ಕೊಕೊ ಮತ್ತು ಚಾಕಲೇಟ್

– ಮಾರಿಸನ್ ಮನೋಹರ್.

ಚಾಕಲೇಟ್, ಕೊಕೊ, chocolate, cocoa

ನಾನು ಕಲಿಕೆಮನೆಯಲ್ಲಿ ಕಲಿಯುತ್ತಿರುವಾಗ ಸಂಜೆ ಕಲಿಮನೆ ಬಿಟ್ಟ ಮೇಲೆ ಟ್ಯೂಶನ್ನಿಗೆ ಹೋಗುತ್ತಿದ್ದೆ. ನಾವು ಯಾವತ್ತಾದರೂ ಟ್ಯೂಶನ್ ತಪ್ಪಿಸಿದರೆ ಟೀಚರ್ ನಮಗೆ ಶಿಕ್ಶೆ ಕೊಡುತ್ತಿದ್ದರು. ಟ್ಯೂಶನ್ ತಪ್ಪಿಸಿದ ಮರುದಿನ ಎಲ್ಲರಿಗೂ ಚಾಕಲೇಟು ತಂದು ಕೊಡುವದು ಶಿಕ್ಶೆ ಆಗಿತ್ತು. ಮೊದಲು ಕ್ಯಾಂಡಿ (ಸಕ್ಕರೆಯಿಂದ ಮಾಡಿದ ಸಿಹಿ) ಮತ್ತು ಚಾಕಲೇಟ್ ಒಂದೇ ಅಂತ ತಿಳಿದುಕೊಂಡಿದ್ದೆ. ಆಮೇಲೆ ಗೊತ್ತಾಯಿತು ಅವೆರಡು ಬೇರೆ ಬೇರೆ ಅಂತ‌. ಕಲಿಕೆಮನೆಯಲ್ಲಿ ಹುಟ್ಟುಹಬ್ಬದ ದಿನದಂದು ಕಡಿಮೆ ಬೆಲೆಯ ಚಾಕಲೇಟು ಕ್ಯಾಂಡಿ ತಂದು ಎಲ್ಲರಿಗೂ ಹಂಚುತ್ತಿದ್ದೆವು. ಕೆಲವು ಜಿಪುಣರು ಕೇವಲ ಟೀಚರುಗಳಿಗೆ ಮಾತ್ರ ಚಾಕಲೇಟು ಹಂಚಿ ನಮ್ಮೆಲ್ಲರ ಹೊಟ್ಟೆ ಉರಿಸುತ್ತಿದ್ದರು. ಆವತ್ತು ಅಂತಹ ಹುಡುಗರಿಗೆ “ನೀನು ಟೀಚರ್ ಗಳ ಜೊತೆಗೇ ಊಟ ಮಾಡು” ಅಂತ ಹೇಳಿ ನಮ್ಮ ಊಟದ ಸುತ್ತಿನಿಂದ ಗೇಟ್ ಪಾಸ್ ಕೊಡುತ್ತಿದ್ದೆವು.

ಚಾಕಲೇಟ್ ಗಳ ಹುಟ್ಟು

ಚಾಕಲೇಟನ್ನು ಕೊಕೊ ಬೀಜಗಳಿಂದ ತಯಾರಿಸಲಾಗಿತ್ತದೆ. ಈ ಕೊಕೊ ಗಿಡಗಳು ಪಪ್ಪಾಯಿ ಗಿಡಗಳಶ್ಟು ಎತ್ತರ ಇರುತ್ತವೆ. ಹಲಸಿನ ಮರದ ಕಾಂಡಕ್ಕೆ ಮತ್ತು ದೊಡ್ಡ ಕೊಂಬೆಗಳಿಗೆ ಹಲಸು ಬೆಳೆಯುವುದು ನೀವು ನೋಡಿರುತ್ತೀರಿ. ಅದೇ ತರಹ ಕೊಕೊ ಕಾಯಿಗಳು ಗಿಡದ ಕಾಂಡಕ್ಕೆ ಮತ್ತು ದೊಡ್ಡ ಕೊಂಬೆಗಳಿಗೆ ಅಂಟಿಕೊಂಡು ಬೆಳೆದಿರುತ್ತವೆ. ಕೊಕೊ ಗಿಡ ಬೆಳೆಯಲು ಸೆಕೆ ಹೆಚ್ಚಿರುವ ಪ್ರದೇಶಗಳು ಬೇಕು. ನಡು ಮತ್ತು ತೆಂಕಣ ಅಮೆರಿಕದ ನಾಡುಗಳು ಮತ್ತು ಆಪ್ರಿಕಾದಲ್ಲಿ ಈಕ್ವೆಡಾರ‍್‌ಗೆ ಹತ್ತಿರುವಿರುವ ನಾಡುಗಳಲ್ಲಿ ಕೊಕೊ ಬೇಸಾಯ ಹೇರಳವಾಗಿ ಆಗುತ್ತದೆ. ಕೊಕೊ ಕಾಯಿಗಳು ಹೀಚಾಗಿರುವಾಗ ನೇರಳೆ ಬಣ್ಣದ್ದಾಗಿದ್ದು, ಮಾಗುತ್ತಾ ಬದನೆಕಾಯಿ ಬಣ್ಣಕ್ಕೆ, ಆಮೇಲೆ ಕೆಂಪುಹಳದಿ ಬಣ್ಣಕ್ಕೆ ತಿರುಗುತ್ತವೆ. ದಟ್ಟಹಳದಿ ಬಣ್ಣಕ್ಕೆ ಬಂದಾಗ ಇವು ಮಾಗಿದವು ಎಂದು ತಿಳಿದುಕೊಳ್ಳುತ್ತಾರೆ. ಆಗ ಇವುಗಳನ್ನು ಗಿಡದಿಂದ ಕಡಿಯಬಹದು.

ಮಾಗಿದ ಕೊಕೊ ಕಾಯಿಗಳನ್ನು ಬಿಚ್ಚಿದಾಗ ಅದರಲ್ಲಿ ಮೆದುಪೊರೆ ಇರುವ ಕೊಕೊ ಬೀಜಗಳು ಕಾಣಿಸುತ್ತವೆ. ಈ ಕೊಕೊ ಬೀಜಗಳನ್ನು ತೆಗೆದು ಕಟ್ಟಿಗೆಯ ಇಲ್ಲವೇ ಪ್ಲಾಸ್ಟಿಕ್ ತೊಟ್ಟಿಗಳಲ್ಲಿ ಹಾಕಿ ಹುದುಗು ಬರಿಸುತ್ತಾರೆ (fermentation). ಕೆಲವೊಂದು ಸಲ ಕೊಕೊ ಬೀಜಗಳ ಗುಡ್ಡೆ ಹಾಕುತ್ತಾರೆ, ಮಲೆನಾಡಿನಲ್ಲಿ ಅಡಿಕೆ ಗುಡ್ಡೆ ಹಾಕಿದ ಹಾಗೆ. ಹೀಗೆ ಗುಡ್ಡೆ ಹಾಕಿದ ಕೊಕೊ ಬೀಜಗಳನ್ನು ಹಾಗೇ ಏಳು ದಿನಗಳವರೆಗೆ ಬಿಡಲಾಗುತ್ತದೆ. ಆಗ ಈ ಬೀಜಗಳು ಹುದುಗು ಬಂದು ಸಿಹಿ ರಸ ಬಿಡುತ್ತವೆ. ಈ ಕೊಕೊ ಬೀಜಗಳು ಸಿಹಿಯಾಗಲೇ ಬೇಕು. ಇಲ್ಲದಿದ್ದರೆ ಕೊಕೊ ಬೀಜಗಳ ಕಹಿ ಹೋಗುವುದಿಲ್ಲ. ಏಳು ದಿನಗಳು ಆದ ಮೇಲೆ ಬಿಸಿಲಿನಲ್ಲಿ ಇವುಗಳನ್ನು ಚೆನ್ನಾಗಿ ಒಣಗಿಸುತ್ತಾರೆ. ಆ ಬಳಿಕ ಕೊಕೊ ಬೀಜಗಳು ಮಾರಾಟಕ್ಕೆ ಹೋಗುತ್ತವೆ.

ಕಾಪಿ ಬೀಜಗಳನ್ನು ಹುರಿದು ಕುಟ್ಟಿ ಕಾಪಿ ಪೌಡರ್ ಮಾಡಿದ ಹಾಗೆ, ಈ ಒಣಗಿದ ಕೊಕೊ ಬೀಜಗಳನ್ನು ಹುರಿಯುತ್ತಾರೆ. ಹುರಿದಾದ ಮೇಲೆ ಇವುಗಳನ್ನು ಗಾಣದಲ್ಲಿ ಹಾಕಿ ಒತ್ತುತ್ತಾರೆ. ಆಗ ಈ ಕೊಕೊ ಬೀಜಗಳಿಂದ ಎಣ್ಣೆ ಬರುತ್ತದೆ. ಇದೇ ಕೊಕೊ ಬೆಣ್ಣೆ ( cocoa butter). ಈ ಎಣ್ಣೆ ತೆಗೆದ ಮೇಲೆ ಉಳಿಯುವ ಹಿಂಡಿಯೇ ನಮಗೆ ಬೇಕಾದ ಕೊಕೊ ಪುಡಿ (cocoa powder). ಹದವಾಗಿ ಸಕ್ಕರೆ, ಕೊಕೊ ಎಣ್ಣೆ ಮತ್ತು ಕೊಕೊ ಪುಡಿಗಳನ್ನು ಬೆರೆಸಲಾಗುತ್ತದೆ. ಆಗ ನಮಗೆ ಸಿಗುತ್ತದೆ ಚಾಕಲೇಟ್. ಇದನ್ನೇ ಅಚ್ಚುಗಳಲ್ಲಿ ಹೊಯ್ದು ತಣಿಸಿದಾಗ ಮಾರಾಟಕ್ಕೆ ಒಪ್ಪವಾದ ಚಾಕಲೇಟ್ ಚಾಪಕಗಳು (chocolate bars) ಸಿಗುತ್ತದೆ. ಈ ಚಾಕಲೇಟು ಚಾಪಕಗಳನ್ನು ಬಂಗಾರ ಬಣ್ಣದ ಕವರಿನಲ್ಲಿ ಸುತ್ತಿ ಮಾರಾಟ ಮಾಡಲಾಗುತ್ತದೆ. ಈ ಬಂಗಾರ ಬಣ್ಣದ ಕವರನ್ನು ಬಿಚ್ಚಿ ಚಾಕಲೇಟ್ ನೋಡಿದಾಗ ಎಲ್ಲರ ಮನಸ್ಸು ಚಿಕ್ಕ ಮಕ್ಕಳ ಹಾಗೆ ಕುಣಿಯುವುದು!

ಕೊಕೊ ಬೀಜಗಳಿಂದ ಕಳ್ಳನ್ನು ತಯಾರಿಸಲಾಗುತ್ತಿತ್ತು!

ನೋಡಲು ಮುದ್ದಾದ ಈ ಕೊಕೊ ಬೀಜಗಳ ಹಳಮೆ ಚಿಕ್ಕದೆಂದು ತಿಳಿಯಬೇಡಿ. ಚಾಕಲೇಟ್, ಸಾಮ್ರಾಜ್ಯಗಳನ್ನು ಹುಟ್ಟು ಹಾಕಿದೆ ಮತ್ತು ಬೀಳಿಸಿದೆ! ತೆಂಕಣ ಅಮೆರಿಕದ ಅಮೆಜಾನ್ ತೊರೆ ಪ್ರದೇಶಗಳಲ್ಲಿ ಮೊದಲು ಕೊಕೊ ಗಿಡ ಸಿಕ್ಕಿತು. ಆಜ್ಟೆಕ್ (ಅಮೆರಿಕಗಳ ಮೊದಲೊಕ್ಕಲಿನ ಮಂದಿ – native) ಮಂದಿ ಈ ಕೊಕೊ ಬೀಜಗಳನ್ನು ನೀರಲ್ಲಿ ಬೆರೆಸಿ ಮೂರರಿಂದ ಏಳು ದಿನಗಳವರೆಗೆ ವರೆಗೆ ಇಟ್ಟು ಅದಕ್ಕೆ ಹುದುಗು ಬರಿಸುತ್ತಿದ್ದರು. ಹೀಗೆ ಹುದುಗು ಬಂದಾಗ ಕೊಕೊ ಬೀಜಗಳ ಮೇಲಿನ ಮೆತ್ತನೆಯ ಮೇಲ್ಪೊರೆಯಲ್ಲಿನ ಸಿಹಿಯು ಆಲ್ಕೋಹಾಲ್ ಆಗುತ್ತಿತ್ತು. ಈ ನೀರನ್ನು ಸೋಸಿ ತೆಗೆದುಕೊಳ್ಳುತ್ತಿದ್ದರು. ಈ ಕೊಕೊ ಕಳ್ಳನ್ನು (liquor) ಅವರು ತಮ್ಮ ಹಬ್ಬದ ತೇದಿಗಳಂದು ಕುಡಿದು ಕುಣಿಯುತ್ತಿದ್ದರು. ಈ ಕೊಕೊ ಕಳ್ಳು ನಮ್ಮಲ್ಲಿ ಸಿಗುವ ಈಚಲ ಗಿಡದ ‘ನೀರಾ’ (ಸೇಂದಿ) ಹಾಗೆ ಇರುತ್ತದೆ. ಕುಣಿದು ಕುಪ್ಪಳಿಸುವ ರಸವಾದ ಕೊಕೊ ಕಳ್ಳಿನ ರುಚಿ ಕಂಡ ಆಜ್ಟೆಕ್ ಮಂದಿ ಇದರ ಬೇಸಾಯವನ್ನು ತೆಂಕಣ ಅಮೆರಿಕದಲ್ಲಿ ಎಲ್ಲ ಕಡೆ ಹರಡಿದರು.

ತೆರಿಗೆ ಕಟ್ಟಲು ಕೊಕೊ ಬೀಜಗಳ ಬಳಕೆ

ಕೊಕೊ ಬೀಜಗಳಿಗೆ ಬೆಲೆ ತುಂಬಾ ಇದ್ದುದರಿಂದ ಇವು ಕರೆನ್ಸಿಯಾಗಿ ಕೂಡ ಬಳಕೆಯಾದವು. ಹಣದ ಬದಲಿಗೆ ಕೊಕೊ ಬೀಜಗಳನ್ನು ಮಂದಿ ತೆರಿಗೆ ಕಟ್ಟಲು ಬಳಸಿದರು. ಅದರಲ್ಲೇ ಕೆಲವರು ತಮ್ಮ ಚಳಕ ತೋರಿಸಿ ಕೆಮ್ಮಣ್ಣಿನಿಂದ ಮಾಡಿದ ಸಟೆ (ನಕಲಿ/counterfeit) ಕೊಕೊ ಬೀಜಗಳನ್ನು ನಿಜವಾದ ಕೊಕೊ ಬೀಜಗಳಲ್ಲಿ ಬೆರೆಸಿ ತೆರಿಗೆ ಕಟ್ಟಿದರು. ಸಿಕ್ಕಿಬಿದ್ದ ಕೆಲವರನ್ನು ಪಿರಮಿಡ್ಡುಗಳ ಮೇಲೆ ಇದ್ದ ಬಲಿಕಟ್ಟೆಗಳ ಮೇಲೆ ತಲೆ ಕಡಿದು ಹಾಕುವ ಶಿಕ್ಶೆ ಕೊಡಲಾಯಿತು! ಸ್ಪ್ಯಾನಿಶರು ಮೆಕ್ಸಿಕೋ ನಾಡನ್ನು ತಮ್ಮ ವಸಾಹತು ಮಾಡಿಕೊಂಡ ಮೇಲೆ ಕೊಕೊ ಬೀಜಗಳಿಗೆ ಎಲ್ಲಿಲ್ಲದ ಬೆಲೆ ಬಂತು. ಸ್ಪ್ಯಾನಿಶರು ನಡು ಅಮೆರಿಕ ಮತ್ತು ತೆಂಕಣ ಅಮೆರಿಕಗಳಿಗೆ ಬಂಗಾರದ ಆಸೆಗೆ ಹೋಗಿದ್ದರು ಆದರೆ ಅವರಿಗೆ ಅಲ್ಲಿ ಸಿಕ್ಕಿದ್ದು ಕೊಕೊ ಬೀಜಗಳು. ಅದಾದ ಮೇಲೆ ಕೊಕೊ ಬೀಜಗಳು ಬಂಗಾರಕ್ಕೆ ಸರಿಸಮ ಆದವು.

ಚಾಕಲೇಟ್ ದೆವ್ವದ ರಸ!?

ಯುರೋಪಿನಲ್ಲಿ ಕೊಕೊ ಬೀಜದ ಪುಡಿ, ಹಾಲು ಮತ್ತು ಸಕ್ಕರೆ ಬೆರೆಸಿದ ಚಾಕಲೇಟ್ ಕುಡಿಗೆ (chocolate drink) ಪ್ರಸಿದ್ದವಾಯ್ತು. ಯುರೋಪಿನ ಸಿರಿವಂತರಿಗೆ ಅಚ್ಚುಮೆಚ್ಚಿನ ಸೀಕರಣೆ ಇದು ಆಗಿತ್ತು. ಆದರೆ ಚಾಕಲೇಟ್ ಹೀಗಳಿಕೆಗೂ ಗುರಿಯಾಗಬೇಕಾಯ್ತು. ನಡುಗಾಲದ ಯುರೋಪಿನಲ್ಲಿ ಚಾಕಲೇಟನ್ನು ದೆವ್ವದ ರಸವೆಂದರು. ಅದನ್ನು ಕುಡಿಯುವವರ ತಲೆ ಕೆಡುತ್ತದೆ ಅನ್ನೊ ಮೂಡನಂಬಿಕೆಯೂ ಇತ್ತು. ಇಶ್ಟಾದರೂ ಚಾಕಲೇಟಿನ ಮಂದಿಪ್ರಿಯತೆ ಕಡಿಮೆಯಾಗಲಿಲ್ಲ. ಹಣವಂತರು ಇದನ್ನು ಗುಟ್ಟಾಗಿ ಕೊಂಡು ತಿನ್ನುತ್ತಿದ್ದರು. ಇದರಿಂದ ಚಾಕಲೇಟಿನ ಗುಟ್ಟಿನ ವಹಿವಾಟು (black market) ಆರಂಬವಾಯ್ತು. ಇದರಿಂದ ಕೊಕೊ ಬೀಜಗಳಿಗೆ ಇನ್ನೂ ಹೆಚ್ಚಿನ ಬೆಲೆ ಬಂತು.

ಚಾಕಲೇಟ್ ಈಗ ಮಲ್ಟಿ ಬಿಲಿಯನ್ ಡಾಲರ್ ವಹಿವಾಟು!

ಕೊಕೊ ಬೆಳೆಯುವ ಎಲ್ಲ ನಾಡುಗಳು ಸ್ಪೇನಿನ ವಸಾಹತು ಆಗಿದ್ದವು. ಇದರ ದೆಸೆಯಿಂದ ಸ್ಪೇನ್ ಚಾಕಲೇಟ್ ವಹಿವಾಟಿನ ಮೇಲೆ ಓರಂಕೆ (monopoly) ಸಾದಿಸಿತು. ಕೊಕೊ ಬೀಜಗಳು ಮತ್ತು ಚಾಕಲೇಟ್ ಮೇಲಿನ ಆದಾಯವು ಸ್ಪೇನಿನ ಇತರೆ ಎಲ್ಲ ಆದಾಯಗಳನ್ನು ಮೀರಿಸಿತ್ತು! ಸ್ಪೇನ್ ಸಾಮ್ರಾಜ್ಯ ಹೀಗೆ ಚಾಕಲೇಟ್ ನಿಂದಾಗಿ ಮೇಲುಗೈ ಸಾದಿಸಿತ್ತಾದರೂ ಯುರೋಪಿನ ಬೇರೆ ನಾಡುಗಳು ಕೊಕೊ ಬೇಸಾಯವನ್ನು ಮಾಡಲು ತೊಡಗಿದಾಗ ಸ್ಪೇನಿನ ಓರಂಕೆ ಮುರಿದು ಬಿತ್ತು. ಪೋರ‍್ಚುಗೀಸ್ ಪ್ರೆಂಚ್ ಬ್ರಿಟನ್ ಗಳು ಆಪ್ರಿಕಾದಲ್ಲಿ ತಮ್ಮ ವಸಾಹತು ಸ್ತಾಪನೆ ಮಾಡಿ ಸ್ಪೇನಿನ ಚಾಕಲೇಟ್ ಸಾಮ್ರಾಜ್ಯವನ್ನು ಕರಗಿಸಿ ಬಿಟ್ಟವು. ಅಲ್ಲಿಂದ ಯುರೋಪಿನ ಎಲ್ಲ ನಾಡುಗಳಲ್ಲಿ ಕೊಕೊ ಬೀಜಗಳು ಮುಕ್ತ ಮಾರುಕಟ್ಟೆಯಲ್ಲಿ ದೊರಕಿ ಚಾಕಲೇಟ್ ಎಲ್ಲರೂ ಕರೀದಿಸುವಂತೆ ಆಯ್ತು. ಮೊದಲು ಕೇವಲ ಸಿರಿವಂತರು ತಮ್ಮ ಅದ್ದೂರಿ ಔತಣಕೂಟಗಳಲ್ಲಿ ಕುಡಿಯುತ್ತಿದ್ದ ಚಾಕಲೇಟ್ ಸೀಕರಣೆ ಈಗ ಹಾದಿ ಬದಿಯ ಹೋಟೆಲ್ ಗಳಲ್ಲಿ ದೊರಕತೊಡಗಿತು. ಕೊಕೊ ಬೀಜಗಳ ಒಕ್ಕಣೆಯಲ್ಲಿ ನಡು ಮತ್ತು ತೆಂಕಣ ಅಮೆರಿಕದ ನಾಡುಗಳು ಮತ್ತು ಆಪ್ರಿಕಾದ ನಾಡುಗಳು ಮುಂದೆ ಇವೆ. 2017 ಲೆಕ್ಕದ ಮೇರೆಗೆ ಐವರಿ ಕೋಸ್ಟ್ ನಾಡು 2. 03 ಮಿಲಿಯನ್ ಟನ್ ಕೊಕೊ ಒಕ್ಕಣೆ ಮಾಡಿ ಮೊದಲ ಸ್ತಾನದಲ್ಲಿ ಇದೆ. ಗಾನಾ (0. 88 ಮಿಲಿಯನ್ ಟನ್ ), ಇಂಡೋನೇಶ್ಯಾ (0. 65 ಮಿಲಿಯನ್ ಟನ್ ) ಕೊಕೊ ಒಕ್ಕಣೆ ಮಾಡಿ ಎರಡನೇ ಮತ್ತು ಮೂರನೇ ಸ್ತಾನದಲ್ಲಿ ಇವೆ. ತೆಂಕಣ ಅಮೆರಿಕದ ಅಮೆಜಾನ್ ಕಾಡುಗಳಲ್ಲಿ ಬೆಳೆಯುತ್ತಿದ್ದ ಕೊಕೊ ಬೀಜ ಚಾಕಲೇಟ್ ಆಗಿ ಇವತ್ತು ಪ್ರತಿ ವರ‍್ಶ ಮಲ್ಟಿ ಬಿಲಿಯನ್ ಡಾಲರ್ ವಹಿವಾಟು ಆಗಿದೆ!

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org/Chocolate, wikipedia/Cocoa_bean)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *