ಸಣ್ಣಕತೆ: ಟೀ ಅಂಗಡಿ ಕಾಕಾ…
ವಿದ್ಯಾಬ್ಯಾಸಕ್ಕೆಂದು ನಗರಕ್ಕೆ ಬಂದ ಕಾಲೇಜು ವಿದ್ಯಾರ‍್ತಿಗಳ ಗುಂಪೊಂದು, ಕಾಕಾನ ಟೀ ಅಂಗಡಿಯನ್ನು ತಮ್ಮ ಕಾಯಂ ಅಡ್ಡವನ್ನಾಗಿ ಮಾಡಿಕೊಂಡಿತ್ತು. ಕಾಕಾನ ಹೆಂಡತಿ ಕೈಯ ಗರಂ ಗರಂ ರುಚಿಯಾದ ಬಜ್ಜಿ ಮತ್ತು ಕಾಕಾನ ಕೈಯ ಮಸಾಲಾ ಚಾಯ್ ಎಂದರೆ ಈ ಹುಡುಗರಿಗೆ ಪಂಚಪ್ರಾಣ. ಸಂಜೆಯಾಗುತ್ತಲೇ ಈ ಗೆಳೆಯರ ಬಳಗ ಇಲ್ಲಿ ಹಾಜರ್ ಇರುತ್ತಿತ್ತು, ಸ್ನೇಹಿತರು ಅವರಿಬ್ಬರನ್ನು ಆತ್ಮೀಯತೆಯಿಂದ ಕಾಕಾ, ಕಾಕಿ ಎಂದು ಕರೆಯುತ್ತಿದ್ದರು. ಅವರ ಆತ್ಮೀಯತೆ ಎಶ್ಟಿತ್ತೆಂದರೆ ಈ ಸ್ನೇಹಿತರ ಬಳಗ ಕೆಲವೊಮ್ಮೆ ದುಡ್ಡು ಕೊಡದೆ ಪರಾರಿಯಾಗಲು ಯತ್ನಿಸುತ್ತಿದ್ದರೂ ಕಾಕಾ ಕೋಪಗೊಳ್ಳದೆ ನಸುನಗುತ್ತಿದ್ದನು, ಕಾಕಿಯ ಒಂದೆರೆಡೇಟು ಎಲ್ಲರ ತಲೆ ಮೇಲೆ ಬೀಳುತ್ತಿದ್ದವು.
ಈ ಟೀ ಅಂಗಡಿ ಕಾಕಾಗೆ ಇವರಂತ ಒಬ್ಬ ಮಗನಿದ್ದ, ಕಾಕಾ ಯಾವಾಗಲು ತನ್ನ ಮಗನನ್ನು ಚೆನ್ನಾಗಿ ಓದಿಸಿ ಇಂಜಿನಿಯರ್ ಮಾಡಿಸುವೆನು ಎಂದು ಬಹಳ ಆಸೆಯಿಂದ ಹೇಳಿಕೊಳ್ಳುತ್ತಿದ್ದ. ತನ್ನ ಮಗನನ್ನು ಉತ್ತಮ ಹುದ್ದೆಯಲ್ಲಿ ನೋಡುವ ಮಹದಾಸೆ ಇತ್ತು ಅವನಿಗೆ. ಅದೇನೇ ಕಶ್ಟ ಬಂದರೂ ಮಗ ಚೆನ್ನಾಗಿ ಓದಲೆಂದು ಕೇಳಿದ್ದೆಲ್ಲವನ್ನೂ ಕೊಡಿಸುತ್ತಿದ್ದ. 2 ವರ‍್ಶವಾಯಿತು, ಸ್ನೇಹಿತರ ವಿದ್ಯಾಬ್ಯಾಸ ಪೂರ‍್ಣಗೊಂಡಿತ್ತು, ಈಗ ಎಲ್ಲ ಸ್ನೇಹಿತರು ತಮ್ಮ ಊರುಗಳಿಗೆ ವಾಪಸ್ಸಾಗುವ ಸಮಯ, ಈ 2 ವರ‍್ಶದಲ್ಲಿ ಟೀ ಅಂಗಡಿ ಕಾಕಾ ಕಾಕೀ ಜೊತೆ ಈ ಸ್ನೇಹಿತರ ಸಂಬಂದ ಅತಿ ಗಾಡವಾಗಿ ಬೆಳೆದಿತ್ತು. ಕೊನೆಯ ಬಾರಿಗೆ ಎಲ್ಲ ಸೇರಿ ಟೀ ಅಂಗಡಿಗೆ ಹೋಗಿ ಅವರನ್ನು ಆತ್ಮೀಯವಾಗಿ ಆಲಂಗಿಸಿ ದನ್ಯವಾದ ಹೇಳಿ ವಿದಾಯ ಹೇಳುವಶ್ಟರಲ್ಲಿ ಯಾರ ಕಣ್ಣಲ್ಲೂ ನೀರು ನಿಂತಿರಲಿಲ್ಲ… ಎಲ್ಲರ ಎದೆ ಬಾರವಾಗಿತ್ತು.
10 ವರ‍್ಶಗಳ ನಂತರ ಇದೇ ಸ್ನೇಹಿತರು ಮಾತಾಡಿಕೊಂಡು ತಮ್ಮ ಕಾಲೇಜಿನ ಬಳಿ ಸೇರಿದರು. ಕುಶಿಯಂದ ಸಂಬ್ರಮಿಸಿದರು. ಎಲ್ಲರು ಗೌರವಯುತ ಹುದ್ದೆಗಳನ್ನು ಪಡೆದಿದ್ದರು. ಮಾತು ಮಾತಿನಲ್ಲಿ ಅವರಿಗೆ ನೆನಪಾಗಿದ್ದು ಕಾಕಾನ ಟೀ ಅಂಗಡಿ, ಕೂಡಲೇ ತಮ್ಮ ಅಡ್ಡದ ಬಳಿ ಹೋದರೆ ಅಲ್ಲಿ ಯಾವ ಕಾಕಾನ ಟೀ ಅಂಗಡಿಯೂ ಇರಲಿಲ್ಲ, ದೊಡ್ಡ ದೊಡ್ಡ ಮಾಲ್, ರೆಸ್ಟೋರೆಂಟ್‍ಗಳು ತಲೆ ಎತ್ತಿದ್ದವು. ಹಂಗೊ ಹಿಂಗೋ ಅವರಿವರನ್ನು ಕೇಳಿ ಕಶ್ಟಪಟ್ಟು ಕಾಕಾನ ಮನೆ ಹುಡುಕಿದರು.
ಕಾಕಾನಿಗೆ ವಯಸ್ಸಾಗಿ, ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ, ಕಾಕಿ ತೀರಿಕೊಂಡು ವರ‍್ಶವಾಗಿತ್ತು. ಕಣ್ಣು ಮಸಕಾಗಿದ್ದ ಕಾರಣ ಇವರನ್ನೆಲ್ಲ ಕಶ್ಟಪಟ್ಟು ಗುರತು ಹಿಡಿದ ಕಾಕಾ. ಇವರನ್ನೆಲ್ಲ ನೋಡಿ ಅವನ ಕಣ್ಣಲ್ಲಿ ಆನಂದ ಬಾಶ್ಪ ಉರುಳಿದವು. ಅವನ ಮಗನ ಬಗ್ಗೆ ವಿಚಾರಿಸಿದಾಗ, ಅವನು ಹೆಂಡತಿಯೊಡನೆ ವಿದೇಶದಲ್ಲಿದ್ದಾನೆಂದು ತಿಳಿಯಿತು. ಕಾಕಾನ ಆರೋಗ್ಯ ತೀರ ಹದಗೆಟ್ಟಿತ್ತು, ಸ್ನೇಹಿತರೆಲ್ಲ ಸೇರಿ ಆಸ್ಪತ್ರೆಗೆ ಒಯ್ದರು. ಕಾಕಾ ಅವರೆನ್ನೆಲ್ಲ ಸಂತೋಶದಿಂದ ನೋಡುತ್ತ, ಕಣ್ಣೀರಿಡುತ್ತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ!
(ಚಿತ್ರ ಸೆಲೆ: wiki)
ವಾವ್ ಚನಾಗಿದೆ ಸರ್…..
heart touching story
thanq u sir
simply nice one
This story was spr ☺
thank u sir
Heart touching story Pinki..
thank u for your reply friends