ಜೇಡರ ದಾಸಿಮಯ್ಯನ ವಚನಗಳ ಓದು – 3 ನೆಯ ಕಂತು
– ಸಿ.ಪಿ.ನಾಗರಾಜ.
ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜಡಿದೊಮ್ಮೆ ನುಡಿಯದಿರ
ನೀನೆನ್ನಂತೆ ಒಮ್ಮೆ
ಒಡಲುಗೊಂಡು ನೋಡ ರಾಮನಾಥ.
ಮಾನವ ಜೀವಿಯ ಬದುಕಿನಲ್ಲಿ ಉಂಟಾಗುವ ಹಸಿವಿನ ಸಂಕಟವಾಗಲಿ ಇಲ್ಲವೇ ಸುಳ್ಳು ಹಾಗೂ ನಿಜದ ನಡುವಣ ಇಬ್ಬಗೆಯ ತೊಳಲಾಟವಾಗಲಿ ಜಡರೂಪಿಯಾದ ದೇವರಿಗಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.
ಹನ್ನೆರಡನೆಯ ಶತಮಾನದ ಶಿವಶರಣಶರಣೆಯರ ಪಾಲಿಗೆ ದೇವರು ಎನ್ನುವ ವ್ಯಕ್ತಿಯು ಕಲ್ಲು/ಮರ/ಮಣ್ಣು/ಲೋಹದ ವಿಗ್ರಹವಾಗಿ ಇಲ್ಲವೇ ಪವಾಡಗಳನ್ನು ಮಾಡುವ ದಿವ್ಯ ಶಕ್ತಿಯಾಗಿ ಕಾಣುತ್ತಿರಲಿಲ್ಲ. “ವ್ಯಕ್ತಿಯು ತನಗೆ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಯನ್ನು ದೇವರು” ಎಂದು ತಿಳಿದಿದ್ದರು; ದೇವರು ಎಂಬ ವ್ಯಕ್ತಿ ಇಲ್ಲವೇ ಶಕ್ತಿಯು ಕೇವಲ ಮಾನವ ಸಮುದಾಯದ ಕಲ್ಪನೆಯೇ ಹೊರತು ವಾಸ್ತವವಲ್ಲ ಎಂಬ ನಿಲುವನ್ನು ವಚನಕಾರರು ಹೊಂದಿದ್ದರು.
ಒಡಲು+ಕೊಂಡವ; ಒಡಲು=ದೇಹ/ಮಯ್/ಹೊಟ್ಟೆ; ಕೊಳ್=ಹೊಂದು/ಪಡೆ; ಕೊಂಡವ=ಪಡೆದವನು/ಹೊಂದಿದವನು; ಹಸಿ/ಹಸಿವು=ಆಹಾರವನ್ನು ಉಣ್ಣುವ ಬಯಕೆ;
ಒಡಲುಗೊಂಡವ ಹಸಿವ=ದೇಹವನ್ನು ಪಡೆದು ಜೀವಂತನಾಗಿರುವ ವ್ಯಕ್ತಿಯು ಸಾಯುವ ಕೊನೆಗಳಿಗೆಯ ತನಕ ಹೊಟ್ಟೆಯ ಹಸಿವಿಗೆ ಒಳಗಾಗುತ್ತಿರುತ್ತಾನೆ. ಏಕೆಂದರೆ ದೇಹವು ಗಟ್ಟಿಮುಟ್ಟಾಗಿ ಉಳಿಯಬೇಕಾದರೆ ದಿನ ನಿತ್ಯ ನಿಯಮಿತ ಕಾಲದಲ್ಲಿ ಆಹಾರವನ್ನು ಉಣ್ಣುವ ತಿನ್ನುವ ಕುಡಿಯುವ ಕ್ರಿಯೆಯಲ್ಲಿ ಮಾನವ ಜೀವಿಯು ತೊಡಗಿರಲೇಬೇಕು;
ಹುಸಿ=ಸುಳ್ಳು; ಹುಸಿವ=ಸುಳ್ಳನ್ನು ಹೇಳುತ್ತಾನೆ; ಸುಳ್ಳು=ಇರುವುದನ್ನು ಇಲ್ಲವೆಂದು, ಇಲ್ಲದ್ದನ್ನು ಇದೆಯೆಂದು ಹೇಳುವುದು; ಕಂಡಿದ್ದನ್ನು ಕಾಣೆನೆಂದು, ಕಾಣದ್ದನ್ನು ಕಂಡೆನೆಂದು ಹೇಳುವುದು; ಮಾಡಿದ್ದನ್ನು ಮಾಡಿಲ್ಲವೆಂದು, ಮಾಡಿಲ್ಲದ್ದನ್ನು ಮಾಡಿದೆನೆಂದು ಹೇಳುವುದು;
ಒಡಲುಗೊಂಡವ ಹುಸಿವ=ವ್ಯಕ್ತಿಯು ಸಾಯುವ ಕೊನೆಗಳಿಗೆಯ ತನಕ ಒಂದಲ್ಲ ಒಂದು ಕಾರಣಕ್ಕಾಗಿ ಸುಳ್ಳನ್ನು ಹೇಳುತ್ತಿರುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯು ಬಹುತೇಕ ಸನ್ನಿವೇಶಗಳಲ್ಲಿ ತನ್ನ ಪ್ರಯೋಜನಕ್ಕಾಗಿ ಸುಳ್ಳನ್ನು ಹೇಳಿದರೆ, ಕೆಲವೊಮ್ಮೆ ಇತರರಿಗೆ ಉಂಟಾಗಲಿರುವ ಕೇಡನ್ನು ತಪ್ಪಿಸುವುದಕ್ಕಾಗಿಯೂ ಸುಳ್ಳನ್ನು ಹೇಳುತ್ತಾನೆ;
ಒಡಲು+ಕೊಂಡವನು+ಎಂದು; ಒಡಲುಗೊಂಡವನು=ದೇಹವನ್ನು ಪಡೆದಿರುವವನು; ನೀನ್+ಎನ್ನ; ನೀನು=ದೇವರಾದ ನೀನು; ನನ್ನ=ಮಾನವನಾದ ನನ್ನನ್ನು; ಜಡಿದು+ಒಮ್ಮೆ; ಜಡಿದು=ಗದರಿಸು/ಬೆದರಿಸು; ಒಮ್ಮೆ=ಒಂದು ಬಾರಿ; ನುಡಿಯದಿರ=ಹೇಳಬೇಡ;
ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ=ಹಸಿವು ಮತ್ತು ಹುಸಿಯಿಂದ ಕೂಡಿದ ದೇಹವನ್ನುಳ್ಳ ಜೀವರೂಪಿಯಾದ ನನ್ನನ್ನು, ಜಡರೂಪಿಯಾದ ನೀನು ಕಡೆಗಣಿಸಿ ನುಡಿಯಬೇಡ;
ನೀನ್+ಎನ್ನ+ಅಂತೆ; ಅಂತೆ=ಹಾಗೆ/ಅದೇ ಬಗೆಯಲ್ಲಿ; ಒಡಲುಗೊಂಡು=ದೇಹವನ್ನು ಪಡೆದು, ಅಂದರೆ ಮಾನವ ಜೀವಿಯಾಗಿ ಹುಟ್ಟಿ; ನೋಡು=ತಿಳಿ/ಕಾಣು; ನೋಡಾ=ತಿಳಿದುಕೊ/ಅರಿತುಕೊ; ರಾಮನಾಥ=ಶಿವ/ಜೇಡರ ದಾಸಿಮಯ್ಯನವರ ವಚನಗಳ ಅಂಕಿತನಾಮ;
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ, ರಾಮನಾಥ=ಶಿವನೇ, ನೀನು ನನ್ನಂತೆ ದೇಹವನ್ನು ಪಡೆದು ನೋಡು, ಆಗ ನಿನಗೆ ಮಾನವ ಜೀವಿಯ ಸಂಕಟ ಮತ್ತು ಮಾನವ ಜೀವನದ ಇತಿಮಿತಿಗಳ ಅರಿವಾಗುತ್ತದೆ;
ಈ ವಚನದಲ್ಲಿ ಜೇಡರ ದಾಸಿಮಯ್ಯನು ದೇವರಿಗೆ ಸವಾಲನ್ನು ಹಾಕುವುದರ ಮೂಲಕ ಮಾನವರ ಬದುಕಿನಲ್ಲಿ ಕಾಡುವ ಎರಡು ಸಂಗತಿಗಳನ್ನು ನಿರೂಪಿಸುತ್ತ, ಮಾನವ ಜೀವಿಯ ಬದುಕಿನ ವಾಸ್ತವವನ್ನು ಮನಗಾಣಿಸಿದ್ದಾನೆ.
ಮಾನವ ಜೀವಿಗೆ ‘ಹಸಿವು’ ಎಂಬುದು ನಿಸರ‍್ಗ ಸಹಜವಾದುದು. ವ್ಯಕ್ತಿಯು ಬದುಕಿರುವ ತನಕ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿರಲೇಬೇಕು, ಇಲ್ಲದಿದ್ದರೆ ಸಾವು ಉಂಟಾಗುತ್ತದೆ.
ಮಾನವ ಜೀವಿಗೆ ‘ಹುಸಿ’ ಎನ್ನುವುದು ಸಾಮಾಜಿಕವಾದುದು. ಜೀವಮಾನದಲ್ಲಿ ಒಮ್ಮೆಯಾದರೂ ಸುಳ್ಳನ್ನಾಡದ ವ್ಯಕ್ತಿಯು ಜಗತ್ತಿನಲ್ಲಿ ಇಲ್ಲವೇ ಇಲ್ಲ. ಏಕೆಂದರೆ ಜಗತ್ತಿನಲ್ಲಿ ಹುಟ್ಟಿ ಬೆಳೆದು ಬಾಳುವ ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ಬಗೆಯ ಜಾತಿ/ಮತ/ಬುಡಕಟ್ಟಿಗೆ ಸೇರಿರುತ್ತಾನೆ. ಅವನ/ಅವಳ ನಡೆನುಡಿಗಳನ್ನು ಆಯಾಯ ಜಾತಿಯ, ಮತದ ಮತ್ತು ಬುಡಕಟ್ಟಿನ ಆಚರಣೆಗಳು, ಸಂಪ್ರದಾಯಗಳು , ಕಟ್ಟುಪಾಡುಗಳು ರೂಪಿಸುತ್ತವೆ. ಇದರ ಜತೆಗೆ ನಾಡಿನ ಆಳ್ವಿಕೆಯ ಕಾನೂನು ಕಟ್ಟಲೆಗಳು ವ್ಯಕ್ತಿಯ ನಡೆನುಡಿಯನ್ನು ನಿಯಂತ್ರಿಸುತ್ತಿರುತ್ತವೆ. ಆದ್ದರಿಂದ ಯಾವುದೇ ವ್ಯಕ್ತಿಯು ಸರ‍್ವ ಸ್ವತಂತ್ರನಲ್ಲ. ಇವೆಲ್ಲವುಗಳಿಂದಾಗಿ ವ್ಯಕ್ತಿಯು ತನ್ನ ಬದುಕಿನ ಉದ್ದಕ್ಕೂ ನೂರೆಂಟು ಸನ್ನಿವೇಶಗಳಲ್ಲಿ ಸುಳ್ಳನ್ನು ಆಡುತ್ತಲೇ ಇರುತ್ತಾನೆ. ಆದ್ದರಿಂದಲೇ ಮಾನವ ಸಮುದಾಯದ ಮಾತಿನಲ್ಲಿ “ಯಾವುದು ನಿಜ / ಯಾವುದು ಸುಳ್ಳು” ಎಂಬುದನ್ನು ವಿಂಗಡಿಸಿ ತಿಳಿಯಲಾರದಂತಹ ರೀತಿಯಲ್ಲಿ ಸುಳ್ಳು ಹಾಸುಹೊಕ್ಕಾಗಿದೆ;
( ಚಿತ್ರ ಸೆಲೆ: lingayatreligion.com )
ಇತ್ತೀಚಿನ ಅನಿಸಿಕೆಗಳು