ಇವರು ಹೂತಿಟ್ಟ ಹೆಣವನ್ನು ಹೊರತೆಗೆದು ಮೆರವಣಿಗೆ ಮಾಡುವರು!

ಹರ‍್ಶಿತ್ ಮಂಜುನಾತ್.

kete-kesu-3

ಒಂದು ಹುಟ್ಟು ಮನೆಯಲ್ಲಿ ಮನದಲ್ಲಿ ನಲಿವು ಮತ್ತು ಒಂದು ಹೊಸ ಬದುಕಿನ ಆಸೆ ಮೂಡಿಸುತ್ತದೆ. ಅದೇ ಸಾವು, ಹುಟ್ಟಿನ ನಲಿವಿಗಿಂತಲೂ ತುಸು ಹೆಚ್ಚಿನದ್ದೇ ಆದ ನೋವನ್ನು ತಂದಿಡುತ್ತದೆ. ಆದರೆ ಈ ನೋವಿನಲ್ಲೂ ನಾವು ಹಲವಾರು ಜವಾಬ್ದಾರಿಗಳನ್ನು ನಡೆಸಿಕೊಡಬೇಕಾಗುತ್ತದೆ. ಸಾವಿನಿಂದ ಸೂತಕ ಕಳೆವವರೆಗೂ ಹತ್ತು ಹಲವಾರು ರೀತಿ-ರಿವಾಜುಗಳನ್ನು ಮಂದಿ ನಡೆಸಿಕೊಂಡು ಹೋಗುತ್ತಾರೆ. ಕೆಲವು ನಿಯಮಗಳು ಹಿಂದಿನಿಂದಲೂ ನಡೆದುಕೊಂಡು ಬಂದಿರುತ್ತವೆ. ಮತ್ತೆ ಕೆಲವೊಂದು ಈಗಿನ ಸಮಾಜಕ್ಕೆ ಹೊಂದಿಕೊಳ್ಳುವಂತೆ ಮಾಡಿಕೊಂಡು ಹೋಗಲಾಗುತ್ತದೆ. ಜೊತೆಗೆ ಇಂತಹ ರೀತಿ-ರಿವಾಜುಗಳು ದರ‍್ಮದಿಂದ ದರ‍್ಮಕ್ಕೆ ಮತ್ತು ಮಂದಿಯಿಂದ ಮಂದಿಗೆ ಬೇರೆಯದ್ದೇ ಆಗಿರುತ್ತದೆ ಕೂಡ.

ಅದೇನೇ ಇದ್ದರೂ ಸತ್ತ ಬಳಿಕ ಅವರವರ ದಾರ‍್ಮಿಕ ನಂಬಿಕೆಗಳಿಗೆ ಸರಿಹೊಂದುವಂತೆ ಕ್ರೀಯೆಗಳನ್ನು ಮುಗಿಸಿ ಕಯ್ ತೊಳೆದು ಕೊಳ್ಳುತ್ತಾರೆ. ಆ ಬಳಿಕ ಏನೇ ಇದ್ದರೂ ಮಾನಸಿಕ ನಂಬಿಕೆ ನಂಟುಗಳೇ ಹೊರತು, ಸತ್ತವರ ಮಯ್ಯ ನಂಟು ಕಳಚಿಕೊಂಡಂತೆಯೇ ಸರಿ. ಆದರೆ ಈ ಎಲ್ಲಾ ನಂಬಿಕೆಗಳು ಮತ್ತು ಈಗಿನ ಬದುಕಿನ ದಿಟಕ್ಕೆ ಬೇರೆಯದ್ದೇ ಆಗಿ ನಿಲ್ಲುವಂತಹ ರೀತಿ-ರಿವಾಜುಗಳ ನಡವಳಿಕೆಯೊಂದಿದೆ. ಅದು “ಸತ್ತ ಮೇಲೆ ಹೂತಿಟ್ಟ ಹೆಣವನ್ನು ಹೊರತೆಗೆದು ಕೆಲವು ರೀತಿ ರಿವಾಜುಗಳನ್ನು ನಡೆಸಿಕೊಡುವುದು!”

ಇಂಡೋನೇಶಿಯ ನಾಡಿನ ತೆಂಕಣ ಸುಲವೇಸಿಯಲ್ಲಿ ಟೊರಾಜ ಎಂಬ ಗುಡ್ಡಗಾಡು ಜಾಗ. ಸುಮಾರು 4.5 ಲಕ್ಶ ಮಂದಿ ಟೊರಾಜ ಗುಡ್ಡಗಾಡುಗಳಲ್ಲಿ ವಾಸವಾಗಿದ್ದಾರೆ. ಟೊರಾಜ-ಸಡನ್, ಕಲುಪಂಗ್, ಮಮಸ, ಟೇ, ಟೊಲಾನ್ಡೊ, ಮತ್ತು ಟೋಲ ಎಂಬೆಲ್ಲಾ ಬುಡಕಟ್ಟಿನ ನುಡಿಗಳು ಇವರ ಆಡುನುಡಿಗಳಾಗಿವೆ. ವಿಶೇಶವೆಂದರೆ ಟೊರಾಜದ ಈ ಬುಡಕಟ್ಟಿನವರಲ್ಲಿ ನೂರಕ್ಕೆ ಎಂಬತ್ತರಶ್ಟು ಮಂದಿ ಕ್ರಿಶ್ಚಿಯನ್ನರಿದ್ದರೆ, ನೂರಕ್ಕೆ ಹನ್ನೆರಡರಶ್ಟು ಮಂದಿ ಹಿಂದೂ ಮತ್ತು ಮುಸಲ್ಮಾನ್ ದರ‍್ಮೀಯರಿದ್ದಾರಂತೆ. ಇವರನ್ನು ಇಂಡೋನೇಶಿಯ ಸರಕಾರದಿಂದ ‘ಅಲೂಕ್ ಟು ಡೋಲೊ’ ಎಂಬ ಪಂಗಡವಾಗಿ ಗುರುತಿಸಲಾಗುತ್ತಿದೆಯಂತೆ.

ಸುಮಾರು ಇಪ್ಪತ್ತನೇ ನೂರೇಡಿನವರೆಗೂ ಹೊರ ಜಗತ್ತಿನಿಂದ ಬೇರಾಗಿಯೇ ಉಳಿದಿದ್ದ ಈ ಬುಡಕಟ್ಟಿಗೆ, 1903ರ ಹೊತ್ತಿಗೆ ಡಚ್ ಕೊಲೊನ್ಯಲ್ ಸರಕಾರ ‘ಟೊರಾಜ’ ಎಂಬ ಹೆಸರಿಟ್ಟು ಗುರುತಿಸಿತು. ಇಲ್ಲಿಂದ ಮುಂದೆ ಸರಕಾರದ ಸತತವಾದ ಕೆಲಸದಿಂದ ಇಂದು ಟೊರಾಜ ಇಂಡೋನೇಶೀಯಾದ ತಿರುಗಾಟದ ಜಾಗಗಳಲ್ಲಿ ಒಂದಾಗಿ ಬೆಳೆದಿದೆ. ಕಾರಣ ಮರದಿಂದ ಕಟ್ಟುವ ಉಬ್ಬಿನಾಕಾರದ ಸಂಪ್ರದಾಯಿಕ ಮನೆಗಳು, ಬಣ್ಣಬಣ್ಣದ ಮರಗಿಡಗಳು, ಹೂರಾಶಿಗಳು, ಹಚ್ಚ ಹಸಿರಿನ ಚೆಂದದ ಸುತ್ತಣ ನೋಟ ಮತ್ತು ಅಲ್ಲಿನ ಮಂದಿಯ ಹಲವು ಬಗೆಯ ನಡೆನುಡಿಗಳು.

ಇಂತಹ ನಡೆನುಡಿಗಳಲ್ಲೊಂದು ‘ಹೂತಿಟ್ಟ ಹೆಣವನ್ನು ಹೊರ ತೆಗೆದು ಮೆರವಣಿಗೆ ಮಾಡುವುದು’. ನಮಗೆಲ್ಲಾ ತಿಳಿದಂತೆ ಕುಟುಂಬದಲ್ಲಿ ಯಾರಾದರೂ ಸತ್ತರೆ ಅವರನ್ನು ಮಣ್ಣು ಮಾಡಿ ವರುಶಕೊಮ್ಮೆ ತಿತಿ ಮಾಡುತ್ತಾರೆ. ಆದರೆ ಟೊರಾಜದಲ್ಲಿ 3 ವರುಶಕ್ಕೊಮ್ಮೆ ಹೂತಿಟ್ಟ ಹೆಣವನ್ನು ತೆಗೆದು ಮೆರವಣಿಗೆ ಮಾಡುತ್ತಾರಂತೆ. ಇದು ಬಹಳ ವರುಶಗಳಿಂದ ನಡೆದುಕೊಂಡು ಬಂದ ನಿಯಮ. ಅಲ್ಲದೇ ಇದರ ರೀತಿ ರಿವಾಜುಗಳು ಸಾಮಾಜಿಕವಾಗಿ ಮುಕ್ಯ ನಡವಳಿಗಳಲ್ಲೊಂದು ಎಂದು ಗುರುತಿಸಿಕೊಂಡಿದೆ. ‘ಮನೆನೆ‘ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಆಚರಣೆಯನ್ನು ಅಲ್ಲಿನ ನೂರಾರು ಮಂದಿ ಒಟ್ಟಿಗೇ ಸೇರಿಕೊಂಡು ಹಬ್ಬದಂತೆ ಮಾಡುತ್ತಾರೆ.

torajan_funeral-web

ಸಾವನಪ್ಪಿದವರ ನೆಂಟರೆಲ್ಲ ಕೂಡಿಕೊಂಡು ಹೂತಿಟ್ಟ ಹೆಣವನ್ನು ಹೊರತೆಗೆದು ಸಾವನಪ್ಪಿದ ಜಾಗಕ್ಕೆ ತರಲಾಗುತ್ತದೆ. ಬಳಿಕ ಹೆಣವನ್ನು ಶುಚಿಗೊಳಿಸಿ, ಅವರದ್ದೇ ಮೆಚ್ಚಿನ ಅತವಾ ಹೊಸ ಬಟ್ಟೆಯನ್ನು ತೊಡಿಸಿ ಮೆರವಣಿಗೆ ಮಾಡಲಾಗುತ್ತದೆ. ಈ ಮೆರವಣಿಗೆಗೆ ಬೇರೆ ಬೇರೆ ಕಡೆಗಳಿಂದ ನೂರಾರು ಮಂದಿ ಬಂದು ಕೂಡುತ್ತಾರೆ. ಅಲ್ಲದೇ ಇಂತಹ ಆಚರಣೆಗಳು ಇಲ್ಲಿನ ಜನರ ಪಾಲಿಗೆ ಅದ್ರುಶ್ಟದ ಗುರುತಂತೆ. ಕುಟುಂಬದವರ ಪ್ರಕಾರ ಸತ್ತ ಬಳಿಕ ಸತ್ತವನು ದೇವರ ಕ್ರುಪೆಗೆ ಪಾತ್ರರಾಗಿರುತ್ತಾರಂತೆ. ಹೀಗಾಗಿ ಅದರಿಂದ ಕುಟುಂಬದವರ ರಕ್ಶಣೆಯಾಗುತ್ತದೆಯಂತೆ.

ಸಾಮಾನ್ಯವಾಗಿ ಸಾವನಪ್ಪಿದ ಹಿರಿಯರು, ಕಿರಿಯರನ್ನು ಕಾಪಾಡುತ್ತಾರೆ ಎಂದು ನಂಬಿ ಪೂಜಿಸುವುದು ನಮ್ಮಲ್ಲೂ ಬೆಳೆದು ಬಂದ ನಡೆನುಡಿ. ಆದರೆ ಇಲ್ಲಿ ಮಾತ್ರ ಸತ್ತ ಮಗು, ಮಕ್ಕಳ ಹೆಣವನ್ನೂ ಹೊರತೆಗೆಯುವುದುಂಟು. ಅದೇನೆಯಿದ್ದರೂ ಈ ರಿವಾಜುಗಳು ಕೊನೆಗೊಂಡ ಬಳಿಕ ಹೆಣವನ್ನು ಸುಡಲಾಗುತ್ತದೆ. ಕಾರಣ ಅಲ್ಲಿಗೆ ಸಾವನ್ನಪ್ಪಿದವರ ಆತ್ಮಕ್ಕೆ ಮುಕ್ತಿ ಸಿಕ್ಕಿಂದಂತಾಗುತ್ತದೆ ಎಂಬುದು ಇಲ್ಲಿನವರ ನಂಬಿಕೆ.

(ಮಾಹಿತಿ ಸೆಲೆ: dailymail.co)
(ಚಿತ್ರ ಸೆಲೆ: trekearth.com, topindonasianholiday)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *