ಮಹಾಬತ್ ಮಕ್ಬಾರಾ – ವಿಶಿಶ್ಟ ಕಲಾತ್ಮಕತೆಯ ಸ್ಮಾರಕ

– .

19ನೇ ಶತಮಾನದಲ್ಲಿ ನಿರ‍್ಮಾಣವಾದ ಮಹಾಕಾವ್ಯದ ದ್ರುಶ್ಯ ರೂಪದಂತಿರುವ ವಿಶಿಶ್ಟ ಕಲಾತ್ಮಕತೆಯ ಸಮಾದಿ ಮಹಾಬತ್ ಮಕ್ಬಾರಾ. ಇದು ಇರುವುದು ಗುಜರಾತ್ ರಾಜ್ಯದ ಜುನಾಗಡ್‍ನ ಜನವಸತಿಯಿಲ್ಲದ ಪ್ರದೇಶದಲ್ಲಿ. ಮಹಾಬತ್ ಮಕ್ಬಾರಾದಲ್ಲಿ ಮೂಲ ಕಟ್ಟಡದ ಜೊತೆಯಲ್ಲಿ ನಾಲ್ಕು ಸುರಳಿಯಾಕಾರದ ಮೆಟ್ಟಲುಗಳ ಮಿನಾರ್ ಗಳಿವೆ. ವಿಶ್ವ ವಿಕ್ಯಾತ ತಾಜ್ ಮಹಲ್ ನ ಪ್ರತಿರೂಪವಿದ್ದಂತೆ ಕಂಡರೂ, ಇದರಲ್ಲಿನ ಕೆತ್ತನೆ ಕೆಲಸ ಕಲಾ ರಸಿಕರನ್ನು ಬಹಳವಾಗಿ ಸೆಳೆಯುತ್ತದೆ. ಈ ಕೆತ್ತನೆ ಕೆಲಸಗಳು ವಿವಿದ ವಾಸ್ತುಶಿಲ್ಪದ ಶೈಲಿಗಳಿಗೆ ವಿಶಿಶ್ಟವಾದ ಸಾಕ್ಶಿಯಾಗಿದೆ. ಇಶ್ಟೆಲ್ಲಾ ಬವ್ಯತೆಯನ್ನು ಹೊಂದಿರುವ ಈ ಸಮಾದಿಯ ಬಗ್ಗೆಯಾಗಲಿ, ಅದರ ಇತಿಹಾಸದ ಬಗ್ಗೆಯಾಗಲಿ ಹೆಚ್ಚು ಜನರಿಗೆ ತಿಳುವಳಿಕೆಯಿಲ್ಲ. ಇದಕ್ಕೆ ಪ್ರಚಾರದ ಕೊರತೆಯೇ ಕಾರಣ.

ಈ ಬವ್ಯ ಕಟ್ಟಡದ ಇತಿಹಾಸವನ್ನು ಕೆದಕುತ್ತಾ ಹೋದಲ್ಲಿ ತಿಳಿಯುವ ಅಂಶವೆಂದರೆ, ಮಹಾಬತ್ ಮಕ್ಬಾರಾ ಜುನಾಗಡ್ ನ ನವಾಬರ ಶಾಶ್ವತ ವಿಶ್ರಾಂತಿಯ ಸ್ತಳ ಅರ‍್ತಾತ್ ಸಮಾದಿ. ಮಹಾಬತ್ ಕಾನ್ ವಜೀರ್ ಬಹುದುದ್ದೀನ್ ಬಾಯಿ ಹಸೈನ್ ಬಾಯಿ ಅವರ ಆಸ್ತಾನದ ಮುಕ್ಯ ಕುಲೀನರ ಅವಶೇಶಗಳ ಮೇಲೆ ಇದನ್ನು ನಿರ‍್ಮಿಸಲಾಗಿದೆ. 1878ರಲ್ಲಿ ಮಹಾಬತ್ ಕಾನ್ II ಇದರ ನಿರ‍್ಮಾಣವನ್ನು ಪ್ರಾರಂಬಿಸಿದರೆ, 1891ರಲ್ಲಿ ಬಹದ್ದೂರ್ ಕಾನ್ III ಇದನ್ನು ಪೂರ‍್ಣಗೊಳಿಸಿದರು. ಈ ಸಮಯದಲ್ಲಿ ಯುರೋಪಿಯನ್, ಗೋತಿಕ್ ಮತ್ತು ಬಾರತ-ಇಸ್ಲಾಮಿಕ್ ವಾಸ್ತು ಶಿಲ್ಪದ ಅಂಶಗಳು ಇದರ ವಿನ್ಯಾಸದಲ್ಲಿ ಕಾಣಿಸಿಕೊಂಡವು. ಹಾಗಾಗಿ ಇದು ಬೇರಾವುದೇ ವಿಶಿಶ್ಟ ಕಟ್ಟಡಕ್ಕಿಂತ ಬಿನ್ನವಾಗಿ, ಮಿಶ್ರ ಪ್ರಬಾವಗಳ ವಿನ್ಯಾಸಗಳ ಉದಾಹರಣೆಯಾಗಿ ರೂಪುಗೊಂಡಿದೆ.
1808ರಲ್ಲಿ ಬಾರತವು ಬ್ರಿಟೀಶರ ಸಂರಕ್ಶಿತ ಪ್ರದೇಶವಾದಾಗ, ಈ ವಸಾಹತುಶಾಹಿಗಳು ಸೌರಾಶ್ಟ್ರವನ್ನು 100 ರಾಜಪ್ರಬುತ್ವಗಳಾಗಿ ವಿಂಗಡಿಸಿದರು. ಅದರಲ್ಲಿ ಜುನಾಗಡವೂ ಒಂದು. ಜುನಾಗಡದ ಹಳೆಯ ಪಟ್ಟಣವೆಂದು ಈಗ ಗುರುತಿಸಲ್ಪಡುವ ಸ್ತಳ ಅಂದು ಯಾರಿಂದಲೂ ನಿಯಂತ್ರಿಸಲ್ಪಡದ ತಟಸ್ತ ಪ್ರದೇಶವಾಗಿ, ಎಲ್ಲಾ ರಾಜ್ಯಗಳಿಂದ ಹೊರಗುಳಿದಿತ್ತು. ಮಹಾಬತ್ ಮಕ್ಬಾರಾ ಸ್ಮಾರಕವನ್ನು ಈ ತಟಸ್ತ ಸ್ತಳದಲ್ಲಿ ನಿರ‍್ಮಿಸಲಾದ ಕಾರಣ, ಇದರ ಆಕರ‍್ಶಣೆ ಹೆಚ್ಚಾಗಲು ಕಾರಣವಾಯಿತು.

1947ರಲ್ಲಿ ಬಾರತವು ಸ್ವತಂತ್ರವಾಗುತ್ತಿದ್ದಂತೆ, ಮಹಾಬತ್ ಕಾನ್ III ಜುನಾಗಡವನ್ನು ಪಾಕಿಸ್ತಾನಕ್ಕೆ ಸೇರಿಸುವಂತೆ ಒತ್ತಡ ಹೇರಿದ್ದರು. ಇದರ ವಿರುದ್ದ ಸ್ತಳೀಯರು ದಂಗೆಯೆದ್ದ ಕಾರಣ, ನವಾಬ್ ಮಹಾಬತ್ ಕಾನ್ ಏಕಾಂಗಿಯಾಗಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಜುನಾಗಡ್ ಬಾರತದಲ್ಲಿ ಉಳಿಯಿತು. ಈರುಳ್ಳಿ ಆಕಾರದ ಗುಮ್ಮಟವನ್ನು ಹೊಂದಿರುವ ಇಂಡೋ-ಇಸ್ಲಾಮಿಕ್ ಶೈಲಿಯ ಈ ಅದ್ಬುತ ಸ್ಮಾರಕ, ಇಂದು ದೂಳಿನಿಂದ ಆವ್ರುತವಾದ ಹಾದಿಯಲ್ಲಿದೆ. ಆಕಾಶದೆತ್ತರಕ್ಕಿರುವ ಈ ಗುಮ್ಮಟದ ಮೇಲ್ಬಾಗ, ನೆಲದಿಂದ ಮಾಡಿನವರೆಗೂ ಹಬ್ಬಿರುವ ಪ್ರೆಂಚ್ ಕಿಟಕಿಗಳು, ಯುರೋಪಿಯನ್ ವಾಸ್ತುಶಿಲ್ಪದ ಅಂಶಗಳಾಗಿವೆ. ಸಮಾದಿಯ ಸುತ್ತ ನಾಲ್ಕು ಮಿನಾರ್ ಗಳಿದ್ದು, ಪ್ರತಿಯೊಂದರ ಸುತ್ತಲೂ ಸುರಳಿಯಾಕಾರದ ಮೆಟ್ಟಲುಗಳಿವೆ. ಇವು ವಿಶೇಶವಾಗಿ ಗೋತಿಕ್ ವಾಸ್ತು ಶೈಲಿಯನ್ನು ನೆನೆಪಿಸುತ್ತವೆ. ಬೇರಾವುದೇ ಪ್ರದೇಶದಲ್ಲಿ ಕಂಡುಬರುವ ಮಿನಾರ್ ಗಳಿಗಿಂತ ಇದು ಬಿನ್ನವಾಗಿ ಕಾಣುತ್ತದೆ. ಮಹಾಬತ್ ಮಕ್ಬಾರಾದ ಕಂಬಗಳು, ಕಮಾನುಗಳು, ಕಿಟಕಿಗಳು ಅತವಾ ಕಲ್ಲಿನಲ್ಲಿ ಕೆತ್ತಿದ ಗೋಡೆಗಳು ಒಂದು ಅನನ್ಯ ವಾಸ್ತುಶಿಲ್ಪದ ಅದ್ಬುತ ಉದಾಹರಣೆಯಾಗಿದೆ. ಇಂದಿನ ಮಾದ್ಯಮಗಳಲ್ಲಿ, ಜಾಲತಾಣಗಳಲ್ಲಿ, ಅಂತರ‍್ಜಾಲದಲ್ಲಿ ಇದಕ್ಕೆ ಹೆಚ್ಚು ಪ್ರಚಾರ ದೊರಕಿಲ್ಲದ ಕಾರಣ ಹೊರ ಜಗತ್ತಿನಿಂದ ದೂರ ಉಳಿದಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: amusingplanet.com, atlasobscura.com, timesofindia.indiatimes.com, navrangindia.blogspot.com, alluringworld.com, unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: