ಇಲ್ಲಿವೆ 8 ಹೊಸ ಗ್ಯಾಜೆಟ್ ಗಳು

– ರತೀಶ ರತ್ನಾಕರ.

ದಿನಕ್ಕೊಂದು ಹೊಸ ಚಳಕ ಹೊರಬರುತ್ತಿರುವ ಕಾಲವಿದು. ಮಿಂಚೂಟಿ(Electronic Gadgets)ಗಳಲ್ಲಂತು ಕಂಡು ಕೇಳರಿಯದ, ಮೂಗಿನ ಮೇಲೆ ಬೆರಳಿಟ್ಟು ನೋಡುವಂತಹ ಚೂಟಿಗಳು ಹೊರಬರುತ್ತಿವೆ. ಈ ವರುಶ ಬಿಡುಗಡೆಯಾಗಿರುವ ಹಾಗು ಆಗಲಿರುವ ಇಂತಹ ಕೆಲವು ಚೂಟಿಗಳ ವಿವರ ಇಲ್ಲಿದೆ ನೋಡಿ.

ಡ್ಯಾಶ್ – ಐ ನೆನಪಿನ ಬಿಲ್ಲೆಯೋದುಕ (Dash-I microSD card reader):

Gadget1
ಆಪಲ್ ಕಂಪನಿಯ ಅಲೆಯುಲಿ (mobile) ಹಾಗು ಮಣೆ(tablet)ಗಳಿಗೆ ಹೊರಗಿನ ನೆನಪಿನ ಬಿಲ್ಲೆ(Memory card)ಗಳನ್ನು ಬಳಸುವ ಆಯ್ಕೆ ಇರಲಿಲ್ಲ. ಆದರೆ ಈಗ ಡ್ಯಾಶ್ – ಐ ಬಿಲ್ಲೆಯೋದುಕವನ್ನು ಬಳಸಿ ಯಾವ ಅಳತೆಯ ನೆನಪಿನ ಬಿಲ್ಲೆಗಳನ್ನು ಬೇಕಾದರು ಅಲೆಯುಲಿ, ಮಣೆ ಇಲ್ಲವೇ ಎಣ್ಣುಕದಲ್ಲಿ ಬಳಸಬಹುದಾಗಿದೆ. ಹಾಡು, ಚಿತ್ರ, ಕಡತ ಹೀಗೆ ಬೇಕಾದ್ದನ್ನು ಬಿಲ್ಲೆಯ ಮೂಲಕ ಪಡೆಯಬಹುದು ಹಾಗು ಬಿಲ್ಲೆಯಲ್ಲಿ ಕೂಡಿಡಲೂಬಹುದು.

ಅಮೇಜಾನ್ ಟ್ಯಾಪ್ (Amazon Tap):

Gadget2
ಅಮೇಜಾನ್ ಕಂಪನಿಯಿಂದ ಹೊರಬಂದಿರುವ ತಂತಿಯಿರದ ಬ್ಲೂಟೂತ್ ಉಲಿಕ (speaker) ಇದಾಗಿದೆ. ಇದು ಪುಟ್ಟದಾಗಿದ್ದು ಎಲ್ಲಿಗೆ ಬೇಕೋ ಅಲ್ಲಿಗೆ ಒಯ್ಯಬಹುದು. ಇದರಲ್ಲಿ ಪುಟ್ಟ ಉಲಿಹೆಚ್ಚುಕ (microphone) ಕೂಡ ಇದೆ. ಈ ಉಲಿಹೆಚ್ಚುಕವನ್ನು ಒಮ್ಮೆ ‘ತಟ್ಟಿ’ ನಿಮಗೆ ಬೇಕಾದ ಹಾಡು ಇಲ್ಲವೇ ಬಾನುಲಿಯನ್ನು, ಪ್ರೈಮ್ ಮ್ಯೂಸಿಕ್ (Prime Music), ಸ್ಪೋಟಿಪೈ(Spotify), ಪಂಡೋರ(Pandora), ಐಹಾರ‍್ಟ್ ರೇಡಿಯೋ(iHeartRadio) ಹಾಗು ಟ್ಯೂನ್ ಇನ್(TuneIn) ಸೇವೆಗಳ ಮೂಲಕ ಕೇಳಬಹುದು. ಈ ಮಾಡುಗೆಯು ಅಲೆಕ್ಸ್ ಉಲಿ ಸೇವೆ(Alex voice service)ಯ ನೆರವಿನಿಂದ ವೈ-ಪೈ ಇಲ್ಲವೇ ಅಲೆಯುಲಿಯ ಮಿಂಬಲೆಜಾಡಿನೊಂದಿಗೆ(hotspot) ಕೂಡಿಕೊಳ್ಳುತ್ತದೆ. ಒಮ್ಮೆ ಮಿಂಕಟ್ಟನ್ನು(battery) ತುಂಬಿಸಿದರೆ 9 ಗಂಟೆಗಳ ಕಾಲ ಬಳಸಬಹುದು.

ಮೈಕ್ರೋಸಾಪ್ಟ್ ಸರ‍್ಪಸ್ ಪ್ರೋ – 4 (Microsoft Surface Pro – 4)

Gadget3

ಇದನ್ನು ಮಣೆ ಇಲ್ಲವೇ ಮಡಿಲೆಣ್ಣುಕ ಎರಡರಲ್ಲಿ ಯಾವ ಬಗೆಯಲ್ಲಿ ಬೇಕಾದರೂ ಬಳಸಬಹುದು. ಇದು 128GB / Intel Core m 3 – 4GB RAM ಏರ‍್ಪಾಟಿನಿಂದ 256GB / Intel Core i7 – 8GB RAM ಏರ‍್ಪಾಟಿನವರೆಗೂ ಸಿಗುತ್ತದೆ. ವಿಂಡೋಸ್ 10 ನಡೆಸೇರ‍್ಪಾಟು(operating system) ಹಾಗು 12.3 ಇಂಚಿನ ಸೋಕುತೆರೆಯನ್ನು(touch screen) ಹೊಂದಿದೆ. ಸುಮಾರು 9 ಗಂಟೆಗಳವರೆಗೆ ಮಿಂಕಟ್ಟು ಬಳಕೆಗೆ ಬರುತ್ತದೆ ಎಂದು ತಿಳಿಸಲಾಗಿದೆ.

ಇದು ಬರೀ ಗಡಿಯಾರ ಮಾತ್ರವಲ್ಲ!

Gadget4

ಈ ಗಡಿಯಾರದಲ್ಲಿ ಹೊತ್ತಿನ ಜೊತೆಗೆ ದಿನಾಂಕ, ಬಿಸುಪು(Temperature), ತೇವಾಂಶ(humidity)ಹಾಗು ಹುಣ್ಣಿಮೆ, ಅಮಾವಸ್ಯೆಗಳ ಮಾಹಿತಿ ಸಿಗುತ್ತದೆ. ಇದರ ರೇಡಿಯೋ ಪಡೆಕ ಯು.ಎಸ್. ಅಟಾಮಿಕ್ ಹೊತ್ತಿನ ಜೊತೆಗೆ ಹೊಂದಿಕೊಂಡು ಸರಿಯಾದ ಹೊತ್ತನ್ನು ತೋರಿಸುವಂತೆ ಮಾಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದರಿಂದ ನಿಮ್ಮ ಅಲೆಯುಲಿಯ ಮಿಂಕಟ್ಟನ್ನು(battery) ತುಂಬಿಸಬಹುದಾಗಿದೆ!

ಇನ್ನೋವ್ 8 (Innov 8):

Gadget5

ಇಗ್ನೀಶನ್ ಬೂಸ್ಟ್ ಚಳಕವನ್ನು ಬಳಸಿ ಮಾಡಲಾದ, ಒಟ್ಟು 8 ಟಿಬಿಯಶ್ಟು ಕೂಡಿಡಲು ಜಾಗವಿರುವ, ಯುಎಸ್ಬಿ-ಸಿ(USB-C) ಬಲವುಳ್ಳ ಮೊದಲ ಗಟ್ಟಿನೆಪ್ಪು(hard disc) ಇದಾಗಿದೆ. ಇದೊಂದು ಒಯ್ಯಬಲ್ಲ ಗಟ್ಟಿನೆಪ್ಪಾಗಿದ್ದು, ನಿಮ್ಮ ಎಣ್ಣುಕಕ್ಕೆ ಹೊರಗಿನಿಂದ ಕೂಡಿಸಬಹುದಾಗಿದೆ. ಒಟ್ಟು 2 ಮಿಲಿಯನ್ ಹಾಡುಗಳು, 4 ಮಿಲಿಯನ್ ತಿಟ್ಟಗಳು ಹಾಗು 800 HD ಸಿನಿಮಾಗಳನ್ನು ಇದರಲ್ಲಿ ಕೂಡಿಡಬಹುದು.

ರಿಪಲ್ ಬಡ್ಸ್(Ripple buds):

Gadget6
ಇದು ಜಗತ್ತಿನ ಕಡುಚಿಕ್ಕ ಬ್ಲೂಟೂತ್ ಕಿವಿಮೊಗ್ಗು(earbud). ಇದರೊಳಗೆ ಒಂದು ಪುಟ್ಟ ಉಲಿಹೆಚ್ಚುಕ (microphone)ಕೂಡ ಇದೆ. ಈ ಕಿವಿಮೊಗ್ಗು ನಿಮ್ಮ ಸುತ್ತಮುತ್ತಲಿನ ಗದ್ದಲವನ್ನು ಸುಮಾರು 30 ಡೆಸಿಬಲ್ ನಶ್ಟು ಕಡಿಮೆಗೊಳಿಸಿ, ನಮ್ಮೆದುರು ನಿಂತವರು ಆಡುತ್ತಿರುವ ಮಾತು ಚೆನ್ನಾಗಿ ಕೇಳುವಂತೆ ಮಾಡುತ್ತದೆ. ಅಲ್ಲದೇ, ಬ್ಲೂಟೂತ್ ಮೂಲಕ ನಿಮ್ಮ ಅಲೆಯುಲಿ/ಎಣ್ಣುಕವನ್ನು ಬಳಸಿ ಹಾಡುಗಳನ್ನೂ ಕೇಳಬಹುದು.

ಗಾಜಿನ ಕೀಲಿಮಣೆ:

Gadget7
ಇದು ತಂತಿಯಿರದ ಬ್ಲೂಟೂತ್ ಕೀಲಿಮಣೆ. ಗಾಜಿನ ಮೇಲೆ ಚೆಂದವಾಗಿ ಮೂಡಿಸಿರುವ QWERTY ಕೀಲಿಗಳನ್ನು ಸೋಕಿದರೆ ಸಾಕು ನೀವು ಬರೆದದ್ದು ಎದುರಿಗೆ ಕೂಡಿಸಿಕೊಂಡಿರುವ ಎಣ್ಣುಕ/ಅಲೆಯುಲಿಯ ಪರದೆಯಲ್ಲಿ ಕಾಣುತ್ತದೆ. ಇದು ಐಓಸ್, ಆಂಡ್ರಾಯ್ಡ್, ವಿಂಡೋಸ್ ಹಾಗು ಓಯೆಸ್ – ಎಕ್ಸ್ (OS X) ಚೂಟಿಗಳೊಂದಿಗೆ ಹೊಂದಿಕೊಳ್ಳುತ್ತದೆ. USB ಎಳೆಯ ಮೂಲಕ ಇದರ ಮಿಂಕಟ್ಟನ್ನು ತುಂಬಿಸಬಹುದು.

ಪಿಟ್ಬಿಟ್ ಬ್ಲೇಜ್ (Fitbit Blaze):

Gadget8
ನಿಮ್ಮ ಎಂದಿನ ಚಟುವಟಿಕೆ ಮತ್ತು ಕಸರತ್ತುಗಳ ಜಾಡನ್ನು ಹಿಡಿಯಲು ಇದೋ ಬಂದಿದೆ ಹೊಸ ಪಿಟ್ಬಿಟ್ ಬ್ಲೇಜ್ ಎಂಬ ಚೂಟಿಗಡಿಯಾರ. ಇದರಲ್ಲಿ ಗುಂಡಿಗೆ ಬಡಿತದ ವಿವರವು ಸಿಗುತ್ತದೆ, ಜಿಪಿಎಸ್ ಗೆ ಹೊಂದಿಸಿಕೊಳ್ಳುವುದು ಹಾಗೂ ಇದರ ಪುಟ್ಟ ತೆರೆಯ ಮೇಲೆ ಬೇರೆ ಬೇರೆ ಕಸರತ್ತುಗಳನ್ನು ನೋಡಿ ಕಲಿಯಬಹುದಾಗಿದೆ. ಇದನ್ನು ನಿಮ್ಮ ಅಲೆಯುಲಿ ಹಾಗು ಎಣ್ಣುಕಕ್ಕೆ ಕೂಡಿಸಿಕೊಂಡು ನಿಮ್ಮ ಕಸರತ್ತಿನ ವಿವರಗಳನ್ನು ಕಲೆಹಾಕಬಹುದು. ಇದೆಲ್ಲಕ್ಕಿಂತ ಹೆಚ್ಚಾಗಿ ಈ ಚೂಟಿ ಕೈಗಡಿಯಾರವು ನಿಮ್ಮ ಅಲೆಯುಲಿಯ ಇನ್ನೊಂದು ಪರದೆಯಂತೆ ಕೆಲಸ ಮಾಡುತ್ತದೆ. ಕರೆ ಮತ್ತು ಚುಟುಕೋಲೆಗಳ ಮುನ್ಸುಳಿವು(notification) ಇದರಲ್ಲಿ ಕಾಣುತ್ತವೆ. ಹಾಗು ಅಲೆಯುಲಿಯ ಮೂಲಕ ಬರುವ ಹಾಡುಗಳನ್ನು ಕೂಡ ಇದರಿಂದ ಹತೋಟಿಯಲ್ಲಿಡಬಹುದು.

(ಮಾಹಿತಿ ಮತ್ತು ಚಿತ್ರಸೆಲೆ: itbusinessedge.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. chandanavana says:

    ಇಂದೀಕರಿಸಿ(ಅಪಡೇಟ್) ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

ಅನಿಸಿಕೆ ಬರೆಯಿರಿ: