ಸ್ಪೇಸ್ ಎಕ್ಸ್ (SpaceX)  ಮತ್ತು ಮಂಗಳದ ಸುತ್ತ : ಕಂತು-1

– ನಿತಿನ್ ಗೌಡ.

ಸ್ಪೇಸ್ ಎಕ್ಸ್

  ಕಂತು-1 ಕಂತು-2

“ಕನಸು ಕಾಣುವುದರಲ್ಲಿ ಯಾವುದೇ ಜಿಪುಣತನ ಇರಬಾರದು. ನಿದ್ದೆ ಮಾಡುವಾಗ ಬೀಳುವುದು ಕನಸಲ್ಲ ಬದಲಾಗಿ ನಮಗೆ ನಿದ್ದೆಯನ್ನು ಮಾಡಲು ಸಹ ಬಿಡದಿರುವ ಗುರಿಯೇ ಕನಸು” ಎಂದು ಅಬ್ದುಲ್ ಕಲಾಮ್ ಅವರು ಹೇಳಿರುವ ಮಾತಿನಲ್ಲಿ ಎಂತಹ ಹುರುಳಿದೆ!. ‘ಕುತೂಹಲ’ ಎಂಬುದು ನಮ್ಮ ಸುತ್ತಮುತ್ತಲಿನ ಯಾವುದನ್ನಾದರೂ ಹುಡುಕಲು ಮತ್ತು ಕಂಡುಹಿಡಿಯಲು ಮಾನವನಲ್ಲಿ ಹುದುಗಿರುವ ಸಹಜವಾದ ಬಯಕೆಯಾಗಿದೆ. ಇದುವೇ ಅವನ ಬೆಳವಣಿಗೆಯ, ವಿಸ್ತರಣಾ ಪ್ರವ್ರುತ್ತಿಯ ಹಿಂದಿನ ಕಾರಣವಾಗಿದೆ. ಇಶ್ಟೆಲ್ಲಾ ಪೀಟಿಕೆಯ ಉದ್ದೇಶವಿಶ್ಟೆ, ಇಂತಹ ಕುತೂಹಲವು ಇಲಾನ್ ಮಸ್ಕ್ ಅವರಿಗೆ ಒಂದು ಅದ್ಬುತ ಕನಸನ್ನು ಕಾಣಲು ಎಡೆಮಾಡಿಕೊಟ್ಟಿದೆ. ಏನು ಆ ಕನಸು? ಮಂಗಳ ಸುತ್ತುಗವನ್ನು(Planet) ವಸಾಹತು ಮಾಡಿಕೊಳ್ಳುವುದು, ಅಂದರೆ ಬೂಮಿಯ ಮಂದಿಯನ್ನು ಬಾನಬಂಡಿಗಳ (spaceship/spacecraft) ಆಸರೆಯಿಂದ  ಮಂಗಳಕ್ಕೆ ಕಳುಹಿಸಿ ಅಲ್ಲಿ ಮಾನವರ ನೆಲಸೆ(Colony) ಮಾಡುವ ಯೋಜನೆ. ಯಾರೀ ಇಲಾನ್ ಮಸ್ಕ್ ? ಯಾವುದದು ಯೋಜನೆ ? ಮಂಗಳವೇ ಏಕೆ ? ಇದು ಸಾದ್ಯಾನಾ ? ಆ ಯೋಜನೆಯ ಹೆಸರೇನು ? ಇಂತಹ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದ್ದರೆ; ಮುಂದೆ ಓದಿ. 

ಸ್ಪೇಸ್ ಎಕ್ಸ್ (SpaceX)  ಮತ್ತು ಇಲಾನ್ ಮಸ್ಕ್ ಅವರ ಕಿರು ಪರಿಚಯ

ಇಲಾನ್ ಮಸ್ಕ್, ಸ್ಪೇಸ್ ಎಕ್ಸ್ (SpaceX) ಮತ್ತು ಟೆಸ್ಲಾ (Tesla) ಕಂಪನಿಯನ್ನು ಹುಟ್ಟು ಹಾಕಿದವರಾಗಿದ್ದಾರೆ. ಸ್ಪೇಸ್ ಎಕ್ಸ್  ಬಾನಬಂಡಿಗಳನ್ನು ವಿನ್ಯಾಸಗೊಳಿಸುವ, ತಯಾರಿಸುವ, ಹಾರಿಸುವ ಮತ್ತು ಬಾನ (space) ಸಾರಿಗೆ ಸೇವೆಗಳನ್ನು ನೀಡುವ ಕಂಪನಿಯಾಗಿದೆ. ಹೊರಬಾನಿನ  ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಮಂಗಳವನ್ನು ಮಾನವರ ನೆಲೆಯಾಗಿಸಲು ಈ ಕಂಪನಿಯು 2002ರಲ್ಲಿ ಇಲಾನ್ ಮಸ್ಕ್ ಅವರಿಂದ ಸ್ತಾಪಿತವಾಯಿತು. ಸ್ಪೇಸ್‌ಎಕ್ಸಿನ ಮುಕ್ಯ ಕಚೇರಿ ಹಾತೋರ್, ಕ್ಯಾಲಿಪೋರ‍್ನಿಯಾದಲ್ಲಿದೆ. ಹಾಗೆಯೇ  ಟೆಸ್ಲಾ, ಇದು  ಎಲೆಕ್ಟ್ರಾನಿಕ್ ಗಾಡಿಗಳ ತಯಾರಿಕಾ ಸಂಸ್ತೆಯಾಗಿದೆ.

ಸ್ಪೇಸ್‌ಎಕ್ಸ್ ತನ್ನ ಮೂಲ  ಹಮ್ಮುಗೆಗಳ (Project) ಜೊತೆಗೆ ಇನ್ನೂ ಹಲವಾರು ಹಮ್ಮುಗೆ ಮತ್ತು  ಏರ‍್ಪಾಟುಗಳನ್ನು  ಹೊಂದಿದ್ದು ಅವುಗಳ ಚುಟುಕಾದ ಪರಿಚಯವನ್ನು ಪಡೆಯೋಣ.

1. ಪಾಲ್ಕನ್ 9 – ಪಾಲ್ಕನ್ ಹೆವಿ ( Falcon-9 and Falcon Heavy )

       ಸ್ಪೇಸ್‌ಎಕ್ಸಿನ ರಾಕೆಟ್ಗಳ ಅವತರಣಿಕೆಗಳು.

ಫಾಲ್ಕನ್-9

2.  ಸ್ಟಾರ್‌ಶಿಪ್(Starship)

ಇದು, ಸ್ಪೇಸ್‌ಎಕ್ಸ್ ಅಬಿವ್ರುದ್ದಿ ಪಡೆಸುತ್ತಿರುವ , ಹೆಚ್ಚು ತೂಕದ ವಸ್ತುಗಳನ್ನು ಹೊತ್ತೊಯ್ಯುವ ಬಾನಬಂಡಿ. ಸುತ್ತುಗಗಳ ನಡುವಣ(Inter planetary) ಬಾನ ಹಾರಾಟಕ್ಕಾಗಿ ಕಾಸಗಿಯಾಗಿ ಹೂಡಿಕೆ ಪಡೆದುಕೊಂಡಿದೆ

 

3. ಸ್ಟಾರ್‌ಲಿಂಕ್ ( Starlink )

 ಇದು ಸ್ಪೇಸ್‌ ಎಕ್ಸ್ ಕಟ್ಟುತ್ತಿರುವ ಸುತ್ತುಗಗಳ ಕೂಡುಬಲೆಯ ಕೂಟವಾಗಿದೆ (satellite internet constellation) 

ಸ್ಟಾರ‍್ಲಿಂಕ್

4. ಡ್ರ್ಯಾಗನ್ (Dragon)

ಇದು  ಬೂಮಿಯ ಸುತ್ತುದಾರಿಗೆ (Orbit) ಮತ್ತು ಅದರ ಆಚೆಗೆ ಸರಕನ್ನು ಕೊಂಡೊಯ್ಯುವ ಸ್ಪೇಸ್‌ಎಕ್ಸಿನ ಬಾನಬಂಡಿ. ಇದು ಮನುಶ್ಯರನ್ನು ಹೊಂದಿರದ ಮತ್ತು ಮನುಶ್ಯರನ್ನು ಹೊಂದಿದ (ಸದ್ಯಕ್ಕೆ7 ಜನ) ಎರಡೂ ಮಾದರಿಯ ಸ್ಪೇಸ್ ಕ್ರಾಪ್ಟನ್ನು ಹೊಂದಿದೆ. ಬೂಮಿಯ ಇತರೆ ಸುತ್ತುದಾರಿಗೆ, ಚಂದ್ರನೆಡೆಗೆ ಮತ್ತು ಹೊರಬಾನ ನಿಲ್ದಾಣದೆಡೆಗೆ (Space Station) ಮಾನವರನ್ನು ಕೊಂಡೊಯ್ಯುವ ಕಮರ‍್ಶಿಯಲ್ ಹಮ್ಮುಗೆಗಳನ್ನು ಡ್ರ್ಯಾಗನ್ ಮೂಲಕ ಕೈಗೊಳ್ಳಲಾಗುತ್ತಿದೆ.

ಹಗಲಿನಲ್ಲಿ ಹಿಮಾಲಯ, ಅಮೆಜಾನ್ ನದಿ, ಗೀಜಾದ ಪಿರಮಿಡ್‌ಗಳು ಮತ್ತು ಗ್ರೇಟ್ ಬ್ಯಾರಿಯರ್ ರೀಪ್, ರಾತ್ರಿಯ ಹೊತ್ತಿನಲ್ಲಿ ನಗರಗಳ ದೀಪಗಳು, ಮಿಂಚಿನ ಬಿರುಗಾಳಿಗಳು ಮತ್ತು ಅರೋರಾ ಬೋರಿಯಾಲಿಸ್‌ಗಳ ಹೊಳಪು ; ಹೀಗೆ ಬೂಮಿಯ ಅದ್ಬುತಗಳನ್ನು ಇದರ ಜೊತೆಗಿನ ಹಾರಾಟದ ಮೂಲಕ ಅನುಬವಿಸಬಹುದು. ಡ್ರ‍್ಯಾಗನ್ ಪ್ರತಿ 90 ನಿಮಿಶಗಳಿಗೊಮ್ಮೆ ಬೂಮಿಯನ್ನು ಸಂಪೂರ‍್ಣವಾಗಿ ಸುತ್ತುಹಾಕುತ್ತದೆ, ಇದರ ಮೂಲಕ ನಮಗೆ ಹೇಗೆ ಬೇಕೋ ಹಾಗೆ ಹಾರಾಟದ ದಾರಿಯನ್ನು ಅಳವಡಿಸಿಕೊಂಡು ಸಾಗಲು ನೆರವಾಗುತ್ತದೆ. ಜೊತೆಗೆ ನಮ್ಮ ಊರು, ಪ್ರಸಿದ್ದ ಹೆಗ್ಗುರುತುಗಳು ಮತ್ತು ನೆಚ್ಚಿನ ತಾಣಗಳ ಮೇಲೆ ಕೂಡ ಹಾರಬಹುದಾಗಿದೆ.

ಡ್ರಾಗನ್

ಮಂಗಳವನ್ನು ತಲುಪುವುದು ಮತ್ತು ಅದನ್ನು ನೆಲೆ ಮಾಡಿಕೊಳ್ಳುವುದರಲ್ಲಿ ಈ ಮೇಲಿನ 4 ಹಮ್ಮುಗೆಗಳು ಅರಿದಾದ ಪಾತ್ರ ಹೊಂದಿವೆ. ಈ ಹಮ್ಮುಗೆಗೆ ಇಲಾನ್ ಮಸ್ಕ್ ಮಂಗಳವನ್ನೇ ಆಯ್ದು ಕೊಂಡಿದ್ದೇಕೆ ? ಏನು ಈ ಮೇಲಿನ ಹಮ್ಮುಗೆಗಳ ಪಾತ್ರ ? ಈ ಕೇಳ್ವಿಗಳು ನಿಮ್ಮಲ್ಲಿದ್ದರೆ, ಮುಂದಿನ ಕಂತಿಗಾಗಿ ಕೊಂಚ ಕಾಯಿರಿ 🙂

(ಚಿತ್ರ ಮತ್ತು ಮಾಹಿತಿಸೆಲೆ: spacex.com , unsplash.com , unsplash.com , flickr.com  )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *