ಸಣ್ಣ ಕತೆ: ಬದುಕು ಜಟಕಾ ಬಂಡಿ

– ರಾಹುಲ್ ಆರ್. ಸುವರ‍್ಣ.

ಬದುಕೆಂಬ ಸಾಗರದಲ್ಲಿ ಬಿರುಗಾಳಿಗೆ ಸಿಕ್ಕವರೆಶ್ಟೋ, ಈಜಲು ಬಾರದೆ ಮುಳುಗಿದವರು ಅದೆಶ್ಟೋ, ಈಜಿ ದಡ ಸೇರಿದವರೆಶ್ಟೋ. ಪ್ರತಿಯೊಬ್ಬರ ಬದುಕಿನಲ್ಲಿ ಒಂದೊಂದು ರೀತಿಯ ಕತೆಗಳಿರುತ್ತವೆ. ಕೆಲವೊಂದು ಅನಾವರಣಗೊಳ್ಳುತ್ತವೆ, ಇನ್ನು ಕೆಲವು ಅಲ್ಲೇ ಉಳಿದು ಹೋಗುತ್ತವೆ. ಹಣವಿಲ್ಲದಿದ್ದರೆ ಹೆಣ ಎನ್ನುವ ಕಾಲವಿದು.

ದಿನ ಬೆಳಿಗ್ಗೆ ಮಗನಿಗಾಗಿ ನೀರು ಕಾಯಿಸಿ, ತಿಂಡಿ ಮಾಡುವುದು ಕಿರಣ್ ನ ತಾಯಿಯ ಕೆಲಸವಾಗಿತ್ತು. ಗ್ರಾಮೀಣ ಬಾಗದ ಹಳ್ಳಿ ಇವರದ್ದು. ಒಂದಿದ್ದರೆ ಇನ್ನೊಂದಿಲ್ಲ ಎನ್ನುವ ಪಾಡು ಈ ಹಳ್ಳಿಯವರದ್ದು. ಊರಲ್ಲಿ ಶಾಲೆಯಿದ್ದರೂ ಶಿಕ್ಶಕರಿಲ್ಲ. ಏನಿದೆ ಏನಿಲ್ಲ ಎಂಬ ಪ್ರಶ್ನೆಗೆ ಏನೂ ಇಲ್ಲ ಎನ್ನುವುದೇ ಉತ್ತರ.

ಸೂರ‍್ಯನ ಕಿರಣಗಳು ಗುಡಿಸಲಿನೊಳಗೆ ಮುತ್ತಿಕ್ಕುವ ಇವರ ಗುಡಿಸಲು ಅತಿ ದೊಡ್ಡ ಆಸ್ತಿ. ಇನ್ನೇನು ಮೂರು ತಿಂಗಳು ಓದಿದರೆ ಕಿರಣ್ ನಿಗೆ ಕೆಲಸ ಸಿಗುತ್ತದೆ, ಎನ್ನುವ ನಂಬಿಕೆಯಲ್ಲಿ ಆತನ ತಾಯಿ ಅವರಿವರ ಮನೆ ಕೆಲಸ ಮಾಡಿ ತನ್ನ ಹೊಟ್ಟೆ ಕಟ್ಟಿ ಮಗನನ್ನು ಓದಿಸುತ್ತಿದ್ದಳು. ಕಿರಣ್ ತಾಯಿಯ ನಂಬಿಕೆಯನ್ನು ಉಳಿಸಿಕೊಂಡ, ಪರೀಕ್ಶೆ ಬರೆದು, ಕಂಪೆನಿಯೊಂದರಲ್ಲಿ ಕೆಲಸಕ್ಕಾಗಿ ದೂರದೂರಿಗೆ ಹೋದ. ಪ್ರತಿದಿನವೂ ಅಮ್ಮನ ಕೈಅಡುಗೆ ತಿನ್ನುತ್ತಿದ್ದ ಅವನಿಗೆ ಅಲ್ಲಿಯ ವಾತಾವರಣ ಹಿಡಿಸಲಿಲ್ಲ. ಹುಟ್ಟಿನಿಂದ ಬಡತನದ ಬೇಗೆಯಲ್ಲಿ ಬೆಂದಿದ್ದ ಅವನಿಗೆ ಸ್ವಂತ ಮನೆ ಕಟ್ಟಬೇಕು ಎನ್ನುವ ತಾಯಿಯ ಮಾತು ಯಾವಾಗಲೂ ಕಿವಿಯಲ್ಲಿ ಗುನುಗುತ್ತಿತ್ತು.

ಕೆಲಸದ ಆರಂಬಿಕ ದಿನಗಳಲ್ಲಿ ಸಂಬಳ ಕಡಿಮೆ ಇದ್ದರೂ, ಕಾಲ ಕಳೆದಂತೆ ಆತನ ಪ್ರಾಮಾಣಿಕ ಕೆಲಸ ಜೀವನೋಪಾಯಕ್ಕೆ ಸಾಕಾಗುವಶ್ಟು ವರಮಾನ ತಂದು ಕೊಡುತ್ತಿತ್ತು. ಬಿಡುವಿದ್ದಾಗ ತಾಯಿಗೆ ಪೋನ್ ಮೂಲಕ ಕಂಪನಿಯ ಹೊರ ಪರಿಸರವನ್ನು ಚಿತ್ರಿಸುತ್ತಿದ್ದ.

ತಾಯಿಯನ್ನು ನೋಡಿಕೊಳ್ಳಲು ಒಬ್ಬ ಅನಾತ ಹುಡುಗನನ್ನು ಮನೆಗೆ ಕಳಿಸಿದ್ದ, ಅವನೇ ಮನೆಯ ಎಲ್ಲಾ ಕೆಲಸ ಕಾರ‍್ಯಗಳನ್ನು ಮಾಡುತ್ತಾ ಕಿರಣ್ ತಾಯಿಯ ಜವಾಬ್ದಾರಿಯನ್ನು ಹೊತ್ತಿದ್ದ. ಪ್ರತಿಸಲ ಹಣ ಬಂದಾಗ ಮೊದಲು ಈತನ ಕೈ ಸೇರಿ ನಂತರ ತಾಯಿಯ ಬಳಿ ಹೋಗುತ್ತಿತ್ತು. ಯಾರು ಇಲ್ಲದ ಇವನಿಗೆ ಎಲ್ಲವೂ ಆ ಮನೆ ಆಗಿತ್ತು. ಕಿರಣ್ ತಾಯಿಗೆ ವಯಸ್ಸಾದ ಕಾರಣ ಆಗಾಗ ಹುಶಾರು ತಪ್ಪುತಿದ್ದರಿಂದ ಕಿರಣ್ ಊರಿಗೆ ಬಂದು ಹೋಗುತ್ತಿದ್ದ. ನಂತರದ ದಿನಗಳಲ್ಲಿ ಸಂಬಳದೊಂದಿಗೆ ಕೆಲಸದ ಸಮಯ ಕೂಡ ಜಾಸ್ತಿಯಾಗಿ ಹೋಯಿತು.

ಆಗೊಮ್ಮೆ ಈಗೊಮ್ಮೆಯಾದರೂ ಪೋನ್ ಮೂಲಕ ತಾಯಿಯ ಯೋಗ ಕ್ಶೇಮ ವಿಚಾರಿಸುತ್ತಿದ್ದ, ಹೆಚ್ಚು ಕಮ್ಮಿ ನಾಲ್ಕೈದು ತಿಂಗಳಿಂದ ತಾಯಿಯ ಕಡೆ ಗಮನವೆ ಹರಿಸಲಿಲ್ಲ. ಮುಂಜಾನೆ ರೂಮಿನಿಂದ ಹೊರಬಂದರೆ ಮತ್ತೆ ರೂಮ್ ಸೇರುವಾಗ ಗಡಿಯಾರದ ಚಿಕ್ಕ ಮುಳ್ಳು ಹತ್ತರ ಮುಂದಿರುತ್ತಿತ್ತು. ಇನ್ನೊಂದೆರಡು ವಾರಗಳಲ್ಲಿ ಹಬ್ಬಕ್ಕೆ ಹೋಗಬೇಕಲ್ಲ ಆಗಲೇ ಮಾತಾಡಿದರೆ ಆಯ್ತು ಎಂದು ಸುಮ್ಮನಾಗುತ್ತಿದ್ದ.

ಇನ್ನೇನು ನಾಳೆ ಹಬ್ಬ ಎಂದರೆ ಇವತ್ತು ರಾತ್ರಿಯೇ ಹೊರಟುಬಿಟ್ಟರೆ ಇನ್ನೂ ಊರಲ್ಲೇ ಸ್ವಂತ ಉದ್ಯೋಗವನ್ನು ಪ್ರಾರಂಬಿಸಿ ಜೊತೆಗಿದ್ದರಾಯ್ತು ಎಂದು ಅಲ್ಲಿಂದ ಊರಿನ ಕಡೆಗೆ ಹೊರಟ. ಊರಿನಲ್ಲಿ ಇವನನ್ನು ಕಂಡಿದ್ದೇ ತಡ ಪರಿಚಿತರು, ಗೆಳೆಯರು, ಆತ್ಮೀಯರು ಎಲ್ಲರೂ ಬಂದು ಯೋಗಕ್ಶೇಮ ವಿಚಾರಿಸುತ್ತ “ಎಲ್ಲಪ್ಪ ನಿನ್ನ ತಾಯಿ” ಎಂದುಬಿಟ್ಟರು. ಇದ್ದಕ್ಕಿದ್ದಂತೆಯೇ ಒಮ್ಮೆಗೆ ಉಸಿರು ಉಸಿರು ನಿಂತಂತಾಯ್ತು, ನಿಂತ ಜಾಗದಲ್ಲೇ ನಡುಗುತ್ತಾ “ಅಮ್ಮ ಊರಲ್ಲಿ ಇಲ್ಲವೆ?” ಎಂದು ಕೇಳಿದ. “ಏನಪ್ಪಾ ಹೀಗಂತೀಯ ಹೋದ ವಾರ ತಾನೇ ನಿನ್ನಮ್ಮ ನೀನು ಇದ್ದಲ್ಲಿಗೆ ಬಂದಿದ್ದಾಳೆ. ಸುಮ್ಮನೆ ತಮಾಶೆ ಮಾಡುತ್ತಿರಬಹುದು ಎಂದು ಅವರ ಮಾತನ್ನು ಕಿವಿಗೆ ಹಾಕಿಕೊಳ್ಳದೇ ಮನೆ ಎದುರು ಬಂದು ನಿಂತು ಅಮ್ಮನನ್ನು ಕರೆದರೆ, ಅವಳು ಒಬ್ಬಳನ್ನು ಬಿಟ್ಟು ಅಕ್ಕಪಕ್ಕದ ಮನೆಯವರೆಲ್ಲಾ ಹೊರಗೆ ಬಂದು ಕಿರಣ್ ನನ್ನೇ ನೋಡುತ್ತಿದ್ದರು.

ಮನೆಯಲ್ಲಿ ಅಮ್ಮನು ಇರಲಿಲ್ಲ ಅಮ್ಮನೊಂದಿಗೆ ಇದ್ದ ಕೆಲಸದವನು ಇರಲಿಲ್ಲ. ಬಹುಶಹ ಹೇಳದೆ ದೇವಸ್ತಾನಕ್ಕೆ ಏನಾದರೂ ಹೋಗಿರಬಹುದೇನೋ ಎಂದುಕೊಂಡು ಎಲ್ಲಾ ಕಡೆ ಹುಡುಕಿಸಿದ. ಎಲ್ಲಿ ನೋಡಿದರೂ ಅವನ ತಾಯಿ ಸಿಗಲಿಲ್ಲ. ಊರವರ ಬಳಿ ಕೇಳಿದಾಗ ಆ ಕೆಲಸದವನು ನಿನ್ನಮ್ಮನನ್ನು ಕರೆದುಕೊಂಡು ಇಲ್ಲಿಂದ ಹೊರಟಿದ್ದಾನೆ ಎಂದರು.

ಮನೆ-ಮಟ ಇಲ್ಲದವನನ್ನು ಎಲ್ಲಿ ಅಂತ ಹುಡುಕುತ್ತಾನೆ. ಅದೇ ಸಮಯಕ್ಕೆ ಕಿರಣ್ ಗೆ ಒಂದು ಕರೆ ಬರುತ್ತದೆ. ಆದಶ್ಟು ಬೇಗ ಎಲ್ಲಿ ಇದ್ದರು ಬನ್ನಿ ಎಂದು, ಆ ಜಾಗಕ್ಕೆ ಹೋಗುತ್ತಿದ್ದಂತೆ ಜನರೆಲ್ಲ ಸೇರಿ ಗುಂಪುಕಟ್ಟಿ ಮಾತಾಡಿಕೊಳ್ಳುತ್ತಿದ್ದರು, ಕೆಲವರಂತೂ ಮುಕಕ್ಕೆ ಬಟ್ಟೆ ಹಿಡಿದು ಹಿಂದೆ ಬರುತ್ತಿದ್ದರು,ಅಲ್ಲಿ ಹೋಗಿ ನೋಡಿದರೆ ಉಸಿರಿಗೆ ಉಸಿರಾಗಿದ್ದ ಅಮ್ಮನ ಉಸಿರು ನಿಂತು ಹೋಗಿತ್ತು. ದುಕ್ಕವಾಗುತ್ತಿದೆ ಅಳುಬರುತ್ತಿಲ್ಲ, ಸಂಕಟವಾಗುತ್ತಿದೆ ಹೇಳಿ ಕೊಳ್ಳಲಾಗುತ್ತಿಲ್ಲ, ದೊಡ್ಡವನಾದಮೇಲೆ ಶ್ರೀಮಂತನಾಗಬೇಕು, ಎಲ್ಲರಲ್ಲಿ ಪ್ರೀತಿ ಉಳಿಸಿಕೊಳ್ಳಬೇಕು ಮಗ ಎನ್ನುತ್ತಿದ್ದ ಅಮ್ಮನೇ ಇಂದಿಲ್ಲ. ತಂದೆ ಇಲ್ಲ ಎಂಬ ಕೊರಗು ಯಾವತ್ತೂ ಕಾಣದೆ ಇರುವ ಹಾಗೆ ಬೆಳೆಸಿದ ಅಮ್ಮನ ಪ್ರೀತಿಯ ರುಣ ಇಲ್ಲಿಗೆ ಮುಗಿದು ಹೋಯಿತೆ?

ತಾಯಿಯ ಎಲ್ಲಾ ಕಾರ‍್ಯಗಳನ್ನು ಮುಗಿಸಿ ಮನೆಗೆ ಹಿಂದಿರುಗಿದ, ಅವನನ್ನು ಪೋಲಿಸ್ ನವರು ಬಂದು ಸಂತೈಸಿ ಸ್ಟೇಶನ್ ಗೆ ಕರೆದುಕೊಂಡು ಹೋದರು. ತಾನು ಹೋಗುವ ಮುಂಚೆಯೇ ಅಲ್ಲಿ ಯಾರು ಇಬ್ಬರು ಹಿರಿಯ ವಯಸ್ಸಾದ ದಂಪತಿಗಳು ಶ್ರೀಮಂತರು ಯಾರಿಗೂ ಕಾಯುತ್ತಿರುವಂತೆ ಕಂಡಿತು. ಒಳಗೆ ಹೋಗುತ್ತಿದ್ದಂತೆಯೇ ಅವರಿಬ್ಬರೂ ಬಂದು ಅವನನ್ನು ಬಾಚಿ ತಬ್ಬಿದರು. “ಕಂದ ನಿನಗಾಗಿ ನಾವು ಬದುಕಿದ್ದಕ್ಕೂ ಸಾರ‍್ತಕವಾಯಿತು”. ಕಿರಣ್ ಹೆಸರು ಇದ್ದಕ್ಕಿದ್ದಂತೆ ಅವರ ಬಾಯಿಂದ ಬೇರೆಯಾವುದೊ ಹೆಸರಾಗಿ ಬದಲಾಗಿತ್ತು. ಈ ಗೊಂದಲಗಳ ಬೇಲಿಯ ಮದ್ಯೆ ಸಿಲುಕಿದ ಅವನಿಗೆ ತಾನೆಲ್ಲಿದ್ದೇನೆ ಎಂಬುದೇ ಆ ಕ್ಶಣಕ್ಕೆ ಮರೆತು ಹೋದಂತಾಯಿತು.

ಅಲ್ಲಿದ್ದ ಪೊಲೀಸ್ ಒಬ್ಬರು ಕರೆದು ನೋಡಪ್ಪ ನೀನಂದುಕೊಂಡಂತೆ ಸತ್ತು ಹೋದ ಹೆಂಗಸು ನಿನ್ನ ತಾಯಿಯಲ್ಲ, ನಿನ್ನ ಹೆಸರು ಕಿರಣ್ ಕೂಡ ಅಲ್ಲ. ನೀನು ನಾಲ್ಕನೇ ವಯಸ್ಸಿನವನಿದ್ದಾಗ ನಿನ್ನನ್ನು ಆಕೆ ನಿಮ್ಮ ನಿಂದ ಎತ್ತುಕೊಂಡು ಹೋಗಿದ್ದಳು, ಇವರು ನಿನ್ನ ತಂದೆ ತಾಯಿ ಇವರದ್ದು ವಯಸ್ಸು ಈಗಾಗಲೇ 60 ಮೀರಿಹೋಗಿದೆ. ಇರುವಶ್ಟು ದಿನ ಅವರನ್ನು ಚೆನ್ನಾಗಿ ನೋಡಿಕೊಳ್ಳಪ್ಪ ಕೋಟಿ ಕೋಟಿ ಆಸ್ತಿಗೆ ನೀನೊಬ್ಬನೆ ಪಾಲುದಾರ ಇದು ನಿನ್ನ ಅದ್ರುಶ್ಟವೇ ಸರಿ. ಇನ್ನು ನೀನು ಅವರೊಂದಿಗೆ ಇರು ಎಂದು ಹೇಳಿದ್ದರು.

ಊಹಿಸಲು ಸಾದ್ಯವಾಗದ ಸತ್ಯವಿರುತ್ತದೆ ಎಂಬುದಕ್ಕೆ ಇದೇ ಸಾಕ್ಶಿ. ಒಂದು ಕಡೆ ಚಿಕ್ಕಂದಿನಿಂದ ಇಲ್ಲಿಯವರೆಗೂ ಎತ್ತಿ ಬೆಳೆಸಿದ ತಾಯಿ ಹೇಳದೆ ಕೇಳದೆ ನಿಗೂಡವಾಗಿ ಉಸಿರು ಬೆಲೆ ಏನೆಂದು ಅರ‍್ತವಾಗುತ್ತಿದೆ. ಎಲ್ಲವೂ ಇಲ್ಲಿಗೆ ಮುಗಿಯಿತು ಎನ್ನುವಾಗ ಇಲ್ಲಿಂದಲೇ ಎಲ್ಲಾ ಶುರುವಾಗುತ್ತಿದೆ. ಅಂದಿನಿಂದ ಇಂದಿನವರೆಗೂ ಜೊತೆಗಿದ್ದು ಪ್ರೀತಿ ತೋರಿದ ಅವಳನ್ನು ಮರೆಯುವುದೆ? ಅತವಾ ಇವರನ್ನು ತಂದೆ-ತಾಯಿ ಎಂದು ಒಪ್ಪಿಕೊಳ್ಳುವುದೆ?

( ಚಿತ್ರಸೆಲೆ : thriveglobal.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: