ಹೊತ್ತಿಗೆಯೊಂದಿಗೆ ಕ್ಶಣ ಹೊತ್ತು

ಪ್ರಿಯದರ‍್ಶಿನಿ ಶೆಟ್ಟರ್.

ಪುಸ್ತಕಗಳು

ಪುಸ್ತಕಗಳು ನಮ್ಮೆಲ್ಲರ ಜೀವನದಲ್ಲಿ ಬಹುಮುಕ್ಯ ಪಾತ್ರ ವಹಿಸುತ್ತವೆ. ಒಬ್ಬ ಮನುಶ್ಯನ ವ್ಯಕ್ತಿತ್ವ ವಿಕಸಿಸುವಲ್ಲಿ ಪುಸ್ತಕಗಳು ಅವಶ್ಯಕವಾಗಿವೆ. ಪುಸ್ತಕವು ಜ್ನಾನಬಂಡಾರದ ಕೀಲಿಕೈ ಇದ್ದಂತೆ. ಪುಸ್ತಕಗಳಿಗೆ ಅಂತ್ಯ ಎನ್ನುವುದೇ ಇಲ್ಲ. ಅವು ನಮಗೆ ಅತ್ಯುತ್ತಮ ಗೆಳೆಯರಿದ್ದಂತೆ. ವಿವಿದ ವಯೋಮಾನದವರಿಗಾಗಿ ವಿವಿದ ಅಬಿರುಚಿಯವರಿಗಾಗಿ ಅನೇಕ ಪ್ರಕಾರದ ಪುಸ್ತಕಗಳಿವೆ. ಮಕ್ಕಳ ಕತಾ ಸಂಗ್ರಹಗಳು, ಕವನ ಸಂಕಲನಗಳು, ಗ್ರಂತಗಳು, ಕಾದಂಬರಿಗಳು, ವೈಜ್ನಾನಿಕ ಪುಸ್ತಕಗಳು, ನಾಟಕಗಳು, ಆತ್ಮಕತೆಗಳು, ವ್ಯಕ್ತಿತ್ವವಿಕಸನ ಮಾಲೆ, ಹರಟೆ, ಪರಿಸರ, ಜೀವನಚರಿತ್ರೆ, ಆರೋಗ್ಯ ಮಾಲೆ, ಕಾನೂನು, ಪ್ರವಾಸ ಕತನ ಹೀಗೆ ಹಲವಾರು…

ಶತಮಾನಗಳ ಹಿಂದೆ, ತಾಳೆಗರಿಯಲ್ಲಿ ಅಕ್ಶರ ಮೂಡಿಸಿದಾಗ ಪುಸ್ತಕಗಳು ಹುಟ್ಟಿಕೊಂಡವು. ಕಾಗದ ಬಂದ ಮೇಲೆ ಟೈಪ್ ರೈಟರ್‍ನಲ್ಲಿ ಅಕ್ಶರ ಜೋಡಿಸಿ ಮುದ್ರಣಗೊಂಡವು. ಆದುನಿಕ ಕಾಲದಲ್ಲಿ ಕಂಪ್ಯೂಟರ್, ಅಂತರ್‍ಜಾಲ ಸೌಲಬ್ಯ ಉಪಯೋಗಿಸಿ ಪುಸ್ತಕ ಕೊಂಡು ಓದಬಹುದು. ಒಂದು ಪುಸ್ತಕ ಲೇಕಕ/ಲೇಕಕಿಯಿಂದ ರಚನೆಯಾಗಿ ತಿದ್ದುಪಡಿಯಾಗಿ, ಅನೇಕರ ಅಬಿಪ್ರಾಯ ಪಡೆದು, ಸುಂದರವಾದ ಮುಕಪುಟ, ಮುನ್ನುಡಿ, ಚಿತ್ರಗಳು, ಅರ‍್ಪಣೆ, ಪರಿವಿಡಿ, ಒಳಗಿನ ಹೂರಣ, ಕೊನೆಗೆ ಬೆನ್ನುಡಿ ಬರೆಯಿಸಿಕೊಂಡು ಪ್ರಕಾಶಕರ ಕೈಯಿಂದ ಓದುಗರ ಕೈ ಸೇರುವುದಕ್ಕೆ ತನ್ನದೇ ಸಮಯ ತೆಗೆದುಕೊಳ್ಳುತ್ತದೆ. ಅತ್ಯುತ್ತಮ ಪುಸ್ತಕಗಳಿಗೆ ಪ್ರಶಸ್ತಿ ಬಂದಾಗ ಅವುಗಳ ಕ್ಯಾತಿ ಹೆಚ್ಚುತ್ತದೆ. ಕೆಲವು ಪುಸ್ತಕಗಳಂತೂ “ಬೆಸ್ಟ್ ಸೆಲ್ಲರ‍್” ಹಣೆಪಟ್ಟಿ ಹೊತ್ತುಕೊಂಡು ಮರು ಮುದ್ರಣ ಕಾಣುತ್ತವೆ.

ನಾವು ನಮ್ಮ ಅಬಿರುಚಿಗೆ ತಕ್ಕ ಪುಸ್ತಕಗಳನ್ನು ತರುವುದು, ಓದುವುದು, ಸಂಗ್ರಹಿಸುವುದು ನಮ್ಮ ಆಯ್ಕೆ. ಕೆಲವು ಪುಸ್ತಕಗಳಲ್ಲಿನ ಲೇಕಕರ ಅನುಬವ ಮತ್ತು ಪ್ರಸಂಗಗಳು ನಮಗೆ ವಾಸ್ತವದ ಅರಿವು ಮೂಡಿಸುತ್ತವೆ. ಸಮಾಜದ ಆಗು-ಹೋಗುಗಳು ನಮಗೆ ಅರ‍್ತವಾಗುವುದು ಪುಸ್ತಕದಿಂದಲೇ. ಅವು ನಮ್ಮನ್ನು ಚಿಂತನೆಗೊಳಪಡಿಸುತ್ತವೆ. ಪುಸ್ತಕದ ಒಕ್ಕಣೆಯನ್ನೇ ಅರಿಯದವರೊಂದಿಗೆ ನಮ್ಮ ಅಬಿಪ್ರಾಯಗಳನ್ನು ಹಂಚಿಕೊಳ್ಳುವಾಗ ಮೊದಲು ಆ ಪುಸ್ತಕ ಹಾಗೂ ಅದರ ಲೇಕಕರನ್ನು ಪರಿಚಯಿಸುವುದು ಅಗತ್ಯ. ಪುಸ್ತಕಗಳು ನಮಗೆ ಸಂಸ್ಕ್ರುತಿಯನ್ನು ಕಲಿಸುತ್ತವೆ. ಪೂರ‍್ವಜರು ತಮ್ಮ ಮುಂದಿನ ಪೀಳಿಗೆಗೆ ಬಿಟ್ಟುಹೋಗುವ ಅಮೂಲ್ಯ ಆಸ್ತಿಗಳೆಂದರೆ ಪುಸ್ತಕಗಳು.

ಪುಸ್ತಕಗಳನ್ನು ಒಂದು ಬಾಶೆಯಿಂದ ಮತ್ತೊಂದು ಬಾಶೆಗೆ ಅನುವಾದಿಸುವುದೂ ಕೂಡ ಒಂದು ಸಾಹಿತ್ಯ ಪ್ರಕಾರವೇ ಆಗಿದೆ. ಗದ್ಯವನ್ನು ಅನುವಾದಿಸುವುದು ಪದ್ಯವನ್ನು ಅನುವಾದಿಸುವಶ್ಟು ಕಶ್ಟವಲ್ಲ. ಉದಾಹರಣೆಗೆ, ಕುವೆಂಪುರವರ “ಅನಿಕೇತನ” ಪದ್ಯವನ್ನು ವಿ.ಕ್ರು. ಗೋಕಾಕರು ಇಂಗ್ಲೀಶ್ ಬಾಶೆಗೆ, ಮೂಲ ಪದ್ಯಕ್ಕೆ ಸ್ವಲ್ಪವೂ ಅರ‍್ತವ್ಯತ್ಯಾಸವಾಗದಂತೆ ಕನ್ನಡದ ಪದಗಳು ಬಿಟ್ಟುಹೋಗದಂತೆ ಅನುವಾದ ಮಾಡಿದ್ದಾರೆ. ಅತ್ಯುತ್ತಮ ಕ್ರುತಿಗಳು ಬೇರೆ ಬಾಶೆಗಳಿಗೆ ಅನುವಾದಗೊಳ್ಳುವುದು ಸಾಮಾನ್ಯ. ಇದರಿಂದ ಬೇರೆ ಪ್ರದೇಶದ ಸಂಸ್ಕ್ರುತಿ, ಸಂಪ್ರದಾಯ, ಸಾಹಿತ್ಯ, ಜನಜೀವನ, ಕ್ರೀಡೆಗಳು, ಹಬ್ಬಗಳು, ಕಲೆಗಳು, ಮುಕ್ಯವಾಗಿ ಸಾಹಿತಿಗಳು – ಇವರೆಲ್ಲದರ ಪರಿಚಯವಾಗುತ್ತದೆ.

ನಾವು ಕೆಲವೊಮ್ಮೆ ಪುಸ್ತಕಗಳು ಕಡಿಮೆ, ರಿಯಾಯಿತಿ ದರದಲ್ಲಿ ಸಿಗುತ್ತವೆ ಎಂಬ ಕಾರಣಕ್ಕೆ ಅತವಾ ಅಪರೂಪದ ಕ್ರುತಿ ಎಂಬ ಕಾರಣಕ್ಕೆ ಅವುಗಳನ್ನು ಸಂಗ್ರಹಿಸಿ, ‘ಅವು ಮನೆಯಲ್ಲಿಯೇ ಇರುತ್ತವೆ ಬೇಕಾದಾಗ ಓದಬಹುದು’ ಎಂದು ಓದದೇ ಬಿಡುತ್ತೇವೆ. ಇನ್ನು ಕೆಲವೊಮ್ಮೆ ಕೊಳ್ಳಲೇಬೇಕಾದ ಪುಸ್ತಕಗಳಿರುತ್ತವೆ. ಉಡುಗೊರೆ, ಗೌರವ ಪ್ರತಿಗಳು ಹೇರಳವಾಗುತ್ತವೆ. ಒಂದೇ ಪುಸ್ತಕದ ಎರಡು ಅತವಾ ಹೆಚ್ಚು ಪ್ರತಿಗಳು ಕೆಲವೊಮ್ಮೆ ನಮ್ಮ ಸಂಗ್ರಹದಲ್ಲಿರುತ್ತವೆ. ಬರೀ ಪುಸ್ತಕ ಸಂಗ್ರಹವಿದ್ದರೆ ಸಾಲದು. ಅವುಗಳನ್ನು ಶಿಸ್ತಿನಿಂದ ಇಟ್ಟುಕೊಳ್ಳುವುದು ಬಹಳ ಮುಕ್ಯ. ಅವುಗಳನ್ನು ಹಲವು ಬಾಗಗಳಾಗಿ ವಿಂಗಡಿಸಿ ಇಡುವುದರಿಂದ ನಮಗೆ ಬೇಕಾದಾಗ ಬೇಕಾದ ಪುಸ್ತಕ ಬಳಸಬಹುದು. ಪುಸ್ತಕದ ಹಾಳೆಯ ತುದಿ ಮಡಚುವುದರಿಂದ ನಾವು ಬೇರೆಯವರಿಗೆ ನಮ್ಮ ಪುಸ್ತಕಗಳ ಬಗೆಗಿರುವ ಅಪ್ರಿಯತೆಯನ್ನು ತೋರಿಸಿದಂತಾಗುತ್ತದೆ. ಬದಲಾಗಿ ಬುಕ್ ಮಾರ‍್ಕ್ ಉಪಯೋಗಿಸುವುದರಿಂದ ಹೊತ್ತಿಗೆಯ ಅಂದ  ಕಾಪಾಡಿಕೊಂಡಂತಾಗುತ್ತದೆ.

ಮುಕಪುಟ

ಪುಸ್ತಕದ ಹೆಸರಿಗಿಂತ ಮೊದಲು ನಮ್ಮ ಕಣ್ಣಿಗೆ ಬೀಳುವುದು ಅಂದವಾದ ಮುಕಪುಟ. ಸಾಹಿತಿಯೋರ‍್ವರು ಹೇಳುವಂತೆ, ಪುಸ್ತಕದೊಳಗಿನ ಹೂರಣದಂತೆ ಪುಸ್ತಕದ ಮೇಲಿನ ಓರಣವೂ ಮುಕ್ಯ. ಬಣ್ಣ ಬಣ್ಣದ, ಅರ‍್ತಪೂರ‍್ಣವಾದ ಮುಕಪುಟ ಪುಸ್ತಕದ ಚೆಂದವನ್ನು ಹೆಚ್ಚಿಸುತ್ತದೆ. ರೇಕಾಚಿತ್ರಗಳು, ಪ್ರಸಿದ್ದ ಚಿತ್ರಗಾರರ ಪೇಂಟಿಂಗ್‍ಗಳು, ಸಾಪ್ಟವೇರ್ ಬಳಸಿ ತಯಾರಿಸಿದ ಚಿತ್ರಗಳು, ಚಾಯಾಚಿತ್ರಗಳು, ಇತ್ಯಾದಿ- ಇವು ಮುಕಪುಟವನ್ನು ಅಲಂಕರಿಸುತ್ತವೆ. ಪೂರ‍್ಣಚಂದ್ರ ತೇಜಸ್ವಿಯವರ ‘ಪರಿಸರದ ಕತೆ’ ಪುಸ್ತಕದ ಮುಕಪುಟಕ್ಕೆ ಅವರೇ ತೆಗೆದ ಪಕ್ಶಿಯ ಪೋಟೊ ಬಳಸಿದ್ದಾರೆ.

ಡಾ. ಶಿವರಾಮ ಕಾರಂತರ ಜೀವ ವಿಜ್ನಾನ ಕುರಿತ ಪುಸ್ತಕಗಳ ಮೇಲೆ ಪ್ರಾಣಿಗಳ ಚಿತ್ರಗಳನ್ನು ಚಿತ್ರಿಸಲಾಗಿದೆ. ‘ದಂಗೆಯ ದಿನಗಳು’ ಪುಸ್ತಕದ ಮುಕಪುಟ ನೋಡಿದಾಗ ಸಿಪಾಯಿ ದಂಗೆಯು ನೆನಪಾಗುತ್ತದೆ. ‘ಜೀವಜಗತ್ತಿನ ಕೌತುಕಗಳು’ ಪುಸ್ತಕ ಮಾಲೆಯಲ್ಲಿ ಪ್ರಕಟವಾದ ಪುಸ್ತಕಗಳ ಮೇಲೆ ಆಯಾ ವಿಶಯಕ್ಕೆ ತಕ್ಕಂತೆ ಪ್ರಾಣಿ-ಪಕ್ಶಿಗಳ ಚಿತ್ರ ಬಳಸಿದ್ದಾರೆ. ವಿಶ್ವ ಕತಾ ಕೋಶದಲ್ಲಿ ಪ್ರಕಟವಾದ ಪುಸ್ತಕಗಳಿಗೆ ಮೊದಲನೆಯ ಕತೆಗೆ ಸಂಬಂದಿಸಿದ ಚಿತ್ರಗಳನ್ನು ಬಳಸಲಾಗಿದೆ.

ಇನ್ನು ಪಟ್ಯ ಪುಸ್ತಕಗಳ ಮೇಲೆ ಅವುಗಳ ವಿಶಯಗಳಿಗೆ ಸಂಬಂದಿಸಿದ ಹಾಗೆ ಮುಕಪುಟವಿರುತ್ತದೆ. ಉದಾಹರಣೆಗೆ, ವಿಜ್ನಾನಿಗಳು, ರೇಕಾಗಣಿತವನ್ನು ಸೂಚಿಸುವ ಚಿತ್ರಗಳು ಮತ್ತು ಉಪಕರಣಗಳು, ನಕ್ಶತ್ರಪುಂಜ, ಗ್ರಹಗಳು, ಸಂವಿದಾನ, ಸಂಸತ್ತು, ಮಾನವ ಶರೀರ, ಸೂಕ್ಶ್ಮದರ‍್ಶಕ, ಇತ್ಯಾದಿ…

ಕತಾಸಂಕಲನ, ಕವನಸಂಕಲನಗಳ ಮೇಲೆ ವರ‍್ಣಮಯವಾದ, ಸುಂದರ ಮುಕಪುಟಗಳು ಕಾಣಸಿಗುತ್ತವೆ. ಹಾಗೆಯೇ ಕೆಲವು ಪ್ರಕಾಶನಗಳು ಹೊರತಂದಿರುವ ಜ್ನಾನಪೀಟ ಪ್ರಶಸ್ತಿ ಪುರಸ್ಕ್ರುತರನ್ನು ಹಾಗೂ ಬಾರತದ ವಿಜ್ನಾನಿಗಳನ್ನು ಕುರಿತ ಕಿರುಹೊತ್ತಿಗೆಗಳಿಗೆ ಅವರವರ ಬಾವಚಿತ್ರಗಳೇ ಮುಕಪುಟಗಳಾಗಿವೆ. ಕೆಲವು ಕ್ರುತಿಗಳನ್ನು ನೋಡಿದರೆ ಅವುಗಳ ಮುಕಪುಟ ವಿನ್ಯಾಸಕ್ಕೆ ಪ್ರಾಮುಕ್ಯತೆ ಕೊಡದಿರುವುದು ಗಮನಾರ‍್ಹ. ಇತ್ತೀಚೆಗೆ ‘ಚಂದ ಪುಸ್ತಕ’ ಪ್ರಕಾಶನವು ವಸುದೇಂದ್ರರವರ ‘ವರ‍್ಣಮಯ’ ಲಲಿತ ಪ್ರಬಂದಗಳ ಸಂಕಲನಕ್ಕೆ ಮುಕಪುಟ ಸ್ಪರ‍್ದೆ ಏರ‍್ಪಡಿಸಿತ್ತು. ಇದೊಂದು ಅಬಿನಂದನಾರ‍್ಹ ಯೋಜನೆಯೇ ಸರಿ.

ಅರ‍್ಪಣೆ

ಪುಸ್ತಕದ ಮೊದಲ ಪುಟದ ಮೇಲೆ ‘ಅರ‍್ಪಣೆ’ ಎಂದು ಬರೆದು ಕೆಳಗೆ ಆ ಪುಸ್ತಕ ___ಗೆ ಅರ‍್ಪಣೆ ಎಂದಿರುತ್ತದೆ. ಲೇಕಕರು ಈ ಬಿಟ್ಟ ಸ್ತಳದಲ್ಲಿ ತಂದೆ-ತಾಯಿಯರ, ಮಾರ‍್ಗದರ‍್ಶಕರ, ಶೈಕ್ಶಣಿಕವಾಗಿಯೋ, ಆರ‍್ತಿಕವಾಗಿಯೋ ಸಹಾಯಹಸ್ತ ನೀಡಿದವರ ಅತವಾ ಇನ್ಯಾರೋ ಪ್ರೀತಿಪಾತ್ರರ ಹೆಸರನ್ನು ಲೇಕಕರು ತುಂಬಿಸುತ್ತಾರೆ. ಇದೊಂದು ಗೌರವ ಸೂಚನೆಯ ಸಂಕೇತ. ಹೆಸರಾಂತ ಲೇಕಕರೊಬ್ಬರು ತಮ್ಮ ಸೋಲು-ನಿರಾಸೆಗಳಿಗೆ ತಮ್ಮ ಕ್ರುತಿಯನ್ನು ಅರ‍್ಪಿಸಿದ್ದಾರೆ. ಮತ್ತೋರ‍್ವರು ತಮ್ಮ ಕ್ರುತಿಯನ್ನು ಬೆಂಗಳೂರಿನ ಟ್ರಾಪಿಕ್‍ಗೆ ಮತ್ತು ತನ್ನ ಕಾರಿನ ಚಾಲಕನಿಗೆ ಅರ‍್ಪಿಸಿದ್ದಾರೆ.

(ಚಿತ್ರ ಸೆಲೆ: projectrenaissance.com)

ನಿಮಗೆ ಹಿಡಿಸಬಹುದಾದ ಬರಹಗಳು

No Responses

  1. Pushpalatha J says:

    ‘…….ಕ್ಯಣ ಹೊತ್ತು ‘ಎನ್ನುವುದಕ್ಕಿಂತ , ‘ ಹೊತ್ತಿಗೆಯೊಂದಿಗೆ ಚಣ ಹೊತ್ತು ‘ ಎಂದು
    ತಲೆಬರಹ ಕೊಡಬಹುದಿತ್ತು. ಪುಸ್ತಕ ಮನದ ಸಂಗತಿ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ . ನಮ್ಮ
    ಮನಸ್ಸನ್ನ ಎಷ್ಟು ಪವಿತ್ರವಾಗಿ ಕಾಪಾದುತ್ತೆವೋ ಅಷ್ಟೇ ಪುಸ್ತಕಗಳನ್ನು ಜೋಪಾನ ಮಾಡಬೇಕು.

ಅನಿಸಿಕೆ ಬರೆಯಿರಿ: