ಬಾಹೂರ ಬೊಮ್ಮಣ್ಣನ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಬಾಹೂರ ಬೊಮ್ಮಣ್ಣ

ಕಾಲ: ಕ್ರಿ.ಶ.1200

ಊರು: ಬಾಹೂರು, ಮುದ್ದೆಬಿಹಾಳ ತಾಲ್ಲೂಕು, ಬಿಜಾಪುರ ಜಿಲ್ಲೆ.

ಕಸುಬು: ತೋಟದ ಬೆಳೆಗಾರ/ತೋಟಗಾರಿಕೆ

ದೊರೆತಿರುವ ವಚನಗಳು: 41

ವಚನಗಳ ಅಂಕಿತನಾಮ: ಬ್ರಹ್ಮೇಶ್ವರ ಲಿಂಗ

========================================================================

ಸದ್ಭಕ್ತಿಯಿಲ್ಲದ ವಿಶ್ವಾಸಹೀನನು
ವಾಚಾರಚನೆಗಳಿಂದ ಮಾತಿನ ಮಾಲೆಯ
ಎಷ್ಟು ನುಡಿದಡೇನು
ಹೆಂಡದಂತೆ
ಮೃತಘಟದಂತೆ
ಶಿಥಿಲಫಳದಂತೆ
ಅದಾರಿಗೆ ಯೋಗ್ಯ
ಸಂಗನ ಬಸವಣ್ಣ ಸಾಕ್ಷಿಯಾಗಿ
ಬ್ರಹ್ಮೇಶ್ವರಲಿಂಗವು ಅವರಲ್ಲಿ ನಿಲ್ಲನಾಗಿ

ಒಳ್ಳೆಯ ನಡತೆಯಿಲ್ಲದ ವ್ಯಕ್ತಿಯು ಆಡುವ ಸೊಗಸಾದ/ಇಂಪಾದ/ಆದರ‍್ಶದ/ಮನಮೋಹಕವಾದ ಮಾತುಗಳಿಂದ ಸಹಮಾನವರಿಗೆ/ಸಮಾಜಕ್ಕೆ ಏನೊಂದು ಬಗೆಯ/ಯಾವುದೇ ರೀತಿಯ ಪ್ರಯೋಜನವಿಲ್ಲ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ಸದ್ಭಕ್ತಿ+ಇಲ್ಲದ; ಸದ್ಭಕ್ತಿ=ದೇವರನ್ನು ಪೂಜಿಸಲು/ಒಲಿಸಿಕೊಳ್ಳಲು ವ್ಯಕ್ತಿಯು ಹೊಂದಿರಬೇಕಾದ ಒಳ್ಳೆಯ ನಡೆನುಡಿ; ವಿಶ್ವಾಸ=ನಂಬಿಕೆ/ನಚ್ಚಿಕೆ/ಒಲವು; ಹೀನ=ಕೆಟ್ಟದ್ದು/ಕಳಪೆಯಾದುದು/ಕೀಳಾದುದು; ವಿಶ್ವಾಸಹೀನ=ನಂಬಿಕೆಗೆ ಯೋಗ್ಯನಲ್ಲದ ವ್ಯಕ್ತಿ/ತನ್ನನ್ನು ಒಲಿದವರಿಗೆ ವಂಚನೆಯನ್ನು/ಕೇಡನ್ನು ಬಗೆಯುವ ವ್ಯಕ್ತಿ; ಸದ್ಭಕ್ತಿಯಿಲ್ಲದ ವಿಶ್ವಾಸಹೀನ=ಒಳ್ಳೆಯ ನಡೆನುಡಿಗಳಿಲ್ಲದ ನಂಬಿಕೆದ್ರೋಹಿ/ವಂಚಕ/ಕೇಡಿ;

ವಾಚಾ+ರಚನೆ+ಗಳ್+ಇಂದ; ವಚಿಸು=ಹೇಳು/ನುಡಿ/ವಿವರಿಸು/ವರ‍್ಣಿಸು; ವಾಚಾ=ನುಡಿಗಳ ರೂಪದಲ್ಲಿ ವಚಿಸಿರುವುದು/ಮಾತುಗಳಲ್ಲಿ ಹೇಳಿರುವುದು; ರಚನೆ=ಕಟ್ಟುವಿಕೆ/ನಿರ‍್ಮಿಸುವಿಕೆ/ಬರೆಯುವಿಕೆ; ವಾಚಾರಚನೆ=ಮಾನವನ ಮನಸ್ಸಿಗೆ ಅರಿವು ಮತ್ತು ಆನಂದವನ್ನು ನುಡಿರೂಪದಲ್ಲಿ ನೀಡಲೆಂದು ರಚನೆಗೊಂಡಿರುವ ಕಾವ್ಯ/ನಾಟಕ/ಗದ್ಯ/ಪದ್ಯ/ಶಾಸ್ತ್ರ ಮುಂತಾದ ಹೊತ್ತಿಗೆಗಳು; ಮಾತು=ನುಡಿ/ಸೊಲ್ಲು/ಉಕ್ತಿ/ಹೇಳಿಕೆ; ಮಾಲೆ=ಸಾಲು/ಪಂಕ್ತಿ/ಸರ; ಮಾತಿನ ಮಾಲೆ=ಒಂದೇ ಸಮನೆ ಮಾತನಾಡುತ್ತಿರುವುದು/ಕೇವಲ ಮಾತುಗಾರಿಕೆಯಲ್ಲೇ ತೊಡಗಿರುವುದು; ಎಷ್ಟು=ಯಾವ ಪ್ರಮಾಣದಲ್ಲಿ/ಯಾವ ಸಂಕೆಯಲ್ಲಿ; ನುಡಿದಡೆ+ಏನು; ನುಡಿ=ಹೇಳು/ಮಾತಾಡು; ನುಡಿದಡೆ=ಮಾತನಾಡಿದರೆ/ಹೇಳಿದರೆ; ಏನು=ಯಾವುದು/ಯಾವ ಪ್ರಯೋಜನ;

ಸದ್ಭಕ್ತಿಯಿಲ್ಲದ ವಿಶ್ವಾಸಹೀನನು ವಾಚಾರಚನೆಗಳಿಂದ ಮಾತಿನ ಮಾಲೆಯ ಎಷ್ಟು ನುಡಿದಡೇನು=ನಿತ್ಯ ಜೀವನದ ವ್ಯವಹಾರಗಳಲ್ಲಿ ಜನರಿಗೆ ಕೇಡನ್ನು ಬಗೆಯುತ್ತಿರುವ ವ್ಯಕ್ತಿಯು ಕವಿಗಳು/ನೀತಿವಂತರು ತಮ್ಮ ಹೊತ್ತಿಗೆಗಳಲ್ಲಿ ಹೇಳಿರುವ ನುಡಿಗಳನ್ನು ಚೆನ್ನಾಗಿ ಕಲಿತುಕೊಂಡು/ಕರಗತಮಾಡಿಕೊಂಡು, ಸತ್ಯ/ನೀತಿ/ನ್ಯಾಯದ ಸಂಗತಿಗಳಿಂದ ಕೂಡಿದ ಆದರ‍್ಶದ ಪ್ರಸಂಗಗಳನ್ನು/ಸಂಗತಿಗಳನ್ನು ಕೇಳುಗರ ಮನಸೆಳೆಯುವಂತೆ ಬಣ್ಣಿಸುವುದರಿಂದ/ಆಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ ಹೇಳುತ್ತಿರುವ ವ್ಯಕ್ತಿಯು ತನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳದಿರುವ ಆದರ‍್ಶದ ಮಾತು/ನುಡಿಯು ಜನರನ್ನು ವಂಚಿಸುವ/ಮೋಸಗೊಳಿಸುವ ಒಂದು ಹತಾರವಾಗಿ/ಉಪಕರಣವಾಗಿ ಮಾತ್ರ ಬಳಕೆಯಾಗುತ್ತದೆ;

ಹೆಂಡದ+ಅಂತೆ; ಹೆಂಡ= ಮತ್ತು ಬರಿಸುವ ಪಾನೀಯ/ ಮಾದಕ ಪಾನೀಯ/ಅಮಲೇರಿಸುವ ಪಾನೀಯ; ಪಾನೀಯ=ಕುಡಿಯುವ ದ್ರವರೂಪದ ವಸ್ತು; ಅಂತೆ=ಹಾಗೆ/ಆ ರೀತಿ;

ಮೃತ+ಘಟದ+ಅಂತೆ; ಮೃತ=ಸಾವನ್ನಪ್ಪಿರುವ/ಜೀವವಿಲ್ಲದ/ಮರಣ ಹೊಂದಿದ; ಘಟ=ದೇಹ/ಶರೀರ/ಮಯ್; ಮೃತಘಟ=ಹೆಣ/ಶವ;

ಶಿಥಿಲ+ಫಳದ+ಅಂತೆ; ಶಿಥಿಲ=ಹಾಳಾದ/ಕೊಳೆತು ನಾರುತ್ತಿರುವ; ಫಳ/ಫಲ=ಹಣ್ಣು ; ಶಿಥಿಲಫಳ=ಹೆಚ್ಚು ಕಾಲ ಇಟ್ಟಿದ್ದರಿಂದ ಕೊಳೆತು ನಾರುತ್ತಿರುವ ಹಣ್ಣು; ಅದು+ಆರಿಗೆ; ಅದು=ಈ ರೀತಿ ಹಾಳು ಮಾಡುವ/ಜಡವಾಗಿರುವ/ಹಾಳಾಗಿರುವ ವಸ್ತು; ಆರು=ಯಾರು/ಯಾವ ವ್ಯಕ್ತಿ; ಆರಿಗೆ=ಯಾರಿಗೆ/ಯಾವ ವ್ಯಕ್ತಿಗೆ; ಯೋಗ್ಯ=ಹಿತವಾದುದು/ಸರಿಯಾದುದು/ತಕ್ಕುದಾದುದು;

ಹೆಂಡದಂತೆ ಮೃತಘಟದಂತೆ ಶಿಥಿಲಫಲದಂತೆ ಅದಾರಿಗೆ ಯೋಗ್ಯ=ಕುಡಿದಾಗ ಮತ್ತು ಬಂದು/ಅಮಲು ಏರಿ ವ್ಯಕ್ತಿಯು ತನ್ನ ಮಯ್ ಮನದ ಮೇಲಣ ಹಿಡಿತವನ್ನು ಕಳೆದುಕೊಂಡು ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುವುದಕ್ಕೆ ಕಾರಣವಾಗುವ ಹೆಂಡ; ಉಸಿರಿಲ್ಲದೆ ಚಲನವಲನಗಳನ್ನು ಕಳೆದುಕೊಂಡು ಬಿದ್ದಿರುವ ಹೆಣ; ಕೊಳೆತು ನಾರುತ್ತ ತಿನ್ನುವುದಕ್ಕೆ ಆಗದಿರುವ ಹಣ್ಣು – ಇವು ಹೇಗೆ ಯಾರೊಬ್ಬರಿಗೂ ಬೇಕಾಗಿಲ್ಲವೋ/ಅಗತ್ಯವಿಲ್ಲವೋ/ಹಿತವನ್ನುಂಟುಮಾಡುವುದಿಲ್ಲವೋ ಅಂತೆಯೇ ನಯವಂಚಕನಾದ/ನಂಬಿಕೆದ್ರೋಹಿಯಾದ/ಕೇಡಿಗತನವುಳ್ಳ ವ್ಯಕ್ತಿಯು ಆಡುವ ಆದರ‍್ಶದ ನುಡಿಗಳು ಸಹಮಾನವರಿಗಾಗಲಿ ಇಲ್ಲವೇ ಸಮಾಜಕ್ಕಾಗಲಿ ಬೇಕಾಗಿಲ್ಲ/ಅಗತ್ಯವಿಲ್ಲ. ಏಕೆಂದರೆ ಅಂತಹ ಮಾತುಗಳ ಹಿಂದೆ ಜನರಿಗೆ ಕೇಡನ್ನು ಬಗೆದು , ಆಸ್ತಿಪಾಸ್ತಿ/ಒಡವೆವಸ್ತು/ಹಣಕಾಸು/ಗದ್ದುಗೆಯನ್ನು ಪಡೆಯಬೇಕೆಂಬ ವಂಚನೆಯ/ಕಪಟದ/ಮೋಸದ/ಕುತಂತ್ರದ ಕೆಟ್ಟ ಉದ್ದೇಶವಿರುತ್ತದೆ:

ಸಂಗ=ಕೂಡಲಸಂಗಮದ ನೆಲೆಯಲ್ಲಿರುವ ಲಿಂಗದ ಹೆಸರು/ಶಿವ; ಸಂಗನ ಬಸವಣ್ಣ=ಕೂಡಲಸಂಗನ ನೆಲೆಯಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಂಡ ಶಿವಶರಣ ಬಸವಣ್ಣ; ಸಾಕ್ಷಿ+ಆಗಿ; ಸಾಕ್ಷಿ=ಕಂಡಿದ್ದನ್ನು ಕಂಡ ಹಾಗೆಯೇ ಹೇಳುವುದು; ಬ್ರಹ್ಮೇಶ್ವರಲಿಂಗ=ಶಿವ/ಈಶ್ವರ/ದೇವರ ಹೆಸರು/ಬಾಹೂರ ಬೊಮ್ಮಣ್ಣನ ವಚನಗಳ ಅಂಕಿತನಾಮ; ಅವರ್+ಅಲ್ಲಿ ; ಅವರು=ನಂಬಿಕೆದ್ರೋಹಿಗಳಾದವರು/ನಡೆನುಡಿ ಬೇರೆ ಬೇರೆಯಾಗಿರುವವರು/ಆಡುವುದೇ ಒಂದು ಮಾಡುವುದೇ ಮತ್ತೊಂದನ್ನು ಮಯ್ಗೂಡಿಸಿಕೊಂಡವರು/ಹವ್ಯಾಸವನ್ನಾಗಿಸಿಕೊಂಡವರು; ನಿಲ್ಲನ್+ಆಗಿ; ನಿಲ್ಲು=ನೆಲಸು/ತಂಗು/ಉಳಿದುಕೊಳ್ಳು;

ಸಂಗನ ಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವು ಅವರಲ್ಲಿ ನಿಲ್ಲನಾಗಿ=ಮಾತುಗಾರಿಕೆಯಿಂದ/ನಯವಂಚನೆಯ ನುಡಿಗಳಿಂದ ಜನರನ್ನು ಮರುಳುಗೊಳಿಸಿ ಕೇಡನ್ನು ಬಗೆಯುವ ವ್ಯಕ್ತಿಗಳನ್ನು ದೇವರು ಮೆಚ್ಚುವುದಿಲ್ಲ/ದೇವರು ಒಪ್ಪಿಕೊಳ್ಳುವುದಿಲ್ಲ ಎಂಬ ತಿರುಳನ್ನು ಈ ನುಡಿಗಳು ಸೂಚಿಸುತ್ತವೆ. ಏಕೆಂದರೆ ಶಿವಶರಣಶರಣೆಯರ ಪಾಲಿಗೆ ವ್ಯಕ್ತಿಯ ಒಳ್ಳೆಯ ನಡೆನುಡಿಗಳೇ ದೇವರಾಗಿದ್ದವು.)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: