ಪರಿಸರ ಚೊಕ್ಕಟವಾಗಿರುಸುವಲ್ಲಿ ನಮ್ಮ ಪಾತ್ರ

ಪ್ರಕಾಶ್‌ ಮಲೆಬೆಟ್ಟು.

ಚೊಕ್ಕ ಪರಿಸರ, Clean Environment

ಸುಂದರ ನಗರ ಅತವಾ ಹಳ್ಳಿ ಯಾರಿಗೆ ತಾನೇ ಇಶ್ಟವಾಗಲ್ಲ ಹೇಳಿ? ಆದರೆ ಯಾಕೆ ನಮ್ಮ ಸುತ್ತಮುತ್ತಲಿನ ಪರಿಸರ ಇಶ್ಟೊಂದು ಕಲ್ಮಶದಿಂದ ಕೂಡಿರುತ್ತೆ? ಏಕೆ ಎಲ್ಲ ಕಡೆ ಕಸ ಕಡ್ದಿಗಳ ರಾಶಿಯೇ ನಮಗೆ ಕಂಡು ಬರುತ್ತೆ? ಇದಕ್ಕೆ ಪರಿಹಾರವಿಲ್ಲವೇ? ನಮ್ಮ ದೇಶದ ಪ್ರದಾನ ಮಂತ್ರಿ ಕುದ್ದು ಮುಂದೆ ನಿಂತು ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಬೇಕಾಗಿ ಬಂದಿರುವುದು ಒಂದು ವಿಪರ‍್ಯಾಸವಲ್ಲವೇ? ಕೆಲವು ಬೇರೆ ದೇಶಗಳಿಗೆ ಬೇಟಿ ಕೊಟ್ಟಾಗ ಇಲ್ಲವೇ ಟಿವಿ, ಪತ್ರಿಕೆಗಳಲ್ಲಿ ಹೊರದೇಶಗಳ ಪರಿಸರವನ್ನು ನೋಡಿದಾಗ, ಅಲ್ಲಿ ಕಂಡು ಬರುವ ಶುಚಿತ್ವವವನ್ನು ನೋಡಿ ಅದು ಅಬಿವ್ರುದ್ದಿ ಹೊಂದಿದ ದೇಶ, ಅಲ್ಲಿ ಶ್ರೀಮಂತಿಕೆ ತುಂಬಿ ತುಳುಕುತ್ತಿದೆ ಎಂಬ ತಪ್ಪು ಕಲ್ಪನೆಯನ್ನು ವ್ಯಕ್ತಪಡಿಸುತೇವೆ. ಕಣ್ಣಿಗೆ ಸುಂದರವಾಗಿ ಕಾಣುವ ದೇಶದಲ್ಲೂ ಕೂಡ ಬಡತನ, ಕಶ್ಟ ಎಲ್ಲ ಇರುತ್ತೆ ಸ್ವಾಮಿ . ಆದರೆ ನಮ್ಮ ಕಣ್ಣಿಗೆ ಕಾಣಿಸೋದು ಅಲ್ಲಿನ ಸುಂದರ, ಸ್ವಚ್ಚ ಪರಿಸರ ಮಾತ್ರ. ವಿಶ್ವದ ಕಣ್ಣಿಗೆ ಒಳ್ಳೆ ಅಬಿಪ್ರಾಯ ಮೂಡಿಸೋದು ಕೂಡ ಅದೇ ಕಣ್ರೀ.

ಕೆಲಸಕ್ಕಾಗಿ ಸಂದರ‍್ಶನ ನೀಡಲು ಹೋಗುವಾಗ ನಾವು ಹೇಗೆ ಹೋಗುವೆವು? ನೀಟಾಗಿ ತಲೆ ಬಾಚಿ , (ಇದ್ದುದರಲ್ಲೇ) ಒಳ್ಳೆ ಬಟ್ಟೆಯನ್ನು ಇಸ್ತ್ರಿ ಮಾಡಿ, ತೊಟ್ಟು ಹೋಗ್ತೀವಲ್ವೇ ? ಒಳ್ಳೆ ಪದವಿ ಹೊಂದಿದ್ರೂ ನಾವು ಕಾಣುವ ಬಗೆಯ ಬಗ್ಗೆ ಯಾಕೆ ಕಾಳಜಿ ವಹಿಸುವೆವು? ನಾವು ಹೇಗೆ ಕಾಣುತ್ತೇವೆ ಎಂಬುದು ಕೂಡ ತುಂಬಾ ಮುಕ್ಯ ಅಲ್ವೇ. ಇಂಗ್ಲೀಶ್ ಬಾಶೆಯಲ್ಲಿ ಒಂದು ಮಾತಿದೆ ” first impression in the best (Last ) impression ” ಅಂತ . ಅದು ನಿಜ ಕೂಡ. ಹಾಗೆ ನಮ್ಮ ಪರಿಸರ ಕೂಡ!

ನಾವು ಎಶ್ಟೇ, ಮುಂದುವರೆದಿದ್ರು ಸ್ವಚ್ಚವಾಗಿಲ್ಲದಿದ್ದ್ರೆ ಇತರರ ಮುಂದೆ ಕಾಣುವ ರೀತಿಯೇ ಬೇರೆ. ಹಾಗಾದ್ರೆ ಬೇರೆಯವರ ದ್ರುಶ್ಟಿಯಲ್ಲಿ ಉತ್ತಮವಾಗಿ ತೋರಿಸಿಕೊಳ್ಳಲು ಮಾತ್ರ ಸ್ವಚ್ಚತೆ ಬೇಕೇ ? ಕಂಡಿತ ಅಲ್ಲ. ಸ್ವಚ್ಚ ಪರಿಸರದ ಬಗ್ಗೆ ಇದೊಂದು ಪೀಟಿಕೆ ಅಶ್ಟೇ. ಸ್ವಚ್ಚ ಪರಿಸರದ ಅಗತ್ಯತೆಯ ಬಗ್ಗೆ ತುಂಬಾ ಸರಳವಾಗಿ ಹೇಳೋದಾದ್ರೆ ಎರಡು ಉದ್ದೇಶಕ್ಕಾಗಿ ನಮಗೆ ಸ್ವಚ್ಚ ಪರಿಸರ ಬೇಕು – ನಮ್ಮ ಮಾನಸಿಕ ಹಾಗು ದೈಹಿಕ ಅರೋಗ್ಯಕ್ಕಾಗಿ. ಹಾಗಾದ್ರೆ ಕಸ ಮುಕ್ತ ಸ್ವಚ್ಚ ಊರು, ಪರಿಸರ ನಿರ‍್ಮಿಸುವಲ್ಲಿ ನಮ್ಮ ಪಾತ್ರ ಏನು?

ಸ್ವಚ್ಚ ಪರಿಸರಕ್ಕೆ ನಾವೇನು ಮಾಡಬಹುದು?

ಸ್ವಚ್ಚ ಪರಿಸರ ನಿರ‍್ಮಿಸುವಲ್ಲಿ ನಾವೇ ಪ್ರಮುಕ ಪಾತ್ರದಾರಿಗಳು. ಪರಿಸರವನ್ನು ಮಲಿನಗೊಳಿಸದಿದ್ದರೆ, ಗಲೀಜು ಮಾಡದಿದ್ದರೆ ಸ್ವಚ್ಚ ಪರಿಸರಕ್ಕೆ ಅದು ಕಂಡಿತವಾಗಿಯೂ ನಾವು ಕೊಡುವ ದೊಡ್ಡ ಕೊಡುಗೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕೊಳಕು ಮಾಡಿ ಚೊಕ್ಕ ಮಾಡುವುದಕ್ಕಿಂತ ಕೊಳಕೇ ಮಾಡದಿದ್ದರೆ ಎಶ್ಟೊಂದು ಚೆಂದ ಅಲ್ಲವೇ. ಆದರೆ ಕೊಳಕೇ ಮಾಡದಿರಲು ನಮ್ಮ ಮನಸು ಕೂಡ ಶುದ್ದವಿರಬೇಕು. ಮೊದಲಿಗೆ ನಾವು ನಮ್ಮ ಮನಸ್ತಿತಿಯನ್ನು ಬದಲಾಯಿಸಿಕೊಳ್ಳಬೇಕು. ಕಳ್ಳತನ, ಕಾನೂನು ಬಾಹಿರ ಚಟುವಟಿಕೆಗಳು ಇವೆಲ್ಲ ಹೇಗೆ ಸಾಮಾಜಿಕ ಪಿಡುಗುಗಳು ಎನ್ನುವ ಬಾವನೆ ನಮ್ಮಲಿದೆಯೋ ಹಾಗೆ ನಮ್ಮ ಪರಿಸರವನ್ನು ಮಲಿನಗೊಳಿಸುವುದು ಕೂಡ ಒಂದು ಸಾಮಾಜಿಕ ಪಿಡುಗು ಎನ್ನುವ ಮನಸ್ತಿತಿ ನಮ್ಮಲ್ಲಿರಬೇಕು.

ಆಗಬೇಕಿರುವುದು ಮನಸ್ತಿತಿಯ ಬದಲಾವಣೆ!

ಹೌದು ನಮ್ಮ ಮನಸ್ತಿತಿಯನ್ನು ನಾವು ಬದಲಾಯಿಸಿಕೊಳ್ಳಬೇಕು. ಮೊದಲಿಗೆ ನಮ್ಮನ್ನು ನಾವೇ ಸ್ವಚ್ಚವಾಗಿಟ್ಟುಕೊಳ್ಳಲು ಕಲಿಯಬೇಕು. ಸ್ವಚ್ಚತೆ ಎಂದೊಡನೆ ಸುಮ್ಮನೆ ಕಣ್ಣಿಗೆ ರಾಚುವ ಉಡುಗೆ ತೊಡುಗೆ ಅಲ್ಲ. ಉಡುಗೆ ಸರಳವಾಗಿದ್ದರೂ, ಅದು ಸ್ವಚ್ಚವಾಗಿರಬೇಕು. ಬಾಲ್ಯದ ಒಂದು ಗಟನೆ ನನಗೆ ನೆನಪಿಗೆ ಬರುತ್ತೆ. ನಾನಾಗ 7ನೇ ತರಗತಿಯಲ್ಲಿದ್ದೆ. ನಮ್ಮ ಶಿಕ್ಶಕರು ಒಮ್ಮೆ ತರಗತಿಯಲ್ಲಿ ಹೇಳಿದ್ರು, ‘ನೀವು 40 ಜನ ಇದ್ದೀರಾ ಆದರೆ ನಿಮ್ಮಲ್ಲಿ ತುಂಬಾ ನೀಟಾಗಿ ಕಾಣಿಸಿಕೊಳ್ಳುವುದು ಒಬ್ಬ ಮಾತ್ರ’ ಅಂತ. ನಮಗೆಲ್ಲ ಆಶರ‍್ಯ – ‘ಅವನೇ ಏಕೆ? ಅವನಿಗಿಂತ ಉತ್ತಮ ಬಟ್ಟೆ ಹಾಕಿಕೊಳ್ಳುವವರು ಅನೇಕರಿದ್ದರು, ಅವರಲ್ಲೊಬ್ಬರು ಇರಬಹುದಿತ್ತಲ್ಲಾ?’ ಅಂತ. ಆಗ ನಮ್ಮ ಶಿಕ್ಶಕರು ಕೊಟ್ಟ ಉತ್ತರ, ನಾವು ನಮ್ಮ ಬಗ್ಗೆ ಯೋಚಿಸುವಂತೆ ಮಾಡಿತು. ‘ಅವನ ಬಟ್ಟೆ ಸರಳ ಆದ್ರೆ ಎಶ್ಟೊಂದು ಸ್ವಚ್ಚ, ನೀಟಾಗಿ ಬಾಚಿದ ತಲೆಗೂದಲು, ಆತ ಸ್ವಚ್ಚವಾಗಿಟ್ಟುಕೊಂಡಿದ್ದ ಚಪ್ಪಲಿ, ಚೀಲ, ಪುಸ್ತಕ…’ – ಹೀಗೆ ಅವರು ವಿವರಣೆ ಕೊಟ್ಟಾಗ ನಮಗೆ ನಿಜವಾದ ಸ್ವಚ್ಚತೆಯ ಅರಿವಾಯಿತು.

ನಮ್ಮ ದೇಹವೇ ಒಂದು ದೇಗುಲ . ನಿಜವಾದ ಸ್ವಚ್ಚತೆ ಅಲ್ಲಿಂದಲೇ ಶುರುವಾಗಬೇಕು. ಆಮೇಲೆ ನಮ್ಮ ಮನೆ, ಶಾಲೆ, ಪರಿಸರ ಎಲ್ಲಾ. ಮನೆ ಸ್ವಚ್ಚವಾಗಿಟ್ಟುಕೊಳ್ಳುವುದು ಕೂಡ ಒಂದು ಕಲೆ. ತುಂಬಾ ತಾಳ್ಮೆ ಬೇಕು. ಸಾಮಾನ್ಯವಾಗಿ ಹಳ್ಳಿ ಮನೆ ಎಂದಾಗ ತೋಟ ಇರುತ್ತೆ. ಹಾಗಾಗಿ ಮನೆ ಕೂಡ ಗಜಿಬಿಜಿ ಅಂತ ಹೇಳ್ತಾರೆ. ಕೆಲವರ ಮನೆ, ತೋಟಕ್ಕೆ ಹೋಗಿ ನೋಡಬೇಕು. ಏನು ಚೆಂದ ಮಾರಾಯ್ರೇ. ಮನೆ ಬಿಡಿ, ತೋಟದಲ್ಲಿ ಒಂದೇ ಒಂದು ಅಡಿಕೆ ಮರದ ಸೋಗೆ ಕೆಳಗೆ ಬಿದ್ದಿರೋದು ನಿಮ್ಮ ಕಣ್ಣಿಗೆ ಬೀಳಲ್ಲ. ಹಾಗಂತ ಅಲ್ಲಿ ಅಡಿಕೆ ಸೋಗೆ ಕೆಳಗೆ ಬೀಳಲ್ವಾ? ಕಂಡಿತ ಬಿದ್ದೇ ಬೀಳುತ್ತೆ. ಆದರೆ ಸ್ವಚ್ಚ ಪರಿಸರದ ಮನಸ್ತಿತಿ ಅವರನ್ನು ಆ ತೋಟ , ಮನೆ ಸುಂದರವಾಗಿಟ್ಟುಕೊಳ್ಳಲು ಪ್ರೇರೇಪಿಸುತ್ತದೆ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ?

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳನ್ನು ರೂಪಿಸುವಲ್ಲಿ ಪಾಲಕರ ಹಾಗು ಶಿಕ್ಶಕರ ಪಾತ್ರ ತುಂಬಾ ದೊಡ್ಡದು. ಮಕ್ಕಳಿಗೆ ಬಾಲ್ಯದಿಂದಲೇ ಸ್ವಚ್ಚತೆಯ ಅರಿವು ಮೂಡಿಸಬೇಕು. ಹಾಗೆ ಮಾಡಿದ್ರೆ ಕಡೇ ಪಕ್ಶ ಅವರ ಮಕ್ಕಳ ಕಾಲದಲ್ಲಾದ್ರು ಸ್ವಚ್ಚ ಪರಿಸರದ ಕನಸು ನನಸಾಗಬಹುದು!

ನಾನು ಎರಡನೇ ಇಯತ್ತೆಯಲಿ ಓದುತ್ತಿರುವಾಗ ಒಬ್ಬ ಶಿಕ್ಶಕರಿದ್ರು. ಯಾವಾಗ್ಲೂ ಅವರು ಹೇಳ್ತಾ ಇದ್ದದ್ದು ಒಂದೇ ಒಂದು ಮಾತು. ಶಿಸ್ತು . ‘ಮಕ್ಕಳೇ ನನಗೆ ಶಿಸ್ತು ಮುಕ್ಯ. ಶಿಸ್ತು ಇಲ್ಲದಿದ್ದರೆ ನಾನು ಸಹಿಸಲ್ಲ’ ಅಂತ ಯಾವಾಗಲೂ ಹೇಳುತ್ತಿದ್ದರು.  ನಮ್ಮ ಪುಸ್ತಕ, ಚೀಲ, ಚಪ್ಪಲಿ ಎಲ್ಲವೂ ಸ್ವಚ್ಚವಾಗಿಟ್ಟುಕೊಳ್ಳಬೇಕಿತ್ತು. ಇದು ಆಗ ನಮ್ಮ ಮನಸಿನ ಮೇಲೆ ತುಂಬಾ ಪರಿಣಾಮ ಬೀರಿತ್ತು. ಎಶ್ಟರ ಮಟ್ಟಿಗೆ ಅಂದರೆ ಇಂದಿಗೂ ಅವರ ಮಾತುಗಳು ಮನಸಿನಿಂದ ಅಳಿಸಿ ಹೋಗಿಲ್ಲ.

ಹೌದು, ಮಕ್ಕಳ ಮನಸು ಕಂಪ್ಯೂಟರ್ ನ ಹಾರ‍್ಡ್ ಡಿಸ್ಕ್ ನಂತೆ. ಅದರಲ್ಲಿ ನೀವು ಒಳ್ಳೇದನ್ನು ತುಂಬಿಸಬಹುದು. ಹಾಗೆ ಕೆಟ್ಟದನ್ನು ಕೂಡ. ತುಂಬಾ ಸುಲಬವಾಗಿ ಅವರು ಕಲಿತುಕೊಳ್ಳುತ್ತಾರೆ. ಹಾಗಾಗಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಬೇಕು ಎಂದೇನಾದರೂ ಇದ್ರೆ ಮೊದಲು ಮಕ್ಕಳಿಗೆ ಅದರ ಅರಿವು ಮೂಡಿಸಬೇಕು. ಶಿಕ್ಶಕರು ಆ ಕೆಲಸವನ್ನು ಹೊಣೆಗಾರಿಕೆಯಿಂದ ನಿರ‍್ವಹಿಸಬಲ್ಲರು. ಹಾಗೇ, ತಂದೆ – ತಾಯಂದಿರಲ್ಲಿ ಒಂದು ವಿನಂತಿ. ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ. ನೀವು ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ಹೇಳಿಕೊಡಬೇಕಾಗಿಲ್ಲ. ನೀವು ಸ್ವಚ್ಚತೆಯ ಬಗ್ಗೆ ಗಮನ ಕೊಟ್ಟರೆ ಅವರು ತಮ್ಮಿಂದ ತಾವೇ ಸ್ವಚ್ಚತೆಯನ್ನು ಕಲಿತುಬಿಡುತ್ತಾರೆ.

ಸಮಾಜದ ಮತ್ತು ಸಾಮಾಜಿಕ ಹೊಣೆಗಾರಿಕೆ

ಸ್ವಚ್ಚ ಊರಿನ ಕಲ್ಪನೆ ಬೇರೆಯವರಿಂದ ನಾವು ಕಲಿತುಕೊಳ್ಳಬೇಕಾಗಿಲ್ಲ. ‘ಇದೊಂದು ನಮ್ಮೆಲ್ಲರಲ್ಲೂ ಇರಬೇಕಾದ ಸಾಮಾಜಿಕ ಹೊಣೆಗಾರಿಕೆ’ ಎಂಬ ಅರಿವು ನಮ್ಮಲಿರಬೇಕು. ನಮ್ಮ ಮನೆಯನ್ನು ಪ್ರೀತಿಸದಶ್ಟೇ ನಾವು ನಮ್ಮ ಊರನ್ನು , ಪರಿಸರವನ್ನು ಪ್ರೀತಿಸಿದಾಗ ಸ್ವಚ್ಚತೆ ತನ್ನಿಂದ ತಾನೇ ಮೂಡಿಬರುತ್ತೆ. 22 ವರ‍್ಶದ ಹಿಂದಿನ ಮಾತು, ನಮ್ಮ ಊರಿನಲ್ಲಿ ಪಂಚಾಯತಿಯ ಒಂದು ಚಿಕ್ಕ ಅಂಗಡಿಯನ್ನು ಬಾಡಿಗೆಗೆ ಪಡೆದು ನಾವು ನಡೆಸುತ್ತಿದ್ವಿ. ನಾನಾಗ puc ಯಲ್ಲಿದ್ದೆ. ನಮ್ಮ ಅಂಗಡಿಯ ಪಕ್ಕದಲ್ಲೇ  ಸುಂದರವಾದ ಬಸ್ ತಂಗುದಾಣ . ಹಳ್ಳಿಯೆಂದ ಮೇಲೆ ಕೇಳಬೇಕೆ! ಮನೆಗಳು ದೂರ ದೂರ. ಬಿಸಿಲಿನಲ್ಲಿ ನಡೆದುಕೊಂಡು ಬಂದ ಜನ ಆ ತಂಗುದಾಣದಲ್ಲಿ ಕೊಂಚ ಹೊತ್ತು ಕುಳಿತುಕೊಂಡು ದಣಿವಾರಿಸಿಕೊಳ್ಳುತಿದ್ದರು. ಆದರೆ ಆ ತಂಗುದಾಣದ ತುಂಬಾ ಪಾನ್ ಪರಾಗು, ಬೀಡಿ, ಸಿಗರೇಟಿನ ತುಂಡುಗಳು. ಜನರು ಅಲ್ಲೇ ಪಾನ್ ಪರಾಗ್ ತಿಂದು ಅಲ್ಲಲ್ಲೇ ಉಗಿಯುತಿದ್ರು.

ನಾನು ವಾರಕೊಮ್ಮೆ ಕಸ ಗುಡಿಸಿ ನೀರು ಹಾಕಿ ಆ ತಂಗುದಾಣವನ್ನು ತೊಳೆಯುತ್ತಿದ್ದೆ. ಆದರೆ ಜನರಿಗೆ ಅಲ್ಲಿ ಗಲೀಜು ಮಾಡಬೇಡಿ ಎಂದು ಹೇಳುವ ದೈರ‍್ಯ ತೋರಿರಲಿಲ್ಲ. ಅಶ್ಟಕ್ಕೂ ಜನರಿಗೆ ತಿಳಿ ಹೇಳುವ ಪ್ರಾಯ ಕೂಡ ಅದಾಗಿರಲಿಲ್ಲ ಅಶ್ಟೇ ಅಲ್ದೆ ಬಹುಶ ಸ್ವಾರ‍್ತ ಕೂಡ ಇತ್ತು. ನಮ್ಮ ಅಂಗಡಿಯಿಂದ ತಾನೇ ಅವರು ಪಾನ್ ಪರಾಗು ತೆಗೆದುಕೊಳ್ಳುತಿದ್ದದ್ದು! ಆದ್ರೂ ಒಂದು ಪ್ರಶ್ನೆ ನನ್ನನ್ನು ಕಾಡುತ್ತಿತ್ತು – ‘ಜನ ಹೊಣೆಗಾರಿಕೆಯಿಂದ ಯಾಕೆ ವರ‍್ತಿಸಲ್ಲ?’ ಅಂತ. ನಮ್ಮ ಹೊಣೆಗಾರಿಕೆಯನ್ನು ನಾವು ಅರಿತುಕೊಂಡ ದಿನ, ಸ್ವಚ್ಚ ನಗರದ ಕಲ್ಪನೆ ನನಸಾಗಬಹುದೇನೋ.

ನಮ್ಮಿಂದ ಇದು ಸಾದ್ಯ!

ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಕಂಡಿತವಾಗಿಯೂ ನಮಗೆ ಸಾದ್ಯವಿದೆ. ನಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಲು ಕೆಲವೊಂದನ್ನು ನಾವು ತುಂಬಾ ಸುಲಬವಾಗಿ ಮಾಡಬಹುದು.

  • ಮನೆಯಲ್ಲಿನ ಕಸ-ಕಡ್ಡಿಗಳನ್ನು ಸಾವಯವ ಗೊಬ್ಬರವಾಗಿ ಪರಿವರ‍್ತಿಸಿ ಬೇಸಾಯಕ್ಕೆ ಇಲ್ಲವೇ ಹೂದೋಟ ಮಾಡಲು ಬಳಸಿಕೊಳ್ಳಬಹುದು. ಈಗೀಗ ಹೊಸ ಹೊಸ ಪದ್ದತಿಗಳು ಕೂಡ ಬಂದಿವೆ.
  • ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಬೇಕು. ಪ್ಲಾಸ್ಟಿಕ್ ಬದಲಿಗೆ ಬಿದಿರಿನ ಬುಟ್ಟಿ, ಬಟ್ಟೆ ಚೀಲಗಳನ್ನು ಬಳಸಬಹುದು.
  • ದುಶ್ಚಟಗಳನ್ನು ಬಿಟ್ಟು ಬಿಡುವುದು. ಇದರಿಂದ ಪರಿಸರವೂ ಗಲೀಜಾಗುವುದಿಲ್ಲ. ಅರೋಗ್ಯ ಬಾಗ್ಯವೂ ಸಿಗುವುದು.
  • ಶುಚಿತ್ವವನ್ನು ಕಾಪಾಡದವರಿಗೆ ತಿಳಿಹೇಳುವ ಅಬ್ಯಾಸವನ್ನು ನಾವು ಬೆಳೆಸಿಕೊಳ್ಳಬೇಕು. ಪರಿಸರಕ್ಕೆ ಹಾನಿ ಮಾಡುವವರಲ್ಲಿ ಅದು ತಪ್ಪು ಎಂದು ಅರಿವು ಮೂಡಿಸುವ ಪ್ರಯತ್ನ ಮಾಡಬೇಕು. ಪರಿಸರವನ್ನು ಗಲೀಜು ಮಾಡುವುದು ತಪ್ಪು ಎಂಬ ಅರಿವು ಯಾವಾಗ ಮೂಡುವುದೋ ಆಗ ಪರಿಸರದ ವಿಚಾರವಾಗಿ ಸುದಾರಣೆಯೂ ಕಂಡುಬರುತ್ತದೆ.
  • ಎಲ್ಲಂದರಲ್ಲಿ ಕಸ ಹಾಕಬಾರದು, ಬಿಸಾಡಬಾರದು.
  • ಪಟ್ಟಣಗಳಲ್ಲಿ ಕೂಡ ಅಶ್ಟೇ. ಸುತ್ತಲಿನ ಪರಿಸರವನ್ನು ಸುಂದರವಾಗಿಟ್ಟುಕೊಳ್ಳುವಲ್ಲಿ ಮುಕ್ಯವಾಗಿ ಅಂಗಡಿ ಮಾಲೀಕರ ಕಾಳಜಿಯ ಅಗತ್ಯವೂ ಇದೆ. ತಾಜ್ಯವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು.
  • ಹೂಕುಂಡಗಳನ್ನು ಇಟ್ಟು ಗಿಡಗಳನ್ನೂ ಬೆಳೆಸಿದರೆ, ನೋಡಲು ಚೆಂದ. ವಾತಾವರಣಕ್ಕೂ ಒಳ್ಳೆಯದು.

ಹೀಗೆ ಮಾಡಿದರೆ ನಮ್ಮ ಪರಿಸರವನ್ನು ನಾವು ಸುಂದರವಾಗಿಟ್ಟುಕೊಳ್ಳಲು ಕಂಡಿತ ಸಾದ್ಯವಿದೆ. ನಾವು ಮನಸು ಮಾಡಬೇಕಶ್ಟೆ. ಏನಂತೀರಿ?

( ಚಿತ್ರಸೆಲೆ : a1disposal.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: