ಸಾವು ತೋರಿದ ಹಲವು ಮುಕಗಳು
ಸಾವು! ಯಾರ ಮನೆಯಲ್ಲಿ ಸಾವುಗಳಾಗಿಲ್ಲ? ಎಲ್ಲರ ಮನೆಯಲ್ಲೂ ಒಂದಲ್ಲ ಒಂದು ಸಾವು ನಡೆದೇ ನಡೆದಿರುತ್ತದೆ. ಆಕಸ್ಮಿಕವೋ ಅತವ ವಯೋಸಹಜ ಸಾವೋ, ಒಂದಿಲ್ಲೊಂದು ಸಾವು ನಮ್ಮ ಮನೆಯಲ್ಲಿ ನಡೆದೇ ನಡೆದಿರುತ್ತದೆ. ಬುದ್ದ ಹೇಳಿದಂತೆ ಸಾವಿಲ್ಲದ ಮನೆಯ ಸಾಸಿವೆಯನ್ನ ಎಲ್ಲಿಂದಲೂ ತರೋದಕ್ಕೆ ಸಾದ್ಯವಿಲ್ಲ. ಸಾವು ಅನಿವಾರ‍್ಯ ಕೂಡ. ಹೀಗೆ ನಮ್ಮ ಮನೆಯಲ್ಲಿ ನಡೆದ ಮತ್ತು ನಾನು ನೋಡಿದ ಇನ್ನಿತರ ಸಾವುಗಳು, ಅದು ತೋರಿಸಿದ ಹಲವು ಮುಕಗಳನ್ನ ನನ್ನ ಈ ಬರಹದಲ್ಲಿ ನಿಮ್ಮ ಮುಂದಿಡುತ್ತೇನೆ.
ನಾನು ಹತ್ತಿರದಿಂದ ಕಂಡ ಮೊದಲ ಸಾವು ನನ್ನ ತಾತನದ್ದು ಹಾಗು ಸಾವು ತನ್ನ ಹಲವಾರು ಮುಕಗಳನ್ನ ನನಗೆ ತೋರಲು ಶುರುಮಾಡಿದ್ದು ಇಲ್ಲಿಂದಲೇ… ತನ್ನ ಬದುಕಿನ ಕೊನೆಯ ವರುಶಗಳಲ್ಲಿ ನನ್ನ ತಾತ ತನಗೆ ತಿಳಿದಿರುವ ಮಂದಿಯ ಹತ್ತಿರ “ನನ್ನ ಮೊಮ್ಮಗನಿಗೆ 18 ತುಂಬೋ ತನಕ ನನಗೆ ಆಯಸ್ಸು ಆ ಬಗವಂತ ಕೊಟ್ರೆ ಸಾಕು“ ಎಂದು ಆಗಾಗ ಹೇಳುತ್ತಲೇ ಇದ್ದರು. ಕಾಕತಾಳೀಯವೋ ಏನೋ ಸರಿಯಾಗಿ ನನಗೆ 18 ತುಂಬಿ 4 ತಿಂಗಳ ನಂತರ ನನ್ನ ತಾತ ತೀರಿಕೊಂಡರು. ಎಲ್ಲಾ ಹೊತ್ತು ನನ್ನ ಜೊತೆಯಲ್ಲಿ ಇರುತ್ತಾರೆ ಎಂದು ತಿಳಿದಿದ್ದ ನನಗೆ ದಿಟದ ಅರಿವಾಗಿ ಎಲ್ಲವು ತಿಳಿಯಾದ ಮೇಲೆ ತಾತ ಹೇಳುತ್ತಿದ್ದ ಮಾತನ್ನು ನೆನಿಸಿಕೊಂಡಾಗ ‘ಹೇಗಲ್ವಾ’? ಎಂದು ನನ್ನ ತಲೆಗೆ ಆಗಾಗ ಕೇಳ್ವಿಯೊಂದು ಕಾಡುತ್ತಿರುತ್ತದೆ. ಈಗಲೂ ನನಗೆ ಅದಕ್ಕೆ ಉತ್ತರ ಸಿಕ್ಕಿಲ್ಲ!!!
ನನ್ನ ತಾತ ಸತ್ತ ಹೊತ್ತಿನಲ್ಲಿ ಕೇಳುತ್ತಿದ್ದ ಜನರ ಮಾತುಗಳು, ತಿಳಿಯದ ಜನರು ಬಂದು ಕೊಟ್ಟ ಸಲಹೆಗಳು, ಕಾರ‍್ಯ ಮಾಡುವ ಕಟ್ಟಳೆಗಳು ಎಲ್ಲವು ನನಗೆ ಹೊಸದು. ವರುಶ ಕಳೆದಂತೆ ಇವೆಲ್ಲದರ ಪರಿಚಯವಾಗಿ ಸಾವು ನೋವುಗಳನ್ನ ಆಳವಾಗಿ ಗಮನಿಸಲು ಶುರುಮಾಡಿದೆ. ಕೆಲವು ಸಾವು ಕುಟುಂಬಗಳನ್ನ ಒಂದುಗೂಡಿಸಿದ್ದನ್ನು ನೋಡಿದೆ ಮತ್ತೆ ಕೆಲವು ಕುಟುಂಬಗಳಲ್ಲಿ ಒಡಕು ತಂದಿದ್ದನ್ನು ನೋಡಿದೆ. ಕೆಲವು ಸಾವಿನ ನಂತರ ಮಂದಿಯ ಒಳ್ಳೆಯ ನಡತೆಯನ್ನು ನೋಡಿದರೆ ಮತ್ತೆ ಕೆಲವು ಮಂದಿಯ ಕೆಟ್ಟ ನಡತೆಯನ್ನು ನೋಡಿದೆ. ಹೀಗೆ, ತನ್ನ ಹೆಂಡತಿಯ ಹೆಣವನ್ನ ಸಾಗಿಸಲು ಹಣವಿಲ್ಲದೇ, ಹೆಣ ಸಾಗಿಸಲು ಯಾರ ಸಹಾಯವೂ ಸಿಗದೇ 10 ಕಿ.ಮೀ. ದೂರ ಹೆಗಲ ಮೇಲೆ ಹೆಣವನ್ನ ಹೊತ್ತುಕೊಂಡ ಬಂದ ಗಂಡನ ಬಗ್ಗೆ ದೇಶಾದ್ಯಂತ ಸುದ್ದಿಯಾದಾಗ, ಆ ಸಾವು ನಮ್ಮ ಸುತ್ತಲಿನ ಕೂಡಣದ ಮಾನವೀಯತೆಯ ಮಟ್ಟವನ್ನ ತೋರಿದ್ದನ್ನ ಕಂಡೆ.
ಒಮ್ಮೆ ನಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣಾಳೂಬ್ಬರು ಬಂದು “ಅಣ್ಣ, ಬಸ್ಸಿಗೆ ಸಿಗಾಕೊಂಡು ಸತ್ತರೆ ಜಾಸ್ತಿ ಹಣ ಕೊಡ್ತಾರ ಅತವ ರೈಲಿಗೆ ಸಿಗಾಕೊಂಡು ಸತ್ತರೆ ಜಾಸ್ತಿ ಹಣ ಕೊಡ್ತಾರ?“ ಎಂದು ಕೇಳಿದರು. “ಯಾಕಿಂಗೆ ಕೇಳ್ತಿದ್ದೀರ?” ಎಂದು ಬೆರಗಿನಿಂದ ಕೇಳಿದೆ. “ನಮ್ಮನೆಯವ್ರು ನಿನ್ನಿಂದ ಏನು ಉಪಯೋಗ ಇಲ್ಲ ಅಂತಿದ್ದರು ತಮಾಶೆಗೆ, ಅದಕ್ಕೆ ಇಂಗಾದ್ರೂ ಸತ್ತರೆ ಬರೋ ಕಾಸಿಂದ ನನ್ನ ಮಗುಗೆ ಸ್ವಲ್ಪ ಉಪಯೋಗ ಆಯ್ತದೇನೋ ಅಂತ” ಎಂದರು. ಹೆಚ್ಚೇನೂ ಹೇಳಲು ಮಾತು ಬಾರದೇ ಸುಮ್ಮನಾದೆ. ಇದು ತಮಾಶೆನೋ ಅತವ ವಿಚಿತ್ರವೋ? ಸಾವಿನ ಬಗ್ಗೆ ಹೀಗೂ ಯೋಚಿಸುತ್ತಾರಾ?
ನಮ್ಮ ಮಂಡ್ಯದ ಸುತ್ತಮುತ್ತ ಹಲವಾರು ರೈತರು ಮತ್ತು ಅವರ ಕುಟುಂಬದವರು ಸಾಲ ತೀರಿಸಲು ಆಗದೆ ನಾವು ತೀರಿಕೊಂಡರೆ ಸರಕಾರದಿಂದ ಏನಾದ್ರೂ ಪರಿಹಾರ ಸಿಗುತ್ತೇನೋ ಎಂದು ತಿಳಿದು ತೀರಿಕೊಂಡದ್ದು ಬೇಸರದ ಸಂಗತಿ. ಸರಕಾರದಿಂದ ಪರಿಹಾರ ಸಿಗಲು ಶುರುವಾದ ಮೇಲೇ ಸುದ್ದಿ ಹಬ್ಬಿ, ಹಳ್ಳಿಯಿಂದ ಬಂದ ಉಳುಮೆ ಮಾಡದ ಜನರು ಪರಿಹಾರ ಸಿಗುತ್ತೆ ಎಂಬ ಕಾರಣಕ್ಕೆ ‘ರೈತರು’ ಎಂದು ಹೇಳಿಕೊಂಡು ಸತ್ತಾಗ ಎಂತೆಂತ ವಿಚಿತ್ರವನ್ನ ಸಾವು ತೋರಿಸುತ್ತದೆ ಎಂದುಕೊಂಡೆ. ಹಲವಾರು ನೋವುಗಳು ಒಳಗೆ ಇದ್ದರೂ ಎಂದು ತೋರಿಕೊಳ್ಳದ ಸ್ನೇಹಿತನೂ, ತನ್ನ ಪ್ರಾಣ ಉಳಿಸಿದ ನಾಯಿಯು ಸತ್ತಾಗ ಅದನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತನು. ಅಂದು ಸಾವು ನನ್ನ ಗೆಳೆಯನ ಇನ್ನೊಂದು ಮುಕವನ್ನ ತೋರಿಸಿತು. ಮೈಸೂರಿನಿಂದ ಒಮ್ಮೆ ಬಸ್ಸಿನಲ್ಲಿ ಬರುತ್ತಿದ್ದಾಗ ರಸ್ತೆಯ ಮೇಲೆ ಚಿಕ್ಕ ಕುದುರೆಯೊಂದು ಸತ್ತು ಬಿದ್ದಿತ್ತು. ಅಕ್ಕ ಪಕ್ಕದಲ್ಲಿದ್ದ ಚಿಕ್ಕ ಕುದುರೆಗಳು ಸತ್ತ ಕುದುರೆಯ ಸುತ್ತ ಅಳುವಂತೆ ನಿಂತಿದ್ದವು. ಬಸ್ಸಿನ ಕಿಟಕಿಯಲ್ಲಿ ಇದನ್ನ ನೋಡಿದಾಗ ಸಾವು ಮಂದಿಗೆ ಮಾತ್ರ ನೋವುಂಟು ಮಾಡೋದಿಲ್ಲ, ಪ್ರಾಣಿಗಳಿಗೂ ಸಹ ನೋವುಂಟು ಮಾಡುತ್ತದೆ ಎಂದು ನನಗೆ ತೋರಿಸಿತು. ತನ್ನ ತಂಗಿಯ ಮದುವೆ ಮುಗಿಸಿದ ರಾತ್ರಿಯೇ ರಸ್ತೆ ಅವಗಡದಲ್ಲಿ ಸತ್ತು ಮಲಗಿದ್ದ ಸ್ನೇಹಿತನನ್ನು ನೋಡಿದಾಗ ಸಾವು ಬಹಳ ಕೆಟ್ಟದ್ದು ಮತ್ತು ಕಟು ಎಂದೆನಿಸಿತು. ಈ ಎಲ್ಲ ಸಾವಿನ ಸಂಗತಿಗಳೊಡನೆ ನನಗೆ ಅತ್ಯಂತ ಹೆಚ್ಚಾಗಿ ನೆನಪಿಗೆ ಬರುವ ಸಾವು ತೋರಿದ ಎರಡು ಮುಕಗಳನ್ನ ನಿಮಗೆ ವಿವರವಾಗಿ ಹೇಳುತ್ತೇನೆ.
ಗಟನೆ 1: ನಮ್ಮ ಊರಿನಲ್ಲಿ ಒಬ್ಬರ ಸಾವಿಗೆ ಹೋಗಿದ್ದೆ. ನಂಟಸ್ತಿಕೆಯಲ್ಲಿ ನನಗೆ ಅವರು ಅಜ್ಜಿಯೇ ಆಗಬೇಕು. ಹೆಣ ಹೊರಲು ಮಾಡಿದ ಚಟ್ಟದಲ್ಲಿ ಅಜ್ಜಿಯ ಹೆಣವನ್ನ ಕೂರಿಸಿ, ಎಲ್ಲೂ ಬೀಳದಂತೆ ಹೆಣವನ್ನು ಬಿಗಿಯಾಗಿ ಸುತ್ತಲಿ ದಾರದಲ್ಲಿ ಕಟ್ಟಿ, ಹೂವು ಮತ್ತು ಚಿನ್ನದ ಒಡವೆಯಿಂದ ಕೊನೆಯ ಬಾರಿಗೆ ಚೆನ್ನಾಗಿ ಸಿಂಗಾರ ಮಾಡಿ ಊರಿನಲ್ಲೆಲ್ಲ ಮೆರವಣಿಗೆ ಮಾಡಿದ ನಂತರ ಮರದ ಕಟ್ಟಿಗೆ ಮೇಲೆ ಇರಿಸಿದ್ದರು. ಊರಿನ ಕಟ್ಟಳೆಯನ್ನು ತಿಳಿದ ಮಂದಿಯೊಬ್ಬರು ಹೀಗೆ ಮಾಡಿ ಹಾಗೆ ಮಾಡಿ ಎಂದು ಅಕ್ಕ ಪಕ್ಕದವರಿಗೆ ಸಲಹೆ ಕೊಡುತ್ತಿದ್ದರು. ಅವರನ್ನ ಅನೇಕ ಸಲ ಹಲವಾರು ಕಾರ‍್ಯದಲ್ಲಿ ನಾನು ನೋಡಿದ್ದೇ ಸಹ. ನಂತರ ಅವರೇ ಹೆಣದ ಮುಂದೆ ಬಂದು ಬಿಗಿಯಾಗಿ ಕಟ್ಟಿದ್ದ ಸುತ್ತಲಿಯನ್ನ ಕುಡಲಿನಿಂದ ಕುಯ್ದು ತೆಗೆದು, ಅಜ್ಜಿಗೆ ಹಾಕಿದ ಒಡವೆಯನ್ನ ತೆಗೆದು ಕೈಯಲ್ಲಿಡಿದುಕೊಂಡು ಸುತ್ತಲು ಇರುವ ಜನರಿಗೆ ಕೇಳುವಂತೆ ಜೋರಾಗಿ “ನೋಡ್ರವ್ವ, ನೀವು ಹೋಗ್ತಾ ಏನೂ ಎತ್ಕೊಂಡು ಹೋಗಾದಿಲ್ಲ.. ಎಲ್ಲಾ ಬಿಟ್ತೊಯ್ತೀರಿ… ಏನಕ್ಕೆ ಬಡಿದಾಡ್ಕೊಂಡು ಸಾಯ್ತೀರೋ ನಾ ಕಾಣೆ. ತಗಳಿ ಒಡವೆಯಾ…“ ಎಂದು ಹೇಳಿದರು. ಒಂದು ನಿಮಿಶ ಎಲ್ಲ ಸದ್ದು ನಿಂತೋಗಿ ಅವರ ಮಾತನ್ನ ಅರ‍್ತ ಮಾಡಿಕೊಳ್ಳುವತ್ತ ಸುತ್ತಲಿದ್ದ ಮಂದಿಯ ಮನಸ್ಸು ತಿರುಗಿತ್ತು.
ಗಟನೆ 2: ನನ್ನ ಸ್ನೇಹಿತನ ಅಜ್ಜಿಯು ತೀರಿಕೊಂಡಿದ್ದ ಕಾರಣ ಇನ್ನೊಬ್ಬ ಸ್ನೇಹಿತನ ಜೊತೆ ನಾನು ಅವನ ಊರಿಗೆ ಹೋಗಿದ್ದೆ. ಹೆಣಕ್ಕೆ ಸ್ನಾನ ಮಾಡಿಸಲು ಒಂದು ಕಡೆ ನೀರು ಕಾಯಿಸುತ್ತಿದ್ದರೆ ಇನ್ನೊಂದು ಕಡೆ ಬಿದಿರಿನ ಚಟ್ಟ ತಯಾರು ಮಾಡುತ್ತಿದ್ದರು ಮತ್ತು ಇನ್ನಿತರ ಏರ‍್ಪಾಟುಗಳು ನಡೆಯುತ್ತಿತ್ತು. ಅಜ್ಜಿಯ ಸಂಬಂದಿಕರೆಲ್ಲ ಸುತ್ತಲು ಕುಳಿತು ಅಳುತ್ತಿದ್ದರು. ಇದರ ನಡುವೆ ಹೆಣದ ಪಕ್ಕ ಸಣ್ಣನೆಯ ಮೈಕಟ್ಟಿನ, ಮಾಸಿದ ಸೀರೆ ಉಟ್ಟ, ಕೋಲು ಮುಕದ, ಚೂಪಾದ ಮೂಗಿನ, ಸುಕ್ಕು ಕಟ್ಟಿದ ತೊಗಲಿನ ಅಜ್ಜಿಯೊಬ್ಬರು ಸುತ್ತಲು ನೆಡೆಯುತ್ತಿದ್ದ ಏರ‍್ಪಾಟುಗಳನ್ನು ನೋಡುತ್ತಿದ್ದರು. ಅವರ ಹೆಸರು ತಿಳಿಯಲು ಆಗಲಿಲ್ಲ, ಆದ್ದರಿಂದ ಅವರನ್ನು ‘ಸಣ್ಣಜ್ಜಿ’ ಎಂದು ಕರೆಯುವೆ. ಸಣ್ಣಜ್ಜಿ ಬೇರೆಯವರು ಸರಿಯಾಗಿ ಕೆಲಸ ಮಾಡದಿದ್ದಾಗ ರೇಗುತ್ತ ತಾವೇ ಆ ಕೆಲಸ ಹೇಗೆ ಮಾಡಬೇಕೆಂದು ಮಾಡಿ ತೋರಿಸುತ್ತಿದ್ದರು. ಎಲ್ಲ ಕಡೆ ಓಡಾಡುತ್ತ, ಬರುವ ಜನರನ್ನು ಸಂಬಾಳಿಸುತ್ತಿದ್ದರು. ನಂತರ ಅಜ್ಜಿಯ ಹೆಣಕ್ಕೆ ಸ್ನಾನ ಮಾಡಿಸಿ, ಸಿಂಗಾರ ಮಾಡಿ ಚಟ್ಟದ ಮೇಲೆ ಇರಿಸಲಾಯಿತು. ಎಲ್ಲವೂ ಸರಿಯಿದೆಯೇ ಎಂದು ಗಮನಿಸಿದ ಸಣ್ಣಜ್ಜಿ, ಹೆಣದ ಹಿಂದೆ ನೆಡೆದು ಬರುತ್ತಿದ್ದರು.
ನಾನು, ನನ್ನ ಸ್ನೇಹಿತರು ಮತ್ತು ಊರಿನವರು ಎಲ್ಲರು ಹೆಣವನ್ನ ಹೊತ್ತೊಯ್ಯುತ್ತ ಸಾಗಿದೆವು. ಊರ ದೇವರ ಮುಂದೆ ನಾಲ್ಕು ಸುತ್ತು ಸುತ್ತಿ ಮುಂದೆ ಸಾಗುತ್ತಿದ್ದಾಗ, ಸಣ್ಣಜ್ಜಿ ಬಂದು “ನಾನು ಇಡ್ಕೋತೀನಿ” ಎಂದು ಚಟ್ಟದ ಮುಂದಿನ ಬದಿಯಲ್ಲಿದ್ದ ಮಂದಿಯೊಬ್ಬರನ್ನು ಕೇಳಿದರು. ಬೆರಗಿನಿಂದ ಆತ ಪಕ್ಕದಲ್ಲಿದ್ದ ಊರಿನವರೊಬ್ಬರನ್ನು “ಕೊಡ್ಲ?” ಎಂದು ಕೇಳಿದರು. ಅದಕ್ಕವರು, “ಕೊಡು ಕೊಡು… ಬೇರೆಯವರಿಗೂ ಇಡಿದವ್ಲೇ ಕಣಾ, ಕೊಡು. ಇಡಿತಾಳೆ.” ಎಂದರು. ಅಲ್ಲಿಯ ತನಕ ಯಾವೊಬ್ಬ ಹೆಂಗಸು ಚಟ್ಟ ಹೊತ್ತಿದ್ದನ್ನ ನೋಡಿರದಿದ್ದ ನಾನು ಅಂದು ನೋಡಿದೆ. ಸುಮಾರು ದೂರ ಹಿಡಿದು ನಡೆದ ಸಣ್ಣಜ್ಜಿ ನಂತರ ಬೇರೆಯವರಿಗೆ ಕೊಟ್ಟರು. ಹೆಣವನ್ನು ಮಣ್ಣು ಮಾಡುವ ತನಕ ಓಡಾಡಿ ನೆಂಟರಿಗೆ ಮುಂದಿನ ಕಾರ‍್ಯ ಮಾಡಲು ಹೇಳಿ ದೂರದಲ್ಲಿ ಸಣ್ಣಜ್ಜಿ ನಿಂತರು. ಮೊದಮೊದಲು ಇದ್ಯಾಕೆ ಸಣ್ಣಜ್ಜಿ ಹೀಗೆ ಕೋಪ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ನಾನು ಅಂದುಕೊಂಡ್ಡಿದ್ದೆ. ನಂತರ ಎಶ್ಟು ಜನ ಈ ಸಣ್ಣಜ್ಜಿಯ ರೀತಿ ಮಾನವೀಯತೆ ಮೆರೆಯುವ ಜನರಿದ್ದಾರೆ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತು. ಹೆಣವನ್ನ ಮಟ್ಟಸಿಕೊಂಡರೆ ಮೈಲಿಗೆ ಎಂದು ದೂರ ಉಳಿಯುವ, ಸಾವಿನಲ್ಲಿ ನೆರವಿಗೆ ಬಾರದ ಮಂದಿಯ, ತಿತಿಯಲ್ಲಿ ಊಟ ಮಾಡಬಾರದು ಎಂದು ಮೌಡ್ಯ ಬಿತ್ತುವ ಜನರ ಮದ್ಯೆ ಸಣ್ಣಜ್ಜಿ ತುಂಬಾ ದೊಡ್ಡವರು ಎನಿಸಿದರು.
ಹೀಗೆ ಸಾವು ನನ್ನ ಜೀವನದಲ್ಲಿ ಆಗಾಗ ಎಚ್ಚರಿಸುತ್ತ, ಏಳಿಸುತ್ತ-ಬೀಳಿಸುತ್ತ, ಸುಳ್ಳು-ದಿಟಗಳನ್ನ ತೋರಿಸುತ್ತ, ಅಚ್ಚರಿಯ ಅನುಬವಗಳನ್ನು ಕೊಡುತ್ತ, ಹೊಸ ಹೊಸ ಮುಕಗಳನ್ನು ತೋರಿಸುತ್ತ ಸಾಗಿದೆ.
(ಚಿತ್ರ ಸೆಲೆ: unsplash.com, lifemattersmedia.org, ndtv)
ಇತ್ತೀಚಿನ ಅನಿಸಿಕೆಗಳು