೆ ಹೋಗುತ್ತವೆ.
3. ಚಿಗಟೆಗಳು 110 ಕಿ.ಮೀ/ಗಂಟೆಯ ವೇಗವನ್ನು ತಲುಪಲು ಕೇವಲ 3 ದಾಪುಗಾಲುಗಳು ಸಾಕು.
4. ಇಂಡಿಯಾದಲ್ಲಿ ಚಿಗಟೆಗಳು ಅಳಿದುಹೋಗಿ ಸುಮಾರು 100 ವರುಶಗಳಾಗಿವೆ.
5. ಜಗತ್ತಿನಲ್ಲಿ ಕೇವಲ 10 ರಿಂದ 12 ಸಾವಿರ ಚಿಗಟೆಗಳು ಮಾತ್ರ ಬದುಕಿವೆ.
6. ಬಿರುಸಿನ ಓಟವನ್ನು ನಂಬಿ ಬೇಟೆಯಾಡುವುದರಿಂದ ಅದಕ್ಕೆ ತಕ್ಕನಾದ ಬಯಲು ಪ್ರದೇಶಗಳನ್ನು ಇವು ಬಯಸುತ್ತವೆ. ಆಪ್ರಿಕಾದ ಸವನ್ನಾ ಬಯಲು ಪ್ರದೇಶ ಇವುಗಳ ಅಚ್ಚುಮೆಚ್ಚಿನ ತಾಣ.
7. ಸುಮಾರು 10 ಮಿಲಿಯನ್ ವರುಶಗಳಿಂದ ಇವುಗಳ ಹುಟ್ಟು ಮತ್ತು ಬೆಳವಣಿಗೆ ಆಗುತ್ತಿದೆ. ಆಗಿನಿಂದಲೂ ಇವನ್ನು ಮೀರಿಸುವ ಇನ್ನೊಬ್ಬ ಓಟಗಾರ ಇದುವರೆಗೂ ಕಂಡುಬಂದಿಲ್ಲ.
8. ಇವುಗಳ ಕಣ್ಣೋಟ ತುಂಬಾ ಮೊನಚು. ಹಗಲು ಹೊತ್ತಿನಲ್ಲಿ ಸುಮಾರು 5 ಕಿ.ಮೀ ದೂರದಿಂದ ತನ್ನ ಬೇಟೆಯನ್ನು ಗುರುತಿಸಬಲ್ಲವು. ಆದರೆ ಇರುಳಿನಲ್ಲಿ ಕಣ್ಣೋಟ ಮಂದವಾಗಿರುತ್ತದೆ. ಹಾಗಾಗಿ ಬೇಟೆಯಾಡಲು ಹಗಲನ್ನೇ ನೆಚ್ಚಿಕೊಳ್ಳುತ್ತವೆ.
9. ಚಿಗಟೆಗಳಿಗೆ ಮರ ಹತ್ತಲು ಬರುವುದಿಲ್ಲ.
10. ಮೂರು ನಾಲ್ಕು ದಿನಗಳಿಗೆ ಒಮ್ಮೆ ನೀರು ಕುಡಿದರೆ ಸಾಕಾಗುತ್ತದೆ.
11. ಹೆಣ್ಣು ಚಿಗಟೆ ಒಂದೇ ತನ್ನ ಮಕ್ಕಳನ್ನು ಸಾಕಿ ಸಲುಹುತ್ತದೆ.
12. ಸಿಂಹದಂತೆ ಅಬ್ಬರಿಸಲು ಬರುವುದಿಲ್ಲ ಆದರೆ ಗುರುಗುಟ್ಟುತ್ತವೆ.

ಸುಮಾರು 10 ಮಿಲಿಯನ್ ವರುಶಗಳಿಂದ ಬಿರುಸಿನ ಓಟಗಾರ ಎಂಬ ಪಟ್ಟವನ್ನು ಹೊಂದಿರುವ ಇವು ಈಗ ಅಳಿವಿನ ಅಂಚಿನಲ್ಲಿವೆ. ಚಿಗಟೆ ಓಟವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಮುಂದಿನ ತಲೆಮಾರುಗಳಿಗೂ ಈ ಓಟದ ಹಬ್ಬ ಸಿಗಲಿ. ಚಿಗಟೆ ಓಟವನ್ನು ಕೆಳಗಿನ ಓಡುತಿಟ್ಟದಲ್ಲಿ ನೋಡಿ ಕಣ್ತುಂಬಿಸಿಕೊಳ್ಳಿ.

(ಮಾಹಿತಿಸೆಲೆ: onekind.orgsciencekids.co.nzcheetah.orgthomsonsafaris.comlivescience.comwikipedia)
(ಚಿತ್ರಸೆಲೆ: amedpixels.comcheeta.orgcs.bilkent.eduthinglink.comdunyabulteni.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: