ಅಜ್ಜಿ ಹೇಳಿದ ಕತೆ: ರಾಜಕುಮಾರ ಬಲದೇವ

– ಕೆ.ವಿ.ಶಶಿದರ.

fairy_state_palace_3d

(ಬರಹಗಾರರ ಮಾತು: ಈ ಕತೆಯು ನನ್ನ ಅಜ್ಜಿ ನನಗೆ ಹೇಳಿದ್ದ ಕತೆ. ಇದನ್ನು ನನ್ನದೇ ಆದ ಶೈಲಿಯಲ್ಲಿ ಬರೆದು ಓದುಗರ ಮುಂದಿಡುತ್ತಿದ್ದೇನೆ.)

ಹಿಂದೆ ಒಂದು ರಾಜ್ಯದಲ್ಲಿ ಒಬ್ಬ ರಾಜ ಇದ್ದ. ಆ ರಾಜನಿಗೆ ಒಬ್ಬನೇ ಒಬ್ಬ ಮಗ. ಅವನ ಹೆಸರು ಬಲದೇವ. ಬಲದೇವ ಎತ್ತರದ, ಕಟ್ಟುಮಸ್ತಾದ ಆಳು. ಸುರದ್ರೂಪಿ. ಹೊಳೆಯುವ ಬಣ್ಣದವ. ಮಿರಮಿರ ಮಿಂಚುತ್ತಿದ್ದ. ಹೀಗಿರುವಾಗ ಒಂದಿನ ಅವನಿಗೆ ಬೇಟೆಗೆ ಹೋಗುವ ಆಸೆ ಆಯಿತು. ಸರಿ ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಯನ್ನು ಮಾಡಿಕೊಂಡ. ಬಾಣ, ಬಿಲ್ಲು, ಈಟಿ, ಬರ‍್ಜಿ ಎಲ್ಲಾ. ಬೇಟೆಯಲ್ಲಿ ನುರಿತವರ ಜೊತೆ ಉತ್ತರದ ದಿಕ್ಕಿನ ಕಡೆ ಹೊರಟ. ಬೆಳಗ್ಗೆಯಿಂದ ಸಂಜೆ ತನಕ ಬೇಟೆಗಾಗಿ ಹುಡುಕಾಡಿದ. ಒಂದೇ ಒಂದು ಬೇಟೆನೂ ಕಾಣಲಿಲ್ಲ. ಇನ್ನೇನು ಸೂರ‍್ಯ ಮುಳುಗೋ ಹೊತ್ತಾಯ್ತು. ಮುಸ್ಸಂಜೆಯ ಮಂದ ಬೆಳಕಲ್ಲಿ ಮಿರಮಿರ ಮಿಂಚುತ್ತಿದ್ದ ಒಂದು ಚಿನ್ನದ ಜಿಂಕೆ ಕಾಣಿಸಿತು. ಅವನಿಗೆ ಕುಶಿಯೋ ಕುಶಿ. ಜೊತೆಗಾರರಿಗೂ ಅಶ್ಟೆ. ತುಂಬಾ ಕುಶಿ ಆಯ್ತು. ಚಿನ್ನದ ಜಿಂಕೆಯ ಕೊಂಬು, ಕಾಲಿನ ಗೊರಸು, ದೇಹ ಎಲ್ಲಾ ಚಿನ್ನದಿಂದಲೇ ಮಾಡಿದ ಹಾಗಿತ್ತು. ಅದನ್ನು ನೋಡಿದ ರಾಜಕುಮಾರ ಬಲದೇವ ಇದನ್ನ ಏನಾದ್ರು ಮಾಡಿ ಹಿಡಿಯಲೇ ಬೇಕು. ಅರಮನೆಗೆ ತಗೆದುಕೊಂಡು ಹೋಗಿ ಇಟ್ಟುಕೊಳ್ಳಬೇಕು ಅಂತ ತೀರ‍್ಮಾನಿಸಿದ.

ಎಲ್ಲರಿಗೂ ಚಿನ್ನದ ಜಿಂಕೆಯನ್ನು ಸುತ್ತುವರಿಯಲು ಹೇಳಿದ. ಜೊತೆಗೆ ಎಲ್ಲರೂ ಹುಶಾರಾಗಿದ್ದು ಜಿಂಕೆಯನ್ನು ತಪ್ಪಿಸಿಕೊಳ್ಳಲು ಬಿಡಬಾರದು ಅಂತಲೂ, ಯಾರಾದರು ಬಿಟ್ಟರೆ ಅವರಿಗೆ ತಕ್ಕ ಶಿಕ್ಶೆ ಇದೆ ಅಂತಲೂ ಎಚ್ಚರಿಕೆ ಕೊಟ್ಟ. ಎಲ್ಲರೂ ಚಿನ್ನದ ಜಿಂಕೆಯ ಸುತ್ತ ಗುಂಡಾಗಿ ನಿಂತರು. ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಗಮನವನ್ನೆಲ್ಲಾ ಜಿಂಕೆ ಮೇಲಿಟ್ಟರು. ಜಿಂಕೆಗೆ ಬಯ ಆಯ್ತು. ಅದು ಆಕಡೆ ಈಕಡೆ ಎಲ್ಲಾ ಕಡೆ ತಲೆ ಎತ್ತಿ ನೋಡಿತು. ತಪ್ಪಿಸಿಕೊಂಡು ಹೋಗಲು ಜಾಗ ಕಾಣಲಿಲ್ಲ. ರಾಜಕುಮಾರ ಬಲದೇವನ ಬೇಟೆಗಾರರೆಲ್ಲಾ ಮೆಲ್ಲ ಮೆಲ್ಲನೆ ಸುತ್ತನ್ನು ಚಿಕ್ಕದು ಮಾಡುತ್ತಾ ಜಿಂಕೆಯ ಹತ್ತಿರ ಹತ್ತಿರಕ್ಕೆ ಬಂದರು. ಜಿಂಕೆಗೆ ಹೆದರಿಕೆ ಜಾಸ್ತಿ ಅಯ್ತು. ಹೆದರಿಕೆಯಿಂದ ಅದು ನೇರವಾಗಿ ರಾಜಕುಮಾರ ಬಲದೇವನ ಕಡೆಗೆ ನುಗ್ಗಿ ತಪ್ಪಿಸಿ ಕೊಳ್ಳಲು ಪ್ರಯತ್ನ ಮಾಡಿತು. ರಾಜಕುಮಾರ ಆ ಜಿಂಕೆಗಿಂತ ಚಾಣಾಕ್ಶ, ಜಿಂಕೆ ಹತ್ತಿರಕ್ಕೆ ಬಂದ ಕೂಡಲೆ ಅದರ ಕೊಂಬು ಹಿಡಿದುಕೊಂಡು ಬಿಟ್ಟ. ಜಿಂಕೆ ಎಶ್ಟೇ ಒದರಾಡಿದ್ರು ಬಿಡಲಿಲ್ಲ. ಸುಸ್ತಾಗಿ ರಾಜಕುಮಾರನ ಕೈಗೆ ಸಿಕ್ಕಿ ಹಾಕಿಕೊಂಡಿತು.

ಕೂಡಲೇ ಆ ಜಿಂಕೆ ಮನುಶ್ಯರ ದ್ವನಿಯಲ್ಲಿ ‘ಓ ರಾಜಕುಮಾರ, ನೀನು ನನ್ನ ಬಿಟ್ಟುಬಿಡು. ನಿನಗೆ ಬೇಕಾದಶ್ಟು ಸಂಪತ್ತು ಕೊಡ್ತೀನಿ. ನಿನ್ನ ಕಲ್ಪನೆಗಿಂತಾ ಜಾಸ್ತಿ ಮುತ್ತು, ರತ್ನ, ವಜ್ರ ವೈಡೂರ‍್ಯ ಎಲ್ಲಾ ಕೊಡ್ತೀನಿ ನನ್ನ ದಯವಿಟ್ಟು ಬಿಟ್ಬಿಡು ಅಂತ ಪರಿಪರಿಯಾಗಿ ಬೇಡಿಕೊಂಡಿತು.’ ಬಲದೇವ ಜಿಂಕೆಯ ಮಾತನ್ನು ಕೇಳಿ ಜೋರಾಗಿ ನಕ್ಕ. ‘ನಿನ್ನ ಬಿಟ್ಟು ಬಿಡೋದಾ? ಎಲ್ಲಾದ್ರು ಉಂಟೆ! ನಿನ್ನ ಮೇಲೆ ನಂಗೆ ತುಂಬಾ ಆಸೆ ಆಗಿದೆ, ನೀನು ನನ್ನ ಮುದ್ದಿನ ಜಿಂಕೆ. ನನ್ನಲ್ಲೂ ಸಾಕಶ್ಟು ಸಂಪತ್ತಿದೆ. ನಿನ್ನಂತ ಅಂದವಾದ, ಚಂದವಾದ, ಮುದ್ದಾದ ಚಿನ್ನದ ಜಿಂಕೆ ಮಾತ್ರ ಇಲ್ಲ. ನನ್ನ ಅರಮನೆಗೆ ನೀನೇ ಬೂಶಣ. ಇಂತ ಸುಂದರವಾದ ಚಿನ್ನದ ಜಿಂಕೆಯನ್ನ ಎಲ್ಲಾದ್ರು ಬಿಡೋದುಂಟೆ? ಸಾದ್ಯವಿಲ್ಲ, ಸಾದ್ಯವಿಲ್ಲ’ ಎಂದು ಕಡಾಕಂಡಿತವಾಗಿ ಹೇಳಿಬಿಟ್ಟ.

ಚಿನ್ನದ ಜಿಂಕೆಗೆ ಬೇಜಾರಾಯ್ತು. ನಿರಾಶೆಯಾದರೂ ತೋರಿಸಿ ಕೊಳ್ಳದೇ, ‘ಅಯ್ಯಾ ರಾಜಕುಮಾರ, ನನ್ನ ಬಿಟ್ಬಿಡು, ನಿನ್ನ ಸಂಪತ್ತಿಗಿಂತ ಮಿಗಿಲಾದದ್ದನ್ನು ನಾನು ಕೊಡ್ತೀನಿ’ ಅಂತ ಮತ್ತೆ ಕೇಳಿಕೊಂಡಿತು. ರಾಜಕುಮಾರ ನಗುತ್ತಾ ‘ನನ್ನ ಬಳಿ ಇರೋ ಸಂಪತ್ತಿಗಿಂತ ಹೆಚ್ಚೇನು ನಿನ್ನ ಬಳಿ ಇದೆ. ನೀನು ಏನು ಕೊಡಬಲ್ಲೆ?’ ಎಂದ. ಅದಕ್ಕೆ ಜಿಂಕೆ ಹೇಳಿತು ‘ರಾಜಕುಮಾರ ನಿನಗೆ ನನ್ನಂತ ಚಿನ್ನದ ಜಿಂಕೆ ಮೇಲೆ ಸವಾರಿ ಮಾಡೋ ಬಾಗ್ಯ ಕೊಡ್ತೀನಿ, ಯಾರಿಗೂ ಇಲ್ಲದ ಸೌಬಾಗ್ಯ ನಿನಗೆ. ಸರೀನಾ?’ ಅಂತು.

ರಾಜಕುಮಾರನಿಗೆ ಕುಶಿಯಾಯ್ತು. ಸಂತೋಶ ಪಡುತ್ತಾ ‘ಆಹಾ ಎಂತಾ ಸೌಬಾಗ್ಯ ನಂದು. ಚಿನ್ನದ ಜಿಂಕೆ ಮೇಲೆ ಸವಾರಿ ಮಾಡೋ ಯೋಗ ನನ್ನನ್ನೇ ಹುಡುಕಿಕೊಂಡು ಬಂದಿದೆ… ಕಂಡಿತ ಇಂತ ಅವಕಾಶ ಬಿಡಬಾರದು’ ಅಂತ ಮನಸಲ್ಲೇ ಅಂದುಕೊಂಡು, ‘ಆಯ್ತು’ ಅಂತ ಒಪ್ಕೊಂಡು ಮೆಲ್ಲಗೆ ಚಿನ್ನದ ಜಿಂಕೆ ಮೇಲೆ ಹತ್ತಿ ಕುಳಿತ. ರಾಜಕುಮಾರ ಕೂತಿದ್ದೇ ತಡ ಜಿಂಕೆ ಬರ್… ಅಂತ ಪಕ್ಶಿ ತರ ಹಾರಿಕೊಂಡು ಕ್ಶಣಾರ‍್ದದಲ್ಲಿ ಎಲ್ಲರ ಕಣ್ಣಿಂದ ದೂರ ದೂರ ಹೋಗಿಬಿಟ್ಟಿತು.

golden_deer

ಹೀಗೆ ಹಾರಿಕೊಂಡು ಹೊರಟ ಚಿನ್ನದ ಜಿಂಕೆ ಏಳು ರಾತ್ರಿ ಏಳು ಹಗಲು ರಾಜಕುಮಾರನ್ನ ಹೊತ್ತು ಏಳು ಕಂಡಗಳನ್ನ ತೋರಿಸಿತು. ಬಳಿಕ ಆ ಚಿನ್ನದ ಜಿಂಕೆ, ರಾಜಕುಮಾರ ಬಲದೇವನನ್ನು ಅಲ್ಲೇ ಒಂದು ಕಡೆ ಬಿಟ್ಟು ಮಾಯ ಆಗೋಯ್ತು. ರಾಜಕುಮಾರ ಸುತ್ತಲೂ ನೋಡ್ತಾನೆ ಯಾವುದೋ ಹೊಸ ಜಾಗ. ತಾನೆಲ್ಲಿದ್ದೀನಿ ಅಂತ ರಾಜಕುಮಾರ ಕಣ್ಣುಜ್ಜಿ ನೋಡಿದ. ಗೊತ್ತಾಗ್ಲಿಲ್ಲ. ಎಲ್ಲಾ ಹೊಸದಾಗಿ ಕಾಣಿಸಿತು. ಸುತ್ತಲೂ ಮನೆಯೋ, ಹೆಜ್ಜೆ ಗುರುತೋ ಏನಾದ್ರು ಕಾಣುತ್ತಾ ಅಂತ ನೋಡಿದ. ಏನು ಕಾಣಲಿಲ್ಲ. ಇಂತ ಅಪರಿಚಿತ ಜಾಗವನ್ನು ಅವನು ಇದುವರೆಗೂ ನೋಡಿರಲಿಲ್ಲ. ಇದ್ದಕ್ಕಿದ್ದಂತೆ ಅವನ ಕಾಲ ಹತ್ತಿರದ ನೆಲದಿಂದ ಒಬ್ಬ ಮುದುಕ ನೆಲ ಸೀಳಿಕೊಂಡು ದೂಳೆಬ್ಬಿಸಿಕೊಂಡು ಮೇಲೆದ್ದ. ಇವನಿಗೆ ಗಾಬರಿಯಾಯಿತು. ಆ ಮುದುಕ ‘ಯಾರಪ್ಪಾ ನೀನು? ಏನು ಹುಡುಕುತ್ತಾ ಇದ್ಯಾ ಮಗು? ಇಲ್ಲಿಗೆ ಹೇಗೆ ಬಂದೆ?’ ಅಂತ ಸಣ್ಣ ದನಿಯಲ್ಲಿ ಕೇಳಿದ. ರಾಜಕುಮಾರ ನಡೆದಿದ್ದೆಲ್ಲಾ ಹೇಳಿದ. ಅದಕ್ಕೆ ಮುದುಕ ‘ಮಗೂ… ಹೆದರಬೇಡ. ಇದು ಪಿಶಾಚಿಗಳ ರಾಜ್ಯ ಆದ್ರು ಯಾರು ಏನು ಮಾಡಲ್ಲ. ಇಲ್ಲಿಗೆ ನಾನೇ ರಾಜ. ನನ್ನ ಹೆಸರು ಜಗ್ವಿದ. ನಾನು ನಿನ್ನ ಜೊತೆಗಿರುತ್ತೀನಿ. ಅಂತ ಹೇಳಿ ರಾಜಕುಮಾರನನ್ನ ತನ್ನ ಮನೆಗೆ ಕರೆದುಕೊಂಡು ಹೋದ. ಮನೆಯಲ್ಲಿ ರಾಜಕುಮಾರನಿಗೆ ಬೇಕು ಬೇಕಾದ್ದೆಲ್ಲಾ ಕೊಟ್ಟ. ಅಮೇಲೆ ನೂರು ಕೀಲಿಗಳಿರುವ ಗೊಂಚಲನ್ನ ಕೊಟ್ಟು ಉದ್ಯಾನದಲ್ಲಿ ನೂರು ಅರಮನೆಗಳಿವೆ. ಅಲ್ಲಿ ಸಿಕ್ಕಾಪಟ್ಟೆ ಸಂಪತ್ತಿದೆ. ಎಲ್ಲಿದೆ ಅಂತ ಹುಡುಕಿಕೊಂಡು ಆ ಸಂಪತ್ತನ್ನ ನೀನೇ ತೆಗೆದುಕೋ’ ಅಂದ ಆ ಪಿಶಾಚಿ ರಾಜ ಜಗ್ವಿದ. ರಾಜಕುಮಾರನಿಗೆ ಆಶ್ಚರ‍್ಯ ಆಯ್ತು. ಕೀಲಿಗಳನ್ನು ತೆಗೆದುಕೊಂಡು ಹೊರಟ.

ದಿನಕ್ಕೊಂದು ಎರಡರಂತೆ ರಾಜಕುಮಾರ ಪ್ರತಿಯೊಂದು ಅರಮನೆಯನ್ನು ನೋಡಿಕೊಂಡು ಬಂದ. ಪ್ರತಿ ಅರಮನೆಯು ಒಂದಕ್ಕಿಂತ ಒಂದು ಚೆನ್ನಾಗಿದ್ದವು. ಚಿನ್ನದ ಮಂಚ ಅದರ ಮೇಲೆ ಮೆತ್ತನೆ ಹಾಸಿಗೆ, ರೇಶ್ಮೆ ಹಾಸು. ಬಂಗಾರದ ನಗ ನಾಣ್ಯ, ಕಿರೀಟ, ಆಬರಣಗಳು, ತಟ್ಟೆಗಳಲ್ಲಿ ತುಂಬಿಟ್ಟಿದ್ದ ಮುತ್ತು, ರತ್ನ, ವಜ್ರ, ವೈಡೂರ‍್ಯ ಎಲ್ಲಾ ನೋಡಿ ರಾಜಕುಮಾರನಿಗೆ ಆಶ್ಚರ‍್ಯ ಆಯ್ತು. ದೊಡ್ಡ ದೊಡ್ಡ ಅರಮನೆಗಳು. ಸುವಾಸನೆ ಬೀರುವ ಹೂಗಳು. ಇದರ ಜೊತೆಗೆ ಮೆಲ್ಲನೆ ಬೀಸುವ ತಂಗಾಳಿ. ಸುಕದ ಸೋಪಾನವೇ ಅಲ್ಲಿತ್ತು. ಎಲ್ಲಾದನ್ನು ನೋಡಿಕೊಂಡು ಕೊನೆಗೆ ರಾಜಕುಮಾರ ನೂರನೇ ಅರಮನೆಗೆ ಬಂದ. ಬೇರೆಲ್ಲಾ ಅರಮನೆಗಿಂತಲೂ ಇದು ತುಂಬಾ ದೂರದಲ್ಲಿ ಇತ್ತು, ಜೊತೆಗೆ ಬೇರೆನೇ ರೀತಿ ಇತ್ತು.

ಅರಮನೆ ಸುತ್ತ ಏಳು ಮೈಲಿ ಆಕಡೆ ಏಳು ಮೈಲಿ ಈ ಕಡೆ ದೊಡ್ಡ ದೊಡ್ಡ ಮರಗಳು, ಹೂ ಗಿಡಗಳು, ಅವುಗಳ ತುಂಬಾ ಮುದ್ದಾದ ಬಣ್ಣ ಬಣ್ಣದ ಹೂಗಳು, ಪಕ್ಕದಲ್ಲೇ ಹೊಳೆ, ಮೇಲಿಂದ ನೀರು ದುಮುಕುವ ಸಣ್ಣ ಜಲಪಾತ, ಮರದ ಮೇಲೆ ಚಿಲಿಪಿಲಿಗುಟ್ಟುವ ಪುಟ್ಟ ಪುಟ್ಟ ಹಕ್ಕಿಗಳು. ರಾಜಕುಮಾರ ಸುತ್ತೀ ಸುತ್ತೀ ಎಲ್ಲಾದನ್ನು ನೋಡಿ ಸುಸ್ತಾದ. ಒಂದಕ್ಕಿಂತಾ ಒಂದು ಚೆನ್ನಾಗಿತ್ತು. ಅಲ್ಲೇ ಇದ್ದ ಅರಮನೆ ಒಳಗೆ ಬಂದ. ಅಲ್ಲಿ ನೋಡಿದರೆ ಚಿನ್ನದ ಮಂಚ. ಅದರ ಮೇಲೆ ಹಳದಿ ರೇಶ್ಮೆ ಹೊದಿಕೆಯಿದ್ದ ಹಾಸಿಗೆ. ಅರಮನೆ ತುಂಬಾ ಸುವಾಸನೆ. ಅಲ್ಲೆ ಇದ್ದ ನೀರನ್ನು ಚೂರು ಕುಡಿದ. ಅಮ್ರುತ ಇದ್ದಂಗಿತ್ತು. ಹಾಗೆ ಮಂಚದ ಮೇಲೆ ಮಲಗಿದ.

ಆದೇ ವೇಳೆಗೆ ಪಾರಿವಾಳದ ವೇಶದಲ್ಲಿ ರಾಜಕುಮಾರಿ ಪಕ್ಶಾಲಿಕಾ ವಾಯುವಿಹಾರ ಮಾಡುತ್ತಾ ಇದ್ದವಳು ಅಲ್ಲಿಗೆ ಬಂದಳು. ಮಂಚದ ಮೇಲೆ ಮಲಗಿದ್ದ ರಾಜಕುಮಾರನನ್ನ ನೋಡಿದಳು. ಅವನ ರೂಪ, ಕಟ್ಟುಮಸ್ತಾದ ದೇಹ, ಎತ್ತರ, ಮುಕಚರ‍್ಯೆ ಎಲ್ಲಾ ನೋಡಿದ್ದೇ ರಾಜಕುಮಾರಿಗೆ ಅವನ ಮೇಲೆ ಆಸೆ ಹುಟ್ಟಿತು. ಇವನೇ ನನಗೆ ಸರಿಯಾದ ವರ ಅನ್ನಿಸಿ ಬಿಡ್ತು ಅವಳಿಗೆ. ಹಾರುತ್ತಿದ್ದವಳು ಕೆಳಗಡೆ ಬಂದು, ರಾಜಕುಮಾರಿ ಆಗಿ, ರಾಜಕುಮಾರನ ನೋಡಿ, ಮದುವೆ ಆದರೆ ಇವನನ್ನೇ ಅಂತ ತಾನೇ ತೀರ‍್ಮಾನಿಸಿಕೊಂಡು ಅವನ ಕಾಲ ಬಳಿ ಕುಳಿತಳು.

ರಾಜಕುಮಾರನಿಗೆ ಎಚ್ಚರ ಆಯ್ತು. ಕಣ್ಬಿಟ್ಟು ನೋಡ್ತಾನೇ ಅತಿಲೋಕ ಸುಂದರಿ ಒಬ್ಬಳು ಕಾಲಿನ ಹತ್ತಿರ ಕೂತಿದ್ದಾಳೆ. ಆ ರಾಜಕುಮಾರಿಯ ಗುಂಡು ಮುಕ, ಸಣ್ಣ ಸೊಂಟ, ಅವಳ ಮೈಮಾಟ, ಉದ್ದನೆಯ ಕೂದಲು, ರೂಪ, ಲಾವಣ್ಯ, ಬಿಂಕ, ಬಿನ್ನಾಣ, ಕಿರುನಗೆ ನೋಡಿ ಅವಕ್ಕಾದ. ಮದುವೆ ಆದರೆ ಇವಳನ್ನೇ ಅಂತ ಅಂದುಕೊಂಡ. ಅವಳ ಮುಕ ನೋಡಿದ್ದೇ ತಡ ಮೊದಲ ನೋಟಕ್ಕೆ ಪ್ರೀತಿ ಹುಟ್ಟಿಬಿಡ್ತು. ನಿನ್ನ ಕಂಡರೆ ನಂಗೆ ಇಶ್ಟ ಆಗಿದೆ. ನನ್ನ ಮದುವೆ ಆಗ್ತಿಯಾ ಅಂತ ನೇರವಾಗಿ ಕೇಳಿದ. ಈ ವಿಚಾರವನ್ನು ಪಿಶಾಚಿಗಳ ರಾಜ ಜಗ್ವಿದ ಬಳಿ ಇಬ್ಬರೂ ಹೇಳಿದರು. ಇಬ್ಬರಿಗೆ ಮದುವೆ ಮಾಡಲು ಜಗ್ವಿದ ಒಪ್ಪಿಕೊಂಡ. ಆದರೆ ಒಂದೇ ಒಂದು ಒಪ್ಪಂದ ಇದೆ. ಅದರಂತೆ ನೀನು ಯಾವತ್ತು ನಿಮ್ಮ ನಾಡಿಗೆ ಹೋಗೋ ಬಗ್ಗೆ ಯೋಚಿಸಬಾರದು ಅಂದ ಜಗ್ವಿದ.

ಮದುವೆ ಆಯಿತು. ದಿನಗಳು, ತಿಂಗಳುಗಳು, ವರುಶಗಳು ಉರುಳಿದ್ದು ರಾಜಕುಮಾರನಿಗೆ ಗೊತ್ತಾಗಲೇ ಇಲ್ಲ. ಹೀಗಿದ್ದಾಗ ಬಲದೇವನಿಗೆ ಅಪ್ಪ, ಅಮ್ಮ, ತನ್ನ ಪ್ರೀತಿಯ ಕುದುರೆ, ಸಹಪಾಟಿಗಳು, ಎಲ್ಲಾ ನೆನಪಾಗಲು ಪ್ರಾರಂಬ ಆಯ್ತು. ಅದನೆಲ್ಲಾ ಅವನು ಪಕ್ಶಾಲಿಕಾ ಹತ್ತಿರ ಹೇಳ್ಕೊಂಡ. ರಾಜಕುಮಾರನಿಗೆ ಊಟ, ತಿಂಡಿ, ನಿದ್ದೆ ಯಾವುದರ ಮೇಲು ಆಸೆ ಇಲ್ದೆ ಹೋಯ್ತು. ದಿನಾ ದಿನಾ ಊಟ ತಿಂಡಿ ಬಿಟ್ಟಿದ್ದಕ್ಕೆ ಸಣ್ಣಗಾಗುತ್ತಾ ಹೋದ. ಈ ವಿಚಾರ ಹೇಗೋ ರಾಜ ಜಗ್ವಿದನ ಕಿವಿಗೆ ಬಿತ್ತು. ಜಗ್ವಿದನಿಗೆ ಬಯವಾಯ್ತು. ಅವನಿಗೆ ರಾಜಕುಮಾರನನ್ನ ಕಂಡರೆ ತುಂಬಾ ಪ್ರೀತಿಯಿತ್ತು. ಮೊದಮೊದಲು ಅಗಲ್ಲ ಅಂದ. ಅಮೇಲೆ ರಾಜಕುಮಾರನಿಗೇನಾದ್ರು ಆದ್ರೆ ಅಂತ ಹೆದರಿ ಒಪ್ಪಿಕೊಂಡ. ರಾಜಕುಮಾರ ಊರಿಗೆ ಹೋಗುವ ಮುಂಚೆ ಕರೆದು ಒಂದು ಬಟ್ಟೆಯನ್ನು ಕೊಟ್ಟು, ‘ತೊಗೋ ಈ ಬಟ್ಟೆಯನ್ನ. ನಿಂಗೆ ಕಶ್ಟ ಬಂದಾಗ ಈ ಬಟ್ಟೆಯಲ್ಲಿರುವ ಒಂದು ನೂಲು ತಗೆದು ಸುಡು. ತಕ್ಶಣ ನಾನು ಬಂದು ಸಹಾಯ ಮಾಡ್ತೀನಿ’ ಎಂದು ಹೇಳಿ ರಾಜಕುಮಾರಿ ಪಕ್ಶಾಲಿಕಾಳ ಜೊತೆ ಕಳಿಸಿಕೊಟ್ಟ.

ರಾಜಕುಮಾರ ತನ್ನ ರಾಜ್ಯಕ್ಕೆ ಹಿಂತಿರುಗಿ ಬಂದು ನೋಡಿದ್ರೆ ಅಪ್ಪ ಅಮ್ಮ ಯಾರು ಇಲ್ಲ. ಎಲ್ಲಾ ಸತ್ತು ಹೋಗಿದ್ದಾರೆ. ಯಾರೋ ದುರಾಕ್ರಮಣ ಮಾಡಿ ರಾಜನ ಜಾಗದಲ್ಲಿ ಕೂತಿದ್ದಾನೆ. ರಾಜಕುಮಾರ ಬಲದೇವ ಆ ಊರಿಗೆ ಬಂದಿದ್ದನ್ನ ಯಾರಾದರು ತಿಳಿಸಿದರೆ ಅವರಿಗೆ ಬಹುಮಾನ ಕೊಡುವುದಾಗಿ ಸಾರಿದ್ದಾನೆ. ಅಲ್ಲಿ ಬಲದೇವನ ಗುರುತನ್ನು ಯಾರೂ ಹಿಡಿಯಲಿಲ್ಲ. ಆದರೆ ಬಲದೇವನ ಜೊತೆ ಬೇಟೆಗೆ ಬಂದಿದ್ದ ಒಬ್ಬ ಇವನ ಗುರುತು ಹಿಡಿದು, ರಾಜಕುಮಾರ ಬಲದೇವನನ್ನು ಕಾಪಾಡುವುದು ತನ್ನ ಕರ‍್ತವ್ಯ ಅಂತ ಅವರನ್ನ ತನ್ನ ಗುಡಿಸಿಲಿಗೆ ಕರೆದುಕೊಂಡು ಹೋಗಿ, ಅವರ ಮನೆಯ ಅಟ್ಟದಲ್ಲಿ ಅವರಿಬ್ಬರನ್ನು ಬಚ್ಚಿಟ್ಟ. ಆ ಮನೆಯಲ್ಲಿ ಇದ್ದಿದ್ದು ಬೇಟೆಗಾರ ಮತ್ತು ಅವನ ಕುರುಡು ಅಜ್ಜಿ. ಕುರುಡು ಅಜ್ಜಿಗೆ ಅವನು ರಾಜಕುಮಾರನನ್ನು ಬಚ್ಚಿಟ್ಟ ಸುದ್ದಿಯನ್ನು ಹೇಳಲಿಲ್ಲ.

ಆಮೇಲೆ ಒಂದಿನ ಬಲದೇವ ಬೇಟೆಗಾರನ ಜೊತೆ ಸಹಾಯಕನಾಗಿ ಬೇಟೆಗೆ ಹೋಗಿದ್ದಾಗ, ಪಕ್ಶಾಲಿಕಾ ತನ್ನ ದಂತದ ಬಣ್ಣದ ಕುತ್ತಿಗೆಯ ಸುತ್ತ ಹರಡಿದ್ದ, ಮೊಣಕಾಲು ಮುಟ್ಟುತ್ತಿದ್ದ ಉದ್ದನೆಯ ಬಂಗಾರದ ಕೂದಲನ್ನ ತೊಳೆಯಲು ಶುರು ಮಾಡಿದಳು. ತೊಳೆದಿದ್ದು ಮುಗಿದಮೇಲೆ ಕೂದಲನ್ನ ಒಣಗಿಸಲು ಕಿಟಕಿಯ ಬಳಿ ಕುಳಿತಳು. ಅದೇ ಸಮಯಕ್ಕೆ ಆಕಡೆ ಹೋಗುತ್ತಿದ್ದ ಆ ಊರಿನ ಕೊತ್ವಾಲ ಇವಳನ್ನ ನೋಡಿಬಿಟ್ಟ. ಆ ಉದ್ದನೆಯ ಬಂಗಾರದ ಕೂದಲನ್ನ ನೋಡಿದ ಅವನಿಗೆ ನಂಬಲಾಗಲಿಲ್ಲ. ಆ ಬರದಲ್ಲೆ ಕುದುರೆಯಿಂದ ಬಿದ್ದುಬಿಟ್ಟ. ತಲೆ ತಿರುಗಿ ಬಿದ್ದಿರಬೇಕು ಅಂತ ಅವನ ಬಟರು ಅವನ ಮನೆಗೆ ಸಾಗಿಸಿದರು. ಎಶ್ಟು ಹೊತ್ತಾದರೂ ಅವನು ಸರಿ ಹೋಗಲೇ ಇಲ್ಲ. ಈ ವಿಚಾರ ರಾಜನ ಕಿವಿಗೆ ಬಿತ್ತು. ಕೊತ್ವಾಲ ರಾಜನಿಗೆ ನಡೆದ ಎಲ್ಲಾ ವಿಚಾರ ತಿಳಿಸಿದ. ರಾಜ ಕೂಡಲೇ ಬಟರನ್ನ ಬೇಟೆಗಾರನ ಮನೆಗೆ ಕಳಿಸಿದ. ಬಟರು ಬಂದು ಕುರುಡು ಅಜ್ಜಿಯನ್ನು ಕೇಳಿದರು. ಅಜ್ಜಿ ‘ನಂಗೊತ್ತಿಲ್ಲ. ಇಲ್ಲಿ ಯಾರು ಇಲ್ಲ. ಬೇಕಾದರೆ ನೀವೇ ನೋಡಿಕೊಳ್ಳಿ ಅಂದಳು. ಈ ಮಾತನ್ನು ಕೇಳಿಸಿಕೊಂಡ ಪಕ್ಶಾಲಿಕಾ ಕೂಡಲೇ ಅಟ್ಟದ ಬಾಗಿಲು ಹಾಕಿ, ಮತ್ತೆ ಪಾರಿವಾಳವಾಗಿ ಹಾರಿಕೊಂಡು ಹೋದಳು. ಬಟರು ಮೇಲೆ ಹೋಗಿ ನೋಡಿದರೆ ಯಾರು ಕಾಣಲಿಲ್ಲ.

ಪಕ್ಶಾಲಿಕಾಳಿಗೆ ಹೀಗೆ ರಾಜಕುಮಾರನಿಗೆ ಗೊತ್ತಿಲ್ಲದೇ ಬಿಟ್ಟು ಹೋಗಲು ಚೂರು ಇಶ್ಟ ಇರಲಿಲ್ಲ. ಆದರೆ ಏನು ಮಾಡೋದು. ಸಮಯ ಹಂಗೆ ಇತ್ತು. ಹಾರಿಕೊಂಡು ಹೋಗುವ ಮೊದಲು ಕುರುಡು ಅಜ್ಜಿ ಕಡೆ ಹೋಗಿ ‘ನಾನು ಅಪ್ಪನ ಮನೆಗೆ, ಮುತ್ತಿನ ರಾಜ್ಯಕ್ಕೆ ಹೋಗ್ತಿದ್ದೀನಿ’ ಅಂತ ಹೇಳಿ ಹಾರಿಹೋದಳು. ಅವಳ ಮಾತೆ ಮನೆಯಲೆಲ್ಲಾ ಗುಯ್‍ಂಗುಡುತ್ತಿತ್ತು. ಸಂಜೆ ಬಲದೇವ ಬೇಟೆ ಮುಗಿಸಿಕೊಂಡು ಮನೆಗೆ ಬಂದು ನೋಡಿದರೆ ಅಟ್ಟದಲ್ಲಿ ರಾಜಕುಮಾರಿ ಕಾಣಲಿಲ್ಲ. ಅವನಿಗೆ ತುಂಬಾ ಬೇಜಾರಾಯ್ತು. ಕುರುಡು ಅಜ್ಜಿಯೂ ಏನು ಹೇಳಲಿಲ್ಲ. ಅವನಿಗೆ ಏನು ಮಾಡೋದು ಎಂದು ತೋಚಲಿಲ್ಲ. ಅಶ್ಟರಲ್ಲಿ ‘ನಾನು ಅಪ್ಪನ ಮನೆಗೆ, ಮುತ್ತಿನ ರಾಜ್ಯಕ್ಕೆ ಹೋಗ್ತಿದ್ದೀನಿ’ ಅಂತ ಗಾಳಿಯಲ್ಲಿ ಯಾರೋ ಹೇಳಿದ ಹಾಗಾಯ್ತು. ಕೊಂಚ ಸಮಾದಾನವಾಯ್ತು ರಾಜಕುಮಾರನಿಗೆ. ಕೂಡಲೇ… ಅಲೆಲೆ ಆ ಮುತ್ತಿನ ರಾಜ್ಯ ಎಲ್ಲಿದೆ ಅಂತಲೇ ಗೊತ್ತಿಲ್ವಲ್ಲಾ? ಅಂತ ಮತ್ತೆ ಬೇಜಾರು ಮಾಡಿಕೊಂದು ಕುಳಿತ. ಬೇಜಾರಾಗಿ ರಾತ್ರಿ ಊಟಾನು ಮಾಡ್ಲಿಲ್ಲ. ಸಂಕಟ ಆಯ್ತು. ಕಣ್ಣಲ್ಲಿ ನೀರು ಸುರಿತಾ ಇತ್ತು. ಓ ನನ್ನ ರಾಜಕುಮಾರಿ, ಓ ನನ್ನ ರಾಜಕುಮಾರಿ ಅಂತ ಒಂದೇ ಸಮನೆ ಅತ್ತ. ಹಿಂದಿದ್ದನ್ನೆಲ್ಲಾ ನೆನೆಪಿಸಿಕೊಂಡ.

ಕೂಡಲೆ ಅವನಿಗೆ ಪಿಶಾಚಿ ರಾಜ ಜಗ್ವಿದ ಕೊಟ್ಟಿದ್ದ ಬಟ್ಟೆಯ ನೆನೆಪಾಯ್ತು. ಅದನ್ನು ತಂದು ಒಂದು ನೂಲನ್ನು ಬೆಂಕಿಯಲ್ಲಿ ಸುಟ್ಟ. ಕೂಡಲೆ ಜಗ್ವಿದ ಹಾಜರಾದ. ’ಏನು ನಿನಗೇನು ತೊಂದ್ರೆ’ ಎಂದ. ರಾಜಕುಮಾರ ನಡೆದಿದ್ದನ್ನೆಲ್ಲಾ ಹೇಳಿದ. ಮುತ್ತಿನ ರಾಜ್ಯಕ್ಕೆ ಕರೆದುಕೊಂಡು ಹೋಗು ಅಂತ ಕೇಳಿದ. ಅದಕ್ಕೆ ಪಿಶಾಚಿ ರಾಜ ‘ನಾನು ಮೊದಲೇ ನಿಂಗೆ ಹೇಳಿದ್ದೆ. ರಾಜಕುಮಾರಿ ಮತ್ತೆ ಪಾರಿವಾಳವಾದರೆ ಅವಳನ್ನ ಪಡೆಯೋದು ಕಶ್ಟ ಅಂತ. ಈಗ ನೀನು ಅವಳನ್ನ ಮರೆಯೋದೆ ವಾಸಿ. ಮರೆತು ಹೊಸ ಜೀವನ ಪ್ರಾರಂಬ ಮಾಡು. ಯಾಕಂದರೆ ಇದುವರೆಗೂ ಯಾರೂ ಜೀವಂತವಾಗಿ ಮುತ್ತಿನ ರಾಜ್ಯಕ್ಕೆ ಹೋಗಿ ಬಂದಿಲ್ಲ. ಅದಕ್ಕೆ ಹಂಗಂದೆ’ ಎಂದ ಪಿಶಾಚಿ ರಾಜ ಜಗ್ವಿದ. ‘ನನಗೆ ಇರೋದು ಒಂದೇ ಜನ್ಮ. ನಾನು ಅವಳನ್ನ ಕಳಕೊಂಡು ಹೇಗೆ ಬದುಕಲಿ? ಬದುಕಿ ಏನು ಪ್ರಯೋಜನ? ಅವಳನ್ನ ಹುಡುಕೋಕೆ ದಯವಿಟ್ಟು ಸಹಾಯ ಮಾಡಿ. ಇಲ್ಲದಿದ್ರೆ ನಾನೂ ಸಾಯ್ತಿನಿ’ ಅಂತ ಬೇಸರದಿಂದ ರಾಜಕುಮಾರ ಹೇಳಿದ. ಅವನು ಪಕ್ಶಾಲಿಕಾ ಮೇಲಿಟ್ಟಿರೋ ಪ್ರೀತಿ ಕಂಡು ಜಗ್ವಿದನಿಗೆ ತುಂಬಾ ಸಂತೋಶ ಆಯ್ತು. ಸರಿ ಹಾಗಾದ್ರೆ ನನ್ನ ಕೈಲಾದ ಸಹಾಯ ಮಾಡ್ತೀನಿ ಅಂತ ಹೇಳಿ ಬಲದೇವನನ್ನು ತನ್ನ ಪಿಶಾಚಿಗಳ ರಾಜ್ಯಕ್ಕೆ ಕರೆದುಕೊಂಡು ಹೋದ.

ಅಲ್ಲಿ ಬಲದೇವನಿಗೆ ಒಂದು ಮಂತ್ರದ ಬೂದಿ ಮತ್ತು ಟೋಪಿಯನ್ನು ಕೊಟ್ಟ. ಏನಾದರು ತೊಂದರೆ ಬಂದರೆ ಈ ಟೋಪಿಯನ್ನು ಹಾಕ್ಕೋ ಅವಾಗ ನೀನು ಯಾರಿಗೂ ಕಾಣಲ್ಲ’ ಅಂದ. ‘ಇಲ್ಲಿಂದ ನೀನು ಉತ್ತರದ ಕಡೆಗೆ ಹೋಗು. ಹಾಗೇ ಹೋಗ್ತಾ ಇದ್ರೆ ಮೇಲ್ಗಡೆ ನಿನಗೆ ಮುತ್ತಿನ ರಾಜ್ಯ ಕಾಣುತ್ತೆ. ಕಣ್ಣಿಗೆ ಮಂತ್ರದ ಬೂದಿ ಹಾಕ್ಕೊಂಡು ಆ ಮುತ್ತಿನ ರಾಜ್ಯಾನಾ ‘ಹತ್ತಿರ ಬಾ’ ಅನ್ನು ಅದು ಹತ್ತಿರ ಬರುತ್ತೆ. ಇಲ್ಲದೇ ಇದ್ರೆ ಅದು ನೀನು ಮೇಲೆ ಹತ್ತಿದಂಗೆ ಅದೂನೂ ಬೆಳೆಯುತ್ತಾ ಹೋಗುತ್ತೆ. ಅಲ್ಲಿಗೆ ಹೋದ ಮೇಲೆ ಈ ಟೋಪಿನ ಹಾಕಿಕೋ. ಅವಾಗ ನೀನು ಯಾರಿಗೂ ಕಾಣಲ್ಲ. ಮುತ್ತಿನ ನಗರದೊಳಗೆ ಹೋಗಿ ರಾಜಕುಮಾರಿ ಪಕ್ಶಾಲಿಕಾನ ನೋಡಲು ಪ್ರಯತ್ನ ಪಡಬಹುದು’ ಎಂದ.

67077240-wonderland-wallpapers

ರಾಜಕುಮಾರ ಬಲದೇವ ಉತ್ತರದ ಕಡೆ ಹೊರಟ. ಸ್ವಲ್ಪ ದೂರಕ್ಕೆ ಹೋದೊಡನೆ ಹೊಳೆಯುತ್ತಿರುವ ಮುತ್ತಿನ ರಾಜ್ಯ ಕಾಣಿಸಿತು. ಬಲದೇವನಿಗೆ ತುಂಬಾ ಕುಶಿಯಾಯ್ತು. ತಕ್ಶಣ ಮಂತ್ರದ ಬೂದಿಯನ್ನ ಕಣ್ಣಿಗೆ ಉಜ್ಜಿಕೊಂಡು ‘ಮುತ್ತಿನ ನಗರ ಹತ್ತಿರ ಬರಲಿ’ ಅಂದುಕೊಂಡ. ಮುತ್ತಿನ ನಗರ ಹತ್ತಿರ ಬಂತು. ನಗರದೊಳಗೆ ಪಕ್ಶಾಲಿಕಾ ಹತ್ತಿರ ಹೋಗೋಕೆ ದಾರಿ ಹುಡುಕಿದ. ಎಲ್ಲೂ ದಾರಿ ಕಾಣಲಿಲ್ಲ. ಯಾಕಂದರೆ ಪಕ್ಶಾಲಿಕಾ ತಂದೆ ಅವಳು ಮತ್ತೆ ಎಲ್ಲಿ ರಾಜಕುಮಾರ ಬಲದೇವನ ಹತ್ತಿರ ಓಡಿ ಹೋಗ್ತಾಳೋ ಅಂತ ಅವಳನ್ನ ಏಳು ಬಂದೀಕಾನೆ ಒಳಗೆ ಬಂದಿಸಿಟ್ಟಿದ್ದ. ಅದರೆ ರಾಜಕುಮಾರ ಬಂದರೆ ನೀನು ಹೋಗಬಹುದು ಅಂತಲೂ ಹೇಳಿದ್ದ. ಪಾಪ, ರಾಜಕುಮಾರ ಹೇಗೆತಾನೆ ಮುತ್ತಿನ ರಾಜ್ಯಕ್ಕೆ ಬರಲು ಸಾದ್ಯ? ಅಂತ ದಿನಾ ಅಳುತ್ತಲೇ ಕಾಲ ಕಳೆಯುತ್ತಾ ಇದ್ದಳು ರಾಜಕುಮಾರಿ ಪಕ್ಶಾಲಿಕಾ.

ಪಕ್ಶಾಲಿಕಾಗಾಗಿ ನಗರವನ್ನೆಲ್ಲಾ ಸುತ್ತುತ್ತಿರುವಾಗ ಒಬ್ಬ ಹೆಂಗಸು ದಿನಾ ಒಂದೇ ಸಮಯಕ್ಕೆ ರುಚಿ ರುಚಿಯಾದ ಸಿಹಿ ತಿಂಡಿಗಳನ್ನ ತೆಗೆದುಕೊಂಡು ಹೋಗೋದನ್ನ ಬಲದೇವ ಗಮನಿಸಿದ. ಅವನಿಗೆ ಅನುಮಾನ ಬಂತು. ಎಲ್ಲಿಗೆ ಹೋಗ್ತಾಳೆ? ಯಾರಿಗೆ ಈ ಸಿಹಿ ತಿಂಡಿಗಳು? ನೋಡಲೇಬೇಕು ಅಂದುಕೊಂಡ. ಹೇಗಿದ್ದರೂ ಟೋಪಿ ಹಾಕಿಕೊಂಡರೆ ಯಾರಿಗೂ ಕಾಣಲ್ಲ ಅಂತ ಹೇಳಿ ಟೋಪಿ ಹಾಕ್ಕೊಂಡು ಅವಳ ಹಿಂದೇನೆ ಹೋದ. ಅವಳು ಬಾಗಿಲು ತೆಗೆದು ಒಳ ಹೋಗುತ್ತಿದ್ದಂಗೆ ಇವನು ಅವಳ ಹಿಂದೆಯೇ ಮೆಲ್ಲಗೆ ಒಳಗೆ ನುಸುಳಿದ. ಅಲ್ಲಿ ಏನು ಕಾಣಲಿಲ್ಲ. ಮತ್ತೊಂದು ಬಾಗಿಲು ಕಾಣಸಿತು. ಮೊದಲನೇ ಬಾಗಿಲನ್ನು ಮುಚ್ಚಿ ಬೀಗ ಹಾಕಿ ಆ ಹೆಂಗಸು ಎರಡನೇ ಬಾಗಿಲನ್ನ ತೆಗೆದು ಒಳಹೋದಳು. ರಾಜಕುಮಾರ ಬಲದೇವ ಅವಳ ಹಿಂದ ಮತ್ತೆ ನುಸುಳಿದ. ಮತ್ತಲ್ಲೂ ದೊಡ್ಡ ಬಾಗಿಲು ಬಿಟ್ಟರೆ ಬೇರೇನು ಇರಲಿಲ್ಲ. ಆ ಹೆಂಗಸು ಬಂದ ಬಾಗಿಲನ್ನ ಮುಚ್ಚಿ ಬೀಗ ಹಾಕಿ ಮೂರನೇ ಬಾಗಿಲನ್ನು ತೆಗೆದು ಒಳಗೆ ಹೋದಳು. ಇವನೂ ಮೆಲ್ಲಗೆ ನುಸುಳಿದ. ಹೀಗೆ ಏಳನೇ ಬಾಗಿಲ ಹತ್ತಿರ ಬಂದರು. ಏಳನೇ ಬಾಗಿಲನ್ನು ತೆಗೆದಾಗ ಒಳಗಡೆ ರಾಜಕುಮಾರಿ ಪಕ್ಶಾಲಿಕಾ ಅಳುತ್ತಾ ಕೂತಿರೋದನ್ನು ನೋಡಿದ. ತುಂಬಾ ಬೇಜಾರಾಯಿತು. ಕೈ ಕೈ ಹಿಸುಕಿಕೊಂಡ. ಅವಳಿಗೆ ಸಾಂತ್ವನ ಹೇಳಬೇಕು ಅನಿಸಿತು. ಆವಳನ್ನ ತಬ್ಬಿಕೊಳ್ಳಬೇಕು ಎಂದೆನಿಸಿತು. ಆದರೇನು ಮಾಡೋದು, ಆ ಹೆಂಗಸು ಬೇರೆ ಇದೆ. ಅವಳು ವಾಪಸ್ಸು ಹೋಗೋವರೆಗೂ ಕಾಯಬೇಕು. ಕಾದುಕುಳಿತ. ಆ ಹೆಂಗಸು ಬಂದಹಾಗೆ ಮತ್ತೆ ಏಳೂ ಬಾಗಿಲುಗಳನ್ನ ಮುಚ್ಚಿ ಬೀಗ ಹಾಕಿಕೊಂಡು ಹೋರಟು ಹೋದಳು.

ರಾಜಕುಮಾರನಿಗೆ ಕಂಡಾಪಟ್ಟೆ ಹಸಿವಾಗಿತ್ತು. ರಾಜಕುಮಾರಿ ನೆನಪಲ್ಲಿ ಊಟ ತಿಂಡಿ ಸರಿಯಾಗಿ ಮಾಡಿ ಎಶ್ಟು ದಿನ ಆಗಿತ್ತೋ ಏನೋ? ಅದರ ಮೇಲೆ ರುಚಿ ರುಚಿಯಾದ ತಿಂಡಿ ವಾಸನೆ ಮೂಗಿಗೆ ಬಡಿಯಿತು. ಮೆಲ್ಲಗೆ ತಟ್ಟೆಗೆ ಕೈ ಹಾಕಿ ತಿನ್ನಲು ಶುರು ಮಾಡಿದ. ಚೂರು ಚೂರೇ ತಟ್ಟೆಯಲ್ಲಿ ತಿಂಡಿ ಕಡಿಮೆ ಆಗುತ್ತಿರುವುದನ್ನು ರಾಜಕುಮಾರಿ ಗಮನಿಸಿದಳು. ಯಾಕೆ ತಿಂಡಿ ಕಡಿಮೆ ಆಗುತ್ತಿದೆ? ಮೊದಲು ‘ಎಲ್ಲೋ ಬ್ರಮೆ’ ಅಂದುಕೊಂಡಳು. ಮತ್ತೆ ಮತ್ತೆ ಕಡಿಮೆ ಆಗಿದ್ದು ನೋಡಿ ಬಯ ಆಯ್ತು. ಹೆದರಿಕೊಂಡು ಮೂಲೆ ಸೇರಿದಳು. ಅಲ್ಲಿಂದಲೇ ‘ಯಾರದು?’ ಅಂತ ಕೂಗಿದಳು. ರಾಜಕುಮಾರಿಗೆ ತಾನು ಕಾಣುತ್ತಿಲ್ಲ ಅಂತ ಗೊತ್ತಾಗಿ ಬಲದೇವ ಮೆಲ್ಲಗೆ ಟೋಪಿನ ತೆಗೆದ. ಬಯವಾಗಿ ಮೂಲೆ ಸೇರಿದ್ದ ಪಕ್ಶಾಲಿಕಾಗೆ ಟೋಪಿ ತೆಗೆಯುತ್ತಿದ್ದ ಹಾಗೆ ರಾಜಕುಮಾರ ಬಲದೇವ ಕಾಣಿಸಿದ. ನೋಡಿದಳು. ಕುಶಿಗೆ ಅಳು ಜೋರಾಯ್ತು. ಜೋರಾಗಿ ಅತ್ತು ಓಡಿಬಂದು ಗಟ್ಟಿಯಾಗಿ ಅವನನ್ನು ತಬ್ಬಿಕೊಂಡಳು.

ಮಾರನೇ ದಿನ ಹೆಂಗಸು ಮತ್ತೆ ಊಟ ತೆಗೆದುಕೊಂಡು ಬಂದಳು. ರಾಜಕುಮಾರಿ ಜೊತೆ ಚೆಲುವ ರಾಜಕುಮಾರ ಇರೋದು ನೋಡಿ, ಓಡಿ ಹೋಗಿ ರಾಜನಿಗೆ ವಿಚಾರ ತಿಳಿಸಿದಳು. ರಾಜಕುಮಾರಿ ಬಾಯಿಂದ ಎಲ್ಲಾ ವಿಚಾರವನ್ನು ತಿಳಿದುಕೊಂಡ ರಾಜ. ತುಂಬಾ ಸಂತೋಶ ಪಟ್ಟು ರಾಜಕುಮಾರನ ಪ್ರೀತಿಗೆ, ಸಾಹಸಕ್ಕೆ, ಅವನ ದೈರ‍್ಯಕ್ಕೆ ಮೆಚ್ಚಿ ಪಕ್ಶಾಲಿಕಾನ ಜೈಲಿನಿಂದ ಬಿಡುಗಡೆ ಮಾಡಿದ. ರಾಜಕುಮಾರ ಬಲದೇವ ಬಂದಾಯ್ತು. ಇನ್ನ ರಾಜಕುಮಾರಿ ಹೋಗೋ ಪ್ರಯತ್ನ ಮಾಡಲ್ಲ. ಇನ್ನು ಮುಂದೆ ರಾಜಕುಮಾರ ಬಲದೇವನೇ ಈ ಮುತ್ತಿನ ರಾಜ್ಯದ ರಾಜ ಅಂತ ಅವನಿಗೆ ಪಟ್ಟಾಬಿಶೇಕ ಮಾಡಿದ.

(ಚಿತ್ರ ಸೆಲೆ: wallup.net, hutui6.commashupcorner.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: