ಅಂಬಿಗರ ಚೌಡಯ್ಯನ ವಚನ ಓದು – 12ನೆಯ ಕಂತು
– ಸಿ.ಪಿ.ನಾಗರಾಜ.
ಸಮಯವ ಮಾಡಿ
ಹಣವ ತೆಗೆಯಲೇತಕ್ಕೆ
ಆಚಾರಕ್ಕೂ ಹಣದಾಸೆಗೂ ಸರಿಯೆ
ಎಂದನಂಬಿಗ ಚೌಡಯ್ಯ.
ಸತ್ಯ ನೀತಿ ನ್ಯಾಯದ ನಡೆನುಡಿಗಳನ್ನು ಜೀವನದಲ್ಲಿ ಆಚರಿಸುವಂತೆ ಜನರಿಗೆ ಬಹಿರಂಗದಲ್ಲಿ ತಿಳಿಯ ಹೇಳುತ್ತ, ಅಂತರಂಗದಲ್ಲಿ ಹಣವನ್ನು ಸಂಪಾದನೆ ಮಾಡುವ ಕೆಟ್ಟ ಉದ್ದೇಶವನ್ನು ಹೊಂದಿರುವ ವ್ಯಕ್ತಿಗಳ ಇಬ್ಬಗೆಯ ವರ‍್ತನೆಯನ್ನು ವಚನಕಾರನು ಈ ವಚನದಲ್ಲಿ ಟೀಕಿಸಿದ್ದಾನೆ.
‘ಇಬ್ಬಗೆಯ ವರ‍್ತನೆ’ ಎಂದರೆ ಒಂದು ಕಡೆ ಒಳ್ಳೆಯದನ್ನು ಹೇಳುತ್ತಿರುವ ವ್ಯಕ್ತಿಯೇ ಮತ್ತೊಂದು ಕಡೆ ಕೆಟ್ಟದ್ದನ್ನು ಮಾಡುತ್ತಿರುವುದು.
ಸಮಯ=ದರ‍್ಮ/ಒಳ್ಳೆಯ ನಡೆನುಡಿಗಳ ಪಾಲನೆ; ಸಮಯವ ಮಾಡಿ=ಜನರಿಗೆ ಒಳ್ಳೆಯ ನಡೆನುಡಿಯನ್ನು ಪಾಲಿಸುವಂತೆ ತಿಳಿಯ ಹೇಳುತ್ತ; ಹಣ=ಸಂಪತ್ತು; ತೆಗೆಯಲ್+ಏತಕ್ಕೆ; ತೆಗೆ=ಅಪಹರಿಸು/ಎತ್ತಿಕೊಳ್ಳು/ಕದಿ/ಕಳುವು; ಏತಕ್ಕೆ=ಯಾವ ಉದ್ದೇಶಕ್ಕಾಗಿ;
ಆಚಾರ=ಒಳ್ಳೆಯ ನಡೆನುಡಿ. ‘ಒಳ್ಳೆಯ ನಡೆನುಡಿ’ ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ಕೆಲಸವು ಅವನಿಗೆ ಮತ್ತು ಅವನ ಕುಟುಂಬಕ್ಕೆ ಒಳಿತನ್ನು ಮಾಡುವಂತೆಯೇ ಸಹಮಾನವರಿಗೂ ಮತ್ತು ಸಮಾಜಕ್ಕೂ ಒಳಿತನ್ನು ಉಂಟುಮಾಡುವುದು;
ಹಣದ+ಆಸೆಗೂ; ಹಣದಾಸೆ=ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಪಾದಿಸಬೇಕೆಂಬ ಬಯಕೆ; ಸರಿ=ತಕ್ಕುದು/ಯೋಗ್ಯವಾದುದು; ಸರಿಯೆ=ಯೋಗ್ಯವೇ; ಎಂದನ್+ಅಂಬಿಗ; ಅಂಬಿಗ=ನದಿಯಲ್ಲಿ ದೋಣಿಯನ್ನು ನಡೆಸುವ ಕಾಯಕದವನು;
ದೇವ ಮಂದಿರಗಳಲ್ಲಿ ಉಳ್ಳವರಿಗೆ ದೊರೆಯುವ ಮನ್ನಣೆಯು ದುಡಿಯುವ ವರ‍್ಗದ ಬಡವರಿಗೆ ದೊರೆಯುವುದಿಲ್ಲ. ದೇವರ ವಿಗ್ರಹವನ್ನು ನೋಡುವುದಕ್ಕೆ ಹೆಚ್ಚು ಹಣ ಕೊಟ್ಟವರನ್ನು ಮೊದಲು ಬಿಡುವ ಮತ್ತು ದೇವರಿಗೆ ಮಾಡುವ ಪೂಜೆಗಳಲ್ಲಿ ಒಂದೊಂದು ಬಗೆಯ ಪೂಜೆಗೂ ಒಂದೊಂದು ಬಗೆಯ ದರವನ್ನು ನಿಗದಿಪಡಿಸಿರುವ ಕ್ರಮದಲ್ಲಿ ಹೆಚ್ಚು ಹೆಚ್ಚು ಹಣವನ್ನು ಸಂಪಾದನೆ ಮಾಡುವ ಉದ್ದೇಶವಿದೆಯೇ ಹೊರತು ದೇವರ ಬಳಿ ಬರುವವರು ಒಳ್ಳೆಯ ನಡೆನುಡಿಗಳನ್ನು ಹೊಂದಿರಬೇಕೆಂಬ ಇಲ್ಲವೇ ಒಳ್ಳೆಯ ನಡೆನುಡಿಗಳನ್ನು ಕಲಿತುಕೊಳ್ಳುವಂತೆ ಆಗಬೇಕೆಂಬ ಉದ್ದೇಶವಿಲ್ಲ. ವ್ಯಕ್ತಿಗಳು ಪಡೆಯುವ ಸಾಮಾಜಿಕ ಅರಿವು ಮತ್ತು ಎಚ್ಚರದಿಂದ ಒಳ್ಳೆಯ ನಡೆನುಡಿಗಳು ರೂಪುಗೊಳ್ಳುತ್ತವೆಯೇ ಹೊರತು ಅವರು ಮಾಡುವ ದೇವರ ಪೂಜೆಯಿಂದಲ್ಲ ಎಂಬ ನಿಲುವನ್ನು ಹನ್ನೆರಡನೆಯ ಶತಮಾನದ ವಚನಕಾರರು ತಳೆದಿದ್ದರು.
ಜಾತಿ ಮತದ ಒಕ್ಕೂಟಗಳ ಗುರುಗಳು ತಂತಮ್ಮ ಜಾತಿಯ ಸಿರಿವಂತರಿಗೆ ಮತ್ತು ರಾಜಕೀಯವಾಗಿ ಉನ್ನತ ಗದ್ದುಗೆಯಲ್ಲಿ ಇರುವವರಿಗೆ ಹೆಚ್ಚಿನ ಮನ್ನಣೆಯನ್ನು ನೀಡುತ್ತಾರೆ. ತಮ್ಮ ಬಳಿ ಬರುವ ಸಿರಿವಂತರಿಗೆ ಇಲ್ಲವೇ ಉನ್ನತ ಗದ್ದುಗೆಯಲ್ಲಿರುವ ವ್ಯಕ್ತಿಗಳಿಗೆ “ಜನಸಮುದಾಯವನ್ನು ಮತ್ತು ಸಮಾಜವನ್ನು ವಂಚಿಸಿ ಕೆಟ್ಟ ರೀತಿಯಲ್ಲಿ ನೀವು ಸಂಪತ್ತನ್ನು ಗಳಿಸಬೇಡಿ” ಎಂಬ ಅರಿವನ್ನಾಗಲಿ ಇಲ್ಲವೇ ಎಚ್ಚರಿಕೆಯನ್ನಾಗಲಿ ನೀಡುವುದಿಲ್ಲ. ಏಕೆಂದರೆ ಎಲ್ಲಾ ಕಾಲದಲ್ಲಿಯೂ ಜಾತಿ ಮತ ದೇವರ ಹೆಸರಿನಲ್ಲಿ ಹಣದ/ಸಂಪತ್ತಿನ ಗಳಿಕೆಯೇ ಮೂಲ ಉದ್ದೇಶವಾಗಿರುತ್ತದೆ ಎಂಬ ವಾಸ್ತವವನ್ನು ವಚನಕಾರನು ಗುರುತಿಸಿ, ಅಂತಹ ಇಬ್ಬಗೆಯ ನಡವಳಿಕೆಯನ್ನು ಟೀಕಿಸಿದ್ದಾನೆ.
(ಚಿತ್ರ ಸೆಲೆ: lingayatreligion.com)
ಇತ್ತೀಚಿನ ಅನಿಸಿಕೆಗಳು