ಶಿವಲೆಂಕ ಮಂಚಣ್ಣನ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಶಿವಲೆಂಕ ಮಂಚಣ್ಣ

ಕಾಲ: ಕ್ರಿ.ಶ.1160

ದೊರೆತಿರುವ ವಚನಗಳು: 132

ವಚನಗಳ ಅಂಕಿತನಾಮ: ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ

========================================================================

ಗುರು ವೈಭವಕ್ಕೆ ಸಿಕ್ಕಿದಾಗಲೆ
ಶಿಷ್ಯಂಗೆ ನರಕ ಪ್ರಾಪ್ತಿ
ಲಿಂಗ ಭಜನೆಗೆ ಸಿಕ್ಕಿದಾಗಲೆ
ಮರಣಕ್ಕೊಳಗು
ಜಂಗಮ ಜಂಗುಳಿಯಾಗಿ
ಕಂಡಕಂಡವರಂಗಳಕ್ಕೆ ಜಂಘೆಯನಿಕ್ಕಲಾಗಿ
ನಿರಂಗಕ್ಕೆ ಹೊರಗು
ಇಂತೀ ಇವರು ನಿಂದುದಕ್ಕೆ
ಬಂಧವಿಲ್ಲದಿರಬೇಕು
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.

ಯಾವುದನ್ನಾಗಲಿ ಆಡಂಬರದಿಂದ/ಬೂಟಾಟಿಕೆಯಿಂದ/ಡಂಬಾಚಾರದಿಂದ ಹೊತ್ತು ಮೆರೆಸುವುದಕ್ಕೆ ತೊಡಗಿದಾಗ, ಅದು ತನ್ನ ನಿಜಗುಣವನ್ನು ಕಳೆದುಕೊಳ್ಳುತ್ತದೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

‘ನಿಜಗುಣ’ ಎಂದರೆ ಯಾವುದೇ ಒಂದು ವಸ್ತು/ಜೀವಿ/ವ್ಯಕ್ತಿಯಲ್ಲಿ ವಾಸ್ತವವಾಗಿ ಇರುವ ರೂಪ/ಗುಣ.

( ಗುರು=ವಿದ್ಯೆಯನ್ನು ಕಲಿಸುವ/ಅರಿವನ್ನು ಮೂಡಿಸುವ/ಒಳ್ಳೆಯ ನಡೆನುಡಿಗಳನ್ನು ರೂಪಿಸುವ ವ್ಯಕ್ತಿ; ವೈಭವ=ಸಿರಿವಂತಿಕೆಯ ಪ್ರದರ‍್ಶನ/ಆಡಂಬರದಿಂದ ಮೆರೆಯುವುದು/ನೋಡುವವರ ಕಣ್ಮನಗಳನ್ನು ಸೆಳೆದು, ಅವರಲ್ಲಿ ಅಚ್ಚರಿಯನ್ನು ಮೂಡಿಸುವಂತೆ ತಮ್ಮ ಸಿರಿಸಂಪದವನ್ನು/ಕಸುವನ್ನು ಮೆರೆಸುವುದು; ಸಿಕ್ಕಿದ+ಆಗಲೆ; ಸಿಕ್ಕು=ಒಳಗಾಗು/ಈಡಾಗು/ಗುರಿಯಾಗು; ಆಗಲೆ=ಆ ಗಳಿಗೆಯಲ್ಲೇ/ಆ ಸಮಯದಲ್ಲೇ/ಅಂತಹ ಸನ್ನಿವೇಶದಲ್ಲಿಯೇ;

ಶಿಷ್ಯ=ವಿದ್ಯೆಯನ್ನು ಕಲಿಯುವವನು/ಅರಿವನ್ನು ಪಡೆಯುವ ಹಂಬಲವುಳ್ಳವನು/ಗುಡ್ಡ; ಶಿಷ್ಯಂಗೆ=ಗುಡ್ಡನಿಗೆ; ನರಕ=ಜನಮನದ ಕಲ್ಪನೆಯಲ್ಲಿ ರೂಪುಗೊಂಡಿರುವ ಜಾಗದ ಹೆಸರು. ನಮ್ಮ ಕಣ್ಣ ಮುಂದಿನ ಈ ಲೋಕದಲ್ಲಿ ಜನರಿಗೆ ಕೇಡನ್ನು ಬಗೆದು ಸಾವನ್ನಪ್ಪಿದ ವ್ಯಕ್ತಿಯು , ಅನಂತರ ತಾನು ಮಾಡಿದ ಪಾಪದ ಕೆಲಸಗಳಿಗೆ ತಕ್ಕಂತೆ ನಾನಾ ಬಗೆಯ ದಂಡನೆಗಳಿಗೆ ಗುರಿಯಾಗಿ ನರಳುವ ಮತ್ತೊಂದು ಲೋಕದ ಜಾಗ. ಜನರಿಗೆ ಕೇಡನ್ನು ಬಗೆದವರು ಸತ್ತ ನಂತರ ಸಂಕಟದ ನೆಲೆಯಾದ ನರಕಕ್ಕೆ, ಒಳಿತನ್ನು ಮಾಡಿದವರು ಆನಂದದ ನೆಲೆಯಾದ ಸ್ವರ‍್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯು ಜನಸಮುದಾಯದ ಮನದಲ್ಲಿದೆ;

ಪ್ರಾಪ್ತಿ=ಉಂಟಾಗುವುದು/ದೊರೆಯುವುದು/ತೋರುವುದು;

ಗುರು ವೈಭವಕ್ಕೆ ಸಿಲುಕಿದಾಗಲೆ ಶಿಷ್ಯಂಗೆ ನರಕ ಪ್ರಾಪ್ತಿ=ಗುಡ್ಡನಿಗೆ ತಿಳುವಳಿಕೆಯನ್ನು ಹೇಳಬೇಕಾದ ಗುರು, ತಾನು ಇತರರಿಗಿಂತ ದೊಡ್ಡವನು/ತಿಳಿದವನು/ಹೆಚ್ಚಿನವನು ಎಂಬ ಅಹಂಕಾರಕ್ಕೆ ಒಳಗಾಗಿ ತನ್ನತನವನ್ನು ಮೆರೆಯಲು ತೊಡಗಿದಾಗ, ಗುಡ್ಡನ ಬದುಕು ಬಹುಬಗೆಯ ಸಂಕಟ/ನೋವು/ಯಾತನೆಗೆ ಗುರಿಯಾಗುತ್ತದೆ. ಏಕೆಂದರೆ ಅಂತಹ ಸನ್ನಿವೇಶದಲ್ಲಿ ಗುರುವಾದವನು ಅರಿವು/ತಿಳುವಳಿಕೆ/ವಿನಯದ ನಡೆನುಡಿಗಳನ್ನು ಮರೆತು ಸಿರಿವಂತರ ಮತ್ತು ಸಾಮಾಜಿಕವಾಗಿ ಎತ್ತರದ ಗದ್ದುಗೆಯಲ್ಲಿರುವ ವ್ಯಕ್ತಿಗಳ ಹಿಂಬಾಲಕನಾಗುತ್ತಾನೆ/ಬೆನ್ನುಬೀಳುತ್ತಾನೆ. ಈ ರೀತಿ ಸಂಪತ್ತಿನ ಅಡಿಯಾಳಾದ ಮತ್ತು ಅಹಂಕಾರಿಯಾದ ಗುರುವಿನಿಂದ ಗುಡ್ಡನು ಒಳ್ಳೆಯ ನಡೆನುಡಿಗಳನ್ನು ಕಲಿಯಲಾಗದೆ/ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಾಗದೆ , ಸಂಕಟಕ್ಕೆ ಗುರಿಯಾಗಿ ನರಳತೊಡಗುತ್ತಾನೆ;

ಲಿಂಗ=ಶಿವ/ಶಿವನ ಸಂಕೇತವಾದ ವಿಗ್ರಹ/ದೇವರು; ಭಜನೆ=ವಾದ್ಯಗಳನ್ನು ನುಡಿಸುತ್ತ/ಚಪ್ಪಾಳೆಯನ್ನು ತಟ್ಟುತ್ತ ದೇವರ ಹೆಸರನ್ನು ಉಚ್ಚರಿಸುವುದು/ದೇವರ ಮಹಿಮೆಯನ್ನು ಬಣ್ಣಿಸುವುದು/ಹಾಡುವುದು; ಮರಣಕ್ಕೆ+ಒಳಗು; ಮರಣ=ಸಾವು/ಜೀವ ಹೋಗುವುದು; ಒಳಗು=ಸಿಲುಕುವುದು/ವಶವಾಗುವುದು; ಮರಣಕ್ಕೊಳಗು=ಇಲ್ಲವಾಗುವುದು;

ಲಿಂಗ ಭಜನೆಗೆ ಸಿಕ್ಕಿದಾಗಲೆ ಮರಣಕ್ಕೊಳಗು=ವ್ಯಕ್ತಿಯು ತನ್ನ ನಿಜ ಜೀವನದ ವ್ಯವಹಾರಗಳಲ್ಲಿ ಒಳ್ಳೆಯ ನಡೆನುಡಿಗಳನ್ನು ತೊರೆದು, ಲಿಂಗದ ಹೆಸರನ್ನು/ಮಹಿಮೆಯನ್ನು ಬಾಯಿಮಾತಿನಲ್ಲಿ ಕೊಂಡಾಡುವುದಕ್ಕೆ ತೊಡಗಿದಾಗ ದೇವರು ಅಂತಹ ವ್ಯಕ್ತಿಯ ಪಾಲಿಗೆ ತೋರಿಕೆಯ ವಸ್ತುವಾಗುತ್ತಾನೆ ಇಲ್ಲವೇ ಅವನ ಪಾಲಿಗೆ ಇಲ್ಲವಾಗುತ್ತಾನೆ. ಏಕೆಂದರೆ ಲಿಂಗಕ್ಕೆ ಮೆಚ್ಚುಗೆಯಾಗುವುದು ವ್ಯಕ್ತಿಯ ಒಳ್ಳೆಯ ನಡೆನುಡಿಗಳೇ ಹೊರತು ಯಾವುದೇ ಬಗೆಯ ಪೂಜೆ/ಆಚರಣೆಗಳಲ್ಲ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ;

ಜಂಗಮ=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳಲ್ಲಿ ಶಿವನನ್ನು ಕಾಣುವವನು/ಒಳ್ಳೆಯ ನಡೆನುಡಿಗೆ ಪ್ರೇರಣೆಯಾಗುವಂತಹ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಜನಮನದಲ್ಲಿ ಮೂಡಿಸುವವನು; ಜಂಗುಳಿ+ಆಗಿ; ಜಂಗುಳಿ=ಕೀಳು/ಹೀನ/ಕೆಟ್ಟ; ಜಂಗುಳಿಯಾಗಿ=ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಯಾಗಿ; ಕಂಡ+ಕಂಡವರ+ಅಂಗಳಕ್ಕೆ; ಕಾಣ್=ನೋಡು; ಕಂಡ=ಕಣ್ಣಿಗೆ ಕಾಣಿಸಿದ; ಕಂಡಕಂಡವರ=ಕಣ್ಣಿಗೆ ಕಂಡವರ/ಕಣ್ಣಿಗೆ ಬಿದ್ದವರ; ಅಂಗಳ=ಮನೆಯ ಮುಂದಿನ ಬಯಲು/ಮನೆಗೆ ಸೇರಿಕೊಂಡಂತೆ ಇರುವ ತೆರೆದ ಜಾಗ/ಆವರಣ;

ಜಂಘೆ+ಅನ್+ಇಕ್ಕಲಾಗಿ; ಜಂಘೆ=ಕಣಕಾಲು/ಮಂಡಿಚಿಪ್ಪಿನಿಂದ ಕೆಳಗೆ ಕಂಡುಬರುವ ಕಾಲು; ಅನ್=ಅನ್ನು; ಇಡು=ಇರಿಸು/ಹಾಕು/ಮಡಗು; ಇಕ್ಕಲಾಗಿ=ಇಡಲಾಗಿ/ಹಾಕಲಾಗಿ; ಜಂಘೆಯನಿಕ್ಕುವುದು=ತಂಗುವುದು/ಬಿಡಾರ ಹೂಡುವುದು/ಇಳಿದುಕೊಳ್ಳುವುದು ಎಂಬ ತಿರುಳಿನಲ್ಲಿ ಬಳಕೆಯಾಗಿರುವ ಒಂದು ನುಡಿಗಟ್ಟು; ನಿರಂಗ=ಮುಕ್ತಿ/ಬಿಡುಗಡೆ/ಮಯ್ ಮನದಲ್ಲಿ ಮೂಡುವ ಕೆಡುಕಿನ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡು, ಒಳ್ಳೆಯ ನಡೆನುಡಿಗಳಿಂದ ಬಾಳುವುದು; ಹೊರಗು=ದೂರವಿರುವುದು/ಹೊರಗಡೆ ಇರುವುದು; ನಿರಂಗಕ್ಕೆ ಹೊರಗು=ಒಳ್ಳೆಯತನದಿಂದ ದೂರವಾಗುವುದು/ಮಯ್ ಮನದ ಮೇಲಣ ಹತೋಟಿಯನ್ನು ಕಳೆದುಕೊಳ್ಳುವುದು;

ಜಂಗಮ ಜಂಗುಳಿಯಾಗಿ ಕಂಡಕಂಡವರಂಗಳಕ್ಕೆ ಜಂಘೆಯನಿಕ್ಕಲಾಗಿ ನಿರಂಗಕ್ಕೆ ಹೊರಗು=ಜನಮನದಲ್ಲಿ ಒಳಿತಿನ ನಡೆನುಡಿಗಳ ಬಗ್ಗೆ ತಿಳಿವನ್ನು ಮೂಡಿಸುತ್ತ, ಎಲ್ಲಿಯೂ ಒಂದೆಡೆ ನಿಲ್ಲದೆ, ಯಾವುದೇ ಬಗೆಯ ಕೆಟ್ಟ ಒಳಮಿಡಿತಗಳಿಗೆ ಒಳಗಾಗದೆ ನಿರಂತರವಾಗಿ ಸಂಚರಿಸುತ್ತಿರಬೇಕಾದ ಜಂಗಮನು , ತನ್ನ ಉದ್ದೇಶವನ್ನು ಮರೆತು ಊಟೋಪಾಚಾರಗಳ ಆಸೆಯಿಂದ/ಇನ್ನಿತರ ನಲಿವಿನ ಬಯಕೆಯಿಂದ ಉಳ್ಳವರ/ಸಿರಿವಂತರ ಮನೆಗಳಲ್ಲಿ ತಂಗುವುದಕ್ಕೆ/ಬಿಡಾರ ಹೂಡುವುದಕ್ಕೆ ತೊಡಗಿದರೆ, ಆಗ ತನ್ನ ಮಯ್ ಮನಗಳ ಮೇಲಣ ಹತೋಟಿಯನ್ನು ಕಳೆದುಕೊಂಡು ಕೆಟ್ಟ ಬಯಕೆಗಳಿಗೆ ಬಲಿಯಾಗುತ್ತಾನೆ/ಒಳ್ಳೆಯ ನಡೆನುಡಿಗಳಿಂದ ದೂರವಾಗುತ್ತಾನೆ;

ಇಂತು+ಈ; ಇಂತು=ಈ ರೀತಿಯಲ್ಲಿ/ಈ ಬಗೆಯಲ್ಲಿ; ಈ ಇವರು=ಈ ಮೂವರು/ 1) ಗುರು. 2) ಲಿಂಗವನ್ನು ಪೂಜಿಸುವವನು. 3) ಜಂಗಮ.; ನಿಲ್=ಉಳಿ/ತಂಗು/ಜೀವಿಸು/ಬದುಕು/ಇಳಿದುಕೊಳ್ಳು; ನಿಂದುದಕ್ಕೆ=ಬದುಕುವುದಕ್ಕೆ/ಜೀವಿಸುವುದಕ್ಕೆ; ಬಂಧ+ಇಲ್ಲದೆ+ಇರಬೇಕು; ಬಂಧ=ಕಟ್ಟು/ಪಾಶ/ಮೋಹ ; ಬಂಧವಿಲ್ಲದಿರಬೇಕು=ಕೆಟ್ಟ ನಡೆನುಡಿಗಳಿಗೆ ಒಳಗಾಗಬಾರದು;

ಮಲ್ಲಿಕಾರ್ಜುನಲಿಂಗ+ಅನ್+ಅರಿವುದಕ್ಕೆ; ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ=ಶಿವ/ಈಶ್ವರ/ಶಿವಲೆಂಕ ಮಂಚಣ್ಣನ ವಚನಗಳ ಅಂಕಿತನಾಮ; ಅರಿ=ತಿಳಿ/ಕಲಿ; ಅರಿವುದಕ್ಕೆ=ತಿಳಿದುಕೊಳ್ಳುವುದಕ್ಕೆ ;

ಇಂತೀ ಇವರು ನಿಂದುದಕ್ಕೆ ಬಂಧವಿಲ್ಲದಿರಬೇಕು ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ=ಒಳ್ಳೆಯ ನಡೆನುಡಿಗಳ ಸಂಕೇತವಾದ ಮಲ್ಲಿಕಾರ‍್ಜುನಲಿಂಗವನ್ನು ತಿಳಿಯಬೇಕಾದರೆ ಈ ಮೂವರು ಅಂದರೆ ಗುರುವಾದವನು/ಲಿಂಗದಲ್ಲಿ ಒಲವುಳ್ಳವನು/ಜಂಗಮನಾದವನು ತಮ್ಮ ಜೀವನದಲ್ಲಿ ಯಾವುದೇ ಬಗೆಯ ಅಹಂಕಾರದ ಪ್ರದರ‍್ಶನಕ್ಕೆ/ತೋರಿಕೆಯ ನಡೆನುಡಿಗಳಿಗೆ/ಕೆಟ್ಟ ಬಯಕೆಗಳಿಗೆ ಒಳಗಾಗಬಾರದು)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: