ರಣಜಿ 2021/22 : ಇಂದಿನಿಂದ ನಾಕೌಟ್ ಪಂದ್ಯಗಳು

– ರಾಮಚಂದ್ರ ಮಹಾರುದ್ರಪ್ಪ.

ಪೆಬ್ರವರಿ ತಿಂಗಳಲ್ಲಿ ಮೊದಲ್ಗೊಂಡಿದ್ದ ರಣಜಿ ಟೂರ‍್ನಿ ಎರಡು ತಿಂಗಳ ಐಪಿಎಲ್ ಬಿಡುವಿನ ಬಳಿಕ ಇಂದಿನಿಂದ (ಜೂನ್ 6) ಮುಂದುವರೆಯಲಿದೆ. ನಾಕೌಟ್ ಹಂತ ತಲುಪಿರುವ ತಂಡಗಳಾದ ಕರ‍್ನಾಟಕ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಕಂಡ್, ಮುಂಬೈ, ಬಂಗಾಳ, ಜಾರ‍್ಕಂಡ್ ಹಾಗೂ ಮದ್ಯಪ್ರದೇಶ ತಂಡಗಳು ಒಂದು ವಾರದಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟು ಮುಂದಿನ ಸವಾಲುಗಳಿಗೆ ಸಜ್ಜಾಗಿವೆ. 2015/16 ರ ಸಾಲಿನ ಬಳಿಕ ಈ ಬಗೆಯಲ್ಲಿ ಎರಡು ಬೇರೆ-ಬೇರೆ ಹಂತಗಳಲ್ಲಿ ರಣಜಿ ಟೂರ‍್ನಿ ನಡೆಯುತ್ತಿರುವುದು ಇದೇ ಮೊದಲು. ಹಾಗೂ ಈ ಬಾರಿ ಐಪಿಎಲ್ ಆಡಿ ತಮ್ತಮ್ಮ ರಣಜಿ ತಂಡಗಳಿಗೆ ಮರಳಿರುವ ಹಲವು ಆಟಗಾರರಿಗೆ ಕೂಡಲೇ ಐದು ದಿನಗಳ ಪಂದ್ಯಗಳಿಗೆ ಹೊಂದಿಕೊಳ್ಳಬೇಕಾದ ಅನಿವಾರ‍್ಯತೆ ಹಾಗೂ ಸವಾಲು ಎದುರುಗೊಂಡಿದೆ. ಎರಡು ತಿಂಗಳುಗಳ ಕಾಲ ಐಪಿಎಲ್ ನ ಹೊಡಿಬಡಿ ಕ್ರಿಕೆಟ್ ಆಡಿರುವ ಬ್ಯಾಟ್ಸ್ಮನ್ ಗಳಿಗೆ ಈಗ ತಾಳ್ಮೆಯಿಂದ ಬ್ಯಾಟ್ ಮಾಡುವ ಪರೀಕ್ಶೆ ಎದುರಾದರೆ, ಬೌಲರ್‍‌ಗಳಿಗೆ ತಮ್ಮ ಲೈನ್-ಲೆಂಗ್ತ್ ಅನ್ನು ಮಾರ‍್ಪಡಿಸಿಕೊಳ್ಳುವ ಪರೀಕ್ಶೆ. ಇದು ಅಬಿಮಾನಿಗಳಿಗೆ ಕ್ರಿಕೆಟ್ ಆಟದಲ್ಲಿ ಮಾತ್ರ ನೋಡಸಿಗುವಂತಹ ಒಂದು ಸೋಜಿಗ ಎಂದರೆ ತಪ್ಪಾಗಲಾರದು. ಆಲೂರಿನ ಮೂರು ಅಂಕಣಗಳು ಮತ್ತು ಜಸ್ಟ್ ಕ್ರಿಕೆಟ್ ಅಂಕಣದಲ್ಲಿ ಕ್ವಾರ‍್ಟರ್‍‌ ಪೈನಲ್ (ಜೂನ್ 6-10) ಹಾಗೂ ಸೆಮಿಪೈನಲ್ ಪಂದ್ಯಗಳು (ಜೂನ್ 14-18) ನಡೆಯಲಿದ್ದು, ಈ ಸಾಲಿನ ಪೈನಲ್ ಪಂದ್ಯ ಮಾತ್ರ ಅಂತರಾಶ್ಟ್ರೀಯ ಕ್ಯಾತಿಯ ಚಿನ್ನಸ್ವಾಮಿ ಅಂಕಣದಲ್ಲಿ ಜೂನ್ 22 ರಿಂದ 26 ರವರೆಗೂ ನಡೆಯಲಿದೆ.

ಕ್ವಾರ‍್ಟರ್‍‌ ಪೈನಲ್: ಕರ‍್ನಾಟಕದ ಎದುರಾಳಿ ಉತ್ತರ ಪ್ರದೇಶ

ಬೆಂಗಳೂರಿನ ಆಲೂರಿನಲ್ಲಿ ಕರ‍್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳು ಕ್ವಾರ‍್ಟರ್ ಪೈನಲ್ ನಲ್ಲಿ ಸೆಣಸಲಿವೆ. ಕಳೆದ ನಾಲ್ಕೈದು ವರುಶಗಳಲ್ಲಿ ಸಾಕಶ್ಟು ಯುವ ಆಟಗಾರರ ಬರುವಿಕೆಯಿಂದ ಹಂತಹಂತವಾಗಿ ಬಲಗೊಂಡಿರುವ ಉತ್ತರಪ್ರದೇಶವನ್ನು ಆತಿತೇಯರು ಹಗುರವಾಗಿ ಪರಿಗಣಿಸುವಂತಿಲ್ಲ. ಬಾರತದ ಪರ ಕೆಲ ಪಂದ್ಯಗಳನ್ನಾಡಿರುವ ಲೆಗ್ ಸ್ಪಿನ್ನರ್ ಕರಣ್ ಶರ‍್ಮಾರ ಮುಂದಾಳ್ತನದ ಈ ತಂಡಕ್ಕೆ ಪ್ರಿಯಮ್ ಗಾರ‍್ಗ್, ರಿಂಕು ಸಿಂಗ್ ರಂತಹ ಅಳವುಳ್ಳ ಬ್ಯಾಟ್ಸ್ಮನ್ ಗಳ ನೆರವಿನ ಜೊತೆ ಅಕ್ಶದೀಪ್ ನಾತ್ ರ ಆಲ್ ರೌಂಡ್ ಶಕ್ತಿ ಕೂಡ ಇದೆ. ಹಾಗೂ ವೇಗಿಗಳಾದ ಶಿವಮ್ ಮಾವಿ, ಅಂಕಿತ್ ರಾಜಪೂತ್ ಮತ್ತು ಯಶ್ ದಯಾಲ್ ಹೊಸ ಚೆಂಡಿನೊಂದಿಗೆ ತಂಡದ ಬರವಸೆಯ ಬೆಳಕಾಗಿದ್ದಾರೆ. ಮೇಲ್ನೋಟಕ್ಕೆ ಕೊಂಚ ಅನುಬವದ ಕೊರತೆ ಕಂಡುಬಂದರೂ ಉತ್ತರಪ್ರದೇಶ ಎಲ್ಲಾ ವಿಬಾಗಗಳಲ್ಲಿಯೂ ಸದ್ರುಡವಾಗಿರುವ ಒಂದು ತಂಡ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇತ್ತ ಕರ‍್ನಾಟಕ ತಂಡ, ಐಪಿಎಲ್ ನಲ್ಲಿ ತಮ್ಮ ವೇಗ ಹಾಗೂ ಕರಾರುವಾಕ್ ಎಸೆತಗಳಿಂದ ಸಂಚಲನ ಮೂಡಿಸಿ ಸೊಗಸಾದ ಲಯದಲ್ಲಿದ್ದ ಶ್ರೇಶ್ಟ ವೇಗಿ ಪ್ರಸಿದ್ ಕ್ರಿಶ್ಣರ ಸೇವೆ ದೊರಕದೆ ಸ್ವಲ್ಪ ಸೊರಗಿದೆ ಎಂದರೆ ತಪ್ಪಾಗಲಾರದು. ಬಾರತದ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಪ್ರಸಿದ್ ರಿಗೆ ವಿಶ್ರಾಂತಿ ಪಡೆಯುವಂತೆ ಕಟ್ಟಪ್ಪಣೆ ಮಾಡಿರುವ ಬಿಸಿಸಿಐ ದೇಸೀ ಕ್ರಿಕೆಟ್ ಗೆ ನೀಡುತ್ತಿರುವ ಮಹತ್ವ ಡಾಳಾಗಿ ಕಾಣುತ್ತಿದೆ. ಪ್ರಸಿದ್ ರ ಅನುಪಸ್ತಿತಿಯಲ್ಲಿ ರೋನಿತ್ ಮೋರೆ ವೇಗದ ಬೌಲಿಂಗ್ ನೊಗವನ್ನು ಅನುಬವವಿಲ್ಲದ ವೈಶಾಕ್ ಹಾಗೂ ಕೌಶಿಕ್ ರೊಂದಿಗೆ ಹೊರಬೇಕಾಗಿದೆ. ಕಳೆದ ದಶಕದಲ್ಲಿ ಇದು ಕರ‍್ನಾಟಕದ ಅತ್ಯಂತ ದುರ‍್ಬಲ ವೇಗದ ದಾಳಿ ಎಂಬುದು ಸುಳ್ಳಲ್ಲ. ಆದರೂ ಸ್ಪಿನ್ ವಿಬಾಗದಲ್ಲಿ ಅನುಬವಿಗಳಾದ ಶ್ರೇಯಸ್ ಗೋಪಾಲ್ ಮತ್ತು ಕೆ.ಗೌತಮ್ ರ ಇರುವಿಕೆ ಒಂದು ಸಮಾದಾನಕರ ಅಂಶ ಎಂದೇ ಹೇಳಬೇಕು. ಇನ್ನೂ ಬಾರತ ತಂಡದಲ್ಲಿ ಎಡೆ ಕಳೆದುಕೊಂಡಿರುವ ಮಯಾಂಕ್ ಅಗರ‍್ವಾಲ್ ತಂಡಕ್ಕೆ ಮರಳಿ ಬ್ಯಾಟಿಂಗ್ ಬಲವನ್ನು ಇನ್ನೂ ಹಿಗ್ಗಿಸಿದ್ದಾರೆ. ದೇವದತ್ ಪಡಿಕ್ಕಲ್, ಸಮರ‍್ತ್, ನಾಯಕ ಮನೀಶ್ ಪಾಂಡೆ, ಕರುಣ್ ನಾಯರ್ ಮತ್ತು ಸಿದ್ದಾರ‍್ತ್ ತಂಡದ ಬ್ಯಾಟಿಂಗ್ ನಲ್ಲಿ ಯಾವುದೇ ಬಗೆಯ ಕುಂದು ಇರದಂತೆ ಎಡೆ ತುಂಬಿದ್ದಾರೆ. ಇದು ಅಂತರಾಶ್ಟ್ರೀಯ ಮಟ್ಟದ ಬ್ಯಾಟಿಂಗ್ ತಂಡ ಎಂದರೆ ಅತಿಶಯವೇನಲ್ಲ. ಜೊತೆಗೆ ವಿಕೆಟ್ ಕೀಪರ್ ಗಳಾದ ಶ್ರೀನಿವಾಸ್ ಶರತ್ ಮತ್ತು ಬಿ.ಆರ್ ಶರತ್ ರಿಂದ ತಂಡ ಕೆಲವು ವರುಶಗಳಿಂದ ಕಾತುರದಿಂದ ಸ್ತಿರಪ್ರದರ‍್ಶನವನ್ನು ಕರ‍್ನಾಟಕ ತಂಡ ಎದುರು ನೋಡುತ್ತಿದೆ. ಇಲ್ಲಿವರೆಗೂ ಇಬ್ಬರಲ್ಲಿ ಯಾರೂ ಅವಕಾಶಗಳನ್ನು ಬಳಸಿಕೊಳ್ಳದೆ ನಿರಾಸೆ ಮೂಡಿಸಿದ್ದರೂ, ಅವರ ಪ್ರತಿಬೆ ಬಗ್ಗೆ ಎಲ್ಲರಿಗೂ ನಂಬಿಕೆ ಇದೆ.

ಕರ‍್ನಾಟಕ ಹಾಗೂ ಉತ್ತರ ಪ್ರದೇಶ ರಣಜಿ ಟೂರ‍್ನಿಯಲ್ಲಿ ಒಟ್ಟು 13 ಬಾರಿ ಸೆಣಸಿದ್ದು ಕರ‍್ನಾಟಕ 4 ಪಂದ್ಯಗಳನ್ನು ಗೆದ್ದರೆ ಇನ್ನುಳಿದ 9 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ. ಎಂಟು ಬಾರಿಯ ರಣಜಿ ವಿಜೇತ ಕರ‍್ನಾಟಕದ ಎದುರು ತಮ್ಮ ಮೊದಲ ಗೆಲುವಿಗೆ ಹಾತೊರೆಯುತ್ತಿರುವ ಉತ್ತರ ಪ್ರದೇಶ ತಂಡ ಇತ್ತೀಚಿನ ಬೆಳವಣಿಗೆಗಳಿಂದ ಈ ಬಾರಿ ಕಂಡಿತವಾಗಿಯೂ ತನ್ನಂಬಿಕೆಯಿಂದ ಕಣಕ್ಕಿಳಿಯಲಿದೆ. ಆಲೂರಿನ ಅಂಕಣದಲ್ಲಿ ಈ ಮೊದಲು 2017/18 ರ ಸಾಲಿನಲ್ಲಿ ಕೇವಲ ಒಂದೇ ಒಂದು ರಣಜಿ ಪಂದ್ಯ ನಡೆದಿದ್ದು ನೀರಸ ಡ್ರಾನಲ್ಲಿ ಕೊನೆಗೊಂಡಿತ್ತು. ಐದು ದಿನಗಳ ಈ ನಾಕೌಟ್ ಪಂದ್ಯಗಳಲ್ಲಿ ಪಿಚ್ ಗಳು ಪ್ರಮುಕ ಪಾತ್ರ ವಹಿಸಲಿದ್ದು, ಒಳ್ಳೆ ಸ್ಪರ‍್ದಾತ್ಮಕ ಪಿಚ್ ಗಳನ್ನೇ ಹುಟ್ಟುಹಾಕುವ ಕರ‍್ನಾಟಕ ರಾಜ್ಯ ಕ್ರಿಕೆಟ್ ಸಂಸ್ತೆಯಿಂದ ಈ ಬಾರಿಯೂ ಅಂತಹುದೇ ನಿರೀಕ್ಶೆ ಇದೆ. ಇನ್ನು ಜೂನ್ ತಿಂಗಳ ಮುಂಗಾರು ಮಳೆ ಆಟಕ್ಕೆ ಅಡ್ಡಿ ಒಡ್ಡುವ ಎಲ್ಲಾ ಸಾದ್ಯತೆಗಳು ಇವೆ. ಹಾಗಾಗಿ ಮಳೆಗೆ ತುತ್ತಾಗುವ ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ನಿರ‍್ಣಾಯಕ ಪಾತ್ರ ವಹಿಸುವ ಪ್ರಮೇಯ ಬಂದೊದಗಿದರೆ ಅಚ್ಚರಿಯೇನಿಲ್ಲ. ಆದ್ದರಿಂದ ತಂಡಗಳು ಒಂದು ಇನ್ನಿಂಗ್ಸ್ ನಲ್ಲಿ ಎಡವಿದರೂ ಟೂರ‍್ನಿಯಿಂದ ಹೊರನಡೆಯಬೇಕಾಗುತ್ತದೆ. ಈ ಪಂದ್ಯವನ್ನು ಗೆದ್ದ ತಂಡ ಮುಂದೆ ಸೆಮಿ ಪೈನಲ್ ನಲ್ಲಿ ಮುಂಬೈ/ಉತ್ತರಾಕಂಡ್ ಎದುರು ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಂಕಣದಲ್ಲಿ ಸೆಣಸಲಿದೆ. ಪ್ಲೇಟ್ ಗುಂಪಿನಿಂದ ಅರ‍್ಹತೆ ಗಿಟ್ಟಿಸಿಕೊಂಡಿರುವ ಉತ್ತರಾಕಂಡ್ ಎದುರು ಮುಂಬೈ ಸಲೀಸಾಗಿ ಗೆಲ್ಲಲಿದೆ ಎಂಬುದು ವಿಮರ‍್ಶಕರ ಅಂಬೋಣ.  ಸಾಂಪ್ರಾದಾಯಿಕ ಎದುರಾಳಿಗಳಾದ  ಕರ‍್ನಾಟಕ ಮತ್ತು ಮುಂಬೈ ತಮ್ಮ ಮೊದಲ ನಾಕ್ ಔಟ್ ಪಂದ್ಯವನ್ನು ಗೆದ್ದರೆ,  ಮುಂದಿನ ಸುತ್ತಿನ ಕರ‍್ನಾಟಕ- ಮುಂಬೈನ ಮತ್ತೊಂದು ಹಣಾಹಣಿ ದೇಸೀ ಕ್ರಿಕೆಟ್ ಗೆ ಇನ್ನಶ್ಟು ಬೆರಗು ತರಲಿದೆ.

ಅಸಲಿ ಕ್ರಿಕೆಟ್ ಅಬಿಮಾನಿಗಳು ಕಾತುರದಿಂದ ಎದುರು ನೋಡುತ್ತಿರುವ ರಣಜಿ ನಾಕೌಟ್ ಹಂತದಲ್ಲಿ ಒಳ್ಳೆ ಕ್ರಿಕೆಟ್ ನೋಡಲು ಸಿಗಲಿ ಎಂದು ಬಯಸೋಣ. ಈ ಪಂದ್ಯಗಳ ನೇರ ಪ್ರಸಾರ ಕೂಡ ಟೀವಿ/ಹಾಟ್‌ಸ್ಟಾರ್ ನಲ್ಲಿ ಮೂಡಿಬರಲಿರುವುದು ಒಂದೊಳ್ಳೆ ಬೆಳವಣಿಗೆ. ಐಪಿಎಲ್ ಬರಾಟೆಯಲ್ಲಿ ವರುಶದಿಂದ ವರುಶಕ್ಕೆ ಕಳೆಗುಂದುತ್ತಿರುವ ರಣಜಿ ಟೂರ‍್ನಿಯ ವೈಬವದ ದಿನಗಳು ಮರುಕಳಿಸಲಿ ಎಂಬುದೇ ಕ್ರಿಕೆಟ್ ಆಟವನ್ನು ಪ್ರೀತಿಸುವವರ ಹೆಬ್ಬಯಕೆ. ನಾಯಕ ಮನೀಶ್ ಮತ್ತು ಕರ‍್ನಾಟಕ ತಂಡಕ್ಕೆ ಶುಬ ಕೋರುತ್ತಾ ದೇಸೀ ಕ್ರಿಕೆಟ್ ಅನ್ನು ಸವಿಯಲು ಸಜ್ಜಾಗೋಣ!

(ಚಿತ್ರ ಸೆಲೆ: sportzwiki.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: