ಕ್ರಿಕೆಟ್ ಬಗ್ಗೆ ಹೆಚ್ಚಿನವರು ಕೇಳಿರದ 14 ಸಕ್ಕತ್ ಸಂಗತಿಗಳು!
ಈ ದಾಂಡಾಟ(ಕ್ರಿಕೆಟ್)ವನ್ನು ನೆಚ್ಚದವರು ಯಾರಿದ್ದಾರೆ ಹೇಳಿ? ಅಶ್ಟಕ್ಕೂ ಆ ಆಟವೇ ಹಾಗೆ ಬಿಡಿ. ಎಂತವರನ್ನೂ ತನ್ನತ್ತ ಸೆಳೆಯುವ ತಾಕತ್ತೇ ಆ ಆಟದ ಹಿರಿಮೆ. ಅದರಲ್ಲೂ ನಮ್ಮ ನಾಡಿನಲ್ಲಿ ದಾಂಡಾಟದೆಡೆಗಿನ ಒಲವು ಮತ್ತು ಅದರಾಳದ ಅರಿವು ತುಸು ಜಾಸ್ತಿಯೆ. ಆದರೂ ಈ ಅರಿವಿನಾಚೆಗೆ ಉಳಿದುಕೊಂಡಿರುವ ಸಂಗತಿಗಳು ದಾಂಡಾಟದಲ್ಲಿ ಬಹಳಶ್ಟಿದೆ. ಹೀಗೆ ನಮಗೆ ಗೊತ್ತಿದ್ದೂ ಗೊತ್ತಿರದಂತಿರುವ ದಾಂಡಾಟದ ಕೆಲವು ಕುತೂಹಲಕಾರಿ ಸಂಗತಿಗಳಿಗೆ ಬೆಳಕು ಚೆಲ್ಲುವತ್ತ ಈ ಬರಹ ನಿಮ್ಮ ಮುಂದೆ.
1) ದಾಂಡಾಟ ಮಕ್ಕಳಾಟವಂತೆ
ನಿಮಗೆ ಗೊತ್ತಿರಬಹುದು, ದಾಂಡಾಟ ಇಂದು ಜಗತ್ತಿನ ಹೆಸರಾಂತ ಆಟಗಳಲ್ಲಿ ಎರಡನೇ ಜಾಗದಲ್ಲಿದೆ. ಆದರೆ ಎರಡು ನೂರೇಡುಗಳ ಹಿಂದೆ ಇಂಗ್ಲೆಂಡ್ ನಲ್ಲಿ ದಾಂಡಾಟ ಹುಟ್ಟಿಕೊಂಡಾಗ ಅದು ಮಕ್ಕಳಾಡುತ್ತಿದ್ದ ಆಟವಂತೆ. ನಮ್ಮಲ್ಲಿ ಮಕ್ಕಳು ಗೋಲಿ, ಚಿನ್ನಿದಾಂಡು ಆಡುವಂತೆ ಅಲ್ಲಿನವರಿಗೆ ದಾಂಡಾಟ. ಮುಂದೆ ಇದು ಚಿಕ್ಕವರಿಂದ ದೊಡ್ಡವರ ವರೆಗೆ ಆಡುವ ನೆಚ್ಚಿನ ಆಟವಾಗಿ ಬೆಳೆದು ಬಂದಿರುವ ಪರಿ ಈಗ ಹಳಮೆ.
2) ಐ.ಸಿ.ಸಿ ಬರುವುದಕ್ಕಿಂತ ಮುಂಚೆಯೇ ದಾಂಡಾಟದ ಕಾನೂನುಗಳು ಬಳಕೆಯಲ್ಲಿದ್ದವು
ಈಗ ನಾಡು ನಾಡುಗಳ ನಡುವಣ ದಾಂಡಾಟದ ಆಗುಹೋಗುಗಳನ್ನು ನೋಡಿಕೊಳ್ಳುತ್ತಿರುವುದು ಮತ್ತು ದಾಂಡಾಟದ ಕಾನೂನುಗಳನ್ನು ಕಾಪಾಡಿಕೊಂಡು ನೋಡಿಕೊಳ್ಳುತ್ತಿರುವ ಐ.ಸಿ.ಸಿ. (ಇಂಟರ್ ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್) ಹುಟ್ಟಿಕೊಂಡಿದ್ದು 1909ರಲ್ಲಿ, ಮತ್ತು ಇದರ ಹಿಂದಿನ ಹೆಸರು ಇಂಪೇರಿಯಲ್ ಕ್ರಿಕೆಟ್ ಕಾನ್ಪರೆನ್ಸ್ ಎಂದು. ಆದರೆ ಇದಕ್ಕೂ ಮೊದಲೇ, ಅಂದರೇ 1788ರಲ್ಲಿ ದಾಂಡಾಟದ ಕಾನೂನುಗಳನ್ನು ಕಟ್ಟಿಕೊಳ್ಳಲಾಗಿತ್ತು.
* ನಿಮಗೆ ಗೊತ್ತಿರಲಿ, ಎಲ್ಲಾ ಆಟಗಳಲ್ಲೂ ‘ನಿಯಮ'(Rules)ವನ್ನು ಅಳವಡಿಸಿಕೊಂಡರೆ ದಾಂಡಾಡದಲ್ಲಿ ಮಾತ್ರ ‘ಕಾನೂನು'(Laws)ಗಳನ್ನು ಬಳಸುತ್ತಾರೆ.
3) ಸಚಿನ್ ತೆಂಡೂಲ್ಕರ್ ಇಂಡಿಯಾಕ್ಕೂ ಮೊದಲು ಪಾಕಿಸ್ತಾನದ ಪರ ಆಡಿದ್ದರು!
ನಿಜ. 1987ರಲ್ಲಿ ಬ್ರೇಬರ‍್ನ್ ಅಂಗಳದಲ್ಲಿ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪ್ರದರ‍್ಶನ ಪಯ್ಪೋಟಿಯೊಂದು ನಡೆದಿತ್ತು. ‘ಇಂಡಿಯಾ ಕ್ರಿಕೆಟ್ ಕ್ಲಬ್’ 50 ವರುಶಗಳನ್ನು ಪೂರೈಸಿದ್ದ ನಲಿವಿಗೆ ಈ ಪಯ್ಪೋಟಿಯನ್ನು ನಡೆಸಲಾಗಿತ್ತು. ಆ ಪಯ್ಪೋಟಿಯಲ್ಲಿ ಸಚಿನ್ ಪಾಕಿಸ್ತಾನದ ಪರ ಬದಲಿ ಆಟಗಾರನಾಗಿ ಬಯಲ್ಕಾಯುಗೆ(Fielding) ನಡೆಸಿದ್ದರು.
4) ಎರಡು ನಾಡುಗಳ ಪರ ಪೋಟಿಗಿಳಿದವರೂ ಇದ್ದಾರೆ
ಡಿರ‍್ಕ್ ನ್ಯಾನಸ್, ಹೆಸರಾಂತ ಎಸೆತಗಾರ. ಈತ ತನ್ನ ದಾಂಡಾಟವನ್ನು ಶುರುವಿಟ್ಟಿದ್ದು ನೆದರ್ ಲ್ಯಾಂಡ್ ತಂಡದ ಪರ. ಬಳಿಕ ಇವರು ನೆದರ್ ಲ್ಯಾಂಡ್ ತಂಡವನ್ನು ತೊರೆದು ಆಸ್ಟ್ರೇಲಿಯಾದ ಪರ ಪಯ್ಪೋಟಿಗಿಳಿದಿದ್ದರು.
ಇಂಡಿಯಾದ ಹಳೆಯ ಆಟಗಾರ ಇಪ್ತಿಕರ್ ಆಲಿ ಕಾನ್ ಪಟವ್ಡಿ. ಇವರು ಮೊದಲು ಇಂಡಿಯಾದ ಪರ ಆಡಿ ಬಳಿಕ ಇಂಗ್ಲೆಂಡ್ ತಂಡವನ್ನು ಕೂಡಿಕೊಂಡಿದ್ದರು. ಇನ್ನೊಂದು ಸಂಗತಿ ಎಂದರೆ ಇವರು ಬಾಲಿವುಡ್ ಹೆಸರಾಂತ ನಟ ಸಯ್ಪ್ ಆಲಿ ಕಾನ್ ಅವರ ಅಜ್ಜ.
5) ಇಂಡಿಯಾದ ದಾಂಡುಗಾರನಿಗೆ ಆಟದ ನಡುವೆ ಸಿಕ್ಕಿತ್ತೊಂದು ಮುತ್ತು
1960ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ‍್ನ್ ಅಂಗಳದಲ್ಲಿ ಒಂದು ಪಯ್ಪೋಟಿಯೊಂದು ನಡೆದಿತ್ತು. ಆ ಹೊತ್ತಿನಲ್ಲಿ ಇಂಡಿಯಾದ ಪರ ದಾಂಡುಗಾರಿಕೆ ನಡೆಸುತ್ತಿದ್ದ ಅಬ್ಬಾಸ್ ಆಲಿ ಬೇಗ್, ಅಯ್ವತ್ತು ಓಟಗಳನ್ನು ಗಳಿಸಿ ಮುನ್ನುಗುತ್ತಿದ್ದರು. ಅಶ್ಟರಲ್ಲಿ ಅಬ್ಬಾಸ್ ರಿಗೆ ಎದುರ‍್ಗೊಳ್ಳಲು(Greet) ಬಂದ ಮುದ್ದಾದ ಯುವತಿಯೊಬ್ಬಳು, ಎಲ್ಲರೆದುರು ನಡು ಅಂಗಳದಲ್ಲೆೇ ಅಬ್ಬಾಸ್ ಅವರ ಕೆನ್ನೆಗೆ ಮುತ್ತಿಕ್ಕಿದ್ದಳು. ಇಂತಹ ಬೇರೆ ಬೇರೆ ಬಗೆಯ ಪಯ್ಪೋಟಿಯಲ್ಲಿ ಬಹಳಶ್ಟು ಬಾರಿ ನಡೆದಿದ್ದರೂ ದಾಂಡಾಟಕ್ಕೆ ಹೊಸದಾಗಿತ್ತು.
6) ದಾಂಡು(Bat) ಇಲ್ಲದೆ ಒದ್ದಾಡಿದ್ದ ಅಪ್ರೀದಿ
ಪಾಕಿಸ್ತಾನದ ಹೆಸರಾಂತ ಆಟಗಾರ ಶಾಹೀದ್ ಅಪ್ರೀದಿ 1996ರಲ್ಲಿ ದಾಂಡುಗಾರಿಕೆ ನಡೆಸಲು ಸರಿಯಾದ ದಾಂಡಿಲ್ಲದೆ ಒದ್ದಾಡಿದ್ದರಂತೆ. ಆಗ ಅವರಿಗೆ ದಾಂಡು ನೀಡಿದವರು ಪಾಕ್ ನ ಇನ್ನೊಬ್ಬ ಆಟಗಾರ ವಕಾರ್ ಯೂನಿಸ್. ಅಶ್ಟಕ್ಕೂ ಆ ದಾಂಡು ಯಾರದ್ದು ಗೊತ್ತ? ಅದು ಸಚಿನ್ ತೆಂಡೂಲ್ಕರ್ ವಕಾರ್ ಗೆ ನೀಡಿದ್ದು. ಆ ದಾಂಡಿನಲ್ಲೇ ಅಪ್ರೀದಿ ಬಿರುಸಿನ ನೂರು ಓಟ ಗಳಿಸಿ ದಾಕಲೆ ಬರೆದದ್ದು.
7) ಟೆಸ್ಟ್ ನಲ್ಲಿ ಸಚಿನ್ ಗಿಂತ ಅವರ ಗೆಳೆಯ ಕಾಂಬ್ಳಿಯೇ ಸಕ್ಕತ್ ಅಂತೆ
ಸಚಿನ್ ಅವರ ಎಳವೆಯ ಗೆಳೆಯ ವಿನೋದ್ ಕಾಂಬ್ಳಿ ಅವರು ಆಡಿದ್ದು ಬರೇ ಹದಿನೇಳು ಟೆಸ್ಟ್ ಪಂದ್ಯಗಳನ್ನು ಮಾತ್ರ. ಆದರೆ ಅವರ ಸರಾಸರಿ ಎಶ್ಟು ಗೊತ್ತ? ನೂರಕ್ಕೆ 54.20 ಅಂತೆ. ಅದೇ ಸಚಿನ್ ಬರೋಬ್ಬರಿ 200 ಟೆಸ್ಟ್ ಪಯ್ಪೋಟಿಯಲ್ಲಿ ಆಡಿ ಗಳಿಸಿದ ಸರಾಸರಿ ನೂರಕ್ಕೆ 53.78 ಅಂತೆ.
8) ಗೆದ್ದೋರು ಇದ್ದಾರೆ, ಸೋತೋರು ಇದ್ದಾರೆ
ದಾಂಡಾಟದಲ್ಲಿ ಅರವತ್ತು ಎಸೆತಗಟ್ಟುಗಳು, ಅಯ್ವತ್ತು ಎಸೆತಗಟ್ಟುಗಳು ಮತ್ತು ಇಪ್ಪತ್ತು ಎಸೆತಗಟ್ಟುಗಳು ಸೇರಿದಂತೆ ಈವರೆಗೆ ಮೂರು ಮಾದರಿಯ ಪಯ್ಪೋಟಿಗಳನ್ನು ಅಯ್.ಸಿ.ಸಿ ತನ್ನ ಮುಂದಾಳತ್ವದಲ್ಲಿ ನಡೆಸಿಕೊಟ್ಟಿದೆ. ಈ ಮೂರೂ ಮಾದರಿಯ ಕೊನೆಯ ಹಂತದ ಪಯ್ಪೋಟಿಯಲ್ಲಿ ಗೆದ್ದ ಒಂದೇ ಒಂದು ತಂಡವೆಂದರೆ ಇಂಡಿಯಾ.
* 1983 – 60 ಎಸೆತಗಟ್ಟುಗಳು (ವಿಶ್ವಕಪ್)
* 2007 – 20 ಎಸೆತಗಟ್ಟುಗಳು (ವಿಶ್ವಕಪ್)
* 2011 – 50 ಎಸೆತಗಟ್ಟುಗಳು (ವಿಶ್ವಕಪ್)
ಹಾಗೆಯೇ ಈ ಮೂರು ಮಾದರಿಯ ಕೊನೆಯ ಹಂತದ ಪಯ್ಪೋಟಿಯಲ್ಲಿ ಸೋಲು ಕಂಡ ಒಂದೇ ಒಂದು ತಂಡವೆಂದರೆ ಇಂಗ್ಲೆಂಡ್.
* 1979 – 60 ಎಸೆತಗಟ್ಟುಗಳು (ವಿಶ್ವಕಪ್)
* 1992 – 50 ಎಸೆತಗಟ್ಟುಗಳು(ವಿಶ್ವಕಪ್)
* 2013 – 20 ಎಸೆತಗಟ್ಟುಗಳು(ಚಾಂಪಿಯನ್ಸ್ ಟ್ರೋಪಿ)
9) ಶ್ರೀಲಂಕನ್ನರು ಆಸ್ಟ್ರೇಲಿಯಾದೆದುರು ಗೆದ್ದಿದ್ದು ಕೇವಲ ಒಂದು ಬಾರಿ
ಇದು ಹೇಗೆ ಅಂತೀರಾ? ಇದು ನಿಜ ಆದರೆ ಟೆಸ್ಟ್ ಪಯ್ಪೋಟಿಯಲ್ಲಿ ಮಾತ್ರ. ಶ್ರೀಲಂಕ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಈ ವರೆಗೆ ಬಹಳಶ್ಟು ಟೆಸ್ಟ್ ಪಯ್ಪೋಟಿಗಳು ನಡೆದಿವೆ. ವಿಶೇಶವೆಂದರೆ, ಆಸ್ಟ್ರೇಲಿಯನ್ನರು ಶ್ರೀಲಂಕಾಗೆ ಬಂದು ಪಯ್ಪೋಟಿ ನಡೆಸಿದ್ದಕ್ಕಿಂತ ಶ್ರೀಲಂಕಾ ತಂಡ ಆಸ್ಟ್ರೇಲಿಯಾದಲ್ಲಿ ಆಡಿದ್ದೇ ಹೆಚ್ಚು. ತನ್ನ ತವರು ನೆಲದ ನೆರವು ಪಡೆದ ಆಸ್ಟ್ರೇಲಿಯಾ ಲಂಕನ್ನರಿಗೆ ಮಣಿಯಲೇ ಇಲ್ಲ. ಹಾಗೆಯೇ ಶ್ರೀಲಂಕಾದಲ್ಲಿ ಲಂಕನ್ನರು ತನ್ನ ತವರು ನೆಲದ ನೆರವನ್ನು ಸರಿಯಾಗಿ ಎತ್ತುವಲ್ಲಿ ಎಡವಿದ್ದರು. ಹಾಗಾಗಿಯೇ ಈ ವರೆಗೆ ಒಂದೇ ಒಂದು ಟೆಸ್ಟ್ ಪಯ್ಪೋಟಿಯನ್ನು ಲಂಕಾ ಗೆದ್ದಿದ್ದು. ಅದೂ ಕೂಡ ಶ್ರೀಲಂಕಾದಲ್ಲೇ ನಡೆದದ್ದು.
10) ಸಚಿನ್ + ಜಹೀರ್ = ಕಾಲಿಸ್, ಈ ಲೆಕ್ಕ ಗೊತ್ತ?
ಸಚಿನ್ ಮತ್ತು ಜಹೀರ್ ಸೇರಿದರೆ ಒಬ್ಬ ಕಾಲಿಸ್ ಅಂತೆ. ಹೇಗೆ ಅಂತಿರಾ, ಈ ಲೆಕ್ಕ ನೋಡಿ.
ಸಚಿನ್ 15183 ಓಟಗಳು ಮತ್ತು ಸರಾಸರಿ 56.02
ಕಾಲಿಸ್ 12005 ಓಟಗಳು ಮತ್ತು ಸರಾಸರಿ 56.90
ಜಹೀರ್ 273 ವಿಕೆಟ್ ಗಳು ಮತ್ತು ಸರಾಸರಿ 31.78
ಕಾಲಿಸ್ 271 ವಿಕೆಟ್ ಗಳು ಮತ್ತು ಸರಾಸರಿ 32.33
11) ಕೊನೆಗೆ ಆಟ ನಿಲ್ಲಿಸಿದವರು ಸಚಿನ್
1989ರಲ್ಲಿ ಸಚಿನ್ ಜೊತೆಗೆ ಸುಮಾರು 23 ಆಟಗಾರರು ಬೇರೆ ಬೇರೆ ತಂಡಗಳಿಗೆ ನಾಡು ನಾಡುಗಳ ಪಯ್ಪೋಟಿಗೆ ಕಾಲಿಟ್ಟಿದ್ದರು. ಆದರೆ ಇವರಲ್ಲಿ ಸಚಿನ್ ಅವರಶ್ಟು ಕಾಲ ದಾಂಡಾಟವಾಡಿದವರು ಯಾರೂ ಇಲ್ಲ. ಸಚಿನ್ ಗಿಂತ ಮೊದಲು ಕೊನೆಯವರಾಗಿ ದಾಂಡಾಟದಿಂದ ಹೊರಬಂದವರು 2004ರಲ್ಲಿ ನ್ಯೂಜಿಲ್ಯಾಂಡ್ ನ ಕ್ರಿಸ್ ಕೇರ‍್ನ್. ಅಂದರೆ ಆ ಬಳಿಕ ಸತತ ಹತ್ತು ವರುಶಗಳ ಕಾಲ ಸಚಿನ್ ದಾಂಡಾಟವಾಡಿದ್ದರು.
12) ಹೆಚ್ಚು ಓಟ ಗಳಿಸಿದ್ದು ಸಚಿನ್ ಅಲ್ಲ, ಹೆಚ್ಚು ಹುತ್ತರಿ ಗಳಿಸಿದ್ದು ಮುರಳಿದರನ್ ಅಲ್ಲ
ಸಚಿನ್ ಅವರನ್ನು ದಾಂಡಾಟದ ದೇವರೆಂದು ಕರೆಯುವುದು ನಿಮಗೆ ಗೊತ್ತೇ ಇದೆ. ಕಾರಣ ಅವರು ದಾಂಡಾಟದ ಎಲ್ಲಾ ಬಗೆಗಳಲ್ಲೂ ಆಡಿದ ರೀತಿ. ಅದರಲ್ಲೂ ಅವರು ಗಳಿಸಿದ ಓಟಗಳು ಜಗತ್ತು ನಿಬ್ಬೆರಗಾಗಿ ನೋಡುವಂತದ್ದು. ಹಾಗೆಯೇ ಶ್ರೀಲಂಕಾದ ಮುರಳೀದರನ್ ಗಳಿಸಿದಶ್ಟು ಹುತ್ತರಿ ಇನ್ಯಾರು ಗಳಿಸಿಲ್ಲ ಎಂಬುವುದು ನಮಗೆ ಗೊತ್ತಿರುವುದು. ಆದರೆ ಇಂಗ್ಲೆಂಡ್ ನ ವಿಲ್ಪರ‍್ಡ್ ರೋಡ್ಸ್ ಎಂಬ ಆಟಗಾರ 39,969 ಓಟಗಳನ್ನು ದಾಂಡುವಿನ ಮೂಲಕ ಗಳಿಸಿದರೆ, 4204 ಹುತ್ತರಿಯನ್ನು ಎಸೆತಗಾರಿಕೆಯ ಮೂಲಕ ಗಳಿಸಿದ್ದಾರೆ. ಆದರೆ ವಿಲ್ಪರ‍್ಡ್ ಇದನೆಲ್ಲಾ ಮಾಡಿದ್ದು ನಾಡೊಳಗಣ ಪಯ್ಪೋಟಿಯಲ್ಲಿ. ಇಲ್ಲೊಂದು ವಿಶೇಶವೆಂದರೆ ವಿಲ್ಪರ‍್ಡ್ ತನ್ನ 52ರ ವಯಸ್ಸಿನ ವರೆಗೂ ದಾಂಡಾಟವಾಡಿದ್ದರು.
13) ವೀರೂ-ಗಿಲ್ಲಿ ಕಿಂಗ್ ಪೇರ್ ಅನ್ನೋದು ಯಾರಿಗಾದ್ರು ಗೊತ್ತಾ?
ಒಂದೆಡೆ ಇಂಡಿಯಾದ ದಾಂಡಾಟದ ದಿಗ್ಗಜ ವಿರೇಂದರ್ ಸೆಹ್ವಾಗ್, ಇನ್ನೊಂದೆಡೆ ಆಸ್ಟ್ರೇಲಿಯಾದ ಬಿರುಸಿನ ದಾಂಡುಗಾರ ಆಡಂ ಗಿಲ್ ಕ್ರಿಸ್ಟ್. ಅರೇ, ಬೇರೆ ಬೇರೆ ತಂಡಗಳಿಗೆ ಆಡುವ ಇಬ್ಬರು ಕಿಂಗ್ ಪೇರ್ ಹೇಗಾಗ್ತಾರೆ ಅಂತನಾ? ಒಂದು ಟೆಸ್ಟ್ ಪಯ್ಪೋಟಿಯ ಎರಡು ಇನ್ನಿಂಗ್ಸ್ ನಲ್ಲಿ ಸೊನ್ನೆಗೆ ಹೊರ ನಡೆಯುವ ಎದುರಾಳಿ ತಂಡದ ಇಬ್ಬರು ಆಟಗಾರರನ್ನು ಪೇರ್ (ಜೋಡಿ) ಎನ್ನುವರು. ಆದರೆ ಎರಡೂ ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿ ಹೊರ ನಡೆಯುವ ಎದುರಾಳಿ ತಂಡದ ಆರಂಬಿಕರನ್ನು ಕಿಂಗ್ ಪೇರ್ (ದೊರೆ ಜೋಡಿ) ಎನ್ನುವರು. ಈ ರೀತಿ ಒಮ್ಮೆ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಣ ಪಯ್ಪೋಟಿಯಲ್ಲಿ ನಡೆದಿತ್ತು. ಇಂಡಿಯಾದ ಸೆಹ್ವಾಗ್ ಮತ್ತು ಆಸ್ಟ್ರೇಲಿಯಾದ ಗಿಲ್ ಕ್ರಿಸ್ಟ್ ಎರಡೂ ಇನ್ನಿಂಗ್ಸ್ ನ ಮೊದಲ ಎಸೆತದಲ್ಲೇ ಬಲಿಯಾಗಿದ್ದರು.
14) ಈಗ ಮಾಡುತ್ತಿರುವ ‘ಓವರ್ ಆರ‍್ಮ್’ ಎಸೆತಗಾರಿಕೆ ದಾಂಡಾಟದ ಕಾನೂನಿಗೆ ವಿರುದ್ದವಂತೆ
ದಾಂಡಾಟದ ಹಳಮೆಯನ್ನೊಮ್ಮೆ ನೋಡಿದಾಗ ನಮಗರಿವಾಗುವುದು ಮೊದಲು ಅಂಡರ್ ಆರ‍್ಮ್ ಎಸೆತಗಾರಿಕೆ ನಡೆಸುತ್ತಿದ್ದರೆಂಬುದು. ಅಂದರೆ ಎಸೆತಗಾರಿಕೆಯ ಮೂಲ ಅಂಡರ್ ಆರ‍್ಮ್ ಎಂಬುವುದು. ಮುಂದೆ ಜಾಗತಿಕ ದಾಂಡಾಟದ ಹೊತ್ತಿಗೆ ಜಾನ್ ವೈಲ್ಸ್ ಎಂಬಾತ ಓವರ್ ಆರ‍್ಮ್ ಎಸೆತಗಾರಿಕೆಯನ್ನು ಬಳಕೆಗೆ ತಂದ. ಈ ಬಗೆಯ ಎಸೆತಗಾರಿಕೆಯನ್ನು ಆತ ತನ್ನ ತಂಗಿಯಿಂದ ಕಲಿತಿದ್ದ. ಅಲ್ಲಿಂದ ಇಂದಿನ ವರೆಗೂ ಓವರ್ ಆರ‍್ಮ್ ಎಸೆತಗಾರಿಕೆ ಬಳಕೆಯಲ್ಲಿದೆ.
(ಚಿತ್ರ ಸೆಲೆ: listden.com, espncricinfo.com, dawn.com, cricinfo, telegraph.co.uk)
(ಮಾಹಿತಿ ಸೆಲೆ: brandsynario.com)
ಇತ್ತೀಚಿನ ಅನಿಸಿಕೆಗಳು