ಅಂಬಿಗರ ಚೌಡಯ್ಯನ ವಚನ ಓದು – 9ನೆಯ ಕಂತು

– ಸಿ.ಪಿ.ನಾಗರಾಜ.

ಅಂಬಿಗರ ಚೌಡಯ್ಯ, Ambigara Choudayya

ನೇಮಸ್ಥನೆಂಬವ ಕ್ರೂರಕರ್ಮಿ
ಶೀಲವಂತನೆಂಬವ ಸಂದೇಹಧಾರಿ
ಭಾಷೆವಂತನೆಂಬವ ಬ್ರಹ್ಮೇತಿಕಾರ
ಇವರು ಮೂವರು ಕುಳ್ಳಿರ್ದಲ್ಲಿ ಕುಳ್ಳಿರಲಾಗದು
ಇವರು ಹೋದ ಬಟ್ಟೆಯ ಹೊಗಲಾಗದು
ಇವರು ಮೂವರಿಗೂ ಗುರುವಿಲ್ಲ
ಲಿಂಗವಿಲ್ಲೆಂದಾತನಂಬಿಗ ಚೌಡಯ್ಯ.

“ತಮ್ಮ ನಡೆನುಡಿಯೇ ಇತರರ ನಡೆನುಡಿಗಿಂತ ಎಲ್ಲ ರೀತಿಯಿಂದಲೂ ಮೇಲು” ಎಂಬ ಅಹಂಕಾರವುಳ್ಳ ವ್ಯಕ್ತಿಗಳ ಜತೆಯಲ್ಲಿ ಯಾವುದೇ ಬಗೆಯ ವ್ಯವಹಾರವನ್ನಾಗಲಿ ಇಲ್ಲವೇ ಒಡನಾಟವನ್ನಾಗಲಿ ಇಟ್ಟುಕೊಳ್ಳದೆ, ಅಂತಹ ವ್ಯಕ್ತಿಗಳಿಂದ ದೂರವಿರಬೇಕೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ನೇಮಸ್ಥನ್+ಎಂಬವ; ನೇಮ=ಜಾತಿ ಮತದ ಸಂಪ್ರದಾಯಗಳನ್ನು ಪಾಲಿಸುವಾಗ ಮತ್ತು ದೇವರನ್ನು ಪೂಜಿಸುವಾಗ ಮಾಡುವ ಜಪ, ತಪ, ಉಪವಾಸ, ಜಾಗರಣೆ ಮುಂತಾದ ಆಚರಣೆಗಳು/ವ್ರತ/ನೋಂಪಿ; ನೇಮಸ್ಥ=ಜಾತಿ ಮತ ದೇವರ ಬಗೆಗಿನ ಆಚರಣೆ ಮತ್ತು ಕಟ್ಟುಪಾಡುಗಳನ್ನೇ ದೊಡ್ಡದೆಂದು ನಂಬಿಕೊಂಡು ಅದರಲ್ಲಿ ಯಾವುದೊಂದನ್ನು ಬಿಡದೆ ಆಚರಿಸುವವನು: ಎಂಬವ=ಎನ್ನುವವನು; ಕ್ರೂರ=ಕರುಣೆಯಿಲ್ಲದ/ದಯೆಯಿಲ್ಲದ; ಕರ್ಮಿ=ಕೆಲಸದಲ್ಲಿ ತೊಡಗಿದವನು; ಕ್ರೂರಕರ್ಮಿ=ಇತರ ಜೀವಿಗಳಿಗೆ ಮತ್ತು ವ್ಯಕ್ತಿಗಳಿಗೆ ಅಪಾರವಾದ ಕೇಡನ್ನು ಬಗೆಯುವವನು/ಹಿಂಸೆಯನ್ನು ನೀಡುವವನು;

ನೇಮಸ್ಥನೆಂಬವ ಕ್ರೂರಕರ್ಮಿ=ತನ್ನ ಜಾತಿ, ಮತ ಮತ್ತು ದೇವರ ಬಗೆಗಿನ ಆಚರಣೆ ಮತ್ತು ಕಟ್ಟುಪಾಡುಗಳಿಗೆ ಅಂಟಿಕೊಂಡಿರುವ ವ್ಯಕ್ತಿಯು ಇನ್ನಿತರ ಜಾತಿ, ಮತ ಮತ್ತು ದೇವರ ಬಗ್ಗೆ ಸದಾಕಾಲ ಹಗೆತನದ ನಂಜನ್ನು ಕಾರುತ್ತ, ಸಹಮಾನವರ ಬಗ್ಗೆ ಕಿಂಚಿತ್ತಾದರೂ ಕರುಣೆಯಿಲ್ಲದೆ, ಜನಸಮುದಾಯದ ಮತ್ತು ಸಮಾಜದ ನೆಮ್ಮದಿಯ ಬದುಕನ್ನೇ ಹಾಳುಮಾಡುವಂತಹ ಕೆಟ್ಟ ಕೆಲಸಗಳಲ್ಲಿ ತೊಡಗಿರುತ್ತಾನೆ;

ಶೀಲವಂತನ್+ಎಂಬವ; ಶೀಲವಂತ=ಒಳ್ಳೆಯ ನಡೆನುಡಿಯುಳ್ಳವನು; ಸಂದೇಹ=ಅನುಮಾನ/ಅಪನಂಬಿಕೆ; ಧಾರಿ=ಹೊಂದಿರುವವನು; ಸಂದೇಹಧಾರಿ=ಎಲ್ಲವನ್ನೂ ಮತ್ತು ಎಲ್ಲರನ್ನೂ ಅನುಮಾನದಿಂದಲೇ ಕಾಣುವವನು;

ಶೀಲವಂತನೆಂಬವ ಸಂದೇಹಧಾರಿ= “ಈ ಜಗತ್ತಿನಲ್ಲಿ ನಾನೊಬ್ಬನೇ ನೀತಿವಂತ/ಪರಮ ಪ್ರಾಮಾಣಿಕ/ಸತ್ಯವಂತ. ನನ್ನನ್ನು ಬಿಟ್ಟರೆ ಯಾರಲ್ಲಿಯೂ ನನ್ನಲ್ಲಿರುವಂತಹ ಒಳ್ಳೆಯ ನಡೆನುಡಿಗಳಿಲ್ಲ” ಎಂಬ ತಪ್ಪು ಗ್ರಹಿಕೆಗೆ ಒಳಗಾದ ವ್ಯಕ್ತಿಯು ತನ್ನನ್ನು ಹೊರತುಪಡಿಸಿ ಇನ್ನುಳಿದವರಲ್ಲಿ ಒಂದಲ್ಲ ಒಂದು ಬಗೆಯ ತಪ್ಪುಗಳನ್ನೇ ಕಾಣುತ್ತ, ಎಲ್ಲ ಸಂಗತಿಗಳನ್ನು ಮತ್ತು ಎಲ್ಲರನ್ನೂ ಅನುಮಾನದಿಂದಲೇ ಕಾಣುತ್ತಿರುತ್ತಾನೆ;

ಭಾಷೆವಂತನ್+ಎಂಬವ; ಭಾಷೆ=ಮಾತು/ನುಡಿ; ಭಾಷೆವಂತ=ಒಳ್ಳೆಯ ಮಾತುಗಾರ/ಮಾತಿನ ಕಲೆಯಲ್ಲಿ ಪರಿಣತನಾದವನು; ಬ್ರಹ್ಮೇತಿ+ಕಾರ; ಬ್ರಹ್ಮೇತಿ=ವಿಪರೀತ/ಅತಿ ಹೆಚ್ಚಾಗಿ; ಕಾರ=ಮಾಡುವವನು; ಬ್ರಹ್ಮೇತಿಕಾರ=ಅತಿಯಾಗಿ ಮಾಡುವವನು;

ಭಾಷೆವಂತನೆಂಬವ ಬ್ರಹ್ಮೇತಿಕಾರ=ಮಾತನಾಡುವ ಕಲೆಯಲ್ಲಿ ಪರಿಣತನಾದ ವ್ಯಕ್ತಿಯು, ತನ್ನ ಮಾತಿನ ಮೋಡಿಯಿಂದಲೇ ಜನರನ್ನು ಮುದಗೊಳಿಸುವುದರ ಜತೆಜತೆಗೆ ಜನರನ್ನು ವಂಚಿಸುವ ಕಲೆಯಲ್ಲಿಯೂ ಕುಶಲನಾಗಿರುತ್ತಾನೆ. ಅತಿಯಾಗಿ ಮಾತನಾಡುವ ವ್ಯಕ್ತಿಯು ಜನಸಮುದಾಯ ಉಳಿದು ಬೆಳೆದು ಬಾಳುವುದಕ್ಕೆ ಅಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ ಮತ್ತು ಆರೋಗ್ಯದ ಬಗ್ಗೆ ಚಿಂತಿಸದೆ ಇಲ್ಲವೇ ಅವುಗಳ ಉತ್ಪಾದನೆಗೆ ದುಡಿಮೆಯನ್ನು ಮಾಡದೆ ಕಾಲವನ್ನು ಕಳೆಯುತ್ತಿರುತ್ತಾನೆ. ಜನರನ್ನು ಮರುಳುಗೊಳಿಸುವಂತೆ ಮಾತನಾಡುವ ಇಂತಹ ವ್ಯಕ್ತಿಯಿಂದ ಜನಸಮುದಾಯಕ್ಕೆ ಮತ್ತು ಸಮಾಜಕ್ಕೆ ಹಾನಿಯುಂಟಾಗುತ್ತದೆಯೇ ಹೊರತು ಯಾವ ರೀತಿಯಿಂದಲೂ ಒಳಿತಾಗುವುದಿಲ್ಲ;

ಕುಳ್ಳ್+ಇರ್ದ+ಅಲ್ಲಿ; ಕುಳ್ಳಿರ್ದಲ್ಲಿ=ಕುಳಿತುಕೊಂಡಿರುವ ಜಾಗದಲ್ಲಿ; ಕುಳ್ಳಿರಲ್+ಆಗದು; ಕುಳ್ಳಿರಲ್=ಕುಳಿತುಕೊಳ್ಳಲು; ಆಗದು=ಆಗುವುದಿಲ್ಲ;

ಇವರು ಮೂವರು ಕುಳ್ಳಿರ್ದಲ್ಲಿ ಕುಳ್ಳಿರಲಾಗದು=ಇಂತಹ ನಡೆನುಡಿಯುಳ್ಳವರೊಡನೆ ಕುಳಿತುಕೊಳ್ಳಲು ಆಗುವುದಿಲ್ಲ. ಅಂದರೆ ಇಂತವರೊಡನೆ ನಂಟು ಇಲ್ಲವೇ ಗೆಳೆತನವನ್ನು ಮಾಡಿದರೆ ಹಾನಿಯುಂಟಾಗುತ್ತದೆ;

ಬಟ್ಟೆ=ದಾರಿ/ಹಾದಿ; ಹೊಗಲ್+ಆಗದು; ಹೊಗು=ಪ್ರವೇಶಿಸು/ಒಳಬರುವುದು;

ಇವರು ಹೋದ ಬಟ್ಟೆಯ ಹೊಗಲಾಗದು=ಇವರು ಹೋದ ದಾರಿಯಲ್ಲಿ ಹೋಗಲು ಆಗುವುದಿಲ್ಲ. ಅಂದರೆ ಇಂತಹ ವ್ಯಕ್ತಿಗಳ ನಡೆನುಡಿಯನ್ನು ಅನುಕರಣ ಮಾಡಲು ಹೋದರೆ ಬದುಕಿನಲ್ಲಿ ಕೇಡಾಗುತ್ತದೆ.

“ಕುಳ್ಳಿರಲಾಗದು/ಹೊಗಲಾಗದು” ಎಂಬ ಈ ನುಡಿಗಳು ರೂಪಕಗಳಾಗಿ ಬಳಕೆಗೊಂಡಿವೆ.

ಅಹಂಕಾರ, ಸಂಶಯ ಮತ್ತು ವಂಚಕತನದ ನಡೆನುಡಿಯುಳ್ಳ ವ್ಯಕ್ತಿಗಳಿಂದ ದೂರವಿರಬೇಕು. ಏಕೆಂದರೆ ಅಂತಹ ವ್ಯಕ್ತಿಗಳು ಸಮಾಜದಲ್ಲಿನ ಒಟ್ಟು ಜನಸಮುದಾಯದ ಒಲವು ನಲಿವು ನೆಮ್ಮದಿಯಿಂದ ಕೂಡಿದ ಬದುಕಿಗೆ ಹಾನಿಯನ್ನುಂಟುಮಾಡುವ ನಡೆನುಡಿಗಳನ್ನು ಹೊಂದಿರುತ್ತಾರೆ. ಅಂತಹವರ ಒಡನಾಟ ಇಲ್ಲವೇ ಅವರೊಡನೆ ಮಾಡುವ ವ್ಯವಹಾರದಿಂದ ಕೇವಲ ಒಂದಿಬ್ಬರಿಗೆ ಮಾತ್ರವಲ್ಲ, ಇಡೀ ಸಮಾಜದ ಬದುಕು ದುರಂತದತ್ತ ಸಾಗುತ್ತದೆ ಎಂಬ ತಿರುಳಿನಲ್ಲಿ ಈ ರೂಪಕಗಳು ಬಳಕೆಗೊಂಡಿವೆ.

ಲಿಂಗ+ಇಲ್ಲ+ಎಂದಾತನ್+ಅಂಬಿಗ; ಅಂಬಿಗ=ನದಿಯಲ್ಲಿ ದೋಣಿಯನ್ನು ನಡೆಸುವ ಕಾಯಕದವನು;

ಇವರು ಮೂವರಿಗೂ ಗುರುವಿಲ್ಲ ಲಿಂಗವಿಲ್ಲೆಂದಾತನಂಬಿಗ ಚೌಡಯ್ಯ=ಕೆಟ್ಟ ನಡೆನುಡಿಯುಳ್ಳವರ ಪಾಲಿಗೆ ಗುರುವಾಗಲಿ ಇಲ್ಲವೇ ಲಿಂಗವಾಗಲಿ ಇರುವುದಿಲ್ಲ. ಏಕೆಂದರೆ ಗುರು ಮತ್ತು ಲಿಂಗ ಮೆಚ್ಚುವುದು ವ್ಯಕ್ತಿಯಲ್ಲಿರುವ ಒಳ್ಳೆಯ ನಡೆನುಡಿಗಳನ್ನು ಮಾತ್ರ. “ಒಳ್ಳೆಯ ನಡೆನುಡಿ” ಎಂದರೆ ವ್ಯಕ್ತಿಯು ಆಡುವ ನುಡಿ ಮತ್ತು ಮಾಡುವ ದುಡಿಮೆಯು ವ್ಯಕ್ತಿಗೆ ಮತ್ತು ಅವನ ಕುಟುಂಬಕ್ಕೆ ಒಳಿತನ್ನು ಮಾಡುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದು.

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: