ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 5ನೆಯ ಕಂತು

–  ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ನೋಡೂದ ನೋಡಲರಿಯದೆ
ಕೆಟ್ಟಿತ್ತೀ ಲೋಕವೆಲ್ಲ. (585-183)

( ನೋಡು=ಕಾಣು/ತಿಳಿ/ಅರಿ; ನೋಡೂದ=ನೋಡಬೇಕಾದುದನ್ನು/ತಿಳಿಯಬೇಕಾದುದನ್ನು; ನೋಡಲ್+ಅರಿಯದೆ; ಅರಿಯದೆ=ತಿಳಿಯದೆ;
ಕೆಟ್ಟು+ಇತ್ತು+ಈ; ಕೆಡು=ಅಳಿ/ನಾಶವಾಗು/ಇಲ್ಲವಾಗು/ಹಾಳಾಗು/ಹದಗೆಡು; ಕೆಟ್ಟಿತ್ತು=ಹಾಳಾಯಿತು/ನಾಶವಾಯಿತು; ಲೋಕ+ಎಲ್ಲ; ಈ ಲೋಕವೆಲ್ಲ=ಇಡೀ ಜಗತ್ತು/ಜನಸಮುದಾಯ;

ನೋಡುವುದು ಎಂಬ ಪದ ಒಂದು ರೂಪಕವಾಗಿ ಬಳಕೆಯಾಗಿದೆ. ಮಾನವ ಸಮುದಾಯದ ಬದುಕಿನಲ್ಲಿ ನಲಿವು ನೆಮ್ಮದಿಗಿಂತಲೂ ನೋವು ಸಂಕಟಗಳೇ ಹೆಚ್ಚಾಗಿವೆ. ಹಸಿವು, ಬಡತನ, ರೋಗರುಜಿನಗಳಿಂದ ನರಳುವುದರ ಜತೆಗೆ ಕೊಲೆ ಸುಲಿಗೆ ಹಿಂಸೆಯ ನಡೆನುಡಿಗಳಿಂದ ಮಾನವರ ಬಾಳು ದುರಂತಮಯವಾಗಿದೆ.

ಇದಕ್ಕೆ ಕಾರಣವೇನೆಂಬುದನ್ನು ನೋಡಿದಾಗ ಜಾತಿ, ಮತ ಮತ್ತು ದೇವರ ಹೆಸರಿನಲ್ಲಿ ಮಾನವ ಸಮುದಾಯ ಮಾಡಿಕೊಂಡಿರುವ ಕಟ್ಟುಪಾಡುಗಳು ಮಾನವರನ್ನು ನೂರೆಂಟು ಬಗೆಯ ಸಾಮಾಜಿಕ ಗುಂಪುಗಳನ್ನಾಗಿ ವಿಂಗಡಿಸಿ, ಪರಸ್ಪರ ವ್ಯಕ್ತಿಗಳ ನಡುವೆ ಅಸೂಯೆ, ಅಪನಂಬಿಕೆ ಮತ್ತು ಹಗೆತನವನ್ನುಂಟುಮಾಡಿವೆ. ಇದರಿಂದಾಗಿ ಮಾನವರ ದಿನನಿತ್ಯದ ಬದುಕಿನಲ್ಲಿ ನೂರಾರು ಬಗೆಯ ಕಲಹದ ಮತ್ತು ಸೇಡಿನ ಸಂಗತಿಗಳು ಎಲ್ಲೆಡೆಯು ಕಂಡುಬರುತ್ತಿವೆ.

ಮಾನವ ಸಮುದಾಯದ ಸಂಕಟಕ್ಕೆ ಮಾನವರ ಕೆಟ್ಟ ನಡೆನುಡಿಗಳೇ ಕಾರಣವೆಂಬುದನ್ನು ಅರಿತುಕೊಂಡು, ಪ್ರತಿಯೊಬ್ಬ ವ್ಯಕ್ತಿಯು ತನಗೆ ಜೀವನದಲ್ಲಿ ಒಳಿತನ್ನು ಬಯಸುವಂತೆಯೇ ಇತರರಿಗೆ ಒಳಿತನ್ನು ಮಾಡುವಂತಹ ಒಳ್ಳೆಯ ನಡೆನುಡಿಗಳಿಂದ ಬಾಳುವುದನ್ನು ಕಲಿಯುವುದು ಮತ್ತು ತನ್ನ ಬದುಕಿನೊಡನೆ ಇಡೀ ಮಾನವ ಸಮುದಾಯದ ಬದುಕು ಹೆಣೆದುಕೊಂಡಿದೆ ಎಂಬುದನ್ನು ಅರಿತುಕೊಂಡು, ಪರಸ್ಪರ ಪ್ರೀತಿ ಮತ್ತು ಕರುಣೆಯ ನಡೆನುಡಿಗಳಿಂದ ಬಾಳಬೇಕೆಂಬುದನ್ನು ಮನಗಾಣುವುದು ಎಂಬ ತಿರುಳಿನಲ್ಲಿ “ ನೋಡುವುದು “ ಎಂಬ ಪದ ಬಳಕೆಯಾಗಿದೆ.)

ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು
ಮಾತಿನ ಮಾತಿನೊಳಗೆ ಅರಿವೆಂಬುದುಂಟೆ. (518-178)

( ಭ್ರಾಂತು=ತಪ್ಪು ತಿಳಿವಳಿಕೆ/ತಾನು ತಿಳಿದಿರುವುದೇ ಸರಿ/ದಿಟ/ವಾಸ್ತವ/ಸತ್ಯ ಎನ್ನುವ ಒಳಮಿಡಿತ; ಭ್ರಾಂತಿನ=ತಪ್ಪು ತಿಳುವಳಿಕೆಯಿಂದ ಕೂಡಿದ; ಭ್ರಮೆ+ಒಳಗೆ; ಭ್ರಮೆ=ಇರುವುದನ್ನು ಇಲ್ಲವೆಂದು, ಇಲ್ಲದಿರುವುದನ್ನು ಇದೆಯೆಂದು ನಂಬಿರುವುದು; ಬಳಲುತ್ತ+ಇರಲು; ಬಳಲು=ಆಯಾಸಗೊಳ್ಳುವುದು/ದಣಿಯುವುದು/ಮಯ್ ಮನದ ಕಸುವು ಕುಗ್ಗುವುದು; ಇರಲು=ಇದ್ದಾಗ/ಇರುವಾಗ;

ಮಾತು=ನುಡಿ/ಸೊಲ್ಲು; ಮಾತಿನ+ಒಳಗೆ; ಅರಿವು+ಎಂಬುದು+ಉಂಟೆ; ಅರಿವು=ತಿಳುವಳಿಕೆ; ಎಂಬುದು=ಎನ್ನುವುದು; ಉಂಟೆ=ಇದೆಯೇ/ಇರುತ್ತದೆಯೇ;
ಮಾತಿನ ಮಾತಿನೊಳಗೆ ಅರಿವೆಂಬುದುಂಟೆ=ಮಾತಿಗೆ ಮಾತನ್ನು ಜೋಡಿಸಿಕೊಂಡು ಇಲ್ಲವೇ ಮಾತಿಗೆ ಮಾತನ್ನು ಬೆಳೆಸಿಕೊಂಡು ಆಡುವುದರಿಂದ ಅರಿವು ದೊರೆಯುವುದಿಲ್ಲ;

ಯಾವುದೇ ಸಂಗತಿಯ ಬಗೆಗಿನ ವಾಸ್ತವವನ್ನು/ಸತ್ಯವನ್ನು/ನಿಜವನ್ನು ತಿಳಿದುಕೊಳ್ಳದೇ, ತಮಗೆ ಗೊತ್ತಿರುವುದೇ ಸರಿಯೆಂದು ವಾದ ಮಾಡುವ ವ್ಯಕ್ತಿಗಳ ಮಾತಿನಲ್ಲಿ ಅರಿವು ಕಂಡುಬರುವುದಿಲ್ಲ. )

ಸಹಜವ ನುಡಿದಡೆ ಸೇರುವರಿಲ್ಲ ಕಾಣಿರಣ್ಣಾ
ಅಸಹಜಕ್ಕಲ್ಲದೆ ಲೋಕ ಭಜಿಸದು. (1555-284)

( ಸಹಜ=ಇರುವುದು/ನಿಜವಾದುದು/ದಿಟವಾದುದು/ವಾಸ್ತವವಾಗಿರುವುದು/ಸರಿಯಾಗಿರುವುದು; ನುಡಿದಡೆ=ನುಡಿದರೆ/ಹೇಳಿದರೆ; ಸೇರುವರು+ಇಲ್ಲ; ಸೇರು=ಜತೆಯಾಗುವುದು/ಹೊಂದಿಕೊಳ್ಳುವುದು/ಕೂಡುವುದು; ಸೇರುವರಿಲ್ಲ=ಮೆಚ್ಚುವುದಿಲ್ಲ/ಒಪ್ಪಿಕೊಳ್ಳುವುದಿಲ್ಲ/ಜತೆಗೂಡುವುದಿಲ್ಲ;
ಕಾಣಿರಿ+ಅಣ್ಣ; ಕಾಣಿರಿ=ನೋಡಿರಿ/ತಿಳಿದುಕೊಳ್ಳಿ; ಅಣ್ಣ=ಇತರರೊಡನೆ ಮಾತನಾಡುವಾಗ ವ್ಯಕ್ತಿಯು ತನ್ನ ಒಲವು ನಲಿವು ಆದರವನ್ನು ಸೂಚಿಸಲು ಬಳಸುವ ಪದ. ಕೆಲವೊಮ್ಮೆ ಅಣಕ/ವ್ಯಂಗ್ಯ/ಹಾಸ್ಯ ಮಾಡುವಾಗಲು ‘ ಅಣ್ಣ ‘ ಎಂಬ ಪದವನ್ನು ಚುಚ್ಚುನುಡಿಯಾಗಿ ಬಳಸಲಾಗುತ್ತದೆ;

ಸಹಜವ ನುಡಿದರೆ ಸೇರುವರಿಲ್ಲ=ಇರುವುದನ್ನು ಇದ್ದಂತೆ ಹೇಳಿದರೆ ಇಲ್ಲವೇ ಕಂಡದ್ದನ್ನು ಕಂಡಂತೆ ನುಡಿದರೆ ಅಂತಹ ನುಡಿಗಳಿಗೆ ಜನರಿಂದ ಹೆಚ್ಚು ಮನ್ನಣೆಯು ದೊರೆಯುವುದಿಲ್ಲ;

ಅಸಹಜಕ್ಕೆ+ಅಲ್ಲದೆ; ಅಸಹಜ=ದಿಟವಲ್ಲದ್ದು/ನಿಜವಲ್ಲದ್ದು/ವಾಸ್ತವಕ್ಕೆ ದೂರವಾದುದು; ಅಸಹಜಕ್ಕೆ=ಸುಳ್ಳು ಸಂಗತಿಗಳಿಗೆ/ದಿಟವಲ್ಲದ ವಿಚಾರಗಳಿಗೆ/ಜನರ ಮನದಲ್ಲಿ ಸಂಶಯ, ಹಗೆತನ ಮತ್ತು ಸೇಡಿನ ಒಳಮಿಡಿತಗಳನ್ನು ಕೆರಳಿಸುವಂತಹ ಸಂಗತಿಗಳಿಗೆ; ಅಲ್ಲದೆ=ಅಂತಹ ವಿಚಾರಗಳಿಗೆ ಮಾತ್ರ;
ಲೋಕ=ಜಗತ್ತು/ಪ್ರಪಂಚ/ಜನಸಮುದಾಯ; ಭಜನೆ=ದೇವರ ನಾಮವನ್ನು/ಮಂತ್ರಗಳನ್ನು ದೊಡ್ಡ ದನಿಯಲ್ಲಿ ವಾದ್ಯಗಳ ನಾದದ ಜತೆಗೂಡಿ ಹಾಡುವುದು/ಉಚ್ಚರಿಸುವುದು; ಭಜಿಸು=ಮೆಚ್ಚಿಕೊಂಡು ಕೊಂಡಾಡುವುದು/ನಂಬಿಕೊಂಡು ಹೊಗಳುವುದು;

ಲೋಕ ಭಜಿಸದು=ಲೋಕದ ಜನರು ಅಸಹಜವಾದುದನ್ನು ಮೆಚ್ಚಿ ಕೊಂಡಾಡುತ್ತಾರೆಯೇ ಹೊರತು ಸಹಜವಾದುದನ್ನು ಮೆಚ್ಚಿಕೊಳ್ಳುವುದಿಲ್ಲ.

ಸುಳ್ಳಿನ/ಕೆಟ್ಟತನದ/ಹಗೆತನದ/ಕ್ರೂರತನದ ಸಂಗತಿಗಳನ್ನು ಜನರು ಬಹುಬೇಗ ನಂಬುತ್ತಾರೆಯೇ ಹೊರತು ನಿಜವಾದ/ಒಳ್ಳೆಯ/ಪ್ರೀತಿಯ/ಕರುಣೆಯಿಂದ ಕೂಡಿದ ಸಂಗತಿಗಳನ್ನು ಕಡೆಗಣಿಸುತ್ತಾರೆ ಎಂಬ ತಿರುಳಿನಲ್ಲಿ ಬಳಕೆಯಾಗಿದೆ. “ ನಿಜವು ನಾಲ್ಕು ಹೆಜ್ಜೆಗಳನ್ನಿಡುವ ಸಮಯಕ್ಕೆ, ಸುಳ್ಳು ಇಡೀ ಜಗತ್ತನ್ನೆ ಸುತ್ತಿ ಬಂದಿರುತ್ತದೆ” ಎಂಬ ಮಾತು ಜನಬಳಕೆಯಲ್ಲಿದೆ. )

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Maheedasa B V says:

    “ಜಾತಿ, ಮತ ಮತ್ತು ದೇವರ ಹೆಸರಿನಲ್ಲಿ ಮಾನವ ಸಮುದಾಯ ಮಾಡಿಕೊಂಡಿರುವ ಕಟ್ಟುಪಾಡುಗಳು ಮಾನವರನ್ನು ನೂರೆಂಟು ಬಗೆಯ ಸಾಮಾಜಿಕ ಗುಂಪುಗಳನ್ನಾಗಿ ವಿಂಗಡಿಸಿ, ಪರಸ್ಪರ ವ್ಯಕ್ತಿಗಳ ನಡುವೆ ಅಸೂಯೆ, ಅಪನಂಬಿಕೆ ಮತ್ತು ಹಗೆತನವನ್ನುಂಟುಮಾಡಿವೆ.” ಈಗಿನ ಸಮಾಜದಲ್ಲಿ ಈ ರೀತಿಯ ಘರ್ಷಣೆಗಳಿಗಿಂತ ಹಣಕ್ಕಾಗಿ, ವ್ಯವಹಾರ ಪೈಪೋಟಿಗಾಗಿ, ರಾಜಕೀಯ ಮೇಲಾಟಕ್ಕಾಗಿ ನಡೆಯುವ ಹೊಡೆದಾಟಗಳೇ ಹೆಚ್ಚು. ಜಾತಿ ಇತ್ಯಾದಿ ಹೆಸರಿನಲ್ಲಿ ನಡೆಯುವುದು ಕೂಡ ಇಂತಹ ಹೊಡೆದಾಟಗಳೇ. ಇಂತಹ ಕೀಳ್ತನವಗಳನ್ನು ಗುರುತಿಸಿ ಅವುಗಳಿಗೆ ಇಂಬುಕೊಡದೆ ನಾವು ಮೇಲೇರಿ ಇರುವ ಸಾಮರಸ್ಯವನ್ನು, ಮುದ ನೀಡುವ ವಸ್ತು-ಘಟನೆಗಳನ್ನು ʼನೋಡಿʼ ಹೆಚ್ಚಿಸ ಬೇಕೆಂಬ ಆಶಯವು ಇಂದಿಗೆ ಹೆಚ್ಚು ಹೊಂದಿಕೆಯಾಗಬಹುದು.

  2. C.P.Nagaraja says:

    ನಿಮ್ಮ ಅನಿಸಿಕೆ ಸರಿಯಾಗಿದೆ. ಯಾವುದೇ ಒಂದು ವಚನವನ್ನು ಇಲ್ಲವೇ ವಚನದ ಸಾಲುಗಳನ್ನು ಪ್ರತಿಯೊಬ್ಬ ಓದುಗರು ಬೇರೆ ಬೇರೆ ಆಯಾಮಗಳಲ್ಲಿ ವಿವರಿಸಿಕೊಳ್ಳುತ್ತಾರೆ. ಆದ್ದರಿಂದಲೇ ಒಂದೇ ವಚನದಲ್ಲಿ ನಾನಾ ರೀತಿಯ ಆಶಯಗಳನ್ನು ಓದುಗರು ಗುರುತಿಸುತ್ತಾರೆ.

ಅನಿಸಿಕೆ ಬರೆಯಿರಿ: