ಸಂಕ್ರಾಂತಿ : ಸಹಬಾಳ್ವೆಯ ಮಹತ್ವ ಸಾರುವ ಹಬ್ಬ

ವೆಂಕಟೇಶ ಚಾಗಿ.

ಸಂಕ್ರಾಂತಿ, Sankranti

ಬಾರತಮಾತೆಯ ಮಡಿಲಲ್ಲಿ ಬಹಳಶ್ಟು ವೈವಿದ್ಯತೆ ಹೊಂದಿರುವ ಸಂಸ್ಕ್ರುತಿಗಳನ್ನು ಕಾಣಬಹುದು. ಮಣ್ಣಿನ ಮಕ್ಕಳ ಹಬ್ಬಗಳು, ಸಡಗರಗಳು ವಿಬಿನ್ನ ವೈಶಿಶ್ಟ್ಯ. ನಿಸರ‍್ಗಕ್ಕೂ ಬದುಕಿಗೂ ಅದೆಂತಹ ಅನ್ಯೋನ್ಯ ಸಂಬಂದ . ಪ್ರತಿ ಕುಶಿಯೂ ಸಡಗರವೂ, ಸಂಬ್ರಮವು ಪ್ರಕ್ರುತಿಯೊಂದಿಗೆ ಸಮಾಗಮ. ಇಂತಹ ವೈಶಿಶ್ಟ್ಯಗಳ ಮುತ್ತುಗಳಲ್ಲಿ ಮಕರಸಂಕ್ರಮಣ ಒಂದು.

ರವಿಯು ದನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸುದಿನ ಮಕರಸಂಕ್ರಾಂತಿ. ಪುಣ್ಯಕಾಲ ಶುಬಕಾಲ ಪ್ರಾರಂಬವಾಯಿತು ಎಂಬ ನಂಬಿಕೆ. ಹಗಲು ದೀರ‍್ಗವಾಗಿ ಕತ್ತಲು ಕಡಿಮೆಯಾಗಿ ಬೆಳಕೆಂಬ ಸುಕವು ಹೆಚ್ಚುತ್ತ ದುಕ್ಕವೆಂಬ ಕತ್ತಲು ಕಡಿಮೆಯಾಗುವ ಕಾಲ ಉತ್ತರಾಯಣ ಕಾಲ. ಅನ್ನದಾತನ ಬೆವರ ಹನಿಗಳಿಂದ ಬೆಳೆದ ಬೆಳೆಗೆ, ಬೆಳೆಯ ನೀಡಿದ ಬೂತಾಯಿಗೆ ಕ್ರುತಜ್ನತೆ ಸಲ್ಲಿಸುವ ಸಂಪ್ರದಾಯ. ಕ್ರುಶಿ ಚಟುವಟಿಕೆಗಳಲ್ಲಿ ರೈತನಿಗೆ ನೆರವಾಗಿ ತನ್ನ ಬದುಕನ್ನೇ ಸವೆಸಿದ ಬಸವನನ್ನು ಕಿಚ್ಚು ಹಾಯಿಸಿ ದನ್ಯವಾದ ಸಲ್ಲಿಸುವ ಹಬ್ಬ. ಬೆಳೆಯ ರಾಶಿ ಕಣ್ಣಿಗೆ ಹಿತವಾದರೆ ರಂಗುರಂಗಿನ ಉಡುಗೆ, ಚುಮುಚುಮು ಚಳಿಯಲ್ಲಿ ಎಳ್ಳು-ಬೆಲ್ಲದ ಬಲ. ಸದಾಶಯದ, ಸಹಬಾಳ್ವೆ-ಸಹಕಾರದ ನುಡಿಗಳು ಎಲ್ಲರೂ ಬದುಕಬೇಕಾದ ರೀತಿಯನ್ನು ತಿಳಿಸುವಂತವು.

ಮಕರಸಂಕ್ರಾಂತಿ ಎಂಬುದು ಉತ್ತರಾಯಣ ಪುಣ್ಯಕಾಲವೆ ಸರಿ.  ಕೇವಲ ಬದುಕನ್ನು ಮಾತ್ರವಲ್ಲ ಸಾವೆಂಬ ಶಾಂತಿಯ ಹೊಂದಲೂ ಉತ್ತರಾಯಣ ಶ್ರೇಶ್ಟವೆಂದು ಹೇಳಲಾಗಿದೆ. ಮಹಾಬಾರತದ ಬೀಶ್ಮ ದೇಹ ತ್ಯಜಿಸಲು ಶರಶಯ್ಯೆಯಲ್ಲಿ ಉತ್ತರಾಯಣದ ಕಾಲದವರೆಗೂ ಹರಿಸ್ಮರಣೆ ಮಾಡುತ್ತಾ ಕಾದಿದ್ದರು ಎಂಬುದನ್ನು ಓದಿದ್ದೇವೆ. ಸಮಸ್ತ ದೇವತಾ ಕಾರ‍್ಯ ಶುಬಕಾರ‍್ಯಗಳಿಗೆ ಶ್ರೇಶ್ಟ ಕಾಲ ಸಂಕ್ರಮಣ ಕಾಲ. ಈ ಪುಣ್ಯ ಕಾಲದಲ್ಲಿ ಸೂರ‍್ಯನನ್ನು ಆರಾದಿಸಲು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳುಬೆಲ್ಲ ಹಂಚುವುದು ರೂಡಿ. ಮಹಿಳೆಯರಿಗೆ ಮಕ್ಕಳಿಗೆ ಸಂಬ್ರಮವೋ ಸಂಬ್ರಮ. ಮಾನವನ ಬದುಕು ನಿಸರ‍್ಗದ ಬದಲಾವಣೆಯೊಂದಿಗೆ ಹೊಂದಿಕೊಳ್ಳಲು ಹಿರಿಯರು ರೂಡಿಸಿಕೊಂಡು ಬಂದ ಒಂದು ಮಹೋನ್ನತ ಮಹದಾಶೆಯ ಸಂಪ್ರದಾಯ. ಎಲ್ಲರ ಜೀವನದಲ್ಲಿ ಶಾಂತಿ ನೆಮ್ಮದಿ ಸುಕ ತುಂಬಿ ಎಲ್ಲರ ಮನದಲ್ಲೂ ಸಹಬಾಳ್ವೆಯ ಕಿಚ್ಚು ಹಚ್ಚುವ ಏಕೈಕ ಹಬ್ಬ ಸಂಕ್ರಾಂತಿ.

ಮಾನವ ಸಂಕ್ರಾಂತಿ ಮರೆತರು ನಿಸರ‍್ಗದ ಸಂಕ್ರಾಂತಿ ಎಂದಿಗೂ ಮರೆಯಾಗುವುದಿಲ್ಲ. ಸಂಕ್ರಾಂತಿ ಮರೆತ ದಿನದಿಂದಲೇ ಮಾನವನ ಅವಸಾನ ಕಚಿತ ಎಂದು ಹೇಳಬಹುದು. ಅದಕ್ಕೆಂದೇ ಮಹಾನ್ ಯೋಗಿಗಳು ಗ್ನಾನಿಗಳು ಸಂಕ್ರಾಂತಿಯ ಮಹತ್ವವನ್ನು ಸಾರಿ ಹೇಳಿದ್ದಾರೆ. ಮನುಶ್ಯ ಜನುಮ ಸಂಕ್ರಾಂತಿ ಮಹತ್ವ ಮರೆಯದಿರಲಿ.

( ಚಿತ್ರ ಸೆಲೆ: apk-cloud.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: