ಇದು ಹ್ರುದಯಾಗಾತ

– ಸುಜಯೀಂದ್ರ ವೆಂ.ರಾ.

ಎಲ್ಲಾ ಉಸಿರಿಗಳಲ್ಲಿ ಮುಕ್ಯವಾದದ್ದು ಉಸಿರು. ಈ ಉಸಿರು ನಿರಂತರವಾಗಿರಲು ಕಾರಣ ಅವುಗಳಿಗೆ ಸಿಗುತ್ತಿರುವ ಆಹಾರ ಮತ್ತು ದೇಹದಲ್ಲಿ ಅದರ ವಿಂಗಡಣೆ ಹಾಗೂ ಸಾಗಣೆ. ಕೆಲವು ಸಣ್ಣ ಉಸಿರಿಗಳಲ್ಲಿ ಅತಿ ಸರಳವಾದ ಹಾಗೂ ತೆರೆದ ವಿಂಗಡಣೆ, ಸಾಗಣೆ ಇದ್ದರೆ, ಇನ್ನೂ ಕೆಲವು ದೊಡ್ಡ ಉಸಿರಿಗಳಲ್ಲಿ ಹ್ರುದಯ ಮತ್ತು ರಕ್ತ ನಾಳಗಳ ಮೂಲಕ ವಿಂಗಡಣೆ, ಸಾಗಣೆ ಇರುತ್ತವೆ. ದೊಡ್ಡ ಉಸಿರಿಗಳಲ್ಲಿ ಈ ಹ್ರುದಯ ಕೆಲಸ ಮಾಡುವವರೆಗೂ ಉಸಿರಿ ಬದುಕಿರುತ್ತದೆ. ಸಣ್ಣ ಉಸಿರಿಗಳಲ್ಲಿ ಅತಿ ಸರಳ ಹಾಗೂ ತೆರೆದ ಸಾಗಣೆ ಇರುವುದರಿಂದ ಅಲ್ಲಿ ತಟ್ಟನೆ ಉಸಿರು ನಿಂತು ಹೋಗುತ್ತದೆ. ಈಗ ನಿಮಗೆ ತಿಳಿಸಲು ಹೊರಟಿರುವ ಅರಿಮೆಯೆಂದರೆ ನಾವು ನಮ್ಮ ಹ್ರುದಯವನ್ನು ಹೇಗೆ ಕಾಪಾಡಿಕೊಳ್ಳಬೇಕು, ಹೇಗೆ ನಮ್ಮವರನ್ನು, ನಮ್ಮನ್ನು ನಾವು ಕಾಪಾಡಿಕೊಳ್ಳಬೇಕೆಂದು.

ನಿಮಗೇನಾದರೂ ಮೊನಚಾದ ಗುಂಡಿಗೆಯ ಕುರುಹುಕಂತೆ[acute coronary syndrome (ಎದೆಯುರಿ ಕಾಯಿಲೆ)] ಇದ್ದರೆ, ನಿಮಗೆ ಒಂದಲ್ಲ ಹಲವು ಅವಸ್ತೆಗಳು ನಿಮ್ಮ ಹ್ರುದಯದ ಹುರಿಕಟ್ಟು(heart muscle)ಗಳಿಗೆ ರಕ್ತದ ಸಾಗಣೆ ತಡೆಯಲ್ಪಟ್ಟಿರುತ್ತದೆ. ಇದು ವಯ್ದ್ಯಕೀಯ ತ್ವರಿತತೆಯಾಗಿದ್ದು, ಕಾರಣ ಹ್ರುದಯಾಗಾತದ ಕುರುಹು ಇರಬಹುದು, ಇಲ್ಲಿ ನಿಮ್ಮ ಹ್ರುದಯದ ಹುರಿಕಟ್ಟು ಸಾಯಲು ಆರಂಬಗೊಳ್ಳುತ್ತದೆ. ನಿಮಗೆ ಈಗಾಗಲೇ ತಿಳಿದಿರುವಂತೆ ಹ್ರುದಯವೊಂದು ಹುರಿಕಟ್ಟಿನ ರಕ್ತದೆತ್ತುಗವಾಗಿದ್ದು ದೇಹದ ಎಲ್ಲಾ ಬಾಗಗಳಿಗೂ ಬೇಕಾದ ಆಮ್ಲಜನಕ ಮತ್ತು ಆಹಾರ ಪೂರೈಕೆ ಮಾಡುತ್ತದೆ. ಹ್ರುದಯದಲ್ಲಿ ಮುಕ್ಯವಾದ ರಕ್ತ ಎತ್ತುವ ಕೋಣೆಯೆಂದರೆ ಎಡ ತೊರೆಕೋಣೆ(left ventricle). ಯಾವಾಗ ಎಡ ತೊರೆಕೋಣೆ ಸಂಕುಚಿತಗೊಳ್ಳುತ್ತದೆ ಆಗ ಆಮ್ಲಜನಕ(oxygen) ಹೊಂದಿದ ರಕ್ತವನ್ನು ದೇಹದ ಎಲ್ಲಾ ಬಾಗಗಳಿಗೆ ಉಸಿರು-ರಕ್ತನಾಳ(aorta)ದಿಂದ ತಲುಪಿಸುತ್ತದೆ.

ಉಸಿರು-ರಕ್ತನಾಳಗೆ ಅಂಟಿಕೊಂಡಂತಿರುವ ನಾಳಗಳೇ ಚಿಕ್ಕ ಗುಂಡಿಗೆಯ ತೊರೆನೆತ್ತರುಗೊಳವೆ(coronary arteries)ಗಳು. ಉಸಿರು-ರಕ್ತನಾಳದಿಂದ ರಕ್ತ ಸಾಗಿ ಗುಂಡಿಗೆಯ ಚಿಕ್ಕ ತೊರೆನೆತ್ತರುಗೊಳವೆಗಳ ಮೂಲಕ ಹ್ರುದಯದ ಹುರಿಕಟ್ಟುಗಳಿಗೆ ಬೇಕಾದ ಆಮ್ಲಜನಕ ಮತ್ತು ಆಹಾರಗಳನ್ನು ತಲುಪಿಸುತ್ತದೆ. ನಿಮಗೇನಾದರೂ ಮೊನಚಾದ ಗುಂಡಿಗೆಯ ಕುರುಹುಗಳಿದ್ದರೆ ಉಸಿರು-ರಕ್ತನಾಳಗಳಿಂದ ಚಿಕ್ಕ ಗುಂಡಿಗೆಯ ತೊರೆನೆತ್ತರುಗೊಳವೆಗಳಿಗೆ ರಕ್ತ ಸಾಗಣೆ ಕಡಿಮೆಯಾಗಿರುತ್ತದೆ, ಇಲ್ಲವೇ ಪೂರ‍್ಣವಾಗಿ ತಡೆಯಾಗಿರುತ್ತದೆ(blocked). ಇದಕ್ಕೆ ಕಾರಣ ತೊರೆನೆತ್ತರುಗೊಳವೆ ದಪ್ಪಗಾಗುವಿಕೆ (atherosclerosis). ಈ ಅವಸ್ತೆಯಲ್ಲಿ ಗುಂಡಿಗೆಯ ತೊರೆನೆತ್ತರುಗೊಳವೆಗಳಲ್ಲಿ ಕೊಬ್ಬಿನಂಶ ಬೆಳೆವಣಿಗೆ ಅಂದರೆ ಚಂದತಗಡುಗಳು(plaque) ಹೆಚ್ಚಾಗಿ, ರಕ್ತದ ದಾರಿಯನ್ನು ಚಿಕ್ಕದಾಗಿಸುತ್ತದೆ. ಯಾವಾಗ ಈ ಚಂದತಗಡುಗಳು ಒಡೆಯುತ್ತವೆ ರಕ್ತ ಹೆಪ್ಪುಗಟ್ಟುವಿಕೆಯುಂಟಾಗಿ ತೊರೆನೆತ್ತರುಗೊಳವೆಗಳನ್ನು ಪೂರ‍್ಣವಾಗಿ ಮುಚ್ಚುತ್ತದೆ. ಈ ರಕ್ತ ಹೆಪ್ಪುಗಟ್ಟುವಿಕೆಯೇ ಅತಿ ಸಾಮಾನ್ಯವಾಗಿ ಗುಂಡಿಗೆಯ ತೊರೆನೆತ್ತರುಗೊಳವೆಗಳ ತಡೆಗೆ ಕಾರಣ. ಇನ್ನು ಕೆಲವು ಕಾರಣಗಳೆಂದರೆ ಗುಂಡಿಗೆಯ ತೊರೆನೆತ್ತರುಗೊಳವೆಗಳ ಸೇದುವಿಕೆ. ಸೇದುವಿಕೆಗಳಿಗೆ ಕಾರಣ ಕುದುರೆಗಳಾದ(triggers) ಮಾದಕ ವಸ್ತುಗಳು, ಹೊಗೆ ಸೇದುವುದು, ಚಳಿ ವಾತಾವರಣ ಮತ್ತು ಅತಿಯಾದ ಒತ್ತಡ ಇಲ್ಲವೇ ಬಾವನೆಗಳು ಗುಂಡಿಗೆಯ ತೊರೆನೆತ್ತರುಗೊಳವೆಗಳಿಗೆ ತಾತ್ಕಾಲಿಕ ಮತ್ತು ತಕ್ಶಣ ಬಿಗಿಯುವಿಕೆಯುಂಟು ಮಾಡುತ್ತವೆ. ಬಿಗಿಯುವಿಕೆಯು ರಕ್ತ ಸಾಗಣೆಯನ್ನು ತಡೆದು ಹ್ರುದಯದ ಕಿರು ನೆತ್ತರುಗೊಳವೆಗಳಾದ ತೊರೆನೆತ್ತರುಗೊಳವೆಗಳಿಗೆ ಆಮ್ಲಜನಕ ಮತ್ತು ಆಹಾರ ನಿಂತುಹೋಗುತ್ತದೆ. ಇದರಿಂದ ಹ್ರುದಯದ ಹುರಿಕಟ್ಟು ಸಾಯುತ್ತದೆ. ಹ್ರುದಯದ ಹುರಿಕಟ್ಟು ಸಾಯುವಿಕೆಯೇ ಹ್ರುದಯಾಗಾತ (heart attack). ಇದನ್ನು ಹ್ರುದಯಹುರಿಕಟ್ಟು ಸಾಯುವಿಕೆ (myocardial infarction[MI]) ಎಂದು ಸಹ ಕರೆಯುತ್ತಾರೆ.

hrudayagatha

ಹೀಗೆ ತಡೆಯುಂಟಾದ ಗುಂಡಿಗೆಯ ತೊರೆನೆತ್ತರುಗೊಳವೆಗಳಿಂದ ನಿಮಗೆ ಇದ್ದಕ್ಕಿದ್ದಂತೆ ನೋವು, ಮಯ್ಯಲ್ಲಿ ಇರಿಸುಮುರಿಸು, ಬಿಗಿತ ಮತ್ತು ಎದೆಯಲ್ಲಿ ಉರಿಯುವಿಕೆ ಅಂದರೆ “ಎದೆಯುರಿ” ಆಗುತ್ತದೆ. ಈ ನೋವು ಹೊಟ್ಟೆಯ ಮೇಲ್ಬಾಗಕ್ಕೂ, ಕಯ್ಕಾಲುಗಳಿಗೂ, ಬುಜಕ್ಕೂ, ಕುತ್ತಿಗೆ ಮತ್ತು ಕೆಳಬಾಯಿಗೂ ಹರಡಬಹುದು. ನಿಮಗೇನಾದರು ಸುಮ್ಮನಿದ್ದಾಗಲೂ ಎದೆಯುರಿಯಿದ್ದರೆ ಇಲ್ಲವೆ ಆಗಿಂದ್ದಾಗೆ ಬರುವ ಎದೆಯುರಿಯಿದ್ದರೆ ಅದು ಗುಂಡಿಗೆ ಬೇನೆಯಯನ್ನು ತರಬಹುದು. ಎದೆಉರಿಯ ಜೊತೆಗೆ ಉಸಿರುಗಟ್ಟುವಿಕೆ, ವಾಂತಿ, ಹಸಿವೆ ಇಲ್ಲದಿರುವುದು, ತಲೆಸುತ್ತುವಿಕೆ, ಸೆಕೆಯಾಗುವಿಕೆ ಇದ್ದರೆ ಕೂಡಲೇ ಎಚ್ಚರವಹಿಸಿ ವಯ್ದ್ಯರಲ್ಲಿಗೆ ತೋರಿಸಬೇಕು.

ನಿಮಗೇನಾದರು ಹ್ರುದಯಾಗಾತ ಇಲ್ಲವೇ ಇತರೆ ಮೊನಚಾದ ಗುಂಡಿಗೆಯ ಕುರುಹುಕಂತೆ ಇದ್ದರೆ ನಿಮ್ಮ ವಯ್ದ್ಯರು ಆಮ್ಲಜನಕದ ಚಿಕಿತ್ಸೆ ಮಾಡಬಹುದು, ಆಸ್ಪರಿನ್ ಅನ್ನು ತೆಗೆದುಕೊಳ್ಳಲು ಹೇಳಬಹುದು. ಆಸ್ಪರಿನ್ – ಒಂದು “ರಕ್ತತೆಳುಗ” ಅಂದರೆ ರಕ್ತವನ್ನು ತೆಳುವಾಗಿಸುತ್ತದೆ. ಇದರಿಂದ ರಕ್ತ ತಡೆ ನಿವಾರಣೆಯಾಗುತ್ತದೆ. ಇದರಂತೆ ತ್ರೊಂಬೊಲಯ್ಟಿಕ್ಸ್ ಕೂಡ ಹೆಪ್ಪುಕಟ್ಟುವಿಕೆ ನಿವಾರಕ. ಮದ್ದುಗಳಾದ ನಯ್ಟ್ರೋಗ್ಲಿಸರಿನ್ ಮತ್ತು ಮಾರ‍್ಪಿನ್ ಗುಂಡಿಗೆಯೆ ಚಿಕ್ಕ ರಕ್ತನಾಳಗಳ ದಣಿವನ್ನು ನಿವಾರಿಸುತ್ತದೆ ಹಾಗೂ ಎದೆಯುರಿಯನ್ನು ಕಡಿಮೆ ಮಾಡುತ್ತದೆ. ಬೀಟಾ ತಡೆಗಗಳೆಂಬ ಮದ್ದುಗಳನ್ನೂ ಸಹ ವಯ್ದ್ಯರು ಹೇಳಬಹುದು. ಇದೂ ಆಗದಿದ್ದಾಗ ಗುಂಡಿಗೆಯ ಉರಿಗ ತೆಗೆಯುವಿಕೆ(coronary angioplasty) ಶಸ್ತ್ರಚಿಕಿತ್ಸೆಯ ಮೂಲಕ ತಡೆಯನ್ನು ನಿವಾರಿಸಬಹುದು. ಇದರಲ್ಲಿ ಮೊನಚಾದ ಗಾಳಿಚೆಂಡ(baloon)ನ್ನು ತಡೆಯುಂಟಾದ ನಾಳದಲ್ಲಿ ಉಬ್ಬಿಸಿ ಬಲೆಹಿಡಿ(stent)ಯನ್ನು ಬಿಡುತ್ತಾರೆ ಆಮೇಲೆ ಗಾಳಿಚೆಂಡನ್ನು ತೆಗೆದುಬಿಡುತ್ತಾರೆ. ಬಲೆಹಿಡಿ ನಾಳವನ್ನು ಅಗಲವಾಗಿ ತೆರೆದು ತಡೆಯನ್ನು ನಿವಾರಿಸುತ್ತದೆ. ಇದರಿಂದಲೂ ಸಾದ್ಯವಾಗದಿದ್ದಲ್ಲಿ ಗುಂಡಿಗೆಗೆ ಅಡ್ಡ-ತೊರೆನೆತ್ತರುಗೊಳವೆಯ ಕಸಿ(coronary artery bypass graft or CABG)ಯನ್ನು ಮಾಡಬಹುದು. ಈ ಚಿಕಿತ್ಸೆಯಲ್ಲಿ ತಡೆಯುಂಟಾದ ನಾಳವನ್ನು ಬೇರೊಂದು ಅಡ್ಡ-ಸೇರುನಾಳದ(vein) ಮೂಲಕ ಇಲ್ಲವೆ ಕ್ರುತಕ ನಾಳಗಳ ಕಸಿ(artificial graft materials) ಮೂಲಕ ರಕ್ತ ಸಾಗಣೆಯನ್ನು ಸುಗಮಗೊಳಿಸಿ ನಿವಾರಿಸುತ್ತಾರೆ.

ಇವಿಶ್ಟು ಹ್ರುದಯದ ಕೆಲಸ ಮತ್ತು ಅದರ ಕೆಲಸದ ತಡೆಗೆ ಕಾರಣವಾದ ವಿಚಾರಗಳ ಮತ್ತು ಆ ಎದೆಯುರಿಯನ್ನು ಹಾಗೂ ತಡೆಯನ್ನು ನಿವಾರಿಸಿಕೊಳ್ಳುವ ಬಗೆಗಿನ ವಿವರಗಳು. ಇವುಗಳಲ್ಲಿ ಯಾವುದಾದರೂ ಒಂದು ಹ್ರುದಯಾಗಾತದ ಕುರುಹುಕಂತೆಗಳು ಕಂಡುಬಂದಲ್ಲಿ ಈಗಿಂದೀಗಲೇ ನಿಮ್ಮ ಹತ್ತಿರದ ನುರಿತ ವಯ್ದ್ಯರನ್ನು ಸಂಪರ್‍ಕಿಸಿ ಕಾಯಿಲೆ ನಿವಾರಿಸಿಕೊಳ್ಳಿ.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: