ಕೂಡಿ ಬಾಳಿ ಮದುವೆಯಾಗುವ ರಾಜಸ್ತಾನದ ಬುಡಕಟ್ಟಿನವರ ಸಂಪ್ರದಾಯ
– ಕೆ.ವಿ.ಶಶಿದರ.
ಆತನ ಹೆಸರು ನಾನಿಯಾ ಗರಾಸಿಯಾ, ವಯಸ್ಸು ಎಪ್ಪತ್ತು. ಆಕೆಯ ಹೆಸರು ಕಾಲಿ, ವಯಸ್ಸು ಅರವತ್ತು. ಇವರಿಬ್ಬರೂ ತಮ್ಮದೇ ಮಕ್ಕಳು ಮತ್ತು ಮೊಮ್ಮಕ್ಕಳ ಉಪಸ್ತಿತಿಯಲ್ಲಿ ಮದುವೆಯಾದರು. ಇವರ ವಿಶೇಶತೆಯೆಂದರೆ, ಇವರಿಬ್ಬರೂ ಹಲವು ವರ‍್ಶಗಳ ಕಾಲ ಲಿವ್ ಇನ್ ರಿಲೇಶನ್ಶಿಪ್ ನಲ್ಲಿದ್ದರು. ಮತ್ತೊಂದು ಸೋಜಿಗದ ಸಂಗತಿಯೆಂದರೆ, ಅದೇ ದಿನ ಅವರ ಮೂವರೂ ಗಂಡು ಮಕ್ಕಳೂ ಸಹ ತಮ್ಮ ಹೆತ್ತವರ ಮತ್ತು ಮಕ್ಕಳ ಸಮ್ಮುಕದಲ್ಲೇ, ತಮ್ಮ ಲಿವ್ ಇನ್ ಜೊತೆಗಾತಿಯರೊಡನೆ ಮದುವೆಯಾಗಿದ್ದರು. ಈ ನಾಲ್ಕೂ ಜನರು ತಮ್ಮ ಜೊತೆಗಾತಿಯರೊಂದಿಗೆ ವರ‍್ಶಗಳ ಕಾಲದಿಂದ ಜೊತೆಯಲ್ಲಿದ್ದರು ಹಾಗೂ ವಿವಾಹೇತರ ಸಂಬಂದದಿಂದ ಮಕ್ಕಳು ಕೂಡ ಹುಟ್ಟಿದ್ದರು. ಬಾರತೀಯ ಸಂಸ್ಕ್ರುತಿಗೆ ಇದನ್ನು ಜೀರ‍್ಣಿಸಿಕೊಳ್ಳಲು ಬಹುಶಹ ಕಶ್ಟವಾಗಬಹುದಾದರೂ ಇದು ಸತ್ಯ ಗಟನೆ.
ರಾಜಾಸ್ತಾನದಲ್ಲಿ ಗರಾಸಿಯಾ ಎಂಬ ಬುಡಕಟ್ಟು ಜನಾಂಗವೊಂದಿದೆ. ಇವರಲ್ಲಿ ಕೂಡಿ ಬಾಳುವ ಈ ಸಂಪ್ರದಾಯ ಸಾವಿರಾರು ವರ‍್ಶಗಳಿಂದ ಅವ್ಯಾಹತವಾಗಿ ನಡೆದು ಬಂದಿದೆ. ಗರಾಸಿಯಾ ಬುಡಕಟ್ಟು ಜನಾಂಗದವರ ಬಗ್ಗೆ ಹಾಗೂ ಅವರ ಅಬ್ಯಾಸಗಳ ಬಗ್ಗೆ ಅದ್ಯಯನ ಮಾಡಿದ ಸಾಮಾಜಿಕ ವಿಜ್ನಾನಿಗಳ ಪ್ರಕಾರ, ಈ ಜನಾಂಗದವರ ಜೀವನೋಪಾಯ ಕ್ರುಶಿ ಮತ್ತು ಕೂಲಿ ಕೆಲಸದ ಮೇಲೆ ಅವಲಂಬಿತವಾಗಿದೆ. ಈ ಕೆಲಸದಲ್ಲಿ ಸಾಕಶ್ಟು ಹಣ ಸಂಗ್ರಹವಾದ ಮೇಲೆ ಮಾತ್ರ ಅವರುಗಳು ತಮ್ಮ ಲಿವ್ ಇನ್ ಜೊತೆಗಾರರೊಂದಿಗೆ ವಿವಾಹವಾಗುತ್ತಾರಂತೆ. ಬಾರತೀಯ ನಗರಗಳಲ್ಲಿ ಈ ರೀತಿಯಲ್ಲಿ ವಾಸಿಸುವ ಅನೇಕ ಜೋಡಿಗಳು ನೈತಿಕ ಪೊಲೀಸ್ ಗಿರಿಗೆ ತುತ್ತಾಗಿ ಪಡಬಾರದ ಕಶ್ಟ ಅನುಬವಿಸಿರುವುದನ್ನು ಕಂಡಿದ್ದೇವೆ. ಕೆಲವೊಮ್ಮೆ ಇದು ಮಾರಾಣಾಂತಿಕವಾದ ಉದಾಹರಣೆಗಳೂ ಸಹ ಇವೆ.
ಗರಾಸಿಯಾ ಬುಡಕಟ್ಟು ಜನಾಂಗದವರ ಈ ರೀತಿಯ ವಿವಾಹ ವ್ಯವಸ್ತೆಯ ಬಗ್ಗೆ ಅನೇಕ ಚರ‍್ಚೆಗಳು ನಡೆದಿವೆ. ಬಾರತೀಯ ಸಂಪ್ರದಾಯದಲ್ಲಿ ಒಬ್ಬ ಗಂಡಸು ಒಬ್ಬ ಹೆಂಗಸಿನೊಂದಿಗೆ ಮದುವೆಯಾಗದೇ ಸಂಬಂದ ಹೊಂದಿ, ಜೊತೆಯಲ್ಲಿರುವುದು ನಿಶಿದ್ದ. ಅದರೂ ಇದು ಈ ಬುಡಕಟ್ಟು ಜನಾಂಗದವರಲ್ಲಿ ಹೇಗೆ ಸಾದ್ಯವಾಯಿತು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಸಂಪ್ರದಾಯವನ್ನು ಸಾವಿರಾರು ವರ‍್ಶಗಳಿಂದ ಗರಾಸಿಯಾ ಬುಡಕಟ್ಟು ಜನಾಂಗದವರು ಪಾಲಿಸಿಕೊಂಡು ಬರುತ್ತಿರುವುದರಿಂದ ಸಮುದಾಯದಲ್ಲಿ ವರದಕ್ಶಿಣೆ ಸಾವು ಮತ್ತು ಅತ್ಯಾಚಾರಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ಸಾಮಾಜಿಕ ಅದ್ಯಯನ ನಡೆಸಿದ ತಜ್ನರು ಅಬಿಪ್ರಾಯ ಪಟ್ಟಿದ್ದಾರೆ. ಗರಾಸಿಯಾ ಸಮುದಾಯದ ಹಿರಿಯರ ಪ್ರಕಾರ, ಇಂದಿನ ಅದುನಿಕ ಸಮಾಜದಲ್ಲಿ ಹೆಣ್ಣಿನ ಆಸೆ ಆಕಾಂಕ್ಶೆಯನ್ನು ಗಣನೆಗೆ ತೆಗೆದುಕೊಳ್ಳದೆ, ಪಾಲಕರು ಮದುವೆಯನ್ನು ನಿಗದಿ ಪಡಿಸುತ್ತಾರೆ. ಹೆಣ್ಣಿಗೆ ಆಯ್ಕೆ ಮಾಡುವ ಸ್ವಾತಂತ್ರ‍್ಯ ಮತ್ತು ತಿರಸ್ಕರಿಸುವ ಹಕ್ಕು ಇರಬೇಕು ಎಂದು ಅವರುಗಳು ಪ್ರತಿಪಾದಿಸುತ್ತಾರೆ.
ಗರಾಸಿಯಾ ಸಮುದಾಯದಲ್ಲಿ ಮತ್ತೊಂದು ಅಸಾಮಾನ್ಯ ಅಬ್ಯಾಸವಿದೆ. ರಾಜಸ್ತಾನ ಮತ್ತು ಗುಜರಾತಿನ ಕೆಲವು ಬಾಗಗಳಲ್ಲಿ ಪ್ರೇಮಯಾಚನೆಯ ಮೇಳ ಅಯೋಜಿಸಲಾಗುತ್ತದೆ. ಇದರಲ್ಲಿ ಹದಿಹರೆಯದ ಹೆಣ್ಣು, ಗಂಡುಗಳು ಪಾಲ್ಗೊಂಡು, ತಮ್ಮಿಶ್ಟದವರನ್ನು ಆಯ್ಕೆ ಮಾಡಿಕೊಂಡು, ಅವರೊಡನೆ ಪಲಾಯನ ಮಾಡುತ್ತಾರೆ. ಹಲವಾರು ದಿನಗಳ/ತಿಂಗಳುಗಳ ನಂತರ ಊರಿಗೆ ವಾಪಸ್ಸು ಬಂದು ಅವರುಗಳು ಜೊತೆಯಾಗಿ ಲಿವ್ ಇನ್ ರಿಲೇಶನ್ಶಿಪ್ ನಲ್ಲಿ ವಾಸಿಸತೊಡಗುತ್ತಾರೆ. ಈ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ವಾಸಿಸಲು ಅಗತ್ಯ ವಸ್ತುಗಳ ಕರೀದಿಗೆ ಹುಡುಗನ ಹೆತ್ತವರು ಸಾಕಶ್ಟು ಹಣವನ್ನು ಹುಡುಗಿಯ ಹೆತ್ತವರಿಗೆ ನೀಡುವ ಪದ್ದತಿಯಿದೆ. ನಂತರದ ದಿನಗಳಲ್ಲಿ ಇಬ್ಬರೂ ದುಡಿದು, ಸಾಕಶ್ಟು ಹಣ ಸಂಗ್ರಹಣೆಯಾದ ಮೇಲೆ ಮದುವೆಯಾಗುತ್ತಾರೆ. ಮಕ್ಕಳನ್ನು ಹೊಂದಲು ಮದುವೆ ಆಗಲೇ ಬೇಕೆಂಬ ಶರತ್ತೇನು ಈ ಸಮುದಾಯದಲ್ಲಿಲ್ಲ. ಗರಾಸಿಯಾ ಸಂಪ್ರದಾಯದಲ್ಲಿನ ಪ್ರೇಮಯಾಚನೆಯ ಮೇಳವನ್ನು ಗಮನಿಸಿದರೆ, ಇದು ಗ್ರಾಮೀಣ ಬಾರತದಲ್ಲೇ ಅಪರೂಪ ಎನ್ನಲು ಅಡ್ಡಿಯಿಲ್ಲ. ಮತ್ತೊಂದು ಪ್ರಮುಕ ಅಂಶವೆಂದರೆ, ಇಲ್ಲಿ ಹದಿಹರೆಯದ ಹುಡುಗರು ಮತ್ತು ಹುಡುಗಿಯರು ತಮ್ಮ ತಮ್ಮ ಬಾಳ ಸಂಗಾತಿಗಳನ್ನು ಆಯ್ಕೆ ಮಾಡುವ ಪೂರ‍್ಣ ಸ್ವಾತಂತ್ರ‍್ಯವನ್ನು ಹೊಂದಿರುವುದು.
ಹಿರಿಯರ ಅನಿಸಿಕೆಗಳು ಏನಾದರೂ ಇರಬಹುದು, ಗರಾಸಿಯಾ ಸಮುದಾಯವು ಆದುನಿಕ ಸಮಾಜದ ಮದುವೆಯ ವ್ಯವಸ್ತೆಯತ್ತ ವಾಲುತ್ತಿರುವುದು ಅವರುಗಳ ಸಂಪ್ರದಾಯದಲ್ಲಿ ನಿಚ್ಚಳವಾಗಿ ಕಂಡುಬರುತ್ತಿದೆ. ಬದಲಾವಣೆಯ ಗಾಳಿ ಬಲವಾಗಿ ಬೀಸುತ್ತಿದೆ. ಮೊದಲಿದ್ದ ಮೌಕಿಕ ಒಪ್ಪಂದಗಳು ಈಗ ಕಾಗದದ ಮೇಲೆ ದಾಕಲಾಗುತ್ತಿವೆ. ಅನಿವಾರ‍್ಯವಾಗಿ ಸಮುದಾಯದ ಹಿರಿಯರು ಬದಲಾವಣೆಗೆ ಒಪ್ಪಿದ್ದಾರೆ.
(ಮಾಹಿತಿ ಮತ್ತು ಚಿತ್ರ ಸೆಲೆ: jaagore.com, herzindagi.com, scoopwhoop.com )
ಇತ್ತೀಚಿನ ಅನಿಸಿಕೆಗಳು