ಕುವೆಂಪು ಕವನಗಳ ಓದು – 6ನೆಯ ಕಂತು

ಸಿ.ಪಿ.ನಾಗರಾಜ.

ಕುವೆಂಪು, kuvempu

ರೈತನ ದೃಷ್ಟಿ

ಕರಿಯರದೊ ಬಿಳಿಯರದೊ ಯಾರದಾದರೆ ಏನು
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ
ವಿಜಯನಗರವೊ ಮೊಗಲರಾಳ್ವಿಕೆಯೊ ಇಂಗ್ಲಿಷರೊ
ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ
ಕತ್ತಿ ಪರದೇಶಿಯಾದರೆ ಮಾತ್ರ ನೋವೆ
ನಮ್ಮವರೆ ಹದಹಾಕಿ ತಿವಿದರದು ಹೂವೆ
ಸೋಮಾರಿಗಳಿಗೆ ಸುಖಿಗಳಿಗೆ ರಸಿಕರಿಗಲ್ತೆ
ಸಾಮ್ರಾಜ್ಯವೆಂಬುದದು ಕಾಮಧೇನು
ನೃಪ ಎಂಬ ಹೆಸರೊಡನೆ ಮುಡಿಯೊಂದನಾಂತೊಡನೆ
ಕಳ್ಳರೊಡೆಯನು ಕೃಪೆಯ ಮೂರ್ತಿಯೇನು
ತಿಂದುಂಡು ಮೆರೆವವರ ಮೆರವಣಿಗೆಗಾನು
ಬಾಯ್ದೆರೆದು ನೋಳ್ಪ ಬೆಪ್ಪಾಗಬೇಕೇನು
ಹರಕೆ ಯಾರದೊ ಹಬ್ಬವಾರಿಗೊ ಅದಾವಗಂ
ಸಾಮ್ರಾಜ್ಯಕಾಳಿಗಾನಲ್ತೆ ಕುರಿ ಕೊಲೆಗೆ
ಕುಯ್ಗುರಿಯನೆಂತಂತೆ ಸಾವು ಬದುಕಿನ ನಡುವೆ
ಕರುಣೆ ಗರಗಸದಿಂದೆ ಸೀಳುವರು ಬೆಲೆಗೆ
ಸಾಕೆನಗೆ ಸಾಕಯ್ಯ ಸಾಮ್ರಾಜ್ಯ ಪೂಜೆ
ಸಿಡಿಮದ್ದಿನಕ್ಷತೆಗೆ ಗುಂಡು ಚರೆ ಲಾಜೆ
ನೇಗಿಲಿನ ಮೇಲಾಣೆ ಬಸವಗಳ ಮೇಲಾಣೆ
ನೆತ್ತರಿಲ್ಲದೆ ಸುಕ್ಕಿ ಸೊರಗಿದೆನ್ನಾಣೆ
ಸಾಮ್ರಾಜ್ಯ ಶೂರ್ಪನಖಿ ಮೋಹಿನಿಯ ರೂಪಕ್ಕೆ
ಮರುಳಾಗೆನೆಂದಿಗೂ ಸೀತೆ ಮೇಲಾಣೆ
ಬಡತನದ ಗೊಬ್ಬರವನನುದಿನಂ ಹೀರಿ
ಹಿಡಿಸದೋ ಸಾಮ್ರಾಜ್ಯ ಸಿರಿಯ ಕಸ್ತೂರಿ.

ನಾಡನ್ನು ಆಳುವ ದೊರೆಗಳಿಂದ ಬೇಸಾಯಗಾರರು ಎಲ್ಲಾ ಕಾಲದಲ್ಲಿಯೂ ಹೇಗೆ ಸುಲಿಗೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ಹೇಳುತ್ತ, ಇಂತಹ ವಂಚಕರ ಮತ್ತು ಕ್ರೂರಿಗಳ ನಯಗಾರಿಕೆಯ ಮಾತುಗಳಿಗೆ ತಾನು ಮರುಳಾಗುವುದಿಲ್ಲವೆಂಬ ಬೇಸಾಯಗಾರನ ನಿಲುವನ್ನು ಈ ಕವನದಲ್ಲಿ ಹೇಳಲಾಗಿದೆ.

ರೈತ=ಬೇಸಾಯಗಾರ; ದೃಷ್ಟಿ=ನಿಲುವು/ಆಲೋಚನೆ; ಕರಿಯರು=ಆಪ್ರಿಕಾ ದೇಶದ ಮೂಲನಿವಾಸಿಗಳಾದ ಕಪ್ಪುಬಣ್ಣದ ಜನಸಮುದಾಯ; ಬಿಳಿಯರು=ಇಂಗ್ಲೆಂಡ್ ದೇಶದಲ್ಲಿರುವ ಬಿಳಿಯ ಬಣ್ಣದ ಜನಸಮುದಾಯ; ಯಾರದು+ಆದರೆ; ಸಾಮ್ರಾಜ್ಯ+ಆವಗಂ; ಸಾಮ್ರಾಜ್ಯ=ಒಬ್ಬ ರಾಜನ ಆಡಳಿತಕ್ಕೆ ಒಳಪಟ್ಟ ಪ್ರಾಂತ್ಯ; ಆವಗಂ=ಯಾವಾಗಲೂ; ಸುಲಿಗೆ=ದೋಚುವಿಕೆ/ಕೊಳ್ಳೆ/ಲೂಟಿ;

ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ=ಬೇಸಾಯಗಾರರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆಯನ್ನು ನಿಗದಿಪಡಿಸಿ ದವಸದಾನ್ಯಗಳನ್ನು ಕೊಂಡುಕೊಳ್ಳುವ ವ್ಯವಸ್ತೆಯು ಯಾವ ಕಾಲದಲ್ಲಿಯೂ ಯಾವ ರಾಜ್ಯದಲ್ಲಿಯೂ ಯಾವ ದೊರೆಯಿಂದಲೂ ಕಾರ‍್ಯರೂಪಕ್ಕೆ ಬಂದಿಲ್ಲ. ಆದ್ದರಿಂದಲೇ ಸಾಮ್ರಾಜ್ಯವನ್ನು ಯಾವ ಜನಾಂಗದವರು ಆಳಿದರೂ ಬೇಸಾಯಗಾರನ ದುಡಿಮೆಯ ಪಲವೆಲ್ಲವೂ  ಬಂಡವಾಳಶಾಹಿಗಳಾದ ವ್ಯಾಪಾರಿಗಳ ಪಾಲಾಗುತ್ತದೆ. ಬೇಸಾಯಗಾರನು ಬೆಳೆದ ಬೆಳೆಯು ಅವನ ಕಯ್ಯಲ್ಲಿ ಇರುವ ತನಕ ಅದಕ್ಕೆ ಹೆಚ್ಚಿನ ಬೆಲೆಯಿಲ್ಲ; ಅವನ ಕಯ್ ದಾಟಿ ವ್ಯಾಪಾರಿಯ ಕಯ್ಗೆ ಬಂದ ನಂತರ ಬೇಸಾಯಗಾರನ ಉತ್ಪನ್ನಗಳೆಲ್ಲವೂ ಚಿನ್ನದ ಬೆಲೆಯನ್ನು ಪಡೆಯುತ್ತವೆ. ಆದ್ದರಿಂದಲೇ ಎಲ್ಲಾ ಕಾಲದಲ್ಲಿಯೂ ಬೇಸಾಯಗಾರರು ಸಾವಿರ ಸಾವಿರ ಸಂಕೆಯಲ್ಲಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ವಿಜಯನಗರ=ಹಂಪೆಯನ್ನು ರಾಜದಾನಿಯನ್ನಾಗಿ ಮಾಡಿಕೊಂಡು ಆಳಿದ ಹಿಂದೂ ದೊರೆಗಳ ಸಾಮ್ರಾಜ್ಯ-ಕ್ರಿ.ಶ.1336-1646; ಮೊಗಲರ+ಆಳ್ವಿಕೆಯೊ; ಮೊಗಲರು=ಬಿಜಾಪುರ ಮತ್ತು ಬೀದರ ಪ್ರಾಂತ್ಯವನ್ನಾಳಿದ ಇಸ್ಲಾಂ ಮತದ ಬಹಮನಿ ಮತ್ತು ಆದಿಲ್ ಶಾಹಿ ದೊರೆಗಳ ಸಾಮ್ರಾಜ್ಯಗಳು-ಕ್ರಿ.ಶ.1347-1527 ; ಆಳ್ವಿಕೆ=ಆಡಳಿತ; ಇಂಗ್ಲಿಷರು=ಇಂಡಿಯಾ ದೇಶಕ್ಕೆ ವ್ಯಾಪಾರಕ್ಕೆಂದು ಬಂದು ನಂತರ ದೇಶವನ್ನು ತಮ್ಮ ವಸಾಹತನ್ನಾಗಿ ಮಾಡಿಕೊಂಡು ಆಳಿದ ಕ್ರಿಶ್ಚಿಯನ್ ಮತದ ಆಂಗ್ಲರು-ಕ್ರಿ.ಶ.1858-1947; ಜಿಗಣೆ=ಮಾನವರ ಮತ್ತು ಪ್ರಾಣಿಗಳ ದೇಹದ ರಕ್ತವನ್ನು ಹೀರುವ ಒಂದು ಬಗೆಯ ಹುಳು; ನೆತ್ತರು=ರಕ್ತ;

ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ=ಎಲ್ಲರೂ ನನ್ನ ನೆತ್ತರನ್ನು ಹೀರುವವರೇ ಆಗಿದ್ದಾರೆ.

ಯಾರ ಆಳ್ವಿಕೆಯೇ ಇರಲಿ ಆಳರಸರು ಬೇಸಾಯಗಾರನ ತಲೆಯ ಮೇಲೆ ಹೆಚ್ಚಿನ ತೆರಿಗೆಯನ್ನು ಹೇರುತ್ತಾರೆ. ವಿಜಯನಗರದ ಅರಸರ, ಮೊಗಲರ ಮತ್ತು ಇಂಗ್ಲಿಶಿರ ಆಡಳಿತ ಕಾಲದಲ್ಲಿ ಬೇಸಾಯಗಾರನು ಬೆಳೆದ ಬೆಳೆಯಲ್ಲಿ ಶೇ.15 ರಿಂದ ಹಿಡಿದು ಶೇ.25 ರ ಪ್ರಮಾಣದ ದವಸದಾನ್ಯಗಳನ್ನು ತೆರಿಗೆ ರೂಪದಲ್ಲಿ ವಸೂಲು ಮಾಡುತ್ತಿದ್ದರು. ರಾಜರ ನಡುವೆ ಕದನಗಳು ನಡೆದಾಗ ಬೇಸಾಯಗಾರರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯನ್ನು ಕಡ್ಡಾಯವಾಗಿ ವಸೂಲಿ ಮಾಡುತ್ತಿದ್ದರು. ದೊಡ್ಡ ದೊಡ್ಡ ಜಮೀನ್ದಾರರ ಬೂಮಿಯನ್ನು ಗೇಣಿಗೆ ಪಡೆದು ಬೆಳೆ ತೆಗೆಯುವ ಬೇಸಾಯಗಾರರು ಶೇ 50 ಕ್ಕಿಂತ ಹೆಚ್ಚು ಮಂದಿಯಿರುತ್ತಿದ್ದರು. ಇಂತಹ ಗೇಣಿದಾರರ ಬದುಕು ಉಳಿದ ಬೇಸಾಯಗಾರರಿಗಿಂತ ಇನ್ನೂ ಹೆಚ್ಚಿನ ದುರಂತಕ್ಕೆ ಈಡಾಗುತ್ತಿತ್ತು. ಏಕೆಂದರೆ ಬೆಳೆಯು ಯಾವುದೇ ಪ್ರಮಾಣದಲ್ಲಿ ಆಗಿರಲಿ ಗೇಣಿಯ ಒಪ್ಪದದಂತೆ ಕೊಟ್ಟ ಮೇಲೆ ಅವರ ಪಾಲಿಗೆ ಉಳಿಯುತ್ತಿದ್ದುದು ಬಹಳ ಕಡಿಮೆಯಾಗುತ್ತಿತ್ತು ಕೆಲವೊಮ್ಮೆ ಬೆಳೆದ ಬೆಳೆಯೆಲ್ಲವನ್ನೂ ಜಮೀನ್ದಾರನಿಗೆ ಒಪ್ಪಿಸಿ ಹಸಿವಿನಿಂದ ನರಳಬೇಕಿತ್ತು. ಗೇಣಿದಾರರ ಇಂತಹ ಯಾವುದೇ ಸಮಸ್ಯೆಗಳಿಗೆ ಆಳುವ ದೊರೆಗಳು ತಲೆಹಾಕುತ್ತಿರಲಿಲ್ಲ. ಆಳುವ ವರ‍್ಗದ ದಣಿಗಳೆಲ್ಲರೂ ದುಡಿಮೆಯನ್ನೇ ಮಾಡದ ಜಮೀನಿನ ಒಡೆಯರ ಪರವಾಗಿ ಇರುತ್ತಿದ್ದರೇ ಹೊರತು, ಹಗಲಿರುಳೆನ್ನದೆ ಹೊಲಗದ್ದೆಗಳಲ್ಲಿ ದುಡಿಯುವ ಗೇಣಿದಾರರ ಪರವಾಗಿ ಇರುತ್ತಿರಲಿಲ್ಲ. ಎಲ್ಲ ರಾಜರ ಕಾಲದಲ್ಲಿಯೂ ಬೇಸಾಯಗಾರರು ಆಡಳಿತ ವರ‍್ಗಕ್ಕೆ ಸೇರಿದ ಜನರ ಕ್ರೂರತನದಿಂದ ಕೂಡಿದ ದಬ್ಬಾಳಿಕೆಗೆ ಬಲಿಯಾಗಿ ನರಳುತ್ತಿದ್ದಾರೆ;

ಕತ್ತಿ=ಚೂಪಾದ ಮೊನೆಯುಳ್ಳ ಹರಿತವಾದ ಒಂದು ಬಗೆಯ ಹತಾರ; ಪರದೇಶಿ+ಆದರೆ; ಪರದೇಶಿ=ಹೊರನಾಡಿಗೆ ಸೇರಿದ ವಸ್ತು, ವ್ಯಕ್ತಿ, ಜೀವಿ; ನೋವು=ಸಂಕಟ; ಹದ=ಸರಿಯಾದ ಸಮಯ/ರೀತಿ; ಹದಹಾಕಿ=ಸಮಯವನ್ನು ಕಾದು; ತಿವಿದರೆ+ಅದು; ತಿವಿ=ಚುಚ್ಚು/ಇರಿ

ಕತ್ತಿ ಪರದೇಶಿಯಾದರೆ ಮಾತ್ರ ನೋವೆ ನಮ್ಮವರೆ ಹದಹಾಕಿ ತಿವಿದರದು ಹೂವೆ=ಇದೊಂದು ರೂಪಕ. ನಾಡನ್ನಾಳುವ ದೊರೆಯು ಯಾರಾದರೇನು ಆತ ನಮ್ಮವನೇ ಆಗಿರಬಹುದು ಇಲ್ಲವೇ ಅನ್ಯದೇಶದವನಾಗಿರಬಹುದು. ಆತನಿಗೆ ಬೇಸಾಯಗಾರನ ಬದುಕಿನ ಬವಣೆಗಳು ತಿಳಿಯದಿದ್ದಾಗ ಮತ್ತು ಬೇಸಾಯಗಾರನ ಯಾತನೆಯನ್ನು ಪರಿಹರಿಸಲು ನೆರವಾಗಬೇಕೆಂಬ ಒಳ್ಳೆಯ ಉದ್ದೇಶವಿಲ್ಲದಿದ್ದಾಗ , ರಾಜನು ಉಳ್ಳವರ ಪರವಾಗಿ ಜಾರಿಮಾಡುವ ಕಾನೂನುಗಳು ಬೇಸಾಯಗಾರನ ಬದುಕಿಗೆ ಅಪಾರವಾದ ಸಂಕಟವನ್ನುಂಟುಮಾಡುತ್ತವೆ ಎಂಬ ತಿರುಳಿನಲ್ಲಿ ಈ ರೂಪಕ ಬಳಕೆಯಾಗಿದೆ;

ಸೋಮಾರಿ=ದುಡಿಮೆಯನ್ನು ಮಾಡದೆ ಕಾಲವನ್ನು ಕಳೆಯುವವನು/ಮಯ್ಗಳ್ಳ; ಸುಖಿ=ಒಲವು ನಲಿವು ನೆಮ್ಮದಿಯಿಂದಿರುವ ವ್ಯಕ್ತಿ; ರಸಿಕರಿಗೆ+ಅಲ್ತೆ; ರಸಿಕ=ಚೆನ್ನಾಗಿರುವುದೆಲ್ಲವನ್ನೂ ತನ್ನದಾಗಿಸಿಕೊಂಡು ಮೆರೆಯುವ ವಿಲಾಸಿ; ಅಲ್ತೆ=ಅಲ್ಲವೇ ; ಸಾಮ್ರಾಜ್ಯ+ಎಂಬುದು+ಅದು; ಎಂಬುದು=ಎನ್ನುವುದು; ಕಾಮಧೇನು=ಜನಮನದ ಕಲ್ಪನೆಯಲ್ಲಿ ಮೂಡಿಬಂದಿರುವ ಒಂದು ಹಸು. ಇದು ದೇವಲೋಕದಲ್ಲಿ ಇಂದ್ರನ ಅಮರಾವತಿಯಲ್ಲಿದೆ. ಈ ಹಸುವಿನ ಅನುಗ್ರಹ ದೊರೆತರೆ ವ್ಯಕ್ತಿಯು ಬಯಸಿದ್ದೆಲ್ಲವನ್ನೂ ಈಡೇರುತ್ತದೆ ಎಂಬ ಕಲ್ಪನೆಯು ಜನಮನದಲ್ಲಿದೆ;

ಸೋಮಾರಿಗಳಿಗೆ ಸುಖಿಗಳಿಗೆ ರಸಿಕರಿಗಲ್ತೆ ಸಾಮ್ರಾಜ್ಯವೆಂಬುದದು ಕಾಮಧೇನು=ನಾಡನ್ನಾಳುವ ದೊರೆಗಳ ಪಾಲಿಗೆ ಸಾಮ್ರಾಜ್ಯವೆಂಬುದು ಯಾವುದೇ ದುಡಿಮೆಯನ್ನು ಮಾಡದೆ , ತಮ್ಮ ಮಯ್ ಮನಗಳ ಕಾಮನೆಗಳೆಲ್ಲವನ್ನೂ ತಣಿಸಿಕೊಂಡು ಆನಂದಪಡುವ ವ್ಯಕ್ತಿಗಳಿಗೆ ವರದಾನವಾಗಿದೆ;

ನೃಪ=ರಾಜ; ಎಂಬ=ಎನ್ನುವ ; ಹೆಸರ್+ಒಡನೆ; ಒಡನೆ=ಜತೆಯಲ್ಲಿ; ಮುಡಿ+ಒಂದನ್+ಆಂತು+ಒಡನೆ; ಮುಡಿ=ಕಿರೀಟ; ಆಂತು=ತೊಟ್ಟು; ಕಳ್ಳರ+ಒಡೆಯನು; ಕಳ್ಳ=ಇತರರ ಸಂಪತ್ತನ್ನು ಕದಿಯುವವನು; ಒಡೆಯ=ಯಜಮಾನ; ಕೃಪೆ=ದಯೆ; ಮೂರ್ತಿ+ಏನು; ಮೂರ್ತಿ=ಪ್ರತಿಮೆ/ವಿಗ್ರಹ/ಸ್ವರೂಪ;

ನೃಪ ಎಂಬ ಹೆಸರೊಡನೆ ಮುಡಿಯೊಂದನಾಂತೊಡನೆ ಕಳ್ಳರೊಡೆಯನು ಕೃಪೆಯ ಮೂರ್ತಿಯೇನು=ಜನಸಮುದಾಯದ ಸಂಪತ್ತನ್ನು ಕೊಲೆ ಸುಲಿಗೆಯ ಮೂಲಕ ಕೊಳ್ಳೆಹೊಡೆಯುವ ಕಳ್ಳರ ಒಡೆಯನೊಬ್ಬನಿಗೆ ಕಿರೀಟವನ್ನು ತೊಡಿಸಿ ರಾಜನೆಂದು ಕರೆದ ಮಾತ್ರಕ್ಕೆ ಆತನಲ್ಲಿ ಕರುಣೆಯ ನಡೆನುಡಿಯು ಕಂಡುಬರುವುದಿಲ್ಲ. ಬೇಸಾಯಗಾರರ ದುಡಿಮೆಯ ಶ್ರಮದ ಬೆಲೆಯನ್ನು ತಿಳಿಯದ ಮತ್ತು ಕರುಣೆಯಿಲ್ಲದ ದೊರೆಯು ಜನಸಮುದಾಯದ ಪಾಲಿಗೆ ದೊಡ್ಡ ಕಳ್ಳನೇ ಆಗಿರುತ್ತಾನೆ;

ತಿಂದು+ಉಂಡು; ಮೆರೆ=ಬೀಗು/ಅಹಂಕಾರದಿಂದ ಹಿಗ್ಗುವುದು; ಮೆರವಣಿಗೆ= ಒಳ್ಳೆಯ ಉಡುಗೆ ತೊಡುಗೆಗಳನ್ನು ತೊಟ್ಟು, ಆನೆ ಅಂಬಾರಿಯನ್ನೇರಿ ಇಲ್ಲವೇ ಕುದುರೆಯನ್ನೇರಿ ಡೋಲು ಡಮರುಗ ನಾದದೊಡನೆ ಜನರಿಂದ ಜಯಕಾರವನ್ನು ಹಾಕಿಸಿಕೊಳ್ಳುತ್ತ ಊರಿನ ಬೀದಿ ಬೀದಿಗಳಲ್ಲಿ ಸಾಗುವುದು; ಬಾಯ್+ತೆರೆದು; ಬಾಯ್ದೆರೆದು=ಇದೊಂದು ನುಡಿಗಟ್ಟು. ಅಚ್ಚರಿಯನ್ನು ವ್ಯಕ್ತಪಡಿಸುವುದು ಎಂಬ ತಿರುಳಿನಲ್ಲಿ ಬಳಕೆಯಾಗಿದೆ; ನೋಳ್ಪ=ನೋಡುವ; ಬೆಪ್ಪು+ಆಗಬೇಕೇನು; ಬೆಪ್ಪು=ದಡ್ಡ/ಮಂಕ;

ತಿಂದುಂಡು ಮೆರೆವವರ ಮೆರವಣಿಗೆಗಾನು ಬಾಯ್ದೆರೆದು ನೋಳ್ಪ ಬೆಪ್ಪಾಗಬೇಕೇನು=ನಾಡಿನ ಸಂಪತ್ತನ್ನೇ ಗೋರಿಗುಡ್ಡೆ ಹಾಕಿಕೊಂಡು ಸಿರಿವಂತಿಕೆಯ ತುತ್ತತುದಿಯಲ್ಲಿ ಮೆರೆಯುತ್ತಿರುವ ಆಳರಸರನ್ನು ಕಂಡು ‘ ಅಬ್ಬಾ ಎಂತಹ ಸಿರಿವಂತಿಕೆ ‘ ಎಂದು ಅಚ್ಚರಿ ಪಡುವ ತಿಳಿಗೇಡಿ ನಾನಾಗುವುದಿಲ್ಲ. ಏಕೆಂದರೆ ಆಳುವವರ ಬಳಿಯಿರುವ ಸಿರಿಸಂಪತ್ತೆಲ್ಲವೂ ದುಡಿಯುವ ಶ್ರಮಜೀವಿಗಳಾದ ಬೇಸಾಯಗಾರರಾದ ನಮಗೆ ಸೇರಬೇಕಾಗಿದ್ದ ಸಂಪತ್ತು ಎಂಬ ವಾಸ್ತವವನ್ನು ಅರಿತಿದ್ದೇನೆ. ಬೇಸಾಯಗಾರರೆಂದರೆ ಹೊಲಗದ್ದೆತೋಟಗಳಲ್ಲಿ ದುಡಿಯುವ ಎಲ್ಲಾ ಶ್ರಮಜೀವಿಗಳು;

ಹರಕೆ=ಜೀವನದಲ್ಲಿ ತನ್ನ ಆಸೆಯನ್ನು ಈಡೇರಿಸಿದರೆ ಇಲ್ಲವೇ ಬಂದಿರುವ ಸಂಕಟವನ್ನು ಪರಿಹಾರಮಾಡಿದರೆ ಹಣ ಇಲ್ಲವೇ ಚಿನ್ನಬೆಳ್ಳಿ ರೂಪದಲ್ಲಿ ದೇವರಿಗೆ ಕಾಣಿಕೆಯನ್ನು ನೀಡುತ್ತೇನೆ ಎಂದು ಮನದಲ್ಲಿ ಸಂಕಲ್ಪವನ್ನು ತಳೆಯುವುದು; ಹಬ್ಬ+ಆರಿಗೊ; ಹಬ್ಬ=ದೇವರ ಹೆಸರಿನಲ್ಲಿ ಮಾಡುವ ಆಚರಣೆ; ಆರಿಗೊ=ಯಾರಿಗೊ;

ಹರಕೆ ಯಾರದೊ ಹಬ್ಬವಾರಿಗೊ=ಶ್ರಮಪಟ್ಟು ದುಡಿದು ಉತ್ಪಾದನೆ ಮಾಡುವವರು ಒಬ್ಬರಾದರೆ, ಅದರ ಪಲವನ್ನು ಉಣ್ಣುವವರು ಮತ್ತೊಬ್ಬರಾಗಿರುತ್ತಾರೆ. ಬೇಸಾಯಗಾರರ ದುಡಿಮೆಯ ಪಲವನ್ನೆಲ್ಲಾ ನಾಡನ್ನು ಆಳುವವರು ಮತ್ತು ಆಳರಸರ ಬೆಂಬಲವನ್ನು ಪಡೆದ ಸಿರಿವಂತರು , ಜಮೀನ್ದಾರರು ಮತ್ತು ಆಡಳಿತದ ನೆಲೆಯಲ್ಲಿ ಕಾನೂನು ಕಟ್ಟಲೆಗಳನ್ನು ಜಾರಿಗೆ ತರುವ ವ್ಯಕ್ತಿಗಳು ದೋಚಿಕೊಂಡು ಆನಂದ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿದ್ದಾರೆ;

ಅದು+ಆವಗಂ; ಆವಗಂ=ಯಾವಾಗಲೂ; ಸಾಮ್ರಾಜ್ಯ+ಕಾಳಿಗೆ+ಆನ್+ಅಲ್ತೆ; ಕಾಳಿ=ಒಂದು ಹೆಣ್ಣು ದೇವತೆಯ ಹೆಸರು; ಆನ್=ನಾನು; ಅಲ್ತೆ=ಅಲ್ಲವೇ; ಕುರಿ=ಒಂದು ಸಾಕು ಪ್ರಾಣಿ ; ಕೊಲೆ=ಕೊಲ್ಲುವಿಕೆ/ಸಾಯಿಸುವುದು;

ಅದಾವಗಂ ಸಾಮ್ರಾಜ್ಯಕಾಳಿಗಾನಲ್ತೆ ಕುರಿ ಕೊಲೆಗೆ=ಯಾವಾಗಲು ಸಾಮ್ರಾಜ್ಯವೆಂಬ ಕಾಳಿಗೆ ಬಲಿಯಾಗುವ ಕುರಿಯು ನಾನೇ ಅಲ್ಲವೇ. ಅಂದರೆ ರಾಜಮಹಾರಾಜರು ತಮ್ಮ ಸಾಮ್ರಾಜ್ಯವನ್ನು ಕಟ್ಟಲು ಬೆಳೆಸಲು ಉಳಿಸಿಕೊಳ್ಳಲು ಯಾವಾಗಲು ಬೇಸಾಯಗಾರರನ್ನು ಒಳಗೊಂಡಂತೆ ದುಡಿಯುವ ಶ್ರಮಜೀವಿಗಳೆಲ್ಲರ ಬದುಕನ್ನೇ ಬಲಿತೆಗೆದುಕೊಳ್ಳುತ್ತಾರೆ ;

ಕುಯ್+ಕುರಿ+ಅನ್+ಎಂತು+ಅಂತೆ; ಕುಯ್=ಕತ್ತರಿಸು; ಕುಯ್ಗುರಿ=ಕತ್ತರಿಸಲೆಂದೇ ಸಾಕಿ ಬೆಳೆಸಿರುವ ಕುರಿ; ಎಂತು=ಯಾವ ರೀತಿ; ಅಂತೆ=ಹಾಗೆ; ಸಾವು=ಮರಣ; ಬದುಕು=ಜೀವನ ; ನಡುವೆ=ಅಂತರದಲ್ಲಿ; ಕರುಣೆ=ದಯೆ; ಗರಗಸ+ಇಂದೆ; ಗರಗಸ=ಮರವನ್ನು ಕುಯ್ಯುವ ಉಪಕರಣ. ಚೂಪಾದ ಮೊನೆಯುಳ್ಳ ಲೋಹದ ಹಲ್ಲುಗಳಿಂದ ಕೂಡಿರುತ್ತದೆ; ಕರುಣೆ ಗರಗಸ=ಕರುಣೆಯ ನುಡಿಗಳನ್ನಾಡುತ್ತಲೇ ಕ್ರೂರತನದಿಂದ ನಡೆದುಕೊಳ್ಳುವುದು;

ಸೀಳು=ತುಂಡುಮಾಡು; ಬೆಲೆ=ಯಾವುದನ್ನಾದರೂ ಕೊಳ್ಳುವಾಗ ಇಲ್ಲವೇ ಮಾರುವಾಗ ಅದಕ್ಕೆ ಗೊತ್ತುಪಡಿಸುವ ಹಣ;

ಕುಯ್ಗುರಿಯನೆಂತಂತೆ ಸಾವು ಬದುಕಿನ ನಡುವೆ ಕರುಣೆ ಗರಗಸದಿಂದೆ ಸೀಳುವರು ಬೆಲೆಗೆ=ಆಳುವ ಅರಸರು ಮತ್ತು ಬಂಡವಾಳಶಾಹಿಗಳು ಬೇಸಾಯಗಾರನ ಬಗ್ಗೆ ಕರುಣೆಯ ನುಡಿಗಳನ್ನಾಡುತ್ತಲೇ ಅವನ ಬದುಕನ್ನು ಸಂಕಟದ ಕಡೆಗೆ ದೂಡುತ್ತಾರೆ. ಆಳರಸರ ಪಾಲಿಗೆ ದುಡಿಯುವ ಶ್ರಮಜೀವಿಗಳೆಲ್ಲರೂ ಸಾಮ್ರಾಜ್ಯ ಉಳಿದು ಬೆಳೆದು ಬಾಳುವುದಕ್ಕಾಗಿ ಬಲಿಕೊಡುವ ಕುಯ್ಗುರಿಗಳಂತೆಯೇ ಆಗಿರುತ್ತಾರೆ; ಮರವನ್ನು ಕುಯ್ಯುವಾಗ ಅತ್ತಿತ್ತ ಹೋಗುತ್ತ ಬರುತ್ತ ಸೀಳುವ ಗರಗಸದಂತೆ ದೊರೆಯು ಮಾಡುವ ಕಟ್ಟಪ್ಪಣೆಯ ಕಾನೂನುಗಳೆಲ್ಲವೂ ಬೇಸಾಯಗಾರನ ಬದುಕನ್ನು ಜೀವಂತವಾಗಿ ಸೀಳುತ್ತಿರುತ್ತವೆ;

ಸಾಕು+ಎನಗೆ; ಸಾಕು+ಅಯ್ಯ; ಪೂಜೆ=ದೇವರ ಮುಂದೆ ಹೂಹಣ್ಣುಗಳನ್ನು ಇಟ್ಟು ದೂಪದೀಪಗಳನ್ನು ಬೆಳಗಿ ಮಾಡುವ ಆಚರಣೆ; ಸಿಡಿಮದ್ದಿನ+ಅಕ್ಷತೆಗೆ; ಸಿಡಿಮದ್ದು=ಬಂಡೆಯನ್ನು ಒಡೆಯಲು ಬಳಸುವ ವಸ್ತು; ಅಕ್ಷತೆ=ಅರಿಶಿನ ಬೆರೆಸಿದ ಅಕ್ಕಿಯ ಕಾಳುಗಳು; ಸಿಡಿಮದ್ದಿನ ಅಕ್ಷತೆ=ಕಾಳಗದ ಸನ್ನಿವೇಶದಲ್ಲಿ ಅಕ್ಶತೆಯ ಕಾಳುಗಳಂತೆ ಹಾರುವ ಸಿಡಿಮದ್ದು; ಗುಂಡು=ಬಂದೂಕಿನಲ್ಲಿರುವ ಗೋಲಿ; ಚರೆ=ಬಂದೂಕಿಗೆ ಹಾಕುವ ಸಿಡಿಮದ್ದು; ಲಾಜೆ=ಅರಿಸಿನ ಬೆರೆಸಿದ ಅಕ್ಕಿಯ ಕಾಳು;

ಸಾಕೆನಗೆ ಸಾಕಯ್ಯ ಸಾಮ್ರಾಜ್ಯ ಪೂಜೆ ಸಿಡಿಮದ್ದಿನಕ್ಷತೆಗೆ ಗುಂಡು ಚರೆ ಲಾಜೆ= ಇನ್ನು ಮುಂದೆ ನಾನು ಯಾವ ರಾಜನನ್ನಾಗಲಿ ಇಲ್ಲವೇ ಯಾವ ಸಾಮ್ರಾಜ್ಯವನ್ನಾಗಲಿ ತಲೆಯ ಮೇಲೆ ಹೊತ್ತು ಮೆರೆಸುವುದಿಲ್ಲ. ಏಕೆಂದರೆ ಸಾಮ್ರಾಜ್ಯವೆಂಬುದು ಜನರನ್ನು ಕೊಲ್ಲುವ ಮದ್ದುಗುಂಡುಗಳನ್ನೇ ಅಕ್ಶತೆಯ ಕಾಳುಗಳನ್ನಾಗಿ ಮಾಡಿಕೊಂಡಿದೆ. ಇಂತಹ ಕ್ರೂರತನದ ಸಾಮ್ರಾಜ್ಯದ ಸಹವಾಸವೇ ನನಗೆ ಬೇಡ;

ನೇಗಿಲು=ಬೂಮಿಯನ್ನು ಉಳುವ ಉಪಕರಣ;; ಮೇಲ್+ಆಣೆ; ಆಣೆ=ಯಾವುದೇ ಒಂದು ಕೆಲಸವನ್ನು ಮಾಡುತ್ತೇನೆ ಎಂದು ವಾಗ್ದಾನವನ್ನು ಇತರರಿಗೆ ನೀಡುವಾಗ ಇಲ್ಲವೇ ತಾನು ಹೇಳುತ್ತಿರುವ ಸಂಗತಿಯು ನಿಜವಾದುದೆಂದು ಪ್ರತಿಪಾದಿಸುವುದಕ್ಕಾಗಿ ವ್ಯಕ್ತಿಯು ತನ್ನ ಮೆಚ್ಚಿನ ವಸ್ತು, ಪ್ರಾಣಿ, ವ್ಯಕ್ತಿ ಮತ್ತು ದೇವರ ಹೆಸರಿನಲ್ಲಿ ಆಡುವ ಮಾತು;

ಬಸವ=ಹಸು/ದನ ; ನೆತ್ತರ್+ಇಲ್ಲದೆ; ನೆತ್ತರ್=ರಕ್ತ ; ಸುಕ್ಕಿ=ಒಣಗು; ಸೊರಗಿದ+ಎನ್ನ+ಆಣೆ; ಸೊರಗು=ಬಾಡು/ಬತ್ತು;

ನೇಗಿಲಿನ ಮೇಲಾಣೆ ಬಸವಗಳ ಮೇಲಾಣೆ ನೆತ್ತರಿಲ್ಲದೆ ಸುಕ್ಕಿ ಸೊರಗಿದೆನ್ನಾಣೆ=ಸಾಮ್ರಾಜ್ಯದ ಸಹವಾಸವನ್ನೇ ತೊರೆದು , ಆಳುವ ಅರಸರ ವಂಚನೆ ಮತ್ತು ಕ್ರೂರತನದ ಆಡಳಿತದಿಂದ ದೂರವಿರಬೇಕೆಂಬ ದಿಟ್ಟತನದ ನಿಲುವನ್ನು ತಳೆಯುವಾಗ ತನ್ನ ಉಸಿರಿನಂತಿರುವ ನೇಗಿಲು ಮತ್ತು ದನಗಳ ಮೇಲೆ ಆಣೆಯನ್ನು ಇಕ್ಕುತ್ತಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ದುಡಿದು ದುಡಿದು ಸೊರಗಿ ಹೋಗಿರುವ ತನ್ನ ದೇಹದ ಮೇಲೂ ಆಣೆಯನ್ನು ಇಕ್ಕುತ್ತಿದ್ದಾನೆ;

ಶೂರ್ಪನಖಿ=ರಾಮಾಯಣ ಕಾವ್ಯದಲ್ಲಿ ಬರುವ ಲಂಕೆಯ ರಾಜನಾದ ರಾವಣನ ತಂಗಿ; ಮೋಹಿನಿ=ಗಂಡಸಿನ ಮಯ್ ಮನವನ್ನು ಸೆಳೆಯುವಂತಹ ರೂಪನ್ನು ಮತ್ತು ಉದ್ದೇಶವನ್ನು ಹೊಂದಿರುವವಳು; ರೂಪ=ಆಕಾರ; ಮರುಳ್+ಆಗೆನು+ಎಂದಿಗೂ ; ಮರುಳ್=ಹುಚ್ಚು/ಮೋಹ; ಎಂದಿಗೂ=ಯಾವತ್ತಿಗೂ; ಸೀತೆ=ರಾಮಾಯಣ ಕಾವ್ಯದಲ್ಲಿ ಬರುವ ಅಯೋದ್ಯಾಪತಿಯಾದ ರಾಮನ ಹೆಂಡತಿ;’ ಸೀತೆ ‘ ಎಂಬ ಪದಕ್ಕೆ “ ನೇಗಿಲಿನಿಂದ ಉತ್ತ ಗೆರೆ/ಬೂಮಿ “ ಎಂಬ ಮತ್ತೊಂದು ತಿರುಳಿದೆ;

ಸಾಮ್ರಾಜ್ಯ ಶೂರ್ಪನಖಿ ಮೋಹಿನಿಯ ರೂಪಕ್ಕೆ ಮರುಳಾಗೆನೆಂದಿಗೂ ಸೀತೆ ಮೇಲಾಣೆ=ವಂಚನೆ ಮತ್ತು ಕ್ರೂರತನದ ಉದ್ದೇಶಗಳನ್ನು ಮರೆಮಾಚಿಕೊಂಡು ಹೊರಗೆ ಜನಸಮುದಾಯ ಒಳಿತಿಗಾಗಿ ಇರುವಂತೆ ತೋರಿಸಿಕೊಳ್ಳುವ ಆಳರಸರ ಸಾಮ್ರಾಜ್ಯವನ್ನು ರಾಮ ಲಕ್ಶ್ಮಣರ ಮನ ಸೆಳೆಯಲೆಂದು ಮಾರುವೇಶದಲ್ಲಿ ಬಂದ ರಕ್ಕಸಿ ಶೂರ‍್ಪನಕಿಯ ರೂಪಕ್ಕೆ ಹೋಲಿಸಲಾಗಿದೆ. ನಯವಂಚಕರಾದ ಅರಸರ ಯಾವುದೇ ನಡೆನುಡಿಗಳಿಗೆ ನಾನು ಮಾರುಹೋಗುವುದಿಲ್ಲವೆಂದು ಆಣೆಯನ್ನು ಇಕ್ಕುತ್ತಿದ್ದಾನೆ;

ಬಡತನ=ಅನ್ನಬಟ್ಟೆವಸತಿಯಿಲ್ಲದೆ ಸಂಕಟಪಡುವುದು; ಗೊಬ್ಬರ+ಅನ್+ಅನುದಿನಂ; ಗೊಬ್ಬರ=ಹಸುಎಮ್ಮೆಕುರಿಕೋಣಗಳ ಸಗಣಿ ಗಂಜಲವನ್ನು ದೊಡ್ಡ ಪ್ರಮಾಣದಲ್ಲಿ ಹಾಕಿದಾಗ, ಸ್ವಲ್ಪದಿನಗಳ ನಂತರ ಅವು ಕೊಳೆತಾಗ ದೊರೆಯುವ ವಸ್ತು; ಅನ್=ಅನ್ನು; ಅನುದಿನ=ಪ್ರತಿದಿನ; ಹೀರು=ಕುಡಿ; ಹಿಡಿಸು=ಒಪ್ಪು/ಮೆಚ್ಚು; ಸಿರಿ=ಸಂಪತ್ತು; ಕಸ್ತೂರಿ=ಕಸ್ತೂರಿ ಎಂಬ ಹೆಸರಿನ ಪ್ರಾಣಿಯ ಹೊಕ್ಕಳಿನಲ್ಲಿ ದೊರೆಯುವ ಪರಿಮಳಯುಕ್ತವಾದ ವಸ್ತು;

ಬಡತನದ ಗೊಬ್ಬರ’ ಎಂಬುದು ಪರಿಶ್ರಮದಿಂದ ಕೂಡಿದ ದುಡಿಮೆಯ ಬದುಕಿಗೆ ಸಂಕೇತವಾಗಿದೆ; ‘ ಸಾಮ್ರಾಜ್ಯ ಸಿರಿಯ ಕಸ್ತೂರಿ ‘ ಎಂಬುದು ದುಡಿಯುವ ಜನಸಮುದಾಯವನ್ನು ಸುಲಿದು ಕೊಬ್ಬಿರುವ ಸಾಮ್ರಾಜ್ಯಶಾಹಿಯ ಸಂಕೇತವಾಗಿದೆ ;

ಬಡತನದ ಗೊಬ್ಬರವನನುದಿನಂ ಹೀರಿ ಹಿಡಿಸದೋ ಸಾಮ್ರಾಜ್ಯ ಸಿರಿಯ ಕಸ್ತೂರಿ=ಇದೊಂದು ರೂಪಕವಾಗಿ ಬಳಕೆಗೊಂಡಿದೆ. ದುಡಿಯುವ ಶ್ರಮಜೀವಿಗಳ ಬಗ್ಗೆ ಜೀವದಯೆಯಿಲ್ಲದೆ, ಅವರ ಬದುಕಿನ ಸಂಕಟಗಳನ್ನು ಪರಿಹರಿಸಬೇಕೆಂಬ ಜವಾಬ್ದಾರಿಯಿಲ್ಲದೆ, ಅಟ್ಟಹಾಸದಿಂದ ಮೆರೆಯುವ ರಾಜ್ಯಾಡಳಿತವು ಬೇಸಾಯಗಾರರಿಗೆ ಹಿಡಿಸುವುದಿಲ್ಲ. ಏಕೆಂದರೆ ನಾಡನ್ನು ಆಳುವ ವ್ಯಕ್ತಿಗಳ ಮನದಲ್ಲಿ ಬೇಸಾಯಗಾರರ ಬಗ್ಗೆ ಯಾವುದೇ ಬಗೆಯ ಒಲವು ಕರುಣೆ ಸಹಬಾಳ್ವೆಯ ಒಳಮಿಡಿತಗಳೇ ಇರುವುದಿಲ್ಲ.

( ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: