ಉದುರಿದ ನೆನಪುಗಳು
ನೆನಪುಗಳು ಮುದ ನೀಡುವಾಗ ಕಸಿವಿಸಿಯು
ನಿನ್ನನ್ನು ನೆನಪಿಸಿಕೊಳ್ಳುವಾಗ ಸಿಟ್ಟೂ ಆತಂಕವೂ
ನೋಡು ರಸ್ತೆಯ ಆಚೆ ಈಚೆ ಸಾಲುಸಾಲು ಮರಗಳು
ಚಳಿಗಾಲಕ್ಕೆ ಉದುರಿಬಿದ್ದ ಎಶ್ಟೋ ನೆನಪುಗಳು
ನಿನ್ನ ಮದುವೆಗೆ ನನ್ನನ್ನು ಕರೆದೆ, ಹೇಗೆ ಬರಲಿ?
ಚಳಿಗಾಲದಲ್ಲೂ ಬಿಸಿಲ ಜಳ ಬಡಿದಂತಾಯಿತು
ಎಲೆಗಳು ಉದುರಿದವು, ಬೇರುಗಳನ್ನೇನು ಮಾಡಲಿ?
ಎಲ್ಲವೂ ಹೆಪ್ಪುಗಟ್ಟಿದ ಹಾಗೆ ಅನಿಸುತಿದೆ
ಅವೇ ಎಲೆಗಳನ್ನು ನನ್ನ ಮುಂದೆ ಪೇರಿಸಿ
ಹತಾಶೆಯ ಕಿಚ್ಚಿನಿಂದ ಕಾಯಿಸಿಕೊಳ್ಳುತ್ತಿದ್ದೇನೆ
ನಿನ್ನ ಕುರಿತು ನಾನು ಬ್ರಮೆಗೊಂಡೆನು
ಕನಸಿನಲ್ಲಿ ಬರಲಿಲ್ಲ, ಯೋಚನೆಗಳಲ್ಲಿದ್ದೆ
ನಿನ್ನ ನೋಡುತ್ತ ಬೇಸರಗೊಳ್ಳುತ್ತಿದ್ದೆ
ನಿನ್ನ ಬಗ್ಗೆ ಯೋಚಿಸುತ್ತ ಸಂತಸಗೊಳ್ಳುತ್ತಿದ್ದೆ
ಉದುರಿದ ಎಲೆಗಳಿಂದ ತೋರಣ ಕಟ್ಟಿದ್ದೇನೆ
ಒಣಗಿದ ಗಿಡದ ಕೆಳಗೆ ನಿನ್ನ ಬೊಂಬೆಯನ್ನಿಟ್ಟು
ನನ್ನ ನಿನ್ನ ಬೇಟಿ ಎಂದೂ ಆಗಬಾರದಾಗಿತ್ತು
ನೀನಿಲ್ಲದ ಬದುಕನ್ನು ನಾನು ಊಹಿಸಬಲ್ಲೆ
ಆದರೆ ಅದರಲ್ಲಿ ನಿನ್ನನ್ನು ಇಡಬೇಕೆಂದಿದ್ದೆ
ಸದಾ ಹಸಿರಾಗಿರುವ ನನ್ನ ಮನಸಿನಲ್ಲಿ ನೀನು
ಅಲ್ಲಿಗೆ ಚಳಿಗಾಲವನ್ನೆಂದೂ ಬರಗೊಡುವುದಿಲ್ಲ
ಅಲ್ಲಿನ ಗಿಡಗಳಿಂದ ಎಲೆಗಳು ಉದುರುವದಿಲ್ಲ
ಅಲ್ಲಿನ ಹಾದಿಗಳಲ್ಲಿ ಯಾವಾಗಲೂ ಓಡಾಡುವೆವು
(ಚಿತ್ರ ಸೆಲೆ: pxhere.com)
ಇತ್ತೀಚಿನ ಅನಿಸಿಕೆಗಳು