‘4ನೇ ಗೋಡೆಯನ್ನು ಒಡೆಯುವುದು’ ಎಂದರೇನು?
– ಬಸವರಾಜ್ ಕಂಟಿ.
ಕಣ್ಣು ಮುಚ್ಚಿ ಒಮ್ಮೆ “ಉಪೇಂದ್ರ” ಸಿನಿಮಾದ ಕೊನೆಯ ಕ್ಶಣಗಳನ್ನು ನೆನೆಸಿಕೊಳ್ಳಿ. “ನಾನು” ಎಂಬುವ ಪಾತ್ರ, 3 ಹುಡುಗಿಯರ ಕಯ್ ಕಾಲುಗಳನ್ನು ಕಟ್ಟಿ, ಯಾರೂ ಇಲ್ಲದ ಜಾಗವೊಂದಕ್ಕೆ ಎತ್ತಿಕೊಂಡು ಬರುತ್ತಾನೆ. ಆ ಮೂರು ಹುಡುಗಿಯರಿಗೂ ತನ್ನನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡುತ್ತಾನೆ. ಅವರು ಒಪ್ಪದಿದ್ದಾಗ ಮಚ್ಚಿನಿಂದ ಅವರನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ಆಕಸ್ಮಿಕವಾಗಿ ಆ ಜಾಗಕ್ಕೆ, ಬಡವನಿಂದ ಶ್ರೀಮಂತನಾಗಿ, ಹೆಂಗಳೆಯರ ಜೊತೆ ಚಲ್ಲಾಟವಾಡುವನೊಬ್ಬ ಮತ್ತು ಹೆಂಗಳೆಯರ ದೆಸೆಯಿಂದಲೇ ಶ್ರೀಮಂತನಿಂದ ಬಡವನಾಗಿರುವ ಇನ್ನೊಬ್ಬ ಬಂದು ಹೋಗುತ್ತಾರೆ. ಅವರಿಬ್ಬರನ್ನು ನೋಡಿ, ಏನು ಮಾಡಬೇಕೆಂಬ ಗೊಂದಲದಲ್ಲಿ “ನಾನು” ಮುಳುಗಿಹೋದಾಗ, ತಮ್ಮ ಕಯ್ಗಳನ್ನು ಬಿಡಿಸಿಕೊಂಡು ಅವವನ್ನೇ ಕೊಲ್ಲಲು ಆ 3 ಹುಡುಗಿಯರು ಮುಂದಾಗುತ್ತಾರೆ. ಇದೆಲ್ಲಾ ನಮ್ಮ ನಡುವೆಯೇ ನಡೆಯುತ್ತಿದೆ ಎನ್ನುವಂತೆ ಸಿನಿಮಾದಲ್ಲಿ ನಾವೆಲ್ಲಾ ಮುಳುಗಿ ಹೋಗಿ, ನಮ್ಮ ಕಯ್ಯಿಗೇ ಸಿಗದಂತೆ ಓಡುತ್ತಿರುವ ಚಿತ್ರಕತೆಯು ತಟ್ ಅಂತ ನಿಂತುಹೋಗಿ, ವಿಕ್ರಮ ಮತ್ತು ಬೇತಾಳರ ಮಾತುಕತೆಗೆ ಹೊರಳಿಬಿಡುತ್ತದೆ. ಆ ಕ್ಶಣಕ್ಕೆ, “ನೀವು ನೋಡುತ್ತಿರುವುದು ಒಂದು ಕಲ್ಪಿತ ಕತೆ ಮಾತ್ರ” ಎಂದು ತೋರಿಸಿಕೊಡುತ್ತದೆ ಸಿನಿಮಾದ ನಿರೂಪಣೆ. ಹೀಗೆ ಕತೆಯ ನಿರೂಪಣೆಯೇ – ನೀವು ನೋಡುತ್ತಿರುವುದು ಅತವಾ ಓದುತ್ತಿರುವುದು ಒಂದು ಕಲ್ಪನೆ ಮಾತ್ರ ಎಂದು ತೋರಿಸಿಕೊಡುವ ಬಗೆಗೆ “ಕತೆಯಾಚೆ(Metafiction)” ಎನ್ನುತ್ತಾರೆ.
ಸಿನಿಮಾ ಅತವಾ ಓದಿನಲ್ಲಿ, ಈ “ಕತೆಯಾಚೆ”, ಬೇರೆ ಬೇರೆ ರೀತಿಯಲ್ಲಿ ಮೂಡಿಬರಬಹುದು.
- ಕತೆಯಲ್ಲಿಯೇ ಇನ್ನೊಂದು ಕತೆ,
- ಕತೆಯ ಚೌಕಟ್ಟಿನ ಆಚೆಯ ವಿಶಯದ ಬಗ್ಗೆ ಹೇಳುವುದು,
- ಹಿಂದಿನ ಕತೆಯ ಮುಂದುವರಿದ ಬಾಗವಾಗಿ ಪಾತ್ರಗಳು ಬರುವುದು,
- ಕತೆಯಲ್ಲಿನ ಪಾತ್ರಗಳು ನೋಡುಗರು/ಓದುಗರು ಇದ್ದಾರೆ ಎಂದು ತೋರಿಸಿಕೊಡುವುದು,
- ಕತೆಯಲ್ಲಿನ ಪಾತ್ರಗಳು ನೇರವಾಗಿ ನೋಡುಗರ/ಓದುಗರ ಜೊತೆ ಮಾತನಾಡುವದು, ಹೀಗೆ…
ಸಿನಿಮಾಗಳಲ್ಲಿ ಮೂಡಿಬಂದಿರುವ ಅನೇಕ ಎತ್ತುಗೆಗಳನ್ನು ಕೊಡಬಹುದು. ಪುನೀತ್ ರಾಜಕುಮಾರ್ ನಟನೆಯ “ರಾಜ್” ಚಿತ್ರದ ಕೊನೆಯಲ್ಲಿ ಅವರು ಒಂದು ಮಾತು ಹೇಳುತ್ತಾರೆ, “ರೀ… ಕಸ್ತೂರಿ ನಿವಾಸದ ವಂಶ ಕಣ್ರೀ ನಮ್ದು…”, ಎಂದು. ಅವರ ಈ ಮಾತಿನಲ್ಲಿ ತಾನು ರಾಜ್ ಕುಮಾರ್ ಅವರ ಮಗ ಎಂದು ಮತ್ತು ರಾಜ್ ನಟಿಸಿದ ಕಸ್ತೂರಿ ನಿವಾಸ ಚಿತ್ರದ ಬಗ್ಗೆ ಪರೋಕ್ಶವಾಗಿ ಹೇಳುತ್ತಾರೆ. ಅವರ “ಹುಡುಗರು” ಚಿತ್ರದಲ್ಲೂ ಲೂಸ್ ಮಾದ ಇದೇ ತೆರನಾದ ಮಾತು ಹೇಳುತ್ತಾರೆ, “ನೋಡ್ದ್ರು ನೋಡ್ದೆ ಇರೋಹಂಗ್ ನಟಸ್ತೀಯಾ… ಯಾರ್ ಮಗ ಹೇಳು?” ಎಂದು.
ಈ ರೀತಿ, ಒಂದು ಕತೆಯೇ, “ನೀವು ಕತೆಯೊಂದನ್ನು ಓದುತ್ತಿದ್ದೀರಿ” ಎಂದು ಸುಪ್ತವಾಗಿ ಹೇಳುವಂತಹ ಉದಾಹರಣೆಗಳು ಕಾದಂಬರಿಗಳಲ್ಲೂ ಕಾಣಬಹುದು. “ಕರ‍್ವಾಲೊ” ಕಾದಂಬರಿಯುದ್ದಕ್ಕೂ ಎಲ್ಲೂ ತಮ್ಮ ಹೆಸರು ಹೇಳದೇ ಇದ್ದರೂ, ಕತೆಯಲ್ಲಿ ಆಗಾಗ ತಮ್ಮ “ಅಬಚೂರಿನ ಪೋಸ್ಟಾಪೀಸು” ಕತೆಯು ಸಿನಿಮಾ ಆದ ಬಗ್ಗೆ ಸುಳಿವು ಕೊಡುತ್ತಾ, ಓದುಗರಿಗೆ ತಾನೇ ಕತೆ ಹೇಳುತ್ತಿದ್ದೇನೆ ಎಂದು ತೇಜಸ್ವಿಯವರು ತಿಳಿಸಿಕೊಡುತ್ತಾರೆ. “ಆವರಣ” ಕಾದಂಬರಿಯಲ್ಲಿ, ಕತೆಯ ಜೊತೆಜೊತೆಗೇ ಇನ್ನೊಂದು ಕತೆಯನ್ನು ಹೇಳುತ್ತಾ ಹೋಗುವ ಬಯ್ರಪ್ಪನವರು ಕೊನೆಗೆ ಆ ಒಳಕತೆಯನ್ನು ಲಕ್ಶ್ಮೀ ಎಂಬ ಪಾತ್ರ, ಕಾದಂಬರಿಯಾಗಿ ಬರೆದಿರುತ್ತಾಳೆ ಎಂದು ತಿಳಿಸುತ್ತಾರೆ. ಇಂತಹ ಇನ್ನೂ ಅನೇಕ ಉದಾಹರಣೆಗಳನ್ನು ನಾವು ಹುಡುಕಬಹುದು. ಸಿನಿಮಾಗಳಲ್ಲಿ ಇಂತಹ ಉದಾಹರಣೆಗಳು ಕೆಲವೊಮ್ಮೆ ಸುಪ್ತವಾಗಿ ಬಂದರೆ, ಇನ್ನೂ ಕೆಲವೊಮ್ಮೆ ಎಲ್ಲರಿಗೂ ಸರಳವಾಗಿ ತಿಳಿಯುವಂತೆಯೂ ತೋರಿಸಲಾಗಿದೆ. “ಮಟ” ಚಿತ್ರದ ದ್ರಶ್ಯವೊಂದರಲ್ಲಿ ಗುರುಪ್ರಸಾದ್ ಮತ್ತು ಸುದರ‍್ಶನ್ ಅವರು ತಮ್ಮ ತಮ್ಮ ಪಾತ್ರಗಳನ್ನು ತಟ್ ಅಂತ ಬದಿಗೊತ್ತಿ ತಮ್ಮ ದಿಟವಾದ ಹೆಸರುಗಳಲ್ಲೇ ಮಾತನಾಡಿಕೊಂಡಿದ್ದಾರೆ.
4ನೆಯ ಗೋಡೆ:
ಒಂದು ನಾಟಕವು ಮೂರು ಗೋಡೆಗಳ ನಡುವೆ ನಡೆಯುತ್ತದೆ – ಪಾತ್ರಗಳ ಹಿಂದಿನ ಮತ್ತು ಅಕ್ಕ-ಪಕ್ಕದ ಗೋಡೆಗಳು. ಪಾತ್ರಗಳ ಮುಂದೆ ನೋಡುಗರು ಇರುತ್ತಾರೆ. ಆದರೆ ಆ ನೋಡುಗರ ಬದಲು ಅಲ್ಲಿ ಒಂದು ಗೋಡೆ ಇದ್ದರೂ ಪಾತ್ರಗಳ ಅಬಿನಯ ಮತ್ತು ಕತೆಯಲ್ಲಿ ಯಾವುದೇ ಬದಲಾವಣೆಯಾಗುವದಿಲ್ಲ. ಹಾಗಾಗಿ ನೋಡುಗರ ಕಡೆಯ ದಿಕ್ಕಿಗೂ ಒಂದು ಗೋಡೆಯಿದೆ ಎಂದು ಕಲ್ಪಿಸಿಕೊಂಡು ಪಾತ್ರಗಳು ಅಬಿನಯಿಸುತ್ತಾರೆ. ಆದರೆ ಕೆಲವೊಮ್ಮೆ ಪಾತ್ರಗಳು ಆ ಕಲ್ಪನೆಯ ಗೋಡೆಯನ್ನು ಮುರಿದು, ನೋಡುಗರು ಇದ್ದಾರೆ ಎಂದು ಗುರುತಿಸಿದರೆ ಅತವಾ ನೋಡುಗರ ಜೊತೆ ಮಾತನಾಡಿದರೆ? ಇಂತಹ ಒಂದು ಪ್ರಯತ್ನಕ್ಕೆ “4ನೆಯ ಗೋಡೆ ಒಡೆಯುವುದು” (Breaking Fourth Wall) ಎನ್ನುತ್ತಾರೆ. ಈ 4ನೆಯ ಗೋಡೆಯನ್ನು ಒಡೆಯುವುದು ಕತೆಯನ್ನು ಮೀರುವ ಒಂದು ಬಗೆ. ಸಿನಿಮಾಗಳಲ್ಲಿ ಈ ಬಗೆಯನ್ನು ಅಳವಡಿಸಿಕೊಳ್ಳಲು, ನಟರು ಇನ್ನೊಂದು ಪಾತ್ರದ ಜೊತೆ ಮಾತನಾಡದೆ, ನೇರವಾಗಿ ಕ್ಯಾಮೆರಾ ದಿಟ್ಟಿಸಿ, ನೋಡುಗರ ಜೊತೆ ಮಾತನಾಡುತ್ತಾರೆ. ಈ ರೀತಿ ಕ್ಯಾಮೆರಾ ದಿಟ್ಟಿಸಿ ಮಾತನಾಡುವುದು ನೋಡುಗರಲ್ಲಿ ಸಹಜವಾಗಿ ನಗೆ ಮೂಡಿಸುತ್ತದೆ.
ಅನೇಕ ಸಿನಿಮಾಗಳಲ್ಲಿ ಈ 4ನೆಯ ಗೋಡೆಯನ್ನು ಒಡೆಯುವ ಸನ್ನಿವೇಶಗಳನ್ನು ಕಾಣಬಹುದು. “ಗಣೇಶ ಸುಬ್ರಮಣ್ಯ” ಚಿತ್ರದ ಕೊನೆಯಲ್ಲಿ ಮುಕ್ಯಮಂತ್ರಿ ಚಂದ್ರು ಅವರು ನೋಡುಗರಿಗೆ, “ಕ್ಲಿಕ್ ಮಾಡಿ” ಎಂದು ತಮ್ಮ ಗುಂಪು ತಿಟ್ಟ ತೆಗೆಯಲು ಹೇಳುತ್ತಾರೆ. “ಗೌರಿ ಗಣೇಶ” ಚಿತ್ರದ ಕೊನೆಯಲ್ಲೂ ಅನಂತ್ ನಾಗ್ ಅವರು ನೋಡುಗರಿಗೆ ನೇರವಾಗಿ ಮಾತೊಂದನ್ನು ಹೇಳುತ್ತಾರೆ. ಈ ಬಗೆಯು ಕನ್ನಡದ ಕಾದಂಬರಿ/ಕತೆಗಳಲ್ಲಿ ಕಾಣಿಸುವುದು ತುಂಬಾ ಕಮ್ಮಿ ಅತವಾ ಇಲ್ಲವೇ ಇಲ್ಲ (ನಿಮಗೆ ಗೊತ್ತಿದ್ದರೆ ತಿಳಿಸಿ). ಕತೆಯ ಗಂಬೀರತೆಗೆ ಇದು ತೊಡಕಾಗಬಹುದೆನ್ನುವ ಕಾರಣವಿದ್ದರೂ ಇರಬಹುದು.
( ಮಾಹಿತಿ ಸೆಲೆ: en.wikipedia.org )
( ಚಿತ್ರಸೆಲೆ: kotaku.com )
ಚೆನ್ನಾಗಿದೆ. ಒಳ್ಳೆಯ ವಿಶಯ.