ಪಂಪ ಬಾರತ ಓದು – 3ನೆಯ ಕಂತು

ಸಿ.ಪಿ.ನಾಗರಾಜ.

(ಪಂಪನ ವಿಕ್ರಮಾರ‍್ಜುನ ವಿಜಯ ಕಾವ್ಯದ ಮೊದಲನೆ ಆಶ್ವಾಸದ 80 ರ ಗದ್ಯದಿಂದ 86 ನೆಯ ಪದ್ಯದವರೆಗಿನ ಪಟ್ಯವನ್ನು ಈ ಪ್ರಸಂಗದಲ್ಲಿ ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರಗಳು

ಗಾಂಗೇಯ – ಶಂತನು ಮತ್ತು ಗಂಗಾದೇವಿಯ ಮಗ. ಶಂತನು ಮಹಾರಾಜನ ಹಿರಿಯ ಮಗ. ಈತನು ಸತ್ಯವತಿಯ ತಂದೆಯಾದ ದಾಶರಾಜನಿಗೆ ನೀಡಿದ್ದ ವಾಗ್ದಾನವನ್ನು ಬಿಡದೆ ಪಾಲಿಸಿದ್ದರಿಂದ “ಬೀಶ್ಮ“ ನೆಂಬ ಹಿರಿಮೆಯ ಹೆಸರು ಬಂದಿತ್ತು.
ಸತ್ಯವತಿ – ಶಂತನು ಮಹಾರಾಜನ ಹೆಂಡತಿ. ಈಕೆಗೆ ಯೋಜನಗಂದಿ ಎಂಬ ಮತ್ತೊಂದು ಹೆಸರಿದೆ.
ವಿಚಿತ್ರವೀರ್ಯ – ಶಂತನು ಮತ್ತು ಸತ್ಯವತಿಯ ಮಗ.
ಕೃಷ್ಣದ್ವೈಪಾಯನ – ಪರಾಶರ ಮುನಿ ಮತ್ತು ಯೋಜನಗಂದಿಯ ಮಗ. ಈತನಿಗೆ ವ್ಯಾಸ ಎಂಬ ಮತ್ತೊಂದು ಹೆಸರಿದೆ.
ಅಂಬಿಕೆ – ಹಸ್ತಿನಾವತಿಯ ರಾಜನಾಗಿದ್ದ ವಿಚಿತ್ರವೀರ‍್ಯನ ಮೊದಲನೆಯ ಹೆಂಡತಿ. ಕಾಶಿರಾಜನ ಎರಡನೆಯ ಮಗಳು.
ಅಂಬಾಲಿಕೆ – ಹಸ್ತಿನಾವತಿಯ ರಾಜನಾಗಿದ್ದ ವಿಚಿತ್ರವೀರ‍್ಯನ ಎರಡನೆಯ ಹೆಂಡತಿ. ಕಾಶಿರಾಜನ ಮೂರನೆಯ ಮಗಳು
ದಾಸಿ – ರಾಣಿವಾಸದಲ್ಲಿ ಅಂಬಿಕೆಯ ದಾಸಿ.

=============================================

ಧೃತರಾಷ್ಟ್ರ ಪಾಂಡು ವಿದುರ ಜನನ ಪ್ರಸಂಗ

ಭೀಷ್ಮರ ಬೆಂಬಲದೊಳ್ ವಿಚಿತ್ರವೀರ್ಯನುಮ್ ಅವಾರ್ಯವೀರ್ಯನುಮ್ ಆಗಿ ಕೆಲವು ಕಾಲಮ್ ರಾಜ್ಯಲಕ್ಷ್ಮಿಯಮ್ ತಾಳ್ದಿ , ರಾಜಯಕ್ಷ್ಮತಪ್ತ ಶರೀರನ್ ಆತ್ಮಜ ವಿಗತಜೀವಿಯಾಗಿ ಪರಲೋಕಪ್ರಾಪ್ತನ್ ಆದೊಡೆ; ಗಾಂಗೇಯನುಮ್ ಸತ್ಯವತಿಯುಮ್ ಅತ್ಯಂತ ಶೋಕಾನಲ ದಹ್ಯಮಾನ ಮಾನಸರ್ಕಳಾಗಿ ಆತಂಗೆ ಪರಲೋಕಕ್ರಿಯೆಗಳಮ್ ಮಾಡಿ , ರಾಜ್ಯಮ್ ನಷ್ಟರಾಜಮ್ ಆದುದರ್ಕೆ ಮಮ್ಮಲಮ್ ಮಱುಗಿ ಯೋಜನಗಂಧಿ ಸಿಂಧುಪುತ್ರನನ್ ಇಂತು ಎಂದಳ್

ಸತ್ಯವತಿ: ಮಗನೆಂಬಂತು ಧರಿತ್ರಿ ನಿನ್ನನುಜರನ್ ಕೈಕೊಂಡು , ಮುನ್ ಪೂಣ್ದ ನನ್ನಿಗೆ ಬನ್ನಮ್ ಬರಲ್ ಈಯದೆ , ಆರ್ತು ಎಸಗಿದ ಈ ವಿಖ್ಯಾತಿಯುಮ್ ಕೀರ್ತಿಯುಮ್ ಮುಗಿಲಮ್ ಮುಟ್ಟಿದುದು ಅಲ್ತೆ . ನಮ್ಮ ಕುಲದೊಳ್ ಮಕ್ಕಳ್ ಪೆಱರ್, ನೀನೇ ಜಟ್ಟಿಗನೈ . ಮುನ್ನಿನ ಒರಂಟು ಬೇಡ . ಮಗನೇ ಧರಾಭಾರಮಮ್ ಕೈಕೊಳ್ ಎಂದು ನಿನ್ನನ್ ಆನ್ ಇನಿತನ್ ಕೈಯೊಡ್ಡಿ ಬೇಡಿದೆನ್.

(ಎಂದ ಸತ್ಯವತಿಗೆ ಅಮರಾಪಗಾ ನಂದನನ್ ಇಂತು ಎಂದನ್.)

ಗಾಂಗೇಯ: ರಾಜ್ಯಮ್ ಕಿಡುಗುಮೆ . ರಾಜ್ಯದ ತೊಡರ್ಪು ಅದು ಏವಾಳ್ತೆ ಬಾಳ್ತೆ. ನನ್ನಿಯ ನುಡಿಯನ್ ಕಿಡೆ ನೆಗಳೆ , ನಾನುಮ್ ಎರಡನ್ ನುಡಿದೊಡೆ , ಹರಿ ಹರ ಹಿರಣ್ಯಗರ್ಭರ್ ನಗರೇ. ಹಿಮಕರನ್ ಆತ್ಮಶೀತರುಚಿಯನ್; ದಿನನಾಯಕನ್ ಉಷ್ಣದೀಧಿತಿಕ್ರಮಮನ್; ಅಗಾಧ ವಾರಿಯೆ ಗುಣ್ಪನ್; ಇಳಾವಧು ತನ್ನ ತಿಣ್ಪನ್ ; ಉತ್ತಮ ಕುಲಶೈಲಮ್ ಉನ್ನತಿಯನ್ ಏಳಿದವಾಗೆ ಬಿಸುಳ್ಪೊಡಮ್ ಬಿಸುಳ್ಕೆಮ. ಈಗಳ್ ಅಂಬಿಕೇ, ಮದೀಯ ಪುರುಷವ್ರತಮ್ ಒಂದುಮನ್ ಬಿಸುಡೆನ್.

ಎಂದು ತನ್ನ ನುಡಿದ ಪ್ರತಿಜ್ಞೆಯನ್ ಏಗೆಯ್ದು ತಪ್ಪಿದನ್ ಇಲ್ಲ. ರಂಗತ್ತರಂಗ ವಾರ್ಧಿ ಚಯಂಗಳ್ ತಂತಮ್ಮ ಮೇರೆಯಮ್ ದಾಂಟುವೊಡಮ್ ಗಾಂಗೇಯನುಮ್ ಪ್ರತಿಜ್ಞಾಗಾಂಗೇಯನುಮ್ ಒರ್ಮೆ ನುಡಿದುದನ್ ತಪ್ಪುವರೇ . ಅಂತು ಅಚಲಿತ ಪ್ರತಿಜ್ಞಾರೂಢನಾದ ಗಾಂಗೇಯನನ್ ಏಗೆಯ್ದುಮ್ ಒಡಂಬಡಿಸಲಾಱದೆ , ಸತ್ಯವತಿ ತಾನುಮ್ ಆತನುಮ್ ಆಳೋಚಿಸಿ ನಿಶ್ಚಿತಮಂತ್ರರಾಗಿ ಕೃಷ್ಣದ್ವೈಪಾಯನನನ್ ನೆನೆದು ಬರಿಸಿದೊಡೆ…)

ವ್ಯಾಸ: ಏಗೆಯ್ವುದು?….. ಏನಮ್ ತೀರ್ಚುವುದು?

ಸತ್ಯವತಿ: ಹಿರಣ್ಯಗರ್ಭ ಬ್ರಹ್ಮರಿನ್ ತಗುಳ್ದು ಅವ್ಯವಚ್ಛಿನ್ನಮಾಗಿ ಬಂದ ಎಮ್ಮ ಸೋಮವಂಶಮ್ , ಈಗಳ್ ಕುಲಸಂತತಿಗಮ್ ಆರುಮ್ ಇಲ್ಲದೆ ಎಡೆ ಪಱಿದು ಕಿಡುವಂತಾಗಿ ಇರ್ದುದು ಕಾರಣದಿನ್ , ನಿಮ್ಮ ತಮ್ಮನ್ ವಿಚಿತ್ರವೀರ್ಯನ ಕ್ಷೇತ್ರದೊಳ್ ಅಂಬಿಕೆಗಮ್ ಅಂಬಾಲೆಗಮ್ ಪುತ್ರರ್ ಅಪ್ಪಂತು ವರಪ್ರಸಾದಮನ್ ದಯೆಗೆಯ್ವುದು.

ವ್ಯಾಸ: ಅಂತೆ ಗೆಯ್ವನ್.

(ಎಂದು ತ್ರಿದಶ ನರ ಅಸುರ ಉರಗ ಗಣ ಪ್ರಭು ನಿಶ್ಚಿತ ತತ್ವಯೋಗಿ ಯೋಗದ ಬಲಮ್ ಉಣ್ಮಿ ಪೊಣ್ಮಿ ನಿಲೆ , ಪುತ್ರ ವರಾರ್ಥಿಗಳಾಗಿ ತನ್ನ ಕಟ್ಟಿದಿರೊಳೆ ನಿಂದರನ್ ನಯದೆ ನೋಡೆ, ಮುನೀಂದ್ರನ ದಿವ್ಯದೃಷ್ಟಿ ಮಂತ್ರದೊಳೆ ಆ ಸತಿಯರ್ ಇರ್ವರೊಳಮ್ ನವಗರ್ಭವಿಭ್ರಮಮ್ ಪೊದಳ್ದುದು . ಅಂತು ದಿವ್ಯಸಂಯೋಗದೊಳ್ ಇರ್ವರುಮ್ ಗರ್ಭಮನ್ ತಾಳ್ದರ್. “ಮತ್ತೊರ್ವ ಮಗನನ್ ವರಮನ್ ಬೇಡು“ ಎಂದು ಅಂಬಿಕೆಗೆ ಪೇಳ್ದೊಡೆ, ಆಕೆಯುಮ್ ವ್ಯಾಸಭಟ್ಟಾರಕನಲ್ಲಿಗೆ ಪೋಗಲ್ ಅಲಸಿ , ತನ್ನ ಸೂಳಾಯ್ತೆಯನ್ ತನ್ನವೊಲೆ ಕಯ್ಗೆಯ್ದು ಬರವನ್ ಬೇಡಲ್ ಅಟ್ಟಿದೊಡೆ ಆಕೆಗೆ ವರದನಾಗಿ , ವ್ಯಾಸಮುನೀಂದ್ರನ್ ಸತ್ಯವತಿಗಮ್ ಭೀಷ್ಮಂಗಮ್ ಇಂತು ಎಂದನ್.)

ವ್ಯಾಸ: ಎನ್ನ ವರಪ್ರಸಾದ ಕಾಲದೊಳ್ ಎನ್ನಮ್ ಕಂಡು ಅಂಬಿಕೆ ಕಣ್ಣಮ್ ಮುಚ್ಚಿದಳ್ ಅಪ್ಪುದಱಿಂದ ಆಕೆಗೆ ಧೃತರಾಷ್ಟ್ರನ್ ಎಂಬ ಮಗನ್ ಅತ್ಯಂತ ಸುಂದರಾಂಗನಾಗಿಯುಮ್ ಜಾತ್ಯಂಧನಕ್ಕುಮ್; ಅಂಬಾಲೆ ಮದ್ರೂಪಮಮ್ ಕಂಡು ಮೊಗಮನ್ ಪಾಂಡುರಮ್ ಮಾಡಿದಳ್ ಅಪ್ಪುದಱಿಂದ ಆಕೆಗೆ ಪಾಂಡುರೋಗಸಂಗತನುಮ್ ಅನೇಕ ಭದ್ರಲಕ್ಷಣಲಕ್ಷಿತನುಮ್ ಅತ್ಯಂತ ಪ್ರತಾಮನುಮಾಗಿ ಪಾಂಡುರಾಜನೆಂಬ ಮಗನಕ್ಕುಮ್ ; ಅಂಬಿಕೆಯ ಸೂಳಾಯ್ತೆಯಪ್ಪಾಕೆ ದರಸಹಿತ ವದನಾರವಿಂದೆಯಾಗಿ ಬರವನ್ ಕೈಕೊಂಡಳ್ ಅಪ್ಪುದಱಿಂದ ಆಕೆಯ ಮಗನ್ ವಿದುರನೆಂಬನ್ ಅನಂಗಾಕಾರನುಮ್ ಆಚಾರವಂತನುಮ್ ಬುದ್ಧಿವಂತನುಮ್ ಅಕ್ಕುಮ್.

(ಎಂದು ಪೇಳ್ದು ಮುನಿಪುಂಗವನ್ ಪೋದನ್. ಇತ್ತ ವರಮ್ ಪಡೆದ ಸಂತಸಮ್ ಮನದೊಳಾಗಲ್ ಒಂದು ಉತ್ತರೋತ್ತರಮ್ ಬಳೆವ ಮಾಳ್ಕೆಯಿಮ್ ಬಳೆವ ಗರ್ಭಮಮ್ ತಾಳ್ದಿ ಅಂದು ಆದರಮ್ ಬೆರಸು ಮೂವರು ಕ್ರಮದೆ ವಿಖ್ಯಾತ ಧೃತರಾಷ್ಟ್ರ, ಪಾಂಡುರಾಜ ವಿದುರರ್ಕಳಮ್ ಮೂವರನ್ ಪೆತ್ತರ್)

==================================================

ಪದ ವಿಂಗಡಣೆ ಮತ್ತು ತಿರುಳು:

ಬೆಂಬಲ+ಒಳ್; ಬೆಂಬಲ=ನೆರವು; ವಿಚಿತ್ರವೀರ್ಯನ್+ಉಮ್; ಅವಾರ್ಯ+ವೀರ್ಯನ್+ಉಮ್; ಉಮ್=ಊ; ಅವಾರ್ಯ=ಅಡೆತಡೆಯಿಲ್ಲದೆ ಮುಂದುವರಿಯುವುದು; ವೀರ್ಯ=ಕಲಿತನ/ಬಲ/ಕೆಚ್ಚು; ಅವಾರ್ಯವೀರ್ಯನ್=ಮಹಾ ಶೂರ;

ಭೀಷ್ಮರ ಬೆಂಬಲದೊಳ್ ವಿಚಿತ್ರವೀರ್ಯನುಮ್ ಅವಾರ್ಯವೀರ್ಯನುಮ್ ಆಗಿ=ಗಾಂಗೇಯರ ನೆರವಿನಿಂದ ವಿಚಿತ್ರವೀರ‍್ಯನು ಯಾವುದೇ ಅಡೆತಡೆಗಳಿಲ್ಲದೆ ಕಲಿತನದಿಂದ ರಾಜ್ಯವನ್ನು ಆಳುತ್ತಿರಲಾಗಿ;

ತಾಳ್=ಹೊಂದು/ಪಡೆ; ಲಕ್ಷ್ಮಿ=ವ್ಯಕ್ತಿಯ ಬಳಿಯಿರುವ ಬೂಮಿ, ಬೆಲೆಬಾಳುವ ಒಡವೆ ವಸ್ತು ಹಣ, ರಾಜ್ಯದ ಒಡೆತನದ ಗದ್ದುಗೆ ಮುಂತಾದ ಸಂಪತ್ತಿಗೆ ಜನಸಮುದಾಯ ಲಕ್ಶ್ಮಿ ಎಂಬ ಹೆಣ್ಣು ದೇವತೆಯನ್ನು ಕಲ್ಪಿಸಿಕೊಂಡಿದೆ; ರಾಜ್ಯಲಕ್ಷ್ಮಿ=ರಾಜ್ಯದ ಒಡೆತನ;

ಕೆಲವು ಕಾಲಮ್ ರಾಜ್ಯಲಕ್ಷ್ಮಿಯಮ್ ತಾಳ್ದಿ=ಕೆಲವು ವರುಶಗಳ ಕಾಲ ರಾಜ್ಯದ ಆಡಳಿತದ ಜವಾಬ್ದಾರಿಯನ್ನು ಹೊತ್ತು ರಾಜ್ಯವನ್ನು ಮುನ್ನಡೆಸುತ್ತಿರುವಾಗ;

ರಾಜ=ದೊಡ್ಡ; ಯಕ್ಷ್ಮ=ಒಂದು ರೋಗದ ಹೆಸರು. ಶ್ವಾಸಕೋಶಕ್ಕೆ ತಗುಲಿದ ನಂಜಿನಿಂದ ಬರುವ ಕ್ಶಯರೋಗ; ರಾಜಯಕ್ಷ್ಮ=ದೊಡ್ಡ ಪ್ರಮಾಣದಲ್ಲಿ ತಗುಲಿದ ಕ್ಶಯರೋಗ; ತಪ್ತ=ಸಂಕಟವನ್ನು ಹೊಂದುವುದು; ಆತ್ಮಜ=ಮಗ; ವಿಗತ=ಅಗಲಿದ; ಆತ್ಮವಿಗತಜೀವಿಯಾಗಿ=ಮಕ್ಕಳನ್ನು ಪಡೆಯುವುದಕ್ಕೆ ಮುನ್ನವೇ ಸಾವನ್ನಪ್ಪಿದವನಾಗಿ; ಪರಲೋಕ=ಮತ್ತೊಂದು ಲೋಕ; ವ್ಯಕ್ತಿಯು ಸತ್ತ ನಂತರ ಮತ್ತೊಂದು ಲೋಕಕ್ಕೆ ಹೋಗುತ್ತಾನೆ ಎಂಬ ನಂಬಿಕೆಯು ಜನಮನದಲ್ಲಿದೆ; ಪ್ರಾಪ್ತ=ಹೊಂದುವುದು/ಪಡೆಯುವುದು; ಆದೊಡೆ=ಆದರೆ; ಪರಲೋಕ ಪ್ರಾಪ್ತನ್ ಆದೊಡೆ=ಸಾವನ್ನಪ್ಪಲು;

ರಾಜಯಕ್ಷ್ಮ ತಪ್ತ ಶರೀರನ್ ಆತ್ಮಜ ವಿಗತಜೀವಿಯಾಗಿ ಪರಲೋಕಪ್ರಾಪ್ತನ್ ಆದೊಡೆ=ಶರೀರದಲ್ಲಿ ದೊಡ್ಡದಾಗಿ ಹರಡಿದ ಕ್ಶಯರೋಗದಿಂದ ನೊಂದು ಬೆಂದು ಮಕ್ಕಳನ್ನು ಪಡೆಯುವುದಕ್ಕೆ ಮೊದಲೇ ವಿಚಿತ್ರವೀರ‍್ಯನು ಸಾವನ್ನಪ್ಪಲು;

ಗಾಂಗೇಯನ್+ಉಮ್; ಸತ್ಯವತಿ+ಉಮ್; ಅತ್ಯಂತ=ಅತಿ ಹೆಚ್ಚಿನ; ಶೋಕ+ಅನಲ; ಶೋಕ=ಸಂಕಟ/ವೇದನೆ/ಅಳಲು; ಅನಲ=ಬೆಂಕಿ; ದಹ್ಯಮಾನ=ಸುಡುತ್ತಿರುವ; ಮಾನಸ+ಅರ್+ಕಳ್+ಆಗಿ; ಕಳ್=ಗಳು; ಮಾನಸ=ಮನಸ್ಸು; ಮಾನಸರ್=ಮನಸ್ಸಿನವರು;

ಗಾಂಗೇಯನುಮ್ ಸತ್ಯವತಿಯುಮ್ ಅತ್ಯಂತ ಶೋಕಾನಲ ದಹ್ಯಮಾನ ಮಾನಸರ್ಕಳಾಗಿ=ಗಾಂಗೇಯನೂ ಸತ್ಯವತಿಯೂ ಅತಿ ಹೆಚ್ಚಿನ ಸಂಕಟದ ಬೆಂಕಿಯಲ್ಲಿ ಬೇಯುತ್ತ ಮಾನಸಿಕವಾಗಿ ತುಂಬಾ ನೊಂದುಕೊಂಡು;

ಆತಂಗೆ=ವಿಚಿತ್ರವೀರ‍್ಯನಿಗೆ; ಪರಲೋಕ+ಕ್ರಿಯೆ+ಗಳ್+ಅಮ್; ಕ್ರಿಯೆ=ಆಚರಣೆ; ಅಮ್=ಅನ್ನು; ಪರಲೋಕ ಕ್ರಿಯೆ=ವ್ಯಕ್ತಿಯು ಸತ್ತ ನಂತರ ಅವನ ಜೀವಕ್ಕೆ ಪರಲೋಕದಲ್ಲಿ ಸದ್ಗತಿಯು ದೊರೆಯಲೆಂದು ಮಾಡುವ ಆಚರಣೆಗಳು;

ಆತಂಗೆ ಪರಲೋಕಕ್ರಿಯೆಗಳಮ್ ಮಾಡಿ= ಸಾವಿನ ನಂತರ ಮಾಡಬೇಕಾದ ಆಚರಣೆಗಳನ್ನು ವಿಚಿತ್ರವೀರ‍್ಯನಿಗೆ ಮಾಡಿ;

ನಷ್ಟ=ಇಲ್ಲವಾಗುವುದು; ಆದುದರ್ಕೆ=ಆಗಿದ್ದಕ್ಕೆ; ಮಮ್ಮಲ=ಬಹಳವಾಗಿ/ಅತಿಯಾಗಿ; ಮಱುಗು=ಸಂಕಟಪಡು/ಚಿಂತಿಸು;

ರಾಜ್ಯಮ್ ನಷ್ಟರಾಜಮ್ ಆದುದರ್ಕೆ ಮಮ್ಮಲಮ್ ಮಱುಗಿ=ರಾಜ್ಯಕ್ಕೆ ರಾಜನಿಲ್ಲದಂತಾದುದಕ್ಕಾಗಿ ಬಹಳವಾಗಿ ಚಿಂತಿಸುತ್ತ;

ಯೋಜನಗಂಧಿ=ಸತ್ಯವತಿಗೆ ಇದ್ದ ಮತ್ತೊಂದು ಹೆಸರು; ಸಿಂಧು=ನದಿ; ಸಿಂಧುಪುತ್ರ=ಗಂಗಾದೇವಿಯ ಮಗ ಗಾಂಗೇಯ; ಇಂತು=ಈ ರೀತಿ; ಎಂದಳ್=ಹೇಳಿದಳು;

ಯೋಜನಗಂಧಿ ಸಿಂಧುಪುತ್ರನನ್ ಇಂತು ಎಂದಳ್= ಸತ್ಯವತಿಯು ಗಾಂಗೇಯನನ್ನು ಕುರಿತು ಈ ರೀತಿ ಹೇಳಿದಳು;

ಮಗನ್+ಎಂಬ+ಅಂತು; ಎಂಬ=ಎನ್ನುವ; ಅಂತು=ರೀತಿಯಲ್ಲಿ; ಧರಿತ್ರಿ=ಬೂಮಂಡಲ/ಲೋಕ; ನಿನ್ನ+ಅನುಜರನ್; ಅನುಜ=ತಮ್ಮ; ಕೈಕೊಂಡು=ಸ್ವೀಕರಿಸಿ;

ಮಗನ್ ಎಂಬಂತು ಧರಿತ್ರಿ ನಿನ್ನನುಜರನ್ ಕೈಕೊಂಡು=“ಮಗನೆಂದರೆ ನೀನೆ ಮಗ“ ಎಂದು ಲೋಕವೆಲ್ಲ ಹೊಗಳುವ ರೀತಿಯಲ್ಲಿ ನಿನ್ನ ತಮ್ಮಂದಿರ ಜವಾಬ್ದಾರಿಯನ್ನು ವಹಿಸಿಕೊಂಡು;

ಮುನ್=ಈ ಮೊದಲು; ಪೂಣ್=ಮಾತು ಕೊಡು/ವಾಗ್ದಾನ ನೀಡು; ನನ್ನಿ=ವಚನ/ನುಡಿ; ಬನ್ನ=ಚ್ಯುತಿ/ಹಾನಿ; ಈ=ನೀಡು/ಕೊಡು; ಈಯದೆ=ಅವಕಾಶವನ್ನು ಕೊಡದೆ;

ಮುನ್ ಪೂಣ್ದ ನನ್ನಿಗೆ ಬನ್ನಮ್ ಬರಲ್ ಈಯದೆ=ಈ ಮೊದಲು ನನ್ನ ತಂದೆಯಾದ ದಾಶರಾಜನಿಗೆ ನೀನು ನೀಡಿದ್ದ “ನನಗೂ ರಾಜ್ಯದ ಪಟ್ಟಕ್ಕೂ ಯಾವ ನಂಟು ಇಲ್ಲ“ ಎಂಬ ಮಾತಿಗೆ ತಪ್ಪಿ ನಡೆಯದೆ;

ಆರ್ತು=ಶಕ್ತನಾಗಿ; ಎಸಗು=ಮಾಡು; ವಿಖ್ಯಾತಿ+ಉಮ್; ಕೀರ್ತಿ+ಉಮ್; ಮುಗಿಲ+ಅಮ್; ಮುಗಿಲು=ಆಕಾಶ/ಬಾನು; ಅಲ್ತೆ=ಅಲ್ಲವೇ;

ಆರ್ತು ಎಸಗಿದ ಈ ವಿಖ್ಯಾತಿಯುಮ್ ಕೀರ್ತಿಯುಮ್ ಮುಗಿಲಮ್ ಮುಟ್ಟಿದುದು ಅಲ್ತೆ =ಕೊಟ್ಟ ಮಾತಿಗೆ ತಪ್ಪಿ ನಡೆಯದೆ ನೀನು ಮಾಡಿದ ಕಾರ‍್ಯಗಳಿಂದ ನಿನ್ನ ವ್ಯಕ್ತಿತ್ವಕ್ಕೆ ದೊರಕಿದ ಕೀರ‍್ತಿ ಮತ್ತು ಮನ್ನಣೆಯು ಮುಗಿಲನ್ನು ಮುಟ್ಟಿದೆಯಲ್ಲವೇ;

ಕುಲ+ಒಳ್; ಕುಲ=ಮನೆತನ/ವಂಶ; ಪೆಱರ್=ಇತರರು; ಜಟ್ಟಿಗ=ಶೂರ/ವೀರ;

ನಮ್ಮ ಕುಲದೊಳ್ ಮಕ್ಕಳ್ ಪೆಱರ್ ನೀನೇ ಜಟ್ಟಿಗನೈ=ನಮ್ಮ ವಂಶದಲ್ಲಿ ನಿನ್ನಂತಹ ಮಕ್ಕಳು ಬೇರೆ ಯಾರಿದ್ದಾರೆ. ನೀನೇ ವೀರ;

ಮುನ್ನಿನ=ಈ ಮೊದಲಿನ; ಒರಂಟು=ಒರಟುತನ/ಹಟಮಾರಿತನ/ಒಂದೇ ನಿಲುವಿಗೆ ಅಂಟಿಕೊಂಡಿರುವುದು;

ಮುನ್ನಿನ ಒರಂಟು ಬೇಡ=ಈ ಮೊದಲು ನೀನು “ರಾಜ್ಯದ ಪಟ್ವವನ್ನು ಎಂದಿಗೂ ಸ್ವೀಕರಿಸುವುದಿಲ್ಲ” ಎಂದು ನನ್ನ ತಂದೆಗೆ ನೀಡಿದ್ದ ವಾಗ್ದಾನಕ್ಕೆ ಅಂಟಿಕೊಂಡು ಹಟಮಾರಿಯಾಗಬೇಡ;

ಧರಾ=ಬೂಮಿ; ಭಾರ=ತೂಕ/ಹೊರೆ; ಧರಾಭಾರ=ರಾಜ್ಯವನ್ನು ಆಳುವ ಹೊಣೆಗಾರಿಕೆಯನ್ನು; ಕೈಕೊಳ್=ಸ್ವೀಕರಿಸು;

ಮಗನೇ ಧರಾಭಾರಮಮ್ ಕೈಕೊಳ್=ಮಗನೇ, ರಾಜನಾಗಿ ಆಡಳಿತವನ್ನು ನಡೆಸು;

ಆನ್=ನಾನು; ಇನಿತನ್=ಇಶ್ಟನ್ನು; ಬೇಡು=ಕೇಳು/ಯಾಚಿಸು;

ಎಂದು ನಿನ್ನನ್ ಆನ್ ಇನಿತನ್ ಕೈಯೊಡ್ಡಿ ಬೇಡಿದೆನ್=ನನ್ನ ಈ ಆಸೆಯನ್ನು ಈಡೇರಿಸಬೇಕೆಂದು ಕಯ್ ಒಡ್ಡಿ ನಿನ್ನನ್ನು ಬೇಡಿಕೊಳ್ಳುತ್ತೇನೆ;

ಎಂದ=ಎಂದು ಹೇಳಿದ; ಅಮರ+ಆಪಗಾ+ನಂದನನ್; ಅಮರ=ದೇವತೆ; ಆಪಗಾ=ನದಿ; ನಂದನ=ಮಗ; ಅಮರಾಪಗಾ ನಂದನ=ಗಂಗಾ ದೇವಿಯ ಮಗನಾದ ಗಾಂಗೇಯ; ಇಂತು=ಈ ರೀತಿ;

ಎಂದ ಸತ್ಯವತಿಗೆ ಅಮರಾಪಗಾ ನಂದನನ್ ಇಂತು ಎಂದನ್=ಎಂದು ಬೇಡಿಕೊಂಡ ಸತ್ಯವತಿಗೆ ಗಾಂಗೇಯನು ಈ ರೀತಿ ಹೇಳಿದನು;

ಕಿಡು=ನಾಶವಾಗು/ಅಳಿ;

ರಾಜ್ಯಮ್ ಕಿಡುಗುಮೆ=ರಾಜ್ಯವು ಎಂದಿದ್ದರೂ ಹಾಳಾಗುವಂತಹುದಲ್ಲವೇ;

ತೊಡರ್ಪು=ತೊಡಕು/ಬಂದನ/ಕಟ್ಟು; ಏನ್+ಬಾಳ್ತೆ; ಏನ್=ಯಾವುದು; ಬಾಳ್ತೆ=ಬದುಕು/ಜೀವನ/ಪ್ರಯೋಜನ; ಏವಾಳ್ತೆ=ಅಂತಹ ಜೀವನದಿಂದ ದೊರೆಯುವ ಪ್ರಯೋಜನವಾದರೂ ಏನು;

ರಾಜ್ಯದ ತೊಡರ್ಪು ಅದು ಏವಾಳ್ತೆ ಬಾಳ್ತೆ =ಅಳಿಯುವಂತಹ ರಾಜ್ಯದ ಪಟ್ಟದ ತೊಡಕಿನಿಂದ ಜೀವನದಲ್ಲಿ ನನಗೆ ದೊರೆಯುವ ಪ್ರಯೋಜನವೇನು;

ನನ್ನಿ=ಆಣೆ/ವಾಗ್ದಾನ; ಕಿಡೆ=ಹಾಳಾಗುವಂತೆ; ನೆಗಳ್=ಮಾಡು/ಆಚರಿಸು; ನಾನ್+ಉಮ್; ನಾನುಮ್=ನಾನೂ; ಎರಡನ್ ನುಡಿದೊಡೆ=ಎರಡು ಬಗೆಯಲ್ಲಿ ಮಾತನಾಡಿದರೆ;

ನನ್ನಿಯ ನುಡಿಯನ್ ಕಿಡೆ ನೆಗಳೆ ನಾನುಮ್ ಎರಡನ್ ನುಡಿದೊಡೆ=ನಾನು ನಿಮ್ಮ ತಂದೆಗೆ ನೀಡಿದ ವಾಗ್ದಾನದ ನುಡಿಗಳು ಹಾಳಾಗುವಂತೆ ನಾನೂ ಕೂಡ ಇಬ್ಬಗೆಯ ಮಾತುಗಳನ್ನಾಡಿದರೆ ಅಂದರೆ ಮೊದಲೊಂದು ರೀತಿಯಲ್ಲಿ ನುಡಿದು ಈಗ ಆ ಮಾತಿಗೆ ತಪ್ಪಿ ನಡೆಯುವಂತೆ ಮಾತನಾಡಿದರೆ;

ಹರಿ=ವಿಶ್ಣು; ಹರ=ಶಿವ; ಹಿರಣ್ಯಗರ್ಭ=ಬ್ರಹ್ಮ; ಹಿರಣ್ಯ=ಚಿನ್ನ; ಗರ್ಭ=ಬಸಿರು/ಹೊಟ್ಟೆ; ಮೊಟ್ಟೆಯ ಆಕಾರದಲ್ಲಿದ್ದ ಚಿನ್ನದ ಬಸಿರಿನಿಂದ ಬ್ರಹ್ಮದೇವನು ಹೊರಬಂದು ಜಗತ್ತಿನಲ್ಲಿ ಜೀವರಾಶಿಗಳನ್ನು ಹುಟ್ಟಿಸಿದನೆಂಬ ಕಲ್ಪನೆಯು ಇಂಡಿಯಾ ದೇಶದ ಪುರಾಣದ ಹೊತ್ತಿಗೆಗಳಲ್ಲಿ ಕಂಡುಬರುತ್ತದೆ;

ಹರಿ ಹರ ಹಿರಣ್ಯಗರ್ಭರ್ ನಗರೇ=ವಿಶ್ಣು, ಶಿವ, ಬ್ರಹ್ಮರು ನನ್ನ ಇಬ್ಬಗೆಯ ನಡೆನುಡಿಯನ್ನು ಕಂಡು ನಗುವುದಿಲ್ಲವೇ;

ಹಿಮಕರ=ಚಂದ್ರ; ಆತ್ಮ+ಶೀತ+ರುಚಿ+ಅನ್; ಆತ್ಮ=ತನ್ನ; ಶೀತ=ತಂಪಾಗಿರುವ; ರುಚಿ=ಕಿರಣ; ಅನ್=ಅನ್ನು;

ಹಿಮಕರನ್ ಆತ್ಮಶೀತ ರುಚಿಯನ್ =ಚಂದ್ರನು ತನ್ನ ತಂಪಾದ ಕಿರಣಗಳನ್ನು;

ದಿನ+ನಾಯಕ+ಅನ್; ದಿನ=ಹಗಲು; ನಾಯಕ=ಒಡೆಯ; ದಿನನಾಯಕ=ಸೂರ‍್ಯ; ಉಷ್ಣ+ದೀಧಿತಿ+ಕ್ರಮಮ್+ಅನ್; ಉಷ್ಣ=ಬಿಸಿ; ದೀಧಿತಿ=ಕಿರಣ; ಕ್ರಮ=ರೀತಿ;

ದಿನನಾಯಕನ್ ಉಷ್ಣದೀಧಿತಿ ಕ್ರಮಮನ್=ಸೂರ‍್ಯನು ಬಿಸಿಯಾದ ಕಿರಣಗಳನ್ನು ಬೀರುವ ರೀತಿಯನ್ನು;

ಅಗಾಧ=ವಿಸ್ತಾರವಾಗಿಯೂ ಆಳವಾಗಿಯೂ ಇರುವ; ವಾರಿಧಿ=ಕಡಲು; ಗುಣ್ಪು=ವಿಸ್ತಾರವಾಗಿಯೂ ಆಳವಾಗಿಯೂ ಇರುವುದು;

ಅಗಾಧ ವಾರಿಧಿಯೆ ಗುಣ್ಪನ್ =ಕಡಲು ತನ್ನ ವಿಸ್ತಾರವನ್ನು ಮತ್ತು ಆಳವನ್ನು;

ಇಳಾ=ಬೂಮಿ; ವಧು=ಹೆಣ್ಣು; ಇಳಾವಧು=ಬೂದೇವಿ; ತಿಣ್ಪು=ಹೊರೆ/ತೂಕ;

ಇಳಾವಧು ತನ್ನ ತಿಣ್ಪನ್=ಬೂಮಿಯು ತನ್ನ ತೂಕವನ್ನು;

ಉತ್ತಮ=ದೊಡ್ಡದಾಗಿರುವ; ಕುಲ=ಗುಂಪು; ಶೈಲ=ಬೆಟ್ಟ ಉನ್ನತಿ+ಅನ್; ಉನ್ನತಿ=ಎತ್ತರ;

ಉತ್ತಮ ಕುಲಶೈಲಮ್ ಉನ್ನತಿಯನ್ =ಮುಗಿಲೆತ್ತರಕ್ಕೆ ತಮ್ಮ ಕೋಡನ್ನು ಚಾಚಿ ಹಬ್ಬಿರುವ ಬೆಟ್ಟಗಳು ತಮ್ಮ ಎತ್ತರವನ್ನು;

ಏಳಿದ+ಆಗೆ; ಏಳಿದ=ಅಪಹಾಸ್ಯಕ್ಕೆ ಗುರಿಯಾಗುವುದು; ಬಿಸುಳ್=ತೊರೆ/ಬಿಡು;

ಏಳಿದವಾಗೆ ಬಿಸುಳ್ಪೊಡಮ್ ಬಿಸುಳ್ಕೆಮ=ನಗೆಪಾಟಲಿಗೆ ಗುರಿಯಾಗುವಂತೆ ಬಿಟ್ಟರು ಬಿಡಲಿ ;

ಅಂಬಿಕೆ=ತಾಯಿ/ಅಮ್ಮ; ಮದೀಯ=ನನ್ನ; ಪುರುಷವ್ರತ=ಹೆಣ್ಣಿನೊಡನೆ ಕಾಮದ ನಂಟನ್ನು ಹೊಂದಬಾರದೆಂಬ ಸಂಕಲ್ಪ; ಒಂದುಮನ್=ಒಂದನ್ನು; ಬಿಸುಡೆನ್=ಬಿಡುವುದಿಲ್ಲ;

ಈಗಳ್ ಅಂಬಿಕೇ ಮದೀಯ ಪುರುಷವ್ರತಮ್ ಒಂದುಮನ್ ಬಿಸುಡೆನ್=ಅಮ್ಮ, ಇದುವರೆಗೂ ನಾನು ಪಾಲಿಸಿಕೊಂಡು ಬಂದಿರುವ ಪುರುಶವ್ರತವನ್ನು ಮಾತ್ರ ಈಗ ಬಿಡುವುದಿಲ್ಲ; ಉರಿಯುವಸೂರ‍್ಯ, ಬೆಳಗುವ ಚಂದ್ರ , ಜಲರಾಶಿಯಿಂದ ತುಂಬಿರುವ ಕಡಲು, ಮುಗಿಲಿನ ಎತ್ತರಕ್ಕೆ ಕೋಡನ್ನು ಚಾಚಿರುವ ಬೆಟ್ಟಗಳು ನಿಸರ‍್ಗದ ಸಹಜವಾದ ತಮ್ಮ ಗುಣವನ್ನು ಕಾಲಾನುಕ್ರಮದಲ್ಲಿ ಬಿಟ್ಟರೂ ಬಿಡಬಹುದು. ಆದರೆ ನಾನು ಮಾತ್ರ ಒಮ್ಮೆ ಕೊಟ್ಟಿರುವ ವಾಗ್ದಾನಕ್ಕೆ ಎಂದೆಂದಿಗೂ ತಪ್ಪದೆ ಬಾಳುತ್ತೇನೆ. ಗಾಂಗೇಯನು ತನ್ನ ನಿಲುವು ಅಚಲವಾದುದು ಎಂಬುದನ್ನು ಸೂಚಿಸಲು ಈ ಬಗೆಯ ಅತಿಶಯವಾದ ನುಡಿಗಳನ್ನು ಆಡಿದ್ದಾನೆ;

ಪ್ರತಿಜ್ಞೆ=ಕಯ್ಗೊಂಡ ನಿಲುವು/ನೀಡಿದ ವಾಗ್ದಾನ; ಏನ್+ಗೆಯ್ದು; ಗೆಯ್ದು=ಮಾಡಿದರೂ; ತಪ್ಪು=ಬಿಡು;

ಎಂದು ತನ್ನ ನುಡಿದ ಪ್ರತಿಜ್ಞೆಯನ್ ಏಗೆಯ್ದು ತಪ್ಪಿದನ್ ಇಲ್ಲ=ಗಾಂಗೇಯನು ಈ ಮೊದಲು ತಾನು ಆಡಿದ್ದ ಮಾತಿಗೆ ತಪ್ಪಿ ನಡೆಯಲಿಲ್ಲ;

ತರಂಗ=ನೀರಿನ ಅಲೆ; ರಂಗತ್ತರಂಗ=ಏರಿಳಿತಗಳಿಂದ ಕೂಡಿ ಕುಣಿಯುತ್ತಿರುವಂತೆ ಕಂಡುಬರುತ್ತಿರುವ ನೀರಿನ ಅಲೆಗಳು; ವಾರ್ಧಿ=ಕಡಲು; ಚಯಂ+ಗಳ್; ಚಯ=ಸಮೂಹ/ಗುಂಪು; ಮೇರೆ+ಅಮ್; ಮೇರೆ=ಎಲ್ಲೆ/ಗಡಿ; ದಾಂಟು=ಮೀರು/ಅತಿಕ್ರಮಿಸು; ದಾಂಟುವೊಡಮ್=ದಾಟಿದರೂ;

ರಂಗತ್ತರಂಗ ವಾರ್ಧಿ ಚಯಂಗಳ್ ತಂತಮ್ಮ ಮೇರೆಯಮ್ ದಾಂಟುವೊಡಮ್=ನೀರಿನ ಅಲೆಗಳ ಅಬ್ಬರದಿಂದ ಕೂಡಿರುವ ಕಡಲುಗಳು ಉಕ್ಕೆದ್ದು ತಮ್ಮ ಎಲ್ಲೆಯನ್ನು ಮೀರಿ ಮುಂದಕ್ಕೆ ನುಗ್ಗಿದರೂ;

ಗಾಂಗೇಯನ್+ಉಮ್; ಪ್ರತಿಜ್ಞಾ+ಗಾಂಗೇಯನ್+ಉಮ್; ಒರ್ಮೆ=ಒಂದು ಬಾರಿ;

ಗಾಂಗೇಯನುಮ್ ಪ್ರತಿಜ್ಞಾ ಗಾಂಗೇಯನುಮ್ ಒರ್ಮೆ ನುಡಿದುದನ್ ತಪ್ಪುವರೇ= ಪ್ರತಿಜ್ನಾ ಗಾಂಗೇಯನೆಂದು ಹೆಸರು ಪಡೆದಿರುವ ನಾನು ಒಮ್ಮೆ ಕೊಟ್ಟಿರುವ ಮಾತಿಗೆ ತಪ್ಪಿ ನಡೆಯುವುದು ಸರಿಯೇ;

ಅಂತು=ಆ ರೀತಿ; ಅಚಲಿತ=ಚಂಚಲಗೊಳ್ಳದ; ರೂಢ=ಚಲಾವಣೆಯಲ್ಲಿರುವ; ಪ್ರತಿಜ್ಞಾರೂಢನ್+ಆದ; ಪ್ರತಿಜ್ಞಾರೂಢನ್= ತಾನು ನೀಡಿದ ವಾಗ್ದಾನದಂತೆಯೇ ನಡೆದುಕೊಳ್ಳುತ್ತಿರುವವನು;

ಅಂತು ಅಚಲಿತ ಪ್ರತಿಜ್ಞಾರೂಢನಾದ ಗಾಂಗೇಯನನ್=ನಿಶ್ಚಿತವಾದ ನಿಲುವಿನ ನಡೆನುಡಿಯುಳ್ಳ ಗಾಂಗೇಯನನ್ನು;

ಏನ್+ಗೆಯ್ದುಮ್; ಗೆಯ್=ಮಾಡು/ನೆರವೇರಿಸು; ಒಡಂಬಡಿಸಲ್+ಆಱದೆ;

ಏಗೆಯ್ದುಮ್ ಒಡಂಬಡಿಸಲಾಱದೆ=ಏನು ಮಾಡಿದರೂ ಒಪ್ಪಿಸಲಾಗದೆ;

ತಾನ್+ಉಮ್; ಆತನ್+ಉಮ್;

ಸತ್ಯವತಿ ತಾನುಮ್ ಆತನುಮ್ ಆಳೋಚಿಸಿ =ಸತ್ಯವತಿಯೂ ಗಾಂಗೇಯನೂ ಪರಸ್ಪರ ಆಲೋಚನೆ ಮಾಡಿ;

ನಿಶ್ಚಿತ+ಮಂತ್ರರ್+ಆಗಿ; ನಿಶ್ಚಿತ=ಚಿಂತೆಯಿಂದ ದೂರವಾದುದು; ಮಂತ್ರ=ವಿಚಾರ; ನಿಶ್ಚಿತಮಂತ್ರ=ಈ ಚಿಂತೆಯಿಂದ ಪಾರಾಗುವ ಬಗೆ/ಈಗ ಬಂದಿರುವ ತೊಂದರೆಗೆ ಪರಿಹಾರ; ಕೃಷ್ಣದ್ವೈಪಾಯನ+ಅನ್; ಕೃಷ್ಣದ್ವೈಪಾಯನ=ಸತ್ಯವತಿ ಮತ್ತು ಪರಾಶರ ಮುನಿಯ ಮಗನಾದ ವ್ಯಾಸ ರುಶಿ;

ನಿಶ್ಚಿತಮಂತ್ರರಾಗಿ ಕೃಷ್ಣದ್ವೈಪಾಯನನ್ ನೆನೆದು ಬರಿಸಿದೊಡೆ=ತಮ್ಮ ಚಿಂತೆಗೆ ಪರಿಹಾರವನ್ನು ಕಂಡುಹಿಡಿಯಲು ವ್ಯಾಸನನ್ನು ನೆನೆದು ಬರಮಾಡಿಕೊಂಡಾಗ;

ಏನ್+ಗೆಯ್ವುದು; ಏನು=ಯಾವುದು; ಏನಮ್=ಯಾವುದನ್ನು; ತೀರ್=ನೆರವೇರಿಸು/ಈಡೇರಿಸು/ಪೂರಯಿಸು;

ಏಗೆಯ್ವುದು ಏನಮ್ ತೀರ್ಚುವುದು=ಈಗ ನನ್ನಿಂದ ಯಾವ ಕೆಲಸವಾಗಬೇಕು…ನಿಮ್ಮ ಯಾವ ಕೋರಿಕೆಯನ್ನು ಈಡೇರಿಸಬೇಕು;

ಹಿರಣ್ಯ=ಚಿನ್ನ; ಗರ್ಭ=ಹೊಟ್ಟೆ/ಬಸಿರು/ಒಳಗಡೆ; ಬ್ರಹ್ಮರ್+ಇನ್; ಇನ್=ಇಂದ; ತಗುಳ್=ಮೊದಲುಗೊಂಡು; ಅವ್ಯವಚ್ಛಿನ್ನಮ್+ಆಗಿ; ಅವ್ಯವಚ್ಛಿನ್ನ=ಎಡೆಬಿಡದ/ನಿರಂತರವಾದ; ಎಮ್ಮ=ನಮ್ಮ; ಸೋಮ=ಚಂದ್ರ;

ಹಿರಣ್ಯಗರ್ಭ ಬ್ರಹ್ಮರಿನ್ ತಗುಳ್ದು ಅವ್ಯವಚ್ಛಿನ್ನಮಾಗಿ ಬಂದ ಎಮ್ಮ ಸೋಮವಂಶಮ್=ಹಿರಣ್ಯಗರ‍್ಬ ಬ್ರಹ್ಮರಿಂದ ಮೊದಲುಗೊಂಡು ಇಂದಿನ ತನಕ ನಿರಂತರವಾಗಿ ಬೆಳೆದುಬಂದಿರುವ ನಮ್ಮ ಸೋಮವಂಶವು;

ಕುಲ+ಸಂತತಿಗಮ್; ಕುಲ=ಮನೆತನ; ಸಂತತಿ=ಪೀಳಿಗೆ; ಆರುಮ್=ಯಾರೊಬ್ಬರೂ; ಎಡೆ=ನಡುವೆ; ಪಱಿ=ಇಲ್ಲವಾಗು/ಅಳಿದುಹೋಗು; ಕಿಡು+ಅಂತೆ+ಆಗಿ; ಕಿಡು=ನಾಶಗೊಳ್ಳು/ಹಾಳಾಗು/ಇಲ್ಲವಾಗು; ಕಾರಣದ+ಇನ್;

ಈಗಳ್ ಕುಲಸಂತತಿಗಮ್ ಆರುಮ್ ಇಲ್ಲದೆ ಎಡೆ ಪಱಿದು ಕಿಡುವಂತಾಗಿ ಇರ್ದುದು ಕಾರಣದಿನ್ =ಈಗ ಕುಲದ ಸಂತತಿಯು ಮುಂದುವರಿಯಲು ಮಕ್ಕಳಿಲ್ಲದೆ ವಂಶದ ಬಳ್ಳಿಯು ಕಡಿದು ತುಂಡಾಗುವ ಕಾಲ ಬಂದೊದಗಿದೆ. ಈ ಕಾರಣದಿಂದಾಗಿ;

ಕ್ಷೇತ್ರ+ಒಳ್; ಕ್ಷೇತ್ರ=ಜಾಗ/ನೆಲೆ;

ನಿಮ್ಮ ತಮ್ಮನ್ ವಿಚಿತ್ರವೀರ್ಯನ ಕ್ಷೇತ್ರದೊಳ್=ನಿನ್ನ ತಮ್ಮನಾದ ವಿಚಿತ್ರವೀರ‍್ಯನ ಜಾಗದಲ್ಲಿ ನಿಂತು;

ಅಪ್ಪ+ಅಂತು; ಅಪ್ಪ=ಆಗುವ; ಅಪ್ಪಂತು=ಆಗುವಂತೆ; ವರಪ್ರಸಾದಮ್+ಅನ್; ವರ=ಅನುಗ್ರಹ/ಕೊಡುಗೆ; ಪ್ರಸಾದ=ದೇವರಿಗೆ ಸಲ್ಲಿಸಿ ಪಡೆದ ವಸ್ತು; ವರಪ್ರಸಾದ=ಆಸೆಯನ್ನು ಈಡೇರಿಸಲು ಅಗತ್ಯವಾದ ಕೊಡುಗೆಯನ್ನು; ದಯೆ+ಗೆಯ್ವುದು; ದಯೆ=ಕರುಣೆ;

ಅಂಬಿಕೆಗಮ್ ಅಂಬಾಲೆಗಮ್ ಪುತ್ರರ್ ಅಪ್ಪಂತು ವರಪ್ರಸಾದಮನ್ ದಯೆಗೆಯ್ವುದು=ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಮಕ್ಕಳಾಗುವಂತೆ ಅನುಗ್ರಹಿಸಬೇಕು; ಗಂಡನು ಸಾವನ್ನಪ್ಪಿದಾಗ ಹೆಂಡತಿಯು ಮನೆತನದ ಗುರುಹಿರಿಯರ ಸಮ್ಮತಿಯೊಡನೆ ಇಲ್ಲವೇ ಆದೇಶದಂತೆ ಮತ್ತೊಬ್ಬ ಗಂಡಸಿನೊಡನೆ ದೇಹದ ನಂಟನ್ನು ಹೊಂದಿ ಮಕ್ಕಳನ್ನು ಪಡೆಯುವಂತಹ ಆಚರಣೆಯು ಪಾಚೀನ ಜನಸಮುದಾಯದಲ್ಲಿ ಬಳಕೆಯಲ್ಲಿತ್ತು. ಇದನ್ನು ‘ನಿಯೋಗ ‘ ವೆಂಬ ಹೆಸರಿನಿಂದ ಕರೆಯುತ್ತಿದ್ದರು.

ಅಂತೆ=ಹಾಗೆಯೇ;

ಅಂತೆ ಗೆಯ್ವೆನ್ ಎಂದು=ಹಾಗೆಯೇ ಮಾಡುತ್ತೇನೆ ಎಂದು;

ತ್ರಿದಶ=ದೇವತೆ; ನರ=ಮಾನವ; ಅಸುರ=ರಕ್ಕಸ; ಉರಗ=ಹಾವು/ನಾಗ; ಗಣ=ಗುಂಪು; ಪ್ರಭು=ಒಡೆಯ;

ತ್ರಿದಶ ನರ ಅಸುರ ಉರಗ ಗಣ ಪ್ರಭು=ದೇವತೆಗಳ, ಮಾನವರ, ರಕ್ಕಸರ, ನಾಗದೇವತೆಗಳ ಗುಂಪಿಗೆ ಒಡೆಯನಾದ;

ನಿಶ್ಚಿತ ತತ್ವಯೋಗಿ=ಒಳ್ಳೆಯ ಅರಿವನ್ನು ಹೊಂದಿರುವ ರುಶಿ;

ಯೋಗದ ಬಲ=ಮಯ್ ಮನವನ್ನು ನಿಯಂತ್ರಣದಲ್ಲಿಟ್ಟುಕೊಂಡು ಪಡೆದುಕೊಂಡಿರುವ ಶಕ್ತಿ; ಉಣ್ಮು=ಹೊರಸೂಸು; ಪೊಣ್ಮು=ಹರಡು; ನಿಲೆ=ನಿಲ್ಲಲು;

ಯೋಗದ ಬಲಮ್ ಉಣ್ಮಿ ಪೊಣ್ಮಿ ನಿಲೆ=ವ್ಯಾಸ ರುಶಿಯ ಯೋಗದ ಶಕ್ತಿಯು ಹೊರಹೊಮ್ಮಿ ಹರಡಿಕೊಂಡು ಕಂಗೊಳಿಸುತ್ತಿರಲು;

ಪುತ್ರ=ಗಂಡು ಮಗು; ವರ+ಅರ್ಥಿ+ಗಳ್+ಆಗಿ; ವರ=ಅನುಗ್ರಹ; ಅರ್ಥಿ=ಬೇಡುವ ವ್ಯಕ್ತಿ; ಕಟ್ಟಿದಿರ್+ಒಳೆ; ಕಟ್ಟಿದಿರು=ಎದುರು; ನಿಂದರನ್=ನಿಂತುಕೊಂಡಿರುವವರನ್ನು; ನಯ=ಪ್ರೀತಿ/ಒಲವು;

ಪುತ್ರ ವರಾರ್ಥಿಗಳಾಗಿ ತನ್ನ ಕಟ್ಟಿದಿರೊಳೆ ನಿಂದರನ್ ನಯದೆ ನೋಡೆ=ಮಗನನ್ನು ಪಡೆಯಬೇಕೆಂಬ ಬಯಕೆಯಿಂದ ಬಂದು ತನಗೆ ಎದುರಾಗಿ ನಿಂತಿರುವ ಅಂಬಿಕೆ ಮತ್ತು ಅಂಬಾಲಿಕೆಯನ್ನು ಪ್ರೀತಿಯಿಂದ ವ್ಯಾಸನು ನೋಡಲು;

ಮುನೀಂದ್ರ=ದೊಡ್ಡ ಮುನಿ; ದಿವ್ಯ=ಒಳ್ಳೆಯ/ಉತ್ತಮ; ದೃಷ್ಟಿ=ನೋಟ; ಮಂತ್ರ+ಒಳೆ; ಮಂತ್ರ=ಆಲೋಚನೆ/ವಿಚಾರ;

ಮುನೀಂದ್ರನ ದಿವ್ಯದೃಷ್ಟಿ ಮಂತ್ರದೊಳೆ=ವ್ಯಾಸ ಮುನಿಯ ದಿವ್ಯವಾದ ನೋಟದ ಮಹಿಮೆಯಿಂದಾಗಿ;

ಇರ್ವರ್+ಒಳಮ್; ಇರ್ವರ್=ಇಬ್ಬರು; ನವ=ಹೊಸ; ಗರ್ಭ=ಬಸಿರು; ವಿಭ್ರಮ=ಸಡಗರ; ಪೊದಳ್=ಹರಡು/ವ್ಯಾಪಿಸು;

ಆ ಸತಿಯರ್ ಇರ್ವರೊಳಮ್ ನವಗರ್ಭವಿಭ್ರಮಮ್ ಪೊದಳ್ದುದು=ಆ ಇಬ್ಬರು ಹೆಂಗಸರಲ್ಲಿಯೂ ಹೊಸದಾಗಿ ಬಸಿರನ್ನು ತಳೆದ ಸಡಗರವು ವ್ಯಾಪಿಸಿತು ;

ಅಂತು=ಆ ರೀತಿ; ದಿವ್ಯ=ಒಳ್ಳೆಯ/ಉತ್ತಮ; ಸಂಯೋಗ=ಕೂಟ/ಕೂಡಿಕೆ; ತಾಳ್=ಹೊಂದು/ಪಡೆ;

ಅಂತು ದಿವ್ಯಸಂಯೋಗದೊಳ್ ಇರ್ವರುಮ್ ಗರ್ಭಮನ್ ತಾಳ್ದರ್=ಆ ರೀತಿಯಲ್ಲಿ ವ್ಯಾಸ ಮುನಿಯ ದಿವ್ಯಕೂಟದಿಂದ ಅವರಿಬ್ಬರು ಬಸಿರನ್ನು ತಳೆದರು;

ಮತ್ತೊರ್ವ=ಮತ್ತೊಬ್ಬ; ವರಮ್+ಅಮ್; ವರಮಮ್=ವರವನ್ನು; ಪೇಳ್ದೊಡೆ=ಹೇಳಲು;

“ಮತ್ತೊರ್ವ ಮಗನನ್ ವರಮಮ್ ಬೇಡು“ ಎಂದು ಅಂಬಿಕೆಗೆ ಪೇಳ್ದೊಡೆ= “ಮತ್ತೊಬ್ಬ ಮಗನನ್ನು ಪಡೆಯುವ ವರವನ್ನು ಕೇಳು“ ಎಂದು ಸತ್ಯವತಿಯು ಅಂಬಿಕೆಗೆ ಹೇಳಿದಾಗ ;

ಅಲಸು=ಬೇಸರಪಡು/ಉದಾಸೀನ ಮಾಡು; ವ್ಯಾಸಭಟ್ಟಾರಕನ್+ಅಲ್ಲಿಗೆ; ಭಟ್ಟಾರಕ=ಗುರು ಹಿರಿಯರ ಹೆಸರುಗಳ ಕೊನೆಯಲ್ಲಿ ಒಲವು ನಲಿವು ಆದರ ಸೂಚಕವಾಗಿ ಸೇರುವ ಪದ; ವ್ಯಾಸಭಟ್ಟಾರಕ=ಪೂಜ್ಯನಾದ ವ್ಯಾಸ ರುಶಿ;

ಆಕೆಯುಮ್ ವ್ಯಾಸಭಟ್ಟಾರಕನಲ್ಲಿಗೆ ಪೋಗಲ್ ಅಲಸಿ=ಅಂಬಿಕೆಯು ವ್ಯಾಸನ ಬಳಿಗೆ ಮತ್ತೊಮ್ಮೆ ಹೋಗಲು ಇಚ್ಚಿಸದೆ;

ಸೂಳಾಯ್ತೆ+ಅನ್; ಸೂಳಾಯ್ತೆ=ದಾಸಿ; ತನ್ನ+ವೊಲೆ; ವೊಲ್=ಅಂತೆ/ಹಾಗೆ; ಕಯ್+ಗೆಯ್ದು; ಕಯ್=ಅಲಂಕಾರ/ಸಿಂಗಾರ; ಕಯ್ಗೆಯ್ದು=ಅಲಂಕಾರ ಮಾಡಿ; ಬರ+ಅನ್; ಬರ=ವರ/ಅನುಗ್ರಹ; ಅಟ್ಟು=ಕಳುಹಿಸು;

ತನ್ನ ಸೂಳಾಯ್ತೆಯನ್ ತನ್ನವೊಲೆ ಕಯ್ಗೆಯ್ದು ಬರವನ್ ಬೇಡಲ್ ಅಟ್ಟಿದೊಡೆ=ತನ್ನ ದಾಸಿಯೊಬ್ಬಳನ್ನು ತನ್ನಂತೆಯೇ ಸಿಂಗಾರಮಾಡಿ, ವರವನ್ನು ಬೇಡಲು ವ್ಯಾಸ ಮುನಿಯ ಬಳಿಗೆ ಕಳುಹಿಸಲು;

ವರದನ್+ಆಗಿ; ವರದ=ವರವನ್ನು ನೀಡುವುದು;

ಆಕೆಗೆ ವರದನಾಗಿ=ಆಕೆಗೆ ಮಕ್ಕಳಾಗುವ ವರವನ್ನು ದಯಪಾಲಿಸಿ ;

ವ್ಯಾಸಮುನೀಂದ್ರನ್ ಸತ್ಯವತಿಗಮ್ ಭೀಷ್ಮಂಗಮ್ ಇಂತು ಎಂದನ್=ವ್ಯಾಸ ಮುನಿಯು ಸತ್ಯವತಿಗೂ ಗಾಂಗೇಯನಿಗೂ ಈ ರೀತಿ ಹೇಳಿದನು;

ಎನ್ನ ವರಪ್ರಸಾದ ಕಾಲದೊಳ್=ನಾನು ವರವನ್ನು ನೀಡುವ ಕಾಲದಲ್ಲಿ ; ಅಪ್ಪುದಱಿಂದ=ಆದುದರಿಂದ;

ಎನ್ನಮ್ ಕಂಡು ಅಂಬಿಕೆ ಕಣ್ಣಮ್ ಮುಚ್ಚಿದಳ್ ಅಪ್ಪುದಱಿಂದ=ನನ್ನನ್ನು ನೋಡಿ ಅಂಬಿಕೆಯು ತನ್ನ ಕಣ್ಣುಗಳನ್ನು ಮುಚ್ಚಿಕೊಂಡಿದ್ದರಿಂದ;

ಸುಂದರ+ಅಂಗನ್+ಆಗಿ+ಉಮ್; ಅಂಗ=ದೇಹ/ಶರೀರ; ಜಾತ್ಯಂಧನ್+ಅಕ್ಕುಮ್; ಜಾತ್ಯಂಧ=ಹುಟ್ಟುಗುರುಡ/ಹುಟ್ಟುವಾಗಲೇ ಕಣ್ಣುಗಳಿಲ್ಲದವನು; ಅಕ್ಕುಮ್=ಆಗುವುದು;

ಆಕೆಗೆ ಧೃತರಾಷ್ಟ್ರನ್ ಎಂಬ ಮಗನ್ ಅತ್ಯಂತ ಸುಂದರಾಂಗನಾಗಿಯುಮ್ ಜಾತ್ಯಂಧನಕ್ಕುಮ್=ಆದ್ದರಿಂದ ಅಂಬಿಕೆಗೆ ಹುಟ್ಟುವ ದ್ರುತರಾಶ್ಟ್ರನೆಂಬ ಮಗನು ಸುಂದರವಾದ ರೂಪುಳ್ಳವನು ಮತ್ತು ಹುಟ್ಟುಗುರುಡನಾಗಿರುವನು ; ಮದ್ರೂಪ=ನನ್ನ ರೂಪ; ಪಾಂಡುರ=ಬಿಳಿಯ ಬಣ್ಣ; ಪಾಂಡುರಮ್ ಮಾಡಿದಳ್=ಹೆದರಿಕೆಯಿಂದ ಬಿಳಿಚಿಕೊಂಡಳು;

ಅಂಬಾಲೆ ಮದ್ರೂಪಮಮ್ ಕಂಡು ಮೊಗಮನ್ ಪಾಂಡುರಮ್ ಮಾಡಿದಳ್ ಅಪ್ಪುದಱಿಂದ=ನನ್ನ ರೂಪವನ್ನು ಕಂಡು ಅಂಬಾಲೆಯು ಹೆದರಿಕೊಂಡಿದ್ದರಿಂದ ಅವಳ ಮೊಗ ಬಿಳಿಚಿಕೊಂಡಿತು. ಆದುದರಿಂದ;

ಪಾಂಡುರೋಗ+ಸಂಗತನ್+ಉಮ್; ಪಾಂಡುರೋಗ=ಮಯ್ಯಿನ ತೊಗಲೆಲ್ಲವೂ ಬಿಳಿಯ ಬಣ್ಣದ್ದಾಗುವ ತೊನ್ನುರೋಗ; ಸಂಗತ=ಕೂಡಿದ/ಸೇರಿದ; ಭದ್ರ+ಲಕ್ಷಣ+ಲಕ್ಷಿತನ್+ಉಮ್; ಭದ್ರ=ಮಂಗಳಕರವಾದ; ಲಕ್ಷಣ=ಚೆಲುವು; ಲಕ್ಷಿತನ್=ಹೊಂದಿರುವವನು; ಅತ್ಯಂತ=ಬಹಳ; ಪ್ರತಾಪನ್+ಉಮ್+ಆಗಿ; ಪ್ರತಾಪನ್=ಶಕ್ತಿಶಾಲಿ; ಪಾಂಡುರಾಜನ್+ಎಂಬ; ಮಗನ್+ಅಕ್ಕುಮ್;

ಆಕೆಗೆ ಪಾಂಡುರೋಗಸಂಗತನುಮ್ ಅನೇಕ ಭದ್ರಲಕ್ಷಣಲಕ್ಷಿತನುಮ್ ಅತ್ಯಂತ ಪ್ರತಾಮನುಮಾಗಿ ಪಾಂಡುರಾಜನೆಂಬ ಮಗನಕ್ಕುಮ್=ಆದ್ದರಿಂದ ಅಂಬಾಲಿಕೆಗೆ ಪಾಂಡುರೋಗದಿಂದ ಕೂಡಿದ, ಮಂಗಳಕರವಾದ ಚೆಲುವನ್ನು ಹೊಂದಿರುವ, ದೊಡ್ಡ ಬಲಶಾಲಿಯಾಗಿರುವ ಪಾಂಡುರಾಜನೆಂಬ ಮಗನು ಹುಟ್ಟುವನು ;

ಸೂಳಾಯ್ತೆ+ಅಪ್ಪ+ಆಕೆ; ಅಪ್ಪ=ಆಗಿರುವ;

ಅಂಬಿಕೆಯ ಸೂಳಾಯ್ತೆಯಪ್ಪಾಕೆ=ಅಂಬಿಕೆಯ ದಾಸಿಯು ;

ದರಹಸಿತ=ಮುಗುಳ್ನಗೆ; ವದನ+ಅರವಿಂದೆ+ಆಗಿ; ವದನ=ಮೊಗ; ಅರವಿಂದ=ತಾವರೆ/ಕಮಲ; ವದನಾರವಿಂದೆ=ಕಮಲದಂತಹ ಮೊಗವುಳ್ಳವಳು/ಸುಂದರಿ; ಕೈಕೊಳ್=ಸ್ವೀಕರಿಸು/ಪಡೆ;

ದರಸಹಿತ ವದನಾರವಿಂದೆಯಾಗಿ ಬರವನ್ ಕೈಕೊಂಡಳ್ ಅಪ್ಪುದಱಿಂದ=ಮುಗುಳ್ನಗೆಯ ಮೊಗದಿಂದ ಕೂಡಿ ವರವನ್ನು ಪಡೆದಳು. ಆದುದರಿಂದ ;

ಅನಂಗ+ಆಕಾರನ್+ಉಮ್; ಅನಂಗ=ಕಾಮದೇವ/ಮದನ; ಆಕಾರ=ರೂಪ; ಆಚಾರವಂತನ್+ಉಮ್; ಬುದ್ಧಿವಂತನ್+ಉಮ್ ;

ಆಕೆಯ ಮಗನ್ ವಿದುರನೆಂಬನ್ ಅನಂಗಾಕಾರನುಮ್ ಆಚಾರವಂತನುಮ್ ಬುದ್ಧಿವಂತನುಮ್ ಅಕ್ಕುಮ್=ಆದ್ದರಿಂದ ದಾಸಿಗೆ ಹುಟ್ಟುವ ಮಗನು ವಿದುರನೆಂಬ ಹೆಸರುಳ್ಳವನಾಗಿಯೂ, ಕಾಮದೇವನಂತೆ ರೂಪವಂತನಾಗಿಯೂ, ಒಳ್ಳೆಯ ನಡೆನುಡಿಯುಳ್ಳವನಾಗಿಯೂ ಜಾಣನಾಗಿಯೂ ಇರುವನು;

ಪೇಳ್ದು=ಹೇಳಿ; ಪುಂಗವ=ನಾಯಕ;

ಎಂದು ಪೇಳ್ದು ಮುನಿಪುಂಗವನ್ ಪೋದನ್=ಎಂದು ಹೇಳಿ ದೊಡ್ಡ ರಿಸಿಯಾಗಿದ್ದ ವ್ಯಾಸನು ಅಲ್ಲಿಂದ ತೆರಳಿದನು ;

ಇತ್ತ=ಈ ಕಡೆ; ಸಂತಸ=ಆನಂದ; ಮನದೊಳ್+ಆಗಲ್;

ಇತ್ತ ವರಮ್ ಪಡೆದ ಸಂತಸಮ್ ಮನದೊಳಾಗಲ್=ಈ ಕಡೆ ವರವನ್ನು ಪಡೆದ ಆನಂದವು ಮನದಲ್ಲಿ ಉಂಟಾಗಲು ;

ಉತ್ತರ+ಉತ್ತರ+ಅಮ್; ಉತ್ತರ=ಹೆಚ್ಚಾದ; ಉತ್ತರೋತ್ತರ=ಅತಿಶಯವಾದ/ತುಂಬಾ ಒಳ್ಳೆಯದಾದ; ಬಳೆ=ಬೆಳೆ; ಮಾಳ್ಕೆ+ಇಮ್; ಮಾಳ್ಕೆ=ರೀತಿ; ಇಮ್=ಇಂದ; ಗರ್ಭ=ಬಸಿರು;

ಒಂದು ಉತ್ತರೋತ್ತರಮ್ ಬಳೆವ ಮಾಳ್ಕೆಯಿಮ್ ಬಳೆವ ಗರ್ಭಮಮ್ ತಾಳ್ದಿ=ಅತಿಶಯವಾದ ರೀತಿಯಲ್ಲಿ ಬೆಳೆಯುವಂತೆ ಬೆಳೆದ ಬಸಿರನ್ನು ಹೊಂದಿ;

ಅಂದು=ಆಗ; ಆದರ=ಪ್ರೀತಿ/ಒಲವು; ಬೆರಸು=ಕೂಡು; ಕ್ರಮದೆ=ಒಬ್ಬರ ನಂತರ ಮತ್ತೊಬ್ಬರನ್ನು; ವಿಖ್ಯಾತ=ದೊಡ್ಡ ಹೆಸರನ್ನು ಪಡೆದ; ವಿದುರರ್+ಕಳ್+ಅಮ್; ಕಳ್=ಗಳು; ಪೆತ್ತರ್=ಹಡೆದರು;

ಅಂದು ಆದರಮ್ ಬೆರಸು ಮೂವರು ಕ್ರಮದೆ ವಿಖ್ಯಾತ ಧೃತರಾಷ್ಟ್ರ ಪಾಂಡುರಾಜ ವಿದುರರ್ಕಳಮ್ ಮೂವರನ್ ಪೆತ್ತರ್=ಅಂದು ಈ ಮೂವರು ಒಲವಿನಿಂದ ಜತೆಗೂಡಿ ಅಂಬಿಕೆ, ಅಂಬಾಲಿಕೆ ಮತ್ತು ದಾಸಿಯು ಅನುಕ್ರಮವಾಗಿ ಹೆಸರಾಂತ ದ್ರುತರಾಶ್ಟ್ರ, ಪಾಂಡುರಾಜ ಮತ್ತು ವಿದುರನೆಂಬ ಮೂವರು ಮಕ್ಕಳನ್ನು ಹಡೆದರು.

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: