ಬೇಸಿಗೆ: ರಜೆಯ ಮಜಾ ದಿನಗಳು

ರಾಹುಲ್ ಆರ್. ಸುವರ‍್ಣ.

ಪ್ರತಿಯೊಬ್ಬರ ಬದುಕಿನಲ್ಲಿ ಬಾಲ್ಯದ ಮರೆಯಲಾಗದ ದಿನಗಳೆಂದರೆ ಅದು ಬೇಸಿಗೆ ರಜಾ ದಿನಗಳು. ಪರೀಕ್ಶೆಗಳು ಮುಗಿದರೆ ಸಾಕು, ಒಬ್ಬೊಬ್ಬರ ವಿಳಾಸ ಅವರ ಮನೆಯವರಿಂದ ದೊರಕುವುದು ಕೂಡಾ ಅಸಾದ್ಯವಾಗಿತ್ತು. ಆ ದಿನಗಳಲ್ಲಿ ಮರಕೋತಿ ಆಟವಾಡಿದ್ದು, ಬಟ್ರ ತೋಟಕ್ಕೆ ನುಗ್ಗಿ ತೊತಾಪುರಿ ಕೆಡವಿದ್ದನ್ನು ಎಂದಾದರೂ ಮರೆಯಲು ಸಾದ್ಯವುಂಟೆ!

ಬದುಕಿನಲ್ಲಿ ಎಲ್ಲವು ನಮ್ಮ ನಿರೀಕ್ಶೆಯಂತೆ ನಡೆಯುವುದಿಲ್ಲ. ನಡೆದರೆ ಅದು ಬದುಕು ಎಂದೆನಿಸಿಕೊಳ್ಳುವುದಿಲ್ಲ. ಕಳೆದಹೋದ ಸಮಯ, ಮೀರಿದ ವಯಸ್ಸು ಇವೆರಡು ನಮಗೆ ಎಂದಿಗೂ ಹಿಂದಿರುಗಿ ಬರುವುದಿಲ್ಲ. ಹಾಗಾಗಿ ಮನುಶ್ಯ ಅವೆರಡನ್ನು ಬಿಟ್ಟು ಮತ್ತೆಲ್ಲವನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾನೆ. ನನ್ನ ಬಾಲ್ಯ ಎಲ್ಲರಂತೆ ರಜಾದಿನಗಳಲ್ಲಿ ಹಳ್ಳ ಹಾರಿಕೊಂಡು, ಅಡಕೆ ಮರದಿಂದ ಮಾಡಲ್ಪಟ್ಟ ಸೇತುವೆ ದಾಟಿಕೊಂಡು, ಅಮ್ಮ ಅಡುಗೆ ಸೌಂಟಿನಲ್ಲಿ ಪೆಟ್ಟು ತಿಂದುಕೊಂಡೆ ಕಳೆದಿದ್ದು. ನನ್ನೂರು ನೋಡಲು ಚಿಕ್ಕದೇ ಆದರೂ, ನೋಡಿದಶ್ಟು ಕಾಣುವುದು ಹಸಿರೆಲೆಗಳ ಸಾಲೆ ಹೊರತು, ಬಹು ಅಂತಸ್ತಿನ ಕಟ್ಟಡಗಳಲ್ಲ. ಹಾಗೆಂದ ಮಾತ್ರಕ್ಕೆ ಕಾಡಿನೊಳಗೆ ಊರಿರುವುದು ಎಂದಲ್ಲ. ಅಗತ್ಯಕ್ಕೆ ತಕ್ಕಶ್ಟು ಸಾಮಗ್ರಿಗಳನ್ನು ತುಂಬಿಕೊಂಡಿರುವ ಬಟ್ರ ಅಂಗಡಿ, ಆಕಾಶಕ್ಕೆ ಮುಕಮಾಡಿ ನಿಂತಿರುವ ಜಲ್ಲಿ ಕಲ್ಲುಗಳುಳ್ಳ ರಸ್ತೆ. ಕಾಮಗಾರಿ ಕಳಪೆಯೋ ಅತವಾ ಕಾಮಗಾರಿಯ ಸೂತ್ರದಾರಿಗಳಿಗೆ ಬಿದ್ದ ವೋಟುಗಳು ಕಳಪೆಯೋ? ಇದು ಉತ್ತರ ಸಿಗದ ಪ್ರಶ್ನೆ. ಇದು ನಮ್ಮೂರಿನ ಕತೆ.

ನನ್ನ ಓದು ಊರಿನಲ್ಲಿ ಒಂದರಿಂದ ನಾಲ್ಕನೇ ಕ್ಲಾಸು ಮಾತ್ರ. ಆದರೆ ಅಲ್ಲಿನವರಿಗೆ ಬೇಸಿಗೆ ರಜಾ ದಿನಗಳಲ್ಲಿ ಸಾಕಶ್ಟು ಪಾಟಗಳನ್ನು ಕಲಿತಿದ್ದೇನೆ. ರಜಾದಿನಗಳು ಬಂದರೆ ಸಾಕು, ಗೆಳೆಯರು ಒಬ್ಬೊಬ್ಬರದಿಂದ ಒಂದೊಂದು ಐಡಿಯಾಗಳು ಹೊರ ಬೀಳುತಿದ್ದವು. ಕೆಲವರು ಊರು ಬಿಟ್ಟರೆ, ಇನ್ನು ಕೆಲವರು ಊರಿನ ಮೈದಾನದಲ್ಲಿ ಮನೆ ಮಾಡುತ್ತಿದ್ದರು. ಕೆಲವೊಮ್ಮೆ ಅದು ಇದು ಎಂದು ಕಾರಣಕೊಟ್ಟು ಮನೆಯಿಂದ ಹೊರಬಿದ್ದರೆ ಮತ್ತೆ ಮನೆ ಸೇರುತ್ತಿದ್ದುದು ದಾರಿ ದೀಪಗಳು ನಿದ್ದೆ ಬಿಟ್ಟು ಎದ್ದಾಗ. ಊರಿನ ಒಂದು ಬಾಗದಲ್ಲಿ ಕಾಡಿದ್ದರಿಂದ ಬೆಳ್ಳಂಬೆಳಗ್ಗೆ ಕೈಗೊಂದು ಕೋಲು ಹಿಡಿದು, ಜೊತೆಗೊಂದು ನಾಯಿ ಕರೆದುಕೊಂಡು ಶಿಕಾರಿ ಮಾಡುವವರಂತೆ ಗುಂಪುಕಟ್ಟಿ ಹೋಗುತ್ತಿದ್ದೆವು. ಕೆಲವೊಂದು ದಿನ ಇಡೀ ಹೊತ್ತು ನೀರಿನಲ್ಲಿ ನಿತ್ತು(ನಿಂತು) ಮೀನುಗಳಿಂದ ಕಾಲು ಕಚ್ಚಿಸಿಕೊಂಡು ಕುಶಿಪಡುತ್ತಿದ್ದೆವು. ಆದರೆ ಕೊನೆಗೆ ಅವುಗಳನ್ನೆ ತಂದೆ ಸೀರೆಯಲ್ಲೂ ಅತವಾ ಅಪ್ಪನ ಹಳೆ ಪಂಚೆಯಲ್ಲೋ ಹಿಡಿದು ಗಾಜಿನ ಬಾಟಲಿಗಳಿಗೆ ಹಾಕಿ ಮನೆಗೆ ಹೋಗಿ ಅಮ್ಮನ ಬಳಿ ಸಾಕುತ್ತೇನೆಂದು ಜಗಳ ಮಾಡಿದ್ದೂ ಉಂಟು. ಆದರೆ ಆ ಹೊತ್ತಿಗೆ ತೀರ‍್ಪುಗಾರರು ಮಾತ್ರ ಅಪ್ಪನೆ ಆಗಿರುತ್ತಿದ್ದರು. ಕೆಲವೊಮ್ಮೆ ಇಂತಹ ಕಪಿ ಚೇಶ್ಟೆಗಳೆಲ್ಲ ಅತಿಯಾಯಿತು ಎಂದೆನಿಸಿದರೆ, ಅಪ್ಪನ ಬಳಿ ಹೇಳಿದಲ್ಲಿ ನೆಂಟರ ಮನೆಗೆ ಬಸ್ಸು ಹತ್ತಿಸಿ ಬಿಡುತ್ತಿದ್ದರು. ಈಗ ಬಸ್ಸಿನಲ್ಲಿ ಕಂಡಕ್ಟರ‍್ ಕೊಟ್ಟ ಟಿಕೇಟು ಎರಡು ನಿಮಿಶ ಬಿಟ್ಟು ಕೇಳಿದರೆ ಇರುವುದಿಲ್ಲ, ಆದರೆ ಆಗ ಹೆಚ್ಚು ಕಮ್ಮಿ ವರ‍್ಶಗಳೇ ಕಳೆದರೂ ಟಿಕೇಟನ್ನು ಪರ್ಸ್‍‍‍‍ನಿಂದ ಹೊರ ತೆಗೆಯುತ್ತಿರಲಿಲ್ಲ. ಆಗೆಲ್ಲ ಮೊಬೈಲ್ಗಳು ಸ್ವಂತ ವಾಹನಗಳು ಮನೆಯಲ್ಲಿ ಅತೀ ವಿರಳವಾಗಿತ್ತು, ಆದರೀಗ ಮನೆಗೆರಡು ವಾಹನ ಐದಾರು ಸ್ಮಾರ‍್ಟ್ ಪೋನ್‍‍ಗಳು ಇರುತ್ತವೆ. ಏನು ಮಾಡುವುದು ಅನಿವಾರ‍್ಯತೆ ಬದುಕಿನ ನಿಯಮವಾದರೆ, ಬದಲಾವಣೆ ಜಗದ ನಿಯಮ.

ಬಾಲ್ಯ ಎಂದರೆ ಪ್ರತಿಯೊಬ್ಬರಿಗೂ ಹೀಗೆ ರಜೆಯ ಮಜಾ ದಿನಗಳು ನೆನಪಾಗುತ್ತವೆ. ಆ ನೆನಪುಗಳು ನಾವು ಎಶ್ಟೇ ದೊಡ್ಡವರಾದರೂ ನಮ್ಮನ್ನು ಮತ್ತೆ ಮತ್ತೆ ಸಣ್ಣವರನ್ನಾಗಿ ಮಾಡುತ್ತವೆ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: