ಸೈಕಲ್‌ನೊಂದಿಗಿನ ನೆನಪುಗಳು

– ರಾಹುಲ್ ಆರ್. ಸುವರ‍್ಣ.

ಬೈಸಿಕಲ್ ಎಂಬುದಕ್ಕಿಂತ ಸೈಕಲ್ ಎಂಬ ಪದವೇ ನಮಗೆ ಹತ್ತಿರದ್ದು. ಸೈಕಲ್ ನಮ್ಮ ಹೈಸ್ಕೂಲ್ ಜೀವನದ ಒಂದು ಮುಕ್ಯ ಬಾಗ. ನನಗೆ ಇಂದಿಗೂ ನೆನಪಿದೆ. ಸರಕಾರದಿಂದ ಶಾಲೆಗೆ ಬಂದಿದ್ದ ಸೈಕಲ್ಗಳನ್ನು ಶಾಲೆಯ ವೇದಿಕೆಯ ಒಂದು ಬಾಗದಲ್ಲಿ ತುಂಬಾ ಜಾಗರೂಕತೆಯಿಂದ ಇರಿಸಲಾಗುತ್ತಿತ್ತು. ಶಾಲೆಯಲ್ಲಿ ಎಶ್ಟೇ ಜೋಪಾನವಾಗಿಟ್ಟಿದ್ದರೂ, ಅದು ಬರುವಾಗಲೇ ಒಂದೊಂದು ಚಕ್ರದ ಕಡ್ಡಿಗಳು ಒಂದೊಂದು ದಿಕ್ಕಿಗೆ ತಿರುಗಿಹೋಗಿರುತ್ತಿದ್ದವು. ಆದರೆ ನಮ್ಮ ಪುಣ್ಯಕ್ಕೆ ನಮಗೆ ಮುಕ್ಯ ಶಿಕ್ಶಕರಾಗಿದ್ದ ಮುರುಳಿ ಸರ‍್ ಅದನ್ನು ಸರಿ ಮಾಡಿಸಿಯೇ ಕೊಡುತ್ತಿದ್ದರು. ಎಶ್ಟೇ ಸರಿ ಮಾಡಿಸಿದ್ದರೂ ಸರಕಾರದ ಸೈಕಲಿನ ಅವಸ್ತೆ ಏನೆಂದು ಅದನ್ನು ಓಡಿಸಿದವರಿಗೆ ಮಾತ್ರ ಗೊತ್ತು.

ಆದರೂ ಆಗಕ್ಕೆ ಅದೇ ನಮಗೆ ಕುಶಿ ಕೊಡುತ್ತಿತ್ತು. ಕೆಲವರ ಸೈಕಲ್ಗಳಿಗಂತೂ ಕೊಟ್ಟ ಒಂದೇ ಒಂದು ವಾರದಲ್ಲಿ ಅದರ ಮೈ ಕೈಗೆಲ್ಲ ಸುಣ್ಣ – ಬಣ್ಣ ಬಿದ್ದು, ಹ್ಯಾಂಡಲ್ ಮೇಲೊಂದು ಹ್ಯಾಂಡಲ್ ಬಂದು ಕೂರುತಿತ್ತು. ಹಾ… ನಾವಿದ್ದ ಜಾಗದಿಂದ ನಮ್ಮ ಶಾಲೆಗೆ ನಾಲ್ಕರಿಂದ ಐದು ಕಿಲೋ ಮೀಟರ್. ಆದುದರಿಂದ ನಮಗೆ ನಮ್ಮ ಶಾಲೆಯ ವಾಹನವೇ ಅಂಬಾರಿಯಾಗಿತ್ತು. ಆಗ ಹತ್ತನೇ ತರಗತಿಯಲ್ಲಿದ್ದವರಿಗೆ ವಿಶೇಶ ತರಗತಿಗಳು ಆರಂಬವಾಗಿದ್ದವು. ಆದ್ದರಿಂದ ಅವರು ನಮಗೆ ಸಿಕ್ಕಿದ್ದ ಸೈಕಲ್ಗಳನ್ನು ಅವರು ಓಡಿಸಿಕೊಂಡು ಹೋಗಿ ಶಾಲೆ ಸೇರುತ್ತಿದ್ದರು. ಮೊದಮೊದಲು ಏನೂ ಅನ್ನಿಸುತ್ತಿರಲಿಲ್ಲ, ಆದರೆ ನಂತರದ ದಿನಗಳಲ್ಲಿ ಹೊಟ್ಟೆಗೆ ಬೆಂಕಿ ಬಿದ್ದಂತಾಗಿತ್ತು. ನಮ್ಮ ಪ್ರಕಾರ ಅವರು ಸೈಕಲ್ಗಳನ್ನು ಓಡಿಸುವುದಿರಲಿ, ಮುಟ್ಟುವುದು ಕೂಡ ಗೋರ ಪಾಪವೆಂಬಂತೆ ನಮಗನಿಸುತ್ತಿತ್ತು. ಆ ಸೈಕಲ್ ಅವರ ತರಗತಿಗಳೆಲ್ಲ ಮುಗಿದು ನಮ್ಮ ಕೈಗೆ ಹಿಂದಿರುಗುವಾಗ ನಾಳೆಯೋ ನಾಡಿದ್ದೋ ಮೂಲೆಗೆ ಬೀಳುವ ಹಾಗೆ ಆಗಿರುತ್ತಿದ್ದವು. ಇನ್ನು ಗುಜುರಿ ಎಂಬ ಸ್ಮಶಾನಕ್ಕೆ ಹಾಕಬೇಕು ಅತವಾ ಸೈಕಲ್ ಶಾಪ್ ಎಂಬ ಆಸ್ಪತ್ರೆಯಲ್ಲಿ ಸರಿ ಮಾಡಿಸಬೇಕು, ಎಶ್ಟೇ ಸರಿ ಮಾಡಿಸಿದರೂ ಆಯಸ್ಸು ಮುಗಿದಿದ್ದರೆ ಏನು ಪ್ರಯೋಜನ, ಅಲ್ಲವೆ? ಕೊಟ್ಟಾಗ ಕಟ್ಟಿದ್ದ ನೂರು ಕನಸುಗಳು, ಕೂಡಿಟ್ಟ ಗೂಡಿನಿಂದ ಒಂದೊಂದಾಗಿಯೇ ಹೊರ ಬೀಳುತ್ತಿದ್ದವು. ಈಗಲೂ ಸರಕಾರದ ಸೈಕಲ್ಗಳನ್ನು ಕಂಡರೆ ಮತ್ತೆ ಮತ್ತೆ ಇದೇ ನೆನಪಾಗುತ್ತದೆ.

ಇದು ನಮ್ಮ ಸೈಕಲ್ಗಳ ಸುತ್ತಲಿನ ಕತೆ. ಆ ಕೊರಗು ಹೋಗಬೇಕಿದ್ದರೆ ನಮಗೆ ಹತ್ತನೇ ತರಗತಿಯಲ್ಲಿ ಸೈಕಲ್ ಓಡಿಸಲು ಸಿಗಬೇಕಿತ್ತು, ಆದರೆ ಅದು ಕನಸಾಗಿಯೇ ಉಳಿದುಬಿಟ್ಟಿತ್ತು!

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: