ಅಂಬಿಗರ ಚೌಡಯ್ಯನ ವಚನ ಓದು – 13ನೆಯ ಕಂತು

– ಸಿ.ಪಿ.ನಾಗರಾಜ.

ಅಂಬಿಗರ ಚೌಡಯ್ಯ, Ambigara Choudayya

ಮಾತಿನ ವೇದ
ನೀತಿಯ ಶಾಸ್ತ್ರ
ಘಾತಕದ ಕಥೆ
ಕಲಿವುದಕ್ಕೆ ಎಷ್ಟಾದಡೂ ಉಂಟು
ಅಜಾತನ ಒಲುಮೆ
ನಿಶ್ಚಯವಾದ ವಾಸನೆಯ ಬುದ್ಧಿ
ತ್ರಿವಿಧದ ಆಸೆಯಿಲ್ಲದ ಚಿತ್ತ
ಸರ್ವರಿಗೆ ಹೇಸಿಕೆಯಿಲ್ಲದ ನಡೆನುಡಿ
ಇಷ್ಟಿರಬೇಕೆಂದೆನಂಬಿಗ ಚೌಡಯ್ಯ.

ಓದು ಬರಹದಿಂದ ವ್ಯಕ್ತಿಯು ಕಲಿಯುವ ವಿದ್ಯೆ ಮತ್ತು ಗಳಿಸುವ ಪಾಂಡಿತ್ಯವೇ ದೊಡ್ಡದಲ್ಲ. ಅದಕ್ಕಿಂತ ಮಿಗಿಲಾಗಿ ವ್ಯಕ್ತಿಯ ಸಾಮಾಜಿಕ ನಡೆನುಡಿಯು ಒಳ್ಳೆಯ ರೀತಿಯಲ್ಲಿರಬೇಕೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

‘ಸಾಮಾಜಿಕ ನಡೆನುಡಿ’ ಎಂದರೆ ವ್ಯಕ್ತಿಯು ಆಡುವ ನುಡಿಗಳು ಮತ್ತು ಮಾಡುವ ಕೆಲಸಗಳು ಆತನಿಗೆ, ಆತನ ಕುಟುಂಬಕ್ಕೆ ಒಳಿತನ್ನು ಮಾಡುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವುದು.

ಮಾತು=ನುಡಿ/ಸೊಲ್ಲು; ವೇದ=ಅರಿವು/ತಿಳುವಳಿಕೆ/ಇಂಡಿಯಾ ದೇಶದಲ್ಲಿದ್ದ ಪ್ರಾಚೀನ ಜನಸಮುದಾಯದವರು ನಿಸರ್‍ಗ ದೇವತೆಗಳನ್ನು ಪೂಜಿಸುತ್ತಿದ್ದ ಆಚರಣೆಗಳ ವಿವರವನ್ನು ಒಳಗೊಂಡ ರುಗ್ವೇದ-ಯಜುರ್‍ವೇದ-ಅತರ್‍ವಣ ವೇದ-ಸಾಮವೇದ ಎಂಬ ನಾಲ್ಕು ವೇದಗಳು; ಮಾತಿನ ವೇದ=ವೇದಗಳನ್ನು ಬಲ್ಲವರು ತಾವಾಡುವ ಮಾತಿನಲ್ಲಿ ವೇದದ ನುಡಿಗಟ್ಟುಗಳನ್ನು ಹೆಚ್ಚಾಗಿ ಬಳಸುವುದು;

ನೀತಿ=ಒಳ್ಳೆಯ ನಡತೆ; ಶಾಸ್ತ್ರ=ದೇವತೆಗಳ ಪೂಜೆಯಲ್ಲಿ ಅನುಸರಿಸಬೇಕಾದ ಸಂಪ್ರದಾಯಗಳನ್ನು ಮತ್ತು ಜನಸಮುದಾಯದ ಹುಟ್ಟು, ಮದುವೆ, ಸಾವಿನ ಸನ್ನಿವೇಶಗಳಲ್ಲಿ ಮಾಡಬೇಕಾದ ಆಚರಣೆಗಳನ್ನು ವಿವರಿಸುವ ಹೊತ್ತಿಗೆ; ನೀತಿಯ ಶಾಸ್ತ್ರ=ಶಾಸ್ತ್ರದಲ್ಲಿ ಹೇಳಿರುವ ಆಚರಣೆಗಳನ್ನು ಚಾಚು ತಪ್ಪದೆ ಮಾಡುವುದನ್ನೇ ನೀತಿಯ ನಡವಳಿಕೆಯೆಂದು ತಿಳಿದಿರುವುದು;

ಘಾತಕ=ಕೊಲೆ/ಹೊಡೆತ/ಹಿಂಸೆ; ಕಥೆ=ವಾಸ್ತವದ ಪ್ರಸಂಗಗಳಿಗೆ ಕಲ್ಪಿತ ಸಂಗತಿಗಳನ್ನು ಹೆಣೆದು ರಚಿಸಿರುವ ಸಾಹಿತ್ಯ; ಘಾತಕದ ಕಥೆ=ರಾಜ್ಯದ ಪಟ್ಟಕ್ಕಾಗಿ ಇಲ್ಲವೇ ಹೆಣ್ಣನ್ನು ಪಡೆಯುವುದಕ್ಕಾಗಿ ಪರಸ್ಪರ ಒಬ್ಬರನ್ನೊಬ್ಬರು ಕೊಲೆ ಮಾಡುವಂತಹ ಸಂಗತಿಗಳನ್ನು ಒಳಗೊಂಡ ಕತೆಗಳು/ಕಾವ್ಯಗಳು;

ಕಲಿ=ಅರಿತುಕೊಳ್ಳುವುದು/ತಿಳಿಯುವುದು; ಎಷ್ಟಾದಡೂ=ಹೆಚ್ಚಿನ ಸಂಕೆಯಲ್ಲಿದ್ದರೂ ; ಕಲಿವುದಕ್ಕೆ ಎಷ್ಟಾದಡೂ ಉಂಟು=ಕಲಿಯುವುದಕ್ಕೆ ಹೆಚ್ಚಿನ ಸಂಗತಿಗಳು ಈ ಜಗತ್ತಿನಲ್ಲಿವೆ ;

ಅಜಾತ=ಶಿವ; ಒಲುಮೆ=ಪ್ರೀತಿ/ದಯೆ/ಅನುಗ್ರಹ; ಅಜಾತನ ಒಲುಮೆ=ಶಿವನ ದಯೆ; ನಿಶ್ಚಯ=ದಿಟ/ಸತ್ಯ/ಗೊತ್ತುಪಡಿಸಿದ;

ವಾಸನೆ=ಬಯಕೆ/ಆಸೆ; ಬುದ್ಧಿ=ಅರಿವು/ವಿವೇಕ; ನಿಶ್ಚಯವಾದ ವಾಸನೆಯ ಬುದ್ಧಿ=ವಾಸ್ತವವನ್ನು ಅರಿತುಕೊಂಡು ಬಾಳಬೇಕೆಂಬ ವಿವೇಕ;

ತ್ರಿವಿಧ=ದೇಹ ಮನಸ್ಸು ಮಾತು ಎಂಬ ಮೂರು ಬಗೆಗಳು; ಆಸೆ+ಇಲ್ಲದ; ಚಿತ್ತ=ಮನಸ್ಸು; ತ್ರಿವಿಧದ ಆಸೆಯಿಲ್ಲದ ಚಿತ್ತ=ದೇಹದಲ್ಲಿ ತುಡಿಯವ ಮಿಡಿತಗಳು ಮತ್ತು ಮನಸ್ಸಿನಲ್ಲಿ ಮೂಡುವ ಒಳಿತು ಕೆಡುಕಿನ ಸಂಗತಿಗಳಲ್ಲಿ ತನಗೆ ಮತ್ತು ಇತರರಿಗೆ ಕೆಡುಕನ್ನು ಉಂಟುಮಾಡುವ ಒಳಮಿಡಿತಗಳನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ಮಾತ್ರ ಮಾಡುವಂತಹ ಮನಸ್ಸು;

ಸರ್ವ=ಎಲ್ಲ/ಸಮಸ್ತ; ಸರ್ವರಿಗೆ=ಎಲ್ಲ ಜನರಿಗೆ; ಹೇಸಿಕೆ+ಇಲ್ಲದ; ಹೇಸಿಕೆ=ಅಸಹ್ಯ/ಜುಗುಪ್ಸೆ/ಬೇಸರ; ನಡೆ=ವರ್‍ತನೆ/ಮಾಡುವ ಕೆಲಸ; ನುಡಿ=ಮಾತು;

ಸರ್ವರಿಗೆ ಹೇಸಿಕೆಯಿಲ್ಲದ ನಡೆನುಡಿ=ಇತರರು ತನ್ನ ಬಗ್ಗೆ ಅಸಹ್ಯಪಟ್ಟುಕೊಳ್ಳದಂತೆ ಒಳ್ಳೆಯ ನಡೆನುಡಿಗಳಿಂದ ಬಾಳುವುದು; ಇಷ್ಟು+ಇರಬೇಕು+ಎಂದನ್+ಅಂಬಿಗ;

ಇಷ್ಟಿರಬೇಕೆಂದೆನಂಬಿಗ ಚೌಡಯ್ಯ=ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಈ ಬಗೆಯ ಸಾಮಾಜಿಕ ನಡೆನುಡಿಗಳು ಇರಬೇಕು ಎಂದು ಅಂಬಿಗ ಚೌಡಯ್ಯನು ಹೇಳುತ್ತಿದ್ದಾನೆ.

ಈ ವಚನದಲ್ಲಿ ವಚನಕಾರನು ಬಹು ದೊಡ್ಡ ಸಂಗತಿಯೊಂದನ್ನು ಪ್ರಸ್ತಾಪಿಸಿದ್ದಾನೆ. ಅದೇನೆಂದರೆ ವೇದಗಳಲ್ಲಿನ ವಿಚಾರಗಳನ್ನು ಹೇಳುವ, ಶಾಸ್ತ್ರಗಳ ಮೂಲಕ ನೀತಿಯನ್ನು ತಿಳಿಸುವ ಮತ್ತು ಮಹಾಕಾವ್ಯಗಳನ್ನು ಓದಿ ಅಲ್ಲಿನ ಕತೆಗಳನ್ನು ಹೇಳುವ ಮಂದಿಯು ಮೇಲು ವರ್‍ಣ ಮತ್ತು ಮೇಲು ವರ್‍ಗಕ್ಕೆ ಸೇರಿದ ಬ್ರಾಹ್ಮಣ, ಕ್ಶತ್ರಿಯ ಮತ್ತು ವೈಶ್ಯರಾಗಿದ್ದರು.

ಹನ್ನೆರಡನೆಯ ಶತಮಾನದ ಸಾಮಾಜಿಕ ರಚನೆಯಲ್ಲಿ ವರ್‍ಣ ವ್ಯವಸ್ತೆಯಿದ್ದುದರಿಂದ ಈ ಮೂರು ವರ್‍ಣದವರು ಮಾತ್ರ ವಿದ್ಯೆ, ಸಂಪತ್ತು ಮತ್ತು ರಾಜಕೀಯ ಗದ್ದುಗೆಗೆ ಹಕ್ಕುದಾರರಾಗಿದ್ದರು. ಇನ್ನುಳಿದ ಶೇ.80 ಮಂದಿ ಶೂದ್ರರು ಮತ್ತು ಪಂಚಮರು ಈ ಮೂರು ವರ್‍ಣದವರ ಸೇವೆಯನ್ನು ಮಾಡಬೇಕಿತ್ತೇ ಹೊರತು ಬದುಕಿನ ಒಳ್ಳೆಯ ಅವಕಾಶಗಳಿಂದ ವಂಚಿತರಾಗಿ ಹಸಿವು, ಬಡತನ ಮತ್ತು ಅಪಮಾನದಿಂದ ನರಳುತ್ತಿದ್ದರು.

ವಚನಕಾರರು ದುಡಿಯುವ ವರ್‍ಗದ ಶೂದ್ರ ಮತ್ತು ಪಂಚಮರ ಪರವಾಗಿ ದನಿಯೆತ್ತಿ, ಮೇಲಿನ ಮೂರು ವರ್‍ಣದವರು ಮಾಡುತ್ತಿದ್ದ ವಂಚನೆ, ಸುಲಿಗೆ ಮತ್ತು ಕ್ರೂರತನದ ನಡೆನುಡಿಗಳನ್ನು ಟೀಕಿಸಿದ್ದಾರೆ.

ವರ್‍ಣ ವ್ಯವಸ್ತೆಯನ್ನು ಎತ್ತಿಹಿಡಿಯುವ ವೇದಗಳನ್ನು, ಜನಸಮುದಾಯವನ್ನು ಮೇಲು-ಕೀಳು ಎಂದು ವಿಂಗಡಿಸುವ ಜಾತಿಯ ಕಟ್ಟುಪಾಡುಗಳನ್ನು ತಿಳಿಸುವ ಶಾಸ್ತ್ರಗಳನ್ನು ಮತ್ತು ಇಡೀ ಜನಸಮುದಾಯದ ಸಾವು ನೋವಿನ ದುರಂತಕ್ಕೆ ಕಾರಣವಾಗುವ ಕಾಳಗವನ್ನೇ ವೀರತನದ ಸಂಕೇತವೆಂದು ಸಾರುವ ಮಹಾಕಾವ್ಯಗಳನ್ನು ಶಿವಶರಣಶರಣೆಯರು ನಿರಾಕರಿಸಿದ್ದರು.

ವೇದಗಳು, ಶಾಸ್ತ್ರಗಳು ಮತ್ತು ಮಹಾಕಾವ್ಯಗಳಲ್ಲಿನ ವಿಚಾರಗಳಿಂದ ಕಲಿಯುವ ವಿದ್ಯೆಯು ಮತ್ತು ಪಡೆಯುವ ಪಾಂಡಿತ್ಯವು ಜನರನ್ನು ವಿಂಗಡಿಸುತ್ತದೆಯೇ ಹೊರತು, ಎಲ್ಲರೂ ಜತೆಗೂಡಿ ಬಾಳುವಂತಹ ಸಾಮಾಜಿಕವಾದ ನಡೆನುಡಿಗಳನ್ನು ಕಲಿಸುವುದಿಲ್ಲ. ಆದ್ದರಿಂದ ಒಳ್ಳೆಯ ನಡೆನುಡಿಗಳಿಗೆ ಶಿವನನ್ನು ಒಂದು ಸಂಕೇತವನ್ನಾಗಿ ಮಾಡಿಕೊಂಡು, ಸರ್‍ವರಿಗೆ ಹೇಸಿಕೆಯಿಲ್ಲದ ನಡೆನುಡಿಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಹೊಂದಿರಬೇಕು ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು.

“ಹೇಸಿಕೆಯ ನಡೆನುಡಿ” ಎಂದರೆ ಜಾತಿ ಮತ ದೇವರ ಹೆಸರಿನಲ್ಲಿ ಜನಸಮುದಾಯದ ಮನದಲ್ಲಿ ಪರಸ್ಪರ ಅಸೂಯೆ, ಅಪನಂಬಿಕೆ ಮತ್ತು ಹಗೆತನವನ್ನು ಉಂಟುಮಾಡಿ , ನೂರೆಂಟು ಜಾತಿಗಳಿಂದ ಮತ್ತು ಹಲವಾರು ಮತಗಳಿಂದ ರಚನೆಗೊಂಡಿರುವ ಸಮಾಜದಲ್ಲಿ ಜನರು ಪರಸ್ಪರ ಹೊಡೆದಾಟ ಬಡಿದಾಟ ಕೊಲೆ ಸುಲಿಗೆಯಲ್ಲಿ ತೊಡಗುವಂತೆ ಉದ್ರೇಕಿಸುವಂತಹ ಮಾತುಗಳು ಮತ್ತು ಕ್ರಿಯೆಗಳು. ಜನಸಮುದಾಯದ ಮತ್ತು ಸಮಾಜಕ್ಕೆ ಸೇರಿದ ಸಂಪತ್ತನ್ನು ಲೂಟಿ ಮಾಡಿ ರಾಜಕೀಯ ಗದ್ದುಗೆಯನ್ನೇರಿ ದುಡಿಯುವ ವರ್‍ಗದ ಜನತೆಯು ಬಡತನ ಮತ್ತು ಅಪಮಾನದಿಂದ ನರಳುವಂತೆ ಮಾಡುವ ಕೆಟ್ಟತನ ಮತ್ತು ಕ್ರೂರತನದಿಂದ ಕೂಡಿದ ನಡೆನುಡಿಗಳು.

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: